Tag: Superbike

  • ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಸೂಪರ್ ಬೈಕ್ ಚಾಲನೆ ಮಾಡ್ತಿದ್ದಾಗ ಅಪಘಾತ- ಹೆಲ್ಮೆಟ್ ತೆಗೆಯಲಾಗದೆ ವ್ಯಕ್ತಿ ಸಾವು

    ಜೈಪುರ: 30 ವರ್ಷದ ವ್ಯಕ್ತಿಯೊಬ್ಬರು ಸೂಪರ್ ಬೈಕ್ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿ ಸಾವನ್ನಪ್ಪಿರೋ ಘಟನೆ ಬುಧವಾರದಂದು ರಾಜಸ್ಥಾನದ ಜೈಪುರ್‍ನಲ್ಲಿ ನಡೆದಿದೆ.

    ಬೈಕರ್ ರೋಹಿತ್ ಸಿಂಗ್ ಶೆಖಾವತ್ ಬುಧವಾರ ರಾತ್ರಿ ತನ್ನ ಸೂಪರ್ ಬೈಕ್, ಕವಾಸಾಕಿ ನಿಂಜಾ ಝೆಡ್‍ಎಕ್ಸ್ 10ಆರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದ ಕಾರಣ ಬ್ರೇನ್ ಹ್ಯಾಮೊರೇಜ್ (ಮೆದುಳಿನ ರಕ್ತಸ್ರಾವ)ದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ರೋಹಿತ್ ಆಟೋಮೋಟಿವ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಅವರ ಬೈಕ್ ಸುಮಾರು 22 ಲಕ್ಷ ರೂ ಮೌಲ್ಯದ್ದಾಗಿದ್ದು, ಗಂಟೆಗೆ 300 ಕಿ.ಮೀ ನಷ್ಟು ವೇಗವನ್ನ ತಲುಪುವ ಸಾಮರ್ಥ್ಯ ಹೊಂದಿದೆ. ಕೆಲವು ವರದಿಗಳ ಪ್ರಕಾರ ರೋಹಿತ್ 50 ಸಾವಿರ ರೂ. ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು. ಅತೀ ವೇಗದಲ್ಲಿ ಚಾಲನೆ ಮಾಡುವಾಗಲೂ ಅಲುಗಾಡದಂತೆ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿರುತ್ತದೆ.

    ರೋಹಿತ್ ಅವರು ಇಲ್ಲಿನ ಜೆಎಲ್‍ಎನ್ ಮಾರ್ಗ್‍ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ರಸ್ತೆ ದಾಟುತ್ತಿದ್ದವರಿಗೆ ಗುದ್ದಿದ್ದು, ಬೈಕ್ ಸ್ಕಿಡ್ ಆಗಿ ಸುಮಾರು 50 ಅಡಿಗಳಷ್ಟು ದೂರ ರೋಹಿತ್‍ರನ್ನ ಎಳೆದುಕೊಂಡು ಹೋಗಿದೆ.

    ರಸ್ತೆ ಮೇಲೆ ಬಿದ್ದಿದ್ದ ರೋಹಿತ್‍ಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿದ್ದವರು ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಹೆಲ್ಮೆಟ್ ತೆಗೆಯಲು ಆಗಿರಲಿಲ್ಲ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಹೆಲ್ಮೆಟ್ ಕಟ್ ಮಾಡಿ ತೆಗೆಯಬೇಕಾಯ್ತು ಎಂದು ವರದಿಯಾಗಿದೆ.

    ಅತ್ತ ರೋಹಿತ್ ಅವರ ಬೈಕ್ ಗುದ್ದಿದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ರೋಹಿತ್ ಅವರ ಬೈಕ್ ನಜ್ಜುಗುಜ್ಜಾಗಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.