Tag: suri

  • ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟಗರು ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮಾಸ್ ಟೀಸರ್ ರಿಲೀಸ್ ಆಗಿದೆ. ಸ್ಯಾಂಡಲ್‍ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಈ ಚಿತ್ರವೂ ಕೂಡ ಒಂದು. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಾನಾ ಅವತಾರಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ. ಟೀಸರ್ ಸಖತ್ ಥ್ರಿಲ್ಲ್ ಆಗಿದ್ದು, ಸುಕ್ಕಾ ಸೂರಿ ಮತ್ತೊಮ್ಮೆ ಈ ಚಿತ್ರದ ಮೂಲಕ ಸಿನಿ ಪ್ರೇಕ್ಷಕರಿಗೆ ಭರ್ಜರಿ ಬೋಜನ ನೀಡೋದು ಪಕ್ಕಾ ಅನ್ನಿಸ್ತಾಯಿದೆ.

    ಪಿಆರ್ ಕೆ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಬ್ಯಾಗ್ರೌಂಡ್ ಸ್ಕೋರ್ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಗರು ಚಿತ್ರದಲ್ಲಿ ಸೂರಿ ಚರಣ್ ರಾಜ್ ಕಾಂಬಿನೇಷನ್ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದಲ್ಲೂ ಒಂದಾಗಿರುವ ಇವ್ರ ಕಾಂಬಿನೇಷನ್ ಮತ್ತೊಂದು ಸೂಪರ್ ಹಿಟ್ ಆಲ್ಬಂ ನೀಡೋದ್ರಲ್ಲಿ ಅನುಮಾನವೇ ಇಲ್ಲ.

    ಸುದೀರ್.ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿದೆ. ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇರೋ ಚಿತ್ರತಂಡ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

  • ತಮಿಳಿಗೆ ಜಿಗಿಯಿತು ಸೂರಿ ಟಗರು!

    ತಮಿಳಿಗೆ ಜಿಗಿಯಿತು ಸೂರಿ ಟಗರು!

    ಈ ವರ್ಷದ ಆರಂಭವನ್ನು ಚಿತ್ರರಂಗದ ಪಾಲಿಗೆ ಹರ್ಷದಾಯಕವಾಗಿಸಿದ ಚಿತ್ರ ಟಗರು. ದೊಡ್ಡ ಮಟ್ಟದಲ್ಲಿಯೇ ಗೆಲುವು ದಾಖಲಿಸಿದ ಈ ಚಿತ್ರ ಹಲವಾರು ದಾಖಲೆಗಳನ್ನೇ ಸೃಷ್ಟಿಸಿದೆ. ಶಿವಣ್ಣನಿಗೂ ಭಿನ್ನ ಬಗೆಯದ್ದೊಂದು ಇಮೇಜನ್ನೇ ಕಟ್ಟಿಕೊಟ್ಟ ಟಗರು ಈಗ ಏಕಾಏಕಿ ಪಕ್ಕದ ತಮಿಳಿಗೂ ಜಿಗಿದಿದೆ!

    ಕೆ ಪಿ ಶ್ರೀಕಾಂತ್ ನಿರ್ದೇಶನದ ಈ ಚಿತ್ರದ ರೀಮೇಕ್ ಹಕ್ಕು ಭಾರೀ ಮೊತ್ತಕ್ಕೆ ತಮಿಳಿಗೆ ಮಾರಾಟವಾಗಿದೆ. ಕೊಂಬನ್ ಖ್ಯಾತಿಯ ನಿರ್ದೇಶಕ ಮುತ್ತಯ್ಯ ಈ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆದಿದ್ದಾರೆ. ತಮಿಳಿನಿಂದ ಟಗರು ರೀಮೇಕ್ ಹಕ್ಕುಗಳಿಗಾಗಿ ಕಾಲಾಂತರದಿಂದಲೂ ಪೈಪೋಟಿ ಆರಂಭವಾಗಿತ್ತು. ಕಡೆಗೂ ವ್ಯವಹಾರಗಳೆಲ್ಲ ಪಕ್ಕಾ ಆಗಿ ಟಗರು ದೊಡ್ಡ ಮೊತ್ತವೊಂದಕ್ಕೆ ತಮಿಳಿಗೆ ಹಾರಿದೆ.

    ಇದು ಕನ್ನಡ ಚಿತ್ರರಂಗದ ಘನತೆಯ ದೃಷ್ಟಿಯಿಂದ ಒಂದೊಳ್ಳೆ ಬೆಳವಣಿಗೆ. ಕನ್ನಡ ಚಿತ್ರಗಳ ಗುಣಮಟ್ಟದ ಬಗ್ಗೆ ಸಿನಿಕರಂತೆ ಮೂಗು ಮುರಿಯುವ ಮಂದಿಯೇ ಬೆಚ್ಚಿಬಿದ್ದಂತಾಗೋದು ಇಂಥಾ ಬೆಳವಣಿಗೆಗಳಾಗುತ್ತಲೇ. ತಾಂತ್ರಿಕವಾಗಿಯೂ ನವೀನ ಪ್ರಯೋಗಗಳನ್ನು ಹೊಂದಿರೋ ಈ ಚಿತ್ರದ ಕ್ಯಾರೆಕ್ಟರುಗಳು ಮಾಡಿದ ಮೋಡಿಯೇ ಸಾರ್ವಕಾಲಿಕವಾದದ್ದು. ಟಗರಿನಲ್ಲಿ ಜನ ಮೆಚ್ಚಿಕೊಂಡಿದ್ದ, ಅದನ್ನು ನಿರ್ವಹಿಸಿದವರ ನಸೀಬನ್ನೇ ಬದಲಾಯಿಸಿದ ಡಾಲಿ, ಚಿಟ್ಟೆ ಮುಂತಾದ ಪಾತ್ರಗಳನ್ನು ತಮಿಳಿನಲ್ಲಿ ಯಾರು ನಿರ್ವಹಿಸಲಿದ್ದಾರೆಂಬ ಕುತೂಹಲ ಇದ್ದೇ ಇದೆ. ಶಿವಣ್ಣನ ಪಾತ್ರವನ್ನು ಯಾರು ನಿರ್ವಹಿಸುತ್ತಾರೆಂಬುದೂ ಇನ್ನಷ್ಟೇ ಜಾಹೀರಾಗಬೇಕಿದೆ.

    ಆದರೆ ಟಗರು ಕನ್ನಡಿಗರೆಲ್ಲರೂ ಹೆಮ್ಮೆ ಪಡುವಂತೆ ತಮಿಳಿಗೆ ರೀಮೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿರ್ದೇಶಕ ಸೂರಿಗೆ ಬೆದರಿಕೆ ಹಾಕಿದ ಹುಚ್ಚ ವೆಂಕಟ್!- ವಿಡಿಯೋ

    ನಿರ್ದೇಶಕ ಸೂರಿಗೆ ಬೆದರಿಕೆ ಹಾಕಿದ ಹುಚ್ಚ ವೆಂಕಟ್!- ವಿಡಿಯೋ

    ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ನಿರ್ದೇಶಕರ ವಿರುದ್ಧ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ಸದ್ಯ ವೆಂಕಟ್ ಸೂರಿಗೆ ಎಚ್ಚರಿಕೆ ನೀಡಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವರಾಜ್ ಕುಮಾರ್ ಅವರಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಇದರಿಂದ ಶಿವಣ್ಣ ಅಭಿಮಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಹುಚ್ಚ ವೆಂಕಟ್ ಕೂಡಾ ರೊಚ್ಚಿಗೆದ್ದಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು!

    ವಿಲನ್‍ಗಳು ಶಿವಣ್ಣನಿಗೆ ಹೇಳಿದ ಡೈಲಾಗ್ ಕೇಳಿ ಹುಚ್ಚ ವೆಂಕಟ್ ನಿರ್ದೇಶಕ ಸೂರಿ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಶಿವಣ್ಣನಿಗೆ ಉಪಯೋಗಿಸಿದ ಅವಾಚ್ಯ ಪದಗಳನ್ನು ಮ್ಯೂಟ್ ಮಾಡಬೇಕು. ಇಲ್ಲದಿದ್ದರೆ ನನ್ನ ಹುಡುಗರು ನಿನ್ನನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ

    ಈ ಡೈಲಾಗ್‍ಗಳನ್ನು ನೀನು ಕೂಡಲೇ ಮ್ಯೂಟ್ ಮಾಡದಿದ್ದರೆ ಮುಂದಾಗುವ ಪರಿಣಾಮಗಳಿಗೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಶಿವರಾಜ್‍ಕುಮಾರ್ ಎಂದರೆ ನನಗೆ ಇಷ್ಟ. ಇಷ್ಟಪಡುವವರಿಗೆ ಪ್ರಾಣ ಬೇಕಾದ್ರೂ ಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಗರು ನಿರ್ದೇಶಕ ಸೂರಿ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ

    https://www.youtube.com/watch?v=p6H6cBKSaPQ

  • ಟಗರು ನಿರ್ದೇಶಕ ಸೂರಿ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ

    ಟಗರು ನಿರ್ದೇಶಕ ಸೂರಿ ವಿರುದ್ಧ ಶಿವರಾಜ್ ಕುಮಾರ್ ಅಭಿಮಾನಿಗಳು ಗರಂ

    ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ `ಟಗರು’ ಚಿತ್ರ ಶುಕ್ರವಾರವಷ್ಟೇ ತೆರೆಕಂಡು ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ ನಿರ್ದೇಶಕರ ವಿರುದ್ಧ ಶಿವಣ್ಣ ಅಭಿಮಾನಿಗಳು ಗರಂ ಆಗಿದ್ದಾರೆ.

    ಈ ಬಗ್ಗೆ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಸೇನಾ ಸಮಿತಿಯಿಂದ ಸುದ್ದಿಗೋಷ್ಠಿ ನಡೆಸಿ, ಸಿನಿಮಾದಲ್ಲಿ ವಿಲನ್ ಗಳು ನಾಯಕ ನಟ ಶಿವಣ್ಣನಿಗೆ ಅವಾಚ್ಯ ಪದಗಳಿಂದ ಬೈಯ್ಯುವ ಸನ್ನಿವೇಶಗಳಿವೆ. ಈ ಕಾರಣಕ್ಕೆ ಶಿವಣ್ಣ ಅಭಿಮಾನಿಗಳು ಸೂರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು ನೋಡಿ ಜಬರ್ದಸ್ತಾದ ಹೇರ್ ಕಟ್ ಮಾಡಿಸ್ಕೊಂಡ ಅಭಿಮಾನಿ

    ಟಗರು ಚಲನಚಿತ್ರದ ನಿರ್ದೇಶಕ ಸೂರಿಯವರು ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೋರಬೇಕಾಗಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಸೇನಾ ಸಮಿಯ ಅಧ್ಯಕ್ಷ ಹೆಚ್ ಎಸ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಪೊಗದಸ್ತಾದ ಟಗರು!

    ಕ್ಷಮೆ ಕೇಳದೇ ಹೋದ ಪಕ್ಷದಲ್ಲಿ ಸೂರಿಯವರ ಮುಖಕ್ಕೆ ಮಸಿ ಬಳಿದು, ಅವರು ನಿರ್ದೇಶಿಸಿರುವ ಎಲ್ಲಾ ಚಿತ್ರಗಳನ್ನು ಬಹಿಷ್ಕರಿಸಲು ಕನ್ನಡ ಚಲಚನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸುತ್ತೇವೆ. ಸೂರಿಯವರನ್ನು ನಿರ್ದೇಶಕ ಸ್ಥಾನದಿಂದ ವಜಾ ಮಾಡುವವರೆಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ಕುರಿತು ಭಾನುವಾರ ಸಂತೋಷ್ ಥಿಯೇಟರ್ ನಲ್ಲಿ ನಟ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಬುದ್ಧಿ ಹೇಳಿದ್ರು. ನಾನ್ ವಿಲನ್ ಗಳಿಗೆ ಬೈದಾಗ ನೀವುಗಳು ಸಿಳ್ಳೆ ಚಪ್ಪಾಳೆ ಹೊಡಿತೀರಾ. ಅದೇ ನನಗೆ ವಿಲನ್ ಗೆ ಬೈದಾಗ ಯಾಕೆ ಸಹಿಸಲ್ಲ ಅಂತ ಪ್ರಶ್ನಿಸಿದ್ದರು.

    ಇದಕ್ಕೂ ಮುಂಚೆ `ಕಡ್ಡಿಪುಡಿ’ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್ ಅವರನ್ನು ಅವಮಾನಕರ ರೀತಿಯಲ್ಲಿ ನಡೆಸಿಕೊಂಡು ಚಿತ್ರವನ್ನು ಮಾಡಿರುವುದು ಡಾ. ರಾಜ್ ಕುಮಾರ್ ಸೇನಾ ಸಮಿತಿಯು ಪ್ರತಿಭಟನೆ ಮಾಡಿತ್ತು.

    ಟಗರು ಚಿತ್ರದಲ್ಲಿ ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.