– ಪ್ರಾಥಮಿಕ ತನಿಖಾ ವರದಿಯ ಕೆಲ ಅಂಶಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ
– ಕೇಂದ್ರ ಮತ್ತು ಡಿಜಿಸಿಎ ಪ್ರತಿಕ್ರಿಯೆ ಕೇಳಿದ ಕೋರ್ಟ್
ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತ (Air India Plane Crash)ದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸಲ್ಲಿಸಿದ ಪ್ರಾಥಮಿಕ ವರದಿಯ ಕೆಲವು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ದುರಂತದ ಬಗ್ಗೆ ಸ್ವತಂತ್ರ, ನ್ಯಾಯಯುತ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಕೇಂದ್ರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ಗೆ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

ಜುಲೈ 12 ರಂದು ಬಿಡುಗಡೆಯಾದ AAIB ಪ್ರಾಥಮಿಕ ವರದಿಯು ಪೈಲಟ್‌ಗಳ (Pilots) ಕಡೆಯಿಂದ ಲೋಪಗಳನ್ನು ಸೂಚಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್. ಕೋಟಿಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಗಮನಿಸಿತು. ಈ ಅಂಶಗಳು ದುರದೃಷ್ಟಕರ, ಬೇಜವಾಬ್ದಾರಿ ಎಂದ ಪೀಠ ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿತು.
ಈ ವರದಿಯ ಉಲ್ಲೇಖಗಳನ್ನು ಪ್ರಶ್ನಿಸಿ ವಿಮಾನಯಾನ ಸುರಕ್ಷತೆ ಎನ್‌ಜಿಒ ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್, ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಇಂಧನ-ಸ್ವಿಚ್ ದೋಷಗಳು ಮತ್ತು ವಿದ್ಯುತ್ ದೋಷಗಳಂತಹ ವ್ಯವಸ್ಥಿತ ವೈಪರೀತ್ಯಗಳನ್ನು ಕಡಿಮೆ ಮಾಡಿ, ಪೈಲಟ್ ದೋಷದ ನಿರೂಪಣೆ ಮಾಡಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಟೀಕಿಸಲಾಗಿತ್ತು. ಅಂತಾರಾಷ್ಟ್ರೀಯ ಪೈಲಟ್ ಒಕ್ಕೂಟ ಕೂಡ ಪ್ರಾಥಮಿಕ ತನಿಖಾ ವರದಿಯನ್ನು ಪ್ರಶ್ನಿಸಿತ್ತು.

ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ದಿನಗಳು ಕಳೆದಿದೆ. ಆದರೆ ಇದುವರೆಗೂ ಕೇವಲ ಪ್ರಾಥಮಿಕ ವರದಿಯನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಅಲ್ಲದೇ ವರದಿಯಲ್ಲಿ ಯಾವುದೇ ಅಪಘಾತಕ್ಕೆ ನಿಖರ ಕಾರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಉಲ್ಲೇಖ ಇರದಿರುವುದರಿಂದ, ಬೋಯಿಂಗ್ ವಿಮಾನಗಳಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಇಂದು ಅಪಾಯದಲ್ಲಿದ್ದಾರೆ ಎಂದು ವಾದಿಸಿದರು. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ
ಅಪಘಾತದ ತನಿಖೆಗಾಗಿ ರಚಿಸಲಾದ ಐವರು ಸದಸ್ಯರ ತಂಡವು, ವಾಯುಯಾನ ನಿಯಂತ್ರಕ ಡಿಜಿಸಿಎಯ ಮೂವರು ಸದಸ್ಯರನ್ನು ಹೊಂದಿದ್ದು, ಗಂಭೀರ ಹಿತಾಸಕ್ತಿ ಸಂಘರ್ಷವನ್ನು ಸೃಷ್ಟಿಸುತ್ತದೆ. ಅಪಘಾತಕ್ಕೆ ಯಾವ ಸಂಸ್ಥೆಯನ್ನು ಪ್ರಶ್ನಿಸಲಾಗುತ್ತಿದೆಯೋ ಅದೇ ಸಂಸ್ಥೆಯ ಸದಸ್ಯರು ಹೇಗೆ ತನಿಖೆ ನಡೆಸಲು ಸಾಧ್ಯ? ಎಂದು ಪ್ರಶ್ನಿಸಿದರಲ್ಲದೇ ಅಪಘಾತದ ನಿಜವಾದ ಕಾರಣ ಸ್ಪಷ್ಟಪಡಿಸಲು ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ ನಿಂದ ಡೇಟಾವನ್ನು ಪಡೆಯಲು ಭೂಷಣ್ ಕೋರಿದರು.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು, ಅರ್ಜಿದಾರರ ವಾದ ಪುರಸ್ಕರಿಸಿತಾದರೂ, ಪ್ರಾಥಮಿಕ ತನಿಖೆಯ ಎಲ್ಲಾ ವರದಿಗಳನ್ನು ಸಾರ್ವಜನಿಕಗೊಳಿಸಿವುರಿಂದ ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿತು. ಆದ್ರೆ ಅಪಘಾತಕ್ಕೆ ಪೈಲಟ್ ದೋಷ ನಿರೂಪಣೆಯನ್ನು ದ್ವಿಸದಸ್ಯ ಪೀಠ ದುರದೃಷ್ಟಕರ ಎಂದು ಬಣ್ಣಿಸಿತು.
ಅಲ್ಲದೇ ಕೆಲವು ಮಾಹಿತಿಯನ್ನು ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಗಮನಿಸಿದ ಪೀಠವು ಡಿಜಿಸಿಎ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿಗೊಳಿಸಲು ಸೂಚನೆ ನೀಡಿತು. ಇದನ್ನೂ ಓದಿ: Air India Plane crash | ಡೇಟಾ ರಿಕವರಿಗಾಗಿ ಬ್ಲ್ಯಾಕ್ ಬಾಕ್ಸ್ ಅಮೆರಿಕಕ್ಕೆ ರವಾನೆ





















