Tag: Super Specialty Hospital

  • ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

    ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

    ಬೆಂಗಳೂರು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಪರಿಪೂರ್ಣ ಬೆಂಬಲವಿದೆ ಮತ್ತು ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ವರ್ಷಗಳ ಕಾಲದ ನ್ಯಾಯಯುತವಾದ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಈಡೇರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರೇ ಖುದ್ದು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

    ರಾಜ್ಯದ ಕೆಲವೆಡೆ ಮಾತ್ರ ಸುಸಜ್ಜಿತ ಆಸ್ಪತ್ರೆಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಇಲ್ಲ. ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂತಹ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಭೂಷಣವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್

    ಕೋವಿಡ್ ವೇಳೆ ಎಲ್ಲಾ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟೆಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವ ಜನಪರ ಉತ್ಸವ ಅಲ್ಲ, ಅಸ್ತಿತ್ವ ತೋರ್ಪಡಿಕೆಯ ಉತ್ಸವ: ಹಾಲಪ್ಪ ಆಚಾರ್

    KUMARASWAMY

    ರಾಜ್ಯದಲ್ಲಿ ಇನ್ನೆಷ್ಟು ಅಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ಸರ್ಕಾರ ಕಣ್ತೆರೆಯಲೇಬೇಕು. ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರ್ಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್ ಆಸ್ಪತ್ರೆ: 4 ಅಸೆಂಬ್ಲಿ ಕ್ಷೇತ್ರಕ್ಕೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ

    ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ 100 ಬೆಡ್ ಆಸ್ಪತ್ರೆ: 4 ಅಸೆಂಬ್ಲಿ ಕ್ಷೇತ್ರಕ್ಕೊಂದು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ

    – 15 ದಿನದಲ್ಲಿ ಕ್ರಿಯಾ ಯೋಜನೆ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ ಡಿಸಿಎಂ
    – ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೆ/ಎಲ್ಲೆಡೆ ತಾಂತ್ರಿಕ ಸುಧಾರಣೆ

    ಬೆಂಗಳೂರು: ನಗರದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ 100 ಬೆಡ್‍ಗಳ ಸುಸಜ್ಜಿತ ಆಸ್ಪತ್ರೆ ಹಾಗೂ 4 ವಿಧಾನಸಭೆ ಕ್ಷೇತ್ರಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯ ‘ಕ್ರಿಯಾ ಯೋಜನೆ’ಯನ್ನು 15 ದಿನದೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿನೆ ನೀಡಿದರು.

    ಈ ಸಂಬಂಧ ಬೆಂಗಳೂರಿನಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹಾಗೂ ಇತರೆ ಅಧಿಕಾರಿಗಳ ಜತೆ ಮಾತಕತೆ ನಡೆಸಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು.

    ಎಲ್ಲೆಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಬಹುದು, ಯಾವ ಯಾವ ಕ್ಷೇತ್ರಕ್ಕೆ ಅಗತ್ಯವಿದೆ? ಎಲ್ಲೆಲ್ಲಿ ಸ್ಥಳ ಲಭ್ಯವಿದೆ? ಎಲ್ಲೆಲ್ಲಿ ಭೂಮಿಯನ್ನು ಹೊಸದಾಗಿ ಪಡೆದುಕೊಳ್ಳಬೇಕಿದೆ? ಒಟ್ಟಾರೆ ಎಷ್ಟು ವೆಚ್ಚ ಆಗಲಿದೆ? ಆಡಳಿತ ಮತ್ತು ಕಾನೂನಾತ್ಮಕವಾಗಿ ಸರ್ಕಾರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವಂತೆ ಮುಖ್ಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದರು ಡಿಸಿಎಂ.

    ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತ ಮಾಡಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

    ಇನ್ನಷ್ಟು ಸುಧಾರಣಾ ಕ್ರಮ:
    ಈಗ ಎಲ್ಲವೂ ಅನ್‍ಲಾಕ್ ಆಗುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. 1.50 ಕೋಟಿ ಜನಸಂಖ್ಯೆ ಇರುವ ನಗರ ಬೆಂಗಳೂರು. ಅಲ್ಲದೆ, 50 ಲಕ್ಷ ಜನರು ನಿತ್ಯ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಗರದ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವ ಸಂಬಂಧ ಸರಕಾರ ಕ್ರಮ ವಹಿಸಿದೆ ಎಂದರು ಡಿಸಿಎಂ.

    ಪ್ರತೀ ವಾರ್ಡ್ ನಲ್ಲೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಈಗಾಗಲೇ ಕೆಲವೆಡೆ ಸಣ್ಣ ಪ್ರಮಾಣದ ಆರೋಗ್ಯ ಕೇಂದ್ರಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು ಹಾಗೂ ಕಿರಿದಾದ ಜಾಗದಲ್ಲಿರುವ ಕೇಂದ್ರಗಳನ್ನು ವಿಶಾಲ ಜಾಗಕ್ಕೆ ಶಿಫ್ಟ್ ಮಾಡಲಾಗುವುದು. ಸೂಕ್ತ ಮೂಲಸೌಕರ್ಯ, ಸಿಬ್ಬಂದಿ ನೇಮಕ ಮಾಡುವುದರ ಜತೆಗೆ, ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದರು ಉಪ ಮುಖ್ಯಮಂತ್ರಿ.

    ತಾಂತ್ರಿಕವಾಗಿಯೂ ಆರೋಗ್ಯ ಕೇಂದ್ರಗಳಲ್ಲಿ ಸುಧಾರಣೆಗಳನ್ನು ಮಾಡಲಾಗುವುದು. ಎಲೆಕ್ಟ್ರಾನಿಕ್ ಮೆಡಿಕಲ್ ದಾಖಲೆಗಳಿರಬೇಕು. ಎಲ್ಲ ಮಾಹಿತಿ ಜತೆಗೆ ಡ್ಯಾಶ್‍ಬೋರ್ಡ್ ಕಡ್ಡಾಯವಾಗಿ ಇರಬೇಕು. ಡಯಾಗ್ನಾಸ್ಟಿಕ್ ಕೇಂದ್ರಗಳ ನೆಟ್‍ವರ್ಕ್ ಆಗಿ ವರದಿಗಳೆಲ್ಲ ಕ್ಲೌಡ್‍ನಲ್ಲಿ ಲಭ್ಯ ಇರಬೇಕು. ಹೀಗೆ ಸಮಗ್ರ ಮಾಹಿತಿ ಇದ್ದರೆ ಮುಂದಿನ ಕೋವಿಡ್ ಸ್ಥಿತಿ ಎದುರಿಸುವುದು ಸುಲಭ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.

    ಟ್ರಾಯಾಜಿಂಗ್ ಹೆಚ್ಚಳ:
    ಅನ್‍ಲಾಕ್ ಆಗುತ್ತಿದ್ದಂತೆಲ್ಲ ಹೊರಗಿನಿಂದ ಹೆಚ್ಚು ಜನ ಬೆಂಗಳೂರಿಗೆ ವಾಪಸ್ ಬರುತ್ತಿದ್ದಾರೆ. ಇವರೆಲ್ಲರನ್ನೂ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ದಿನಕ್ಕೆ ಕೊನೆಪಕ್ಷ 75,000 ರಾಪಿಡ್, ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗುವುದು. ಪೂಲಿಂಗ್ ಟೆಸ್ಟ್ ಕೂಡ ಮಾಡುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ, ಈಗಾಗಲೇ ನೇಮಕ ಮಾಡಿಕೊಂಡಿರುವ ಸಿಬ್ಬಂದಿಯಲ್ಲಿ ಒಬ್ಬರನ್ನೂ ಕೆಲಸದಿಂದ ತೆಗೆಯಬಾರದು ಎಂದು ಬಿಬಿಎಂಪಿಗೆ ಸೂಚಿಸಲಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.

    ಪರೀಕ್ಷೆಗಳ ಬಗ್ಗೆ ಮೈಮರೆಯುವಂತಿಲ್ಲ. ಮತ್ತೆ ಸೋಂಕು ಯಾವಾಗ ಬೇಕಾದರೂ ಹೆಚ್ಚಾಗಬಹುದು. ಎಲ್ಲ ಮುನ್ನಚ್ಚರಿಕೆ ವಹಿಸಬೇಕೆಂದು ಬಿಬಿಎಂಪಿಗೆ ತಿಳಿಸಲಾಗಿದೆ ಎಂದರು ಅವರು.

    ಮಾರ್ಗಸೂಚಿ ಮೇಲೆ ನಿಗಾ
    ಸಾರ್ವಜನಿಕ ಸ್ಥಳಗಳಲ್ಲಿ, ಅಂಗಡಿ, ಮುಂಗಟ್ಟು, ಮಾಲ್ ಹಾಗೂ ಕಚೇರಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ. ಅದರ ಮೇಲೆ ನಿಗಾ ಇಡಲಾಗುವುದು. ಒಂದು ವೇಳೆ ಎಲ್ಲೇ ಆದರೂ ಎಸ್‍ಒಪಿ ಪಾಲನೆ ಆಗದಿದ್ದರೆ ಒಂದು ಫೊಟೋ ತೆಗೆದು ಬಿಬಿಎಂಪಿಗೆ ವಾಟ್ಸಾಪ್ ಮಾಡಿದರೆ, ಅದರ ಆಧಾರದ ಮೇಲೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇದು ಖಾಸಗಿ ಸಂಸ್ಥೆಗಳ ಕಚೇರಿಗಳಿಗೂ ಅನ್ವಯ ಆಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

    ತಿಂಗಳೊಳಗೆ 80% ಜನರಿಗೆ ಲಸಿಕೆ
    ಬೆಂಗಳೂರಿನಲ್ಲಿ ಈಗಾಗಲೇ 45 ವರ್ಷ ಮೇಲ್ಪಟ್ಟ 65% ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೆಲ ಕ್ಷೇತ್ರಗಳಲ್ಲಿ 95%ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಕಡಿಮೆ ಇರುವ ಕಡೆ ಹೆಚ್ಚೆಚ್ಚು ಲಸಿಕೀಕರಣ ಮಾಡುವಂತೆ ಸೂಚಿಸಲಾಗಿದೆ. ಈ ತಿಂಗಳೊಳಗೆ ಈ ವಯಸ್ಸಿನ 80% ಜನರಿಗೆ ಲಸಿಕೆ ಕೊಡುವ ಕೆಲಸ ಮುಗಿಯಬೇಕು ಎಂದು ತಿಳಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.

    ಉಪ ಮುಖ್ಯಮಂತ್ರಿಯವರ ಕಾರ್ಯದರ್ಶಿ ಪಿ.ಪ್ರದೀಪ, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಮತ್ತಿತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

  • ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    ಕುಂಟುತ್ತಾ ಸಾಗಿದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ

    – ಸಿದ್ದು ಬಜೆಟ್‍ಗೆ ಮನ್ನಣೆ ನೀಡದ ರಾಜ್ಯ ಸರ್ಕಾರ

    ಬೆಳಗಾವಿ: ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸುಮಾರು 140 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

    2015ರ ರಾಜ್ಯ ಬಜೆಟ್ ನಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಬೆಳಗಾವಿ ಜಿಲ್ಲೆಗೆ 219 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಘೋಷಣೆ ಮಾಡಿದರು. ಬಳಿಕ ಹಂತ ಹಂತವಾಗಿ ಅನುದಾನ ಬಿಡುಗಡೆಯಾದ ಬಳಿಕ ಈ ಯೋಜನೆ ಸಂಪೂರ್ಣ ನನೆಗುದಿಗೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2018ರ ಬಜೆಟ್ ನಲ್ಲಿ ಮತ್ತೆ ಸಿದ್ದರಾಮಯ್ಯ ಬೆಳಗಾವಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುದಾನ ಬಿಡುಗಡೆ ಮಾಡಿದ್ದರು.

    2018ರ ಅಕ್ಟೋಬರ್ ನಲ್ಲಿ ಕಾಮಗಾರಿಗೆ ಬಿಮ್ಸ್ ಅಧಿಕಾರಿಗಳು ಚಾಲನೆ ನೀಡಿದರು. ಆದರೆ ಕಾಮಗಾರಿ ಪ್ರಾರಂಭವಾಗಿ ಒಂದೂವರೆ ವರ್ಷ ಕಳೆದರೂ ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದಕ್ಕೆ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ನೀಡಿದ ಅವಧಿಯೂ ಮುಕ್ತಾಯವಾಗಿದೆ. ಈ ಕಾಮಗಾರಿಗೆ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಕಾಯಬೇಕು. ಆದರೆ ಬಿಜೆಪಿ ಸರ್ಕಾರ ಸಿದ್ದರಾಮಯ್ಯನವರ ಬಜೆಟ್ ನಲ್ಲಿ ಘೋಷಣೆ ಮಾಡಿರುವ ಉದ್ದೇಶದಿಂದ ಈ ಕಾಮಗಾರಿಗೆ ಅನುದಾನ ನೀಡುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ಮಾಡಿ ಕಾಲ ಮಿತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು.

    ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾದರೆ ಜಿಲ್ಲೆಯ ರೋಗಿಗಳಿಗೆ ಹೆಚ್ಚಿನ ಅನಕೂಲವಾಗಲಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಿಲ್ಲ. ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಹದಗೆಟ್ಟು ಹೋಗಿದ್ದು, ಈ ಯೋಜನೆಯಲ್ಲಿ ಹೈಟೆಕ್ ಹೆರಿಗೆ ವಿಭಾಗವನ್ನು ಸೇರಿಸಬೇಕೆನ್ನುವುದು ಜಿಲ್ಲೆಯ ಜನರ ಒತ್ತಾಯವಾಗಿದೆ.