Tag: SurName

  • ಉದ್ಯೋಗಕ್ಕೆ ಕುತ್ತು ತಂದ ಸರ್‌ನೇಮ್- ಫೇಸ್‍ಬುಕ್‍ನಲ್ಲಿ ಯುವತಿ ಅಳಲು

    ಉದ್ಯೋಗಕ್ಕೆ ಕುತ್ತು ತಂದ ಸರ್‌ನೇಮ್- ಫೇಸ್‍ಬುಕ್‍ನಲ್ಲಿ ಯುವತಿ ಅಳಲು

    ದಿಶ್ಪೂರ್: ಸರ್‌ನೇಮ್ (ಉಪನಾಮ)ದಿಂದಾಗಿ ಯುವತಿಯೊಬ್ಬಳು ಉದ್ಯೋಗಕ್ಕೆಂದು ಹಾಕಿರುವ ಅರ್ಜಿ ತಿರಸ್ಕೃತಗೊಂಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

    ಅಸ್ಸಾಂನ ಸ್ನಾತಕೋತ್ತರ ಪದವೀಧರೆ ಪ್ರಿಯಾಂಕ ಚುತಿಯಾ ಅವರ ಅರ್ಜಿ ತಿರಸ್ಕೃತಗೊಂಡಿದೆ. ಇದರಿಂದ ಮನನೊಂದ ಯುವತಿ ಫೇಸ್‍ಬುಕ್ ಮೂಲಕ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಕೇವಲ ನನ್ನ ಸರ್ ನೇಮ್‍ನಿಂದಾಗಿ ಉದಯೋಗಕ್ಕಾಗಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿರುವುದು ನನಗೆ ಬಹಳ ನೋವಾಗಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾಳೆ.

    ಪ್ರಿಯಾಂಕ ಚುತಿಯಾ ಅವರ ನೇಮ್‍ನಲ್ಲಿ ‘ಚುತಿಯಾ’ ಎಂಬುದು ಅವರ ಉಪನಾಮವಾಗಿದೆ. ಇದನ್ನು ಅಸ್ಸಾಂಮಿನಲ್ಲಿ ‘ಸುತಿಯಾ’ ಎಂದು ಉಚ್ಛರಿಸಲಾಗುತ್ತಿದೆ. ಆದರೆ ಇದೇ ಸರ್‌ನೇಮ್ ಬಳಸಿ ಪ್ರಿಯಾಂಕ ಅವರು, ನ್ಯಾಷನಲ್ ಸೀಡ್ ಕಾರ್ಪೊರೇಶನ್ ಲಿಮಿಟೆಡ್ (ಎನ್‍ಎಸ್‍ಸಿಎಲ್) ಎಂಬ ಸರ್ಕಾರಿ ಒಡೆತನದ ಕಂಪನಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಆಕೆಯ ಸರ್ ನೇಮ್‍ನಲ್ಲಿ ‘ಆಡುಭಾಷೆ’ ಬಳಕೆಯಾಗಿದೆ ಎಂದು ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ.

    ಪ್ರಿಯಾಂಕ ಚುತಿಯಾ ಅವರು, ಅಸ್ಸಾಂನ ಗೋಗಾಮುಖ್ ಮೂಲದವಳಾಗಿದ್ದು, ಆಕೆಯ ಮನೆತನದವರಿಗೆ ಚುತಿಯಾ ಎಂಬ ಸರ್‌ನೇಮ್ ಇದೆ. ಆದರೆ ಇದನ್ನು ಅಸ್ಸಾಂನಲ್ಲಿ ಸುತಿಯಾ ಎಂದು ಉಚ್ಛರಿಸಲಾಗುತ್ತದೆ. ಪ್ರಿಯಾಂಕ ಕೃಷಿ ಅರ್ಥಶಾಸ್ತ್ರ ಮತ್ತು ಕೃಷಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾಳೆ. ಹೀಗಾಗಿ ಆಕೆ ಎನ್‍ಎಸ್‍ಸಿಎಲ್ ಕಂಪನಿಗೆ ಉದ್ಯೋಗ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಎನ್‍ಎಸ್‍ಸಿಎಲ್ ಕಂಪನಿಯ ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸುವಾಗ ನಿಮ್ಮ ಹೆಸರಿನಲ್ಲಿ ಆಡುಭಾಷೆ ಬಳಸಲಾಗಿದೆ. ಆದ್ದರಿಂದ ನಿಮ್ಮ ಅರ್ಜಿಯನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

    ಇದರಿಂದ ಬೇಸರಗೊಂಡ ಪ್ರಿಯಾಂಕ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ಕೇವಲ ನನ್ನ ಸರ್ ನೇಮ್‍ನಿಂದ ನನ್ನ ಅರ್ಜಿ ತಿರಸ್ಕೃತವಾಗಿದೆ. ಎನ್‍ಎಸ್‍ಸಿಎಲ್ ಕಂಪನಿಯ ಪೋರ್ಟಲ್‍ನಲ್ಲಿ ಅರ್ಜಿಯ ಸರ್ ನೇಮ್‍ನಲ್ಲಿ ಆಡುಭಾಷೆಯಿದೆ ಎಂದು ಹೇಳಿದೆ. ನಾನು ಅವರಿಗೆ ನನ್ನ ಉಪನಾಮದಲ್ಲಿ ಆಡುಭಾಷೆ ಬಳಸಿಲ್ಲ. ನನ್ನ ಸಮುದಾಯದಿಂದ ನನಗೆ ಆ ಸರ್‌ನೇಮ್ ಬಂದಿದೆ ಎಂದು ಎಷ್ಟೇ ಹೇಳಿದರೂ ಕಂಪನಿ ಸಿಬ್ಬಂದಿ ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.