Tag: Supply Chain

  • ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    – ಮೂರು ದೇಶಗಳ ಚೈನ್ ಲಿಂಕ್ ಮೂಲಕ ವ್ಯಾಪಾರ
    – ವರ್ಷಾಂತ್ಯದೊಳಗೆ ಸಪ್ಲೈ ಚೈನ್ ಬಲಪಡಿಸಲು ಕ್ರಮ
    – ಚೀನಾ ವಸ್ತುಗಳಿಗೆ ಬ್ರೇಕ್ ಹಾಕಲು ಕ್ರಮ
    – ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ದೇಶಗಳ ಸಚಿವರ ಸಭೆ

    ನವದೆಹಲಿ: ಬಹುತೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ರೊಚ್ಚಿಗೆದ್ದಿದ್ದು, ಚೀನಾಗೆ ವ್ಯಾಪಾರ, ವಹಿವಾಟಿನ ಮೂಲಕವೇ ಟಕ್ಕರ್ ಕೊಡಲು ಮುಂದಾಗಿವೆ. ಈ ಹಿಂದೆ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್‍ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಅಮೆರಿಕ ಸಹ ತುಳಿದಿದೆ. ಆದರೆ ಇದೀಗ ಚೀನಾ ಸೊಕ್ಕು ಮುರಿಯಲು ಮತ್ತಷ್ಟು ದೇಶಗಳು ಪ್ಲಾನ್ ಮಾಡುತ್ತಿದ್ದು, ಭಾರತದೊಂದಿಗೆ ಕೈ ಜೋಡಿಸುತ್ತಿವೆ.

    ಇದರ ಭಾಗವಾಗಿ ಇದೀಗ ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಇಂಡೋ- ಪೆಸಿಫಿಕ್ ಸಪ್ಲೈ ಚೈನ್(ಪೂರೈಕೆ ಸರಪಳಿ) ಸ್ಥಿತಿಸ್ಥಾಪಕತ್ವ ಸಾಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ವ್ಯಾಪಾರ ವಲಯದಲ್ಲಿ ಚೀನಾ ತಾನೇ ಎಲ್ಲಾ ಎಂದು ಮೆರೆಯುತ್ತಿದೆ. ಈ ಅಹಂ ತೊಲಗಿಸಲು, ವ್ಯಾಪಾರದ ಮೇಲಿನ ಚೀನಾ ಪ್ರಾಬಲ್ಯವನ್ನು ಎದುರಿಸಲು ಮೂರು ದೇಶಗಳು ಒಟ್ಟಾಗುತ್ತಿವೆ. ಅಲ್ಲದೆ ಇನ್ನೂ ಹೆಚ್ಚಿನ ದೇಶಗಳು ಈ ಒಕ್ಕೂಟದಲ್ಲಿ ಸೇರುವ ಇಚ್ಛೆ ವ್ಯಕ್ತಪಡಿಸಿವೆ.

    ಈ ಮೂರು ದೇಶಗಳ ನಾಯಕರ ಜಂಟಿ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ವೇಳೆ ಸಪ್ಲೈ ಚೈನ್ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬೇಕಾದ ವಿವರಗಳನ್ನು ಕಲೆ ಹಾಕುವಂತೆ ಆದೇಶಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್‍ನ ಹಿರೋಷಿ ಕಾಜಿಯಾಮಾ, ಭಾರತದ ಪಿಯೂಷ್ ಗೋಯಲ್, ಆಸ್ಟ್ರೇಲಿಯಾದ ಸೈಮನ್ ಬರ್ಮಿಂಗ್‍ಹ್ಯಾಮ್ ಭಾಗವಹಿಸಿದ್ದು, ಸಪ್ಲೈ ಚೈನ್ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಈ ಇಂಡೋ- ಪೆಸಿಫಿಕ್ ಭಾಗದ ಇತರ ದೇಶಗಳು ಈ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ತಿಳಿಸಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

    ಇಂಡೋ- ಪೆಸಿಫಿಕ್ ಭಾಗದಾದ್ಯಂತ ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಪ್ರಾಬಲ್ಯವನ್ನು ಎದುರಿಸಲು ಈ ಮೂರು ರಾಷ್ಟ್ರಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ. ಬ್ಲೂಮ್ಬರ್ಗ್ ಸಹ ಸಪ್ಲೈ ಚೈನ್ ಬಲಪಡಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಭಾರತ ಹಾಗೂ ಜಪಾನ್ ಜನರನ್ನು ಉಲ್ಲೇಖಿಸಿ ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಾಷ್ಟ್ರೀಯ ಭದ್ರತಾ ಸಮಾಲೋಚನೆಗಾಗಿ ಅಮೆರಿಕ ಜೊತೆಗೆ ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ಗುಂಪು ರಚಿಸಿಕೊಂಡಿದ್ದು, ಈ ಮೂಲಕ ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್‍ನ ಸದಸ್ಯ ರಾಷ್ಟ್ರಗಳಾಗಿವೆ. ಇದೀಗ ವ್ಯಾಪರಕ್ಕೂ ಇದೇ ರೀತಿಯ ಸಮಾಲೋಚನೆ ನಡೆಸಲಾಗುತ್ತಿದೆ.