Tag: Surgical strike 2.0

  • ಬಾಲಕೋಟ್ ಜೈಷ್ ಉಗ್ರರ ಬೋರ್ಡಿಂಗ್ ಸ್ಕೂಲ್ – ಭಾರತದ ವಿಮಾನಗಳನ್ನು ನೋಡಿ ಪಾಕ್ ಕನ್‍ಫ್ಯೂಸ್

    ಬಾಲಕೋಟ್ ಜೈಷ್ ಉಗ್ರರ ಬೋರ್ಡಿಂಗ್ ಸ್ಕೂಲ್ – ಭಾರತದ ವಿಮಾನಗಳನ್ನು ನೋಡಿ ಪಾಕ್ ಕನ್‍ಫ್ಯೂಸ್

    ನವದೆಹಲಿ: ಭಾರತೀಯ ವಾಯುಸೇನೆ ಮಂಗಳವಾರ ಬೆಳಗ್ಗೆ ಪಾಕಿನಲ್ಲಿ ಅಡಗಿದ್ದ ಉಗ್ರರಿಗೆ ಶಾಕ್ ನೀಡಿದೆ. ರಾತ್ರಿ ವೇಳೆ ನಿದ್ರಿಸುತ್ತಿದ್ದ ಉಗ್ರರ ಮೇಲೆ ಬಾಂಬ್ ದಾಳಿ ನಡೆಸಿ ಅಡಗುತಾಣವನ್ನೇ ನೆಲಸಮ ಮಾಡಿದೆ.

    ನಮ್ಮ ಹೆಮ್ಮೆಯ ವಾಯುಪಡೆಯ ಯೋಧರು ದಾಳಿ ಮಾಡಿದ್ದ ಬಾಲಕೋಟ್ ಉಗ್ರರ ನೆಲೆ ಅಂತಿಂಥ ನೆಲೆಯಲ್ಲ. ಅದು ಉಗ್ರರ ಬೋರ್ಡಿಂಗ್ ಸ್ಕೂಲ್ ಆಗಿತ್ತು. ಯುವಕರ ತಲೆಕೆಡಿಸಿ ಉಗ್ರರನ್ನಾಗಿ ರೂಪಿಸಿ ಭಾರತ ಮೇಲೆ ವಿಷಬಿಜ ಬಿತ್ತುತ್ತಿದ್ದ ಪ್ರಧಾನ ಕೇಂದ್ರ ಸ್ಥಳವೇ ಬಾಲಕೋಟ್. ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ಪುಲ್ವಾಮದಲ್ಲಿ ಸಿಆರ್ ಪಿಎಫ್ ಯೋಧರ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಅರಿತ ನೂರಾರು ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಅರಣ್ಯ ಪ್ರದೇಶದ ಬೆಟ್ಟದ ತುದಿಯಲ್ಲಿ ರೆಸಾರ್ಟ್ ನಂತಿರುವ ಬಾಲಕೋಟ್ ನೆಲೆಗೆ ಸ್ಥಳಾಂತರಗೊಂಡಿದ್ದರು.

    5 ಸ್ಟಾರ್ ಹೋಟೆಲ್ ನಂತಿರುವ ಈ ನೆಲೆ ಸುರಕ್ಷಿತ ಎಂದು ಭಾವಿಸಿ ಉಗ್ರರು ಈ ನೆಲೆಯಲ್ಲಿ ಆಶ್ರಯ ಪಡೆದಿದ್ದರು. ಈ ಕ್ಯಾಂಪ್ ನಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರು ಹಾಗೂ 25 ರಿಂದ 27 ಮಂದಿ ತರಬೇತುದಾರರು ತಂಗಿದ್ದರು ಎಂದು ಮೂಲಗಳು ತಿಳಿಸಿವೆ.

    ಬಾಲಕೋಟ್ ಕ್ಯಾಂಪ್ ನೆಲದ ಮೆಟ್ಟಿಲುಗಳಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಇಸ್ರೇಲ್ ಧ್ವಜಗಳನ್ನು ಬಿಡಿಸಲಾಗಿತ್ತು. ಈ ತರಬೇತಿ ಶಿಬಿರ ಬಾಲಕೋಟ್ ಸಮೀಪದ ಕಾಡಿನಲ್ಲಿ ಆರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ಮಂದಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ದೊಡ್ಡ ದೊಡ್ಡ ಕೊಠಡಿಗಳು, ಈಜುಕೊಳ, ಜಿಮ್ ಸೆಂಟರ್‍ಗಳನ್ನು ಇಲ್ಲಿ ನಿರ್ಮಾಣಗೊಂಡಿದೆ. ತರಬೇತಿ ನೀಡಿದ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಇಲ್ಲೇ ನೀಡಲಾಗುತಿತ್ತು. ಜೈಷ್ ಸಂಘಟನೆಯ ಮದ್ದುಗುಂಡುಗಳ ಸಂಗ್ರಹಾಲಯ ಇದಾಗಿತ್ತು. ಅರಣ್ಯ ಪ್ರದೇಶದಲ್ಲಿ ಉಗ್ರರಿಗೆ ಶೂಟಿಂಗ್ ತರಬೇತಿ ನೀಡಲಾಗುತಿತ್ತು.

    ಬಾಲಕೋಟ್ ಮುಖ್ಯನಗರದಿಂದ 20 ಕಿ.ಮೀ ದೂರದಲ್ಲಿರುವ ಜೈಷ್ ಉಗ್ರರ ಕೇಂದ್ರ ಸ್ಥಳ ಭಾರತದ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಅಮೆರಿಕದ ದಾಳಿಗೆ ಬಲಿಯಾಗಿದ್ದ ಅಲ್‍ಕೈದಾ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಅಡಗಿದ್ದ ಅಬೋಟಾಬಾದ್ ನಗರ ಬಾಲಕೋಟ್‍ನಿಂದ 60 ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳು ಹಾರಾಡುತ್ತಿದ್ದು, ಶಬ್ಧ ಕೇಳಿ ಭಯದಲ್ಲಿ ನಿದ್ದೆ ಬಂದಿಲ್ಲ- ಪ್ರತ್ಯಕ್ಷದರ್ಶಿ

    ಭಾರತ ಸೇನೆ ಪ್ರತೀಕಾರವನ್ನು ತೀರಿಸಲಿದೆ ಎನ್ನುವುದು ಗೊತ್ತಾಗುತ್ತಿದ್ದಂತೆ ಉಗ್ರರೆಲ್ಲರೂ ಬಾಲಕೋಟ್ ಅಡಗುದಾಣವನ್ನು ಸೇರಿದ್ದರು. ಭಾರತ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಾಧ್ಯವೇ ಇಲ್ಲ. ಒಂದು ವೇಳೆ ಭಾರತದ ಸೇನೆ ನುಗ್ಗಿದರೂ ಪಾಕ್ ಸೇನೆ ಹೊಡೆದು ಉರುಳಿಸಿ ನಮ್ಮನ್ನು ರಕ್ಷಿಸುತ್ತದೆ ಎಂದೇ ಉಗ್ರರು ಬಲವಾಗಿ ನಂಬಿದ್ದರು.

    ಪಾಕ್ ಕನ್‍ಫ್ಯೂಸ್:
    ದಾಳಿಯ ಬಗ್ಗೆ ಮೊದಲೇ ಸಿದ್ಧತೆ ಮಾಡಿಕೊಂಡಿದ್ದ ಭಾರತದ ಪಶ್ಚಿಮ ಮತ್ತು ಕೇಂದ್ರ ವಾಯುನೆಲೆಯಿಂದ ಒಂದೇ ಸಮಯಕ್ಕೆ ಒಂದೇ ಬಾರಿಗೆ ಹಲವು ವಿಮಾನಗಳು ಹಾರಾಟ ಆರಂಭಿಸಿದವು. ಈ ವಿಚಾರ ಪಾಕಿಸ್ತಾನ ಅಧಿಕಾರಿಗಳಿಗೆ ಗೊತ್ತಾಗಿ ಅವರು ತುಂಬಾ ಗೊಂದಲಕ್ಕೆ ಒಳಗಾಗಿದ್ದರು. ಒಂದೇ ಸಮಯದಲ್ಲಿ ಹಲವು ವಿಮಾನಗಳು ಟೇಕಾಫ್ ಆಗಿದ್ದರಿಂದ ಗಡಿ ನಿಯಂತ್ರಣ ರೇಖೆಯ ಬಳಿ ದಾಳಿ ನಡೆಸಬಹುದು. ಆದರೆ ಪಾಕಿಸ್ತಾನದ ನೆಲದ ಒಳಗಡೆ ವಿಮಾನ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಊಹಿಸಿದ್ದರು ಗೃಹ ಇಲಾಖೆ ಮೂಲಗಳು ತಿಳಿಸಿವೆ.

    ಎಲ್ಲ ವಿಮಾನಗಳ ಜೊತೆ ಗುಂಪಿನಲ್ಲಿ ಬಂದಿದ್ದ ಮಿರಾಜ್ ಪಾಕಿಸ್ತಾನದ ರೇಡಾರ್‍ಗಳು ಕಣ್ಣು ತಪ್ಪಿಸಿ ಬಿಟ್ಟಿತು. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಭೂಪ್ರದೇಶ ಒಳಗಡೆ ನುಗ್ಗಿದ ಮಿರಾಜ್ ವಿಮಾನ ಯಾರೂ ನಿರೀಕ್ಷೆ ಮಾಡದಂತೆ ಪಾಕ್ ನೆಲಕ್ಕೆ ನುಗ್ಗಿ ಉಗ್ರರ ಅಡಗುದಾಣದ ಮೇಲೆಯೇ ಬಾಂಬ್ ದಾಳಿ ನಡೆಸಿ ಯಶಸ್ವಿಯಾಗಿ ದೇಶಕ್ಕೆ ಮರಳಿತ್ತು. ಈ ಮೂಲಕ ನೀವೇ ಎಲ್ಲೇ ಅಡಗಿದ್ದರೂ ನಾವು ಹೊಡೆಯಬಲ್ಲೆವು ಎಂದು ತೋರಿಸಿಕೊಟ್ಟಿತು. ಅಷ್ಟೇ ಅಲ್ಲದೇ ಸಾಕ್ಷ್ಯ ಕೇಳಿದ ಪಾಕಿಸ್ತಾನಕ್ಕೆ ಅವರ ನೆಲದಲ್ಲೇ ಉತ್ತರ ನೀಡಿ ಪುಲ್ವಾಮಾ ದಾಳಿ ಸೇಡು ತೀರಿಸಿಕೊಂಡಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ನವದೆಹಲಿ: ಪುಲ್ವಾಮ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ವಾಯುಪಡೆ ನಡೆಸಿದ ಪ್ರತಿದಾಳಿಗೆ ಸುಮಾರು 50 ಮಂದಿ ಪಾಕ್ ಉಗ್ರರು ಹತ್ಯೆಯಾಗಿದ್ದಾರೆ ಎಂದು ಪಾಕಿಸ್ತಾನದ ಸೇನೆ ಹೇಳಿದೆ.

    ಭಾರತದ ವಾಯುಸೇನೆ ಬೆಳಗ್ಗೆ ನಡೆಸಿದ ದಾಳಿ ವೇಳೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿತ್ತು. ಆದರೆ ಸಂಜೆಯ ವೇಳೆ ಸಾವು ನೋವು ಸಂಭವಿಸಿದೆ ಎನ್ನುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ.

    ಭಾರತೀಯ ವಾಯು ಪಡೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ದಾಳಿ ನಡೆಸಿ, ಪಾಕಿಸ್ತಾನದಲ್ಲಿ ಅಡಗಿ ಕುಳಿತ್ತಿದ್ದ ಸುಮಾರು 15 ಉಗ್ರರ ಅಡಗುತಾಣಗಳನ್ನು ಒಳಗೊಂಡ 6 ಪ್ರದೇಶವನ್ನು ಟಾರ್ಗೆಟ್ ಮಾಡಿ ವಾಯುಪಡೆ ದಾಳಿ ನಡೆಸಿದೆ. ಸದ್ಯ ಈ ದಾಳಿಯಲ್ಲಿ ಸುಮಾರು 50 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಪಾಕ್ ಸೇನೆಯ ಮೂಲಗಳನ್ನು ಆಧಾರಿಸಿ ನ್ಯೂಸ್ 18 ವರದಿ ಮಾಡಿದೆ. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪ್ರಮುಖವಾಗಿ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ತರಬೇತಿ ಕ್ಯಾಂಪ್‍ಗಳ ಮೇಲೆಯೇ ದಾಳಿ ನಡೆದಿದೆ ಎನ್ನುವುದನ್ನು ಪಾಕ್ ಸೇನೆ ಒಪ್ಪಿಕೊಂಡಿದೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿ ಸುದ್ದಿ ಪ್ರಸಾರ ಮಾಡಿದೆ.

    ಭಾರತದ ಗೃಹ ಇಲಾಖೆಯ ಮೂಲಗಳು ಸುಮಾರು 350ಕ್ಕೂ ಹೆಚ್ಚು ಉಗ್ರರು ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೇಳಿತ್ತು. ಎಷ್ಟು ಜನ ಉಗ್ರರು ಹತ್ಯೆಯಾಗಿದ್ದಾರೆ ಎನ್ನುವುದನ್ನು ಅಧಿಕೃತವಾಗಿ ಪಾಕ್ ತಿಳಿಸುವುದಿಲ್ಲ. ತಿಳಿಸಿದರೆ ಉಗ್ರರು ಪಾಕಿಸ್ಥಾನದಲ್ಲೇ ನೆಲೆಸಿದ್ದಾರೆ ಎನ್ನುವುದನ್ನು ಒಪ್ಪಿಕೊಂಡ ಹಾಗೆ ಆಗುತ್ತದೆ. ಆದರೆ ಬಾಂಬ್ ದಾಳಿ ನಡೆದು ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ ಎಂದು ಬಾಲಕೋಟ್ ನಿವಾಸಿಗಳೇ ಹೇಳುವ ಮೂಲಕ ಪಾಕ್ ಸುಳ್ಳನ್ನು ಬಯಲು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ನವದೆಹಲಿ: ಭಾರತೀಯ ವಾಯು ಪಡೆ ದಾಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಪಾಕಿಸ್ತಾನ ಮೊಂಡುವಾದ ಮುಂದುವರಿಸಿತ್ತು. ಆದರೆ ಬಾಲಕೋಟ್ ನಿವಾಸಿಗಳು ಏರ್ ಸ್ಟ್ರೈಕ್‍ನಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳುವ ಮೂಲಕ ಪಾಕ್ ಮೊಂಡುವಾದವನ್ನು ಬಯಲು ಮಾಡಿದ್ದಾರೆ.

    ಯುದ್ಧದ ರೀತಿಯಲ್ಲಿ ಇಂದು 3 ಗಂಟೆ ಸುಮಾರು ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿ ಬಂತು. ಅದು ಹವಾಮಾನ ವೈಪರಿತ್ಯದಂತೆ ನಮ್ಮನ್ನು ತಲ್ಲಣಗೊಳಿಸಿತ್ತು. ಇದರಿಂದಾಗಿ ಇಡೀ ರಾತ್ರಿ ನಾವು ನಿದ್ರಿಸಲು ಸಾಧ್ಯವಾಗಲಿಲ್ಲ. ಶಬ್ಧ ಕೇಳಿಬಂದ 5 ರಿಂದ 10 ನಿಮಿಷದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಪರಿಣಾಮ ಕಟ್ಟಡಗಳು ನೆಲ ಸಮವಾದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನ್ನು ನಾವು ನೋಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    ಅಷ್ಟೇ ಅಲ್ಲದೆ ದಾಳಿಯ ಅವಶೇಷಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ಈ ಮೂಲಕ ದಾಳಿಯಿಂದ ಪಾಕಿಸ್ತಾನದ ಮೊಂಡುವಾದ ಬಯಲಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್, ಭಾರತದ ವಾಯು ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಹೇಳಿ ಮೊಂಡುತನ ಪ್ರದರ್ಶನ ಮಾಡಿದ್ದರು. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ವಾಯುಸೇನೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಈ ಸರ್ಜಿಕಲ್ ಸ್ಟ್ರೈಕ್ 2.0 ಮಾಡಿ ಯಶಸ್ವಿಯಾದ ವಾಯುಪಡೆಗೆ ಭಾರತೀಯ ಸೇನೆ ಒಂದು ಕವಿತೆ ಸಮರ್ಪಿಸಿ ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.

    ಇಂದು ಮುಂಜಾನೆ 3.45ರ ಸುಮಾರಿಗೆ ಬಾಲ್‍ಕೋಟ್ ಮೇಲೆ ವಾಯುಪಡೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರ್ ಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದೆ. ಪುಲ್ವಾಮದಲ್ಲಿ 44 ಮಂದಿ ಸಿಆರ್‌ಪಿಎಫ್ ಯೋಧರ ಬಲಿಪಡೆದ ಪಾಕ್ ಉಗ್ರರಿಗೆ ಭಾರತೀಯ ಸೇನೆ ಈ ಮೂಲಕ ಪ್ರತ್ಯುತ್ತರ ನೀಡಿದೆ. ಮಿರಾಜ್-2000 ಯುದ್ಧ ವಿಮಾನವನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಉಗ್ರರನ್ನು ಭಾರತೀಯ ವಾಯುಪಡೆ ಭೇಟೆಯಾಡಿದೆ. ಇದನ್ನೂ ಓದಿ:ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಈ ಬಗ್ಗೆ ಇಡೀ ದೇಶವೇ ಹೆಮ್ಮೆಯಿಂದ ಸಂಭ್ರಮಿಸುತ್ತಿದೆ. ಅಲ್ಲದೆ ವಾಯುಪಡೆಯ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಭಾರತೀಯ ಸೇನೆ ಒಂದು ಕವಿತೆಯನ್ನು ವಾಯುಪಡೆಗೆ ಸಮರ್ಪಿಸುವ ಮೂಲಕ ಟ್ವೀಟ್ ಮಾಡಿ ಗೌರವ ಸಲ್ಲಿಸಿದೆ. ಎಡಿಜಿಪಿಐ ಇಂಡಿಯನ್ ಆರ್ಮಿ ಈ ಅದ್ಭುತ ಸರ್ಜಿಕಲ್ ಸ್ಟ್ರೈಕ್ 2.0ವನ್ನು ಮಹಾಭಾರತಕ್ಕೆ ಹೋಲಿಕೆ ಮಾಡಿದೆ. ಕವಿತೆಯಲ್ಲಿ ಭಾರತ ಹೇಡಿ ಅಲ್ಲ, ಸುಮ್ಮನೆ ಕೂರುವ ದೇಶವೂ ಅಲ್ಲ. ದುಷ್ಟ ಕೌರವರನ್ನು ಹೇಗೆ ಮಣ್ಣಾದರೋ ಅದೇ ರೀತಿ ಉಗ್ರರು ಮಣ್ಣಾಗುತ್ತಾರೆ ಎಂಬಂತೆ ಕವಿತೆ ರಚಿಸಿ ವಾಯುಪಡೆಯನ್ನು ಶ್ಲಾಘಿಸಿದೆ. #IndianArmy, #AlwaysReady ಎಂದು ಹ್ಯಾಷ್‍ಟ್ಯಾಗ್ ಹಾಕಿ ಈ ಕವಿತೆಯನ್ನು ಟ್ವೀಟ್ ಮಾಡಿದೆ. ಇದನ್ನೂ ಓದಿ:ಮಿರಾಜ್ ವಿಮಾನವನ್ನೇ ಬಳಸಿದ್ದು ಯಾಕೆ? ಅಂಥ ವಿಶೇಷತೆ ಅದರಲ್ಲಿ ಏನಿದೆ?

    ಪಾಕಿಸ್ತಾನದ ವಾಯುದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಭದ್ರತಾ ಸಮಿತಿ(ಸಿಸಿಎಸ್) ಸಭೆ ನಡೆದಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ನವದೆಹಲಿ: ಉಗ್ರರ ವಿರುದ್ಧ ಹೋರಾಡಬೇಕಾದರೆ ನಮಗೆ ಸಾಕ್ಷ್ಯ ನೀಡಿ. ಪ್ರಬಲ ಸಾಕ್ಷ್ಯವನ್ನು ಕೊಟ್ಟರೆ ನಾವು ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಎಂದಿದ್ದ ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ಸಮೇತ ಉತ್ತರವನ್ನು ನೀಡಿದೆ.

    ಹೌದು. ಇಲ್ಲಿಯವರೆಗೆ ಭಾರತ ಮಾತಿನ ಮೂಲಕ ಪ್ರತಿಕ್ರಿಯೆ ನೀಡುತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆಯನ್ನು ಕಳೆಯುವ ಪ್ರಯತ್ನವನ್ನು ನಡೆಸುತಿತ್ತು. ಉರಿ ಮತ್ತು ಪುಲ್ವಾಮಾ ದಾಳಿ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲಿದೆ ಎನ್ನುವುದನ್ನು ಮೊದಲೇ ಅರಿತ ಭಾರತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಾಯುದಾಳಿ ನಡೆಸಿ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.

    ಉಗ್ರರು ಒಳ ನುಸುಳುವ ಸಮಯದಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಆರಂಭಿಸುತ್ತದೆ. ಈ ವೇಳೆ ಭಾರತ ಸಹ ಪ್ರತಿದಾಳಿ ನಡೆಸುತ್ತದೆ. ಭಾರತ ಸೈನಿಕರ ಗಮನವನ್ನು ಸೆಳೆದು ಪಾಕಿಸ್ತಾನ ಉಗ್ರರು ಕಾಶ್ಮೀರ ಪ್ರವೇಶಿಸಲು ಸಹಾಯ ಮಾಡುತ್ತಿರುತ್ತದೆ. ಈ ವಿಚಾರ ಭಾರತಕ್ಕೆ ಗೊತ್ತಿದ್ದರೂ ದಾಳಿ ನಡೆಸಲು ಧೈರ್ಯ ತೋರಿರಲಿಲ್ಲ. ಆದರೆ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ಬಳಿಕ ಭಾರತೀಯರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾವ ರೀತಿ ದಾಳಿ ನಡೆಸಿ ಉಗ್ರರನ್ನು ಹೆಡೆಮುರಿ ಕಟ್ಟಿ ಹಾಕುತ್ತಿರಿ ಎಂದು ಜನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಕ್ರೋಶ ಕಟ್ಟೆ ಒಡೆಯುತ್ತಿದ್ದಂತೆ ಸರ್ಕಾರ ಉಗ್ರರನ್ನು ಹೀಗೆಯೇ ಬಿಟ್ಟರೆ ಆಗುವುದಿಲ್ಲ ಎಂದು ಅರಿತ ಗಡಿಯನ್ನು ದಾಟಿ ದಾಳಿ ನಡೆಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಇಂದು ಮುಹೂರ್ತ ಫಿಕ್ಸ್ ಮಾಡಿತ್ತು. ಈ ಪ್ಲಾನ್ ಯಶಸ್ವಿಯಾಗಿದ್ದು ಭಾರತ ತನ್ನ ಗಡಿಯನ್ನು ದಾಟಿ ದಾಳಿ ನಡೆಸಲು ತಯಾರಾಗುತ್ತಿದ್ದ ಉಗ್ರರನ್ನು ಅವರ ನೆಲದಲ್ಲೇ ಹತ್ಯೆ ಮಾಡಿ ತನ್ನ ಪರಾಕ್ರಮವನ್ನು ತೋರಿಸಿದೆ.

    ಕಾರಣ 1:
    ಬಾಲ್‍ಕೋಟ್ ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ದೊಡ್ಡ ತರಬೇತಿ ಶಿಬಿರವನ್ನು ವಾಯುಸೇನೆ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿದೆ. ಈ ಹಿಂದೆ ಉರಿ ಸೇನಾ ನೆಲೆಯ ಮೆಲೆ ದಾಳಿ ನಡೆದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ಹೆಲಿಕಾಪ್ಟರ್ ಸಹಾಯದಿಂದ ನುಗ್ಗಿ ಭೂ ಸೇನೆಯ ಸೈನಿಕರು ಉಗ್ರರನ್ನು ಸಂಹಾರ ಮಾಡಿದ್ದರು. ಆದರೆ ಮೊದಲ ಬಾರಿಗೆ ವಾಯುಸೇನೆ ಬಾಂಬ್ ಬಳಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮೌಲಾನಾ ಯೂಸುಫ್ ಅಝರ್ (ಅಲಿಯಾಸ್ ಉಸ್ತಾದ್ ಘೌರಿ), ಜೆಇಎಂ ಮುಖ್ಯಸ್ಥ ಮಸೂದ್ ಅಝರ್‍ನ ಸೋದರ ಸಂಬಂಧಿ ನಡೆಸುತ್ತಿದ್ದ ಬಾಲಕೋಟ್ ಅಡಗುದಾಣದ ಮೇಲೆಯೇ ದಾಳಿ ನಡೆದಿದೆ. ಮೂರು ದಾಳಿಯಲ್ಲಿ ಭಯೋತ್ಪಾದಕರು, ತರಬೇತುದಾರರು ಮತ್ತು ಹಿರಿಯ ಕಮಾಂಡರ್‍ಗಳು ಸೇರಿ ಒಟ್ಟು 350ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಭಾರತ ಪಾಕಿಸ್ತಾನ ಸೇರಿದಂತೆ ವಿಶ್ವಕ್ಕೆ ತನ್ನ ವಾಯುಸೇನೆಯ ಶಕ್ತಿಯನ್ನು ತೋರಿಸಿದೆ.

    ಕಾರಣ 2 :
    ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ದಾಳಿ ಭಾರತೀಯ ವಾಯುಸೇನೆ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದೆ. 1971 ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲೂ ವಾಯುಸೇನೆಯ ವಿಮಾನ ಬಳಸಿ ದಾಳಿ ಮಾಡಲಾಗಿತ್ತು. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಸೂಚನೆ ಬಂದಿತ್ತು. ಆದರೆ ಈ ಬಾರಿ ಸೇನೆಗೆ ಸರ್ಕಾರ ಸಂಪೂರ್ಣ ಅನುಮತಿ ನೀಡಿತ್ತು. ಪುಲ್ವಾಮಾ ದಾಳಿ ಬಳಿಕ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ನೆಲದ ಮೇಲೆ ಬಂದು ದಾಳಿ ಮಾಡಿದೆ ಎನ್ನುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ.

    ಕಾರಣ 3 :
    ಭಾರತ ಹೇಗೆ ಬಜೆಟ್ ನಲ್ಲಿ ಮಿಲಿಟರಿ ಶಕ್ತಿ ಹೆಚ್ಚಿನ ಹಣವನ್ನು ಮೀಸಲಿಡುತ್ತದೋ ಅದೇ ರೀತಿಯಾಗಿ ಪಾಕಿಸ್ತಾನ ಸಹ ಬಜೆಟ್‍ನಲ್ಲಿ ಹಣವನ್ನು ಮೀಸಲಿಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಪಾಕಿಸ್ತಾನ ಖರೀದಿಸಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಪ್ರತಿದಾಳಿ ನಡೆಸಲಿದೆ ಎನ್ನುವುದನ್ನು ಅರಿತ ಪಾಕಿಸ್ತಾನ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಈ ನಡುವೆ ಮೋದಿ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದಿನ ಎಲ್ಲ ಬಾಕಿಗಳನ್ನು ತೀರಿಸಿಯೇ ತೀರಿಸುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಪಾಕಿಸ್ತಾನ ತನ್ನ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಇಷ್ಟೆಲ್ಲ ಅಲರ್ಟ್ ಘೋಷಿಸಿದರೂ ಭಾರತ ಮಂಗಳವಾರ ಬೆಳಗ್ಗೆ ಪಾಕ್ ಸೈನಿಕರ ಕಣ್ಣು ತಪ್ಪಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರಪಂಚವೇ ನಿಬ್ಬೆರಾಗುವಂತೆ ಮಾಡಿ ತನ್ನ ಶಕ್ತಿಯನ್ನು ತೋರಿಸಿದೆ.

    ಭಾರತದಿಂದ ಪ್ರತೀಕಾರದ ಮಾತು ಬರುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಾವು ಯಾವುದೇ ದಾಳಿ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಕಳೆದ ಶುಕ್ರವಾರ ಪಾಕಿಸ್ತಾನದ ಸೇನೆಯ ವಕ್ತಾರ ಮೇಜರ್ ಜನರಲ್ ಗಫೂರ್ ಮಾತನಾಡಿ, ಪಾಕಿಸ್ತಾನದ ಸೇನಾ ಪಡೆಗಳು ನಿಮ್ಮಿಂದ ಎಂದಿಗೂ ಆಶ್ಚರ್ಯಪಡುವುದಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇವೆ. ನಾವು ನಿಮ್ಮನ್ನು ಅಚ್ಚರಿಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಗೆ ಭಾರತ ತಲೆ ಕೆಡಿಸಿಕೊಳ್ಳದೇ ಪ್ಲಾನ್ ಮಾಡಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.

    ಕಾರಣ 4 :
    ಭಾರತದ ಮೇಲೆ ನೇರವಾಗಿ ಯುದ್ಧ ಮಾಡಿದರೆ ನಮಗೆ ಸೋಲು ಖಚಿತ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿದೆ. ಹೀಗಾಗಿ ಅದು ಉಗ್ರರನ್ನು ಛೂ ಬಿಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ. ಉರಿ ದಾಳಿ ಬಳಿಕವೇ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉತ್ತರ ನೀಡಿ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿತ್ತು. ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತೊಂದು ದಾಳಿ ನಡೆಸಬಹುದು ಎಂದು ಪಾಕಿಸ್ತಾನ ತನ್ನ ಗಡಿಯಲ್ಲಿದ್ದ ಉಗ್ರರ ಕೇಂದ್ರಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿತ್ತು. ಪಾಕ್ ಈ ಉಗ್ರರನ್ನು ಕಾಪಾಡುತ್ತಿದ್ದರೂ ಭಾರತ ಈಗ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇಲ್ಲಿಯವರೆಗೆ ಉಗ್ರರ ವಿಚಾರದಲ್ಲಿ ನಾವು ಕಟು ಮಾತಿನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದರೆ ಈಗ ನಮ್ಮಲ್ಲಿರುವ ರಕ್ಷಣಾ ಪಡೆಗಳ ಮೂಲಕ ಪ್ರತಿ ಉತ್ತರ ನೀಡುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಮ್ಮ ಆಟಗಾರರು ಅತ್ಯುತ್ತಮವಾಗಿ ಆಡಿದ್ದಾರೆ: ಸೆಹ್ವಾಗ್

    ನಮ್ಮ ಆಟಗಾರರು ಅತ್ಯುತ್ತಮವಾಗಿ ಆಡಿದ್ದಾರೆ: ಸೆಹ್ವಾಗ್

    ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರ ನೀಡಲು ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ವಾಯುಪಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಮಾಡಿದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ನಡೆದ ಮೇಲಾದರೂ ತಪ್ಪನ್ನು ತದ್ದಿಕೊಂಡು ಸುಧಾರಿಸಿಕೊಳ್ಳಿ ಇಲ್ಲವಾದರೆ ಹೇಗೆ ನಿಮ್ಮನ್ನು ಸುಧಾರಿಸಬೇಕು ಅಂತ ನಮಗೆ ಗೊತ್ತು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಇಂದು ಮುಂಜಾನೆ ಭಾರತೀಯ ವಾಯುಪಡೆಯ 12 ಮಿರಾಜ್-2000 ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರು ಮಣ್ಣಾಗಿದ್ದಾರೆ. ಪುಲ್ವಾಮ ಕೃತ್ಯಕ್ಕೆ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆಯನ್ನು ದೇಶದೆಲ್ಲೆಡೆ ಹಾಡಿ ಹೊಗಳುತ್ತಿದ್ದಾರೆ. ಹಾಗೆಯೇ ಈ ಬಗ್ಗೆ ವಾಯುಪಡೆಯ ಸಾಹಸವನ್ನು ಶ್ಲಾಘಿಸಿ ವೀರೇಂದ್ರ ಸೆಹ್ವಾಗ್ ತಮ್ಮದೇ ಕ್ರಿಕೆಟ್ ಶೈಲಿಯಲ್ಲಿ ಟ್ವೀಟ್ ಮಾಡಿ ಭಾರತೀಯ ಸೇನೆಗೆ ಅಭಿನಂದನೆ ತಿಳಿಸಿದ್ದಾರೆ. ಇದನ್ನೂ ಓದಿ:ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ನಮ್ಮ ಹುಡುಗರು ನಿಜಕ್ಕೂ ಉತ್ತಮ ಆಟ ಆಡಿದ್ದಾರೆ ಎಂದು ಬರೆದು, ಸುಧಾರಿಸಿಕೊಳ್ಳಿ ಇಲ್ಲವೇ ನಾವು ಸುಧಾರಿಸುತ್ತೇವೆ ಎಂದು ಹ್ಯಾಶ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಈ ಸರ್ಜಿಕಲ್ ಸ್ಟ್ರೈಕ್ 2.0 ಬಗ್ಗೆ ಟೀಂ ಇಂಡಿಯಾದ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಕೂಡ ಜೈ ಹಿಂದ್ ಐಎಎಫ್ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಭಾರತೀಯ ಸೇನೆಯ ಈ ಪ್ರತ್ಯುತ್ತರ ದಾಳಿಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದ್ದು, ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv