ನವದೆಹಲಿ: ಉತ್ತರ ಕರ್ನಾಟಕ ಜನರ ಬಹುದಿನಗಳ ಬೇಡಿಕೆ ಈಡೇರಿಕೆ ಸನ್ನಿಹಿತವಾಗಿದೆ. ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಹದಾಯಿ ನ್ಯಾಯಾಧಿಕರಣ ನೀಡಿದ ಐ ತೀರ್ಪುನ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಮಹದಾಯಿ ನ್ಯಾಯಾಧಿಕರಣ ನೀಡಿದ ಐ ತೀರ್ಪು ಪ್ರಶ್ನಿಸಿ ಕರ್ನಾಟಕ ಗೋವಾ ಮಹಾರಾಷ್ಟ್ರ ಸಲ್ಲಿಸಿದ ಅರ್ಜಿಯನ್ನು ಇಂದು ನ್ಯಾ.ಡಿ.ವೈ ಚಂದ್ರಚೂಡ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಆರಂಭದಲ್ಲಿ ಕರ್ನಾಟಕ ಪರ ವಾದ ಮಂಡಿಸಿದ ಅಡ್ವಕೇಟ್ ಜನರಲ್ ಪ್ರಭು ಲಿಂಗ ನಾವಡಗಿ ಸುಪ್ರೀಂಕೋರ್ಟ್ ಸುದೀರ್ಘ ವಿಚಾರಣೆಗೂ ಮುನ್ನ ನ್ಯಾಯಾಧಿಕರಣ ನೀಡಿದ ತೀರ್ಪಿಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು. ಅಂತಿಮ ಆದೇಶಕ್ಕೆ ಒಳಪಟ್ಟು ಹಂಚಿಕೆಯಾದ ನೀರಿನ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ನ್ಯಾ.ಡಿ.ವೈ ಚಂದ್ರಚೂಡ್ ಗೋವಾ ಮತ್ತು ಮಹಾರಾಷ್ಟ್ರದ ಅಭಿಪ್ರಾಯ ಕೇಳಿದರು. ಎರಡು ರಾಜ್ಯಗಳು ವಿರೋಧ ವ್ಯಕ್ತಪಡಿಸದ ಹಿನ್ನೆಲೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಅಂತಿಮ ಆದೇಶಕ್ಕೆ ಒಳಪಡುವಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಲು ನಿರ್ದೇಶನ ನೀಡಿತು. ಹೆಚ್ಚುವರಿ ನೀರಿನ ಬೇಡಿಕೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಬೇಸಿಗೆ ರಜೆ ಕಳೆದ ಬಳಿಕ ಜುಲೈ 15-16 ರಂದು ವಿಚಾರಣೆ ನಡೆಸಲಿದ್ದೇವೆ ಎಂದು ಕೋರ್ಟ್ ಸೂಚಿಸಿತು.
ಮಹದಾಯಿ ಐ ತೀರ್ಪಿನಲ್ಲಿ ಏನಿದೆ?
* ಕರ್ನಾಟಕದ ಪಾಲಿಗೆ ಮಹದಾಯಿ ನದಿಯಿಂದ 13.5 ಟಿಎಂಸಿ ನೀರು ಹಂಚಿಕೆ
* ಮಹದಾಯಿಯಿಂದ ಮಲಪ್ರಭೆಗೆ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ
* ಕುಡಿಯುವ ನೀರಿನ ಬಳಕೆಗಾಗಿ 4 ಟಿಎಂಸಿ ಎಂದ ನ್ಯಾಯಾಧಿಕರಣ
* ಮಹದಾಯಿ ನದಿಯಿಂದ ಕರ್ನಾಟಕಕ್ಕೆ 12 ಟಿಎಂಸಿ ನೀರು ಹಂಚಿಕೆ
* ಬಂಡೂರ ಯೋಜನೆಗೆ ಒಟ್ಟು 2.18 ಟಿಎಂಸಿ ನೀರು ಹಂಚಿಕೆ
* ಕಳಸಾ ಯೋಜನೆಗೆ ಒಟ್ಟು 1.72 ಟಿಎಂಸಿ ನೀರು ಹಂಚಿದ ಟ್ರಿಬ್ಯುನಲ್
* ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು
* ಕಳಸಾ ಯೋಜನೆಗೆ ಒಟ್ಟು 1.72 ಟಿಎಂಸಿ ನೀರು ಹಂಚಿದ ಟ್ರಿಬ್ಯುನಲ್
* ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು
* ಮಹದಾಯಿ ನದಿ ಕಣಿವೆಯಲ್ಲಿ ಬಳಸಲು 1.5 ಟಿಎಂಸಿ ನೀರು ಹಂಚಿಕೆ ನ್ಯಾಯಾಧಿಕರಣ ಮಾಡಿತ್ತು
ಗೆಜೆಟ್ ನೋಟಿಫಿಕೇಷನ್ ನಿಂದ ಏನು ಲಾಭ:
* ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ಜಲ ಆಯೋಗದಿಂದ ನೋಟಿಫಿಕೇಷನ್
* ಅಧಿಸೂಚನೆಯಿಂದ ರಾಜ್ಯಕ್ಕೆ ಹಂಚಿಕೆಯಾದ ನೀರು ಯಾವುದೇ ವಿರೋಧವಿಲ್ಲದೇ ಬಳಕೆ ಮಾಡಿಕೊಳ್ಳಬಹುದು
* ಇದಕ್ಕೂ ಮೊದಲ ನೀರಿನ ಬಳಕೆಗೆ ಯೋಜನೆಗಳನ್ನು ರೂಪಿಸಬಹುದು
* ನೋಟಿಪಿಕೇಷನ್ ನಿಂದ ಕೇಂದ್ರ ಸರ್ಕಾರದಿಂದ ರಾಜ್ಯದ ಯೋಜನೆಗಳಿಗೆ ಶೀಘ್ರ ಒಪ್ಪಿಗೆ ಸಿಗಲಿದೆ
ನವದೆಹಲಿ: 8 ವರ್ಷದ ಹಿಂದೆ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ನಿರ್ಭಯಾ ತೀರ್ಪು ಪ್ರಶ್ನಿಸಿ ದೋಷಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ್ದು ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ, ವಿಚಾರಣೆಯ ಪೀಠದಿಂದ ದಿಢೀರ್ ಹಿಂದೆ ಸರಿದ ಕಾರಣ ಇಂದು ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರ ಪೀಠದಲ್ಲಿ ನಡೆಯಿತು.
ಈ ಹಿಂದೆ ಜಸ್ಟೀಸ್ ಬೊಬ್ಡೆ ಅವರ ಅಣ್ಣನ ಮಗ ಅರ್ಜುನ್ ಬೊಬ್ಡೆ ನಿರ್ಭಯಾ ತಾಯಿ ಪರವಾಗಿ ವಾದ ಮಂಡನೆ ಮಾಡಿದರು. ಹೀಗಾಗಿ ವಿಚಾರಣೆ ಪಾರದರ್ಶಕವಾಗಿ ನಡೆಯಲಿ ಎನ್ನುವ ಉದ್ದೇಶದಿಂದ ಸಿಜೆ ಬೊಬ್ಡೆ ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.
ಏನಿದು ಪ್ರಕರಣ?
2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು.
ಆದರೆ ಆತನ ಕ್ಷಮದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು. 2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು.
ಮುಂಬೈ: ಮಹಾರಾಷ್ಟ್ರದ ಅಚ್ಚರಿ ಸರ್ಕಾರಕ್ಕೆ ಇಂದು ನಿರ್ಣಾಯಕ ದಿನ. ಶಿವಸೇನೆಯ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ. ಅಲ್ಲದೆ ಸರ್ಕಾರ ರಚನೆ ಬಗ್ಗೆ ಇದ್ದ ಗೊಂದಲಗಳು ಕೂಡ ಬಗೆಹರಿಯಲಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ನಡೆ ಪ್ರಶ್ನಿಸಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮುಂದುವರಿಸಲಿದೆ. ನ್ಯಾ. ಎನ್.ವಿ ರಮಣ ನೇತೃತ್ವದ ವಿಚಾರಣೆ ನಡೆಯಲಿದ್ದು ಇಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಸರ್ಕಾರದ ಪರ ವಕೀಲರು ಸರ್ಕಾರ ರಚನೆಗೆ ಸಂಬಂಧಿಸಿದ ಎರಡು ಪ್ರಮುಖ ಪತ್ರಗಳನ್ನು ಸುಪ್ರೀಂಕೋರ್ಟಿಗೆ ನೀಡಲಿದ್ದಾರೆ.
ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಪತ್ರ ಸಲ್ಲಿಸಲು ಸುಪ್ರೀಂಕೋರ್ಟ್ ಕೇಳಿದ್ದು ಬಿಜೆಪಿ ಮತ್ತು ಮಹಾರಾಷ್ಟ್ರ ರಾಜ್ಯಪಾಲರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಬಿಜೆಪಿ ಮತ್ತು ಎನ್‍ಸಿಪಿ ಶಾಸಕರ ಬೆಂಬಲ ಪತ್ರದೊಂದಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು ಯಾವಾಗ ಅನ್ನೋದರ ಬಗ್ಗೆ ಫಡ್ನವಿಸ್ ಸುಪ್ರೀಂಕೋರ್ಟ್ ಅಫಿಡವಿಟ್ ಸಲ್ಲಿಸಬೇಕಿದೆ. ಇತ್ತ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನಿಸಿದ್ದು ಹಾಗೂ ರಾಷ್ಟ್ರಪತಿ ಆಳ್ವಿಕೆ ಹಿಂದೆ ಪಡೆದ ಪ್ರಕ್ರಿಯೆ ಏನು ಅನ್ನೋದರ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಬೇಕಿದೆ. ಈ ಎರಡು ಪತ್ರಗಳಿಂದ ರಾತ್ರೋರಾತ್ರಿ ಸರ್ಕಾರ ರಚನೆ ಆಗಿದ್ದು ಹೇಗೆ ಅನ್ನೋ ಮಹಾ ಸೀಕ್ರೆಟ್ ಅಧಿಕೃತವಾಗಿ ಬಯಲಾಗುವ ಸಂಭವ ಇದೆ.
ಸುಪ್ರೀಂಕೋರ್ಟ್, ಬಹುಮತ ಸಾಬೀತಿಗೆ ಸೂಚಿಸುವ ಸಾಧ್ಯತೆಗಳಿದ್ದು ಬಿಜೆಪಿ ಈಗಾಗಲೇ ಕಾರ್ಯಪವೃತ್ತವಾಗಿದೆ. ಕಾಂಗ್ರೆಸ್, ಶಿವಸೇನೆ ಸೇರಿ ಅಜಿತ್ ಪವಾರ್ ಮೂಲಕ ಎನ್‍ಸಿಪಿ ಶಾಸಕರಿಗೆ ಕಲಮಪಡೆ ನಾಯಕರು ಗಾಳ ಹಾಕುತ್ತಿದ್ದಾರೆ. ಹೇಗಾದರೂ ಮಾಡಿ ಬಹುಮತ ತೋರಿಸಬೇಕು ಎಂದು ಬಿಜೆಪಿ ಹೆಣಗಾಡುತ್ತಿದೆ. ಈ ನಡುವೆ ಸೋಮವಾರ ತಡರಾತ್ರಿ ಫಡ್ನವಿಸ್-ಅಜಿತ್ ಪವಾರ್ ಮಹತ್ವದ ಸಭೆ ನಡೆಸಿದರು.
ಬಿಜೆಪಿಯ ರಣತಂತ್ರಗಳಿಗೆ ಚೆಕ್‍ಮೆಟ್ ಇಡಲು ಕರ್ನಾಟಕದ ಟ್ರಬಲ್ ಶೂಟರ್ ಡಿಕೆಶಿಯನ್ನು ಎಐಸಿಸಿ ರಂಗಕ್ಕೆ ಇಳಿಸಿದೆ. ನಿನ್ನೆ ತಡರಾತ್ರಿ ಡಿಕೆಶಿ ಮುಂಬೈಗೆ ಬಂದಿಳಿದಿದ್ದು, ಇಡೀ ರಾತ್ರಿ ಶಾಸಕರನ್ನು ರಕ್ಷಿಸುವ ಬಗ್ಗೆ ಮಹಾ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದನ್ನೂ ಓದಿ; ಭಾನುವಾರ ನಮಗೂ ರಜೆ ಆದರೂ ವಿಚಾರಣೆ ಮಾಡುತ್ತಿದ್ದೇವೆ – ಸುಪ್ರೀಂ ಕೋರ್ಟ್
ಮತ್ತೊಂದೆಡೆ ರೆಸಾರ್ಟಿಗೆ ತೆರಳಿರುವ ಮುಖಂಡರು ಶಾಸಕರ ಜೊತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಮತ್ತು ಶಾಸಕರನ್ನು ಒಟ್ಟಾಗಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ, ಅಜಿತ್ ಪವಾರ್ ಬಿಜೆಪಿ ಜೊತೆ ಗುರುತಿಸಿಕೊಂಡಿಯೂ ತಾನಿನ್ನೂ ಎನ್‍ಸಿಪಿಯಲ್ಲೇ ಇದ್ದೇನೆ. ತಮ್ಮ ನಾಯಕ ಶರದ್ ಪವಾರ್, ನಾವು ಬಿಜೆಪಿ ಜೊತೆಗೂಡಿ ಸ್ಥಿರ ಸರ್ಕಾರ ನೀಡುತ್ತೇವೆ ಎಂದು ಟ್ವೀಟ್ ಮಾಡಿ ಗೊಂದಲ ಬೇರೆ ಸೃಷ್ಟಿಸಿದ್ದಾರೆ. ಆದರೆ ಶರದ್ ಪವಾರ್ ಇದನ್ನು ತಳ್ಳಿಹಾಕಿದ್ದು, ಬಿಜೆಪಿ ಜೊತೆ ಸೇರೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಬಹುಮತ ಸಾಬೀತಿಗೆ ಸುಪ್ರೀಂಕೋರ್ಟ್ ಯಾವಾಗ ಸೂಚಿಸುತ್ತೋ ಅನ್ನೋ ಆತಂಕದಲ್ಲಿ ಬಿಜೆಪಿ ಇದ್ದರೆ ಮತ್ತೊಂದು ಕಡೆ ಶಾಸಕರನ್ನು ಉಳಿಸಿಕೊಂಡರೆ ಎಂದು ಶಿವಸೇನೆ ಕಾಂಗ್ರೆಸ್ ಎನ್ ಸಿಪಿ ತಂತ್ರಗಳನ್ನು ಮಾಡುತ್ತಿದೆ. ಇದೆಲ್ಲದರ ನಡುವೆ ಇಂದು ಸುಪ್ರೀಂಕೋರ್ಟ್ ನೀಡುವ ತೀರ್ಪು ಮಹತ್ವದಾಗಿದ್ದು ಏನು ಹೇಳುತ್ತೆ ಎಂದು ಕಾದು ನೋಡಬೇಕು. ಇದನ್ನೂ ಓದಿ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ
ನವದೆಹಲಿ: ಶಬರಿಮಲೆ ಜೊತೆಗೆ ಇಂದು ಮತ್ತೊಂದು ಮಹತ್ವದ ತೀರ್ಪು ಹೊರಬೀಳಲಿದೆ.
ರಫೇಲ್ ಡೀಲ್ ಸಂಬಂಧ ಮೋದಿ ಸರ್ಕಾರಕ್ಕೆ ಕ್ಲೀನ್‍ಚಿಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಇದರ ಜೊತೆಗೆ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಕೂಡ ಹೊರಬೀಳುವ ಸಂಭವ ಇದೆ. ಚೌಕಿದಾರ್ ಚೋರ್ ಹೈ ಎಂಬ ರಾಹುಲ್ ಗಾಂಧಿ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿತ್ತು. ಕೋರ್ಟ್ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ರಾಹುಲ್ ಗಾಂಧಿ ಕ್ಷಮೆ ಕೂಡ ಕೇಳಿದ್ದರು. ಇದನ್ನೂ ಓದಿ: ರಫೇಲ್ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಅಸ್ತು
ಏನಿದು ಪ್ರಕರಣ?:
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ವಕೀಲ ಎಂ.ಎಲ್ ಶರ್ಮಾ, ವಿನೀತಾ ದಾಂಡ, ಆಪ್ ನಾಯಕ ಸಂಜಯ್ ಸಿಂಗ್ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಸಲ್ಲಿಸಿದ್ದರು. ರಫೇಲ್ ಒಪ್ಪಂದವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ವಕೀಲರು ಆಗ್ರಹಿಸಿದ್ದರು. ಈ ಅರ್ಜಿಗಳನ್ನು ಒಟ್ಟಾಗಿಸಿದ್ದ ಮುಖ್ಯ.ನ್ಯಾ ರಂಜನ್ ಗೋಗಯ್ ನೇತೃತ್ವದ ನ್ಯಾ. ಎಸ್‍ಕೆ ಕೌಲ್, ನ್ಯಾ. ಕೆಎಂ ಜೋಸೆಫ್ ಅವರಿದ್ದ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿತ್ತು.
2018ರ ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಡಿಸೆಂಬರ್ 14ರಂದು ತೀರ್ಪು ಪ್ರಕಟಿಸಿ ಎಲ್ಲ ಅರ್ಜಿಗಳನ್ನು ವಜಾಗೊಳಿಸಿತ್ತು. ಆ ಬಳಿಕ ಯಶವಂತ್ ಸಿನ್ಹಾ, ಅರುಣ್ ಶೌರಿ, ವಕೀಲ ಪ್ರಶಾಂತ್ ಭೂಷಣ್ ಅವರು 21 ಫೆಬ್ರವರಿ 2019ರಂದು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ 10 ಮೇ 2019ರಂದು ಮೇಲ್ಮನವಿ ಅರ್ಜಿಯ ತೀರ್ಪು ಕಾಯ್ದಿರಿಸಿತ್ತು. ಇದನ್ನೂ ಓದಿ: ರಫೇಲ್ ತೀರ್ಪಿನಲ್ಲಿ ಸಿಎಜಿ ಉಲ್ಲೇಖ: ತಿದ್ದುಪಡಿಗಾಗಿ ಕೇಂದ್ರದಿಂದ ಅಫಿಡವಿಟ್
ಬೆಂಗಳೂರು: ಅಯೋಧ್ಯೆ, ಅನರ್ಹರ ಕೇಸ್ ಬಳಿಕ ಸುಪ್ರೀಂಕೋರ್ಟಿನಲ್ಲಿ ಇಂದು ಅಯ್ಯಪ್ಪನ ಕೇಸ್ ತೀರ್ಪು ಬರುತ್ತಿದೆ. ದೇಶದ ಜನತೆ ಬಹುದಿನಗಳಿಂದ ಕಾಯುತ್ತಿರುವ ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ಸಂಬಂಧ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಲಿದೆ. ಫೆಬ್ರವರಿ 6ರಂದೇ ವಿಚಾರಣೆ ಮುಗಿಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.
2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು.
ಸುಪ್ರೀಂ ತೀರ್ಪು ಏನಾಗಿತ್ತು..?
5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.
ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅಮ್ಮಿಣಿ ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
ಇದೀಗ ಸುಪ್ರೀಂಕೋರ್ಟ್ ತೀರ್ಪು ಮತ್ತು ಇದೇ 16ರಿಂದ ಮಂಡಲ ಪೂಜೆ ಪ್ರಯುಕ್ತ ಅಯ್ಯಪ್ಪ ದೇಗುಲ ತೆರೆಯುತ್ತಿರುವ ಹಿನ್ನೆಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಶಬರಿಮಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಪ್ರೀಂಕೋರ್ಟಿನ ಅಯೋಧ್ಯೆ ತೀರ್ಪನ್ನು ಗೌರವಿಸಿದ ರೀತಿಯಲ್ಲೇ ಶಬರಿಮಲೆ ಪ್ರಕರಣದಲ್ಲಿಯೂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕೆಂದು ಕೇರಳ ಮುಜುರಾಯಿ ಸಚಿವ ಸುರೇಂದ್ರನ್, ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ: ಮೂರು ತಿಂಗಳ ಮೊದಲೇ ತೀರ್ಪು ಬಂದಿದ್ದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತಿತ್ತು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ತೀರ್ಪು ಪ್ರಕಟವಾಗಿದ್ದು, ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ. ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಚುನಾವಣೆ ನಿರ್ಬಂಧ ಹೇರಲು ಬರುವುದಿಲ್ಲ, ಅದೇ ರೀತಿ ತೀರ್ಪು ಬಂದಿದೆ ಎಂದರು. ಇದನ್ನೂ ಓದಿ: ನಮ್ಮ ರಾಜಕೀಯ ಭವಿಷ್ಯ ಮುಗಿಯುತ್ತೆ ಎಂದವರಿಗೆ ಸುಪ್ರೀಂ ಆದೇಶವೇ ತಕ್ಕ ಉತ್ತರ – ವಿಶ್ವನಾಥ್
ಅನರ್ಹರು ಮರಳಿ ಗೆಲುವು ದಾಖಲಿಸುವ ತನಕ ಸಾವಿಂಧಾನಿಕ ಹುದ್ದೆ ಅಲಂಕರಿಸಲು ಬರುವುದಿಲ್ಲ. ಉಪಚುನಾವಣೆಯಲ್ಲಿ ಗೆದ್ದ ಬಳಿಕ ಅವರೆಲ್ಲರಿಗೂ ಸಾಂವಿಧಾನಿಕ ಹುದ್ದೆ ಸಿಗಲಿದೆ. ಮೂರು ತಿಂಗಳ ಮೊದಲೇ ತೀರ್ಪು ಬಂದಿದ್ದರೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತಿತ್ತು. ತೀರ್ಪು ತಡವಾಗಿ ಬಂದಿದ್ದರಿಂದ ಅನರ್ಹರಿಗೆ ಸ್ವಲ್ಪ ಕಷ್ಟವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿ ಸರ್ಕಾರ ಅಕ್ರಮ ಸರ್ಕಾರ ಎಂಬುದು ಸಾಬೀತಾಗಿದೆ: ದಿನೇಶ್ ಗುಂಡೂರಾವ್
ಬಿ ಫಾರ್ಮ್ ಕೊಟ್ಟ ಮೇಲೇಯೇ ಅನರ್ಹರು ಬಿಜೆಪಿ ಸೇರಲಿದ್ದಾರೆ. ಪಕ್ಷದ ಹಿರಿಯ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ. ಅನರ್ಹರನ್ನು ಜತೆಗೆ ಕರೆದೊಯ್ಯುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಟಿಕೆಟ್ ಸಿಗದ ಬಿಜೆಪಿ ಅಸಮಾಧಾನಿತರು ರಾಜಿ ಆಗುತ್ತಾರೆ. ಅಸಮಾಧಾನಿತರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತೇವೆ. ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಸ್ಪೀಕರ್ ಷಡ್ಯಂತ್ರಕ್ಕೆ ಸುಪ್ರೀಂ ತಕ್ಕ ತೀರ್ಪು ಕೊಟ್ಟಿದೆ: ಸಿಎಂ ಬಿಎಸ್‍ವೈ
– ಶತಮಾನದ ಭೂ ವ್ಯಾಜ್ಯದ ಸಕ್ಸಸ್‍ಗೆ ಪರಾಸರನ್ ಕಾರಣ
– ಎರಡನೇ ‘ಪತ್ನಿ’ಯಿಂದ ಅಯೋಧ್ಯೆ ಕೇಸ್ ಗೆಲುವು
ಬೆಂಗಳೂರು: ರಾಮಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಭೂ ವ್ಯಾಜ್ಯ ಕೇಸ್ ಇತ್ಯರ್ಥವೇನೋ ಆಯ್ತು. ಆದರೆ ಶತಮಾನದ ವ್ಯಾಜ್ಯದ ಸಕ್ಸಸ್‍ಗೆ ಕಾರಣವಾಗಿದ್ದು ಯಾರು ಎಂಬ ಪ್ರಶ್ನೆಗೆ ಇಂಟ್ರೆಸ್ಟಿಂಗ್ ಉತ್ತರ ಇಲ್ಲಿದೆ.
ಹೌದು. ದಶಕಗಳ ಕಾನೂನು ಹೋರಾಟದ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯ ವಿವಾದ ಕೊನೆಗೂ ಬಗೆಹರಿದಿದೆ. ರಾಮಜನ್ಮಭೂಮಿ ಶ್ರೀರಾಮನಿಗೆ ಸೇರಿದ್ದು. ಇದು ಬೇರೆ ಯಾರಿಗೂ ಸೇರಲ್ಲ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಶಿಯಾ, ವಕ್ಫ್, ನಿರ್ಮೋಹಿ ಅಖಾರರ ಪರ ಖ್ಯಾತನಾಮ ವಕೀಲರು ಮಂಡಿಸಿದ ವಾದವನ್ನು ಮೆಟ್ಟಿನಿಂತು ರಾಮಲಲ್ಲಾ ಕೇಸ್ ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ 92 ವರ್ಷ ಹಿರಿಯ ವಕೀಲ ಕೆ ಪರಾಸರನ್.
ಕೆ ಪರಾಸರನ್ ಅವರು ಕಾನೂನು ಲೋಕದ ಹೀರೋ. ಇವರಿಗೆ ಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸೋದು ಅಂದರೆ ಪಂಚಪ್ರಾಣ. `1949ರಲ್ಲಿ ನನಗೆ ಮದುವೆ ಆಯ್ತು. ಇದಾದ ಮರುವರ್ಷವೇ ಮತ್ತೊಂದು ಮದುವೆ ಮಾಡಿಕೊಂಡೆ. ಎರಡನೇ ಹೆಂಡತಿ ಹೆಸರು `ಕಾನೂನು’. ಯಾವ ಪುರುಷನಿಗಾದ್ರೂ ಎರಡನೇ ಹೆಂಡತಿ ಮೇಲೆ ಮೋಹ. ನನಗೂ ಮೊದಲ ಹೆಂಡತಿಗಿಂತ 2ನೇ ಹೆಂಡತಿ ಮೇಲೆಯೇ ಮೋಹ. ನಾನು ನನ್ನ ಜೀವನದಲ್ಲಿ ನಿಜವಾದ ಪತ್ನಿಗಿಂತ ಕಾನೂನನ್ನೇ ಹೆಚ್ಚು ಪ್ರೀತಿಸಿದೆ’ ಎಂದು ಹಿರಿಯ ವಕೀಲ ಪರಾಸರನ್ ಹೇಳುತ್ತಾರೆ. ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ
ಇಂತಹ ಕಾನೂನು ವ್ಯಾಮೋಹಿ ಪರಾಸರನ್, ತಮ್ಮ 92ನೇ ವಯಸ್ಸಿನಲ್ಲಿಯೂ ರಾಮಲಲ್ಲಾ ಪರ ಸುಪ್ರೀಂಕೋರ್ಟಿನಲ್ಲಿ ಪ್ರಖರ ವಾದ ಮಂಡಿಸಿ, ಕೇಸನ್ನು ಗೆಲ್ಲಿಸಿದ್ದಾರೆ. ಇದೀಗ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಮಲಲ್ಲಾ ವಿರಾಜಮಾನ್ ಪರ ಸುಪ್ರೀಂಕೋರ್ಟಿನಲ್ಲಿ 40 ದಿನಗಳ ಕಾಲ ಪ್ರಖರ ವಾದ ಮಂಡಿಸಿದರು. 92 ವರ್ಷದ ಪರಾಸರನ್ ಕೋರ್ಟ್ ಹಾಲ್‍ನಲ್ಲಿ ನಿಂತು ವಾದ ಮಂಡಿಸುತ್ತಿದ್ದರೆ, ನ್ಯಾಯಮೂರ್ತಿಗಳು ತಾವು ದಯವಿಟ್ಟು ಕುಳಿತು ವಾದ ಮಾಡಿ ಎಂದು ಕೇಳಿಕೊಳ್ಳುತ್ತಿದ್ರು. ಆದರೆ ಪರಾಸರನ್ ಮಾತ್ರ ನಿಂತು ವಾದ ಮಂಡಿಸೋದು ನಮ್ಮ ಸಂಸ್ಕೃತಿ ಎಂದು ಹೇಳಿ ವಾದಿಸಿದ್ದರು. ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷತೆ ಏನು? ಹೇಗಿರಲಿದೆ ದೇವಾಲಯ?
ರಾಮಲಲ್ಲಾ ಪರ ವಾದ ಮಂಡಿಸುವ ವೇಳೆ ಕೆ ಪರಾಸರನ್ ಅವರು ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ಎಂದು ಹೇಳುತ್ತಾರೆ. ಅಂದರೆ ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂದರ್ಥ. ಶ್ರೀರಾಮನಜನ್ಮಭೂಮಿ ಕೂಡ ನಮಗೆ ಮುಖ್ಯ. ರಾಮಲಲ್ಲಾಗೆ ರಾಮಜನ್ಮಭೂಮಿ ಸಿಗಬೇಕು ಎಂದು ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಮನಿಗೆ `ಪುರಾತತ್ವ’ ಆಧಾರ – 5 ಶತಮಾನಗಳ ವಿವಾದಕ್ಕೆ ಷರಾ ಬರೆದ ಸುಪ್ರೀಂ
ಕೋರ್ಟಿನಲ್ಲಿ ಪ್ರಕರಣ ಸಂಬಂಧ ವಾದ ಮಂಡನೆಯಲಿ ಪರಾಸರನ್ ಅವರು ವೇದಗಳನ್ನು, ಪುರಾಣಗಳನ್ನು ಕೂಡ ಉಲ್ಲೇಖಿಸುತ್ತಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳಲೇಬೇಕು ಎಂಬ ಉದ್ದೇಶದಿಂದ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದವರಲ್ಲಿ ಪರಾಸರನ್ ಸಹ ಒಬ್ಬರು. ಪ್ರತೀದಿನದ ಕೋರ್ಟ್ ಕಲಾಪಗಳಿಗೆ ಒಂದು ದಿನ ಮುಂಚಿತವಾಗಿಯೇ ಸಿದ್ಧಗೊಳ್ಳುವ ಪರಿಪಾಠವನ್ನು ಪರಾಸರನ್ ಅವರು ಅಳವಡಿಸಿಕೊಂಡಿದ್ದರು.
ಈ ವಾದ ಸರಣಿಯ ಸಂದರ್ಭದಲ್ಲಿ ಪಿ.ವಿ. ಯೋಗೇಶ್ವರನ್, ಅನಿರುದ್ ಶರ್ಮಾ, ಶ್ರೀಧರ್ ಪುಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಸರನ್ ಅವರಿಗೆ ಸಹಾಯ ಮಾಡುತ್ತಿದ್ದರು. ಪರಾಸರನ್ ಅವರು ಎಷ್ಟು ತಯಾರಾಗಿ ಕಲಾಪಕ್ಕೆ ಹಾಜರಾಗುತ್ತಿದ್ದರು ಎಂದರೆ ನ್ಯಾಯಾಧೀಶರು ಮತ್ತು ವಕೀಲರು ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಕೇಳಿದರೂ ಅವರು ಅಲ್ಲೇ ನಿಖರವಾಗಿ ಉತ್ತರಿಸಿ ವಾದಿಸುತ್ತಿದ್ದರು. ವಯಸ್ಸು ಆಗಿದ್ದರೂ ಅವರ ಜ್ಞಾಪಕ ಶಕ್ತಿ ಕಲಾಪ ವೀಕ್ಷಿಸುತ್ತಿದ್ದ ಯುವ ವಕೀಲರ ಅಚ್ಚರಿಗೆ ಕಾರಣವಾಗಿತ್ತು.
ಆದರೆ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಸರನ್ ಅವರು ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಪರಾಸರನ್ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್ ಧವನ್ ಅವರು. ಧವನ್ ಸುಪ್ರೀಂ ಕೋರ್ಟಿನ ಪ್ರಮುಖ ವಕೀಲರು. ಹೀಗಾಗಿ ಎದುರಾಳಿಗಳ ಮೇಲೆ ಲಾ ಪಾಯಿಂಟ್ ಎತ್ತಿ ವಕೀಲರನ್ನು ಕಕ್ಕಾಬಿಕ್ಕಿ ಮಾಡುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ. ಧವನ್ ಕಾಗದ ಪತ್ರವನ್ನು ಹರಿದು ಹಾಕಿದ್ದರೂ ಪರಾಸರನ್ ಅವರು ತಾಳ್ಮೆ ಕಳೆದುಕೊಂಡಿರಲಿಲ್ಲ. ಹಿಂದೂ ಕಡೆಯ ವಕೀಲರ ವಾದ ಮೂರ್ಖತನದಿಂದ ಕೂಡಿದ್ದು ಎಂದು ಹೇಳಿದರು ಪರಾಸರನ್ ಶಾಂತವಾಗಿದ್ದರು.
ಅಕ್ಟೋಬರ್ 16ರಂದು ಜನ್ಮಭೂಮಿ ಪ್ರಕರಣದ ವಿಚಾರಣೆ ಮುಕ್ತಾಯವಾದ ಬಳಿಕ ಪರಾಸರನ್ ಅವರು ನ್ಯಾಯಾಲಯದ ಹೊರಭಾಗದಲ್ಲಿ 15 ನಿಮಿಷಗಳ ಕಾಲ ರಾಜೀವ್ ಧವನ್ ಅವರಿಗಾಗಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ರಾಜೀವ್ ಧವನ್ ಅವರು ಹೊರಗೆ ಬಂದು ಪರಾಸರನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಈ ಮೂಲಕ ಕೋರ್ಟಿನ ಒಳಗೆ ನಾವಿಬ್ಬರು ಎದುರಾಳಿಗಳಾಗಿದ್ದರೂ ಹೊರಗಡೆ ಮಾತ್ರ ಸ್ನೇಹಿತರು ಎಂದು ತೋರಿಸಿದ್ದರು. ಈ ಮೂಲಕ ಎಲ್ಲ ವಕೀಲರ ಮನಸ್ಸು ಗೆದ್ದಿದ್ದರು.
ಇಂತಹ ಕೆ ಪರಾಸರನ್, ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಕರಣದಲ್ಲಿ ಮಹಿಳೆಯರ ಪ್ರವೇಶದ ವಿರುದ್ಧವಾಗಿ ವಾದ ಮಂಡಿಸಿದ್ದಾರೆ. ಈ ಕುರಿತ ತೀರ್ಪು ಇನ್ನೂ ಬರಬೇಕಿದೆ. ಅಂದಹಾಗೇ, ಕೆ ಪರಾಸರನ್ ಅವರನ್ನು ಭಾರತೀಯ ಬಾರ್ ಅಸೋಸಿಯೇಷನ್‍ನ ಪಿತಾಮಹ ಅಂತಲೇ ಕರೆಯಲಾಗುತ್ತಿದೆ. 1927 ಅಕ್ಟೋಬರ್ 9ರಂದು ತಮಿಳುನಾಡಿನ ಅಯ್ಯಂಗಾರಿ ಕುಟುಂಬದಲ್ಲಿ ಜನಿಸಿದ ಪರಾಸರನ್, ತಮ್ಮ ಬಹುಕೇತ ಜೀವನವನ್ನು ಕೋರ್ಟ್ ಹಾಲ್‍ಗಳಲ್ಲೇ ಕಳೆದಿದ್ದಾರೆ. ಹಿಂದುತ್ವದ ಬಗ್ಗೆ ಅಪಾರ ಜ್ಞಾನವಿರುವ ಇವರು ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. 1983ರಿಂದ 1989ರ ತನಕ ಭಾರತ ಅಟಾರ್ನಿ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದರು.
ಕೆ ಪರಾಸರನ್ ಅವ್ರ ಕಾನೂನು ಸೇವೆ ಪರಿಗಣಿಸಿ ಭಾರತ ಸರ್ಕಾರ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಒಟ್ಟಿನಲ್ಲಿ ರಾಮನಜನ್ಮಭೂಮಿಯನ್ನು ರಾಮನಿಗೆ ಮರಳಿಸುವಲ್ಲಿ ಕೆ ಪರಾಸರನ್ ಪಾತ್ರವನ್ನು ಯಾರು ಮರೆಯುವಂತೆ ಇಲ್ಲ. ಇವರ ಜೀವನ ಪಥ ಕಾನೂನು ವಿದ್ಯಾರ್ಥಿಗಳಿಗೆ ಒಂದು ಪಾಠವಾಗಿದೆ.
– ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ- ಹೆಚ್‍ಡಿಕೆ
ಬೆಂಗಳೂರು: ಅಯೋಧ್ಯೆ ತೀರ್ಪು ಇಂದು ಹೊರಬಿದ್ದಿದ್ದು, ದೇಶಾದ್ಯಂತ ಜನ ಸುಪ್ರೀಂ ತೀರ್ಪನ್ನು ಸ್ವಾಗತಿಸುತ್ತಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತೀರ್ಪನ್ನು ಗೌರವಿಸೋಣ ಎಂದಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸುಪ್ರೀಂ ತೀರ್ಪನ್ನು ಗೌರವಪೂರ್ವಕವಾಗಿ ಸ್ವಾಗತಿಸಿದ್ದು, ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿಸೋಣ. ಇದು ಯಾರೊಬ್ಬರ ಗೆಲುವು ಅಥವಾ ಸೋಲು ಎಂದು ಭಾವಿಸಬೇಡಿ. ಉದ್ವೇಗಕ್ಕೆ ಒಳಗಾಗಬೇಡಿ, ಯಾರೂ ವಿಜೃಂಭಿಸಬೇಡಿ. ಸಮಾಜದ ಸಾಮರಸ್ಯ ಕದಡದೆ, ಶಾಂತಿ ಕಾಪಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಈ ಬಗ್ಗೆ ಟ್ವೀಟ್ ಮಾಡಿ, ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ “ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ” ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ ಎಂದು ಬರೆದುಕೊಂಡಿದ್ದಾರೆ.
ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ. ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ "ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ…" ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 9, 2019
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ ಎಂದು ಹೇಳಿದ್ದಾರೆ.
ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವ್ಯಾಜ್ಯದ ಸುಪ್ರೀಮ್ ಕೋರ್ಟ್ ತೀರ್ಪನ್ನು ಗೌರವಿಸೋಣ. ಪ್ರಜಾಪ್ರಭುತ್ವದ ಧರ್ಮವಾದ ಸಂವಿಧಾನದ ಮೇಲೆ ಭರವಸೆ ಇಡೋಣ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡೋಣ.#Ayodhya#BabriMasjid
ತೀರ್ಪಿನ ಪ್ರಮುಖ ಅಂಶಗಳು:
ಮುಸ್ಲಿಮರಿಗೆ 5 ಎಕರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.
ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.
ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. 2ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಕೇವಲ ಪುರಾತತ್ವ ಸಾಕ್ಷ್ಯವನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ.
ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡುತ್ತೇವೆ. 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1856ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.
ಮಸೀದಿಯ ಕೆಳಗಡೆ ಹಿಂದೂ ರಚನೆ ಇದೆ ಅಂತ ನಂಬಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕಿಸಿ ಬೇಲಿ ಹಾಕಿಸಿದ್ದರು. ಮಸೀದಿಯ ಒಳಗೆ ಮುಸ್ಲಿಮರು, ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು.
ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾರದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾರಕ್ಕೆ ಪ್ರಾತಿನಿಧ್ಯ ನೀಡಬೇಕು.
ನವದೆಹಲಿ: ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ಬಾಕಿ ಇರುವಾಗಲೇ ಬೈ ಎಲೆಕ್ಷನ್ ಘೋಷಣೆಯಾಗಿದ್ದು ಅನರ್ಹ ಶಾಸಕರ ಎದೆಯಲ್ಲಿ ಢವಢವ ಶುರವಾಗಿದೆ. ಅನರ್ಹ ಶಾಸಕರಿಗೆ ಇಂದು ನಿರ್ಣಾಯಕ ದಿನವಾಗಿದ್ದು ಸುಪ್ರೀಂಕೋರ್ಟಿನಲ್ಲಿ ಬಹುತೇಕ ಭವಿಷ್ಯ ನಿರ್ಧಾರ ಆಗಲಿದೆ. ಉಪಚುನಾವಣೆ ಸ್ವರ್ಧೆಗೆ ಸುಪ್ರೀಂಕೋರ್ಟ್ ಅವಕಾಶ ಕೊಡುತ್ತಾ ಇಲ್ವ ಅನ್ನೋದು ಇಂದು
ಉಪ ಚುನಾವಣೆ ಘೋಷಣೆ ಆಗಿದೆ. ಈ ನಡುವೆ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ರಾಜೀನಾಮೆ ನೀಡಿ ಅನರ್ಹಗೊಂಡಿದ್ದ 17 ಮಂದಿ ಅನರ್ಹ ಶಾಸಕರ ಅರ್ಜಿ ಇಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ. ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಲಿದ್ದು, ಉಪ ಚುನಾವಣೆಗೆ ಮಧ್ಯಂತರ ತಡೆ ನೀಡುತ್ತಾ..? ಅನರ್ಹರಿಗೆ ರಿಲೀಫ್ ನೀಡುವ ಎನ್ನುವ ಕುತೂಹಲ ಎದುರಾಗಿದೆ.
ಅನರ್ಹರ ಪರ ವಾದ ಏನಿರಬಹುದು?
ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅವರ ಆದೇಶವನ್ನು ರದ್ದು ಮಾಡಿ. ಸ್ಪೀಕರ್ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ನಮ್ಮ ರಾಜೀನಾಮೆ ಅಂಗಿಕರಿಸಲು ಸ್ಪೀಕರ್‍ಗೆ ಸೂಚನೆ ನೀಡಿ. ಅಲ್ಲದೆ ಪ್ರಕರಣ ಇತ್ಯರ್ಥ ಆಗೋವರೆಗೂ ಚುನಾವಣೆಗೆ ತಡೆ ನೀಡಿ. ಅಥವಾ ತುರ್ತಾಗಿ ಒಂದು ನಿರ್ಧಾರ ತೆಗೆದುಕೊಳ್ಳಿ. ಕೋರ್ಟ್ ಕೇಸ್ ಹಿನ್ನೆಲೆಯಲ್ಲಿ 2 ಕ್ಷೇತ್ರಗಳಲ್ಲಿ ಎಲೆಕ್ಷನ್ ಇಲ್ಲ. ನಮ್ಮ ಪ್ರಕರಣವೂ ಬಾಕಿ ಇದೆ. ಹೀಗಿರುವಾಗ ಉಪ ಕದನ ಎಷ್ಟು ಸರಿ?. ತಮಿಳುನಾಡಿನಲ್ಲಿ ಅನರ್ಹರ ಸ್ಪರ್ಧೆಗೆ ಆಯೋಗ ಅವಕಾಶ ನೀಡಿತ್ತು. ನಮಗೂ ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಿ ಎಂಬ ಈ ಅಂಶಗಳನ್ನು ಇಂದು ವಿಚಾರಣೆ ವೇಳೆ ಕೋರ್ಟಿನಲ್ಲಿ ಪ್ರಸ್ತಾಪಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮೊನ್ನೆ ರಾತ್ರಿಯೇ ನವದೆಹಲಿ ತಲುಪಿರುವ ಎಲ್ಲಾ 17 ಅನರ್ಹ ಶಾಸಕರು ತಮ್ಮ ಪರ ವಕೀಲ ಮುಕುಲ್ ರೊಹ್ಟಗಿ ಜೊತೆ ಚರ್ಚೆ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ತಮ್ಮನ್ನು ಭಾಗಿದಾರನ್ನಾಗಿ ಮಾಡುವಂತೆ ಕೋರಿದ್ದು, ಪ್ರಕರಣದ ವಿಚಾರಣೆ ವಿಳಂಬ ಮಾಡಲು ಪ್ರಯತ್ನ ಮಾಡಲಿದೆ.
ಕಾಂಗ್ರೆಸ್ ವಾದ ಏನಿರಬಹುದು?
17 ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸ್ಪೀಕರ್ ಅವರ ಅನರ್ಹತೆ ಆದೇಶ ಸರಿಯಾಗಿದೆ. ಚುನಾವಣೆಯಲ್ಲಿ ಸ್ವರ್ಧಿಸಲು ಅವಕಾಶ ನೀಡಬಾರದು. ಮತ್ತಷ್ಟು ಮಾಹಿತಿ ಕೋರ್ಟ್ ಗಮನಕ್ಕೆ ತರಬೇಕು. ನಮಗೆ ವಾದ ಮಂಡಿಸಲು ಕಾಲಾವಕಾಶ ಕೊಡಿ ಎಂದು ಕಾಂಗ್ರೆಸ್ ಪರ ವಕೀಲರು ವಾದ ಮಂಡನೆ ಮಾಡಬಹುದು.
ಅನರ್ಹತೆ ಪ್ರಕರಣದಲ್ಲಿ ಸಾಕಷ್ಟು ಚರ್ಚಾತ್ಮಕ ವಿಷಯಗಳಿದ್ದು, ಇಂದೇ ವಾದ ಪ್ರತಿವಾದದ ವಿಚಾರಣೆ ನಡೆದು ತೀರ್ಪು ಹೊರಬರೊದು ಡೌಟು ಎನ್ನಲಾಗುತ್ತಿದೆ. ಈಗಾಗಲೇ ಬೈ ಎಲೆಕ್ಷನ್ ಘೋಷಣೆಯಾಗಿದ್ದು ಇಂದು ನೋಟಿಫಿಕೇಷನ್ ಕೂಡ ಆಗಲಿದೆ. ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ಪ್ರತಿ ನಿಮಿಷವೂ ಅನರ್ಹ ಶಾಸಕರಿಗೆ ಮುಖ್ಯ ಆಗಿದೆ. ಹೀಗಾಗಿ ಅನರ್ಹ ಶಾಸಕರು ಪ್ರತಿಕ್ಷಣವೂ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.
ಬೆಂಗಳೂರು: ಅಕ್ಟೋಬರ್ 21ಕ್ಕೆ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅನರ್ಹ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.
ಅರಣ್ಯ ಭವನದ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಸುವ ಮೂಲಕ ಬಿಎಸ್‍ವೈ, ಅನರ್ಹ ಶಾಸಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಭೆಯಲ್ಲಿ ಜೆಡಿಎಸ್ ಅನರ್ಹ ಶಾಸಕ ಎಚ್ ವಿಶ್ವನಾಥ್ ಸೇರಿದಂತೆ ಎಲ್ಲಾ ಅನರ್ಹ ಶಾಸಕರು ಹಾಜರಾಗಿದ್ದಾರೆ. ಅಲ್ಲದೆ ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ್ ಸವದಿ ಕೂಡ ಯಡಿಯೂರಪ್ಪ ಜೊತೆಯಲ್ಲೇ ಇದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಕಾನೂನು ತಜ್ಞರ ಜೊತೆಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಾರಿ ಅತೃಪ್ತರನ್ನ ಕೈ ಬಿಡುವ ಪ್ರಶ್ನೆಯೇ ಇಲ್ಲ. ನೀವ್ಯಾರೂ ಹೆದರಬೇಡಿ ಎಂದು ಬಿಎಸ್‍ವೈ ಅಭಯ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ಶಾಸಕ ಸ್ಥಾನದ ಅನರ್ಹತೆಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅನರ್ಹರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಅಲ್ಲದೆ ಸೋಮವಾರ ಪ್ರಕರಣ ವಿಚಾರಣೆಗೆ ಬಂದರು ಕೂಡ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಪ್ರಕರಣ ವಿಚಾರಣೆ ಮುಂದೂಡಲಾಗಿತ್ತು. ಈಗ ಸೆ.22ಕ್ಕೆ ವಿಚಾರಣೆ ನಡೆಯಲಿದ್ದು, ವಿಚಾರಣೆ ದೀರ್ಘ ಸಮಯ ತಗೆದುಕೊಂಡರೆ ಅತಂತ್ರರು ಚುನಾವಣೆಗೆ ನಿಲ್ಲುವ ಕನಸು ಭಗ್ನಗೊಳ್ಳಲಿದೆ.