Tag: Suresh prabhu

  • ಸುರೇಶ್ ಪ್ರಭುಗೆ ಕೊರೊನಾ ಇಲ್ಲ – 1 ತಿಂಗಳು ಬಿಜೆಪಿಯಿಂದ ಪ್ರತಿಭಟನೆ ಇರಲ್ಲ

    ಸುರೇಶ್ ಪ್ರಭುಗೆ ಕೊರೊನಾ ಇಲ್ಲ – 1 ತಿಂಗಳು ಬಿಜೆಪಿಯಿಂದ ಪ್ರತಿಭಟನೆ ಇರಲ್ಲ

    – ಕೊರೊನಾ ಭೀತಿಯಿಂದ ಇಬ್ಬರು ಬಿಜೆಪಿಗರು ಐಸೋಲೇಶನ್

    ನವದೆಹಲಿ: ಒಂದು ತಿಂಗಳು ಭಾರತದದ್ಯಾಂತ ಬಿಜೆಪಿ ಪಕ್ಷ ಯಾವುದೇ ಪ್ರತಿಭಟನೆ ಕೈಗೊಳ್ಳುವುದಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿದ್ದಾರೆ.

    ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚು ಜನ ಒಂದೇ ಕಡೆ ಸೇರದಂತೆ ಜಾತ್ರೆ, ಮಸೀದಿ, ಮಂದಿರಗಳಿಗೂ ನಿಷೇಧ ಹೇರಲಾಗಿದೆ. ಹೀಗಾಗಿ ಯಾವುದೇ ಪರಿಸ್ಥಿತಿಯಲ್ಲೂ ನಾವು ಪ್ರತಿಭಟನೆ ಕೈಗೊಳ್ಳಲ್ಲ ಎಂದು ಜೆಪಿ ನಡ್ಡಾ ಅವರು ಇಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

    ಮಂಗಳವಾರ ಜೆಪಿ ನಡ್ಡಾ ಅವರು, ಪ್ರಧಾನಿ ಮೋದಿ ಅವರ ಜೊತೆ ಪಕ್ಷದ ಸಂಸದೀಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಕೊರೊನಾ ವೈರಸ್ ತಡೆಗಟ್ಟುವ ಬಗ್ಗೆ ಮಹತ್ವದ ಚೆರ್ಚೆ ನಡೆಸಲಾಗಿತ್ತು. ಜೊತೆಗೆ ಬಿಜೆಪಿಗರು ಕೊರೊನಾ ವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಜೊತೆಗೆ ಏಪ್ರಿಲ್ 15ರವರೆಗೂ ಸಮೂಹಿಕ ಸಭೆಗಳು ಸೇರದಂತೆ ಸೂಚಿಸಲಾಗಿತ್ತು. ಹೀಗಾಗಿ ನಡ್ಡಾ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಇದರ ನಡುವೆ ಸೌದಿ ಅರೇಬಿಯಾಗೆ ಹೋಗಿ ಬಂದಿದ್ದ ಬಿಜೆಪಿ ಸಂಸದ ಸರೇಶ್ ಪ್ರಭು ಅವರಿಗೆ ಕೊರೊನಾ ಸೋಂಕು ಇದೆ ಎಂದು ಶಂಕಿಸಲಾಗಿತ್ತು. ಆದರೆ ಅವರನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಸುರೇಶ್ ಪ್ರಭು ಅವರು ತಮ್ಮ ಮನೆಯಲ್ಲೇ 14 ದಿನ ಪ್ರತ್ಯೇಕವಾಗಿರುವುದಾಗಿ ತಿಳಿಸಿದ್ದಾರೆ.

    ಸುರೇಶ್ ಪ್ರಭು ಅವರು ಕಳೆದ ವಾರ ನಡೆದ ಶೆರ್ಪಾಸ್ ಸಭೆಯಲ್ಲಿ ಪಾಲ್ಗೊಳ್ಳಲು ಸೌದಿ ಅರೇಬಿಯಾಗೆ ಹೋಗಿದ್ದರು. ಸೌದಿ ಅರೇಬಿಯಾದಲ್ಲೂ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಇಲ್ಲಿಯವರಿಗೂ 171 ಕೇಸ್‍ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ 14 ದಿನಗಳ ಕಾಲ ನಿಗಾ ವಹಿಸಲಾಗಿದೆ. ಇದರಿಂದ ಅವರು ಮುಂದೆ ನಡೆಯುವ ಸಂಸತ್ತಿನ ಅಧಿವೇಶದಲ್ಲಿ ಭಾಗಿಯಾಗಲ್ಲ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

    ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವ ವಿ ಮುರಳೀಧರನ್ ಅವರೂ ಕೂಡ ತಮ್ಮ ನಿವಾಸದಲ್ಲೇ ಐಸೋಲೇಷನ್ ವಾರ್ಡಿಗೆ ಶಿಫ್ಟ್ ಆಗಿದ್ದಾರೆ. ಇವರಿಗೂ ಕೂಡ ಪರೀಕ್ಷೆ ಮಾಡಿದಾಗ ಸೋಂಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. ಆದರೂ ಮುಂಜಾಗ್ರತ ಕ್ರಮವಾಗಿ ಮುರಳೀಧರನ್ ಮನೆಯಲ್ಲಿ ನಿಗಾದಲ್ಲಿದ್ದಾರೆ.

    ಇತ್ತೀಚೆಗೆ ಕೇರಳದ ಶ್ರೀ ಚಿತ್ರ ತಿರುನಾಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಸ್‍ಸಿಟಿಐಎಂಎಸ್‍ಟಿ) ಕಾಲೇಜಿನ ಡಾಕ್ಟರ್‍ವೊಬ್ಬರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಈ ಕಾಲೇಜಿಗೆ ಮುರಳೀಧರನ್ ಕೂಡ ಮಾರ್ಚ್ 14ರಂದು ತೆರೆಳಿದ್ದರು. ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು.

  • ನೈತಿಕ ಹೊಣೆ ಹೊತ್ತು  ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನೈತಿಕ ಹೊಣೆ ಹೊತ್ತು ರೈಲ್ವೇ ಸಚಿವ ಸುರೇಶ್ ಪ್ರಭು ರಾಜೀನಾಮೆ? ಮೋದಿ ಹೇಳಿದ್ದೇನು?

    ನವದೆಹಲಿ: ಒಂದು ವಾರದೊಳಗಡೆ ಎರಡು ರೈಲು ದುರಂತ ಸಂಭವಿಸಿ ಟೀಕೆಗೆ ಒಳಗಾಗಿರುವ ಸುರೇಶ್ ಪ್ರಭು ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

    ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆಯ ಬಳಿಕ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸುರೇಶ್ ಪ್ರಭು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.

    ಭೇಟಿ ವೇಳೆ ಸ್ವಲ್ಪ ಸಮಯ ಕಾಯಿರಿ ಎನ್ನುವುದಾಗಿ ಮೋದಿ ನನಗೆ ಹೇಳಿದ್ದಾರೆ ಎಂದು ಸುರೇಶ್ ಪ್ರಭು ಟ್ವೀಟ್ ಮಾಡಿದ್ದಾರೆ.

    ಉತ್ತರ ಪ್ರದೇಶದ ರೈಲು ದುರಂತದ ಬಳಿಕ ಸರಣಿ ಟ್ವೀಟ್ ಮಾಡಿರುವ ಸುರೇಶ್ ಪ್ರಭು ಅವರು ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಕಳೆದ ಮೂರು ವರ್ಷ ನಾನು ರೈಲ್ವೇಯ ಬೆಳವಣಿಗೆ ತುಂಬಾ ಶ್ರಮ ಪಟ್ಟಿದ್ದೇನೆ. ಕಳೆದ ಎರಡು ದಶಕಗಳಿಂದ ಹದೆಗೆಟ್ಟಿದ್ದ ರೈಲ್ವೇಯನ್ನು ಮೇಲಕ್ಕೆ ಎತ್ತಲು ಮೋದಿ ಸರ್ಕಾರ ತುಂಬಾ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

    ಉತ್ಕಲ್ ರೈಲು ದುರಂತ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಉತ್ಕಲ್ ರೈಲು ದುರಂತ ಸಂಭವಿಸಿ 22 ಮಂದಿ ಮೃತಪಟ್ಟಿದ್ದರು.

    ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೂರು ವರ್ಷಗಳ ಕಾಲ ರೈಲ್ವೇ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ಪ್ರಭು ಅವರು ಖಾಸಗಿ ಸಂಸ್ಥೆಗಳು ನಡೆಸುವ ‘ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಚಿವರ’ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದರು. ಇತ್ತೀಚೆಗೆ ಇಂಡಿಯಾ ಟುಡೇ ಅವರು ಮೋದಿ ಸಂಪುಟದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಟಾಪ್ -5 ಮಂತ್ರಿಗಳ ಪಟ್ಟಿಯಲ್ಲೂ ಸುರೇಶ್ ಪ್ರಭು ಸ್ಥಾನವನ್ನು ಪಡೆದುಕೊಂಡಿದ್ದರು.

    ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ರೈಲು ದುರಂತ ಸಂಭವಿಸಿದ್ದು ಹೇಗೆ ವಿಡಿಯೋ ನೋಡಿ

  • ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಉತ್ತರ ಪ್ರದೇಶದಲ್ಲಿ ಮತ್ತೊಂದು ರೈಲು ದುರಂತ: ಹಳಿ ತಪ್ಪಿದ ಕೈಫಿಯತ್ ಎಕ್ಸ್ ಪ್ರೆಸ್, 70 ಮಂದಿಗೆ ಗಾಯ

    ಲಕ್ನೋ: ಉತ್ಕಲ್ ರೈಲು ದುರಂತದ ನೆನಪು ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕೈಫಿಯತ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ 70 ಜನ ಗಾಯಗೊಂಡಿರುವ ಘಟನೆ ಮಂಗಳವಾರ ಅವೌರೇಯಾ ಜಿಲ್ಲೆಯಲ್ಲಿ ನಡೆದಿದೆ.

    ಮಾನವ ರಹಿತ ಸಿಗ್ನಲ್ ನಲ್ಲಿ ಪಲ್ಟಿಯಾಗಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ರೈಲು ಅಜಮ್‍ಘಡದಿಂದ ದೆಹಲಿಗೆ ಸಂಚರಿಸುತ್ತಿದ್ದಾಗ ಬುಧವಾರ ನಸುಕಿನ ಜಾವ 2.50ಕ್ಕೆ ಪಟ ಮತ್ತು ಅಚಲ್ಡ ರೈಲ್ವೇ ನಿಲ್ದಾಣದ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಉತ್ತರ ಕೇಂದ್ರ ವಲಯದ ಅಧಿಕಾರಿ ತಿಳಿಸಿದ್ದಾರೆ.

    ಒಂದು ಬೋಗಿ ಸಂಪೂರ್ಣವಾಗಿ ತಿರುಗಿದ್ದರೆ, ಏಳು ಬೋಗಿಗಳು ಹಳಿ ತಪ್ಪಿದೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೇ ಸಚಿವ ಸುರೇಶ್ ಪ್ರಭು ಟ್ವೀಟ್ ಮಾಡಿ ಘಟನೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿಲಾಗಿದೆ ಎಂದು ಹೇಳಿದ್ದಾರೆ.

    ಘಟನೆ ಬಗ್ಗೆ ವಿವರಣೆ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಅದಿತ್ಯನಾಥ್ ಹಿರಿಯ ಅಧಿಕಾರಿಗಳ ಹತ್ತಿರ ಮಾತನಾಡಿದ್ದಾರೆ. ಪೊಲೀಸ್ ಹೆಚ್ಚುವರಿ ನಿರ್ದೇಶಕ ಅಧಿಕಾರಿಯಾದ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಮರಳಿನ ಲಾರಿ ಹಳಿ ಪ್ರವೇಶಿಸಿ ಪಲ್ಟಿಯಾಗಿದ್ದು ಹೇಗೆ ಎನ್ನುವುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

    ಶನಿವಾರ ಪಶ್ಚಿಮ ಉತ್ತರ ಪ್ರದೇಶದ ಕತೌಲಿಯ ಹತ್ತಿರ ಕಾಳಿಂಗ ಎಕ್ಸ್‍ಪ್ರೆಸ್ ಹಳಿ ತಪ್ಪಿ 23 ಜನ ಸಾವನ್ನಪ್ಪಿ, 150 ಕ್ಕಿಂತಲೂ ಹೆಚ್ಚಿನ ಮಂದಿಗೆ ಗಾಯವಾಗಿತ್ತು. ವಿಶ್ವದ 4ನೇ ಅತಿ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದ್ದು, ಪ್ರತಿ ದಿನ 2.2 ಕೋಟಿ ಜನ ರೈಲಿನಲ್ಲಿ ಸಂಚರಿಸುತ್ತಾರೆ.

     

     

     

  • ರೈಲಿನಲ್ಲಿ ಕೊಟ್ಟ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ!

    ರೈಲಿನಲ್ಲಿ ಕೊಟ್ಟ ವೆಜ್ ಬಿರಿಯಾನಿಯಲ್ಲಿ ಸತ್ತ ಹಲ್ಲಿ!

    ಲಕ್ನೋ: ರೈಲಿನಲ್ಲಿ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಎಂದು ಭಾರತದ ಸಿಎಜಿ ವರದಿ ನೀಡಿದ ಒಂದು ವಾರದಲ್ಲೇ ರೈಲ್ವೆ ಅಧಿಕಾರಿಗಳು ನಿರ್ಲಕ್ಷ್ಯತನದ ಬಗ್ಗೆ ಘಟನೆಯೊಂದು ಬೆಳಕಿಗೆ ಬಂದಿದೆ.

    ಇಂದು ಬೆಳಿಗ್ಗೆ ಪೂರ್ವ ಎಕ್ಸ್ ಪ್ರೆಸ್‍ನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಪ್ರಯಾಣಿಕ ರೈಲ್ವೇ ಸಚಿವ ಸುರೇಶ್ ಪ್ರಭುಗೆ ಟ್ವಿಟ್ಟರ್‍ನಲ್ಲಿ ದೂರು ನೀಡಿದ್ದಾರೆ.

    ಮೊಕಾಮಾ ದಲ್ಲಿ ನಾನು ಊಟಕ್ಕೆ ಆರ್ಡರ್ ಮಾಡಿದೆ. ಅದರಲ್ಲಿ ಹಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಟಿಟಿಇ ಹಾಗೂ ಕ್ಯಾಂಟೀನ್ ಮ್ಯಾನೇಜರ್‍ಗೆ ದೂರು ನೀಡಿ ನಂತರ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದೆ ಎಂದು ಪ್ರಯಾಣಿಕ ಹೇಳಿದ್ದಾರೆ. ಉತ್ತರಪ್ರದೇಶದ ಚಾಂದೌಲಿ ಬಳಿ ಈ ಘಟನೆ ನಡೆದಿದ್ದು, ತಡವಾಗಿ ಔಷಧಿ ನೀಡಲಾಯ್ತು ಎಂದಿದ್ದಾರೆ.

    ಟ್ವೀಟ್ ಮಾಡಿದ ಬಳಿಕ ಕಾನ್‍ಪುರ್‍ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ದಾನಾಪುರ್ ಡಿವಿಷನ್‍ನಲ್ಲಿ ಚೆಕ್ ಅಪ್ ಮಾಡಿ ಔಷಧಿ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿಭಾಗೀಯ ರೈಲ್ವೆ ಮ್ಯಾನೇಜರ್ ಕಿಶೋರ್ ಕುಮಾರ್ ಹೇಳಿದ್ದಾರೆ.

    ಘಟನೆ ಬಗ್ಗೆ ವರದಿಯಾದ ಬಳಿಕ ಪೂರ್ವ ಎಕ್ಸ್ ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು ರೈಲ್ವೆ ಇಲಾಖೆ ರದ್ದು ಮಾಡಿದ್ದು, 48 ಗಂಟೆಗಳ ನೋಟಿಸ್ ನೀಡಿದೆ. ಪೂರ್ವ ಎಕ್ಸ್‍ಪ್ರೆಸ್‍ನ ಕೇಟರಿಂಗ್ ಒಪ್ಪಂದವನ್ನು 2014ರ ಮೇ 15ರಂದು ಆರ್‍ಕೆ ಅಸೋಸಿಯೇಟ್ಸ್‍ಗೆ 5 ವರ್ಷಗಳವರೆಗೆ ನೀಡಲಾಗಿತ್ತು. ಆದ್ರೆ ಈಗ ಒಪ್ಪಂದವನ್ನು ಅಂತ್ಯಗೊಳಿಸುತ್ತಿರುವ ಬಗ್ಗೆ ಸರಣಿ ಟ್ವೀಟ್‍ಗಳ ಮೂಲಕ ರೈಲ್ವೆ ಇಲಾಖೆ ತಿಳಿಸಿದೆ. ಈ ಕೇಟರಿಂಗ್‍ನವರಿಗೆ ಕಳೆದ ವರ್ಷ 10 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಈ ವರ್ಷ 7.5 ಲಕ್ಷ ರೂ. ದಂಡ ವಿಧಿಸಲಾಗಿತ್ತು ಎಂದು ರೈಲ್ವೆ ಇಲಾಖೆ ಟ್ವೀಟ್‍ವೊಂದರಲ್ಲಿ ತಿಳಿಸಿದೆ.

  • ರೈಲಿನಲ್ಲಿ ಕನಿಷ್ಟ ನೀರು, ವಿದ್ಯುತ್ತಾದ್ರೂ ಕಲ್ಪಿಸಿ: ಸಚಿವ ಸುರೇಶ್ ಪ್ರಭುಗೆ ಪ್ರಯಾಣಿಕ ಟ್ವೀಟ್

    ರೈಲಿನಲ್ಲಿ ಕನಿಷ್ಟ ನೀರು, ವಿದ್ಯುತ್ತಾದ್ರೂ ಕಲ್ಪಿಸಿ: ಸಚಿವ ಸುರೇಶ್ ಪ್ರಭುಗೆ ಪ್ರಯಾಣಿಕ ಟ್ವೀಟ್

    ಧಾರವಾಡ: ಭಾನುವಾರ ರಾತ್ರಿ ಮೈಸೂರಿನಿಂದ ಧಾರವಾಡಕ್ಕೆ ಹೊರಟಿದ್ದ 17301 ನಂಬರಿನ ರೈಲಿನ ಸ್ಲಿಪರ್ ಕೋಚ್ ಬೋಗಿಯಲ್ಲಿ ವಿದ್ಯುತ್ ನೀರು ಹಾಗೂ ಫ್ಯಾನ್ ಇಲ್ಲದೇ ಪ್ರಯಾಣಿಕರು ಪರದಾಡಿದ್ದಾರೆ.

    ಈ ಬೋಗಿಯಲ್ಲಿ ಒಟ್ಟು 27 ಪ್ರಯಾಣಿಕರು ಪ್ರಯಾಣ ಬೆಳಸಿದ್ದರು. ಮೈಸೂರಿನಿಂದ ಧಾರವಾಡ ನಗರಕ್ಕೆ ಬಂದು ತಲಪುವಷ್ಟರಲ್ಲಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಧಾರವಾಡ ನಗರಕ್ಕೆ ಆಗಮಿಸಿದ ಪ್ರಯಾಣಿಕರು ರೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಕುರಿತು ಹುಬ್ಬಳ್ಳಿ ನೈರುತ್ಯ ವಲಯ ಜಿಎಂಗೆ ದೂರನ್ನ ನೀಡಿದ್ದಾರೆ.

    ಪ್ರಯಾಣಿಕರಾದ ಗಂಗಾಧರ್ ಕುಲಕರ್ಣಿ ಎಂಬವರು ರೈಲಿನಲ್ಲಿ ಕನಿಷ್ಟ ನೀರು ಹಾಗೂ ವಿದ್ಯುತ್‍ನ್ನಾದರೂ ಕಲ್ಪಿಸಿ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಗಂಗಾಧರ್ ಅವರ ಟ್ವೀಟ್‍ಗೆ ರೈಲ್ವೆ ಇಲಾಖೆ ನಿಮ್ಮ ಪಿಎನ್‍ಆರ್ ನಂಬರ್ ಕಳುಹಿಸಿ ಎಂದು ಕೇಳಿ ಟ್ವೀಟ್ ಮಾಡಿದೆ.

     

  • ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದರೆ, ಬಿಹಾರದ ದರ್ಭಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

    ದೇಶದ 407 ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ. ನಮ್ಮ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. `ಎ’ ಕೆಟಗಿರಿಯಲ್ಲಿರುವ ರಾಜ್ಯದ ರಾಯಚೂರು ನಿಲ್ದಾಣ 66 ನೇ ಸ್ಥಾನದಲ್ಲಿದೆ. ಕಳೆದ ಬಾರಿ ಇದೇ ರಾಯಚೂರು ನಿಲ್ದಾಣ 330ನೇ ಸ್ಥಾನವನ್ನು ಹೊಂದಿತ್ತು.

    ಸ್ವಚ್ಛ ರೈಲು ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ಮತ್ತು ಜಮ್ಮು-ಕಾಶ್ಮೀರ ರೈಲು ನಿಲ್ದಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದಿವೆ.

    ರೈಲ್ವೆ ನಿಲ್ದಾಣಗಳನ್ನು ಎ1, ಎ, ಬಿ, ಸಿ., ಡಿ, ಇ ಮತ್ತು ಎಫ್ ಎಂದು ವರ್ಗಿಕರಿಸಲಾಗಿದೆ. ವಾರ್ಷಿಕವಾಗಿ 50 ಕೋಟಿ ರೂ. ಗಳಿಸುವ ನಿಲ್ದಾಣಗಳು ಎ1 ವಿಭಾಗದಲ್ಲಿ ಬರುತ್ತವೆ. ವಾರ್ಷಿಕವಾಗಿ 6 ರಿಂದ 50 ಕೋಟಿ ರೂ. ಗಳಿಸುವ ನಿಲ್ದಾಣಗಳು `ಎ’ ವಿಭಾಗದಲ್ಲಿ ಸೇರ್ಪಡೆಯಾಗುತ್ತವೆ. ಇನ್ನು ಉಳಿದ ಸಬ್ ಅರ್ಬನ್ ರೈಲ್ವೆ ನಿಲ್ದಾಣಗಳು `ಸಿ’ ವಿಭಾಗದಲ್ಲಿ ಬರುತ್ತವೆ. ಉಳಿದ ಹಾಲ್ಟ್ ಸ್ಟೇಶ್‍ನ್‍ಗಳು `ಎಫ್’ ವಿಭಾಗದಲ್ಲಿ ಸೇರುತ್ತದೆ.

    ಒಟ್ಟು 75 ರೈಲು ನಿಲ್ದಾಣಗಳು `ಎ1′ ವರ್ಗದಲ್ಲಿವೆ. 332 ರೈಲು ನಿಲ್ದಾಣಗಳು `ಎ’ ವಿಭಾಗದಲ್ಲಿ ಬರುತ್ತವೆ. ಈ 332 ನಿಲ್ದಾಣಗಳಲ್ಲಿ ಪಂಜಾಬ್ ರಾಜ್ಯದ ಬಿಯಾಸ್ ರೈಲು ನಿಲ್ದಾಣ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ರಾಜ್ಯದ ಜೊಗ್ಬನಿ ನಿಲ್ದಾಣ ಕೊನೆಯ ಸ್ಥಾನದಲ್ಲಿದೆ.

     

  • ಹಳಿ ತಪ್ಪಿದ ಲಕ್ನೋ-ಮೀರತ್ ರಾಜ್ಯ ರಾಣಿ ಎಕ್ಸ್ ಪ್ರೆಸ್- ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಣೆ

    ಹಳಿ ತಪ್ಪಿದ ಲಕ್ನೋ-ಮೀರತ್ ರಾಜ್ಯ ರಾಣಿ ಎಕ್ಸ್ ಪ್ರೆಸ್- ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಣೆ

    ಲಕ್ನೋ: ಉತ್ತರಪ್ರದೇಶದ ರಾಂಪುರ ಸಮೀಪ ಮೀರತ್-ಲಕ್ನೋ ರಾಜ್ಯ ರಾಣಿ ಎಕ್ಸ್ ಪ್ರೆಸ್ ಇಂದು ಹಳಿತಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

    ಹಳಿ ತಪ್ಪಿದ ರೈಲಿನ 8 ಬೋಗಿಗಳು ಪಲ್ಟಿಯಾದ ಪರಿಣಾಮ ಪ್ರಯಾಣಿಕರಿಗೆ ಗಾಯಗಳಾಗಿವೆ. ಮುಂದಾಪಾಂಡೆ ಹಾಗೂ ರಾಂಪುರ ರೈಲ್ವೇ ನಿಲ್ದಾಣದ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ ಅಂತಾ ಉತ್ತರ ರೈಲ್ವೇ ವಕ್ತಾರ ನೀರಜ್ ಶರ್ಮಾ ತಿಳಿಸಿದ್ದಾರೆ.

    ಈ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು, ಘಟನೆಗೆ ಕಾರಣವೇನೆಂದು ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. ರಕ್ಷಣಾ ಕಾರ್ಯಚರಣೆಗಾಗಿ ಘಟನಾ ಸ್ಥಳಕ್ಕೆ ತೆರಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಲಾಗಿದೆ ಅಂತಾ ಟ್ವೀಟ್ ಮಾಡಿದ್ದಾರೆ.

    ಇತ್ತ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಘಟನೆಯಿಂದ ಗಂಭೀರವಗಿ ಗಾಯಗೊಂಡ ಪ್ರತಿಯೊಬ್ಬರಿಗೂ 50,000 ಹಾಗೂ ಸಣ್ಣ-ಪುಟ್ಟ ಗಾಯಗಳಾಗಿರುವವರಿಗೆ 25,000 ರೂ. ಧನಸಹಾಯ ಘೋಷಿಸಿದ್ದಾರೆ. ಇನ್ನು ರೈಲ್ವೇ ಇಲಾಖೆಯಿಂದ ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಲಾಗಿದೆ.

    ಘಟನೆಗೆ ನಿಖರ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

  • ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ

    ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ

    ಬೆಂಗಳೂರು: ಅಂತೂ ಇಂತೂ ಸುದೀರ್ಫ 21 ವರ್ಷಗಳಿಂದ ಜನರು ಕಾಯ್ತಿದ್ದ ರೈಲು ಬಂದೇ ಬಿಡ್ತು. ಬೆಂಳೂರಿನಿಂದ ಹಾಸನಕ್ಕೆ, ಹಾಸನದಿಂದ ಬೆಂಗಳೂರಿಗೆ ಇನ್ಮುಂದೆ ರೈಲಿನಲ್ಲೇ ಅದು ಕಡಿಮೆ ಟಿಕೆಟ್ ದರದಲ್ಲೇ ಪ್ರಯಾಣಿಸಬಹುದು.

    122679/22680 ಸಂಖ್ಯೆಯ ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್‍ಪ್ರೆಸ್ ರೈಲಿಗೆ ಇಂದು ಗ್ರೀನ್ ಸಿಗ್ನಲ್ ಸಿಕ್ಕಿದೆ. 1996ರಲ್ಲಿ ಒಪ್ಪಿಗೆ ಸೂಚಿಸಿದ್ದ ಯೋಜನೆಗೆ ಇಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯನ, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ರು.

    ವೆಚ್ಚ ಎಷ್ಟು?: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೊಸ ರೈಲು ಮಾರ್ಗ ಸಿದ್ಧವಾಗಿದೆ. ಒಟ್ಟು 1289. 92 ಕೋಟಿ ರೂ. ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರವು 467.21 ಕೋಟಿ ರೂಪಾಯಿ ಹಾಗೂ ಕೇಂದ್ರ ರೈಲ್ವೆ ಇಲಾಖೆ 822.71 ಕೋಟಿ ರುಪಾಯಿ ಖರ್ಚು ಮಾಡಿದೆ.

    ಹಾಸನದಿಂದ ಚಿಕ್ಕಬಾಣವರ ನಿಲ್ದಾಣಗಳ ನಡುವಿನ ಹೊಸ ಬ್ರಾಡ್‍ಗೇಜ್ ಮಾರ್ಗವು ಚನ್ನಪಟ್ಟಣ, ಡಿ. ಸಮುದ್ರವಳ್ಳಿ, ಶಾಂತಿಗ್ರಾಮ, ಶ್ರವಣಬೆಳಗೋಳ, ಹಿರಿಸಾವೆ, ಬಾಲಗಂಗಾಧರನಗರ, ಯಡಿಯೂರು, ಕುಣಿಗಲ್, ತಿಪ್ಪಸಂದ್ರ, ಸೋಲೂರು ಹಾಗು ನೆಲಮಂಗಲ ಮೂಲಕ ಹಾದು ಹೋಗಲಿದೆ.

    ಎಲ್ಲೆಲ್ಲಿ ಸ್ಟಾಪ್ ಕೊಡುತ್ತೆ?: ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಾಲಗಂಗಾಧರ ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದೆ. ಪ್ರತಿದಿನ ಹಾಸನದಿಂದ ಬೆಳಗ್ಗೆ 6.30ಕ್ಕೆ ಹೊರಟರೆ ಬೆಳಗ್ಗೆ 9.15ಕ್ಕೆ ಯಶವಂತಪುರ ತಲುಪಲಿದೆ. ಇನ್ನು ಯಶವಂತಪುರದಿಂದ ಸಾಯಂಕಾಲ 6.15ಕ್ಕೆ ರೈಲು ಹೊರಟರೆ ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ. ಈ ರೈಲು ಒಟ್ಟು 14 ಬೋಗಿಗಳನ್ನ ಒಳಗೊಂಡಿದ್ದು, 4 ದ್ವಿತೀಯ ದರ್ಜೆ ಚೇರ್ ಕಾರ ಬೋಗಿಗಳು, 8 ದೀನದಯಾಳ್ ಬೋಗಿಗಳು, 2 ದ್ವಿತೀಯ ದರ್ಜೆ ಲಗೇಜ್ ಬ್ರೇಕ್ ವ್ಯಾನ್ ಬೋಗಿಗಳನ್ನ ಹೊಂದಿದೆ.

    ಇಷ್ಟೊಂದು ವಿಳಂಬವಾಗಿದ್ದು ಯಾಕೆ?: 1996ರಲ್ಲಿ ಪ್ರಧಾನಿಯಾಗಿದ್ದ ಹೆಚ್.ಡಿ ದೇವೇಗೌಡರಿಂದ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ್ದರು. 1290 ಕೋಟಿ ರೂ. ವೆಚ್ಚದಲ್ಲಿ ಏಕಮುಖ ಸಂಚಾರ ರೈಲುಮಾರ್ಗಕ್ಕೆ ಶಂಕುಸ್ಥಾಪನೆಯಾಗಿತ್ತು. 2006ರಲ್ಲಿ ಹಾಸನ-ಶ್ರವಣಬೆಳಗೊಳ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟ ಆರಂಭವಾಯಿತು. ಜಮೀನು ವಿವಾದ, ಕೋರ್ಟ್ ತಗಾದೆ, ಹಣಕಾಸಿನ ಕೊರತೆಯಿಂದ ಕೆಲಸಕ್ಕೆ ಅಡ್ಡಿಯಾಯ್ತು. ಸೋಲೂರು-ತಿಪ್ಪಸಂದ್ರದ ಬಳಿ 14 ಎಕರೆ ವಿವಾದದಿಂದ 4 ಕಿ.ಮೀ ಕಾಮಗಾರಿ ಅಪೂರ್ಣವಾಗಿತ್ತು. ಕುಣಿಗಲ್ ಬಳಿ ವಿಜಯ್ ಮಲ್ಯ ಒಡೆತನದ 400 ಎಕರೆ ಜಾಗದಿಂದ ಮತ್ತೆ ವಿಳಂಬವಾಯ್ತು.

    ಸೋಲೂರು-ತಿಪ್ಪಸಂದ್ರದ ಬಳಿ ಬೃಹತ್ ಬಂಡೆ- 1/2 ಕಿ.ಮೀ ಸುರಂಗ ಮಾರ್ಗ ಆಗಿದೆ. ಮೊದಲಿದ್ದ ಮಾರ್ಗ ಬೆಂಗಳೂರು-ಮೈಸೂರು-ಹಾಸನ-259 ಕಿ.ಮೀ ಇತ್ತು. ಮತ್ತೊಂದು ಮಾರ್ಗ ಬೆಂಗಳೂರು-ಅರಸಿಕೆರೆ-ಹಾಸನ-213 ಕಿ.ಮೀ ಇತ್ತು. ಈಗ ಹೊಸ ಮಾರ್ಗ ಬೆಂಗಳೂರು-ಕುಣಿಗಲ್-ಹಾಸನ-172 ಕಿ.ಮೀಗೆ ಇಳಿದಿದೆ.

    ಟಿಕೆಟ್ ದರ :
    1. ಸೂಪರ್ ಫಾಸ್ಟ್ ರೈಲು
    > ಕಾರು ಬೋಗಿ-110 ರೂ
    > ಸಾಮಾನ್ಯ ಬೋಗಿ-95 ರೂ

    2. ಪ್ಯಾಸೇಂಜರ್ ರೈಲು
    > 40 ರೂ-70 ರೂ

    ಇಂಟರ್‍ಸಿಟಿ ರೈಲು : ಹಾಸನ-ಯಶವಂತಪುರ – ಬೆಳಗ್ಗೆ 6.15, ಬೆಳಗ್ಗೆ 9ಕ್ಕೆ

    ಇಂಟರ್‍ಸಿಟಿ ರೈಲು: ಯಶವಂತಪುರ-ಹಾಸನ – ಸಂಜೆ 6.15, ರಾತ್ರಿ 9 ಕ್ಕೆ

    ಪ್ಯಾಸೆಂಜರ್ ರೈಲು: ಯಶವಂತಪುರ-ಹಾಸನ – ಬೆಳಗ್ಗೆ 7.30, ಬೆಳಗ್ಗೆ 10.30ಕ್ಕೆ

    ಪ್ಯಾಸೆಂಜರ್ ರೈಲು: ಹಾಸನ-ಯಶವಂತಪುರ – ಮಧ್ಯಾಹ್ನ 12, 3.30ಕ್ಕೆ

    ಕುಡ್ಲಾ ಎಕ್ಸ್ ಪ್ರೆಸ್: ಯಶವಂತಪುರ-ಹಾಸನ-ಮಂಗಳೂರು ( ಸೋಮವಾರ, ಬುಧವಾರ, ಶುಕ್ರವಾರ ) ಯಶವಂತಪುರ-ಬೆಳಗ್ಗೆ 7ಕ್ಕೆ, ಹಾಸನಕ್ಕೆ ಬೆಳಗ್ಗೆ 9.45, ಮಂಗಳೂರಿಗೆ ಸಂಜೆ 4ಕ್ಕೆ ರೀಚ್

    ಕುಡ್ಲಾ ಎಕ್ಸ್ ಪ್ರೆಸ್: ಮಂಗಳೂರು-ಹಾಸನ-ಯಶವಂತಪುರ (ಮಂಗಳವಾರ, ಗುರುವಾರ, ಶನಿವಾರ) ಮಂಗಳೂರಿನಿಂದ ಬೆಳಗ್ಗೆ 10.50ಕ್ಕೆ, ಹಾಸನಕ್ಕೆ ಸಂಜೆ- 4ಗಂಟೆಗೆ, ಯಶವಂತಪುರಕ್ಕೆ ರಾತ್ರಿ 7.50ಕ್ಕೆ

    ನಿಲ್ದಾಣಗಳು: ಚಿಕ್ಕಬಾಣವಾರ-ನೆಲಮಂಗಲ, ಕುಣಿಗಲ್-ಯಡಿಯೂರು , ಆದಿಚುಂಚನಗಿರಿ-ಶ್ರವಣಬೆಳಗೊಳ, ಚನ್ನರಾಯಪಟ್ಟಣ-ಹಾಸನ