Tag: Supermoon

  • 150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    150 ವರ್ಷಗಳ ಬಳಿಕ ರಕ್ತಚಂದಿರ ಗ್ರಹಣ- ತಿರುಪತಿ, ಧರ್ಮಸ್ಥಳ, ಕುಕ್ಕೆಯಲ್ಲಿ ದರ್ಶನವಿಲ್ಲ

    ಬೆಂಗಳೂರು, ಮಂಗಳೂರು: ಸೌರವ್ಯೂಹದಲ್ಲಿ ಇಂದು ಚಂದ್ರ ಚೋದ್ಯ ಸಂಭವಿಸಲಿದೆ. 152 ವರ್ಷಗಳ ಬಳಿಕ ಮೊದಲ ಬಾರಿಗೆ ಒಟ್ಟೊಟ್ಟಿಗೆ ಸೂಪರ್‍ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗೋಚರವಾಗ್ತಿದೆ.

    ರಕ್ತಚಂದಿರ ಗ್ರಹಣದಿಂದಾಗಿ ರಾಜ್ಯದ ಪ್ರಸಿದ್ಧ ದೇವಸ್ಥಾನಗಳಿಗೆ ಬೀಗ ಬಿದ್ದಿದೆ. ಧರ್ಮಸ್ಥಳದ ಮಂಜುನಾಥೇಶ್ವರ, ಕುಕ್ಕೆ, ಚಾಮುಂಡೇಶ್ವರಿ, ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನವಿಲ್ಲ. ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ತಿರುಪತಿಯಲ್ಲಿ ಬೆಳಗ್ಗೆ 11 ಗಂಟೆಗೆ ತಿಮ್ಮಪ್ಪನ ಸನ್ನಿಧಾನದ ಬಾಗಿಲು ಬಂದ್ ಮಾಡಿದ್ರೆ ಮತ್ತೆ ತೆರೆಯೋದು ಇಂದು ರಾತ್ರಿ 9.30ಕ್ಕೆ. ಇತ್ತ ಇದೇ ಮೊದಲ ಬಾರಿಗೆ ಗವಿಗಂಗಾಧರೇಶ್ವನಿಗೆ ಗ್ರಹಣ ಹಿನ್ನೆಲೆಯಲ್ಲಿ ನಾಲ್ಕು ಗಂಟೆಗಳ ಕಾಲ ದರ್ಬೆಯ ಬಂಧನ ಮಾಡಲಾಗಿದೆ. ಗ್ರಹಣ ಮುಗಿದ ಮೇಲೆ ದೋಷ ಕಳೆಯಲು ಹೋಮ ಕೈಗೊಳ್ಳಲಾಗುತ್ತದೆ.

    ರಾತ್ರಿ 9.30-10.30 ವರೆಗೆ ಹೊರಾಂಗಣದಿಂದ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಧರ್ಮಸ್ಥಳದಲ್ಲೂ ಗ್ರಹಣ ಹಿನ್ನಲೆ ದೇವರ ದರ್ಶನದ ಸಮಯ ಬದಲಾವಣೆ ಮಾಡಲಾಗಿದ್ದು, ಮಧ್ಯಾಹ್ನ 2.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ತಡೆ ನೀಡಲಾಗಿದೆ. ರಾತ್ರಿ 9.30 ರಿಂದ 10.30ರವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

    ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.30ರಿಂದ 9 ಗಂಟೆ ತನಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, 9 ಗಂಟೆಯಿಂದ ರಾತ್ರಿ 8.30 ರವರೆಗೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಮಧ್ಯಾಹ್ನದ ಅನ್ನಸಂತರ್ಪಣೆ ಇರಲ್ಲ. ವಿಶೇಷ ಅಂದ್ರೆ ದಾವಣಗೆರೆಯ ಹರಪ್ಪನಹಳ್ಳಿಯಲ್ಲಿ ಹುಚ್ಚಂಗಿ ಜಾತ್ರೆ ನಡೀತಿದೆ.

    1866ರ ಮಾರ್ಚ್ 31ರಲ್ಲಿ ಇಂತಹ ಸೋಜಿಗ ಸಂಭವಿಸಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿತ್ತು. ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ಇವತ್ತು ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರಲಿದ್ದಾನೆ. ಚಂದ್ರಮನನ್ನು ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದೆ.

  • ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಬೆಂಗಳೂರು: ಸೌರವ್ಯೂಹದಲ್ಲಿ ಬುಧವಾರ ಚಂದ್ರಚೋದ್ಯ ನಡೆಯಲಿದೆ. ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದ್ದು, 152 ವರ್ಷಗಳ ಬಳಿಕ ಒಟ್ಟಿಗೇ ಸೂಪರ್ ಮೂನ್, ಬ್ಲಡ್‍ಮೂನ್, ಬ್ಲೂ ಮೂನ್, ಗ್ರಹಣ ಎಲ್ಲವೂ ಸಂಭವಿಸುತ್ತಿದೆ.

    1866ರ ಮಾರ್ಚ್ 31ರಲ್ಲಿ ಈ ರೀತಿ ಒಟ್ಟೊಟ್ಟಿಗೇ ಎಲ್ಲವೂ ಆಗಿತ್ತು. ಭಾರತದಲ್ಲಿ 35 ವರ್ಷಗಳ ಹಿಂದೆ ಬ್ಲೂಮೂನ್ ಮತ್ತು ಗ್ರಹಣ ಒಟ್ಟಿಗೇ ನಡೆದಿತ್ತು. ಪ್ರತಿನಿತ್ಯ ಕಾಣೋ ಚಂದ್ರನಿಗಿಂತ ನಾಳೆ ಗೋಚರಿಸೋ ಚಂದ್ರ ಹೆಚ್ಚು ದೊಡ್ಡದಾಗಿ, ಪ್ರಖರವಾಗಿ ಇರಲಿದ್ದಾನೆ.

    ನಾಳೆ ಹುಣ್ಣಿಮೆಯೂ ಆಗಿದೆ. ಇನ್ನು, ನಾಳಿನ ಬಿದಿಗೆ ಚಂದ್ರಮನ ಕಣ್ತುಂಬಿಕೊಳ್ಳಲು ವಿಶ್ವವೇ ಬೆರಗುಗಣ್ಣಿನಿಂದ ಕಾಯ್ತಿದೆ. ಭಾರತ ಮಾತ್ರವಲ್ಲದೆ, ಅಮೆರಿಕ, ಈಶಾನ್ಯ, ಯುರೋಪ್, ರಷ್ಯಾ, ಆಸ್ಟ್ರೇಲಿಯಾ, ಏಷ್ಯಾ, ಹಿಂದು ಮಹಾಸಾಗರ, ಫೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಕಾಣಿಸಲಿದ್ದು, ವಿಜ್ಞಾನಿಗಳು, ಖಗೋಳ ಶಾಸ್ತ್ರಜ್ಞರು, ವಿಜ್ಞಾನ ವಿದ್ಯಾರ್ಥಿಗಳಲ್ಲಿ ಕಾತರತೆಯನ್ನ ಇಮ್ಮಡಿಗೊಳಿಸಿದೆ.

    ಚಂದ್ರ ಗ್ರಹಣ ಹೇಗೆ ಸಂಭವಿಸುತ್ತೆ?
    ಸೂರ್ಯ ಮತ್ತು ಚಂದ್ರನ ಮಧ್ಯೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ.

    ಅಂಬ್ರ (ಪೂರ್ಣಛಾಯೆ) – ಅಂಬ್ರ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತೆ. ಸೂರ್ಯಗ್ರಹಣದಂತೆ ಸಂಪೂರ್ಣ ಮರೆ ಮಾಚದೆ ಇಡೀ ಚಂದ್ರ ಕೆಂಪು ಬಣ್ಣದಿಂದ ಗೋಚರಿಸುತ್ತದೆ.

    ತಾಮ್ರವರ್ಣ – ಸೂರ್ಯನ ಕಿರಣವನ್ನು ಭೂಮಿ ಸಂಪೂರ್ಣ ಮರೆಮಾಡದೆ, ಬೆಳಕು ಅಂಬ್ರ ಪ್ರದೇಶದ ಮೇಲೆ ಬೀಳುತ್ತದೆ. ಕೆಂಪುಕಿರಣದ ತರಂಗದೂರ ಕಡಿಮೆ ಇರುವ ಕಾರಣ ಚಂದ್ರ ತಾಮ್ರವರ್ಣವಾಗಿ ಗೋಚರಿಸುತ್ತೆ.

    ಪೆನಂಬ್ರ ( ಖಂಡ ಛಾಯೆ) – ಭಾಗದಲ್ಲಿ ಭಾಗಶಃ ಚಂದ್ರ ಗ್ರಹಣ ಸಂಭವಿಸುತ್ತೆ. ಅಲ್ಲಿ ಕಪ್ಪು-ಬಿಳುಪು ಮಿಶ್ರಿತ ಚಂದ್ರನ ಭಾಗಗಳು ಗೋಚರಿಸುತ್ತದೆ..

    ಬ್ಲೂಮೂನ್, ಬ್ಲಡ್‍ಮೂನ್, ಸೂಪರ್ ಮೂನ್ ಹಾಗಂದ್ರೇನು.?
    ಬ್ಲೂಮೂನ್– ಬ್ಲೂಮೂನ್ ಅಥವಾ ನೀಲಿ ಚಂದ್ರ ಅಂದ್ರೆ ಒಂದೇ ತಿಂಗಳಲ್ಲಿ ಎರಡು ಹುಣ್ಣಿಮೆ ಸಂಭವಿಸೋದು. ಜನವರಿ 1ರಂದು ಹುಣ್ಣಿಮೆ ಬಂದಿತ್ತು. ಇದು ಮಾರ್ಚ್ ತಿಂಗಳಿನಲ್ಲೂ ಸಂಭವಿಸಲಿದೆ.

    ಬ್ಲಡ್‍ಮೂನ್ – ಬ್ಲಡ್‍ಮೂನ್ ಅಂದ್ರೆ ಗ್ರಹಣ ಆರಂಭದಲ್ಲಿ ಬೆಳ್ನೊರೆಯಂತೆ ಕಾಣಿಸೋ ಚಂದ್ರ. ಗ್ರಹಣದ ವೇಳೆ ತಾಮ್ರವರ್ಣ ಅಥವಾ ಬಂಗಾರದ ಬಣ್ಣಕ್ಕೆ ತಿರುಗ್ತಾನೆ.

    ಸೂಪರ್ ಮೂನ್ – ಸೂಪರ್ ಮೂನ್ ಅಂದ್ರೆ ಚಂದ್ರ ದೊಡ್ಡದಾಗಿ, ಪ್ರಕಾಶಮಾನವಾಗಿ ಕಾಣಿಸ್ತಾನೆ ಇದು ಸೂಪರ್ ಮೂನ್.

    ಪೆರಿಗಿ, ಅಪೋಗಿ ಹಾಗಂದ್ರೆ ಏನು?
    ಪೆರಿಗಿ – ಅಂದ್ರೆ ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ 7%ರಷ್ಟು ಹೆಚ್ಚು ವಿಸ್ತಾರ ಮತ್ತು 15%ರಷ್ಟು ಹೆಚ್ಚು ಪ್ರಖರವಾಗಿ ಚಂದ್ರ ಕಾಣ್ತಾನೆ. ಅಂದ್ರೆ ಸಾಮಾನ್ಯವಾಗಿ ಭೂಮಿಯಿಂದ ಚಂದ್ರ ಅಂದಾಜು 3 ಲಕ್ಷದ 84 ಸಾವಿರ ಕಿ.ಮೀ ದೂರದಲ್ಲಿ ಇರ್ತಾನೆ. ಆದ್ರೆ, ನಾಳೆ ಗ್ರಹಣದ ಸಂದರ್ಭದಲ್ಲಿ ದೂರದ ಪ್ರಮಾಣ 3 ಲಕ್ಷದ 56 ಸಾವಿರದ 555 ಕಿ.ಮೀ. ಇರಲಿದೆ. ಅಂದರೆ ಚಂದ್ರ ತನ್ನ ಕಕ್ಷೆಯಿಂದ ಸುಮಾರು 27 ಸಾವಿರದ 445 ಕಿ.ಮೀ. ಭೂಮಿಗೆ ಹತ್ತಿರ ಬರ್ತಾನೆ. ಅದಕ್ಕೆ ಪ್ರಕಾಶಮಾನವಾಗಿ ಮತ್ತು ದೊಡ್ಡದಾಗಿ ಕಾಣ್ತಾನೆ.

    ಅಪೋಗಿ – ಅಂದ್ರೆ ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ 7%ರಷ್ಟು ಕಡಿಮೆ ವಿಸ್ತಾರ ಮತ್ತು 15%ರಷ್ಟು ಕಡಿಮೆ ಪ್ರಖರ. ಅಂದರೆ ಪೆರಿಗೆಗೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತಾನೆ. ಅಂದ್ರೆ, ಸಹಜ ಕಕ್ಷೆಗೆ ಚಂದ್ರ ಹೋಗ್ತಾನೆ. ಈ ಎರಡೂ ಪ್ರಕ್ರಿಯೆಯಲ್ಲಿ ಚಂದ್ರನ ಗಾತ್ರದಲ್ಲಿ ಬದಲಾಗುತ್ತೆ. ಅದನ್ನ ಮ್ಯಾಕ್ರೋ, ಮೈಕ್ರೋ ಮೂನ್ ಎಂದು ಕರೆಯಲಾಗುತ್ತದೆ.

    ಮ್ಯಾಕ್ರೋ ಮೂನ್ – ಪೆರಿಗಿಯಲ್ಲಿ ಭೂಮಿಗೆ ಚಂದ್ರ ತುಂಬ ಸನಿಹ ಮತ್ತು ದೊಡ್ಡದಾಗಿ ಗೋಚರಿಸುತ್ತದೆ
    ಮೈಕ್ರೋ ಮೂನ್ – ಅಪೋಗಿಯಲ್ಲಿ ಭೂಮಿಯಿಂದ ಭೂಮಿಯಿಂದ ದೂರ ಮತ್ತು ಸಣ್ಣದಾಗಿ ಗೋಚರಿಸುತ್ತದೆ.

    ನಾಳೆ ಯಾವ ಟೈಮ್‍ಗೆ ಚಂದ್ರಗ್ರಹಣ ಸಂಭವಿಸುತ್ತೆ?
    * ಸಂಜೆ 4:22 – ಪೆನಂಬ್ರಕ್ಕೆ ಪ್ರವೇಶ
    * ಸಂಜೆ 5:18 – ಭಾಗಶಃ ಚಂದ್ರ ಗ್ರಹಣ (ಗ್ರಹಣ ಆರಂಭ)
    * ಸಂಜೆ 6:22 – ಸಂಪೂರ್ಣ ಗ್ರಹಣ
    * ರಾತ್ರಿ 7 ಗಂಟೆ – ಮಧ್ಯ ಗ್ರಹಣ
    * ರಾತ್ರಿ 7.38 – ಪೂರ್ಣ ಚಂದ್ರಗ್ರಹಣ ಅಂತ್ಯ
    * ರಾತ್ರಿ 8.41 – ಭಾಗಶಃ ಚಂದ್ರಗ್ರಹಣ ಅಂತ್ಯ ( ಗ್ರಹಣದಿಂದ ಚಂದ್ರ ಸ್ವಲ್ಪ ಹೊರಗೆ ಬರ್ತಾನೆ)
    * ರಾತ್ರಿ 9.39 – ಚಂದ್ರಗ್ರಹಣ ಅಂತ್ಯ ( ಗ್ರಹಣ ಕಾಲ ಅಂತ್ಯ. ಸಹಜ ಸ್ಥಿತಿಗೆ ಚಂದ್ರ)

    ಭಾರತದ ಪ್ರಮುಖ ನಗರಗಳಲ್ಲಿ ಚಂದ್ರಗ್ರಹಣ ಸಮಯ
    * ಗುವಾಹತಿ – 5:01 ಪಿಎಂ
    * ಪಾಟ್ನಾ – 5: 28 ಪಿಎಂ
    * ದೆಹಲಿ – 5:57 ಪಿಎಂ
    * ಮುಂಬೈ – 6:29 ಪಿಎಂ

    ಜ್ಯೋತಿಷ್ಯ ಶಾಸ್ತ್ರ ಏನ್ ಹೇಳುತ್ತೆ?
    ಜ್ಯೋತಿಷ್ಯ ಶಾಸ್ತ್ರ್ರ ಪ್ರಕಾರ ಈ ಗ್ರಹಣ ಅತ್ಯಂತ ಅಪಾಯಕಾರಿಯಾಗಿದ್ದು ನೈಸರ್ಗಿಕ ವಿಕೋಪಗಳು ನಡೆಯುತ್ತವಂತೆ. ರಾಶಿಗಳ ಮೇಲೂ ಗ್ರಹಣದಿಂದ ವ್ಯತಿರಿಕ್ತ ಪರಿಣಾಮವಾಗಲಿದ್ದು, ಶುಭ, ಅಶುಭ, ಮಿಶ್ರ ಫಲ ಆಗಲಿದೆ. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನಿಗೆ ಪೂರ್ಣ ರಾಹು ಗ್ರಹಣ ಗೋಚರವಾಗಲಿದೆ.

    ಇದನ್ನು ಬೆಂಗಳೂರಿನಲ್ಲಿ ಯಾವಾಗ ನೋಡಬಹುದು?
    ಚಂದ್ರ ಗ್ರಹಣವು ಸಂಜೆ 4.21 ಕ್ಕೆ ಶುರುವಾಗಲಿದ್ದು, ಪೂರ್ಣ ಚಂದ್ರ ಗ್ರಹಣ ರಾತ್ರಿ 7.31 ಕ್ಕೆ ಅಂತ್ಯಗೊಳ್ಳಲಿದೆ. ಆದರೆ ಭಾಗಶಃ ಗ್ರಹಣವು ರಾತ್ರಿ 8.41 ರ ವರೆಗೆ ಕಾಣಬಹುದು.

    ಚಂದ್ರ ಗ್ರಹಣವನ್ನು ಹೇಗೆ ನೋಡಬಹುದು?
    ಯಾವುದಾದರೂ ಎತ್ತರ ಪ್ರದೇಶ ಅಥವಾ ಎತ್ತರ ಕಟ್ಟಡದ ಮೇಲೆ ನಿಂತು ತಿಳಿಯಾದ ಆಕಾಶದಲ್ಲಿ ನೋಡಬಹುದು.

    ಈ ಅದ್ಭುತ ದೃಶ್ಯವನ್ನು ಬರಿಗಣ್ಣಿನಲ್ಲಿ ನೋಡಬಹುದೇ?
    ಹೌದು. ವೈಜ್ಞಾನಿಕವಾಗಿ ಬರಿಗಣ್ಣಿನಲ್ಲಿ ನೋಡುವುದರಿಂದ ಹಾನಿಕಾರಕ ಕಿರಣಗಳಿಂದ ಯಾವುದೇ ಅಪಾಯವಾಗುವುದಿಲ್ಲ. ಗ್ರಹಣದ ಸಮಯದಲ್ಲಿ ನಿತ್ಯ ಚಟುವಟಿಕೆಗಳನ್ನು ಯಾವುದೇ ಭಯವಿಲ್ಲದೆ ಮುಂದುವರೆಸಬಹುದು.

    ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಉಪಕರಣ ಬೇಕೆ?
    ಇಲ್ಲ. ಬೈನಾಕ್ಯುಲರ್ ಮತ್ತು ಸರಳ ದೂರದರ್ಶಕವಿದ್ದರೆ ಚಂದ್ರನು ಸ್ವಲ್ಪ ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ವೀಕ್ಷಿಸಿ ಆನಂದಿಸಬಹುದು.