Tag: Sushma swaraj

  • ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ಕಾಂಗ್ರೆಸ್ ಟ್ವೀಟನ್ನು ರಿಟ್ವೀಟ್ ಮಾಡಿದ್ರು ಸುಷ್ಮಾ ಸ್ವರಾಜ್!

    ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತನ್ನನ್ನು ಗುರಿಯಾಗಿಸಿ ಕಾಂಗ್ರೆಸ್ ಕ್ರಿಯೆಟ್ ಮಾಡಿದ್ದ ಟ್ವಿಟ್ಟರ್ ಪೋಲನ್ನು ರಿಟ್ವೀಟ್ ಮಾಡಿದ್ದಾರೆ.

    ಇರಾಕ್ ನಲ್ಲಿ ಐಸಿಸ್ ಉಗ್ರರ ದಾಳಿಗೆ ಮೃತಪಟ್ಟ 39 ಭಾರತೀಯರ ಸಾವಿಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೊಣೆಗಾರರು ಎಂದು ಕಾಂಗ್ರೆಸ್ ಆರೋಪಿಸಿ ಪೋಲ್ ರಚಿಸಿತ್ತು. 39 ಜನರ ಸಾವಿಗೆ ಕಾರಣರಾದ ಸುಷ್ಮಾ ಸ್ವರಾಜ್ ತಮ್ಮ ಅಧಿಕಾರದಲ್ಲಿ ವಿಫಲವಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ಕಾಂಗ್ರೆಸ್ ಕೇಳಿತ್ತು.

    ಮಾರ್ಚ್ 26ರಂದು ಮುಕ್ತಾಯಗೊಂಡ ಈ ಪೋಲ್ ನಲ್ಲಿ 33,879 ಮಂದಿ ವೋಟ್ ಮಾಡಿದ್ದು, 76% ಮಂದಿ ಇಲ್ಲ ಎಂದು ಉತ್ತರಿಸಿದರೆ ಇನ್ನುಳಿದ 24% ಮಂದಿ ಹೌದು ಎಂದು ಉತ್ತರಿಸಿದ್ದರು. ಈ ಪೋಲಿನಲ್ಲಿ ತನ್ನ ಪರವಾಗಿ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಟ್ವೀಟ್ ನ್ನು ರಿಟ್ವೀಟ್ ಮಾಡಿದ್ದಾರೆ.

    ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಕೇಳಿದ ಪ್ರಶ್ನೆಗೆ ಜನ ಸಾಮಾನ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ.

    2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಮಾರ್ಚ್ 20ರಂದು ಸುಷ್ಮಾ ಸ್ವರಾಜ್ ರಾಜ್ಯಸಭೆಯಲ್ಲಿ ತಿಳಿಸಿದ್ದರು. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದೆ. 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದು ತಿಳಿಸಿದ್ದರು.

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು. ಇದನ್ನೂ ಓದಿ: ಇರಾಕ್‍ನಲ್ಲಿ ಐಸಿಸ್‍ನಿಂದ ಹತ್ಯೆಯಾಗಿದ್ದ 39 ಭಾರತೀಯರ ಮೃತ ದೇಹ ಪತ್ತೆ ಮಾಡಿದ್ದು ಹೇಗೆ? 

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

  • ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ

    ಇರಾಕ್‍ನಲ್ಲಿ ಕಿಡ್ನಾಪ್ ಆಗಿದ್ದ 39 ಭಾರತೀಯರು ಐಸಿಸ್‍ನಿಂದ ಹತ್ಯೆ

    ನವದೆಹಲಿ: 2014 ರಲ್ಲಿ ಇರಾಕ್ ನಿಂದ ಐಸಿಸ್ ಅಪಹರಣ ಮಾಡಿದ್ದ 39 ಮಂದಿ ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಪಹಣಕ್ಕೀಡಾಗಿದ್ದ 39 ಭಾರತೀಯರನ್ನು ಐಸಿಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮೊಸುಲ್ ನಿಂದ ಅಪಹರಣ ಮಾಡಿದವರ ಹತ್ಯೆ ಕುರಿತು ಖಚಿತ ಮಾಹಿತಿ ಪಡಿಸಿಕೊಳ್ಳಲು ಆಳವಾದ ರೇಡಾರ್ ಬಳಕೆ ಮಾಡಲಾಗಿದ್ದು, ಹತ್ಯೆಯಾದ ಭಾರತೀಯ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಅಲ್ಲದೇ ಎಲ್ಲರ ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗಿತ್ತು. ಮೃತ ದೇಹಗಳನ್ನು ಗುರುತಿಸಲು ಡಿಎನ್‍ಎ ಪರೀಕ್ಷೆಗಾಗಿ ಬಾಗ್ದಾದ್ ಗೆ ಕಳುಹಿಸಲಾಗಿದೆ. ಸೋಮವಾರ ನಮಗೆ ಲಭಿಸಿದ ಮಾಹಿತಿ ಪ್ರಕಾರ 39 ಮೃತದೇಹಗಳಲ್ಲಿ 38 ಮಂದಿಯ ಡಿಎನ್‍ಎ ಸ್ಯಾಪಲ್ ಮ್ಯಾಚ್ ಆಗಿದೆ. 39ನೇ ಮೃತ ದೇಹದ ಡಿಎನ್‍ಎ ಶೇ. 70 ರಷ್ಟು ಮ್ಯಾಚ್ ಆಗಿದೆ ಎಂದರು.

    ಕಳೆದ ವರ್ಷ ಜುಲೈನಲ್ಲಿ ಸದನಕ್ಕೆ ಮಾಹಿತಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು, ಅಪಹರಣಕ್ಕೆ ಒಳಗಾಗಿರುವ 39 ಮಂದಿಯ ಖಚಿತ ಮಾಹಿತಿ ದೊರೆಯದ ಹೊರತು ಅವರು ಮೃತ ಪಟ್ಟಿದ್ದಾರೆ ಎಂದು ಪ್ರಕಟಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಇಂದು ಖಚಿತ ಮಾಹಿತಿಯ ಮೇಲೆ 39 ಮಂದಿಯ ಹತ್ಯೆಯಾಗಿರುವುದನ್ನು ದೃಢಪಡಿಸಿದರು.

    ಹತ್ಯೆಯಾದ ಭಾರತೀಯ ಮೃತದೇಹದ ಅವಶೇಷಗಳನ್ನು ಭಾರತಕ್ಕೆ ತರಲಾಗುವುದು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿಕೆ ಸಿಂಗ್ ಇರಾಕ್ ಗೆ ತೆರಳಿ ಅಲ್ಲಿಂದ ಮೃತರ ಅವಶೇಷಗಳನ್ನು ಅಮೃತಸರ, ಪಾಟ್ನಾ ಹಾಗೂ ಕೋಲ್ಕತ್ತಾಗಳಿಗೆ ತರಲಿದ್ದಾರೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ಐಸಿಸ್ ಉಗ್ರರಿಂದ ತಪ್ಪಿಸಿಕೊಂಡು ಬಂದ ಹರ್ಜಿತ್ ಮಾಸಿಹ್ ಕಥೆ ಸುಳ್ಳು. ಐಸಿಸಿ ಉಗ್ರರು ಭಾರತೀಯರ ಜೊತೆಗೆ 51 ಬಾಂಗ್ಲಾದೇಶಿ ಕಾರ್ಮಿಕರನ್ನು ಒತ್ತೆಯಾಗಿರಿಸಿಕೊಂಡಿದ್ದರು ಈ ವೇಳೆ ಬಾಂಗ್ಲಾದೇಶ ಒತ್ತೆಯಾಳುಗಳ ಜೊತೆ ಅಲ್ಲಿಂದ ವಾಪಸ್ ಹರ್ಜಿತ್ ಮಾಸಿಹ್ ಬಂದಿದ್ದರು ಎಂದು ಸುಷ್ಮಾ ಸ್ವರಾಜ್ ಸದನಕ್ಕೆ ಸ್ಪಷ್ಟಪಡಿಸಿದರು.

    ಅಪಹರಣ ಮಾಡಿ ಹತ್ಯೆ ಮಾಡಲಾಗಿರುವ 39 ಮಂದಿ ಭಾರತೀಯರು ಟರ್ಕಿ ಮೂಲಕ ನಿರ್ಮಾಣ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. 2014ರಲ್ಲಿ ಐಸಿಸ್ ನಿಂದ ಅಪಹರಣಕ್ಕೆ ಒಳಗಾದ ಸಂದರ್ಭದಲ್ಲಿ ಮೊಸೂಲ್ ನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅಪಹರಣಕ್ಕೆ ಒಳಗಾದ ಭಾರತೀಯರ ಪೈಕಿ ಪಂಜಾಬ್ ರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

    ಮೃತ ದೇಹ ಪತ್ತೆ ಮಾಡಿದ್ದು ಹೇಗೆ?
    ಮೃತ ದೇಹಗಳ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದ್ದು, ಅಳವಾದ ರಡಾರ್ ಬಳಕೆ ಮಾಡಿ ಸಾಮೂಹಿಕವಾಗಿ ಸಮಾಧಿ ಮಾಡಿದ್ದ ದೇಹಗಳನ್ನು ಪತ್ತೆ ಮಾಡಲಾಗಿತ್ತು. ಬಳಿಕ ಮೃತ ದೇಹದ ಬಳಿ ಪತ್ತೆಯಾದ ಗುರುತಿನ ಚೀಟಿ, ಇರಾನಿ ದೇಶಕ್ಕೆ ಸಂಬಂಧಿಸದ ಶೂ, ಸಿಖ್ ಪೇಟಾ ಹಾಗೂ ಮೃತ ದೇಹಗಳ ಅವಶೇಷಗಳಲ್ಲಿ ದೊರೆತ ಉದ್ದ ಕೂದಲುಗಳನ್ನು ಸಂಗ್ರಹಿಸಲಾಯಿತು.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಭಾರತದಿಂದ ಕಾಣೆಯಾಗಿದ್ದ ವ್ಯಕ್ತಿಗಳ ಕುಟುಂಬ ಸದಸ್ಯರ ಡಿಎನ್‍ಎ ಸ್ಯಾಪಲ್ ಗಳನ್ನು ವಿದೇಶಾಂಗ ಇಲಾಖೆ ಇರಾಕ್ ಗೆ ಕಳುಹಿಸಿ ಕೊಡಲಾಗಿತ್ತು. ಬಾಗ್ದಾದ್ ನಲ್ಲಿ 39 ಮೃತ ದೇಹಗಳ ಡಿಎನ್‍ಎ ಪರೀಕ್ಷೆ ನಡೆಸಿ ಅವುಗಳನ್ನು ಕಾಣೆಯಾಗಿದ್ದ ಭಾರತೀಯ ಮಂದಿಯದ್ದೇ ಎಂದು ದೃಢಿಕರಿಸಲಾಯಿತು.

    ಈ ಕುರಿತು ಪ್ರತಿಕ್ರಿಯೇ ನೀಡಿರುವ ವಿಕೆ ಸಿಂಗ್ ಅವರು, ಕಾಣೆಯಾಗಿದ್ದ ಕುಟುಂಬ ಸದಸ್ಯರ ಡಿಎನ್‍ಎ ಸಂಗ್ರಹಿಸಿ ಅವುಗಳನ್ನು ಮೃತದೇಹಗಳ ಅವಶೇಷಗಳಿಗೆ ಹೋಲಿಕೆ ಮಾಡುವುದು ಬಹುದೊಡ್ಡ ಕಾರ್ಯವಾಗಿತ್ತು ಎಂದು ಹೇಳಿದ್ದಾರೆ.

  • ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

    ಆಫ್ರಿಕಾದಲ್ಲಿ ಅಪಹರಣಗೊಂಡಿದ್ದ ಹಡಗಿನಲ್ಲಿದ್ದ 22 ಭಾರತೀಯರ ರಕ್ಷಣೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು

    ನವದೆಹಲಿ: ಆಫ್ರಿಕಾ ಬೆನಿನ್ ಕರಾವಳಿಯಿಂದ ಅಪಹರಣಗೊಂಡಿದ್ದ ಇಂಧನ ಹಡಗಿನಲ್ಲಿದ್ದ 22 ಭಾರತೀಯರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

    ಫೆಬ್ರವರಿ 1 ರಂದು ಪಶ್ಚಿಮ ಆಫ್ರಿಕಾ ಕರಾವಳಿಯಿಂದ ಹಡಗು ನಾಪತ್ತೆಯಾಗಿತ್ತು. ಈ ಕುರಿತು ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ಅವರು, ನನಗೆ ತುಂಬಾ ಸಂತೋಷವಾಗುತ್ತಿದೆ. 22 ಭಾರತೀಯ ಪ್ರಜೆಗಳಿದ್ದ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ಕೆ ಸಹಕಾರ ನೀಡಿದ ನೈಜೀರಿಯಾ ಹಾಗೂ ಬಿನಿನ್ ಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಈ ಹಿಂದೆ ಘಟನೆ ಕುರಿತು ಮಾಹಿತಿ ನೀಡಿದ್ದ ಅವರು, ತಾನು ನೈಜೀರಿಯಾ ವಿದೇಶಾಂಗ ಇಲಾಖೆಯೊಂದಿಗೆ ಸಂಪರ್ಕ ಮಾಡಿದ್ದು, ಅವರು ಸಹಕಾರ ನೀಡುವುದಾಗಿ ತಿಳಿಸಿದ್ದರು ಎಂದು ಹೇಳಿದ್ದರು.

    13,500 ಟನ್ ಗ್ಯಾಸೋಲಿನ್ ಹೊಂದಿದ್ದ ಹಡಗನ್ನು ಹೈಜಾಕ್ ಮಾಡಲಾಗಿತ್ತು. ಇದಕ್ಕೂ ಮುನ್ನ ಹಡಗಿನ ಎಲ್ಲಾ ಸಂವಹನ ವ್ಯವಸ್ಥೆಗಳನ್ನು ಕಡಿತಗೊಳಿಸಿದ್ದರು. ಹಡಗನ್ನು ಗಲ್ಫ್ ನ ಬೆನಿನ್ ಗಿನಿಯ ಪ್ರದೇಶದಲ್ಲಿ ನಿಲ್ಲಿಸಿದ್ದರು ಎಂದು ತಿಳಿದುಬಂದಿದೆ.

    ಇಂಧನ ಹಡಗು ಮುಂಬೈ ಮೂಲದ ಆಂಗ್ಲೋ ಇಸ್ಟ್ರನ್ ಕಂಪನಿ ಮಾಲೀಕತ್ವ ಹೊಂದಿತ್ತು. ಈ ಮೊದಲು ನೌಕೆಯ ಕಾಣೆಯಾಗಿರುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಆದರೆ ಅನಂತರದಲ್ಲಿ ಅಪಹರಣವಾಗಿರುವುದು ದೃಢಪಟ್ಟಿತ್ತು. ಶೋಧಕಾರ್ಯಕ್ಕೆ ಸಹಾಯ ಮಾಡುವಂತೆ ಹಡಗು ಮಾಲೀಕರು ಮುಂಬೈನ ನೌಕ ಮಹಾನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು. ಭಾರತೀಯ ವಿದೇಶಾಂಗ ಇಲಾಖೆ ನೈಜೀರಿಯಾ ದೇಶದ ಸಹಾಯ ಪಡೆದು ಪತ್ತೆ ಕಾರ್ಯಾಚರಣೆ ನಡೆಸಿತ್ತು.

  • ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ಜಾಧವ್ ಪತ್ನಿಯ ಶೂನಲ್ಲಿ ಚಿಪ್ ಇರಬಹುದು ಎಂದ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟ ಸುಷ್ಮಾ ಸ್ವರಾಜ್

    ನವದೆಹಲಿ: ಗೂಢಚಾರಿಕೆ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಕುಟುಂಬವನ್ನು ಪಾಕಿಸ್ತಾನ ನಡೆಸಿಕೊಂಡ ರೀತಿಯ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಜಾಧವ್ ಪತ್ನಿ ಚೇತನಾ ಅವರ ಶೂನಲ್ಲಿ ಚಿಪ್ ಇರಬಹುದು ಎಂಬ ಪಾಕಿಸ್ತಾನದ ಹೇಳಿಕೆಗೆ ಸರಿಯಾಗಿ ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಇಂದು ಸಂಸತ್ತಿನಲ್ಲಿ ಮಾತನಾಡಿದ ಸುಷ್ಮಾ ಸ್ವರಾಜ್, ಜಾಧವ್ ಪತ್ನಿ ಹಾಗೂ ತಾಯಿ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನ ಏರಿ ಪಾಕಿಸ್ತಾನ ತಲುಪಿದ್ರು. ಚಿಪ್‍ನಂತಹ ವಸ್ತು ಇದ್ದಿದ್ದರೆ ವಿಮಾನ ನಿಲ್ದಾಣದಲ್ಲೇ ಡಿಟೆಕ್ಟ್ ಆಗುತ್ತಿತ್ತು ಎಂದು ಹೇಳಿದ್ರು.

    ಇಬ್ಬರೂ ಮಹಿಳೆಯರು ಪಾಕಿಸ್ತಾನ ತಲುಪಲು ಏರ್ ಇಂಡಿಯಾ ವಿಮಾನ ಹಾಗೂ ಎಮಿರೇಟ್ಸ್ ವಿಮಾನ ಏರಿದ್ರು. ಒಂದು ವೇಳೆ ಅನುಮಾನಾಸ್ಪದ ವಸ್ತು ಶೂನಲ್ಲಿ ಇದ್ದಿದ್ರೆ ಭದ್ರತಾ ತಪಾಸಣೆ ದಾಟಿ ಹೇಗೆ ಬಂದ್ರು. ನಮಗೆ ಏರ್ ಇಂಡಿಯಾ ಮೇಲೆ ನಿಯಂತ್ರಣವಿದೆ ಎಂದು ಅವರು ಹೇಳಿದ್ರೂ ಎಮಿರೇಟ್ಸ್ ಮೇಲೆ ನಮಗೆ ನಿಯಂತ್ರಣವಿಲ್ಲ. ಹೀಗಿರುವಾಗ ಅವರು ಭದ್ರತಾ ತಪಾಸಣೆಯನ್ನು ದಾಟಿ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ರು.

    ಯಾವುದೇ ವಿಷಯವಿಲ್ಲದೆ ಪಾಕಿಸ್ತಾನ ಈ ರೀತಿ ಹೇಳಿಕೆ ನೀಡಿ ಸೀನ್ ಕ್ರಿಯೇಟ್ ಮಾಡಿದ್ದನ್ನು ಸುಷ್ಮಾ ಖಂಡಿಸಿದ್ರು. ಸತತ ಪ್ರಯತ್ನದ ನಂತರವೂ ಕುಲಭೂಷಣ್ ಜಾಧವ್ ಅವರ ಶೂಗಳನ್ನ ಹಿಂದಿರುಗಿಸಲಿಲ್ಲ. ಇದೊಂದು ಮಿತಿಮೀರಿದ ಅಸಂಬದ್ಧತೆ ಎಂದು ಹೇಳಿದ್ರು.

    ಪಾಕಿಸ್ತಾನ ಈ ಭೇಟಿಯನ್ನ ಅಣಕಿಸಿದ್ದು, ಪ್ರಚಾರಕ್ಕಾಗಿ ಮಾತ್ರ ಇದನ್ನ ಬಳಸಿಕೊಳ್ತು. ಜಾಧವ್ ಅವರ ತಾಯಿಗೆ ಮರಾಠಿಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಇಬ್ಬರು ಪಾಕಿಸ್ತಾನ ಅಧಿಕಾರಿಗಳು ಹಾಜರಿದ್ದು, ಜಾಧವ್ ಅವರ ತಾಯಿಯನ್ನ ಪದೇ ಪದೇ ತಡೆದರು. ಆದ್ರೆ ಅವರು ಅದನ್ನು ಮುಂದುವರಿಸಿದಾಗ ಇಂಟರ್‍ಕಾಮ್ ಸ್ವಿಚ್ ಆಫ್ ಮಾಡಿದ್ರು ಎಂದು ಸುಷ್ಮಾ ಸ್ವರಾಜ್ ಪಾಕಿಸ್ತಾನದ ನಡವಳಿಕೆಯನ್ನ ನೆನಪಿಸಿದ್ರು.

    ಕುಲಭೂಷಣ್ ಜಾಧವ್ ಅವರ ಪತ್ನಿಯ ಶೂನಲ್ಲಿ ಲೋಹದ ವಸ್ತು ಇದೆ ಎಂದು ಹೇಳಿ ಪಾಕಿಸ್ತಾನ ಅವರು ಶೂಗಳನ್ನ ಕಸಿದುಕೊಂಡಿದೆ. ಶೂನೊಳಗೆ ಇದೆ ಎನ್ನಲಾದ ಅನುಮಾನಾಸ್ಪದ ವಸ್ತುವಿನ ಸ್ವರೂಪದ ಬಗ್ಗೆ ತಿಳಿಯಲು ಶೂಗಳನ್ನ ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದೆ.

    ಜಾಧವ್ ಬಂಧನದ 21 ತಿಂಗಳ ನಂತರ ಪಾಕಿಸ್ತಾನ ಸರ್ಕಾರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಇಸ್ಲಾಮಾಬಾದ್ ನಲ್ಲಿರುವ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಸೇನೆ, ಪೊಲೀಸ್, ಶಾರ್ಪ್ ಶೂಟರ್ಸ್ ಗಳ ಬಿಗಿಭದ್ರತೆ ನಡುವೆ ಪತ್ನಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಅವರು ಜಾಧವ್ ಅವರನ್ನು ಭೇಟಿ ಮಾಡಿದರು.

    ಮಧ್ಯಾಹ್ನ 1.35ರಿಂದ ಅರ್ಧ ಗಂಟೆ ಕಾಲ ಪತ್ನಿ ಮತ್ತು ತಾಯಿ ಭೇಟಿ ಮಾಡಿ ಮಾತನಾಡಿದರು. ಒಂದು ಕೋಣೆಯಲ್ಲಿ ಜಾಧವ್ ಕುಳಿತಿದ್ದರೆ ಮತ್ತೊಂದು ಕೋಣೆಯಲ್ಲಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಕುಳಿತಿದ್ದರು. ಮೂವರು ನೇರವಾಗಿ ಮಾತನಾಡಲು ಪಾಕ್ ಸರ್ಕಾರ ಅವಕಾಶ ಕೊಡಲಿಲ್ಲ. ಬದಲಾಗಿ ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಯಲ್ಲಿ ಇಂಟರ್ ಕಾಮ್ ಮೂಲಕ ಮಾತನಾಡಿದರು.

    ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಕ್ ಸರ್ಕಾರ ಮಾನವೀಯತೆ ಆಧಾರದ ಮೇಲೆ ಜಾಧವ್ ಕುಟುಂಬದವರ ಭೇಟಿಗೆ ಅನುಮತಿ ನೀಡಿತ್ತು. ಭೇಟಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದುಬೈ ಮೂಲಕ ಇಸ್ಲಾಮಾಬಾದ್‍ಗೆ ಜಾಧವ್ ಪತ್ನಿ ಮತ್ತು ತಾಯಿ ಬಂದಿದ್ದರು.

    ಭಾರತ ಸರ್ಕಾರ ಈ ಹಿಂದೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕೆಂದು ಪಾಕ್ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಭಾರತದ ಮನವಿಯನ್ನು ತಿರಸ್ಕರಿಸಿತ್ತು. ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಭಾರತ ನೆದರ್ ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಿತ್ತು. ಭಾರತದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿತ್ತು.

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಜಾಧವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್ ನಲ್ಲಿ ಭಾರತ ವಾದ ಮಂಡಿಸಿತ್ತು.

  • ಕುಡಿದ ಮತ್ತಲ್ಲಿ ಕಾರಿಗೆ ವಾಹನ ಡಿಕ್ಕಿ- ನ್ಯೂಜಿಲ್ಯಾಂಡ್‍ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು

    ಕುಡಿದ ಮತ್ತಲ್ಲಿ ಕಾರಿಗೆ ವಾಹನ ಡಿಕ್ಕಿ- ನ್ಯೂಜಿಲ್ಯಾಂಡ್‍ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು

    ಹೈದರಾಬಾದ್: ಕುಡಿದು ಕಾರು ಓಡಿಸುತ್ತಿದ್ದ ಚಾಲಕನೊಬ್ಬ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ.

    29 ವರ್ಷದ ಸೈಯ್ಯದ್ ಅಬ್ದುಲ್ ರಹೀಮ್ ಫಹದ್ ಅಪಘಾತದಲ್ಲಿ ಮೃತಪಟ್ಟ ಭಾರತೀಯ ವಿದ್ಯಾರ್ಥಿ. ಮೂಲತಃ ಹೈದರಾಬಾದ್‍ನವರಾದ ಫಹದ್ ನ್ಯೂಜಿಲ್ಯಾಂಡ್‍ನ ಆಕ್‍ಲ್ಯಾಂಡ್ ನಲ್ಲಿ ಓದುತ್ತಿದ್ದು, ವಿದ್ಯಾಭ್ಯಾಸದ ಜೊತೆ ಟ್ಯಾಕ್ಸಿ ಚಾಲಕನಾಗಿ ಪಾರ್ಟ್ ಟೈಮ್ ಕೆಲಸವನ್ನು ಮಾಡುತ್ತಿದ್ದರು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

    ಚಾಲಕನೊಬ್ಬ ಕುಡಿದು ಕಾರು ಚಾಲಯಿಸುತ್ತಿದ್ದು, ಅತೀ ವೇಗವಾಗಿ ಟ್ರಾಫಿಕ್ ಸಿಗ್ನಲ್ ದಾಟಿ ಸೈಯ್ಯದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಸೈಯ್ಯದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ವಿಷಯವನ್ನ ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರೋ ಸಂಬಂಧಿಯೊಬ್ಬರು ತಿಳಿಸಿದ್ದಾಗಿ ಸೈಯ್ಯದ್ ಸಹೋದರ ಸಂಬಂಧಿ ಫೈಜಲ್ ತಿಳಿಸಿದ್ದಾರೆ.

    ಸೈಯ್ಯದ್ ಕುಟುಂಬ ಹೈದರಾಬಾದ್‍ನ ಚಂಚಲಗೂಡ ನಗರದಲ್ಲಿ ವಾಸಿಸುತ್ತಿದ್ದು, ಸೈಯ್ಯದ ದೇಹವನ್ನು ಹೈದರಾಬಾದ್‍ಗೆ ತರಲು ಮತ್ತು ಹಣಕಾಸಿನ ಸಹಾಯ ಕೋರಿ ಕುಟುಂಬದವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

    ನಾವು ನ್ಯೂಜಿಲ್ಯಾಂಡಿನ ಭಾರತೀಯ ರಾಯಭೇರಿ ಅಧಿಕಾರಿಯನ್ನು ಭೇಟಿ ಮಾಡಿದ್ದೇವೆ ಎಂದು ಫೈಝಾಲ್ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ಬಿಕೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಕೂಡ ಸ್ವರಾಜ್ ಅವರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

  • ಜನಾರ್ದನ ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್?

    ಜನಾರ್ದನ ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್?

    ಬೆಂಗಳೂರು/ಬೀದರ್: ಅಕ್ರಮ ಗಣಿಗಾರಿಕೆ ಪ್ರಕರಣ ಎದುರಿಸಿ ಜೈಲು ಶಿಕ್ಷೆ ಅನುಭವಿಸಿರುವ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಬ್ರೇಕ್ ಬಿದ್ದಿದೆ.

    ಆಪ್ತ ಗೆಳೆಯ ಶ್ರೀರಾಮುಲು ಮೂಲಕ ಜನಾರ್ದನ ರೆಡ್ಡಿ ಬಿಜೆಪಿ ಸೇರ್ಪಡೆಯಾಗಲು ಪ್ರಯತ್ನ ನಡೆಸುತ್ತಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಭಿಪ್ರಾಯವನ್ನು ಕೇಳಿದ್ದಾರೆ. ಶಾ ಪ್ರಶ್ನೆಗೆ ಸ್ವರಾಜ್, ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ವಲಯದಲ್ಲಿ ಪಕ್ಷ ಸೇರ್ಪಡೆ ವಿಚಾರಕ್ಕೆ ಯಾರಿಂದಲೂ ಬೆಂಬಲ ಸಿಗದ ಕಾರಣ ರೆಡ್ಡಿಯ ಬಿಜೆಪಿ ಸೇರ್ಪಡೆಗೆ ಬ್ರೇಕ್ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕೆಲವು ಪ್ರಕರಣದಲ್ಲಿ ಆರೋಪ ಮುಕ್ತರಾದರೂ ಇನ್ನು ಕೆಲವುಗಳ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಎಲ್ಲ ಪ್ರಕರಣದಿಂದ ಮುಕ್ತರಾದ ಬಳಿಕ ನಂತರ ಪಕ್ಷಕ್ಕೆ ಸೇರಿಸಬೇಕೋ? ಬೇಡವೋ ಎನ್ನುವ ತೀರ್ಮಾನ ತೆಗೆದುಕೊಳ್ಳೊಣ ಎನ್ನುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆ ಎನ್ನಲಾಗಿದೆ.

    ನೋಟ್ ನಿಷೇಧವಾದ ಬಳಿಕ ರೆಡ್ಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಗಳ ಮದುವೆಯನ್ನು ಆದ್ಧೂರಿಯಾಗಿ ನಡೆಸಿದ್ದರು. ಈ ಮದುವೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿ ಟೀಕೆಗೆ ರೆಡ್ಡಿ ಗುರಿಯಾಗಿದ್ದರು. ಮುಂದೆ ಕೆಲವೇ ತಿಂಗಳಿನಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಈ ವೇಳೆ ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಜನ ಗಮನಿಸುತ್ತಿರುತ್ತಾರೆ. ಈ ಸಂದಭದಲ್ಲಿ ಸೇರ್ಪಡೆಗೊಳಿಸಿದರೆ ಜನತೆಗೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ರೆಡ್ಡಿ ಸೇರ್ಪಡೆಗೆ ರೆಡ್ ಸಿಗ್ನಲ್ ನೀಡಿದೆ ಎನ್ನಲಾಗಿದೆ.

    ಜನಾರ್ದನ ರೆಡ್ಡಿ ಸೇರ್ಪಡೆ ವಿಚಾರವಾಗಿ ಬೀದರ್ ನಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆ ವಿಚಾರದ ಬಗ್ಗೆ ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಹೇಳಿದರು. ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ ಎಂದು ಮರು ಪ್ರಶ್ನೆ ಹಾಕಿದಾಗ ರೆಡ್ಡಿ ಸೇರ್ಪಡೆ ಬಗ್ಗೆ ಇದೂವರೆಗೆ ಚರ್ಚೆಯೇ ನಡೆದಿಲ್ಲ. ಇದೇ ಉತ್ತರ ಎಂದು ಪ್ರತಿಕ್ರಿಯಿಸಿದ್ದಾರೆ. ಅಕ್ರಮ ಗಣಿ ಪ್ರಕರಣ ಬಳಿಕ ಬಿಜೆಪಿ 2011ರಲ್ಲಿ ಜನಾರ್ದನ ರೆಡ್ಡಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

    1999ರ ಲೋಕಸಭಾ ಚುನಾವಣೆಯಲ್ಲಿ ಐಎಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರಿಗೆ ಸ್ಪರ್ಧೆ ನೀಡಲು ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಕಣಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಸುಷ್ಮ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಮತ್ತು ಶ್ರೀರಾಮಲು ಸಹಾಯ ಮಾಡಿದ್ದರು. ಚುನಾವಣೆಯಲ್ಲಿ ಸೋತಿದ್ದರೂ ಸುಷ್ಮಾ ಬಳ್ಳಾರಿಯ ನಂಟನ್ನು ಬಿಟ್ಟಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ರೆಡ್ಡಿ ಮತ್ತು ಶ್ರೀರಾಮಲು ಆಯೋಜಿಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ. 2000ನೇ ಇಸ್ವಿಯಿಂದ ವರಮಹಾಲಕ್ಷ್ಮಿ ಹಬ್ಬದಂದು ಜನಾರ್ದನ ರೆಡ್ಡಿ, ಶ್ರೀರಾಮಲು ಬಳ್ಳಾರಿ, ಗದಗ್, ಕೊಪ್ಪಳದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ಆರಂಭಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸುಷ್ಮಾ ಸ್ವರಾಜ್ ಆಗಮಿಸುತ್ತಿದ್ದರು. ಆದರೆ ರೆಡ್ಡಿ ಜೈಲುಪಾಲಾದ ಬಳಿ ಸುಷ್ಮಾ ಸ್ವರಾಜ್ ಈ ಕಾರ್ಯಕ್ರಮಕ್ಕೆ ಗೈರು ಹಾಜರಿ ಹಾಕುತ್ತಿದ್ದಾರೆ. ಒಂದು ಬಾರಿ ರೆಡ್ಡಿ ಮತ್ತು ಶ್ರೀರಾಮಲು ನನ್ನ ಮಕ್ಕಳು ಎಂದಿದ್ದ ಸುಷ್ಮಾ ಸ್ವರಾಜ್ ಸಿಬಿಐ ತನಿಖೆ ಆರಂಭವಾದ ಬಳಿಕ ರೆಡ್ಡಿ ಮತ್ತು ಶ್ರೀರಾಮಲು ಮಧ್ಯೆ ನನಗೆ ಏನು ವಿಶೇಷ ಸಂಬಂಧ ಇಲ್ಲ ಎಂದು ಹೇಳಿದ್ದರು.

    1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ದ ಸ್ವರಾಜ್ 56,100 ಮತಗಳ ಅಂತರಿಂದ ಸೋತಿದ್ದರು. ಸೋನಿಯಾ ಗಾಂಧಿ 4,14,650 ಮತಗಳನ್ನು ಪಡೆದಿದ್ದರೆ, ಸುಷ್ಮಾ ಸ್ವರಾಜ್ 3,58,550 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: 2018ರ ಚುನಾವಣೆಗೆ ನಿಲ್ತೀರಾ: ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಉತ್ತರಿಸಿದ್ದು ಹೀಗೆ

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

     

  • ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

    ಪಾಕಿಸ್ತಾನಿ ಪ್ರಜೆಗಳಿಗೆ ದೀಪಾವಳಿ ಗಿಫ್ಟ್ ನೀಡಿದ ಸುಷ್ಮಾ ಸ್ವರಾಜ್

    ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನಿ ಪ್ರಜೆಗಳಿಗೆ ದೀಪಾಳಿ ಉಡುಗೊರೆಯನ್ನು ನೀಡಿದ್ದಾರೆ. ವೈದ್ಯಕೀಯ ವೀಸಾಗಾಗಿ ಅರ್ಜಿ ಸಲ್ಲಿಸಿರುವ ಪಾಕ್ ಪ್ರಜೆಗಳಲ್ಲಿ ಅರ್ಹರಾಗಿರುವ ಎಲ್ಲಾ ಅರ್ಜಿದಾರರಿಗೆ ವೀಸಾ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

    ಸುಷ್ಮಾ ಅವರು ತಮ್ಮ ಟ್ವೀಟ್‍ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಅರ್ಜಿ ಸಲ್ಲಿಸಿದ್ದ ಎಲ್ಲಾ ಅರ್ಹ ಪಾಕಿಸ್ತಾನಿ ಪ್ರಜೆಗಳಿಗೆ ವೀಸಾ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.

    ಅಕ್ಟೋಬರ್ 18 ರಂದು ಪಾಕಿಸ್ತಾನದ 5 ಪ್ರಜೆಗಳಿಗೆ ಸುಷ್ಮಾ ಸ್ವರಾಜ್ ಸ್ವತಃ ತಾವೇ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲು ತಿಳಿಸಿ ಅನುಮತಿಯನ್ನು ನೀಡಿದ್ದರು. ಅಲ್ಲದೇ ಈ ಹಿಂದೆಯೂ ಹಲವು ಬಾರಿ ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾಗಳನ್ನು ಮಂಜೂರು ಮಾಡಲಾಗಿತ್ತು.

    ಸುಷ್ಮಾ ಸ್ವರಾಜ್ ಅವರ ಈ ಗುಣ ಹಲವು ಭಾರತೀಯ ಪ್ರಜೆಗಳ ಮನಸ್ಸನ್ನು ಗೆದ್ದಿದೆ. ಅಲ್ಲದೇ  ಈ ಹಿಂದೆ ಭಾರತದ ವೀಸಾ ಪಡೆದ ಪಾಕ್ ಪ್ರಜೆಯೊಬ್ಬರು ಪಾಕಿಸ್ತಾನಕ್ಕೆ ಸುಷ್ಮಾ ಅವರು ಪ್ರಧಾನಿಯಾಗಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಟ್ವಿಟ್ಟರ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

     

     

  • ಟೂರ್‍ಗೆ ಬಂದು ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನಿಗೆ ಸುಷ್ಮಾ ಸ್ವರಾಜ್ ಸಹಾಯ

    ಟೂರ್‍ಗೆ ಬಂದು ಭಿಕ್ಷೆ ಬೇಡುತ್ತಿದ್ದ ರಷ್ಯಾ ಯುವಕನಿಗೆ ಸುಷ್ಮಾ ಸ್ವರಾಜ್ ಸಹಾಯ

    ನವದೆಹಲಿ: ಭಾರತಕ್ಕೆ ಪ್ರವಾಸಕ್ಕೆ ಆಗಮಿಸಿ ಹಣ ಇಲ್ಲದೆ ಭಿಕ್ಷೆ ಬೇಡುತ್ತಿದ್ದ ರಷ್ಯಾದ ಪ್ರವಾಸಿಗೆ ಸುಷ್ಮಾ ಸ್ವರಾಜ್ ನೆರವಿನ ಹಸ್ತ ಚಾಚಿದ್ದಾರೆ.

    ತಮಿಳುನಾಡಿನ ಕಾಂಚೀಪುರಂನಲ್ಲಿರುವ ಶ್ರೀ ಕುಮಾರಕೊಟ್ಟಂ ದೇವಾಲಯದ ಬಳಿ ರಷ್ಯಾದ ಇವಾಂಗೆಲಿನ್ ಭಿಕ್ಷೆ ಬೇಡುತ್ತಿದ್ದರು. ಈ ವಿಚಾರ ತಿಳಿದು ಮಾಧ್ಯಮವೊಂದು ಸುದ್ದಿ ಪ್ರಕಟಿಸಿತ್ತು. ಈ ಸುದ್ದಿಯನ್ನು ತಿಳಿದು ಸುಷ್ಮಾ ಸ್ವರಾಜ್ ರಷ್ಯಾ ಪ್ರವಾಸಿಗೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ನಿಮ್ಮ ದೇಶ ರಷ್ಯಾ ನಮಗೆ ಒಳ್ಳೆಯ ಸ್ನೇಹಿತ. ಹೀಗಾಗಿ ನಿಮಗೆ ಸಹಾಯ ಮಾಡುವಂತೆ ಚೆನ್ನೈನಲ್ಲಿರುವ ನನ್ನ ಅಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

    ಆಗಿದ್ದು ಏನು?
    ರಷ್ಯಾ ಮೂಲದ 24 ವರ್ಷದ ಇವಾಂಗೆಲಿನ್ ಸೆಪ್ಟಂಬರ್ 24 ರಂದು ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದಾರೆ. ನಂತರ ಚೆನ್ನೈನ ಕಾಂಚಿಪುರಂನಲ್ಲಿ ಉಳಿದುಕೊಂಡು ಕೆಲವು ದೇವಾಲಯಗಳನ್ನು ಸುತ್ತಾಡಿದ್ದಾರೆ. ಹಣಕ್ಕಾಗಿ ಖಾಲಿಯಾದ ನಂತರ ಎಟಿಎಂಗೆ ಹಣ ಡ್ರಾ ಮಾಡಲು ಹೋಗಿದ್ದಾರೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಅವರ ಎಟಿಎಂ ಕಾರ್ಡ್‍ನ ಪಿನ್ ಲಾಕ್ ಆಗಿದೆ.

    ಇವಾಂಗೆಲಿನ್ ಬಳಿ ಇದ್ದ ಸ್ವಲ್ಪ ಹಣವು ಖಾಲಿ ಆಗಿ ಕೊನೆಗೆ ನಿರಾಶರಾಗಿ ಬೇರೆ ದಾರಿ ಇಲ್ಲದೆ ದೇವಾಲಯದ ಮುಂದೆ ಕೂತು ಭಿಕ್ಷೆ ಬೇಡುತ್ತಿದ್ದರು.

  • 3 ವರ್ಷದ ಪಾಕ್ ಬಾಲಕಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್

    3 ವರ್ಷದ ಪಾಕ್ ಬಾಲಕಿಗೆ ವೈದ್ಯಕೀಯ ವೀಸಾ ನೀಡಿದ ಸುಷ್ಮಾ ಸ್ವರಾಜ್

    ನವದೆಹಲಿ: ಪಾಕಿಸ್ತಾನದ ವ್ಯಕ್ತಿಯೊಬ್ಬರ ಲಿವರ್ ಕಸಿ ಹಾಗೂ 3 ವರ್ಷದ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಗಾಗಿ ಭಾರತ ವೈದ್ಯಕೀಯ ವೀಸಾ ಮಂಜೂರು ಮಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಲಾಹೋರ್ ಮೂಲದ ಉಜೇರ್ ಹುಮಾಯುನ್ ಎಂಬವರ ಮನವಿಗೆ ಸ್ಪಂದಿಸಿದ ಸುಷ್ಮಾ ಸ್ವರಾಜ್, ಅವರ 3 ವರ್ಷದ ಮಗಳ ಓಪನ್ ಹಾರ್ಟ್ ಸರ್ಜರಿಗಾಗಿ ಮೆಡಿಕಲ್ ವೀಸಾ ನೀಡುವುದಾಗಿ ಹೇಳಿದ್ದಾರೆ.

    ನನ್ನ ಮೂರು ವರ್ಷದ ಮಗಳಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇದೆ. ಅವಳಿಗೆ ಭಾರತದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಬೇಕು. ಆದ್ದರಿಂದ ವೈದ್ಯಕೀಯ ವೀಸಾ ಕೊಡಿಸಿ ಎಂದು ಸುಷ್ಮಾ ಸ್ವರಾಜ್ ಗೆ ಉಜೇರ್ ಹುಮಾಯುನ್ ಟ್ವೀಟ್ ಮಾಡಿದ್ದರು.

    ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ನಿಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ನಾವು ವೀಸಾ ನೀಡುತ್ತಿದ್ದೇವೆ. ಆಕೆ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ನೂರ್ಮಾ ಹಬೀಬ್ ಎಂಬ ಮತ್ತೋರ್ವ ಪಾಕಿಸ್ತಾನದ ಮಹಿಳೆ ತಮ್ಮ ತಂದೆಗೆ ಲಿವರ್ ಕಸಿಯ ಅಗತ್ಯವಿದ್ದು, ಅದಕ್ಕಾಗಿ ವೀಸಾ ಕೊಡಿಸಲು ಸಹಾಯ ಕೇಳಿ ಟ್ವೀಟ್ ಮಾಡಿದ್ದರು.ಸುಷ್ಮಾ ಸ್ವರಾಜ್ ಅವರು ಇದಕ್ಕೆ ಸ್ಪಂದಿಸಿ, ಭಾರತದಲ್ಲಿ ನಿಮ್ಮ ತಂದೆಯ ಹೃದಯ ಕಸಿಗಾಗಿ ವೀಸಾ ನೀಡುತ್ತಿದ್ದೇವೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಅವರು ದೀರ್ಘ ಕಾಲ ಬದುಕಲಿ ಎಂದು ಆಶಿಸುತ್ತೇವೆ ಎಂದು ಮರು ಟ್ವೀಟ್ ಮಾಡಿದ್ದಾರೆ.

    ಎರಡು ರಾಷ್ಟ್ರಗಳ ನಡುವೆ ಹಲವಾರು ಸಮಸ್ಯೆಗಳ ಮಧ್ಯೆಯೂ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾ ಅರ್ಜಿಗಳನ್ನ ಪರಿಗಣಿಸಿ ಮಾನವೀಯತೆ ದೃಷ್ಠಿಯಿಂದ ಸಹಾಯ ಮಾಡುತ್ತಿದ್ದಾರೆ.