ಬೆಳಕಿನ ಹಬ್ಬ ದೀಪಾವಳಿ (Deepavali 2025) ಬರುತ್ತಿದೆ, ಬದುಕಿನ ಕತ್ತಲು ಸರಿಸಿ ಪ್ರತಿಯೊಬ್ಬರ ಬಾಳಲ್ಲೂ ಮೂಡಿಸುವ ಈ ಹಬ್ಬ ಎಲ್ಲರಿಗೂ ವಿಶೇಷ. ದೀಪಾವಳಿ ಎಂದಾಕ್ಷಣ ಮನಸ್ಸು ಪುಳಕಿತಗೊಳ್ಳುತ್ತದೆ, ಉತ್ಸಾಹದಿಂದ ಕುಣಿಯುತ್ತದೆ. ಮನೆ, ಮನಗಳಲ್ಲೂ ದೀಪಗಳು ಪ್ರಜ್ವಲಿಸುತ್ತವೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿಗಳಿಲ್ಲದೇ ದೀಪಾವಳಿ ಪೂರ್ಣಗೊಳ್ಳುವುದಿಲ್ಲ. ಹೆಣ್ಣು ಮಕ್ಕಳು ದೀಪ ಹಚ್ಚಿ ಮನೆಯನ್ನು ಬೆಳಗಿದರೆ, ಗಂಡು ಮಕ್ಕಳು ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಮತ್ತೊಂದು ಕಡೆ ಪಟಾಕಿ ಬಳಕೆ ಹೆಚ್ಚಾಗುತ್ತಿದ್ದಂತೆ ಪರಿಸರ ಮಾಲಿನ್ಯ ಕೂಡ ಆಗುತ್ತದೆ ಅನ್ನೋ ಕಾರಣಕ್ಕೆ ಪಟಾಕಿಗೆ ಬೇಡಿಕೆ ಕಡಿಮೆಯೂ ಆಯ್ತು. ಆ ಬಳಿಕ ಕಡಿಮೆ ಮಾಲಿನ್ಯ ಹೊರಸೂಸುವ ಹಸಿರುವ ಪಟಾಕಿಗೆ ಅವಕಾಶ ಮಾಡಿಕೊಡಲಾಯಿತು. ಅದರಲ್ಲೂ ದೆಹಲಿಯಲ್ಲಿ ಪ್ರತಿ ವರ್ಷ ಉಂಟಾಗುವ ಮಾಲಿನ್ಯ ತಡೆಯಲು ಸುಪ್ರೀಂ ಕೋರ್ಟ್ (Supreme Court) ಕೂಡ ಹಸಿರುವ ಪಟಾಕಿಗಷ್ಟೇ ಅವಕಾಶ ಮಾಡಿಕೊಟ್ಟಿದೆ. ಅದಕ್ಕೆ ಸಮವನ್ನೂ ನಿಗದಿ ಮಾಡಿದೆ.
ಆದ್ರೆ ಹಸಿರು ಪಟಾಕಿ (Green Firecracker) ಅಂದ್ರೇನು ಅನ್ನೋ ವಿಷಯದ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ಹಸಿರು ಪಟಾಕಿ ಅಂದ್ರೆ ಏನು? ಸಾಮಾನ್ಯ ಪಟಾಕಿಗಿಂತ ಇದು ಹೇಗೆ ಭಿನ್ನ? ಎಂಬಿತ್ಯಾದಿ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ಹಸಿರು ಪಟಾಕಿ ಎಂದರೇನು?
ಹಸಿರು ಪಟಾಕಿಗಳು ಪರಿಸರ ಸ್ನೇಹಿ ಪಟಾಕಿಗಳಾಗಿದ್ದು, ಸಾಂಪ್ರದಾಯಿಕ ಪಟಾಕಿಗಳಿಗಿಂತ ಕಡಿಮೆ ವಾಯು ಮತ್ತು ಶಬ್ದ ಮಾಲಿನ್ಯ ಉಂಟುಮಾಡುತ್ತವೆ. ಇವುಗಳನ್ನ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಅದರ ಅಂಗಸಂಸ್ಥೆಯಾದ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (NEERI) ಅಭಿವೃದ್ಧಿಪಡಿಸಿದೆ. ಹಸಿರು ಪಟಾಕಿಗಳು ಕಡಿಮೆ ಹಾನಿಕಾರಕ ರಾಸಾಯನಿಕಗಳನ್ನ ಹೊಂದಿದ್ದು, ಸ್ಫೋಟಗೊಂಡಾಗ ಕಡಿಮೆ ಹೊಗೆ ಹೊರಸೂಸುತ್ತವೆ.
ʻಹಸಿರು ಪಟಾಕಿ’ ಪರಿಸರ ಸ್ನೇಹಿಯೇ?
ಹಸಿರು ಪಟಾಕಿ ಪರಿಸರಕ್ಕೆ ತೊಂದರೆಯಾಗದಂತೆ ಬಳಸಲೆಂದು ತಯಾರಿಸಲ್ಪಟ್ಟ ಪಟಾಕಿಗಳು. ಇವು ಕಡಿಮೆ ಶಬ್ದ ಹೊಂದಿರುವುದರ ಜೊತೆಗೆ ಇದರಿಂದ ಹೊರಸೂಸುವ ಮಲಿನ ಹೊಗೆಯೂ ಕಡಿಮೆಯಾಗಿರುತ್ತದೆ. ಈ ಕಾರಣದಿಂದ ಈ ಪಟಾಕಿಗಳು ಪರಿಸರ ಸ್ನೇಹಿ ಎನಿಸಿಕೊಂಡಿವೆ. ಜೊತೆಗೆ ಮಾನವನ ಆರೋಗ್ಯದ ಮೇಲೂ ಈ ಪಟಾಕಿಗಳು ಗಣನೀಯ ಪರಿಣಾಮ ಬೀರುವುದಿಲ್ಲ. ಇದು ಇತರ ಪಟಾಕಿಗಳಿಂದ ಈ ಪಟಾಕಿಗಳನ್ನ ಭಿನ್ನವಾಗಿಸುತ್ತವೆ.
ಹಸಿರು ಪಟಾಕಿ ಮತ್ತು ಸಾಮಾನ್ಯ ಪಟಾಕಿಗೆ ಇರುವ ವ್ಯತ್ಯಾಸ ಏನು?
* ಹಸಿರು ಪಟಾಕಿ ಹಾಗೂ ಸಾಮಾನ್ಯ ಪಟಾಕಿ ಎರಡು ಕೂಡ ಮಾಲಿನ್ಯ ಉಂಟು ಮಾಡುತ್ತವೆ.
* ಆದ್ರೆ ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇ.30 ರಷ್ಟು ಕಡಿಮೆ ವಾಯು ಮಾಲಿನ್ಯಕಾರಕ ಹೊರಸೂಸುತ್ತದೆ.
* ಹಸಿರು ಪಟಾಕಿಗಳು ಮಾಲಿನ್ಯಕಾರಕ ಹೊಗೆ ಹೊರಸೂಸುವುದನ್ನ ಗಣನೀಯವಾಗಿ ಕಡಿಮೆ ಮಾಡುತ್ತದೆ, ಧೂಳನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಬೇರಿಯಮ್ ನೈಟ್ರೇಟ್‌ನಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವುದಿಲ್ಲ.
* ಸಾಮಾನ್ಯ ಪಟಾಕಿಗಳಲ್ಲಿನ ವಿಷಕಾರಿ ಲೋಹಗಳನ್ನು ಕಡಿಮೆ ಅಪಾಯಕಾರಿ ಸಂಯುಕ್ತಗಳೊಂದಿಗೆ ಬದಲಾಯಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಂತೆ ಅಧಿಕ ಶಬ್ದ ಹಾಗೂ ಹೊಗೆ ಸೂಸುವ ಬದಲಾಗಿ ನೀರಿನ ಆವಿಯನ್ನು ಮಾತ್ರ ಬಿಡುಗಡೆ ಮಾಡುತ್ತದೆ.
* ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಪ್ರಕಾರ, ಗಾಳಿಯ ಗುಣಮಟ್ಟ ಮಧ್ಯಮ ಅಥವಾ ಕಳಪೆಯಾಗಿರುವ ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಅನುಮತಿಸಲಾಗಿದೆ.
ಹಸಿರು ಪಟಾಕಿ ಪರಿಕಲ್ಪನೆ ಶುರುವಾಗಿದ್ದು ಯಾವಾಗ?
ಪ್ರತಿವರ್ಷವೂ ದೀಪಾವಳಿಯ ಸಮಯದಲ್ಲಿ ದೆಹಲಿ ಸೇರಿ ಇತರೆ ಬೃಹತ್ ನಗರ ಭಾಗಗಳಲ್ಲಿ ವಾಯುಗುಣಮಟ್ಟ ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ಈ ಕಾರಣದಿಂದಲೇ ಸಾಮಾನ್ಯ ಪಟಾಕಿಗಳಿಗಿಂತ ಶೇ.30ರಷ್ಟು ಕಡಿಮೆ ಮಾಲಿನ್ಯತೆ ಹೊರಸೂಸುವ ಹಸಿರು ಪಟಾಕಿಗಳನ್ನು 2019ರಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಪರಿಚಯಿಸಿತು. ಇವುಗಳಲ್ಲಿ ಬೇರಿಯಂ ಲವಣಗಳು, ಅಲ್ಯೂಮಿನಿಯಂ, ಸ್ಟ್ರ್ಯಾಷಿಯಂ, ಲಿಥಿಯಂ, ಆರ್ಸೆನಿಕ್, ಆಂಟಿಮನಿ ಮತ್ತು ಸೀಸದಂತಹ ನಿಷೇಧಿತ ವಸ್ತುಗಳನ್ನ ಬಳಸದೆಯೇ ತಯಾರಿಸಲಾಗುತ್ತದೆ.
ಹಸಿರು ಪಟಾಕಿಗಳ ತಯಾರಿಕೆ ಹೇಗೆ?
ಸಿಎಸ್‌ಐಆರ್-ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಪ್ರಕಾರ, ಹಸಿರು ಪಟಾಕಿಗಳನ್ನು ಕಡಿಮೆ ಗಾತ್ರದ ಶೆಲ್, ಬೂದಿ ಬಳಕೆಯಿಲ್ಲದೇ, ಸಂಯೋಜನೆ ವೇಳೆ ಕಚ್ಚಾವಸ್ತುಗಳನ್ನ ಕಡಿಮೆ ಬಳಸಿ ಹಾಗೂ ಕಡಿಮೆ ಹೊಗೆ ಹೊರಸೂಸುವಿಕೆಯ ದೃಷ್ಟಿಯಿಂದ ಧೂಳು ನಿರೋಧಕಗಳಂತೆ ನೀರಿನ ಆವಿಯನ್ನು ಬಳಸಲಾಗುತ್ತದೆ. ಹಸಿರು ಪಟಾಕಿಯಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುವುದಿಲ್ಲ.
ಹಸಿರು ಪಟಾಕಿ ಎಲ್ಲಿ ಸಿಗುತ್ತೆ? ಗುರುತಿಸುವುದು ಹೇಗೆ?
ಹಸಿರು ಪಟಾಕಿಗಳ ಲಭ್ಯತೆ ಹಾಗೂ ಅವುಗಳನ್ನ ಗುರುತಿಸುವ ಬಗ್ಗೆ ಜನರಲ್ಲಿ ಗೊಂದಲ ಇದೆ. ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಸರ್ಕಾರ ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆದಿರುವ ಮಳಿಗೆಗಳಿಗಷ್ಟೇ ಮಾರಾಟಕ್ಕೆ ಅನುಮತಿ ನೀಡಿರುತ್ತದೆ. ಗ್ರಾಹಕರು ತಾವು ಖರೀದಿಸುವ ಪಟಾಕಿಗಳು ಹಸಿರು ಪಟಾಕಿ ಹೌದೆ? ಅಥವಾ ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಲು, ಪಟಾಕಿ ಪ್ಯಾಕ್ ಮೇಲಿನ ಬಾರ್ ಕೋಡ್ ಸ್ಕ್ಯಾನ್ ಮಾಡಬೇಕು. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿ (CSIR), ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹಾಗೂ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ವಿಶಿಷ್ಟ ಹಸಿರು ಲೋಗೋ ಮೂಲಕ ಸಹ ಹಸಿರು ಪಟಾಕಿಗಳನ್ನು ಗುರುತಿಸಬಹುದಾಗಿದೆ. SWAS, SAFAL ಮತ್ತು STAR ಎಂಬ ಮೂರು ವರ್ಗದಲ್ಲಿ ಹಸಿರು ಪಟಾಕಿಗಳು ಸಿಗುತ್ತವೆ. ಇವನ್ನು CSIR ಅಭಿವೃದ್ಧಿಪಡಿಸಿದೆ.
ಪಟಾಕಿ ಸಿಡಿಸುವ ಮುನ್ನ ಗಮನದಲ್ಲಿಡಿ
* ಹಸಿರು ಪಟಾಕಿಗಳನ್ನು ಸಿಡಿಸುವಾಗ ಪಟಾಕಿ ಹಾಗೂ ನಿಮ್ಮ ನಡುವಿನ ಅಂತರ ಹೆಚ್ಚಿರಬೇಕು.
* ಕೈಯನ್ನು ನೇರವಾಗಿ ಇರಿಸಿ ಪಟಾಕಿಗೆ ಕಿಡಿ ತಾಗಿಸಬೇಕು. ಪಟಾಕಿಗಳನ್ನು ಸಿಡಿಸುವಾಗ ಬೂಟುಗಳನ್ನು ಧರಿಸುವುದು ಉತ್ತಮ.
* ಆಟದ ಮೈದಾನಗಳಂತಹ ತೆರೆದ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುವುದು ಒಳಿತು.
* ಹಸಿರು ಪಟಾಕಿಗಳನ್ನು ಬೆಳಗಿಸುವ ಸಂದರ್ಭದಲ್ಲಿ ಒಂದೆರಡು ಬಕೆಟ್‌ಗಳಷ್ಟು ನೀರನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು.
* ಪಟಾಕಿ ಸಿಡಿಸುವವರು ಉದ್ದವಾದ, ಸಡಿಲವಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.












