Tag: Supreme Court

  • ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ನೇಮಕ; ನ.24 ರಂದು ಅಧಿಕಾರ ಸ್ವೀಕಾರ

    ಮುಂದಿನ ಸಿಜೆಐ ಆಗಿ ನ್ಯಾ. ಸೂರ್ಯಕಾಂತ್ ನೇಮಕ; ನ.24 ರಂದು ಅಧಿಕಾರ ಸ್ವೀಕಾರ

    ನವದೆಹಲಿ: ಸುಪ್ರೀಂ ಕೋರ್ಟ್‌ನ (Supreme Court) 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯ ಕಾಂತ್ (Justice Surya Kant) ನೇಮಕಗೊಂಡಿದ್ದು, ನವೆಂಬರ್ 24ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಸಿಜೆಐ ಭೂಷಣ್ ಆರ್. ಗವಾಯಿ ಅವರ ಅಧಿಕಾರಾವಧಿ ನವೆಂಬರ್ 23ರಂದು ಅಂತ್ಯಗೊಳ್ಳಲಿದೆ. ಹೀಗಾಗಿ, ಸಿಜೆ ಹುದ್ದೆಗೆ ಸೂರ್ಯಕಾಂತ್ ಹೆಸರನ್ನು ಗವಾಯಿ ಅವರು ಕೇಂದ್ರ ಸರ್ಕಾರಕ್ಕೆ (Central Government) ಶಿಫಾರಸು ಮಾಡಿದ್ರು. ಇದೀಗ ಕೇಂದ್ರ ಕಾನೂನು ಸಚಿವಾಲಯ ಬಿ.ಆರ್ ಗವಾಯಿ ಶಿಫಾರಸನ್ನು ಪರಿಗಣಿಸಿದೆ. ನವೆಂಬರ್ 24ರಂದು ನ್ಯಾ. ಸೂರ್ಯಕಾಂತ್ ಸಿಜೆ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಗವಾಯಿ ಅವರಿಗೂ ಮುನ್ನ ಸಂಜೀವ್‌ ಖನ್ನಾ, ಡಿ.ವೈ ಚಂದ್ರಚೂಡ್‌, ಉದಯ್‌ ಉಮೇಶ್‌ ಲಲಿತ್‌, ಎನ್‌.ವಿ ರಮಣ ಸಿಜೆಗಳಾಗಿ ಕರ್ವವ್ಯ ನಿರ್ವಹಿಸಿದ್ದರು.

  • 2020ರ ದೆಹಲಿ ಗಲಭೆ ಕೇಸ್ – ಉಮರ್ ಖಾಲಿದ್ ಸೇರಿ ಇತರೆ ಆರೋಪಿಗಳ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

    2020ರ ದೆಹಲಿ ಗಲಭೆ ಕೇಸ್ – ಉಮರ್ ಖಾಲಿದ್ ಸೇರಿ ಇತರೆ ಆರೋಪಿಗಳ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

    ನವದೆಹಲಿ: 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್, ಗುಲ್ಫಿಶಾ ಫಾತಿಮಾ ಮತ್ತು ಇತರರಿಗೆ ಜಾಮೀನು ನೀಡಲು ದೆಹಲಿ ಪೊಲೀಸರು (Delhi Police) ವಿರೋಧಿಸಿದ್ದಾರೆ.

    ಆರೋಪಿಗಳು ಜಾಮೀನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ಹಿನ್ನೆಲೆ ದೆಹಲಿ ಪೊಲೀಸರು ಜಾಮೀನು ವಿರೋಧಿಸಿ ಅಫಿಡವಿಟ್ ಸಿದ್ಧಪಡಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಗಲಭೆ ಸ್ವಯಂಪ್ರೇರಿತವಾಗಿ ಆಗಿಲ್ಲ. ದೇಶದಲ್ಲಿ ಶಾಂತಿ ಕದಡಲು ಮತ್ತು ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಹಾನಿ ಮಾಡಲು ಎಚ್ಚರಿಕೆಯಿಂದ ಯೋಜಿಸಲಾದ ಪ್ರಯತ್ನ ಇದಾಗಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: 2020ರ ದೆಹಲಿ ಗಲಭೆ ಕೇಸ್ ಆರೋಪಿಗಳ ಜಾಮೀನು ಅರ್ಜಿ – ಪ್ರತಿಕ್ರಿಯೆ ಸಲ್ಲಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

    ಆರೋಪಿಗಳು ಮಾಡಿರುವ ಪಿತೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆಗಳು, ದಾಖಲೆಗಳು ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧದ ಭಿನ್ನಾಭಿಪ್ರಾಯವನ್ನು ಅಸ್ತ್ರವಾಗಿ ಬಳಸಿಕೊಂಡು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹೊಡೆತ ತರುವ ಉದ್ದೇಶದಿಂದ ಈ ಗಲಭೆಯನ್ನು ಸೃಷ್ಟಿಸಿದ್ದಾರೆ ಎಂದು ಪೊಲೀಸರು ವಾದಿಸಲಿದ್ದಾರೆ.

    ಅಂತಾರಾಷ್ಟ್ರೀಯ ಗಮನ ಸೆಳೆಯಲು ಮತ್ತು ದೇಶವನ್ನು ನಕಾರಾತ್ಮಕವಾಗಿ ಬಿಂಬಿಸುವ ಉದ್ದೇಶದಿಂದ ಹಾಗೂ ಈ ಗಲಭೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುವ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಯೋಜಿಸಿದ್ದಾರೆ. ಹೀಗಾಗಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಮೀರನ್ ಹೈದರ್ ಮತ್ತು ಗುಲ್ಫಿಶಾ ಫಾತಿಮಾ ಸೇರಿದಂತೆ ಅರ್ಜಿದಾರರಿಗೆ ಜಾಮೀನು ನೀಡಬಾರದು. ಅವರನ್ನು ಜೈಲಿನಲ್ಲಿಡಬೇಕು ಎಂದು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಇದನ್ನೂ ಓದಿ: ಬೆಂಗಳೂರು ಅಭಿವೃದ್ಧಿಗೆ 2,296 ಕೋಟಿ ಅನುದಾನಕ್ಕೆ ಸಂಪುಟ ಅಸ್ತು!

  • ಕ್ರಿಮಿನಲ್‌ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ

    ಕ್ರಿಮಿನಲ್‌ ಕೇಸ್‌ಗಳಲ್ಲಿ ಆರೋಪಪಟ್ಟಿ ರೂಪಿಸಲು ವಿಳಂಬ – ಸುಪ್ರೀಂ ಕಳವಳ

    – ದೇಶದ್ಯಾಂತ ಏಕರೂಪದ ಮಾರ್ಗಸೂಚಿ ಜಾರಿಗೆ ಚಿಂತನೆ

    ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಗಳನ್ನ ರೂಪಿಸುವಲ್ಲಿ (Charges Framing) ವರ್ಷಗಳೇ ಕಳೆಯುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ (Supreme Court) ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದಕ್ಕೆ ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಚಿಂತಿಸಿದೆ.

    ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಅರವಿಂದ್ ಕುಮಾರ್ ಮತ್ತು ಎನ್‌ವಿ ಅಂಜಾರಿಯಾ ಅವರ ಪೀಠವು ಈ ಬಗ್ಗೆ ಪ್ರಸ್ತಾಪಿಸಿದೆ.ಕ್ರಿ ಮಿನಲ್ ಪ್ರಕರಣಗಳಲ್ಲಿ ಆರೋಪಗಳ ಚೌಕಟ್ಟು (ಫ್ರೇಮಿಂಗ್ ಆಫ್ ಚಾರ್ಜಸ್) ರೂಪಿಸುವಲ್ಲಿ ಅನಾವಶ್ಯಕ ವಿಳಂಬವು ನ್ಯಾಯ ವ್ಯವಸ್ಥೆಯ ಮೇಲೆ ಹೊರೆಯಾಗುತ್ತಿದೆ ಮತ್ತು ಆರೋಪಿಗಳ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಆರೋಪಗಳನ್ನು ರೂಪಿಸುವುದು ಒಂದು ಸರಳ ಪ್ರಕ್ರಿಯೆಯಾಗಿರಬೇಕು, ಆದರೆ ಇದಕ್ಕೆ ವರ್ಷಗಳೇ ತೆಗೆದುಕೊಳ್ಳುತ್ತಿರುವುದು ಯಾಕೆ? ಎಂದು ಪೀಠ ಪ್ರಶ್ನಿಸಿದೆ.

    ಇದರಿಂದಾಗಿ ಆರೋಪಿಗಳಿಗೆ ದೀರ್ಘಕಾಲದವರೆಗೆ ಸಮಸ್ಯೆಯಾಗುತ್ತದೆ. ಜೊತೆಗೆ ನ್ಯಾಯದ ವೇಗವು ಕುಂಠಿತವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ದೇಶಾದ್ಯಂತ ಏಕರೂಪದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು, ಇದಕ್ಕಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 227 ಮತ್ತು 228ರ ಅಡಿಯಲ್ಲಿ ಆರೋಪಗಳ ರೂಪಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ, ಅಟಾರ್ನಿ ಜನರಲ್ ಮತ್ತು ಇತರ ಪಾಲುದಾರರು ಸಲಹೆ ನೀಡಬೇಕು ಎಂದು ಹೇಳಿದೆ.

  • ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ

    ನವದೆಹಲಿ/ವಿಜಯಪುರ: ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ನೀವು ಗಂಭೀರವಾಗಿರಬೇಕು ಎಂದು ಕನ್ನೇರಿ (Kanneri Shri) ಕಾಡುಸಿದ್ದೇಶ್ವರ ಶ್ರೀಗಳಿಗೆ ಸುಪ್ರೀಂಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ವಿಜಯಪುರ (Vijayapura) ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿದ್ದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ವಿಚಾರಣೆ ವೇಳೆ ನ್ಯಾಯಪೀಠ ಸ್ವಾಮೀಜಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.ಇದನ್ನೂ ಓದಿ: ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠ ವಿಚಾರಣೆ ನಡೆಸಿತು. ಸ್ವಾಮೀಜಿಯಾಗಿದ್ದುಕೊಂಡು ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ, ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ, ಅವಹೇಳನಕಾರಿ ಭಾಷೆ ಬಳಸಿದ್ದೀರಿ, ಇದು ವಾಕ್ ಸ್ವಾತಂತ್ರ‍್ಯ ವ್ಯಾಪ್ತಿಯಲ್ಲಿಲ್ಲ ಎಂದು ಆಕ್ರೋಶ ಹೊರಹಾಕಿದೆ.

    ಮುಂದುವರಿದು, ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿಲ್ಲ, ಮೊದಲು ನೀವು ಮಾತನಾಡುವುದು ನಿಲ್ಲಿಸಿ, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ, ಸದ್ಯಕ್ಕೆ ಒಂದೆರಡು ತಿಂಗಳುಗಳ ಕಾಲ ನೀವು ವಿಜಯಪುರಕ್ಕೆ ಭೇಟಿ ನೀಡುವ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ.

    ಗುಪ್ತಚರ ಇಲಾಖೆ ಮಾಹಿತಿ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಕನ್ನೇರಿ ಕಾಡುಸಿದ್ದೇಶ್ವರ ಸ್ವಾಮೀಜಿಯನ್ನು ವಿಜಯಪುರ ಜಿಲ್ಲೆ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧಿಸಿದ್ದರು. ಇದನ್ನು ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಪ್ರಶ್ನಿಸಲಾಗಿತ್ತು. ಆದರೆ ಹೈಕೋರ್ಟ್ ಸ್ವಾಮೀಜಿ ಹೇಳಿಕೆಗೆ ತೀವ್ರ ಕಳವಳ ವ್ಯಕ್ತಪಡಿಸಿ, ನಿರ್ಬಂಧ ನಿರ್ಧಾರ ಸರಿಯಾಗಿದೆ ಎಂದು ಹೇಳಿತು. ಹೈಕೋರ್ಟ್ ಕೂಡ ಅನುಮತಿ ನಿರಾಕರಿಸಿದ ಹಿನ್ನೆಲೆ ಶ್ರೀಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಇದನ್ನೂ ಓದಿ: ವಿಜಯಪುರ | ಪ್ರಚೋದನಕಾರಿ ಭಾಷಣ – ಕನ್ನೇರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿರ್ಬಂಧಿಸಿದ ಡಿಸಿ

     

  • ಯೋಗೀಶ್‌ಗೌಡ ಕೊಲೆ ಸಾಕ್ಷ್ಯನಾಶ ಕೇಸ್- ಸುಪ್ರೀಂನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆ

    ಯೋಗೀಶ್‌ಗೌಡ ಕೊಲೆ ಸಾಕ್ಷ್ಯನಾಶ ಕೇಸ್- ಸುಪ್ರೀಂನಲ್ಲಿ ವಿನಯ್ ಕುಲಕರ್ಣಿಗೆ ಹಿನ್ನಡೆ

    ಧಾರವಾಡ: ಯೋಗೀಶ್‌ಗೌಡ ಕೊಲೆ ಕೇಸ್‌ನಲ್ಲಿ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಮತ್ತೆ ಸಂಕಷ್ಟ ಎದುರಾಗಿದೆ. ಸಾಕ್ಷ್ಯನಾಶ ಕೇಸ್‌ನಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ (Supreme Court) ಪುರಸ್ಕರಿಸಿದೆ.

    2016ರಲ್ಲಿ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೊಲೆಯ ಸಾಕ್ಷ್ಯನಾಶ ಮಾಡಲು ಪ್ರಯತ್ನ ಮಾಡಿದ್ದರು ಎಂದು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮೇಲೆ ಸಿಬಿಐ ಅಧಿಕಾರಿಗಳು ಸಾಕ್ಷಿ ನಾಶದ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನೂ ಓದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳ ಹತ್ಯೆ – ಮಲತಂದೆ ಅರೆಸ್ಟ್


    ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ತಿಂಗಳ ಹಿಂದೆ ಹೈಕೋರ್ಟ್ ಸಾಕ್ಷ್ಯನಾಶದ ಅರ್ಜಿ ವಜಾ ಮಾಡಿತ್ತು. ಅರ್ಜಿ ವಜಾ ಪ್ರಶ್ನಿಸಿ, ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಸದ್ಯ ಸುಪ್ರೀಂಕೋರ್ಟ್ ಸಿಬಿಐ ಅರ್ಜಿ ಪುರಸ್ಕರಿಸಿದ್ದು, ಶಾಸಕ ವಿನಯ್ ಕುಲಕರ್ಣಿಗೆ ಸಾಕ್ಷ್ಯನಾಶದ ಪ್ರಕರಣದಲ್ಲಿ ಹಿನ್ನಡೆಯಾಗಿದೆ.

    ಯೋಗೀಶ್‌ಗೌಡ ಕೊಲೆಯಾದ ನಂತರ ರಾಜ್ಯದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇದನ್ನ ಸಿಬಿಐಗೆ ನೀಡಿತ್ತು. ಸದ್ಯ ಇದೇ ಪ್ರಕರಣದಲ್ಲಿ ವಿನಯ ಕುಲಕರ್ಣಿ ಜೈಲು ಸೇರಿದ್ದಾರೆ.

  • CJI ಗವಾಯಿ ಮೇಲೆ ಶೂ ಎಸೆದ ಕೇಸ್ – ಆರೋಪಿ ರಾಕೇಶ್‌ಗೆ ನೋಟಿಸ್ ನೀಡಲು ನಿರಾಕರಿಸಿದ ಸುಪ್ರೀಂ

    CJI ಗವಾಯಿ ಮೇಲೆ ಶೂ ಎಸೆದ ಕೇಸ್ – ಆರೋಪಿ ರಾಕೇಶ್‌ಗೆ ನೋಟಿಸ್ ನೀಡಲು ನಿರಾಕರಿಸಿದ ಸುಪ್ರೀಂ

    ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ (BR Gavai) ಅವರ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್‌ಗೆ ನೋಟಿಸ್ ನೀಡಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.

    ವಿಚಾರಣೆ ವೇಳೆ ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡುವಂತೆ ನ್ಯಾ.ಸೂರ್ಯ ಕಾಂತ್ ಮತ್ತು ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವನ್ನು ಒತ್ತಾಯಿಸಿದರೂ ಕೂಡ ನ್ಯಾಯಾಲಯ ನಿರಾಕರಿಸಿದೆ. ಈ ರೀತಿ ಪ್ರಕರಣಗಳನ್ನು ತಡೆಗಟ್ಟಲು ಮಾರ್ಗಸೂಚಿಗಳ ಅಗತ್ಯವಿದೆ. ಹೀಗಾಗಿ ಒಂದು ವಾರದ ನಂತರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ – ವಕೀಲನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಎಜಿ ಒಪ್ಪಿಗೆ

    ಈ ಬಗ್ಗೆ ವಾದ ಮಂಡಿಸಿದ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್, ಘಟನೆ ನಡೆದ ಬಳಿಕ ಕೆಲ ಸಮಯ ವಕೀಲ ರಾಕೇಶ್ ಕಿಶೋರ್‌ನ್ನು ಅರೆಸ್ಟ್ ಮಾಡಿದ್ದರು. ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಈ ಬಗ್ಗೆ ಸ್ವತಃ ರಾಕೇಶ್ ಕಿಶೋರ್ ಹೇಳಿಕೆ ನೀಡಿದ್ದು, ದೇವರು ನನಗೆ ಹಾಗೇ ಮಾಡುವಂತೆ ತಿಳಿಸಿದ. ಆದರೆ ನಾನು ಮತ್ತೆ ಅದೇ ರೀತಿಯಾಗಿ ಮಾಡುತ್ತೇನೆ ಅಂತ ಹೇಳಿದ್ದರು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಸೂರ್ಯಕಾಂತ್, ಈ ಕೃತ್ಯವು ತೀವ್ರ ಮತ್ತು ಗಂಭೀರವಾದ ನ್ಯಾಯಾಂಗ ನಿಂದನೆಯಾಗಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಆದರೆ ಒಮ್ಮೆ ಸಿಜೆಐ ಸ್ವತಃ ಕ್ಷಮಿಸಿದ ನಂತರವೂ ಹೀಗೆ ಹೇಳುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

    ಈ ಘಟನೆಯನ್ನು ನಾವು ಹಾಗೇ ಬಿಡುವುದಿಲ್ಲ. ಜನರು ತಮಾಷೆ ಮಾಡುತ್ತಿದ್ದಾರೆ, ಇದು ಸಂಸ್ಥೆಗೆ ಅಗೌರವವನ್ನು ತರುತ್ತದೆ, ದಯವಿಟ್ಟು ನೋಟಿಸ್ ನೀಡಿ ಅವರು ಪಶ್ಚಾತ್ತಾಪ ವ್ಯಕ್ತಪಡಿಸಲಿ. ಇಲ್ಲದಿದ್ದರೆ ಅವರನ್ನು ಜೈಲಿಗೆ ಕಳುಹಿಸಬೇಕು ಎಂದು ವಕೀಲ ವಿಕಾಸ್ ಸಿಂಗ್ ಹೇಳಿದರು.

    ಈ ಸಂಬಂಧ ಸಿಜೆಐ ಅವರು ಈಗಾಗಲೇ ಆರೋಪಿಯನ್ನು ಕ್ಷಮಿಸಿದ್ದಾರೆ. ಅವರ ನಿರ್ಧಾರವನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ. ಹೀಗಾಗಿ ವಿರೋಧ ಮಾಡುವ ಪ್ರಕ್ರಿಯೆ ಆರಂಭಿಸುವ ಬದಲು ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಯಾವುದೇ ಪಶ್ಚಾತ್ತಾಪವಿಲ್ಲ, ಕ್ಷಮೆ ಕೇಳಲ್ಲ, ಶೂ ಎಸೆಯಲು ದೇವರೇ ಪ್ರಚೋದಿಸಿದ್ದಾನೆ: ವಕೀಲ ರಾಕೇಶ್‌ ಕಿಶೋರ್‌

  • ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    ದೇಶಾದ್ಯಂತ ʻಡಿಜಿಟಲ್ ಅರೆಸ್ಟ್ʼ ಹಾವಳಿ – ಸಿಬಿಐ ತನಿಖೆಗೆ ಸುಪ್ರೀಂ ಒಲವು

    – ಎಫ್‌ಐಆರ್‌ ವಿವರ ನೀಡಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನ

    ನವದೆಹಲಿ: ದೇಶಾದ್ಯಂತ ಹೆಚ್ಚುತ್ತಿರುವ ʻಡಿಜಿಟಲ್ ಅರೆಸ್ಟ್ʼ (Digital Arrest) ವಂಚನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ (Supreme Court), ಈ ಪ್ರಕರಣಗಳ ತನಿಖೆಯನ್ನ ಕೇಂದ್ರೀಯ ತನಿಖಾ ದಳಕ್ಕೆ (CBI) ವಹಿಸುವ ಕುರಿತು ಚಿಂತನೆ ನಡೆಸಿದೆ.

    ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನ ಬಳಸಿ ವಂಚಕರು ನಡೆಸುತ್ತಿರುವ ಈ ಕೃತ್ಯಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಿಗೆ ಸಂಬಂಧ ದಾಖಲಾಗಿರುವ ಎಫ್‌ಐಆರ್‌ಗಳ ವಿವರ ನೀಡುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

    ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ತನಿಖೆಯನ್ನ ಕೇಂದ್ರ ತನಿಖಾ ದಳಕ್ಕೆ (CBI) ಹಸ್ತಾಂತರಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಈ ಬಗ್ಗೆ ದೇಶಾದ್ಯಂತದ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ಪ್ರಶ್ನಿಸಿತು. ಆಗ ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಾಗ್ಚಿ, ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ ಪರಿಶೀಲಿಸುವಂತೆ ಸೂಚಿಸಿದರು.

    ಸೈಬರ್ ಅಪರಾಧದಲ್ಲಿ (Cyber Crime) ಅವರಿಗೆ ತಜ್ಞರು ಬೇಕಾದರೆ ನಮಗೆ ಹೇಳಬಹುದು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು. ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, ಸಿಬಿಐ ಗೃಹ ಸಚಿವಾಲಯದ ಸೈಬರ್ ಅಪರಾಧ ವಿಭಾಗದ ಸಹಾಯ ಪಡೆಯುತ್ತಿದೆ ಎಂದು ವಿವರಿಸಿದರು.

    Digital Arrest

    ಅಂತಿಮವಾಗಿ ಏಕರೂಪದ ತನಿಖೆ ನಡೆಯುವಂತೆ ನೋಡಿಕೊಳ್ಳಲು ನಾವು ಇಂದು ನಿರ್ದೇಶನಗಳನ್ನು ನೀಡುತ್ತಿಲ್ಲ. ನಾವು ಎಲ್ಲ ರಾಜ್ಯಗಳಿಗೆ ನೋಟಿಸ್ ನೀಡುತ್ತಿದ್ದೇವೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ದೇಶಾದ್ಯಂತ ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್‌ ಹಗರಣಗಳ ಬೆದರಿಕೆಯನ್ನ ಪರಿಹರಿಸಲು ಅಕ್ಟೋಬರ್ 17 ರಂದು ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.

    ಡಿಜಿಟಲ್ ಅರೆಸ್ಟ್ ಎಂದರೇನು?
    ಡಿಜಿಟಲ್ ಅರೆಸ್ಟ್‌ ಸೈಬರ್ ವಂಚನೆಯ ಒಂದು ವಿಧಾನ. ಇದರಲ್ಲಿ ವಂಚಕರು ಕಾನೂನು ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಆಡಿಯೊ ಅಥವಾ ವೀಡಿಯೊ ಕರೆಗಳಲ್ಲಿ ಜನರನ್ನು ಬೆದರಿಸುತ್ತಾರೆ. ಬಂಧನದ ಸುಳ್ಳು ನೆಪದಲ್ಲಿ ಡಿಜಿಟಲ್ ಒತ್ತೆಯಾಳುಗಳನ್ನಾಗಿ ಮಾಡಿ ಹಣ ಪೀಕುತ್ತಾರೆ.

  • 2020ರ ದೆಹಲಿ ಗಲಭೆ ಕೇಸ್ ಆರೋಪಿಗಳ ಜಾಮೀನು ಅರ್ಜಿ – ಪ್ರತಿಕ್ರಿಯೆ ಸಲ್ಲಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

    2020ರ ದೆಹಲಿ ಗಲಭೆ ಕೇಸ್ ಆರೋಪಿಗಳ ಜಾಮೀನು ಅರ್ಜಿ – ಪ್ರತಿಕ್ರಿಯೆ ಸಲ್ಲಿಸದ ದೆಹಲಿ ಪೊಲೀಸರಿಗೆ ಸುಪ್ರೀಂ ತರಾಟೆ

    ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೂರಿ ಆರೋಪದಲ್ಲಿ ಜೈಲು ಸೇರಿರುವ ಆರು ಆರೋಪಿಗಳ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸಲು ವಿಫಲರಾದ ದೆಹಲಿ ಪೊಲೀಸರನ್ನು (Delhi Police) ಸುಪ್ರೀಂಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ.

    ಆರೋಪಿಗಳಾದ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ ಸೇರಿದಂತೆ ಇತರ ಮೂವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋಟ್‌ನ ನ್ಯಾ.ಅರವಿಂದ್ ಕುಮಾರ್ ಮತ್ತು ಎನ್.ವಿ.ಅಂಜಾರಿಯಾ ಅವರ ಪೀಠವು, ಈಗಾಗಲೇ ಅರ್ಜಿಗಳಿಗೆ ಉತ್ತರಿಸಲು ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯ ನೀಡಲಾಗಿತ್ತು, ಹೀಗಾಗಿ ಈ ವಿಷಯವನ್ನು ಶುಕ್ರವಾರ (ಅ.31) ಇತ್ಯರ್ಥಪಡಿಸುವುದಾಗಿ ಸ್ಪಷ್ಟಪಡಿಸಿದೆ.ಇದನ್ನೂ ಓದಿ: ಅಧಿಕಾರಿಗಳು ಪತ್ರಿಕೆ ಓದಿಲ್ಲವೇ? – ಬೀದಿ ನಾಯಿಗಳ ವಿಚಾರದಲ್ಲಿ ಪ್ರತಿಕ್ರಿಯೆ ಸಲ್ಲಿಸದ ರಾಜ್ಯಗಳಿಗೆ ಸುಪ್ರೀಂ ಚಾಟಿ

    ವಿಚಾರಣೆ ವೇಳೆ, ಆರೋಪಿಗಳು ಸಲ್ಲಿಸಿದ ಮೇಲ್ಮನವಿಗೆ ಪ್ರತಿಕ್ರಿಯಿಸಲು ಇನ್ನೂ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಮನವಿ ಮಾಡಿಕೊಂಡರು. ಈ ವೇಳೆ ಕೋರ್ಟ್, ನೀವು ಈ ಪ್ರಕರಣದಲ್ಲಿ ಮೊದಲ ಬಾರಿ ಹಾಜರಾಗಿರಬಹುದು. ಆದರೆ ನಾವು ಈಗಾಗಲೇ ದೆಹಲಿ ಪೊಲೀಸರಿಗೆ ಸಾಕಷ್ಟು ಸಮಯ ನೀಡಿದ್ದೇವೆ. ಆದರೂ ಕೂಡ ಅವರು ಪ್ರತಿಕ್ರಿಯಿಸಿಲ್ಲ ಎಂದು ಆಕ್ರೋಶ ಹೊರಹಾಕಿದೆ.

    ಈ ವೇಳೆ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಪ್ರಕರಣದ ವಿಚಾರಣೆ ಮುಂದೂಡಲು ಮನವಿ ಮಾಡಿಕೊಂಡರು. ಆದರೆ ಅರ್ಜಿದಾರರ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನುಸಿಂಘ್ವಿ ವಿರೋಧಿಸಿದರು. ಅಂತಿಮವಾಗಿ ನ್ಯಾಯಾಲಯವು ಪ್ರಕರಣವನ್ನು ಶುಕ್ರವಾರಕ್ಕೆ ಮುಂದೂಡಿತು.

    ಆರೋಪಿಗಳು ಸುಮಾರು ಐದು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿದ್ದಾರೆ ಎಂಬ ಅಂಶವನ್ನು ನೆನಪಿನಲ್ಲಿಡಿ ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ವಿದೇಶದಲ್ಲಿ ಕುಳಿತು ಬೆಂಗಳೂರಲ್ಲಿ ಸೈಬರ್ ವಂಚನೆ – ಹ್ಯಾಕರ್ಸ್‌ ಲಿಂಕ್‌ನಲ್ಲಿದ್ದ ಬೆಳಗಾವಿ ಮೂಲದ ಆರೋಪಿ ಅರೆಸ್ಟ್‌

  • ಅಧಿಕಾರಿಗಳು ಪತ್ರಿಕೆ ಓದಿಲ್ಲವೇ? – ಬೀದಿ ನಾಯಿಗಳ ವಿಚಾರದಲ್ಲಿ ಪ್ರತಿಕ್ರಿಯೆ ಸಲ್ಲಿಸದ ರಾಜ್ಯಗಳಿಗೆ ಸುಪ್ರೀಂ ಚಾಟಿ

    ಅಧಿಕಾರಿಗಳು ಪತ್ರಿಕೆ ಓದಿಲ್ಲವೇ? – ಬೀದಿ ನಾಯಿಗಳ ವಿಚಾರದಲ್ಲಿ ಪ್ರತಿಕ್ರಿಯೆ ಸಲ್ಲಿಸದ ರಾಜ್ಯಗಳಿಗೆ ಸುಪ್ರೀಂ ಚಾಟಿ

    – ನ.3 ರಂದು ವಿಚಾರಣೆಗೆ ಹಾಜರಾಗುವಂತೆ ಸಿಎಸ್‌ಗೆ ಸಮನ್ಸ್
    – ವಿಚಾರಣೆಗೆ ಗೈರಾದ್ರೆ ಕ್ರಮದ ಎಚ್ಚರಿಕೆ

    ನವದೆಹಲಿ: ಬೀದಿ ನಾಯಿಗಳ (Stray Dogs) ಸಮಸ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಕ್ರಿಯೆ ದಾಖಲಿಸದ ರಾಜ್ಯಗಳನ್ನು ಸುಪ್ರೀಂಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ಅಫಿಡವಿಟ್‌ಗಳನ್ನು ಸಲ್ಲಿಸಲು ವಿಫಲವಾದ ಕಾರಣ ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು (Chief Secretaries) ತಮ್ಮ ಮುಂದೆ ಹಾಜರಿರುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

    ನ್ಯಾಯಮೂರ್ತಿ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಮುಂದಿನ ವಿಚಾರಣೆಯ ದಿನಾಂಕದಂದು ಅಧಿಕಾರಿಗಳು ಗೈರಾದರೆ ದಂಡ ವಿಧಿಸಲಾಗುವುದು ಅಥವಾ ಬಲವಂತದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.

    ಅಧಿಕಾರಿಗಳು ಪತ್ರಿಕೆ ಓದಿಲ್ಲವೇ ಅಥವಾ ಸಾಮಾಜಿಕ ಮಾಧ್ಯಮಗಳನ್ನು ನೋಡಿಲ್ಲವೇ? ನವೆಂಬರ್ 3 ರಂದು ಎಲ್ಲಾ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.

    ನಾಯಿಗಳ ಜನನ ನಿಯಂತ್ರಣ ನಿಯಮಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ನ್ಯಾಯಾಲಯವು ಈ ಹಿಂದೆ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳು ಮಾತ್ರ ಅಫಿಡವಿಟ್‌ಗಳನ್ನು ಸಲ್ಲಿಸಿವೆ. ಉಳಿದಂತೆ ಎಲ್ಲಾ ರಾಜ್ಯಗಳು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿವೆ. ಅದಕ್ಕಾಗಿ ನ್ಯಾಯಾಲಯ ಚಾಟಿ ಬೀಸಿದೆ.

    ಬೀದಿ ನಾಯಿಗಳ ದಾಳಿಯಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ವಿದೇಶಗಳಲ್ಲಿ ದೇಶದ ಚಿತ್ರಣವನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ ಇಂತಹ ವರದಿಗಳನ್ನು ನಾವು ಓದುತ್ತಿದ್ದೇವೆ ಎಂದು ಸರ್ಕಾರಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಟೀಕಿಸಿದರು.

  • ನ.23ಕ್ಕೆ ಬಿ.ಆರ್ ಗವಾಯಿ ನಿವೃತ್ತಿ – ಮುಂದಿನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ

    ನ.23ಕ್ಕೆ ಬಿ.ಆರ್ ಗವಾಯಿ ನಿವೃತ್ತಿ – ಮುಂದಿನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ

    ನವದೆಹಲಿ: ಸುಪ್ರೀಂಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ (BR Gavai) ಅವರು ನ.23ರಂದು ನಿವೃತ್ತಿಯಾಗಲಿದ್ದು, ಈ ಹಿನ್ನೆಲೆ ಮುಂದಿನ ಮುಖ್ಯ ನ್ಯಾಯಮೂರ್ತಿ ಆಯ್ಕೆ ಪ್ರಕ್ರಿಯೆಗೆ ಇದೀಗ ಚಾಲನೆ ಸಿಕ್ಕಿದೆ.

    ಸಿಜೆಐ ಬಿಆರ್ ಗವಾಯಿ ಅವರಿಗೆ ಪತ್ರ ಬರೆದಿರೋ ಕೇಂದ್ರ ಸರ್ಕಾರ, ತಮ್ಮ ಉತ್ತರಾಧಿಕಾರಿಯ ನೇಮಕಕ್ಕೆ ಶಿಫಾರಸು ಕೋರಿದೆ. ಈ ಪ್ರಕ್ರಿಯೆಯು ಮುಂದಿನ ಸಿಜೆಐ ನೇಮಕಾತಿ ಕಾರ್ಯವಿಧಾನಕ್ಕೆ ಚಾಲನೆ ಕೊಟ್ಟಿದೆ. ಇದು ಸಾಂಪ್ರದಾಯಿಕವಾಗಿ ಹಾಲಿ ಸಿಜೆಐ ಹುದ್ದೆಯಿಂದ ನಿವೃತ್ತಿಯಾಗುವ ಸುಮಾರು ಒಂದು ತಿಂಗಳ ಮೊದಲು ತೆಗೆದುಕೊಳ್ಳಲಾಗುವ ಹೆಜ್ಜೆಯಾಗಿದೆ.ಇದನ್ನೂ ಓದಿ:ಉತ್ತರಾಧಿಕಾರ ಪ್ರಶ್ನೆ ಎತ್ತಿದ ಯತೀಂದ್ರಗೆ ಫಜೀತಿ – ಹೈಕಮಾಂಡ್‌ಗೆ ಕೆಪಿಸಿಸಿ ವರದಿ ರವಾನೆ

    ಹಿರಿತನದ ಪ್ರಕಾರ, ನ್ಯಾಯಮೂರ್ತಿ ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಲು ಮುಂದಿನ ಸ್ಥಾನದಲ್ಲಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರ ನಿವೃತ್ತಿಯ ನಂತರ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ ಭೂತಾನ್‌ಗೆ ನಾಲ್ಕು ದಿನಗಳ ಅಧಿಕೃತ ಭೇಟಿಯಲ್ಲಿರುವ ಸಿಜೆಐ ಗವಾಯಿ, ನವದೆಹಲಿಗೆ ಹಿಂದಿರುಗಿದ ನಂತರ ಕೇಂದ್ರ ಸರ್ಕಾರಕ್ಕೆ ತಮ್ಮ ಶಿಫಾರಸನ್ನು ಕಳುಹಿಸುವ ನಿರೀಕ್ಷೆಯಿದೆ.

    1962 ಫೆಬ್ರವರಿ 10ರಂದು ಹರಿಯಾಣದ ಹಿಸಾರ್‌ನಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1984ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಸಾಂವಿಧಾನಿಕ, ಸೇವಾ ಮತ್ತು ನಾಗರಿಕ ಕಾನೂನಿನಲ್ಲಿ ಪರಿಣತಿ ಹೊಂದಿರುವ ಅವರು ಹಲವಾರು ವಿಶ್ವವಿದ್ಯಾಲಯಗಳು, ಮಂಡಳಿಗಳು ಮತ್ತು ನಿಗಮಗಳನ್ನು ಪ್ರತಿನಿಧಿಸಿದ್ದರು. 2000ರಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದರು.

    2004 ಜನವರಿ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ಅಕ್ಟೋಬರ್ 5, 2018ರಿಂದ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದರು, ನಂತರ ಮೇ 24, 2019ರಂದು ಸುಪ್ರೀಂ ಕೋರ್ಟ್‌ ಬಡ್ತಿ ಪಡೆದರು. ನ್ಯಾಯಮೂರ್ತಿ ಸೂರ್ಯಕಾಂತ್ ಅವರು 2027ರ ಫೆಬ್ರವರಿ 9ರಂದು ನಿವೃತ್ತರಾಗಲಿದ್ದಾರೆ. ಈ ಮೂಲಕ ಅವರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಸುಮಾರು 15 ತಿಂಗಳ ಅಧಿಕಾರಾ ವಹಿಸಿಕೊಳ್ಳಲಿದ್ದಾರೆ.ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ