Tag: Surya Prabh

  • ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಭಾನು ವೆಡ್ಸ್ ಭೂಮಿ: ಪ್ರೇಮ ಕಥೆಗುಂಟು ಮಾಸ್ ನಂಟು!

    ಬೆಂಗಳೂರು: ಜೆಕೆ ಆದಿ ಚೊಚ್ಚಲ ನಿರ್ದೇಶನದ ಭಾನು ವೆಡ್ಸ್ ಭೂಮಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಶೀರ್ಷಿಕೆಯೇ ರೊಮ್ಯಾಂಟಿಕ್ ಲವ್ ಸ್ಟೋರಿಯ ಛಾಯೆ ಹೊಂದಿದೆ. ಅದಕ್ಕೆ ತಕ್ಕುದಾದ ಪ್ರೇಮ ವೃತ್ತಾಂತವನ್ನೇ ಈ ಸಿನಿಮಾ ಒಳಗೊಂಡಿದೆ ಎಂಬುದೂ ಸತ್ಯ. ಆದರೆ ಇಲ್ಲಿರೋ ಕಥೆ ಪ್ರೀತಿ ಪ್ರೇಮಗಳಿಗೆ ಮಾತ್ರವೇ ಸೀಮಿತವೇ ಎಂಬ ಪ್ರಶ್ನೆಗೆ ಚಿತ್ರತಂಡದ ಕಡೆಯಿಂದ ಭಾನು ವೆಡ್ಸ್ ಭೂಮಿಯ ಬಗ್ಗೆ ಮತ್ತೊಂದಷ್ಟು ವಿಚಾರಗಳೂ ಹೊರ ಬರುತ್ತವೆ.

    ಪ್ರೀತಿಗಾಗಿ ಯುದ್ಧ ನಡೆದದ್ದೂ ಇದೆ. ಆಧುನಿಕ ಕಾಲಮಾನದಲ್ಲಿ ಅದಕ್ಕಾಗಿ ಹೊಡೆದಾಟ ಬಡಿದಾಟಗಳೂ ಸಂಭವಿಸುತ್ತಿವೆ. ಅದೇ ರೀತಿ ಬಾನು ವೆಡ್ಸ್ ಭೂಮಿ ಚಿತ್ರದಲ್ಲಿಯೂ ಪಕ್ಕಾ ಮಾಸ್, ಆಕ್ಷನ್ ದೃಶ್ಯಾವಳಿಗಳೂ ಇವೆ. ಹಾಗಂತ ಅವುಗಳೇನು ಕಮರ್ಶಿಯಲ್ ಟಚ್ ಕೊಡುವುದಕ್ಕೆ ಬೇಕೆಂದೇ ಪೋಣಿಸಿದಂಥವುಗಳಲ್ಲ. ಇಲ್ಲಿ ಮಾಸ್ ಮತ್ತು ಆಕ್ಷನ್ ಸನ್ನಿವೇಶಗಳು ಕಥೆಯ ಓಘಕ್ಕೆ ಪೂರಕವಾಗಿವೆಯಂತೆ. ಈ ಆಕ್ಷನ್ ಸೀನುಗಳನ್ನೂ ಕೂಡಾ ಅಷ್ಟೇ ತಾಜಾತನದಿಂದ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

    ಇಂಥಾ ಆಕ್ಷನ್ ದೃಶ್ಯಾವಳಿಗಳಲ್ಲಿ ನವ ನಾಯಕ ಸೂರ್ಯಪ್ರಭ್ ಪಳಗಿದ ನಟನಂತೆಯೇ ನಟಿಸಿದ್ದಾರಂತೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಟನೆಯ ಗುಂಗು ಹತ್ತಿಸಿಕೊಂಡಿದ್ದ ಇವರು ಉತ್ತರಕರ್ನಾಟಕದ ನವಲಗುಂದದ ಹುಡುಗ. ಆದರೆ, ಓದು, ಬದುಕಿನ ಅನಿವಾರ್ಯತೆಗಳು ಸೂರ್ಯನನ್ನು ಬೇರೆಯದ್ದೇ ಟ್ರ್ಯಾಕಿಗಿಳಿಸಿತ್ತು. ಇನ್ಫೋಸಿಸ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೈ ತುಂಬಾ ಸಂಬಳ ಪಡೆಯುತ್ತಿದ್ದರೂ ಕಲೆಯ ಸೆಳೆತವೆಂಬುದು ಅವರನ್ನು ನಾಯಕ ನಟನಾಗಿ ಪಾದಾರ್ಪಣೆ ಮಾಡಲು ಪ್ರೇರೇಪಿಸಿದೆ.

    ಈ ಚಿತ್ರದ ನಾಯಕನಿಗಾಗಿ ಆಡಿಷನ್ ನಡೆಸಿದ್ದ ನಿರ್ದೇಶಕ ಜೆಕೆ ಆದಿ ಕಥೆಗೆ ಸೂಟ್ ಆಗುವಂತಿದ್ದಾರೆಂಬ ಕಾರಣದಿಂದಲೇ ಸೂರ್ಯಪ್ರಭ್ ಅವರನ್ನು ಆಯ್ಕೆ ಮಾಡಿದ್ದರಂತೆ. ಆ ನಂತರದಲ್ಲಿ ಶ್ರದ್ಧೆಯಿಂದ ಫೈಟಿಂಗ್, ಡ್ಯಾನ್ಸ್ ಸೇರಿದಂತೆ ಎಲ್ಲವನ್ನೂ ಕಲಿತುಕೊಂಡ ಸೂರ್ಯ ಒಳ್ಳೆಯ ಅಭಿನಯ ನೀಡಿದ್ದಾರಂತೆ. ಈ ಚಿತ್ರದಲ್ಲಿ ನಾಯಕ ಸೂರ್ಯ ಹೊಸಬರಾದರೂ ನಾಯಕಿಯಾಗಿರೋ ಮಲೆನಾಡ ಹುಡುಗಿ ರಿತಿಷಾ ಮಲ್ನಾಡ್ ಪಾಲಿಗಿದು ಆರನೇ ಚಿತ್ರವಂತೆ.

  • ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಭಾನು ಮತ್ತು ಭೂಮಿಗಾಗಿ ಗಾಯಕನಾದರು ರಂಗಾಯಣ ರಘು!

    ಬೆಂಗಳೂರು: ಜೆಕೆ ಆದಿ ನಿರ್ದೇಶನದ ಚೊಚ್ಚಲ ಚಿತ್ರ ಭಾನು ವೆಡ್ಸ್ ಭೂಮಿ. ಪೂರ್ವಿ ಕ್ರಿಯೇಷನ್ಸ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣ ಮಾಡಿರೋ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತನ್ನ ಪಾಡಿಗೆ ತಾನು ಚಿತ್ರೀಕರಣ ಮುಗಿಸಿಕೊಂಡಿದ್ದ ಈ ಸಿನಿಮಾ ಸದ್ದು ಮಾಡುತ್ತಿರೋದೇ ಹಾಡುಗಳ ಮೂಲಕ. ಎಲ್ಲ ಹಾಡುಗಳೂ ಕೂಡಾ ಕಥೆಯ ನವಿರುತನವನ್ನೇ ಹೊದ್ದುಕೊಂಡಂತೆ ಮೂಡಿ ಬಂದ ಕೇಳುಗರಿಗೆಲ್ಲ ಖುಷಿ ನೀಡಿದೆ. ಈ ಚಿತ್ರದಲ್ಲಿ ರಂಗಾಯಣ ರಘು ಪ್ರಮುಖ ಪಾತ್ರದ ಜೊತೆಗೇ ಗಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

    ಭಾನು ವೆಡ್ಸ್ ಭೂಮಿ ಎಂಬ ಹೆಸರೇ ಮುದ್ದಾದೊಂದು ಲವ್ ಸ್ಟೋರಿಯ ಘಮವನ್ನಿಟ್ಟಿಕೊಂಡಿದೆ. ಇದರಲ್ಲಿ ವಿಶೇಷವಾದ ಒಂದು ಹಾಡನ್ನು ರಂಗಾಯಣ ರಘು ಹಾಡಿದ್ದಾರೆ. ಅಂದಹಾಗೆ ನಟನೆ ಬಿಟ್ಟು ಬೇರೆ ಯಾವುದರತ್ತಲೂ ಗಮನ ಹರಿಸದ ರಘು ಹಾಡಲು ಮನಸು ಮಾಡಿದ್ದು ತಮ್ಮ ಗೆಳೆಯನಿಗೋಸ್ಕರ. ಈ ಚಿತ್ರದಲ್ಲಿ ಶೋಭರಾಜ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರೇ ಖುದ್ದಾಗಿ ಒತ್ತಾಯ ಮಾಡಿದ ಪರಿಣಾಮವಾಗಿಯೇ ರಂಗಾಯಣ ರಘು ಹಾಡಿದ್ದಾರೆ. ಆ ಹಾಡೂ ಕೂಡಾ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ.

    ರಂಗಾಯಣ ಹಾಡಿರೋ ಈ ಹಾಡಿಗೆ ಶೋಭರಾಜ್ ನೃತ್ಯ ಮಾಡಿರೋದು ಮತ್ತೊಂದು ವಿಶೇಷ. ಹೀಗೆ ನಿರ್ದೇಶಕ ಜೆಕೆ ಆದಿ ಭಾನು ವೆಡ್ಸ್ ಭೂಮಿಯನ್ನು ಪ್ರತಿಯೊಂದರಲ್ಲಿಯೂ ವಿಶೇಷತೆಗಳನ್ನು ಪೋಣಿಸಿಯೇ ನಿರ್ದೇಶನ ಮಾಡಿದ್ದಾರೆ. ಈವರೆಗೂ ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ, ಒಂದಷ್ಟು ನಿರ್ದೇಶಕರ ಗರಡಿಯಲ್ಲಿ ಕೆಲಸ ಮಾಡಿರೋ ಆದಿ ಅವರ ಮೊದಲ ಕನಸಿನಂಥಾ ಚಿತ್ರವಿದು. ಈ ಮೂಲಕವೇ ಸೂರ್ಯಪ್ರಭ್ ಮತ್ತು ರಿಷಿತಾ ಮಲ್ನಾಡ್ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಡುಗಳ ಕ್ವಾಲಿಟಿಯೇ ಈ ಸಿನಿಮಾಕ್ಕಾಗಿ ಜನ ಕಾತರದಿಂದ ಕಾಯುವಂತೆ ಮಾಡಿದೆ.