Tag: Surgical strike 2.0

  • ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗಲ್ಲ: ಶಾಸಕ ಸುರೇಶ್ ಕುಮಾರ್

    ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗಲ್ಲ: ಶಾಸಕ ಸುರೇಶ್ ಕುಮಾರ್

    ದಾವಣಗೆರೆ: ತೋಟಗಾರಿಕಾ ಸಚಿವ ಮನಗೋಳಿ ಸೈನಿಕರ ಬಗ್ಗೆ ಬಾಲಿಷ ಹೇಳಿಕೆ ನೀಡಿರುವುದು ಅವರ ಮರೆಗುಳಿತನಕ್ಕೆ ಸಾಕ್ಷಿ. ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗೋದಿಲ್ಲ ಎಂದು ಶಾಸಕ ಸುರೇಶ್ ಕುಮಾರ್ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಗ್ರರನ್ನು ಕೊಲ್ಲಬಾರದು ಎಂಬ ಮನಗೋಳಿ ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಮನಗೋಳಿಯವರಿಗೆ ದೇಶದ ಸಾಮಾನ್ಯ ವ್ಯಕ್ತಿಗಳ ಭಾವನೆ, ಆಕ್ರೋಶ ಹಾಗೂ ನೋವು ಕಾಣಿಸುತ್ತಿಲ್ಲ. ಆದ್ದರಿಂದ ಈ ರೀತಿಯಾಗಿ ಹೇಳಿದ್ದಾರೆ. ಭಯೋತ್ಪಾದನೆಯನ್ನ ಬೇರು ಸಮೇತ ಕಿತ್ತು ಹಾಕಬೇಕು. ಇನ್‍ಸ್ಟಾಲ್‍ಮೆಂಟ್‍ನಲ್ಲಿ ಭಯೋತ್ಪಾದನೆ ನಿಗ್ರಹ ಮಾಡೋದಕ್ಕೆ ಆಗೋದಿಲ್ಲ ಎಂದು ಮನಗೋಳಿ ಅವರಿಗೆ ತೀರುಗೇಟು ನೀಡಿದ್ದಾರೆ.

    ವೀರಯೋಧ ಅಭಿನಂದನ್‍ಗೆ ಇಡೀ ದೇಶವೇ ಸೆಲ್ಯೂಟ್ ಹೊಡೆಯಬೇಕು. ಜಿನೀವಾ ಒಪ್ಪಂದಕ್ಕೆ ಪಾಕಿಸ್ತಾನವು ಸಹಿ ಹಾಕಿದೆ. ಅಭಿನಂದನ್ ಅವರಿಗೆ ಯಾವುದೇ ತೊಂದರೆ ನೀಡದೆ ವಾಪಸ್ ಕಳುಹಿಸುವ ಜವಾಬ್ದಾರಿ ಪಾಕಿಸ್ತಾನಕ್ಕಿದೆ. ಅಭಿನಂದನ್ ಆದಷ್ಟು ಬೇಗ ಭಾರತಕ್ಕೆ ವಾಪಸ್ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಏರ್ ಸ್ಟ್ರೈಕ್ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಯಡಿಯೂರಪ್ಪ ಯಾವ ಪದ ಬಳಸಿದ್ದಾರೆ ಗೊತ್ತಿಲ್ಲ. ಯಾರೂ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಚುನಾವಣೆ ಸಿದ್ಧತೆ ಬೂತ್ ಮಟ್ಟದಿಂದ ಕಳೆದ ಎರಡು ಮೂರು ತಿಂಗಳಿಂದ ಆಗುತ್ತಿದೆ. ಮಾರ್ಚ್ 2ರಂದು ಇಡೀ ರಾಜ್ಯಾದ್ಯಂತ ಒಂದೇ ದಿನ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ. 28 ಸ್ಥಾನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀ ಆಯ್ತು, ಟೊಮೆಟೊ ಆಯ್ತು ಈಗ ಪಾನ್ ಸರದಿ- ಪಾಕ್ ಜೊತೆ ವ್ಯವಹಾರ ಕೈಬಿಡಲು ನಿರ್ಧಾರ

    ಟೀ ಆಯ್ತು, ಟೊಮೆಟೊ ಆಯ್ತು ಈಗ ಪಾನ್ ಸರದಿ- ಪಾಕ್ ಜೊತೆ ವ್ಯವಹಾರ ಕೈಬಿಡಲು ನಿರ್ಧಾರ

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರವನ್ನು ಮಂಗಳವಾರ ವಾಯುಪಡೆ ಏರ್ ಸ್ಟ್ರೈಕ್ ಮಾಡಿವ ಮೂಲಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ತೀರಿಸಿಕೊಂಡಿತ್ತು. ಒಂದೆಡೆ ಐಎಎಫ್ ಸರ್ಜಿಕಲ್ ದಾಳಿ ನಡೆಸಿದರೆ ಇನ್ನೊಂದೆಡೆ ಭಾರತೀಯ ರೈತರು ಹಾಗೂ ವ್ಯಾಪಾರಿಗಳು ಪಾಕ್ ಜೊತೆ ಯಾವುದೇ ವ್ಯವಹಾರ ಸಂಬಂಧ ಬೇಡ, ಪಾಕಿಸ್ತಾನಕ್ಕೆ ನಾವು ಬೆಳೆದ ಬೆಳೆಗಳನ್ನು ರಫ್ತು ಮಾಡಲ್ಲ ಅಂತ ಪಟ್ಟು ಹಿಡಿದಿದ್ದಾರೆ.

    ಪತ್ರಿಕೆಯೊಂದರ ವರದಿ ಪ್ರಕಾರ ಮಧ್ಯಪ್ರದೇಶದ ವೀಳ್ಯದೆಲೆ ಬೆಳೆಗಾರರು ಪಾಕಿಸ್ತಾನದ ಜತೆಗಿನ ವ್ಯಾಪಾರವನ್ನು ಕೈಬಿಡಲು ನಿರ್ಧರಿಸಿದ್ದಾರೆ. ಈ ಹಿಂದೆ ಮಧ್ಯ ಪ್ರದೇಶದ ಟೀ ವ್ಯಾಪಾರಿಗಳು ಮತ್ತು ಟೊಮೆಟೊ ಬೆಳೆಗಾರರು ಪಾಕಿಸ್ತಾನದೊಂದಿಗೆ ತಮ್ಮ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ ಬಳಿಕ ವೀಳ್ಯದೆಲೆ ವ್ಯಾಪಾರಿಗಳು ಕೂಡ ವ್ಯವಹಾರ ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ.

    ಮಧ್ಯಪ್ರದೇಶದ ಛತ್ತಾರ್‍ಪುರ ಜಿಲ್ಲೆಯ ಮಹಾರಾಜ್‍ಪುರ, ಗರ್ಹಿಮಾಲಹ್ರಾ, ಪಿಪಟ್ ಮತ್ತು ಪನಾಗರ್ ಪ್ರದೇಶಗಳು ವೀಳ್ಯದೆಲೆ ಬೆಳೆಗೆ ಹೆಸರುವಾಸಿ. ಇಲ್ಲಿನ ಮಹೊಬಾ ಪಾನ್‍ಗೆ(ವೀಳ್ಯದೆಲೆ) ಪಾಕಿಸ್ತಾನದಲ್ಲಿ ಭಾರೀ ಬೇಡಿಕೆ ಇದ್ದು, ಮೀರತ್ ಮತ್ತು ಶಹರಾನ್‍ಪುರ ಮೂಲಕ ಪಾನ್‍ಗಳನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲಾಗುತ್ತಿತ್ತು. ಆದ್ರೆ ವೀಳ್ಯದೆಲೆ ರಫ್ತು ಸ್ಥಗಿತಗೊಳಿಸುವುದರಿಂದ ವ್ಯಾಪಾರಿಗಳಿಗೆ ಸುಮಾರು 13-15 ಲಕ್ಷ ನಷ್ಟವಾಗುತ್ತದೆ. ಆದರೆ ಈ ನಷ್ಟದ ಬಗ್ಗೆ ನಮಗೆ ಚಿಂತೆ ಇಲ್ಲ. ಕೇಂದ್ರ ಸರಕಾರ ಪಾಕಿಸ್ತಾನಕ್ಕೆ ನೀರು ಹರಿಸುವುದಿಲ್ಲ ಎಂದು ನಿರ್ಧರಿಸಿರುವಾಗ ನಾವ್ಯಾಕೆ ವೀಳ್ಯದೆಲೆ ರಫ್ತು ಮಾಡುವುದನ್ನು ನಿಲ್ಲಿಸಬಾರದು ಎಂದು ಪಾನ್ ಬೆಳೆಗಾರರು ಹೇಳಿದ್ದಾರೆ.

    ಭಾರತದಿಂದ ಪಾಕಿಸ್ತಾನಕ್ಕೆ ಚಹಾ, ಟೊಮೆಟೊ ಹಾಗೂ ಹಲವು ತರಕಾರಿಗಳನ್ನು ರಫ್ತು ಮಾಡುವುದಿಲ್ಲ. ವ್ಯಾಪಾರಕ್ಕಿಂತ ದೇಶ ಮುಖ್ಯ ಎಂದು ಪುಲ್ವಾಮಾ ದಾಳಿ ನಡೆದ ಬಳಿಕ ಭಾರತೀಯ ರೈತರು, ವ್ಯಾಪಾರಿಗಳು ಹಾಗೂ ರಫ್ತುದಾರರು ಪಾಕ್ ಜೊತೆ ಇದ್ದ ವ್ಯವಹಾರವನ್ನು ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದ್ದರು. ಇದೇ ಬೆನ್ನಲ್ಲೇ ಸದ್ಯ ಪಾನ್(ವೀಳ್ಯದೆಲೆ) ವ್ಯಾಪಾರಿಗಳು ಕೂಡ ಪಾಕಿಸ್ತಾನದ ಜೊತೆ ವ್ಯವಹಾರ ನಡೆಸಲ್ಲ ಅಂತ ಪಟ್ಟು ಹಿಡಿದಿದ್ದಾರೆ. ನಮ್ಮ ಆಹಾರವನ್ನೇ ತಿಂದು, ನಮ್ಮ ಮೇಲೆಯೇ ದಾಳಿ ಮಾಡ್ತಾರೆ ಅಂತ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿದ ತನುಶ್ರೀ ಪಿತ್ರೋಡಿ!

    ಉಡುಪಿ: ಉಗ್ರರ ಪುಲ್ವಾಮಾ ದಾಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು, ಭಾರತದಾದ್ಯಂತ ಜನ ವಿಜಯೋತ್ಸವ ಆಚರಿಸುತ್ತಿರುವ ಬೆನ್ನಲ್ಲೇ ಉಡುಪಿಯ ತನುಶ್ರೀ ಪಿತ್ರೋಡಿ ತನ್ನ ಮೂರು ವಿಶ್ವದಾಖಲೆಗಳನ್ನು ಯೋಧರಿಗೆ ಸಮರ್ಪಿಸಿ ದೇಶಭಕ್ತಿ ಮೆರೆದಿದ್ದಾಳೆ.

    ಒಂದು ನಿಮಿಷದಲ್ಲಿ ಅತಿ ಹೆಚ್ಚು ನಿರಾಲಂಬ ಪೂರ್ಣ ಚಕ್ರಾಸನ ಮತ್ತು ಧನುರಾಸನ ಮಾಡಿದ್ದಕ್ಕೆ ತನುಶ್ರೀ ಪಿತ್ರೋಡಿ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಹಾಗೂ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿತ್ತು. ಇದೀಗ ಆ ಮೂರೂ ದಾಖಲೆಗಳನ್ನು ಭಾರತದ ವೀರ ಯೋಧರಿಗೆ ಈ ಪುಟ್ಟ ಬಾಲಕಿ ಸಮರ್ಪಣೆ ಮಾಡಿದ್ದಾಳೆ. ದೇಶದಲ್ಲಿ ಯೋಧರು ಮಾಡುವ ಕೆಲಸಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದೂ ಇಲ್ಲ ಅಂತ ತನುಶ್ರೀ ಹೇಳಿದ್ದಾಳೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತನುಶ್ರೀ, 13 ದಿನದ ಹಿಂದೆ ಉಗ್ರಗಾಮಿಗಳು ನಮ್ಮ ಸೈನಿಕರನ್ನು ಕೊಂದಿದ್ದರು. ಅದನ್ನು ಟಿವಿಯಲ್ಲಿ ನೋಡಿ ಕಣ್ಣೀರು ಬಂತು. ನಾನು ಒಂದು ವರ್ಷದ ಹಿಂದೆ ಮಾಡಿದ ದಾಖಲೆ ಮತ್ತು ವಾರದ ಹಿಂದೆ ಮಾಡಿರುವ ಮತ್ತೆರಡು ದಾಖಲೆಗಳನ್ನು ಯೋಧರಿಗೆ ಸಮರ್ಪಿಸುತ್ತೇನೆ ಎಂದು ತಿಳಿಸಿದ್ದಾಳೆ.

    ಪಾಕಿಸ್ತಾನದ ಉಗ್ರರು ಭಾರತದಲ್ಲಿ ದಾಳಿ ಮಾಡಿ 40 ಸೈನಿಕರನ್ನು ಹತ್ಯೆ ಮಾಡಿದ ಫೋಟೋಗಳನ್ನು ನೋಡಿ ಬಹಳ ಬೇಸರವಾಗಿದೆ. ಈಗ ನಮ್ಮ ದೇಶದ ಸೈನಿಕರು ಪಾಕಿಸ್ತಾನದವರನ್ನು ದಾಳಿ ಮಾಡಿ ಕೊಂದಿದ್ದಾರೆ. ನನ್ನ ಎಲ್ಲಾ ಪ್ರಶಸ್ತಿಯ ಗೌರವ ನಮ್ಮ ದೇಶದ ಸೈನಿಕರಿಗೆ ಸಲ್ಲಬೇಕು. ಇದು ನನ್ನ ಆಸೆಯೂ ಹೌದು, ನಮ್ಮ ತಂದೆ ತಾಯಿಯ ಆಸೆಯೂ ಹೌದು. ನಾವು ಮನೆಯಲ್ಲಿ ಆರಾಮವಾಗಿ ಇರುತ್ತೇವೆ. ಸೈನಿಕರು ಮನೆ ಬಿಟ್ಟು- ಸಂಬಂಧದವರನ್ನು ಬಿಟ್ಟು ದೇಶ ರಕ್ಷಣೆ ಮಾಡುತ್ತಾರೆ. ಪ್ರಶಸ್ತಿಯನ್ನು ಸೈನಿಕರಿಗೆ ಅರ್ಪಣೆಮಾಡಿದ್ದು ಶಾಲೆಯ ಶಿಕ್ಷಕರಿಗೂ ಖುಷಿಯಾಗಿದೆ ಎಂದು ತನುಶ್ರೀ ಸಂತೋಷಪಟ್ಟಳು.

    ತನುಶ್ರೀ ಪಿತ್ರೋಡಿ ಪೋಷಕರು ಮಾತನಾಡಿ, ದೇಶಾಭಿಮಾನ ಮಕ್ಕಳಲ್ಲಿ ತುಂಬುವುದು ಎಲ್ಲಾ ತಂದೆ ತಾಯಿಗಳ ಕರ್ತವ್ಯ. ದೇಶಕ್ಕೆ, ಸೈನಿಕರಿಗೆ ನಮ್ಮಿಂದ ಏನೂ ಕೊಡಲು ಸಾಧ್ಯವಿಲ್ಲ. ಬಿಸಿಲು ಮಳೆ ಚಳಿಯನ್ನು ಲೆಕ್ಕಿಸದೇ ದೇಶವನ್ನು ಹಗಲಿರುಳು ಅವರು ಕಾಯುತ್ತಾರೆ. ಈ ಪ್ರಶಸ್ತಿಯನ್ನು ಯೋಧರಿಗೆ ಅರ್ಪಿಸುವುದರಿಂದ ಅವರ ಮನಸ್ಸಿಗೆ ಖುಷಿಯಾದರೆ, ಅವರ ಮುಖದಲ್ಲಿ ಒಂದು ನಗು ಮೂಡಿದರೆ ಅಷ್ಟೇ ಸಾಕು. ಮಗಳು ವಿಶ್ವದಾಖಲೆ ಯೋಧರಿಗೆ ಅರ್ಪಿಸಿದ್ದು ಬಹಳ ಖುಷಿಯಾಗಿದೆ. ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಸಂಹಾರ ಮಾಡಿದ್ದು ಮನಸ್ಸಿಗೆ ನೆಮ್ಮದಿ ತಂದಿದೆ. 40 ಯೋಧರ ಆತ್ಮಕ್ಕೆ ಶಾಂತಿ ಸಿಕ್ಕರೆ ಅಷ್ಟೇ ಸಾಕು. ಭಾರತೀಯ ಸೇನೆಗೆ ನಮ್ಮದೊಂದು ಸೆಲ್ಯೂಟ್ ಎಂದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಇಡೀ ಕುಟುಂಬ ಶ್ರದ್ಧಾಂಜಲಿ ಸಲ್ಲಿಸಿ, ವಾಯುಸೇನೆಯ ದಾಳಿಗೆ ಅಭಿನಂದನೆ ಸಲ್ಲಿಸಿದೆ.

    https://www.youtube.com/watch?v=zduxBSmQEHo

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ಹನುಮಂತ ಲಂಕೆಯನ್ನು ಸುಟ್ಟಂತೆ ವಾಯುಪಡೆ ಉಗ್ರರನ್ನು ಮಟ್ಟ ಹಾಕಿದೆ: ಸ್ಪೀಕರ್ ಮೆಚ್ಚುಗೆ

    ನವದೆಹಲಿ: ಲಂಕೆಯನ್ನು ಸುಟ್ಟು ಹನುಮಂತ ಬಂದಂತೆ ಭಾರತೀಯ ವಾಯುಪಡೆ ಪಾಕಿಸ್ತಾನ ಉಗ್ರರ ಕ್ಯಾಂಪ್‍ಗಳನ್ನು ಸುಟ್ಟು ನೆಲಸಮ ಮಾಡಿದೆ ಎಂದು ಲೋಕಸಭೆಯ ಸ್ಪೀಕರ್ ಸುಮಿತ್ರಾ ಮಹಾಜನ್ ಏರ್‌ಸ್ಟ್ರೈಕ್‌ ಶೌರ್ಯವನ್ನು ಹೊಗಳಿದ್ದಾರೆ.

    ಭಾರತೀಯ ವಾಯುಪಡೆಗೆ ಇಂತಹ ಅದ್ಭುತ ಏರ್‌ಸ್ಟ್ರೈಕ್‌ ನಡೆಸಲು ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೂ ಧನ್ಯವಾದಗಳು. ಈ ಮೂಲಕ ಪಾಕಿಸ್ತಾನ ಮತ್ತೆ ಭಾರತದತ್ತ ತನ್ನ ಕೆಟ್ಟ ದೃಷ್ಟಿ ಹಾಕಲು ಹೆದರುವಂತೆ ವಾಯುಸೇನೆ ಮಾಡಿದೆ ಎಂದು ಶ್ಲಾಘಿಸಿದ್ದಾರೆ.

    ಪವನ ಪುತ್ರ ಹನುಮಂತ ಲಂಕೆಯನ್ನು ಧ್ವಂಸ ಮಾಡಿ ವಾಪಸ್ ಆದಂತೆ ವಾಯುಪಡೆ ಉಗ್ರರನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ದೇಶಕ್ಕೆ ಮರಳಿದೆ. ಒಂದೇ ಒಂದು ಸಣ್ಣ ಗಾಯವಾದಂತೆ ಚಾಣಾಕ್ಯತನದಿಂದ ಕೆಲಸ ಮುಗಿಸಿ ವಾಯುಪಡೆ ವಾಪಸ್ ಬಂದಿದೆ. ಈ ಮೂಲಕ ಪ್ರಜೆಗಳಲ್ಲಿ ದೇಶದಲ್ಲಿ ಭಯೋತ್ಪದನೆ ನೆಲಸಮವಾಗುತ್ತದೆ ಎಂಬ ನಂಬಿಕೆ ಮೂಡುತ್ತಿದೆ. ಇಷ್ಟೆಲ್ಲ ನಡೆದರೂ, ನೂರಾರು ಉಗ್ರರು ಮಣ್ಣಾದರೂ ಪಾಕ್ ಸೇನೆಗೆ ಮಾತ್ರ ಕಿಂಚಿತ್ತು ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದು ಭಾರತೀಯ ಸೇನೆಯ ಶಕ್ತಿ ಎಂದು ಸುಮಿತ್ರಾ ಮಹಾಜನ್ ಹೆಮ್ಮೆಯಿಂದ ವಾಯುಪಡೆಯ ಏರ್‌ಸ್ಟ್ರೈಕ್‌ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    -ಭದ್ರತಾ ಸಲಹೆಗಾರ ಧೋವಲ್‍ಗೆ ಧನೋವಾ ಸಲಹೆ..!?

    ನವದೆಹಲಿ: ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್ ವಾಯುಸೇನೆಯ ಮುಖ್ಯಸ್ಥರಾದ ಬೀರೇಂದ್ರ ಸಿಂಗ್ ಧನೋವಾ. ಕಾರ್ಗಿಲ್ ಯುದ್ಧದ ವೇಳೆ ಕತ್ತಲಿನಲ್ಲಿ ಆಪರೇಷನ್ ನಡೆಸಿದ್ದ ಧನೋವಾ ಅವರೇ ಏರ್ ಸ್ಟ್ರೈಕ್‍ಗೆ ಸೂಚಿಸಿದ್ದರಂತೆ.

    ಬೀರೇಂದ್ರ ಸಿಂಗ್ ಧನೋವಾ ಇಂಡಿಯನ್ ಏರ್ ಫೋರ್ಸ್ ನ ಮುಖ್ಯಸ್ಥರು. ಸೆಪ್ಟೆಂಬರ್ 7, 1957ರಲ್ಲಿ ಜನಿಸಿದ ಧನೋವಾ ಅವರು ಸೇನಾಪಡೆಯಲ್ಲಿ 37 ವರ್ಷಗಳಿಂದ ಅವಿರತ ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಬಾಲ್‍ಕೋಟ್‍ನಲ್ಲಿ 350 ಉಗ್ರರ ಚೆಂಡಾಡಿದ ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್. ಅಲ್ಲದೆ, ಈ ಸಂಪೂರ್ಣ ಆಪರೇಷನ್ ನಿರ್ವಹಿಸಿದವರು.

    ಪಾಕಿಸ್ತಾನ ಪ್ರಾಯೋಜಿತ ಜೈಶ್ ಉಗ್ರರು, ಪುಲ್ವಾಮಾದ ಆವಂತಿಪೋರ್ ನಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ 3.15ರ ವೇಳೆಗೆ ನಡೆದ ಆತ್ಮಾಹುತಿ ದಾಳಿಗೆ 40 ಯೋಧರ ಹುತಾತ್ಮರಾಗಿದ್ದರು. ಘಟನೆ ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಪಾಕ್ ಉಗ್ರರ ಹುಟ್ಟಡಗಿಸಲು ಏರ್ ಸ್ಟ್ರೈಕ್ ಒಳ್ಳೆಯ ಆಯ್ಕೆ ಅಂತ ಧನೋಆ ಸಲಹೆ ನೀಡಿದ್ದರು ಅಂತ ತಿಳಿದು ಬಂದಿದೆ.

    ಧನೋವಾ ಅವರು 1999ರ ಕಾರ್ಗಿಲ್ ಯುದ್ಧದ ವೇಳೆ ಫೈಟರ್ ಸ್ಕ್ವಾಡ್ರನ್ ಮತ್ತು ಅಂದಿನ ಏರ್ ಫೋರ್ಸ್ ಮುಖ್ಯಸ್ಥರಾಗಿದ್ದ ಎ.ವೈ ಟಿಪ್ನಿಸ್ ಅವರಿಗೆ ಸಾಥ್ ನೀಡಿದ್ದರು. ಐಎಎಫ್ ಪೈಲಟ್‍ಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ಅಂದಿನ ಮಾರ್ಷಲ್ ಟಿಫ್ನಿಸ್ ಅವರೇ ಖುದ್ದಾಗಿ ಪೈಲಟ್‍ಗಳ ಜೊತೆಗೆ ತೆರಳಿದ್ದರು. ಆದರೆ ಟಿಪ್ನಿಸ್ ಹಾಗೂ ಪೈಲಟ್‍ಗಳ ಪ್ರಾಣ ಕಾಪಾಡಲು ಧನೋವಾ ಅವರು ರಾತ್ರಿ ವೇಳೆ ಅತ್ಯಂತ ಎತ್ತರದದಿಂದಲೇ ದಾಳಿ ಮಾಡೋಣ ಅಂತ ಐಡಿಯಾ ಕೊಟ್ಟಿದ್ದರು. ಇದರಲ್ಲಿ ಯಶಸ್ವಿ ಸಹ ಆಗಿದ್ದರು.

    1978ರಲ್ಲಿ ವಾಯು ಸೇನೆ ಸೇರಿದ್ದ ಧನೋವಾ, ಎಚ್‍ಜೆಟಿ-16 ಕಿರಣ್, ಸೆಪೆಕ್ಯಾಟ್, ಜಾಗ್ವಾರ್, ಮಿಗ್-29 ಹಾಗೂ ಸುಖೋಯ್-30 ಎಂಕೆಐ ಫೈಟರ್ ಜೆಟ್‍ಗಳನ್ನು ಹಾರಿಸಿದ್ದಾರೆ. ಈ ಮೂಲಕ ಪರಿಣತ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷಗಳ ಸೇವೆಯಲ್ಲಿ ಹಲವಾರು ಅತ್ಯುನ್ನತ ಪ್ರಶಸ್ತಿ, ಪದಕಗಳನ್ನು ಧನೋವಾ ಪಡೆದಿದ್ದಾರೆ.

    https://www.youtube.com/watch?v=LuNOYN08Gu0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    – ಯುದ್ಧ ಸಾಮಾಗ್ರಿಗಳ ಮೌಲ್ಯ ಹೀಗಿದೆ

    ನವದೆಹಲಿ: ಭಾರತೀಯ ವಾಯುಸೇನೆ ಜೆಇಎಂ ಉಗ್ರಸಂಘಟನೆಗಳ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಸರ್ವನಾಶ ಮಾಡಿದೆ. ಫೆ.26ರಂದು ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಮಿಂಚಿನ ವೇಗದಲ್ಲಿ ವೈಮಾನಿಕ ದಾಳಿ ನಡೆಸಿ ಸೇಫಾಗಿ ತವರಿಗೆ ಬಂದು ನೆಲೆಸಿದೆ. ಬಾಲಾಕೋಟ್‍ನಲ್ಲಿರುವ ಉಗ್ರರ ತಾಣ ನಾಶ ಮಾಡಲು 2,568 ಕೋಟಿ ರೂ.ಮೌಲ್ಯದ ವಾಯುಪಡೆಯ ಯುದ್ಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ.

    ದಾಳಿಯಲ್ಲಿ ಸಾವಿರ ಕೆಜಿ ಬಾಂಬ್ ಬಳಕೆ ಮಾಡಲಾಗಿದ್ದು, ಪ್ರತಿ ಬಾಂಬ್ ಮೌಲ್ಯ 56 ಲಕ್ಷ ರೂ. ಆಗಿದೆ. ಒಂದೊಂದು ಬಾಂಬ್ 225 ಕೆಜಿ ತೂಕದ ಜಿಬಿಯು 12 ಬಾಂಬ್ ಸ್ಫೋಟಿಸಿದ್ದು, ಬಾಂಬ್ ದಾಳಿಗೆ 1.7 ಕೋಟಿಯಿಂದ 2.2 ಕೋಟಿ ವೆಚ್ಚವಾಗಿದೆ.

    ಫೆ.26 ಮುಂಜಾನೆ 3.30ರ ವೇಳೆಗೆ ಬಾಲಕೋಟ್, ಮುಜಾಫರಾಬಾದ್, ಚಕ್ಕೋತಿಯಲ್ಲಿ ನೆಲೆಸಿದ್ದ 200 ರಿಂದ 300 ಉಗ್ರರನ್ನು ಹೊಡೆದುರುಳಿಸಿ ಉಗ್ರರ ತಾಣ ಧ್ವಂಸಗೊಳಿಸಲಾಯ್ತು. ಉಗ್ರರ ಬೇಟೆಗೆ 6,300 ಕೋಟಿ ಮೌಲ್ಯದ ವಸ್ತುಗಳನ್ನು ಸಜ್ಜುಗೊಳಿಸಿತ್ತು. ಇವುಗಳಲ್ಲಿ ಯುದ್ಧ ವಿಮಾನ, ಬಾಂಬ್ ಎಲ್ಲವೂ ಸೇರಿದಂತೆ 3,686 ಕೋಟಿ ಮೌಲ್ಯದ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ಉಗ್ರರ ಬೇಟೆ ಸಂದರ್ಭದಲ್ಲಿ ಪಾಕ್ ಸೇನೆ ಪ್ರತಿದಾಳಿ ನಡೆಸಬಹುದು ಅಂತಾ ಭಾರತೀಯ ವಾಯುಪಡೆ 1,750 ಕೋಟಿ ಮೌಲ್ಯದ ರೆಡಾರ್ ಹೊಂದಿರುವ ಎಡಬ್ಲ್ಯೂಎಸಿಎಸ್ ವಿಮಾನದ ಕಾವಲಿಗಿರಿಸಿತ್ತು. ಕಾರ್ಯಾಚರಣೆಯಲ್ಲಿ ವಿಮಾನಗಳಿಗೆ ಇಂಧನ ತುಂಬುವ 22 ಕೋಟಿ ಮೌಲ್ಯದ ಟ್ಯಾಂಕರ್ ಜೆಟ್, 80 ಕೋಟಿ ಮೌಲ್ಯದ ಡ್ರೋಣ್ ಕ್ಯಾಮೆರಾಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯ್ತು. ಅಲ್ಲದೇ 3 ಸುಖೋಯ್ ವಿಮಾನಗಳನ್ನು ಸನ್ನದ್ಧವಾಗಿರಿಸಿತ್ತು.

    ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಹಾರಿದ ಮಿರಾಜ್ 2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೂ ಸಣ್ಣದೊಂದು ಸುಳಿವು ನೀಡದೇ 21 ನಿಮಿಷಗಳಲ್ಲಿ ಉಗ್ರರ ತಾಣಗಳನ್ನು ಸರ್ವನಾಶ ಮಾಡಿ ಭಾರತಕ್ಕೆ ಸೇಫಾಗಿ ಮರಳಿದೆ. ಆದರೆ 21 ನಿಮಿಷಗಳ ಯುದ್ಧಕ್ಕೆ ಸಾವಿರಾರು ಕೋಟಿ ವೆಚ್ಚವಾಗಿದ್ದು ಬಲಿಷ್ಠ ಭಾರತೀಯ ಸೇನೆ ಎದುರು ಭಿಕ್ಷುಕ ರಾಷ್ಟ್ರ ಪಾಕಿಸ್ತಾನ ಯುದ್ಧಕ್ಕೆ ಮುಂದಾಗುತ್ತಾ ಅನ್ನೋದು ಕಾದು ನೋಡಬೇಕಿದೆ.

    ದಾಳಿಗೆ ಬಳಕೆಯಾದ ಯುದ್ಧಸಾಮಾಗ್ರಿಗಳ ಮೌಲ್ಯ

    * 12 ಮಿರಾಜ್ 2000 ಜೆಟ್ ಮೌಲ್ಯ – 2,568 ಕೋಟಿ
    * ಎಡಬ್ಲ್ಯೂಎಸಿಆರ್ ವಿಮಾನ – 1750 ಕೋಟಿ
    * 1 ಸುಖೋಯ್ ಯುದ್ಧ ವಿಮಾನಕ್ಕೆ 358 ಕೋಟಿ ವೆಚ್ಚ
    * 3 ಸುಖೋಯ್ ಎಸ್‍ಯು-30ಎಸ್ ಯುದ್ಧ ವಿಮಾನ – 1,074 ಕೋಟಿ
    * 1 ಮಿಗ್ 29 ಎಸ್ ಯುದ್ಧ ವಿಮಾನಕ್ಕೆ 154 ಕೋಟಿ
    * 5 ಮಿಗ್ 29 ಎಸ್ ಯುದ್ಧ ವಿಮಾನ – 770 ಕೋಟಿ
    * ಹೆರೋನ್ ಡ್ರೋಣ್ – 80 ಕೋಟಿ
    * ವಿಮಾನಗಳಿಗೆ ಇಂಧನ ತುಂಬುವ ಟ್ಯಾಂಕರ್ ಜೆಟ್ – 22 ಕೋಟಿ
    * ಒಟ್ಟಾರೆ 21 ನಿಮಿಷದ ದಾಳಿಗೆ – 6, 264 ಕೋಟಿ ರೂ.ಸೇನಾ ಸಂಪತ್ತಿನ ಬಳಕೆ

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನುಡಿದದ್ದು ನಾನಲ್ಲ ನನ್ನ ಕಾಲಭೈರವ: ಪ್ರಧಾನಿ ಮೋದಿ ಹೊಗಳಿದ ಜಗ್ಗೇಶ್

    ನುಡಿದದ್ದು ನಾನಲ್ಲ ನನ್ನ ಕಾಲಭೈರವ: ಪ್ರಧಾನಿ ಮೋದಿ ಹೊಗಳಿದ ಜಗ್ಗೇಶ್

    ಬೆಂಗಳೂರು: ಪುಲ್ವಾಮಾ ದಾಳಿಯ ಪ್ರತಿಕಾರವಾಗಿ ಇಂದು ಭಾರತೀಯ ವಾಯುಪಡೆಯು ಇಂದು ಪಾಕಿಸ್ತಾನ ಹಾಗೂ ಉಗ್ರರಿಗೆ ಬಿಸಿ ಮುಟ್ಟಿಸಿದೆ. ಈ ಸಂಬಂಧ ನವರಸನಾಯಕ ಜಗ್ಗೇಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.

    ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ನನ್ನ ಅನಿಸಿಕೆ ತಿಳಿಸಿದ್ದೆ. ಆಗ ಕೆಲ ಸಹೋದರರು ಉದ್ರೇಕಗೊಂಡರು. ಆದರೆ ಇಂದು ಅವರಿಗೆ ದೇಶ ಮೆಚ್ಚುವ ಪ್ರಧಾನಿ ಮೋದಿ ನೇತೃತ್ವ ಕಾಯಕ ಅರಿವಾಗಿದ್ದರೆ ನನ್ನ ಅನಿಸಿಕೆ ಸಾರ್ಥಕವಾದಂತೆ ಎಂದು ಹೇಳಿದ್ದಾರೆ.

    “ನುಡಿದ್ದದ್ದು ನಾನಲ್ಲ, ನನ್ನ ಕಾಲಭೈರವ. ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಉತ್ತರ ಪ್ರದೇಶದ ಪ್ರಯಾಗ್ ಕುಂಭಸ್ನಾನದ ವೇಳೆ ಕಪ್ಪು ಬಟ್ಟೆ ಹಾಕಿದ್ದರು. ಅದು ನಾಥ ಸಂಪ್ರದಾಯ, ಅಂದರೆ ‘ಕಾಲಭೈರವನಿಗೆ’ ಶತ್ರುಸಂಹಾರಕ್ಕೆ ಸೂಚಿಸಿದಂತೆ ಎಂದು ಜಗ್ಗೇಶ್ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ನಾಯಕರು ಟ್ವೀಟ್ ಮೂಲಕ ಸರ್ಜಿಕಲ್ ಸ್ಟ್ರೈಕ್ 2 ಮಾಡಿದ ವಾಯು ಪಡೆ ಹಾಗೂ ಯೋಧರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಟ ಧ್ರವಾ ಸರ್ಜಾ ಅವರು, ಭಾರತೀಯರ ಮೈಯಾಗ ಎಷ್ಟ್ ಪೊಗರು ಐತೆ ಅಂತ ಚೆಕ್ ಮಾಡಾಕಾ ಬರಬೇಡಾ.. ಮಕ್ಳಾ ಬ್ಲಾಸ್ಟ್ ಆಗೋಯ್ತಿರಾ. ಭೋಲೋ ಭಾರತ್ ಮಾತಾ ಕಿ ಜೈ.. ಜೈ ಆಂಜನೇಯ ಎಂದು ಟ್ವೀಟ್ ಮಾಡಿ ಭಾರತೀಯರ ಪೊಗರಿನ ಬಗ್ಗೆ ಪಾಕಿಸ್ತಾನದವರಿಗೆ ತಿಳಿಸಿಕೊಟ್ಟಿದ್ದಾರೆ.

    ನಟ ಗಣೇಶ್ ಅವರು, “ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಭಯೋತ್ಪಾದರ ಕ್ಯಾಂಪಸ್‍ಗಳನ್ನು ನಾಶ ಮಾಡಿದೆ. ನಮ್ಮ ಭಾರತೀಯ ವಾಯುಸೇನೆಯ ಬಗ್ಗೆ ಹೆಮ್ಮೆ ಇದೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯ ಮೇಲೆ ಭಾರತೀಯ ವಾಯು ಪಡೆಯು ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೇಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.

    ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಉಸ್ತಾದ್ ಘೋರಿ ಯಾರು?:
    ಮಸೂದ್ ಅಜರ್ ಭಾಮೈದ ಯೂಸುಫ್ 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಐಸಿ-814ರ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಪ್ರಮುಖ ಆರೋಪಗಳಿಂದ ಇಂಟರ್‍ಪೋಲ್‍ನ ಪಟ್ಟಿಸೇರಿದ್ದ.

    ಭಾರತದ ಸಿಬಿಐ 2000ರಲ್ಲಿ ಸಲ್ಲಿಸಿದ್ದ ಮನವಿಯಂತೆ ಇಂಟರ್‍ಪೋಲ್, ಯೂಸುಫ್ ವಿರುದ್ಧ ಕಳೆದ ವರ್ಷ ರೆಡ್ ಕಾರ್ನನ್ ನೋಟಿಸ್ ಹೊರಡಿಸಿತ್ತು. ಇಂಟರ್‍ಪೋಲ್, ಮಾಹಿತಿ ಪ್ರಕಾರ ಯೂಸುಫ್ ಪಾಕಿಸ್ತಾನ ಕರಾಚಿ ನಗರದವನಾಗಿದ್ದು, ಉರ್ದು, ಹಿಂದಿ, ಮತ್ತು ಪಾಕಿಸ್ತಾನಿ ಭಾಷೆ ಮಾತನಾಡಬಲ್ಲವನಾಗಿದ್ದ.

    ಯೂಸುಫ್ ಬಾಲಕೋಟ್‍ನಲ್ಲಿರುವ ಉಗ್ರ ತರಬೇತಿ ಶಿಬಿರದ ಮುಖ್ಯಸ್ಥನಾಗಿದ್ದ. ಈ ಶಿಬಿರವನ್ನೇ ಭಾರತೀಯ ವಾಯುಪಡೆ ಮಂಗಳವಾರದ ದಾಳಿಯಲ್ಲಿ ಧ್ವಂಸಗೊಳಿಸಿದೆ.

    ಮಸೂದ್ ಅಜರ್ ನನ್ನು ಭಾರತೀಯ ಸೇನೆಯಿಂದ ಬಿಡುಗಡೆಗೊಳಿಸಲು ಯೂಸುಫ್ ಸೇರಿದಂತೆ ಕೆಲ ಉಗ್ರರು, 1999ರಲ್ಲಿ ನೇಪಾಳದಿಂದ ಕಂದಹಾರ್ ಗೆ ಇಂಡಿಯನ್ ಏರ್‍ಲೈನ್ಸ್ ವಿಮಾನವನ್ನು ಅಪಹರಣ ಮಾಡಿದ್ದರು. ಪ್ರಯಾಣಿಕರ ಜೀವ ರಕ್ಷಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಜರ್ ಮಸೂದ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    – ವಾಯು ಪಡೆ, ಕೇಂದ್ರ ಸರ್ಕಾರಕ್ಕೆ ಧನ್ಯವಾದ

    ಹೈದರಾಬಾದ್: ಪಾಕಿಸ್ತಾನ ಮೂರ್ಖ ನಿರ್ಧಾರಗಳನ್ನ ಕೈಗೊಂಡರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿರಬೇಕು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಮಾತನಾಡಿದ ಅವರು, ನಾವು ಊಹಿಸಿದಂತೆ ಭಾರತ ಸರ್ಕಾರ ಹಾಗೂ ವಾಯು ಪಡೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿದೆ. ವಾಯುಸೇನೆಗೆ ನಮ್ಮ ಅಭಿನಂದನೆ. ಕೇಂದ್ರ ಸರ್ಕಾರವು ದಿಟ್ಟ ನಿರ್ಧಾವನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಓವೈಸಿ ತಿಳಿಸಿದರು.  ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ವಿಶ್ವಸಂಸ್ಥೆಯ ವಿಧಿ 51ರಂತೆ ಭಾರತವು ತನ್ನ ಗಡಿಯನ್ನು ಮತ್ತು ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಸ್ವಯಂ ರಕ್ಷಣೆಗೆ ದಾಳಿ ಮಾಡುವ ಹಕ್ಕನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಉಗ್ರರಿಗೆ ತಕ್ಕ ಪಾಠ ಕಲಿಸಲು ಸೂಕ್ತ ದಾಳಿ ನಡೆಸಬೇಕೆಂದು ನಾವು ಬಹುದಿನಗಳಿಂದ ಕಾಯುತ್ತಿದ್ದೇವು. ದಾಳಿ ಮಾಡಿದವರು ಮಸೂದ್ ಅಜರ್, ಲಷ್ಕರ್ ಅದು ಯಾರೇ ಆಗಿರಲಿ ನಾನು ಅವುಗಳನ್ನು ತಾಲಿಬಾನ್‍ಗಳು ಎಂತಲೇ ಕರೆಯುತ್ತೇನೆ. ಇಂತಹ ಸೈತಾನ್‍ಗಳನ್ನು ಸರ್ಕಾರ ಹೊಡೆದು ಹಾಕಬೇಕು ಎಂದು ಕಿಡಿಕಾರಿದರು.

    ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಬಗ್ಗೆ ಪ್ರಶ್ನೆ ಮಾಡಲ್ಲ. ಉಗ್ರರನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಸರ್ಜಿಕಲ್ ಸ್ಟ್ರೈಕ್‍ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಇಸ್ಲಾಮಾಬಾದ್: ಭಾರತೀಯ ವಾಯು ಪಡೆ ಏರ್‌ ಸ್ಟ್ರೈಕ್ ದಾಳಿ ನಡೆಸಿದಾಗ ಕತ್ತಲಾಗಿತ್ತು. ಹೀಗಾಗಿ ಪ್ರತಿದಾಳಿ ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ್ ತಿಳಿಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯಿಂದ ತತ್ತರಿಸಿದ್ದ ಪಾಕಿಸ್ತಾನ ಇಂದು ಸುದ್ದಿಗೋಷ್ಠಿ ಕರೆದು ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದೆ. ಈ ವೇಳೆ ಮಾಧ್ಯಮದವರು, ದಾಳಿಯ ವೇಳೆ ಪಾಕಿಸ್ತಾನ ವಾಯು ಪಡೆಯ ಏನು ಮಾಡುತ್ತಿತ್ತು? ಯಾಕೆ ಪ್ರತಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.

    ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದಾಳಿಯು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಡೆದಿದೆ. ಭಾರತೀಯ ವಾಯು ಪಡೆಯು ಗಡಿಯನ್ನು ದಾಟಿ 5 ರಿಂದ 6 ಕಿ.ಮೀ. ಒಳಗಡೆ ಪ್ರವೇಶಿಸಿ, ಬಾಂಬ್ ಹಾಕಿದ್ದಾರೆ. ರಾತ್ರಿ ದಾಳಿ ನಡೆದಿದ್ದರಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದಿಲ್ಲ. ಈ ವೇಳೆ ನಮ್ಮ ಏರ್‍ಫೋರ್ಸ್ ಸಿದ್ಧವಾಗಿತ್ತು. ಆದರೆ ಕತ್ತಲಾಗಿದ್ದರಿಂದ ಯುದ್ಧ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಹೇಲಿದ್ದಾರೆ.

    https://twitter.com/justgtin/status/1100385235928199170

    ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ವಾಯು ಪಡೆ ಸಿದ್ಧವಾಗಿದ್ದು, ನಮ್ಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯದಲ್ಲಿಯೇ ಭಾರತೀಯ ವಾಯುಪಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಪಕ್ಕದಲ್ಲೇ ಕುಳಿತಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಮಾತನಾಡಿ, ದಾಳಿಯ ಕುರಿತು ರಕ್ಷಣಾ ಸಚಿವಾಲಯದ ಜೊತೆಗೆ ಚರ್ಚೆ ಮಾಡಿದ್ದೇನೆ. ಪಾಕಿಸ್ತಾನ ವಾಯು ಪಡೆ ಪ್ರತಿದಾಳಿಗೆ ಸಿದ್ಧವಾಗಿದ್ದು, ಇದು ಬಹುರೂಪದ ದಾಳಿಯಾಗಿರುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv