Tag: Sunset

  • ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

    ದಿನಕ್ಕೆ ಒಂದಲ್ಲ.. 16 ಬಾರಿ ಆಗುತ್ತೆ ಸೂರ್ಯೋದಯ, ಸೂರ್ಯಾಸ್ತ – ಬಾಹ್ಯಾಕಾಶದಲ್ಲಿ ಸುನಿತಾ ವಿಲಿಯಮ್ಸ್‌ಗೆ ಆಗ್ತಿರೋ ಅನುಭವಗಳೇನು?

    ಭೂಮಿಯಲ್ಲಿರುವ ನಮಗೆ ದಿನವೊಂದಕ್ಕೆ ಒಂದೇ ಸೂರ್ಯೋದಯ ಮತ್ತು ಸೂರ್ಯಾಸ್ತ ಕಾಣುತ್ತದೆ. ಒಂದು ದಿನಕ್ಕೆ 24 ಗಂಟೆಗಳು. ಅದರಲ್ಲಿ 12 ಗಂಟೆ ಬೆಳಕು, ಇನ್ನು 12 ಗಂಟೆ ಕತ್ತಲಿರುತ್ತದೆ. ಸೂರ್ಯೋದಯದ (Sunrises) ಮೂಲಕ ಬೆಳಗಿನ ಆಗಮನ ಮತ್ತು ಸೂರ್ಯಾಸ್ತದ (Sunsets) ಮೂಲಕ ಕತ್ತಲಾಗಮನವಾಗುತ್ತದೆ. ಇವೆರಡೂ ದಿನಕ್ಕೆ ಒಮ್ಮೆ ಮಾತ್ರ ಸಂಭವಿಸುತ್ತದೆ. ಆದರೆ, ನಿಮಗೆ ಗೊತ್ತೆ? ಬಾಹ್ಯಾಕಾಶದಲ್ಲಿರುವ ಗಗನಯಾತ್ರಿಗಳಿಗೆ ದಿನಕ್ಕೆ ಒಮ್ಮೆಯಲ್ಲ ಬರೋಬ್ಬರಿ 16 ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಅನುಭವವಾಗುತ್ತಿದೆ. ಹಾಗಂದ್ರೆ ನೀವು ನಂಬ್ತೀರಾ? ನಂಬಲೇಬೇಕು.

    ಬಾಹ್ಯಾಕಾಶದಲ್ಲಿರೋ ಗಗನಯಾತ್ರಿಗಳಿಗೆ ಯಾಕೆ ಈ ಅನುಭವ? ಬ್ರಹ್ಮಾಂಡದ ಕೌತುಕವೊಂದಕ್ಕೆ ಸಾಕ್ಷಿಯಾಗಿರೋದ್ಯಾರು? ವಿಶೇಷ ಅನುಭವದ ಬಗ್ಗೆ ಅವರು ಏನು ಹೇಳ್ತಾರೆ? ಅದರ ಹಿಂದಿರುವ ವೈಜ್ಞಾನಿಕ ಕಾರಣಗಳೇನು ಎಂಬ ಬಗ್ಗೆ ತಿಳಿಯೋಣ ಬನ್ನಿ. ಇದನ್ನೂ ಓದಿ: ಟ್ರಂಪ್‌ಗೆ `ಎಕ್ಸ್‌’ನಲ್ಲಿ ಪಾಕ್ ಪ್ರಧಾನಿ ಅಭಿನಂದನೆ – ಬ್ಯಾನ್ ಮಾಡಿದ್ದ ಸೋಶಿಯಲ್‌ ಮೀಡಿಯಾ ವೇದಿಕೆ ಬಳಸಿದ್ದಕ್ಕೆ ಜನರ ಆಕ್ಷೇಪ

    ಬಾಹ್ಯಾಕಾಶ ನಿಲ್ದಾಣದಲ್ಲಿ ಈ ವಿಶಿಷ್ಟ ವಿದ್ಯಾಮಾನಕ್ಕೆ ಸಾಕ್ಷಿಯಾಗಿರುವವರು ಬರ‍್ಯಾರು ಅಲ್ಲ. ಭಾರತ ಮೂಲಕ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams). ಎಂಟು ದಿನಗಳಲ್ಲಿ ಭೂಮಿಗೆ ವಾಪಸ್ ಆಗುವ ಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಕೋರ್ ಅವರು ಐದು ತಿಂಗಳಿಂದ ಅಲ್ಲೇ ಸಿಲುಕಿಕೊಂಡಿದ್ದಾರೆ. ಈ ಸನ್ನಿವೇಶದಲ್ಲಿ ಗಗನಯಾತ್ರಿಗಳಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತದ ವಿದ್ಯಾಮಾನದಲ್ಲಿ ಅದ್ಭುತ ಅನುಭವವಾಗಿದೆ. ಅಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ದಿನಕ್ಕೆ ಒಂದು ಬಾರಿಯಲ್ಲ ಬರೋಬ್ಬರಿ 16 ಕಾಣುತ್ತಿದ್ದೇವೆ ಎಂದು ಸುನಿತಾ ವಿಲಿಯಮ್ಸ್ ಹೇಳಿಕೊಂಡಿದ್ದಾರೆ. ಬಾಹ್ಯಾಕಾಶದಲ್ಲಿ ವಾಸಿಸುವವರಿಗೆ ಅಂತಹ ವೀಕ್ಷಣೆಗಳು ಜೀವನದ ನಿಯಮಿತ ಭಾಗವಾಗುತ್ತವೆ.

    16 ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಹಿಂದಿನ ವಿಜ್ಞಾನ ಕಾರಣವೇನು?
    ಜೂ.5 ರಂದು ಬೋಯಿಂಗ್ ಸ್ಟಾರ್‌ಲೈನರ್ ಹೊತ್ತೊಯ್ದಿದ್ದ ರಾಕೆಟ್, ಜೂ.6 ರಂದು ಬಾಹ್ಯಾಕಾಶ ನಿಲ್ದಾಣದ ಬಳಿ ತಲುಪಿತು. ಆದರೆ ಸ್ಟಾರ್‌ಲೈನರ್ ಎಂಜಿನ್‌ಗಳಲ್ಲಿ ದೋಷ ಕಂಡಿದ್ದರಿಂದ ನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಜೋಡಿಸಲಾಯಿತು. ಈಗ ಇಬ್ಬರೂ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಇದ್ದಾರೆ. ಅದು ಪ್ರತಿ ಗಂಟೆಗೆ ಸರಿಸುಮಾರು 28,000 ಕಿಮೀ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿದೆ. ಐಎಸ್‌ಎಸ್ ಪ್ರತಿ 90 ನಿಮಿಷಗಳಿಗೊಮ್ಮೆ ಭೂಮಿಯ ಪೂರ್ತಿ ಕಕ್ಷೆಯನ್ನು ಪೂರ್ಣಗೊಳಿಸುತ್ತದೆ. ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಯಲ್ಲಿ ಗಗನಯಾತ್ರಿಗಳು ಸುಮಾರು 45 ನಿಮಿಷಗಳಿಗೊಮ್ಮೆ ಸೂರ್ಯೋದಯ ಅಥವಾ ಸೂರ್ಯಾಸ್ತವನ್ನು ಅನುಭವಿಸುತ್ತಾರೆ. ಭೂಮಿ ಮೇಲಿರುವ ಜನರು ದಿನಕ್ಕೆ ಒಂದು ಬಾರಿ ಸೂರ್ಯೋದಯ ಮತ್ತು ಸೂರ್ಯಾಸ್ತ ಅನುಭವ ಹೊಂದುತ್ತಾರೆ. ಆದರೆ, ನಾವು ದಿನಕ್ಕೆ 16 ಬಾರಿ ಸೂರ್ಯ ಉದಯಿಸುವುದು ಮತ್ತು 16 ಬಾರಿ ಮುಳುಗುವುದನ್ನು ಕಾಣುತ್ತಿದ್ದೇವೆಂದು ಗಗನಯಾತ್ರಿಗಳು ಹೇಳಿಕೊಂಡಿದ್ದಾರೆ.

    ಬಾಹ್ಯಾಕಾಶದಲ್ಲಿ ಹೊಸ ಹಗಲು-ರಾತ್ರಿಗಳ ರಿದಮ್!
    ಭೂಮಿಯ ಮೇಲಿನ ಜೀವನಕ್ಕಿಂತ ಬಾಹ್ಯಾಕಾಶದ ಬದುಕು ಭಿನ್ನವಾಗಿರುತ್ತದೆ. ಭೂಮಿಯಲ್ಲಿ ಒಂದು ದಿನವು 12 ಗಂಟೆಗಳ ಬೆಳಕು ಮತ್ತು 12 ಗಂಟೆಗಳ ಕತ್ತಲೆಯನ್ನು ಒಳಗೊಂಡಿರುತ್ತದೆ. ಆದರೆ, ಐಎಸ್‌ಎಸ್‌ನಲ್ಲಿ ಗಗನಯಾತ್ರಿಗಳು ಹೆಚ್ಚು ವೇಗದ ಚಕ್ರದ ಮೂಲಕ ಬದುಕುತ್ತಾರೆ. ಅವರು 45 ನಿಮಿಷಗಳ ಹಗಲು ಮತ್ತು ಅಷ್ಟೇ ನಿಮಿಷಗಳ ಕತ್ತಲನ್ನು ಅನುಭವಿಸುತ್ತಾರೆ. ಇದು ಹಗಲು-ರಾತ್ರಿಗಳ ನಿರಂತರ ಲಯವನ್ನು ಸೃಷ್ಟಿಸುತ್ತದೆ. ಇದನ್ನೂ ಓದಿ: ವಾಸನೆ ಪತ್ತೆಹಚ್ಚುವುದರಲ್ಲಿ ನಾಯಿ, ಇಲಿಯನ್ನೇ ಮೀರಿಸುವ ರೋಬೊಟ್ ಸೃಷ್ಟಿ

    ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಸಮಯವನ್ನು ಹೇಗೆ ಗುರುತಿಸುತ್ತಾರೆ?
    ಬಾಹ್ಯಾಕಾಶದಲ್ಲಿ ಸಾಂಪ್ರದಾಯಿಕ ಹಗಲು-ರಾತ್ರಿ ಲಯಗಳು ಅನ್ವಯಿಸುವುದಿಲ್ಲ. ಏಕೆಂದರೆ ಗಗನಯಾತ್ರಿಗಳು ಪ್ರತಿ 90 ನಿಮಿಷಗಳಿಗೊಮ್ಮೆ ಗ್ರಹವನ್ನು ಸುತ್ತುತ್ತಾರೆ. ಸೂರ್ಯನ ಬೆಳಕಿನ ನೈಸರ್ಗಿಕ ಸೂಚನೆಗಳಿಲ್ಲದೆ, ಐಎಸ್‌ಎಸ್‌ನಲ್ಲಿನ ಗಗನಯಾತ್ರಿಗಳು ತಮ್ಮ ವೇಳಾಪಟ್ಟಿಯನ್ನು ರೂಪಿಸಲು ಸಂಘಟಿತ ಸಾರ್ವತ್ರಿಕ ಸಮಯವನ್ನು (ಯುಟಿಸಿ) ಅನುಸರಿಸುತ್ತಾರೆ. ಅವರ ದಿನಚರಿಗಳು ಹೆಚ್ಚು ರೆಜಿಮೆಂಟ್ ಆಗಿದ್ದು, ಐದು ನಿಮಿಷಗಳ ಮಧ್ಯಂತರದಲ್ಲಿ ಕೆಲಸ, ಊಟ ಮತ್ತು ವಿಶ್ರಾಂತಿಯನ್ನು ನಿಗದಿಪಡಿಸಲಾಗಿದೆ. ಬಾಹ್ಯಾಕಾಶದ ಶೂನ್ಯ ಗುರುತ್ವ ಪರಿಸರದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಶಿಸ್ತಿನ ರಚನೆಯು ಅತ್ಯಗತ್ಯ.

    ಗಗನಯಾತ್ರಿಗಳು ಪರಮಾಣು ಗಡಿಯಾರಗಳನ್ನು (ಆಟೋಮಿಕ್ ಕ್ಲಾಕ್) ಅವಲಂಬಿಸಿರುತ್ತಾರೆ. ಇದು ನ್ಯಾವಿಗೇಷನ್‌ನಂತಹ ಕಾರ್ಯಗಳಿಗೆ ವಿಶೇಷವಾಗಿ, ಭೂಮಿಯ ಕಕ್ಷೆಯಿಂದಾಚೆಯ ಕಾರ್ಯಾಚರಣೆಗಳಿಗೆ ಅತ್ಯಂತ ನಿಖರತೆಯನ್ನು ಒದಗಿಸುತ್ತದೆ. ಬಾಹ್ಯಾಕಾಶ ಕಾರ್ಯಾಚರಣೆಗಳ ಯಶಸ್ಸಿಗೆ ಈ ಸಮಯಪಾಲನಾ ಸಾಧನಗಳು ನಿರ್ಣಾಯಕವಾಗಿವೆ.

    ಸುನಿತಾ ವಿಲಿಯಮ್ಸ್ ಯಾವಾಗ ಭೂಮಿಗೆ ವಾಪಸ್ ಆಗ್ತಾರೆ?
    ಭಾರತ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ಅವರು ಈಗ ಭೂಮಿಯಿಂದ 400 ಕಿ.ಮೀ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಅಲ್ಲಿಗೆ ಹೋಗಿ ವಾಪಸ್ ಬರುವುದು ಅಷ್ಟು ಸುಲಭವಲ್ಲ. ಒಮ್ಮೆ ಹೋದರೆ ಕನಿಷ್ಠ 6 ತಿಂಗಳು ಅಲ್ಲೇ ಇರಬೇಕಾಗುತ್ತದೆ. ವರ್ಷದವರೆಗೂ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ಬರಬಹುದು. ಇದಕ್ಕೆಲ್ಲ ಗಗನಯಾತ್ರಿಗಳು ಅಗತ್ಯ ಸಿದ್ಧತೆಗಳೊಂದಿಗೆ ಸಜ್ಜಾಗಿರುತ್ತಾರೆ. 2025ರ ಫೆಬ್ರವರಿ ವರೆಗೂ ಸುನಿತಾ ವಿಲಿಯಮ್ಸ್ ಅಲ್ಲೇ ಉಳಿಯಬೇಕಾಗಿದೆ.

    ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ಯಾಕೆ?
    ನಾಸಾದ ಸಹಭಾಗಿತ್ವದಲ್ಲಿ ಬೋಯಿಂಗ್ ರೂಪಿಸಿದ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವ ಸಹಿತ ಪರೀಕ್ಷಾರ್ಥ ಪ್ರಯಾಣದ ಭಾಗವಾಗಿ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಸುನಿತಾ ಮತ್ತು ಬುಚ್ ಇಬ್ಬರೂ ಗಗನಯಾತ್ರಿಗಳು ಜೂ.5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಎಂಟು ದಿನಗಳ ಕಾಲ ಅಲ್ಲಿದ್ದು ಜೂ.14 ರಂದು ಸ್ಟಾರ್‌ಲೈನರ್ ಮೂಲಕವೇ ಭೂಮಿಗೆ ವಾಪಸ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಅವರು ಬಾಹ್ಯಾಕಾಶದಲ್ಲೇ ಉಳಿಯುವಂತಾಗಿದೆ. ಇದನ್ನೂ ಓದಿ: ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ‘ಲಕ್ಕಿ’ ಕಾರ್ ಸಮಾಧಿ – ಅಂತ್ಯಸಂಸ್ಕಾರಕ್ಕೆ 4 ಲಕ್ಷ ಖರ್ಚು, 1,500 ಮಂದಿ ಭಾಗಿ

    ಏನಿದು ಐಎಸ್‌ಎಸ್?
    ಐಎಸ್‌ಎಸ್ ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಇದು ಸುಮಾರು 109 ಅಡಿ ಉದ್ದವಿದೆ. 9,25,335 ಪೌಂಡ್ (419,725 ಕೆ.ಜಿ) ತೂಕವಿದೆ. ಇದಕ್ಕೆ ಅಳವಡಿಸಿರುವ ಸೋಲಾರ್ ಪ್ಯಾನೆಲ್ ಒಂದು ಎಕರೆ ಪ್ರದೇಶದಷ್ಟು ವ್ಯಾಪಿಸಿದೆ. ಸಂಶೋಧನೆಯ ಭಾಗವಾಗಿ ಬಾಹ್ಯಾಕಾಶಕ್ಕೆ ಆಗಮಿಸುವ ಗಗನನೌಕೆಗಳನ್ನು ಹೊರತುಪಡಿಸಿದರೆ, ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಬ್ಬಂದಿಗೆ ಜೀವಿಸಲು ಮತ್ತು ಕಾರ್ಯಾಚರಣೆ ನಡೆಸಲು ಸ್ಥಳಾವಕಾಶವನ್ನು ಇದು ಹೊಂದಿದೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳು ಇವೆ. ಏಕಕಾಲದಲ್ಲಿ ಐಎಸ್‌ಎಸ್ ಎಂಟು ಬಾಹ್ಯಾಕಾಶ ನೌಕೆಗಳಿಗೆ ಸ್ಥಳಾವಕಾಶ ನೀಡಬಲ್ಲದು.

  • ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ಸಂಪ್ರದಾಯಕ್ಕೆ ಬ್ರೇಕ್‌ – ಸೂರ್ಯಾಸ್ತದ ಬಳಿಕ ಕೆಂಪು ಕೋಟೆಯಲ್ಲಿ ಮೋದಿ ಭಾಷಣ

    ನವದೆಹಲಿ: ಸಂಪ್ರದಾಯ ಮುರಿದು ಇದೇ ಮೊದಲ ಬಾರಿಗೆ ಸೂರ್ಯಾಸ್ತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಭಾಷಣ ಮಾಡಲಿದ್ದಾರೆ.

    ಗುರು ತೇಗ್‌ ಬಹಾದ್ದೂರ್‌ ಅವರ 400ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾತ್ರಿ 9:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಕೆಂಪು ಕೋಟೆಯ ಮೇಲೆ ಭಾಷಣ ಮಾಡದೇ ಹುಲ್ಲುಹಾಸಿನ ಮೇಲೆ ಮಾತನಾಡುತ್ತಿರುವುದು ಇಂದಿನ ಕಾರ್ಯಕ್ರಮದ ವಿಶೇಷ.

    1675ರಲ್ಲಿ ಸಿಖ್ ಸಮುದಾಯದ 9ನೇ ಗುರು ಗುರು ತೇಗ್ ಬಹದ್ದೂರ್ ಕೊಲ್ಲಲು ಮೊಘಲ್ ದೊರೆ ಔರಂಗಜೇಬ್ ಆದೇಶ ನೀಡಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಶಾಂತಿ ಮೂಡಿಸುವ ಬಗ್ಗೆ ಭಾಷಣವಿರಲಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.  ಇದನ್ನೂ ಓದಿ: WHO ಮುಖ್ಯಸ್ಥರಿಗೆ ʼತುಳಸಿಭಾಯ್‌ʼ ಎಂದು ಗುಜರಾತಿ ಹೆಸರಿಟ್ಟ ಮೋದಿ

    ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿಗಳು ಕೆಂಪುಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವುದು ಸಂಪ್ರದಾಯ. ಸ್ವಾತಂತ್ರ್ಯ ದಿನ ಹೊರತು ಪಡಿಸಿ ಎರಡನೇ ಬಾರಿಗೆ ದಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಿದ್ದಾರೆ.

    2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಸರ್ಕಾರ ರಚನೆಯ 75ನೇ ವರ್ಷಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿದ್ದ ಮೋದಿ  ಬೆಳಗ್ಗೆ 9 ಗಂಟೆಗೆ ಭಾಷಣ ಮಾಡಿದ್ದರು.

    ಇಂದು ರಾತ್ರಿ 400 ಸಿಖ್ ಸಂಗೀತಗಾರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮೋದಿ ಅವರು ಅಂಚೆ ಸ್ಟಾಂಪ್ ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಯಾರಿಗೂ ರಾಮನ ಪರಿಚಯವಿಲ್ಲವೆಂದ ಕಾಂಗ್ರೆಸ್ ಸಂಸದೆ

    ಗೃಹ ಸಚಿವ ಅಮಿತ್‌ ಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 11 ಮುಖ್ಯಮಂತ್ರಿಗಳು ಸೇರಿದಂತೆ ರಾಷ್ಟ್ರದ ವಿವಿಧೆಡೆಯಿಂದ ಸಿಖ್‌ ಪ್ರಮುಖರು ಭಾಗಿಯಾಗಲಿದ್ದಾರೆ. 400 ಸಿಖ್‌ ಜಥೆದಾರ್‌ ಕುಟುಂಬಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.

  • ಆಗಸದಲ್ಲಿ ಮೂಡಿತು ಸಮುದ್ರದ ಅಲೆಗಳು!

    ಆಗಸದಲ್ಲಿ ಮೂಡಿತು ಸಮುದ್ರದ ಅಲೆಗಳು!

    ನೆಲಮಂಗಲ: ಆಕಾಶದಲ್ಲಿ ಮೋಡಗಳು ಸಮುದ್ರದ ಅಲೆಗಳ ರೂಪದಲ್ಲಿ ಕಾಣುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದು ಸಂಜೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಈ ದೃಶ್ಯಗಳು ಆಗಸದಲ್ಲಿ ಕಂಡು ಬಂದಿದೆ.

    ನೆಲಮಂಗಲ

    ಸೂರ್ಯಾಸ್ತದ ವೇಳೆ ಪದರಪದರ ರೂಪದಲ್ಲಿ ಮೋಡಗಳ ನಡುವಿನ ಬೆಳಕು, ನೋಡುಗರಲ್ಲಿ ವಿಸ್ಮಯಕಾರಿ ಆಕರ್ಷಿಸಿತ್ತು. ಈ ಆಗಸದಲ್ಲಿನ ಚಮತ್ಕಾರ ಹಾಗೂ ಪ್ರಕೃತಿಯ ಸೋಜಿಗವನ್ನು ಸಾರ್ವಜನಿಕರು ಒಂದು ಕ್ಷಣ ನಿಂತು ಕಣ್ತುಂಬಿಕೊಂಡರು.

    ನೆಲಮಂಗಲ ಮಾತ್ರವಲ್ಲದೇ ಬೆಂಗಳೂರಿನ ಹಲವು ಕಡೆ ಆಕಾಶದಲ್ಲಿ ಈ ದೃಶ್ಯ ಕಂಡುಬಂದಿದ್ದು ಜನ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸಿ ಸಂತಸ ಪಟ್ಟರು.

    ಹೊರಮಾವು
    ಹೊರಮಾವು
    ಹೊರಮಾವು
    ಯಶವಂತಪುರ
    ಬೈಯಪ್ಪನಹಳ್ಳಿ
    ಬೈಯಪ್ಪನಹಳ್ಳಿ
    ಬೈಯಪ್ಪನಹಳ್ಳಿ
  • ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: ವರ್ಷದ ಕೊನೆಯ ಸೂರ್ಯಾಸ್ತದ ಹೊನ್ನ ಬೆಳಕಿನ ಕ್ಷಣಗಳು

    ಮಡಿಕೇರಿ: 2017ರ ಕೊನೆಯ ದಿನವಾದ ಇಂದು ಮಂಜಿನ ನಗರಿ ಮಡಿಕೇರಿಯ ರಾಜಾಸೀಟ್ ನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಪ್ರವಾಸಿಗರು ಆಗಮಿಸಿದ್ದರು.

    ಮುಗಿಲಿನಲ್ಲಿ ಮೋಡದ ನಡುವೆ ಬಣ್ಣದ ಚಿತ್ತಾರ ಬಿಡಿಸಿದ್ದ ನೇಸರನನ್ನು ಕಂಡು ಪುಳಕಿತರಾದ ಪ್ರವಾಸಿಗರು 2017ರ ರವಿಮಾಮನಿಗೆ ಶುಭ ವಿದಾಯ ಹೇಳಿ ನಾಳೆಯ ಹೊಸ ಸೂರ್ಯನ ಬರುವಿಕೆಗಾಗಿ ಸಂಭ್ರಮಿಸಿದರು. ಸಂಜೆ ವೇಳೆಗೆ ತಣ್ಣಗಾದ ಸೂರ್ಯ ಕೆಂಪು ಕಡಲಲ್ಲಿ ತೇಲಿದಂತೆ ಕಂಡು ಬಂದ. ಸೂರ್ಯಾಸ್ತದ ಕೊನೇ ಕ್ಷಣ ಹತ್ತಿರವಾಗುತ್ತಿದ್ದಂತೆ ನೆರೆದಿದ್ದ ಜನರಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಕೈ ಬೀಸಿ ಹಾಯ್ ಬಾಯ್ ಎನ್ನುತ್ತಾ ಹಲವು ಸಿಹಿ ಕಹಿಗಳ ಮಿಶ್ರಣ ಹೊಂದಿದ್ದ 2017 ಕ್ಕೆ ಜನರು ಖುಷಿ ಖುಷಿಯಿಂದಲೇ ಬೀಳ್ಕೊಟ್ಟರು.

    ಎಂದಿನಂತೆ ಜಗತ್ತು ಬೆಳಗುವ ತನ್ನ ಕಾಯಕ ಮುಗಿಸಿ ರಂಗು ರಂಗಾಗಿ ಕೊನೆಯ ದರ್ಶನ ನೀಡಿ ಮೋಡದ ಮರೆಯಲ್ಲಿ ಮರೆಯಾದ ರವಿಮಾಮನನ್ನು ಕಂಡು ಜನರು ಪುಳಕಿತರಾದರು. ವರ್ಷದ ಕೊನೆಯ ಸೂರ್ಯನನ್ನು ಆತ್ಮೀಯವಾಗಿ ಬೀಳ್ಕೊಡಲೆಂದೇ ದೇಶದ ವಿವಿದೆಡೆಗಳಿಂದ ಇಲ್ಲಿಗೆ ಆಗಮಿಸಿದ್ದರು. ತಮ್ಮ ಕ್ಯಾಮೆರಾಗಳಲ್ಲಿ ವರ್ಷದ ಕೊನೆ ಸೂರ್ಯಾಸ್ತವನ್ನು ಸೆರೆಹಿಡಿದು ಕೊಂಡು ಕೊನೆಯ ಕ್ಷಣಗಳನ್ನು ಖುಷಿ ಖುಷಿಯಿಂದ ಹಂಚಿಕೊಂಡರು. 2017ರ ನೇಸರನಿಗೆ ವಿದಾಯ ಹೇಳಿ 2018ರ ನೇಸರನ ನಿರೀಕ್ಷೆಯಿಂದ ಹೊರನಡೆದರು.

     

  • ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಹಚ್ಚ ಹಸಿರಿನಿಂದ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ ಆಗುಂಬೆ

    ಉಡುಪಿ: ಆಗುಂಬೆಯಾ ಪ್ರೇಮ ಸಂಜೆಯಾ ಬಿಡಲಾರೆ ನಾನು ಎಂದಿಗೂ.., ಓ ಗೆಳೆತಿಯೆ ಓ ಗೆಳತಿಯೇ ಓ.,ಗೆಳತಿಯೇ. ಗೆಳತಿಯೇ ಗೆಳತಿಯೇ. ಗೆಳತಿ ಜೊತೆಯಲ್ಲಿ ಇಲ್ಲದಿದ್ದರೂ ಆಗುಂಬೆಗೆ ಹೋದವರು ಈ ಹಾಡನ್ನೊಂದು ಸಾರಿ ಗುನುಗಿಯೇ ಗುನುಗುತ್ತಾರೆ. ಅದು ಆಗುಂಬೆಯ ಮೋಡಿ.

    ಆಗುಂಬೆ ಈ ಹೆಸರೇ ಒಂತರ ರೋಮಾಂಚಕ. ಶಿವಮೊಗ್ಗ- ಉಡುಪಿ ಜಿಲ್ಲೆಯ ನಡುವೆ ಸಿಗುವ ಆಗುಂಬೆ ಘಾಟ್ ಪ್ರವಾಸಿಗರಿಗೆ ಹಾಟ್ ಸ್ಪಾಟ್. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಆಗುಂಬೆ, ಬೇಸಿಗೆಯಲ್ಲಿ ನೀಲಿ ಆಗಸದಿಂದ ಕಣ್ಮನ ಸೆಳೆಯುತ್ತದೆ. ಆಗುಂಬೆಯ ಚೆಲುವು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಚಂದ. ಆಗಸದೆತ್ತರದಲ್ಲಿ ನಿಂತು ಮೋಡಗಳನ್ನು ಕಾಲ ಬುಡದಲ್ಲಿ ಕಾಣುವ ಅವಕಾಶವಿರೋದು ಮಳೆಗಾಲದಲ್ಲಿ ಮಾತ್ರ. ಘಾಟ್‍ನ ತಿರುವು ಮುರುವು ರಸ್ತೆ ಸಂಪೂರ್ಣ ಮೋಡದಿಂದ ಮುಸುಕಿರುತ್ತದೆ. ಕಾಣದ ರಸ್ತೆಯಲ್ಲಿ ವಾಹನ ಸಂಚಾರವೇ ಚಾಲಕರಿಗೆ ಒಂದು ಸವಾಲಾಗಿರುತ್ತದೆ.

    ಹೋಗೋದು ಹೇಗೆ?: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಮೊದಲು ಹೆಬ್ರಿಗೆ ಹೋಗಬೇಕು. ಅಲ್ಲಿಂದ ಸೋಮೇಶ್ವರದ ಮೂಲಕ ಆಗುಂಬೆ ಪ್ರವೇಶ. ಪಶ್ಚಿಮ ಘಟ್ಟದ ತಪ್ಪಲು ಊರೇ ಸೋಮೇಶ್ವರ. ಸೋಮೇಶ್ವರದ ಬಡಕಿಲ್ಲಾಯ ಹೋಟೆಲ್‍ನಲ್ಲಿ ಬಿಸಿ ಬಿಸಿ ಇಡ್ಲಿ, ತೋವೆ, ಗರಂ ಚಾಯ್ ಕುಡಿದು ಆಗುಂಬೆ ನೋಡಲು ಹೊರಟ್ರೆ ಅದ್ರ ಮಜಾನೇ ಬೇರೆ. ಆಗುಂಬೆ ರಸ್ತೆಯ ತಿರುವು ಮುರುವು ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು ನಮ್ಮನ್ನು ಸ್ವಾಗತ ಮಾಡುತ್ತವೆ. ರಸ್ತೆಯ ಮೇಲೆಯೇ ಮಳೆನೀರು ಹರಿದು ಜಲರಾಶಿಗಳು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ.

    ಸನ್ಸೆಟ್ ಪಾಯಿಂಟಲ್ಲಿ ನಿಂತರೆ ಆಗುಂಬೆಯ ಚೆಲುವು ಆಸ್ವಾದಿಸಬಹುದು. ಮಳೆಗಾಲದಲ್ಲಂತೂ ಹಾಲಿನ ಸಾಗರದಂತೆ ಬೆಟ್ಟದ ಕೆಳಭಾಗ ಕಾಣಿಸುತ್ತದೆ. ಮೋಡ ಮರೆಯಾದಾಗ ಅಲ್ಲಲ್ಲಿ ಜಲಪಾತಗಳು ಇಣುಕುತ್ತದೆ, ಮತ್ತೆ ಮರೆಯಾಗುತ್ತದೆ. ಇದು ನೋಡುಗರಿಗೆ ಹಿತವಾದ ಮುದವನ್ನು ನೀಡುತ್ತದೆ.

    ಮೈಗೆ ಸೋಕಿಕೊಂಡೇ ಮೋಡಗಳು ತೇಲಿ ಹೋಗುವ ಅನುಭವವಾಗಬೇಕಂದ್ರೆ ಆಗುಂಬೆಗೆ ಬರಬೇಕು. ದಕ್ಷಿಣ ಭಾರತದ ಚಿರಾಪುಂಜಿ ಅಂತಲೇ ಆಗುಂಬೆಯನ್ನು ಕರೆಯಲಾಗುತ್ತದೆ. ಮಳೆಗಾಲದ ಆರು ತಿಂಗಳು ಯಾವಾಗ ಹೋದರೂ ಆಗುಂಬೆಯಲ್ಲಿ ಸದಾ ಮಳೆಯಿರುತ್ತದೆ. ಲ್ಯಾಟರೈಟ್ ಅನ್ನೋ ಶಿಲೆಯಿಂದಲೇ ಈ ಆಗುಂಬೆಯ ಗುಡ್ಡ ಪ್ರದೇಶ ನಿರ್ಮಾಣವಾಗಿದೆ.

    ಆಗುಂಬೆ ಘಾಟ್ ಹತ್ತಿ ಹೋದರೆ ಆಗುಂಬೆ ಪೇಟೆ ಸಿಗುತ್ತದೆ. ಮಾಲ್ಗುಡಿ ಡೇಸ್ ಚಿತ್ರೀಕರಣವಾದ ಊರದು. ಆಗುಂಬೆ ಪೇಟೆ ಇಂದಿಗೂ ಅದೇ ಹಳೆಯ ಮನೆಗಳ ಶೈಲಿಯನ್ನು, ಬೀದಿಯನ್ನು ಉಳಿಸಿಕೊಂಡಿದೆ.

    ಮಂಗಗಳ ಕಾಟ: ಆಗುಂಬೆ ಘಾಟ್‍ನ ಯಾವ ತಿರುವಿನಲ್ಲಿ ನಿಲ್ಲಿಸಿದರೂ ಕೋತಿಗಳಿಂದ ರಕ್ಷಣೆ ಪಡೆಯಬೇಕಂದ್ರೆ ಕಷ್ಟಪಡಲೇಬೇಕು. ಕೈಯ್ಯಲ್ಲೇನಾದ್ರು ತಿಂಡಿ ಪೊಟ್ಟಣ ಹಿಡ್ಕೊಂಡಿದ್ರೆ ನಮ್ಮ ಕಥೆ ಮುಗಿಯಿತು. ಮಂಗಗಳು ಮುಗಿಬೀಳೋ ಮೊದಲು ತಿಂಡಿ ಹಂಚಿಬಿಡದಿದ್ದರೆ ನಮ್ಮನ್ನು ಅವುಗಳು ಬಿಡೋದೆ ಇಲ್ಲ.

    ಬೈಕ್ ರೈಡ್‍ನಲ್ಲೇ ಆಗುಂಬೆ ಹತ್ತಿ: ಆಗುಂಬೆ ಘಾಟ್‍ನ ನಿಜವಾದ ಸೊಬಗು ಅನುಭವಿಸಬೇಕಾದ್ರೆ ಆಗುಂಬೆಯನ್ನು ಬೈಕಿನಲ್ಲೇ ಹತ್ತಬೇಕು. ಜೋರು ಮಳೆ ಸುರಿಯುತ್ತಿರಬೇಕು, ಒದ್ದೆಯಾಗಬೇಕು ಆಗಷ್ಟೇ ನಿಜವಾದ ಆಗುಂಬೆಯನ್ನು ಅನುಭವಿಸಬಹುದು.

    ಆಗುಂಬೆಯ ಸನ್ಸೆಟ್ ಪಾಯಿಂಟಲ್ಲಿ ಮುಳ್ಳುಸೌತೆ ಮತ್ತು ಅನಾನಾಸು ಸ್ಲೈಸ್‍ಗೆ ಖಾರ ಪುಡಿ, ಉಪ್ಪು, ಪೆಪ್ಪರ್ ಸೇರಿಸಿ ಹತ್ತಾರು ಜನ ವ್ಯಾಪಾರ ಮಾಡ್ತಾರೆ. ಮಳೆಯ ನಡುವೆ ಖಡಕ್ ಸ್ಲೈಸ್‍ಗಳನ್ನು ತಿನ್ನೋ ಖುಷಿಯೇ ಬೇರೆ. ಒಂದು ದಿನದ ಮಟ್ಟಿಗೆ ಎಂಜಾಯ್ ಮಾಡಬೇಕಂದ್ರೆ ಆಗುಂಬೆ ಪರ್ಫೆಕ್ಟ್ ಪ್ಲೇಸ್. ಬೋಟಿಂಗ್, ಸ್ಮಿಮ್ಮಿಂಗ್, ವ್ಯವಸ್ಥೆಯೂ ಆಗುಂಬೆಯಲ್ಲಿದ್ದು ಸಿಕ್ಕಾಪಟ್ಟೆ ಎಂಜಾಯ್ ಮಾಡೋ ಅವಕಾಶವಿದೆ.

    ಬೇಸಿಗೆ ಆಗುಂಬೆ: ಬೇಸಿಗೆ ಆಗುಂಬೆಯಲ್ಲಿ ಬರೀ ಹೆಸರಿಗಷ್ಟೇ ಬೇಸಿಗೆ. ಆದ್ರೆ ಆಗುಂಬೆ ವರ್ಷಪೂರ್ತಿ ತಂಪಾಗಿಯೇ ಇರುತ್ತೆ. ಸಮುದ್ರದಿಂದ ಜೋರಾಗಿ ಬೀಸೋ ಗಾಳಿ ಪಶ್ಚಿಮ ಘಟ್ಟಕ್ಕೆ ಅಪ್ಪಳಿಸುತ್ತದೆ. ಹೀಗಾಗಿ ಸದಾ ತಂಗಾಳಿ ಬೀಸ್ತಾ ತಂಪಾದ ವಾತಾವರಣ ಇರುತ್ತದೆ.

    ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದಕ್ಕೂ, ಆಗುಂಬೆ ಸನ್ಸೆಟ್ ಪಾಯಿಂಟಲ್ಲಿ ಸೂರ್ಯಾಸ್ತ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಆಗಸದಲ್ಲಿ ನಿಂತು ಸಮುದ್ರ ನೋಡೋ ಅವಕಾಶ ಮತ್ತೆಲ್ಲೂ ಸಿಗಲ್ಲ. ಸೂರ್ಯಾಸ್ತದ ವೇಳೆ ಬಾನೆಲ್ಲಾ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಅವಕಾಶ ಸಿಕ್ರೆ, ಸಮಯ ಮಾಡ್ಕೊಂಡು ಒಂದ್ಸಾರಿ ಆಗುಂಬೆ ಸೊಬಗು ನೋಡೋದನ್ನು ಮಿಸ್ ಮಾಡ್ಕೋಬೇಡಿ.