Tag: Supreme Court

  • ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ- ರಾಜ್ಯ ಸರ್ಕಾರಕ್ಕೀಗ ದಂಡ ವಸೂಲಿ ಹೇಗೆ ಅನ್ನೋ ಚಿಂತೆ

    ಜಯಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ- ರಾಜ್ಯ ಸರ್ಕಾರಕ್ಕೀಗ ದಂಡ ವಸೂಲಿ ಹೇಗೆ ಅನ್ನೋ ಚಿಂತೆ

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದೀಗ ರಾಜ್ಯ ಸರ್ಕಾರಕ್ಕೆ ಹೊಸ ತಲೆನೋವು ಶುರುವಾಗಿದೆ.

    ಕೆಳ ಹಂತದ ನ್ಯಾಯಾಲಯ 100 ಕೋಟಿ ರೂಪಾಯಿಗಳನ್ನ ಜಯಲಲಿತಾ ಅವರಿಂದ ವಸೂಲಿ ಮಾಡುವಂತೆ ಆದೇಶ ಮಾಡಿತ್ತು. ಈ ಹಿನ್ನಲೆಯಲ್ಲಿ ಈಗಾಗಲೇ ಮೃತರಾಗಿರೋ ಜಯಲಲಿತಾ ಬಳಿ ಹೇಗೆ ದಂಡ ವಸೂಲಿ ಮಾಡಬೇಕು ಅನ್ನೋ ಚಿಂತೆ ಶುರುವಾಗಿದೆ.

    ಈಗಾಗಲೇ ಸರ್ಕಾರ ದಂಡದ ಹಣವನ್ನು ವಸೂಲಿ ಮಾಡಲು ಕಮಿಟಿ ರಚನೆ ಮಾಡಲು ಯೋಚಿಸಿದ್ದು, ಕಮಿಟಿ ರಚಿಸೋದಕ್ಕೂ ಮುಂಚೆ ಸುಪ್ರೀಂಕೋರ್ಟ್ ಬಳಿ ಮತ್ತೊಂದು ಅರ್ಜಿ ಹಾಕಿ ದಂಡ ವಸೂಲಿಯ ಬಗ್ಗೆ ಇರೋ ಗೊಂದಲಗಳನ್ನು ಸ್ಪಷ್ಟಪಡಿಸಿಕೊಳ್ಳಲು ಮುಂದಾಗಲಿದೆ ಎಂದು ಹೇಳಲಾಗಿದೆ. ಕಾನೂನಿನ ಕೆಲ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೆ ಮೃತರಾದ್ರೆ ಅವರ ಮೇಲಿನ ದಂಡವನ್ನು ಕಡಿಮೆ ಮಾಡಬಹುದು. ಆದ್ರೆ ಇಲ್ಲಿ ಪ್ರಕರಣದ ವಿಚಾರಣೆ ಮುಕ್ತಾಯವಾಗಿ ತೀರ್ಪು ಕಾಯ್ದಿರಿಸಿದಾಗ ಜಯಲಲಿತಾ ಮೃತಪಟ್ಟಿರೋದ್ರಿಂದ ಹಾಗೂ ಸುಪ್ರೀಂ ಕೋರ್ಟ್ ಸಹ ಸ್ಪಷ್ಟವಾಗಿ ದಂಡವನ್ನು ಯಾವ ರೀತಿ ವಸೂಲಿ ಮಾಡಿ ಅಂತ ಆದೇಶ ನೀಡದ ಕಾರಣ, ರಾಜ್ಯ ಸರ್ಕಾರ ಮತ್ತೊಮ್ಮೆ ಅರ್ಜಿ ಹಾಕಿ ಕೋರ್ಟ್‍ನಿಂದ ಸ್ಪಷ್ಟೀಕರಣ ಕೇಳಲು ತೀರ್ಮಾನಿಸಿದೆ.

  • ಗಣಪತಿ ಆತ್ಮಹತ್ಯೆ ಕೇಸ್ ಸಿಬಿಐಗೆ ನೀಡಿ: 2 ವಾರ ಕಾಲ ವಿಚಾರಣೆ ಮುಂದೂಡಿದ ಸುಪ್ರೀಂ

    ಗಣಪತಿ ಆತ್ಮಹತ್ಯೆ ಕೇಸ್ ಸಿಬಿಐಗೆ ನೀಡಿ: 2 ವಾರ ಕಾಲ ವಿಚಾರಣೆ ಮುಂದೂಡಿದ ಸುಪ್ರೀಂ

    ನವದೆಹಲಿ: ಡಿವೈಎಸ್‍ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಎರಡು ವಾರ ಕಾಲ ಸುಪ್ರೀಂ ಕೋರ್ಟ್ ಮುಂದೂಡಿದಿದೆ.

    ಇಂದು ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ವಕೀಲರು ಸಿಐಡಿ ವರದಿಯನ್ನು ಭಾಷಾಂತರ ಮಾಡುವ ನಿಟ್ಟಿನಲ್ಲಿ ನಾಲ್ಕು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಜೊತೆಗೆ ಜೊತೆಗೆ ಅರ್ಜಿದಾರ ಕುಶಾಲಪ್ಪ ಪರ ವಕೀಲರು ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ನಾಲ್ಕು ವಾರಗಳ ಸಮಯ ನೀಡುವಂತೆ ಮನವಿ ಮಾಡಿದ್ದರು.

    ವಿಚಾರಣೆ ಆಲಿಸಿದ ನ್ಯಾ. ಆನಂದಕುನಾರ್ ಗೊಯೇಲ್ ಮತ್ತು ಉದಯ್ ಲಲಿತ್ ನೇತೃತ್ವದ ದ್ವಿ ಸದಸ್ಯ ಪೀಠ ಎರಡು ವಾರಗಳ ಅವಕಾಶ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

    ಏನಿದು ಪ್ರಕರಣ?
    ಡಿವೈಎಸ್ಪಿ ಎಂಕೆ. ಗಣಪತಿ ಮಡಿಕೇರಿಯ ಲಾಡ್ಜ್‍ನಲ್ಲಿ ಆತ್ಮಹತ್ಯೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಮುಂದೆ ನನಗೆ ಏನಾದ್ರೂ ಆದರೆ ಅದಕ್ಕೆ ಸಚಿವ ಕೆಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಅಶಿತ್ ಮೋಹನ್ ಪ್ರಸಾದ್ ಮತ್ತು ಪ್ರಣಬ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಈ ಸಂದರ್ಶನ ನೀಡಿದ ಬಳಿಕ ಸಂಜೆ ಮಡಿಕೇರಿ ನಗರದ ಲಾಡ್ಜ್ ನಲ್ಲಿ ನೇಣಿಗೆ ಶರಣಾಗಿದ್ದರು. ಈ ಪ್ರಕರಣದ ತನಿಖೆಯನ್ನು ನಡೆಸಿದ ಸಿಐಡಿ ಸಚಿವ ಜಾರ್ಜ್‍ಗೆ ಕ್ಲೀನ್ ಚೀಟ್ ನೀಡಿತ್ತು. ಸಿಐಡಿ ವರದಿಯಲ್ಲಿ ಸಚಿವ ಜಾರ್ಜ್ ಗೆ ಕ್ಲಿನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಗಣಪತಿ ತಂದೆ ಕುಶಾಲಪ್ಪ ಸುಪ್ರೀಂ ಕೋರ್ಟ್ ನಲ್ಲಿ ಸಿಬಿಐ ತನಿಖೆಗೆ ಆದೇಶಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.

    ನ್ಯಾ.ಎಸ್.ಅಬ್ದುಲ್ ನಜೀರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ   ಈ ಹಿಂದೆ ಸಿಬಿಐ ತನಿಖೆಗೆ ಆದೇಶಿಸುವಂತೆ ಎಂ.ಕೆ. ಕುಶಾಲಪ್ಪ ಹಾಗೂ ಸಹೋದರ ಎಂ.ಕೆ.ಮಾಚಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

    https://www.youtube.com/watch?v=AGmp1M_0q2s

     

    https://www.youtube.com/watch?v=p2V1xEclj3g

  • ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ

    ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿ ಏಪ್ರಿಲ್ 11 ರೊಳಗೆ ತೀರ್ಪು ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

    ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ನ್ಯಾ. ದೀಪಕ್ ಮಿಶ್ರಾ, ನ್ಯಾ. ಅಮಿತವ್ ರಾಯ್, ನ್ಯಾ. ಎಂ. ಖಾನ್ವಿಲ್ಕರ್ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ಮಂಗಳವಾರ ಮಧ್ಯಾಹ್ನ 2.30ಕ್ಕೆ ಆರಂಭವಾಯಿತು. ಎರಡೂ ಕಡೆಯ ವಾದ ಆಲಿಸಿದ ನ್ಯಾಯ ಪೀಠ ಮಾರ್ಚ್ 21ಕ್ಕೆ ವಿಚಾರಣೆ ಮುಂದೂಡಿತು.

    ವಾದ ಹೀಗಿತ್ತು:
    ಮೊದಲು ವಾದ ಆರಂಭಿಸಿದ ಕರ್ನಾಟಕ ಪರ ಫಾಲಿ ನಾರಿಮನ್ 1799 ರಲ್ಲಿಂದಲೇ ಕಾವೇರಿ ವಿವಾದ ಶುರುವಾಗಿದೆ. ಮದ್ರಾಸು ಸರ್ಕಾರ, ಮೈಸೂರು ಸಂಸ್ಥಾನ ಹಾಗೂ ಬ್ರಿಟಿಷ್ ಸರ್ಕಾರದ ನಡುವೆ ಹಲವು ಒಪ್ಪಂದಗಳಾಗಿವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ಅಂದಿನಿಂದ ಇಂದಿನ ತನಕ ನಡೆದ ಎಲ್ಲ ಪ್ರಮುಖ ಬೆಳವಣಿಗೆ ಗಳನ್ನು ಪೀಠದ ಗಮನಕ್ಕೆ ನಾರಿಮನ್ ತಂದರು.

    ನಾರಿಮನ್ ವಾದ ಆಲಿಸಿದ ನ್ಯಾ.ದೀಪಕ್ ಮಿಶ್ರಾ ಒಪ್ಪಂದ ಗಳ ಬಗ್ಗೆ ತಮಿಳುನಾಡು ಪರ ವಕೀಲ ಶೇಖರ್ ನಾಫಡೆ ವಾದ ಮಂಡಿಸಲು ಅವಕಾಶ ನೀಡಿದರು. ಈ ವೇಳೆ ನಾಫಡೆ ನಮಗೆ ಕಾವೇರಿ ನೀರು ಹಂಚಿಕೆಯಲ್ಲಿ ನ್ಯಾಯಧಿಕರಣದಿಂದ ಅನ್ಯಾಯ ಆಗಿದೆ. ಕಾವೇರಿ ಕರ್ನಾಟಕ ದಲ್ಲಿ ಹುಟ್ಟಿದ್ರೆ ಎಲ್ಲ ನೀರು ಕರ್ನಾಟಕ ಕ್ಕೆ ನೀಡಬೇಕೇ? ಕೆಳಗಿನ ಪ್ರದೇಶದವರು ಏನು ಮಾಡಬೇಕು? ನಮ್ಮ ಜನರಿಗೂ ಕುಡಿಯುವ ನೀರು ಬೇಕು ಮತ್ತೆ ನಿರ್ವಹಣಾ ಮಂಡಳಿಗೆ ಆದ್ಯತೆ ಕೊಡಿ ಎಂದು ಮನವಿ ಮಾಡಿಕೊಂಡರು.

    ನ್ಯಾ. ಮಿಶ್ರಾ ಸದ್ಯಕ್ಕೆ ಹಂಚಿಕೆಯಾದಂತೆ ನೀರು ಹರಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಎರಡು ಕಡೆಯ ವಕೀಲರು ಸಮ್ಮತಿ ಸೂಚಿಸಿದರು. ಈ ವೇಳೆ ನಾರಿಮನ್ 1892, 1924ರ ವೇಳೆ ಆದ ಜಲ ಒಪ್ಪಂದ ಬೇಡ, ನ್ಯಾಯಾಧಿಕರಣ ನೀರು ಹಂಚಿಕೆ ತೀರ್ಪು ಸಹ ಬೇಡ. 1956 ಕಾಯ್ದೆಯ ಅಂತರಾಜ್ಯ ನೀರು ಹಂಚಿಕೆ ಪ್ರಕಾರ ನೀರು ಹಂಚಿಕೆ ಆಗಬೇಕು ಎಂದು ಕೇಳಿಕೊಂಡರು. ಎರಡು ಕಡೆಯ ವಾದವನ್ನು ಆಲಿಸಿದ ಪೀಠ ಬ್ರಿಟಿಷರ ಕಾಲದ ಒಪ್ಪಂದಗಳ ಬಗ್ಗೆ ಈ ಕೆಳಗಿನಂತೆ ಪ್ರಶ್ನೆ ಕೇಳಿತು.

    ಸುಪ್ರೀಂ ಪ್ರಶ್ನೆಗಳು
    – ಮೈಸೂರು ಪ್ರಾಂತ್ಯ, ಮದ್ರಾಸ್ ಸರ್ಕಾರದ ನಡುವಿನ ಒಪ್ಪಂದಕ್ಕೆ ಸಿಂಧುತ್ವ ಇದೆಯೇ?
    – ಬ್ರಿಟಿಷ್ ಕಾಲದ ಒಪ್ಪಂದಗಳು ಈಗಲೂ ಹೇಗೆ ಜಾರಿಯಲ್ಲಿವೆ?
    – ಒಪ್ಪಂದಗಳನ್ನು ಈಗಲೂ ಮುಂದುವರೆಸಲು ಕಾರಣವೇನು?
    – ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ? ಬೇಡವೇ?
    – ಬ್ರಿಟೀಷ್ ಒಪ್ಪಂದಗಳನ್ನು ನ್ಯಾಯಾಧಿಕರಣ ಒಪ್ಪಿಕೊಂಡಿದ್ದು ಹೇಗೆ?

    ಈ ಅಂಶಗಳನ್ನು ಮತ್ತು ನ್ಯಾಯಾಧಿಕರಣ ಯಾವ ಅಂಶ ಆಧರಿಸಿ ತೀರ್ಪು ನೀಡಿದೆ ಎನ್ನುವುದನ್ನು ಪರಿಶೀಲಿಸಿ ಮುಂದಿನ ವಿಚಾರಣೆಯನ್ನು ನಡೆಸಲಾಗುವುದು ಎಂದು ಪೀಠ ತಿಳಿಸಿತು. ಕರ್ನಾಟಕದ ಪರ ಅನಿಲ್ ದಿವಾನ್, ಮೋಹನ್ ಕಾತರಕಿ, ಎಸ್ ಎಸ್ ಜವಳಿ, ಎಜಿ ಮಧುಸೂದನ್ ನಾಯಕ್, ಬ್ರಿಜೆಶ್ ಕಾಳಪ್ಪ ಕೋರ್ಟ್ ಕಲಾಪದಲ್ಲಿ ಉಪಸ್ಥಿತರಿದ್ದರು.

    1892ರಲ್ಲಿ ನಡೆದ ಒಪ್ಪಂದದಲ್ಲಿ ಏನಿತ್ತು?
    1876-78 ರಲ್ಲಿ ಉಂಟಾದ ಭೀಕರ ಕ್ಷಾಮ ತಲೆದೋರಿದಾಗ ವೇದಾವತಿ ನದಿಗೆ ವಾಣಿವಿಲಾಸ ಸಾಗರ ಅಣೆಕಟ್ಟೆ ಕಟ್ಟಲು ದಿವಾನ್ ಶೇಷಾದ್ರಿ ಅಯ್ಯರ್ ಮುಂದಾದರು. ಈ ಯೋಜನೆಗೆ 1890ರಲ್ಲಿ ಅಂದಿನ ಮದ್ರಾಸ್ ಪ್ರಾಂತ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಈ ವೇಳೆ ನಮ್ಮ ನೆಲದಲ್ಲಿ ಹರಿಯುವ ನೀರಿನ ಹಕ್ಕಿನ ಬಗ್ಗೆ ಕನ್ನಡಿಗರು ವಾದ ಮಾಡಿದರು. ಇದರ ಫಲವಾಗಿ 1892ರಲ್ಲಿ ಮೊದಲ ಒಪ್ಪಂದವೊಂದು ಏರ್ಪಟ್ಟಿತು. ಇದರ ಪ್ರಕಾರ ಕಾವೇರಿ ಕೊಳ್ಳದ ಯಾವುದೇ ಯೋಜನೆಗಳಿಗೆ ಮದ್ರಾಸ್ ಪ್ರಾಂತ್ಯದ ಅನುಮತಿ ಪಡೆಯಬೇಕಿತ್ತು.

    ಎಲ್ಲಿಯ ವೇದಾವತಿ, ಅದೆಲ್ಲಿಯ ಕಾವೇರಿ..?
    ಕಾವೇರಿಗೂ ವೇದಾವತಿಗೂ ಯಾವುದೇ ತರಹದ ಸಂಬಂಧವಿಲ್ಲ. ಕಾವೇರಿ ತನ್ನದೇ ಆದ ಕೊಳ್ಳ ಪ್ರದೇಶವಿದೆ. ವೇದಾವತಿ ಕೃಷ್ಣಾ ನದಿಯ ಕೊಳ್ಳಕ್ಕೆ ಸೇರ್ಪಡೆಗೊಳ್ಳುತ್ತದೆ. ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನಕ್ಕೊಳಗಾಗಿತ್ತು. ಇಲ್ಲಿ ಯಾವುದೇ ಯೋಜನೆಗಳನ್ನು ಕೈಗೊಳ್ಳಬೇಕೆಂದರೆ ಮದ್ರಾಸ್ ಪ್ರಾಂತ್ಯದ ಒಪ್ಪಿಗೆ ಅಗತ್ಯ. ಈ ಕಾರಣ ಮುಂದಿಟ್ಟು ತಮಿಳುನಾಡು, ವಾಣಿವಿಲಾಸ ಯೋಜನೆಗೆ ಅಡ್ಡಿ ಮಾಡಿತ್ತು.

    1924ರಲ್ಲಿ ಎರಡನೇ ಒಪ್ಪಂದ ಯಾಕೆ ನಡೆಯಿತು?
    1911ರ ವೇಳೆಗೆ ಕನ್ನಂಬಾಡಿ ಕಟ್ಟೆಯ ಮೊದಲ ಹಂತ ಪೂರ್ಣಗೊಂಡು ಎರಡನೇ ಹಂತದ ಕಾರ್ಯಾಚರಣೆ ಪ್ರಾರಂಭಿಸಿದಾಗ ಮದ್ರಾಸ್ ಪ್ರಾಂತ್ಯ ಮತ್ತೆ ಆಕ್ಷೇಪ ಎತ್ತಿತು. ಈ ಆಕ್ಷೇಪವನ್ನು ಕಡೆಗಣಿಸಿ ಮೈಸೂರು ಸಂಸ್ಥಾನ ಕೆಲಸ ಮುಂದುವರೆಸಿತು. ಆದರೂ 1892ರ ಒಪ್ಪಂದದಂತೆ ಬ್ರಿಟಿಷ್ ಸರ್ಕಾರಕ್ಕೆ ಮನವಿ ಮಾಡಿತು. ಬ್ರಿಟಿಷರು ಹೆಚ್.ಡಿ. ಗ್ರಿಷಿತ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಕನ್ನಂಬಾಡಿ ಕಟ್ಟೆಯ ಕೆಲಸ ಪೂರ್ಣಗೊಂಡಿತು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಮದ್ರಾಸ್ ಪ್ರಾಂತ್ಯ ಲಂಡನ್‍ನಲ್ಲಿರುವ ಸೆಕ್ರೆಟರಿ ಆಫ್ ಸ್ಟೇಟ್‍ಗೆ ಮೇಲ್ಮನವಿ ಸಲ್ಲಿಸಿತು. ವಾಸ್ತವವಾಗಿ ಇಂತಹ ಮೇಲ್ಮನವಿಗೆ 1892ರ ಒಪ್ಪಂದದಲ್ಲಿ ಅವಕಾಶ ಇರಲಿಲ್ಲವಾದರೂ 1924ರಲ್ಲಿ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಿತು.

    1924ರ ಒಪ್ಪಂದದಲ್ಲಿ ಏನಿತ್ತು?
    ಈ ಒಪ್ಪಂದ ಪ್ರಕಾರ ಕಾವೇರಿ ಜಲನಯದ ಪ್ರದೇಶದಲ್ಲಿ ಒಟ್ಟು 868 ಟಿಎಂಸಿ ನೀರು ಲಭ್ಯವಿದೆ ಎಂದು ತೀರ್ಮಾನಿಸಲಾಯಿತು. ಈ ತೀರ್ಮಾನದಂತೆ ಶೇ.75ರಷ್ಟು ಭಾಗ(651 ಟಿಎಂಸಿ) ತಮಿಳುನಾಡು ಮತ್ತು ಪುದುಚೇರಿಗೆ, ಕರ್ನಾಟಕಕ್ಕೆ ಶೇ.23(200 ಟಿಎಂಸಿ) ಕೇರಳಕ್ಕೆ ಶೇ.2(17.36) ಟಿಎಂಸಿ ನೀರನ್ನು ಬಳಸಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಅಷ್ಟೇ ಅಲ್ಲದೇ ಕೆಆರ್‍ಎಸ್ ನಿರ್ಮಾಣಕ್ಕೆ ಮದ್ರಾಸ್ ಪ್ರಾಂತ್ಯ ವಿರೋಧ ವ್ಯಕ್ತಪಡಿಸಿದ ಕಾರಣ ಮೆಟ್ಟೂರಿನಲ್ಲಿ ಕಾವೇರಿಗೆ ಅಣೆಕಟ್ಟು ನಿರ್ಮಿಸಲು ಅನುಮತಿ ನೀಡಿತು. ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ಈ ವೇಳೆ ನಿರ್ಬಂಧಗಳನ್ನು ವಿಧಿಸಿತ್ತು. ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು ಎನ್ನುವ ಷರತ್ತನ್ನು ವಿಧಿಸಲಾಗಿತ್ತು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರಿನಲ್ಲಿ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು.

    ತಮಿಳುನಾಡಿನಿಂದ ಒಪ್ಪಂದ ಬ್ರೇಕ್
    1924ರ ಒಪ್ಪಂದದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರೂ ತಮಿಳುನಾಡು ತನ್ನ ಕರಾರನ್ನು ಮೀರಿ 18 ಲಕ್ಷ ಎಕರೆಯಲ್ಲಿ ನೀರಾವರಿ ಮಾಡಿತು. ಅಷ್ಟೇ ಅಲ್ಲದೇ ಕುಟ್ಟತ್ತಿ ಮತ್ತು ಪುಲಂಬಾಡಿ ಕಾಮಗಾರಿ ಕೈಗೊಂಡಿತು. ಆದರೆ ಕರ್ನಾಟಕ ಹೇಮಾವತಿ, ಹಾರಂಗಿ ಮತ್ತು ಕಬಿನಿ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ವಿರೋಧಿಸಿತು. ನ್ಯಾಯಕ್ಕಾಗಿ 1968ರಲ್ಲಿ ಮದ್ರಾಸ್ ಸರ್ಕಾರ ನ್ಯಾಯಾಲಯಕ್ಕೆ ಹೋಯಿತು. ಆದರೆ 3 ರಾಜ್ಯಗಳ ಒಪ್ಪಂದವಾಗಿ 1972ರಲ್ಲಿ ಪ್ರಕರಣವನ್ನು ಹಿಂಪಡೆಯಲಾಯಿತು.

    ಇದನ್ನೂ ಓದಿ: ಕಾವೇರಿಗಾಗಿ ತಮಿಳುನಾಡು ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಯ್ತು? ವಕೀಲರಿಗೆ ಕೊಟ್ಟಿದ್ದು ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

  • ಶಶಿಕಲಾ ಪೊಲಿಟಿಕಲ್ ದರ್ಬಾರ್‍ಗೆ ಬ್ರೇಕ್- ಪ್ರಮಾಣವಚನ ಕಾರ್ಯಕ್ರಮ ರದ್ದು

    ಚೆನ್ನೈ: ತಮಿಳುನಾಡಿಗೆ ಸಿಎಂ ಆಗಬೇಕೆಂಬ ಶಶಿಕಲಾ ನಟರಾಜನ್ ಕನಸಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮ ರದ್ದಾಗಿದೆ.

    ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಒಂದು ವಾರಗಳ ಕಾಲ ತಮಿಳುನಾಡಿನಲ್ಲಿ ಇಲ್ಲದ ಕಾರಣ ಪ್ರಮಾಣವಚನ ಕಾರ್ಯಕ್ರಮವನ್ನ ರಾಜಭವನ ರದ್ದುಗೊಳಿಸಿದೆ. ಈ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿಯೂ ರವಾನೆಯಾಗಿದೆ.

    ತಮಿಳುನಾಡಿನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಂಬೈಗೆ ತೆರಳಿರೋ ರಾಜ್ಯಪಾಲ ವಿದ್ಯಾಸಾಗರ್ ರಾವ್, ಚುನಾವಣೆಯಲ್ಲಿ ಗೆಲ್ಲದೆ ಹಾಗೂ ಯಾವುದೇ ರಾಜಕೀಯ ಅನುಭವ ಇಲ್ಲದ ಶಶಿಕಲಾ ಆಕೆಯ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತೀರ್ಪು ಬಾಕಿ ಇರುವ ಈ ಹೊತ್ತಲ್ಲಿ ಸಿಎಂ ಆಗಬಹುದಾ ಎಂಬ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಆದಾಯ ಮೀರಿ ಆಸ್ತಿ ಗಳಿಸಿರೋ ಕೇಸ್‍ನಲ್ಲಿ ಜಯಲಲಿತಾ ಜೊತೆ ಶಶಿಕಲಾ ಹೆಸರು ಇದ್ದು, ಮುಂದಿನ ವಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬರಲಿದೆ.

  • ಸುಪ್ರೀಂನಲ್ಲಿ ಇಂದಿನಿಂದ ಕಾವೇರಿ ಅರ್ಜಿ ವಿಚಾರಣೆ

    – ಎತ್ತಿನಹೊಳೆ ಬಗ್ಗೆ ಟ್ರಿಬ್ಯುನಲ್ ಅಂತಿಮ ತೀರ್ಪು

    ನವದೆಹಲಿ: ಇಂದಿನಿಂದ ರಾಜ್ಯಕ್ಕೆ ಅಗ್ನಿ ಪರೀಕ್ಷೆ ಶುರುವಾಗಲಿದೆ. ಕಾವೇರಿ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ.

    ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧೀಕರಣದ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳನ್ನ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಇಂದಿನಿಂದ ಪ್ರತಿನಿತ್ಯ ಮಧ್ಯಾಹ್ನ ಕಾವೇರಿ ವಿಚಾರಣೆ ನಡೆಯಲಿದ್ದು ಕೆಲವೇ ತಿಂಗಳಲ್ಲಿ ವಿವಾದಕ್ಕೆ ತೆರೆಬಿಳುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಪರಿಣಾಮಕಾರಿ ವಾದ ಮಂಡಿಸಲು ಸಜ್ಜಾಗಿದೆ. ಈ ಸಂಬಂಧ, ರಾಜ್ಯದ ಕಾನೂನು ತಂಡದ ಹಿರಿಯ ವಕೀಲ ನಾರಿಮನ್ ಜೊತೆ ಕಳೆದ ಹದಿನೈದು ದಿನಗಳ ಹಿಂದೆಯೇ ನೀರಾವರಿ ಸಚಿವ ಎಂಬಿ ಪಾಟೀಲ್ ಹಾಗೂ ಕಾನೂನು ಸಚಿವ ಟಿಬಿ ಜಯಚಂದ್ರ ಚರ್ಚೆ ನಡೆಸಿದ್ದಾರೆ.

    ಬೆಂಗಳೂರಿಗೆ ಸಿಗುತ್ತಾ ಕುಡಿಯುವ ನೀರು?: ನ್ಯಾಯಾಧೀಕರಣದ ತೀರ್ಪಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ವಿಚಾರ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಈ ಅಂಶವನ್ನು ಪರಿಗಣಿಸಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿಯೂ ಈ ಬಾರಿ ಕಾನೂನು ಹೋರಾಟ ನಡೆಯಲಿದೆ. ಟ್ರಿಬ್ಯುನಲ್‍ನಲ್ಲಾದ ಎಡವಟ್ಟುಗಳು ಮತ್ತೆ ಮರುಕಳಿಸದೆ ಈ ಬಾರಿಯಾದ್ರು ರಾಜ್ಯದ ರೈತರ ಕಣ್ಣೀರು ನಿಲ್ಲಲಿ ಎಂಬುದು ಎಲ್ಲರ ಆಶಯವಾಗಿದೆ.

    ಏನಾಗಲಿದೆ ಎತ್ತಿನಹೊಳೆ ಭವಿಷ್ಯ?: ಬಯಲು ಸೀಮೆಗೆ ನೀರುಣಿಸೋ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಇಂದು ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಸೋಮವಾರದಂದು ವಿಚಾರಣೆ ನಡೆಸಿದ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಧಿಕರಣ, ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡಿತ್ತು. ಷರತ್ತಿನೊಂದಿಗೆ ಕಾಮಗಾರಿ ಆರಂಭಿಸಲು ಚೆನ್ನೈ ಹಸಿರು ಪೀಠ ಅವಕಾಶ ನೀಡಿದೆ. ಇದ್ರಲ್ಲಿ ಮೂಗು ತೂರಿಸಲ್ಲ ಅಂತ ಹೇಳಿತ್ತು. ಇದ್ರಿಂದ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಿದೆ. ಆದ್ರೆ ಇಂದಿನ ತೀರ್ಪು ಏನಿರಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

    ಅತ್ತ ಮಂಗಳೂರಿನಲ್ಲಿ ಎತ್ತಿನಹೊಳೆ ವಿರೋಧಿ ಹೋರಾಟ ಹೆಚ್ಚಾಗ್ತಿದೆ. ಅಧಿವೇಶನದಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ನಿಲುವಳಿ ಸೂಚನೆ ಮಂಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಜೊತೆಗೆ ಫೆಬ್ರವರಿ 10ರಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ನಿಲುವಳಿ ಮಂಡನೆಗೆ ಸಚಿವರು, ಶಾಸಕರಿಗೆ ತಿಳಿಸಿದ್ದೇವೆ. ಹೋರಾಟ ಹತ್ತಿಕ್ಕಲು ಮುಂದಾದರೆ ಮಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಬಂದ್ ಮಾಡೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

    ಒಟ್ಟಿನಲ್ಲಿ ಎತ್ತಿನಹೊಳೆ ಹೋರಾಟದ ಭವಿಷ್ಯ ಇಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್ ಪೀಠದಲ್ಲಿ ನಿರ್ಧಾರವಾಗಲಿದೆ.