Tag: Supreme Court

  • ಕ್ಯಾನ್ಸರ್‍ಪೀಡಿತ ವ್ಯಕ್ತಿಯ ಮನವಿಗೆ ಮೊಬೈಲ್ ಟವರ್ ಬಂದ್ ಮಾಡಲು ಸುಪ್ರೀಂ ಆದೇಶ

    ಕ್ಯಾನ್ಸರ್‍ಪೀಡಿತ ವ್ಯಕ್ತಿಯ ಮನವಿಗೆ ಮೊಬೈಲ್ ಟವರ್ ಬಂದ್ ಮಾಡಲು ಸುಪ್ರೀಂ ಆದೇಶ

    ನವದೆಹಲಿ: ಮೊಬೈಲ್ ಟವರ್‍ನ ವಿದ್ಯುತ್ಕಾಂತೀಯ ವಿಕಿರಣದಿಂದ ನಾನು ಕ್ಯಾನ್ಸರ್‍ಗೆ ತುತ್ತಾಗಿದ್ದೇನೆ ಎಂದು 42 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಳಿಕ ಮೊಬೈಲ್ ಟವರ್ ಬಂದ್ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಇಂತಹದ್ದೊಂದು ಆದೇಶ ನೀಡಿದೆ ಎಂದು ವರದಿಯಾಗಿದೆ.

    2002ರಲ್ಲಿ ತಮ್ಮ ಪಕ್ಕದ ಮನೆಯ ಛಾವಣಿಯ ಮೇಲೆ ಅಕ್ರಮವಾಗಿ ಅಳವಡಿಕೆ ಮಾಡಲಾದ ಮೊಬೈಲ್ ಟವರ್ ಬಂದ್ ಮಾಡುವಂತೆ ಕೋರಿ ಮಧ್ಯಪ್ರದೇಶದ ಗ್ವಾಲಿಯರ್‍ನ ದಾಲ್ ಬಜಾರ್ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಚಂದ್ ತಿವಾರಿ ಕಳೆದ ವರ್ಷ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ 14 ವರ್ಷಗಳಿಂದ ಈ ಮೊಬೈಲ್ ಟವರ್‍ನ ಹಾನಿಕಾರಕ ವಿಕರಣಗಳಿಂದ ತೊಂದರೆ ಪಡುತ್ತಿದ್ದೇವೆ ಎಂದು ಹರೀಶ್ ಹೇಳಿದ್ದರು.

    ದೀರ್ಘ ಕಾಲದಿಂದ ವಿಕರಣಕ್ಕೆ ಒಡ್ಡಿಕೊಂಡಿದ್ದರಿಂದ ಹಾಡ್ಕಿನ್ಸ್ ಲಿಮ್ಫೋಮಾ(ಕ್ಯಾನ್ಸರ್)ಗೆ ತುತ್ತಾಗಿದ್ದೇನೆ ಎಂದು ಹೇಳಿ ಸ್ಥಳೀಯ ವಕೀಲೆ ನಿವೇದಿತಾ ಶರ್ಮಾ ಅವರ ಸಹಾಯ ಪಡೆದು ಹರೀಶ್ ಅವರು ಅರ್ಜಿ ಸಲ್ಲಿಸಿದ್ದರು.

    ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜನ್ ಗೋಗಿ ಹಾಗೂ ನ್ಯಾ. ನವೀನ್ ಸಿನ್ಹಾ ನೇತೃತ್ವದ ಪೀಠ, 7 ದಿನಗಳ ಒಳಗಾಗಿ ಮೊಬೈಲ್ ಟವರ್ ಬಂದ್ ಮಾಡುವಂತೆ ಸೂಚಿಸಿದೆ.

  • ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

    ಬಾಬ್ರಿ ಮಸೀದಿ ಧ್ವಂಸ ಕೇಸ್‍ನಲ್ಲಿ ಅಡ್ವಾಣಿ, ಜೋಷಿ ವಿಚಾರಣೆಗೆ ಹಾಜರಾಗಬೇಕು: ಸುಪ್ರೀಂ

    ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಸೇರಿದಂತೆ 13 ವಿವಿಧ ಮುಖಂಡರು ವಿಚಾರಣೆಗೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

    ಈ ಪ್ರಕರಣದ ವಿಚಾರಣೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಬೇಕು, ಅಷ್ಟೇ ಅಲ್ಲದೇ ಎರಡು ವರ್ಷದ ಒಳಗಡೆ ವಿಚಾರಣೆ ಪೂರ್ಣಗೊಳಿಸಬೇಕೆಂದು ಸೂಚಿಸಿದೆ.

    ಮಾರ್ಚ್ 6ರಂದು ನಡೆದಿದ್ದ ವಿಚಾರಣೆ ವೇಳೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಹಾಗೂ ಕೇಂದ್ರ ಸಚಿವೆ ಉಮಾಭಾರತಿ ಸೇರಿದಂತೆ ಬಿಜೆಪಿ ಪ್ರಮುಖ ಮುಖಂಡರ ವಿರುದ್ಧದ ಆರೋಪಗಳನ್ನು ತಾಂತ್ರಿಕ ಕಾರಣ ಹೇಳಿ ಕೈ ಬಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತ್ತು. ಅಷ್ಟೇ ಅಲ್ಲದೇ ಪ್ರಕರಣದ ವಿಚಾರಣೆ ತಡವಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿತ್ತು.

    ಏನಿದು ಪ್ರಕರಣ?
    ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅಡ್ವಾಣಿ ಸೇರಿದಂತೆ 20 ಮಂದಿ ಬಿಜೆಪಿ ಮುಖಂಡರ ಮೇಲಿದ್ದ ಆರೋಪವನ್ನು ಅಲಹಾಬಾದ್ ಹೈಕೋರ್ಟ್ 2010ರ ಮೇ 20 ರಂದು ತಾಂತ್ರಿಕ ಕಾರಣ ಹೇಳಿ ಕೈಬಿಟ್ಟಿದ್ದನ್ನು ಹಾಜಿ ಮೆಹಬೂಬ್ ಅಹಮ್ಮದ್ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಸಿಬಿಐ ಕೂಡ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಾದ ಅಶೋಕ್ ಸಿಂಘಾಲ್, ಗಿರಿರಾಜ್ ಕಿಶೋರ್, ಉಮಾ ಭಾರತಿ, ಮಹಂತ ಅವೈದ್ಯನಾಥ್, ವಿನಯ್ ಕಟಿಯಾರ್, ವಿಷ್ಣು ಹರಿ ದಾಲ್ಮಿಯಾ, ಸಾಧ್ವಿ ರಿತಂಬರಾ, ಕಲ್ಯಾಣ್ ಸಿಂಗ್ ಅವರು ಈ ಪಟ್ಟಿಯಲ್ಲಿ ಸೇರಿದ್ದಾರೆ.

    ಬಿಜೆಪಿಗೆ ಹಿನ್ನಡೆ: ರಾಷ್ಟ್ರಪತಿ ಹುದ್ದೆಗೆ ಬಿಜೆಪಿ ಎಲ್‍ಕೆ ಅಡ್ವಾಣಿ ಅವರನ್ನು ಬಿಜೆಪಿ ಆಯ್ಕೆ ಮಾಡುತ್ತದೆ ಎನ್ನುವ ಒಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈಗ ಸುಪ್ರೀಂ ಕೋರ್ಟ್  ವಿಚಾರಣೆಗೆ ಹಾಜರುಗುವಂತೆ ಆದೇಶ ಪ್ರಕಟಿಸಿರುವುದು ಬಿಜೆಪಿ ಮತ್ತು ಎಲ್‍ಕೆ ಅಡ್ವಾಣಿ ಅವರಿಗೆ ಹಿನ್ನಡೆಯಾಗಿದೆ.

     

     

  • ಜಯಲಲಿತಾ ಅಕ್ರಮ ಆಸ್ತಿ ಕೇಸ್: ರಾಜ್ಯದ ಮರುಪರಿಶೀಲನಾ ಅರ್ಜಿ ವಜಾ

    ಜಯಲಲಿತಾ ಅಕ್ರಮ ಆಸ್ತಿ ಕೇಸ್: ರಾಜ್ಯದ ಮರುಪರಿಶೀಲನಾ ಅರ್ಜಿ ವಜಾ

    ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾರನ್ನು ಕೈ ಬಿಟ್ಟು ತೀರ್ಪು ನೀಡಿದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.

    ಬುಧವಾರ ತಮ್ಮ ಛೇಬಂರ್ ನಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತಾವ್ ರಾಯ್ ನೇತೃತ್ವದ ಪೀಠ ರಾಜ್ಯದ ಅರ್ಜಿ ವಜಾ ಮಾಡಿ ಆದೇಶ ಪ್ರಕಟಿಸಿದೆ.

    ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಮೊದಲ ಆರೋಪಿಯಾಗಿದ್ದರು. ಆದರೆ ತೀರ್ಪು ಬರುವ ಮೊದಲೇ ಜಯಲಲಿತಾ ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣದಿಂದ ಅವರ ಹೆಸರನ್ನು ಕೈಬಿಟ್ಟು ಶಶಿಕಲಾ ಸೇರಿದಂತೆ ಮೂವರಿಗೆ ಸುಪ್ರಿಂಕೊರ್ಟ್ ಶಿಕ್ಷೆ ಪ್ರಕಟ ಮಾಡಿತ್ತು.

    ಸುಪ್ರೀಂಕೋರ್ಟ್ ಈ ಆದೇಶ ವನ್ನು ಪ್ರಶ್ನಿಸಿದ್ದ ಕರ್ನಾಟಕ ಸರ್ಕಾರ, ಜಯಲಲಿತಾ ಕೇಸ್ ವಿಚಾರಣೆ ವೇಳೆ ಸಾವನ್ನಪ್ಪಿಲ್ಲ, ತೀರ್ಪು ಕಾಯ್ದಿರಿಸಿದ ನಂತರ ಮೃತಪಟ್ಟಿದ್ದಾರೆ. ಹೀಗಾಗಿ ಅವರನ್ನು ಅಪರಾಧಿ ಅಂತಾ ಪರಿಗಣಿಸಿ ಕೆಳ ನ್ಯಾಯಲಯ ವಿಧಿಸಿದ ನೂರು ಕೋಟಿ ದಂಡವನ್ನು ವಸೂಲಿ ಮಾಡಬೇಕು ಎಂದು ಮನವಿ ಮಾಡಿತ್ತು.

    ಈ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಮಿತಾವ್ ರಾಯ್ ನೇತೃತ್ವದ ಪೀಠ ಜಯಲಲಿತಾ ಅವರನ್ನ ಪ್ರಕರಣದಿಂದ ಕೈಬಿಡಲಾಗಿದ್ದು ದಂಡ ವಸೂಲಿ ಸಾಧ್ಯವಿಲ್ಲ ಎಂದು ಹೇಳಿ ರಾಜ್ಯದ ಅರ್ಜಿಯನ್ನು ವಜಾಗೊಳಿಸಿದೆ.

    ಬೆಂಗಳೂರಿನ ವಿಶೇಷ ಕೋರ್ಟ್ 2014ರ ಸೆಪ್ಟೆಂಬರ್‍ನಲ್ಲಿ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ದೋಷಿ ಎಂದು ತೀರ್ಪು ನೀಡಿ, 4 ವರ್ಷ ಜೈಲು ಶಿಕ್ಷೆ ಮತ್ತು 100 ಕೋಟಿ ರೂ. ದಂಡವನ್ನು ವಿಧಿಸಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತ್ತು.

    2016 ಡಿಸೆಂಬರ್ 5 ರಂದು ಜಯಲಲಿತಾ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, 2017ರ ಫೆ.14ರಂದು ಶಶಿಕಲಾ, ಇಳವರಸಿ, ಸುಧಾಕರನ್ ಈ ಪ್ರಕರಣದಲ್ಲಿ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

  • ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    –  ಪ್ರಕೃತಿ ಸಿಂಹ
    ಪ್ರಿಲ್ 1 ರಿಂದ ದೇಶದಲ್ಲಿ ಬಿಎಸ್ 3 ಎಂಜಿನ್‍ವುಳ್ಳ ದ್ವಿಚಕ್ರ, ತ್ರಿಚಕ್ರ ಹಾಗೂ 4 ಚಕ್ರದ ವಾಹನಗಳ ಮಾರಾಟ ಮತ್ತು ನೋಂದಣಿಯನ್ನು ನಿಷೇಧಿಸಲಾಗಿದೆ. ಬಿಎಸ್ 4 ಎಂಜಿನ್‍ವುಳ್ಳ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಬಿಎಸ್-3 ಎಂಜಿನ್‍ವುಳ್ಳ ವಾಹನಗಳನ್ನ ಸ್ಮಾರ್ಟ್ ಫೋನ್‍ಗಳ ಬೆಲೆಯಲ್ಲಿ ಆಫರ್ ನೀಡಿ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಹಾಗಿದ್ರೆ ಏನಿದು ಬಿಎಸ್ ಮಾನದಂಡ? ಯಾವಾಗ ಜಾರಿಗಳಿಸಲಾಯ್ತು? ಎಲ್ಲದಕ್ಕೂ ಉತ್ತರ ಇಲ್ಲಿದೆ.

    1. ಬಿಎಸ್- 3 ಅಂದ್ರೇನು?
    ಬಿಎಸ್- 3 ಅಂದ್ರೆ ಭಾರತ್ ಸ್ಟೇಜ್ 3. ಭಾರತ್ ಸ್ಟೇಜ್ ಅಂದ್ರೆ ವಾಹನಗಳ ಅನಿಲ ಹೊರಸೂಸುವಿಕೆ/ ಮಾಲಿನ್ಯ ಪ್ರಮಾಣದ ನಿಯಂತ್ರಣಾ ಮಾನದಂಡ. ಕೇಂದ್ರ ಮಾಲಿನ್ಯ ನಿಯಂತ್ರಣಾ ಮಂಡಳಿ ಪರಿಸರ ಇಲಾಖೆ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಅಡಿಯಲ್ಲಿ ಈ ಮಾನದಂಡವನ್ನ ನಿಗದಿಪಡಿಸುತ್ತದೆ. ಹಾಗೆ ಕಾಲಕಾಲಕ್ಕೆ ಇದನ್ನು ಮಾರ್ಪಾಡು ಮಾಡುತ್ತದೆ. ವಾಹನಗಳ ಮಾಲಿನ್ಯ ಪ್ರಮಾಣವನ್ನ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಮಾನದಂಡವನ್ನ ಹಾಕಿದೆ.

    2. ಯಾವಾಗ ಜಾರಿಗೊಳಿಸಲಾಯ್ತು?
    ಯುರೋಪಿಯನ್ ಮಾನದಂಡಗಳಿಗೆ ಅನುಗುಣವಾಗಿ ಭಾರತದಲ್ಲಿ ಮೊದಲ ಬಾರಿಗೆ 2000 ಇಸವಿಯಲ್ಲಿ ಬಿಎಸ್ ಮಾನದಂಡ ಜಾರಿಗೊಳಿಸಲಾಯ್ತು. 2005ರಲ್ಲಿ ಬಿಎಸ್ 2 ಮಾನದಂಡ ಜಾರಿಗೆ ಬಂತು. 2010ರಲ್ಲಿ ಬಿಎಸ್ 3 ಮಾನದಂಡವನ್ನು ಜಾರಿಗೊಳಿಸಲಾಯ್ತು. 2016ರ ಏಪ್ರಿಲ್‍ನಲ್ಲಿ ಬಿಎಸ್ 4 ಮಾನದಂಡವನ್ನ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ ಅಸ್ತಿತ್ವಕ್ಕೆ ತರಲಾಯ್ತು. ಇದೀಗ 2017ರ ಏಪ್ರಿಲ್ 1 ರಿಂದ ದೇಶದಲ್ಲಿ ಎಲ್ಲಾ ವಾಹನಗಳು ಬಿಎಸ್ 4 ಮಾನದಂಡ ಹೊಂದಿರುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.

    3. ಬಿಎಸ್-2 ಗಿಂತಲೂ ಮೊದಲು ಯಾವ ನಿಯಮ ಇತ್ತು?
    ಭಾರತದಲ್ಲಿ ಮೊದಲ ಬಾರಿಗೆ 1991ರಲ್ಲಿ ಪೆಟ್ರೋಲ್ ವಾಹನಗಳಿಗೆ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಜಾರಿಗೊಳಿಸಲಾಯ್ತು. ನಂತರ 1992ರಲ್ಲಿ ಡೀಸೆಲ್ ವಾಹನಗಳಗೆ ಮಾನದಂಡ ಜಾರಿಗೆ ಬಂತು. ಇದರ ಬೆನ್ನಲ್ಲೇ ಪೆಟ್ರೋಲ್ ವಾಹನಗಳಲ್ಲಿ ಕ್ಯಾಟಲಿಸ್ಟಿಕ್ ಕನ್ವರ್ಟರ್ ಕಡ್ಡಾಯಗೊಳಿಲಾಯ್ತು ಹಾಗೂ ಲೆಡ್ ರಹಿತ ಪೆಟ್ರೋಲ್ ಮಾರುಕಟ್ಟೆಗೆ ಪರಿಚಯಿಸಲಾಯ್ತು. 1999ರ ಏಪ್ರಿಲ್‍ನಲ್ಲಿ ಭಾರತದಲ್ಲಿ ಎಲ್ಲಾ ವಾಹನಗಳು ಯುರೋ 1 ಅಥವಾ ಭಾರತ 2000 ಮಾನದಂಡವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಆದ್ರೆ ಈ ಬದಲಾವಣೆ ಮಾಡಿಕೊಳ್ಳಲು ಕಾರು ತಯಾರಕರು ಸಿದ್ಧರಿರಲಿಲ್ಲ. ಹೀಗಾಗಿ ಮುಂದಿನ ತೀರ್ಪಿನಲ್ಲಿ ಯೂರೋ 2 ಅನುಷ್ಠಾನ ದಿನಾಂಕ ಜಾರಿಯಾಗಲಿಲ್ಲ.

    2002ರಲ್ಲಿ ಭಾರತ ಸರ್ಕಾರ ಮಾಶೆಲ್ಕರ್ ಸಮಿತಿಯ ವರದಿಯನ್ನು ಸ್ವೀಕರಿಸಿತು. ಈ ವರದಿಯಲ್ಲಿ ಯುರೋ ಆಧರಿತ ಮಾಲಿನ್ಯ ನಿಯಂತ್ರಣ ಮಾನದಂಡವನ್ನು ಭಾರತದಲ್ಲೂ ಜಾರಿಗೊಳಿಸುವಂತೆ ಶಿಫಾರಸು ಮಾಡಿತ್ತು. ಈ ಮಾನದಂಡವನ್ನು ಮೊದಲಿಗೆ ಪ್ರಮುಖ ನಗರಗಳಲ್ಲಿ ಜಾರಿಗೆ ತಂದು ನಂತರ ಕೆಲವು ವರ್ಷಗಳ ಬಳಿಕ ದೇಶದ ಇತರೆ ಭಾಗಗಳಿಗೆ ವಿಸ್ತರಿಸುವ ಮೂಲಕ ಹಂತಹಂತವಾಗಿ ಜಾರಿಗೊಳಿಸಬೇಕೆಂದು ವರದಿಯಲ್ಲಿ ಹೇಳಲಾಗಿತ್ತು. ಈ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಾಹನ ಇಂಧನ ನೀತಿಯನ್ನು 2003ರಲ್ಲಿ ಅಧಿಕೃತವಾಗಿ ಘೋಷಿಸಲಾಯ್ತು. ನಂತರ 2010ರ ಅಕ್ಟೋಬರ್‍ನಲ್ಲಿ ದೇಶದಾದ್ಯಂತ ಭಾರತ್ ಸ್ಟೇಜ್ -3 ಅನುಷ್ಠಾನಗೊಳಿಸಲಾಯ್ತು.

    4. ಮುಂದೆ ಬಿಎಸ್-5 ಮಾನದಂಡ ಬರುತ್ತಾ?
    ಬಿಎಸ್ -5 ಮಾನದಂಡವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, 2020ರ ವೇಳೆಗೆ ದೇಶದಾದ್ಯಂತ ಬಿಎಸ್-6 ಮಾನದಂಡ ಜಾರಿಗೊಳಿಸಲು ಉದ್ದೇಶಿಸಿದೆ.

    5. ಕಡಿಮೆ ಬೆಲೆಗೆ ಬಿಎಸ್-3 ವಾಹನಗಳ ಮಾರಾಟ ಮಾಡಿದ್ದು ಯಾಕೆ?
    ಈಗಾಗಲೇ ನೋಂದಣಿಯಾಗಿರುವ ಬಿಎಸ್-3 ವಾಹನಗಳ ಮರುಮರಾಟ, ಮಾಲಿಕತ್ವ ಹಾಗೂ ವಿಳಾಸ ಬದಲಾವಣೆಗೆ ಈ ನಿಯಮ ಅನ್ವಯಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಬಿಎಸ್ 3 ಎಂಜಿನ್ ಹೊಂದಿರುವ ವಾಹನಗಳ ಮೇಲೆ ಭಾರೀ ಡಿಸ್ಕೌಂಟ್ ನೀಡಿ ಕಡಿಮೆ ಬೆಲೆಗೆ ಸೆಕೆಂಡ್ ಹ್ಯಾಂಡ್‍ನಲ್ಲಿ ಮಾರಾಟ ಮಾಡಲಾಗಿತ್ತು. ಈ ಬೈಕ್‍ಗಳನ್ನು 20, 25 ಸಾವಿರ ರೂ. ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು.

    6. ಬಿಎಸ್- 3 ವಾಹನಗಳು ಎಷ್ಟಿವೆ?
    ದೇಶದಾದ್ಯಂತ ವಿವಿಧ ಕಂಪೆನಿಗಳ ಒಟ್ಟು 8.2 ಲಕ್ಷ ಬಿಎಸ್ 3 ಎಂಜಿನ್‍ವುಳ್ಳ ವಾಹನಗಳ ದಾಸ್ತಾನು ಇದೆ. ಇವುಗಳಲ್ಲಿ 6.71 ಲಕ್ಷ ದ್ವಿಚಕ್ರ ವಾಹನಗಳು, 16 ಸಾವಿರ ಕಾರುಗಳು, 96 ಸಾವಿರ ಸರಕು ಸಾಗಣೆ ವಾಹನಗಳು ಹಾಗೂ 18 ಸಾವಿರ ಸರಕು ಸಾಗಣೆ ಆಟೋಗಳಿವೆ. ಈ ವಾಹನಗಳ ಒಟ್ಟು ಮೊತ್ತ 12 ಸಾವಿರ ಕೋಟಿ ರೂ. ಗಿಂತಲೂ ಹೆಚ್ಚು ಎಂದು ಅಂದಾಜಿಸಲಾಗಿದೆ.

    7. ವಾಹನ ತಯಾರಕರು ಏನು ಮಾಡಬಹುದು?
    ಬಿಎಸ್-4 ಮಾನದಂಡಕ್ಕೆ ಒಗ್ಗಿಕೊಳ್ಳಲು ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರು ವಾಹನಗಳಲ್ಲಿ ಎವಾಪರೇಟಿವ್ ಎಮಿಷನ್ ಕಂಟ್ರೋಲ್ ಯೂನಿಟ್ ಅಳವಡಿಸಬೇಕು, ಇದರಿಂದಾಗಿ ನಿಲುಗಡೆ ಮಾಡಿದ ವೇಳೆಯಲ್ಲಿ ವಾಹನದಿಂದ ಇಂಧನ ಆವಿಯಾಗೋದು ಕಡಿಮೆಯಾಗುತ್ತದೆ. ಆದರೆ ಈ ರೀತಿ ಮಾಡಬೇಕಾದ್ರೆ ವಾಹನದ ವಿನ್ಯಾಸ ಕೂಡ ಬದಲಾಯಿಸಬೇಕು, ಇದು ತುಂಬಾ ಕಠಿಣವಾದ ಕೆಲಸ ಹಾಗೂ ದುಬಾರಿಯಾಗುತ್ತದೆ ಎಂದು ಆಟೋಮೊಬೈಲ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ವಾಹನ ತಯಾರಕರಿಗೆ ಉಳಿದಿರೋ ಎರಡನೇ ಮಾರ್ಗವೆಂದರೆ ಬಿಎಸ್-3 ಮಾನದಂಡಕ್ಕೆ ಹೊಂದಿಕೆಯಾಗುವಂತಹ ರಾಷ್ಟ್ರಗಳಿಗೆ ಈ ವಾಹನಗಳನ್ನು ರಫ್ತು ಮಾಡಬೇಕಾಗುತ್ತದೆ.

  • ಇಂದಿನಿಂದ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ

    ಇಂದಿನಿಂದ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ

    ನವದೆಹಲಿ: ಸುಪ್ರೀಂ ಕೋರ್ಟ್ ಆದೇಶದಂತೆ ಇಂದಿನಿಂದ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧವಾಗಲಿದೆ. ಬಾರ್‍ಗಳಷ್ಟೇ ಅಲ್ಲದೆ ಹೆದ್ದಾರಿಗಳಲ್ಲಿರುವ ಪಬ್, ಹೋಟೆಲ್ ಮತ್ತು ರೆಸ್ಟೊರೆಂಟ್‍ಗಳಲ್ಲೂ ಕೂಡ ಮದ್ಯವನ್ನು ಮಾರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

    ದೇಶದಲ್ಲಿ ಸಾಕಷ್ಟು ಅಪಘಾತಗಳಿಗೆ ಕುಡಿದು ವಾಹನ ಚಾಲನೆ ಮಾಡುವುದೇ ಕಾರಣವಾಗಿದ್ದು, ಈ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾ. ಜೆಎಸ್ ಕೆಹೆರ್ ನೇತೃತ್ವದ ಪೀಠ ಹೇಳಿದೆ. ಈ ಆದೇಶದಿಂದಾಗಿ ರಾಷ್ಟ್ರೀಯ ಹೆದ್ದರಿಗಳಿಂದ 500 ಮೀಟರ್ ಒಳಗಿರುವ ಪಂಚ ತಾರಾ ಹೋಟೆಲ್‍ಗಳು ಹಾಗೂ ಪಬ್‍ಗಳು ಮದ್ಯ ಮಾರಾಟವನ್ನು ನಿಷೇಧಿಸಬೇಕಿದೆ ಅಥವಾ ಸಂಪೂರ್ಣವಾಗಿ ಬಂದ್ ಆಗಬೇಕಿದೆ.

    ಆದರೂ ಶುಕ್ರವಾರದಂದು ಸುಪ್ರೀಂ ಕೋರ್ಟ್ ಈ ಆದೇಶದಲ್ಲಿ ಸಣ್ಣ ಮಾರ್ಪಾಡು ಮಾಡಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ 500 ಮೀಟರ್ ಅಂತರವನ್ನು 20 ಸಾವಿರದವರೆಗೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 220 ಮೀಟರ್‍ಗೆ ಇಳಿಸಿದೆ. 20 ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಸಣ್ಣ ನಗರಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದ್ರೂ ಈ ಅಂಗಡಿಗಳು ರಸ್ತೆಯಿಂದ ಕಣ್ಣಿಗೆ ಕಣುವಂತೆ ಇರಬಾರದು. ಹೆದ್ದಾರಿಯಿಂದ ಕನಿಷ್ಠ 220 ಮೀಟರ್ ದೂರವಿರಬೇಕು ಎಂದು ಹೇಳಿದೆ.

    ಇನ್ನು 2016ರ ಡಿಸೆಂಬರ್ 15ಕ್ಕೂ ಮುಂಚೆ ನೀಡಲಾದ ಮದ್ಯ ಮಾರಾಟದ ಲೈಸೆನ್ಸ್ ತೆಲಂಗಾಣದಲ್ಲಿ ಸೆಪ್ಟೆಂಬರ್ 30ರವರೆಗೆ ಚಾಲ್ತಿಯಲ್ಲಿರುತ್ತದೆ ಹಾಗೂ ಆಂಧ್ರಪ್ರದೇಶದಲ್ಲಿ ಜೂನ್ 30ರವರೆಗೆ ಚಾಲ್ತಿಯಲ್ಲಿರುತ್ತದೆ. ಅನಂತರ ಅವರು ಮದ್ಯದಂಗಡಿಗಳನ್ನು ಸ್ಥಳಾಂತರಿಸಬೇಕು ಎಂದು ಕೋರ್ಟ್ ಹೇಳಿದೆ.

  • ಅಯೋಧ್ಯೆ ರಾಮಮಂದಿರ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಲು ನಾವು ಸಿದ್ಧ:ಎಐಎಂಪಿಎಲ್‍ಬಿ

    ಅಯೋಧ್ಯೆ ರಾಮಮಂದಿರ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಲು ನಾವು ಸಿದ್ಧ:ಎಐಎಂಪಿಎಲ್‍ಬಿ

    ಲಕ್ನೋ: ಆಯೋಧ್ಯೆ ರಾಮಮಂದಿರ- ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‍ಬಿ) ಹೇಳಿದೆ.

    ನಾವು ಸುಪ್ರೀಂ ಕೋರ್ಟ್ ಸಲಹೆಯನ್ನು ಸ್ವಾಗತಿಸಿದ್ದು, ಕೋರ್ಟ್ ಹೊರಗಡೆ ವಿವಾದವನ್ನು ಬಗೆ ಹರಿಸಲು ಸಿದ್ಧರಿದ್ದೇವೆ ಎಂದು ಎಐಎಂಪಿಎಲ್‍ಬಿಯ ಮೌಲನಾ ಖಲೀದ್ ರಶೀದ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಂಗಳವಾರ ಸುಪ್ರೀಂ ಸಲಹೆಯನ್ನು ಆರ್‍ಎಸ್‍ಎಸ್ ಸ್ವಾಗತಿಸಿತ್ತು. ಆದರೆ ವಕ್ಫ್ ಬೋರ್ಡ್ ಸುಪ್ರೀಂ ಸಲಹೆಯನ್ನು ತಿರಸ್ಕರಿಸಿತ್ತು.

    ನ್ಯಾಯಾಲಯದ ಹೊರಗಡೆ ಈ ವಿವಾದವನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯ ವ್ಯಾಪ್ತಿಯಲ್ಲೇ ಈ ವಿವಾದ ಪರಿಹಾರವಾಗಬೇಕು ಎಂದು ಬಾಬ್ರಿ ಮಸೀದಿ ಕಾರ್ಯಕಾರಿ ಸಮಿತಿ(ಬಿಎಂಎಸಿ) ಸಮನ್ವಯಕಾರ ಜಿಲಾನಿ ತಿಳಿಸಿದ್ದಾರೆ.

    2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಂಗಳವಾರ ಸುಪ್ರೀಂ ನಲ್ಲಿ ನಡೆಯಿತು. ಈ ವೇಳೆ ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿತ್ತು,

    ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸಲಹೆ ನೀಡಿತ್ತು.

  • ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಬಿಡಿ: ಸುಪ್ರೀಂ

    ಕೆಆರ್‍ಎಸ್‍ನಿಂದ ತಮಿಳುನಾಡಿಗೆ ನೀರು ಬಿಡಿ: ಸುಪ್ರೀಂ

    ನವದೆಹಲಿ: ಬರಗಾದಲ್ಲಿ ಹನಿ ನೀರು ಸಿಗದೇ ರಾಜ್ಯದ ಜನರು ತತ್ತರಿಸುತ್ತಿದ್ದರೂ ಇತ್ತ ಮಂಡ್ಯದಲ್ಲಿರುವ ಕೆಆರ್‍ಎಸ್ ಜಲಾಶಯದಿಂದ ತಮಿಳುನಾಡಿಗೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವ ಆದೇಶ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

    ಕಾವೇರಿ ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೆಲ್ಮನವಿ ಅರ್ಜಿಗಳ ವಿಚಾರಣೆ ಇಂದು ಸುಪ್ರಿಂಕೊರ್ಟ್ ನಲ್ಲಿ ನಡೆಯಿತು. ಈ ವೇಳೆ ತಮಿಳುನಾಡು ಕರ್ನಾಟಕ ಸೂಚನೆಯಂತೆ ಸರಿಯಾದ ಪ್ರಮಾಣದ ನೀರು ಬಿಡುತ್ತಿಲ್ಲ ಎನ್ನುವ ಖ್ಯಾತೆ ತೆಗೆಯಿತು. ಕರ್ನಾಟಕ ಕುಡಿಯುವ ನೀರಿನ ಹೆಸರಲ್ಲಿ ಕೃಷಿಗೆ ನೀರು ಬಳಕೆ ಮಾಡುತ್ತಿದೆ ನೀರು ಸರಿಯಾಗಿ ಬಿಡುವಂತೆ ಸೂಚಿಸಲು ತಮಿಳುನಾಡು ಪರ ಶೇಖರ್ ನಾಫಡೆ ವಾದ ಮಂಡಿಸಿದರು.

    ಇದಕ್ಕೆ ತಕ್ಕ ಉತ್ತರ ಕೊಟ್ಟ ರಾಜ್ಯ ಪರ ಹಿರಿಯ ವಕೀಲ ಫಾಲಿ ನಾರಿಮನ್ ರಾಜ್ಯದಲ್ಲಿ ಬರಗಾಲ ತೀವ್ರವಾಗಿದ್ದು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಮುಖ್ಯವಾಗಿ ಕೆಆರ್‍ಎಸ್ ಜಲಾಶಯದಲ್ಲಿ ನೀರಿಲ್ಲ ನೀರು ಹೇಗೆ ಸಾಧ್ಯ ಎಂಬ ಪ್ರಶ್ನೆ ಹಾಕಿದರು. ಇರುವ ನೀರಿನಲ್ಲಿ ಸಾಧ್ಯವಾದಷ್ಟು ನೀರನ್ನು ಸುಪ್ರೀಂಕೋರ್ಟ್ ಸೂಚನೆಯಂತೆ ಹರಿಸಲಾಗುತ್ತಿದೆ ಅಂತಾ ತಮಿಳುನಾಡಿಗೆ ಖಡಕ್ ಉತ್ತರ ನೀಡಿದರು.

    ವಿಚಾರಣೆ ಆಲಿಸಿದ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ, ಜನವರಿ 4 ರಂದು ನೀಡಿದ ಆದೇಶದಂತೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ಸೂಚನೆ ನೀಡಿತು. ಜೊತೆಗೆ ಈ ಹಿಂದೆ ಹೇಳಿದಂತೆ ಕಾವೇರಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ನಿಟ್ಟಿನಲ್ಲಿ ಬೇಸಿಗೆ ರಜೆಯ ನಂತರ ಜುಲೈ 11 ರಿಂದ 15 ದಿನಗಳಲ್ಲಿ ದೀರ್ಘಾವಧಿ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿತು.

    ಇದನ್ನೂ ಓದಿ: ಕಾವೇರಿ ವಿಚಾರಣೆ- ಬ್ರಿಟಿಷ್ ಒಪ್ಪಂದಗಳಿಗೆ ಕರ್ನಾಟಕ ಬದ್ಧವಿರಬೇಕೇ: ಸುಪ್ರೀಂ ಪ್ರಶ್ನೆ

  • ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ: ಸುಪ್ರೀಂ

    ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ: ಸುಪ್ರೀಂ

    ನವದೆಹಲಿ: ಆಯೋಧ್ಯೆ ರಾಮಮಂದಿರ ಭೂಮಿ ವಿವಾದವನ್ನು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

    2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸಲ್ಲಿಸಿ ಪ್ರಶ್ನಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಪ್ರತ್ಯೇಕ ಪೀಠವನ್ನು ಸ್ಥಾಪಿಸುವಂತೆ ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಆಯೋಧ್ಯೆ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಸಂಬಂಧ ನ್ಯಾಯಾಲಯ ನೀಡುವ ತೀರ್ಪಿಗಿಂತಲೂ ಹೊರಗಡೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮುಖ್ಯ ನ್ಯಾ.ಜಗದೀಶ್ ಸಿಂಗ್ ಖೇಹರ್, ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಸಂಜಯ್ ಕಿಶನ್ ಕೌಲ್ ಅವರನ್ನು ಒಳಗೊಂಡ ಪೀಠ ಅಭಿಪ್ರಾಯಪಟ್ಟಿದೆ.

    ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಸೂಕ್ಷ್ಮ ಮತ್ತು ಭಾವನಾತ್ಮಕ ವಿಚಾರವಾಗಿರುವುದರಿಂದ ಎರಡೂ ಪಂಗಡದ ನಾಯಕರು ಸಭೆ ನಡೆಸಿ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಕೋರ್ಟ್ ಸೂಚಿಸಿದೆ.

    ಈ ಪ್ರಕರಣದ ಸಮಸ್ಯೆ ಬಗೆ ಹರಿಸಲು ನೀವು ಯಾರನ್ನು ಬೇಕಾದರು ಆರಿಸಿಕೊಳ್ಳಬಹುದು. ನಾನು ಮಧ್ಯಸ್ಥಿಕೆ ವಹಿಸಬೇಕು ಎಂದು ನೀವು ಬಯಸಿದ್ದಲ್ಲಿ ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ. ನಿಮಗೆ ಬೇರೆ ನ್ಯಾಯಾಧೀಶರು ಬೇಕಾದರೆ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಖ್ಯ, ನ್ಯಾ. ಖೇಹರ್ ದೂರುದಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಿಳಿಸಿದರು.

    ಎರಡು ಪಂಗಡದ ನಾಯಕರ ಜೊತೆ ಮಾತುಕತೆ ನಡೆಸಿ ಮಾರ್ಚ್ 31ರಂದು ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸೂಚಿಸಿದೆ.

    ಕೋರ್ಟ್ ಹೊರಗಡೆ ಎರಡೂ ಪಂಗಡಗಳು ಮಾತುಕತಡೆ ನಡೆಸಿ ಈ ವಿಚಾರವನ್ನು ಬಗೆಹರಿಸಿಕೊಳ್ಳುವುದು ಬಹಳ ಕಷ್ಟ. ಈ ಪ್ರಕರಣ ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ನ್ಯಾಯಾಲಯದ ಹೊರಗಡೆ ವಿವಾದವನ್ನು ಬಗೆಹರಿಸಿಕೊಳ್ಳಿ ಎನ್ನುವ ಸುಪ್ರೀಂ ಅಭಿಪ್ರಾಯವನ್ನು ಪ್ರಕರಣದ ದೂರುದಾರ ವಕ್ಫ್ ಬೋರ್ಡ್‍ನ ಜಿಲಾನಿ ತಿರಸ್ಕರಿಸಿದ್ದಾರೆ.

  • ಜೈಲಿಂದ ಶಶಿಕಲಾ ಹೊರಬರದಂತೆ ರಾಜ್ಯ ಸರ್ಕಾರದ ಪ್ಲಾನ್

    ಜೈಲಿಂದ ಶಶಿಕಲಾ ಹೊರಬರದಂತೆ ರಾಜ್ಯ ಸರ್ಕಾರದ ಪ್ಲಾನ್

    -ಸುಪ್ರೀಂ ತೀರ್ಪು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ನಿರ್ಧಾರ

    ವಿಶೇಷ ವರದಿ
    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರೋ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಹೊರಬರದಂತೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.

    ಸುಪ್ರೀಂಕೋರ್ಟ್ ತೀರ್ಪಿನ ಲೋಪ ಬಳಸಿ ಶಶಿಕಲಾ ಬಚಾವಾಗುವ ಸಂಭವವಿದ್ದು, ಇದನ್ನು ತಪ್ಪಿಸಲು ಫೆ.14ರ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸಲು ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ನೀಡಿರುವ ಆದೇಶ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅರ್ಜಿ ಸಲ್ಲಿಕೆಗೆ ಸರ್ಕಾರ ಮುಂದಾಗಿರೋದ್ಯಾಕೆ?: ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ವೇಳೆಗೆ ಜಯಾ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತೀರ್ಪಿನಲ್ಲಿ ಜಯಲಲಿತಾಗೆ ಅಪರಾಧಿಯಿಂದ ವಿನಾಯ್ತಿ ಸಿಕ್ಕಿತ್ತು. ಜಯಾ ಸಾವಿನ ಮುನ್ನವೇ ಕೋರ್ಟ್‍ನಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ತೀರ್ಪಷ್ಟೇ ಪ್ರಕಟಿಸಲು ಕಾಯ್ದಿರಿಸಿದ್ದಾಗ ಜಯಲಲಿತಾ ಮೃತಪಟ್ಟಿದ್ರು. ಜಯಲಲಿತಾ ಅಪರಾಧಿ ಆಗದೇ ಶಶಿಕಲಾಗೆ ಶಿಕ್ಷೆ ನೀಡಲು ಬರುವುದಿಲ್ಲ. ತೀರ್ಪಲ್ಲಿ ಮಾರ್ಪಾಡು ಆದೇಶ ಹೊರಬೀಳದಿದ್ದರೆ ಶಶಿಕಲಾಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿರುತ್ತದೆ. ಈ ಬಗ್ಗೆ ಹಿರಿಯ ವಕೀಲರಾದ ಬಿವಿ ಆಚಾರ್ಯ ರಾಜ್ಯದ ಗಮನ ಸೆಳೆದಿದ್ದರು. ಹೀಗಾಗಿ ಜಯಲಲಿತಾ ಅವರನ್ನೂ ಅಪರಾಧಿ ಎಂದು ಘೋಷಿಸಬೇಕು. ಜಯಾ ಅಪರಾಧಿ ಎಂದು ಆದೇಶದಲ್ಲಿ ಉಲ್ಲೇಖಿಸಬೇಕು ಎಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

    ರಾಜ್ಯದ ಪರ ವಾದ ಮಂಡಿಸುವವರ್ಯಾರು?: ಖ್ಯಾತ ನ್ಯಾಯವಾದಿ ಜೋಸೆಫ್ ಅರಿಸ್ಟಾಟಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ. ವಿಶೇಷ ಪ್ರತಿನಿಧಿಯಾಗಿ ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ಅವರನ್ನ ರಾಜ್ಯ ಸರ್ಕಾರ ನೇಮಿಸಿದ್ದು, ಸರ್ಕಾರದ ಪರವಾಗಿ ಬಿವಿ ಆಚಾರ್ಯ ವಾದ ಮಂಡಿಸಲಿದ್ದಾರೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲೂ ಬಿ.ವಿ.ಆಚಾರ್ಯ ವಾದ ಮಂಡಿಸಿದ್ದರು.

    ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತು ಫೆಬ್ರವರಿ 14ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ದೋಷಿ ಎಂದು ಪರಿಗಣಿಸಿ 4 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಿತ್ತು.

  • ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಪಣಜಿ: ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಧಾರದ ಪರವಾಗಿ ಮಂಗಳವಾರ ಆದೇಶ ನೀಡಿದರೆ, ಸಂಜೆ 5 ಗಂಟೆಗೆ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    13 ಶಾಸಕರಿರುವ ಬಿಜೆಪಿಯವರು, ಎಂಜಿಪಿಯ ಮೂವರು, ಜಿಎಫ್‍ಪಿಯ ಮೂವರು ಹಾಗೂ ಇಬ್ಬರು ಪಕ್ಷೇತರರನ್ನ ತನ್ನತ್ತ ಸೆಳೆದುಕೊಂಡಿದ್ದಾರೆ. ಪರಿಕ್ಕರ್ ಜೊತೆ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸುಪ್ರೀಂ ನಲ್ಲಿ ಅರ್ಜಿ: ಸೋಮವಾರ ಸಂಜೆ ಹೊತ್ತಿಗೆ ಪರಿಕ್ಕರ್ ಸಿಎಂ ಆಗುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅರ್ಜಿಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋರ್ಟ್ ತುರ್ತು ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ್ದು ಮಂಗಳವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಲಿದೆ.

    ಬಿಜೆಪಿಯ ಹೈಜಾಕ್ ಕ್ರಮವನ್ನು ಕಂಡಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಜನಬಲದ ಎದುರು ಹಣ ಬಲ ಗೆದ್ದಿದೆ ಅಂದ್ರು. ಇನ್ನು ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಚುನಾವಣೆಯನ್ನ ಕದ್ದಿದ್ದಾರೆ ಅಂತ ಪಿ.ಚಿದಂಬರಂ ಆರೋಪಿಸಿದ್ದಾರೆ. ಗೋವಾ ರಾಜ್ಯಪಾಲರು ಬಿಜೆಪಿ ಏಜೆಂಟಂತೆ ವರ್ತಿಸಿದ್ದಾರೆ ಅಂತಾ ಮಾರ್ಗರೆಟ್ ಆಳ್ವಾ ಆರೋಪಿಸಿದ್ದಾರೆ.

    ಈ ನಡುವೆ ಮಾತಾಡಿರುವ ಒಮರ್ ಅಬ್ದುಲ್ಲಾ, 2002ರಲ್ಲಿ ನ್ಯಾಷನಲ್ ಕಾಂಗ್ರೆಸ್ ದೊಡ್ಡ ಪಕ್ಷವಾಗಿತ್ತು. ಆದ್ರೆ ರಾಜ್ಯಪಾಲರು ಪಿಡಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಜೇಟ್ಲಿಗೆ ಮತ್ತೊಮ್ಮೆ ಖಾತೆ: ರಕ್ಷಣಾ ಖಾತೆಗೆ ಪರಿಕ್ಕರ್ ನೀಡಿದ ರಾಜೀನಾಮೆಯನ್ನ ರಾಷ್ಟ್ರಪತಿ ಅಂಗೀಕರಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಗೆ ರಕ್ಷಣಾ ಖಾತೆಯನ್ನ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅರುಣ್ ಜಟ್ಲಿ 2014ರ ಮೇ 26ರಿಂದ ನವೆಂಬರ್ 14ರ ವರೆಗೆ ರಕ್ಷಣಾ ಖಾತೆಯ ಸಚಿವರಾಗಿದ್ದರು.

    ಬಹುಮತಕ್ಕೆ ಎಷ್ಟು ಬೇಕು?
    40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ 17ರಲ್ಲಿ ವಿಜಯಿ ಆಗಿದ್ದರೆ, ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿದೆ. ಇತರೆ ಪಕ್ಷದವರು 10 ಸ್ಥಾನವನ್ನು ಗೆದ್ದುಕೊಂಡಿದ್ದು, ಸರಳ ಬಹುಮತಕ್ಕೆ ಸರ್ಕಾರಕ್ಕೆ 21 ಶಾಸಕರ ಬೆಂಬಲ ಅನಿವಾರ್ಯವಾಗಿದೆ.