Tag: supreeth

  • ಮತ್ತೆ ಕೌಟುಂಬಿಕ ಚಿತ್ರಗಳ ‘ಭರಾಟೆ’ಗಿಳಿದರೇ ಚಂದ್ರ ಚಕೋರಿಯ ಹುಡುಗ?

    ಮತ್ತೆ ಕೌಟುಂಬಿಕ ಚಿತ್ರಗಳ ‘ಭರಾಟೆ’ಗಿಳಿದರೇ ಚಂದ್ರ ಚಕೋರಿಯ ಹುಡುಗ?

    ಬೆಂಗಳೂರು: ವರ್ಷಾಂತರಗಳ ಹಿಂದೆ ಚಂದ್ರಚಕೋರಿ ಎಂಬ ಕೌಟುಂಬಿಕ ಮೌಲ್ಯ ಸಾರುವ ಚಿತ್ರದ ಮೂಲಕವೇ ಶ್ರೀಮುರಳಿ ನಾಯಕನಾಗಿ ಆಗಮಿಸಿದ್ದರು. ಆ ನಂತರದಲ್ಲಿ ಒಂದಷ್ಟು ಏಳು ಬೀಳುಗಳನ್ನು ಕಾಣುತ್ತಲೇ ಬಂದಿದ್ದ ಅವರನ್ನು ಪಕ್ಕಾ ಮಾಸ್ ಇಮೇಜಿನೊಂದಿಗೆ ಗೆಲ್ಲುವಂತೆ ಮಾಡಿದ್ದು ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಉಗ್ರಂ. ಉಗ್ರಂ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸುತ್ತಲೇ ನರ್ತನ್ ನಿರ್ದೇಶನದ ಮಫ್ತಿ ತೆರೆ ಕಂಡಿತ್ತು. ಅದೂ ಸೂಪರ್ ಹಿಟ್ ಆಗುತ್ತಲೇ ಇದೀಗ ಶ್ರೀಮುರಳಿಯ ಭರಾಟೆ ಆರಂಭವಾಗಿದೆ.

    ಗಮನೀಯ ಅಂಶವೆಂದರೆ ಶ್ರೀಮುರಳಿ ಆರಂಭಿಕವಾಗಿ ಗೆದ್ದಿದ್ದೇ ಕೌಟುಂಬಿಕ ಚಿತ್ರದ ಮೂಲಕ. ಇದರೊಂದಿಗೆ ಆ ವರ್ಗದ ಪ್ರೇಕ್ಷಕರ ಮನ ಗೆದ್ದಿದ್ದ ಶ್ರೀಮುರಳಿ ಭರಾಟೆ ಮೂಲಕ ಮತ್ತೆ ಹಳೇ ಟ್ರ್ಯಾಕಿಗೆ ಮರಳಲಿದ್ದಾರಾ? ಇಂಥಾದ್ದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಕಾರಣವಾಗಿರೋದು ಚಿತ್ರತಂಡ ಬಿಟ್ಟುಕೊಟ್ಟಿರೋ ಕೆಲ ಅಂಶಗಳು. ನಿರ್ದೇಶಕ ಚೇತನ್ ಕುಮಾರ್ ಇದರಲ್ಲಿ ಕೌಟುಂಬಿಕ ಕಥನವನ್ನೇ ಪ್ರಧಾನವಾಗಿ ಬಳಸಿಕೊಂಡಿದ್ದಾರಂತೆ. ಈ ಕಾರಣದಿಂದಲೇ ಹಲವಾರು ವರ್ಷಗಳ ನಂತರ ಶ್ರೀಮುರಳಿ ಮತ್ತೆ ಕೌಟುಂಬಿಕ ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.

    ಭರಾಟೆ ಭಾರೀ ಆವೇಗದ ಪಕ್ಕಾ ಮಾಸ್ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ನಿರ್ದೇಶಕ ಚೇತನ್ ಕುಮಾರ್ ಇಂಥಾ ಮಾಸ್ ಕಥೆಯನ್ನು ಅದು ಹೇಗೆ ಕೌಟುಂಬಿಕ ಕಥನಕ್ಕೆ ಕನೆಕ್ಟ್ ಮಾಡಿದ್ದಾರೆಂಬ ಕುತೂಹಲ ಇದ್ದೇ ಇದೆ. ಆದರೆ ಈ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಚಿತ್ರತಂಡ ಹೇಳಿಕೊಂಡಿಲ್ಲವಾದರೂ ಭರಾಟೆ ಎಂಬುದು ಕೌಟುಂಬಿಕ ಕಥಾ ಹಂದರ ಹೊಂದಿರುವ ಚಿತ್ರವೂ ಹೌದೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ನಿರ್ಮಾಪಕ ಸುಪ್ರೀತ್ ಈ ಸಿನಿಮಾವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಶ್ರೀಮುರಳಿ ಮತ್ತೆ ಕೌಟುಂಬಿಕ ಪ್ರೇಕ್ಷಕರನ್ನೂ ತಲುಪಿಕೊಳ್ಳುವ ಖುಷಿಯಲ್ಲಿದ್ದಾರೆ.