Tag: Sunil Kumar Desai

  • ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    – ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಉದ್ಘಾಟನೆ

    ಶಿವಮೊಗ್ಗ: ಶಿವಮೊಗ್ಗದ  ನಾಡಹಬ್ಬ ದಸರಾಗೆ (Shivamogga Dasara) ಚಾಲನೆ ಸಿಕ್ಕಿದೆ. ಕೋಟೆ ರಸ್ತೆಯ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ಸಿನಿಮಾ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ (Sunil Kumar Desai) ಚಾಲನೆ ನೀಡಿದರು.

    ಉದ್ಘಾಟನೆ ಬಳಿಕ ಮಾತನಾಡಿದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ, ಹಬ್ಬದ ಆಚರಣೆಗಳ ಹಿಂದೆ ಉತ್ತಮ ಉದ್ದೇಶ ಇದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಆಚರಣೆ ಇದೆ. ಕೆಟ್ಟದ್ದನ್ನು ನಾಶ ಮಾಡಬೇಕು ಎಂಬುದು ಈ ಆಚರಣೆಗಳ ಉದ್ದೇಶ. ರಾವಣ ಅತ್ಯಂತ ಪ್ರಚಂಡ, ಉತ್ತಮ ಆಡಳಿತಗಾರ, ಶಿವಭಕ್ತ. ಆದರೆ ಆತನಿಗೆ ಅಹಂಕಾರವಿತ್ತು. ಒಂಭತ್ತು ಒಳ್ಳೆಯ ಗುಣವಿದ್ದರೂ ಅಹಂಕಾರ ಇದ್ದರೆ ಪ್ರಯೋಜನವಿಲ್ಲ. ರಾಮನಿಂದ ರಾವಣನ ನಾಶವಾಗುತ್ತದೆ. ರಾವಣನ ದಹನ ಕೆಟ್ಟದ್ದರ ನಾಶದ ಸಂಕೇತವಾಗಿದೆ ಎಂದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ

    ಪಾಲಿಕೆ ಆವರಣದಿಂದ ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇವಸ್ಥಾನದವರಗೆ ನಾಡ ದೇವಿ ಚಾಮುಂಡೇಶ್ವರಿಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಈ ಸಂದರ್ಭ ಪಾಲಿಕೆಯ ಅಧಿಕಾರಿಗಳು, ಮಾಜಿ ಸದಸ್ಯರು ವಾದ್ಯಗಳಿಗೆ ನೃತ್ಯ ಮಾಡಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

    ಕೋಟೆ ಚಂಡಿಕಾದುರ್ಗಾ ಪರಮೇಶ್ವರಿ ದೇಗುಲದ ಮುಂಭಾಗ ಮೆರವಣಿಗೆ ಪೂರ್ಣಗೊಳ್ಳುತ್ತಿದ್ದಂತೆ ಚಾಮುಂಡೇಶ್ವರಿ ದೇವಿಗೆ ಮಂಗಳಾರತಿ ಬೆಳಗಲಾಯಿತು. ಸಂಸದ ರಾಘವೇಂದ್ರ, ಶಾಸಕ ಎಸ್‌ಎನ್ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಸೇರಿ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: Breaking | ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್

  • ‘ಉದ್ಘರ್ಷ’ದಿಂದ ಎದ್ದು ಬಂದರು ದೇಸಾಯಿ

    ‘ಉದ್ಘರ್ಷ’ದಿಂದ ಎದ್ದು ಬಂದರು ದೇಸಾಯಿ

    ಬೆಂಗಳೂರು: ಕನ್ನಡ ಸಿನಿಮಾ ಇತಿಹಾಸವನ್ನೊಮ್ಮೆ ತಿರುಗಿ ನೋಡಿದರೆ ದೇಸಾಯಿ ತಮ್ಮ ಸಿನಿಮಾಗಳ ಮೂಲಕ ತಮ್ಮದೇ ಆದ ಸೊಗಡನ್ನು ಉಳಿಸಿಕೊಂಡುಬಂದವರು. ನಡುವೆ ಒಂದಷ್ಟು ಸಿನಿಮಾಗಳಲ್ಲಿ ಅದು ಘಮ ಕಳೆದುಕೊಂಡಿದ್ದನ್ನು ಸ್ವತಃ ದೇಸಾಯಿಯೇ ಒಪ್ಪಿಕೊಂಡಿದ್ದಾರೆ. ಇವತ್ತು ರಿಲೀಸಾಗಿರುವ ಉದ್ಘರ್ಷ ಸಿನಿಮಾವನ್ನು ನೋಡಿದ ಯಾರಿಗೇ ಆದರೂ ಸುನೀಲ್ ಕುಮಾರ್ ದೇಸಾಯಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದಾರೆ ಅನ್ನಿಸದೇ ಇರಲಾರದು. ಯಾಕೆಂದರೆ, ಈ ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗಿ, ರೋಚಕ ಸಿನಿಮಾಗಳನ್ನು ಇಷ್ಟಪಡುವ ವರ್ಗಕ್ಕೆಂದೇ ದೇಸಾಯಿ `ಉದ್ಘರ್ಷ’ವನ್ನು ಹೆಣೆದುಕೊಟ್ಟಿದ್ದಾರೆ.

    ಕೊಲೆಯೊಂದರ ಸುತ್ತ ನಡೆಯುವ ಕಥೆ, ಅದಕ್ಕೊಂದು ಉಪಕತೆ ಸೇರಿಸಿ ಕ್ಷಣಕ್ಷಣಕ್ಕೂ ಗಾಬರಿ ಹುಟ್ಟಿಸುವ ಸನ್ನಿವೇಶಗಳನ್ನು ಸೃಷ್ಟಿಸಿ ಉದ್ಘರ್ಷವಾಗಿಸಿದ್ದಾರೆ ನಿರ್ದೇಶಕ ದೇಸಾಯಿ. ದಕ್ಷಿಣ ಭಾರತದ ಖ್ಯಾತ ಖಳನಟರೆಲ್ಲಾ ಇಲ್ಲಿ ಒಂದಾಗಿ ನಟಿಸಿದ್ದಾರೆ. ಠಾಕೂರ್ ಅನೂಪ್ ಸಿಂಗ್ ಬರೀ ವಿಲನ್ ಮಾತ್ರವಲ್ಲ, ಹೀರೋ ಆಗಿ ಕೂಡಾ ನೆಲೆ ನಿಲ್ಲಬಹುದು ಅನ್ನೋದು ಇಲ್ಲಿ ರುಜುವಾತಾಗಿದೆ.

    ಇದು ಥ್ರಿಲ್ಲರ್ ಮತ್ತು ಆಕ್ಷನ್ ವರ್ಗಕ್ಕೆ ಸೇರಿದ ಸಿನಿಮಾ ಆಗಿರೋದರಿಂದ ಒಂದಿಷ್ಟು ರಕ್ತದ ಕಲೆ, ಹೊಡೆದಾಟಗಳು ಹೆಚ್ಚಿವೆ. ಆದರೆ ಅವು ಅತಿರಂಜಕವೆನಿಸದೇ ಸಂದರ್ಭಕ್ಕೆ ಸೂಕ್ತವಾಗಿರೋದು ಸಮಾಧಾನದ ವಿಷಯ. ಬಹುತೇಕ ಸಿನಿಮಾ ದಟ್ಟಾರಣ್ಯದಲ್ಲೇ ಸಾಗುತ್ತದೆ. ಒಬ್ಬರ ಬೆನ್ನಟ್ಟಿ ಒಬ್ಬರು ಸಾಗೋ ದಾರಿಯಲ್ಲಿ ಬೆಚ್ಚಿಬೀಳುವಂಥಾ ಘಟನೆಗಳು, ಅದರೊಳಗೊಂದು ಪ್ರೀತಿಯ ಎಳೆ, ದ್ವೇಷ, ಹಣಕ್ಕಾಗಿ ಏನನ್ನು ಬೇಕಾದರೂ ಮಾಡುವ ದುಷ್ಟರ ಜಾಡು ಎಲ್ಲವೂ ತೆರೆದುಕೊಳ್ಳುತ್ತಾ ಸಾಗುತ್ತದೆ.

    ಹಿಂದೆ ಸುನೀಲ್ ಕುಮಾರ್ ದೇಸಾಯಿ ತರ್ಕ, ನಿಷ್ಕರ್ಷದಂಥಾ ಥ್ರಿಲ್ಲರ್ ಎಲಿಮೆಂಟುಗಳಿದ್ದ ಸಿನಿಮಾಗಳನ್ನು ಮಾಡಿದ್ದವರು. ಆಗ ಮೊಬೈಲ್ ಫೋನಿನ ಕಲ್ಪನೆಯೇ ಇರಲಿಲ್ಲ. ಆದರಿದು ಮೊಬೈಲ್ ಯುಗ. ಆ ಮೊಬೈಲೇ ಚಿತ್ರದ ಟರ್ನಿಂಗ್ ಪಾಯಿಂಟ್‍ಗಳಲ್ಲಿ ಒಂದಾಗಿರುವುದು ನಿರ್ದೇಶಕರು ಅಪ್‍ಡೇಟ್ ಆಗಿರೋದನ್ನು ಸೂಚಿಸುತ್ತದೆ. ಒಟ್ಟಾರೆಯಾಗಿ ಸಣ್ಣದೊಂದು ಕಥೆ ಮತ್ತು ಗಟ್ಟಿಯಾದ ಚಿತ್ರಕತೆಯನ್ನಿಟ್ಟುಕೊಂಡು ತಯಾರಿಸಿರುವ ದೇಸಾಯಿ ಬ್ರಾಂಡ್‍ನ ಈ ಸಿನಿಮಾ ಎಲ್ಲರಿಗೂ ರುಚಿಸಬಲ್ಲದು.

    ರೇಟಿಂಗ್: 4/5

  • ದೇಸಾಯಿ ಕಟೌಟ್ ನೋಡಿ!

    ದೇಸಾಯಿ ಕಟೌಟ್ ನೋಡಿ!

    ಸಿನಿಮಾಗಳು ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಹೀರೋಗಳ ಕಟೌಟ್ ಕೆಲವೊಮ್ಮೆ ನಾಯಕಿಯ ಕಟೌಟ್ ನಿಲ್ಲಿಸಿ ಅದಕ್ಕೆ ಸ್ಟಾರ್ ಕಟ್ಟಿ, ಹಾರ ಹಾಕೋದು ವಾಡಿಕೆ. ಆದರೆ ಉದ್ಘರ್ಷ ಸಿನಿಮಾ ಬಿಡುಗಡೆಯಾಗಿರುವ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್ ಥಿಯೇಟರ್ ಮುಂದೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ ಕಟೌಟ್ ನಿಲ್ಲಿಸಿದ್ದಾರೆ.

    ಒಂದು ಕಡೆ ಯಜಮಾನ ದರ್ಶನ್, ಈ ಕಡೆ ಕೆಜಿಎಫ್ ಯಶ್ ನಡುವೆ ದೇಸಾಯಿಯವರ ಎತ್ತರದ ಕಟೌಟ್ ರಾರಾಜಿಸುತ್ತಿದೆ. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಇವತ್ತಿನ ಘಟಾನುಘಟಿ ನಟರೆಲ್ಲಾ ಪಾತ್ರವಹಿಸಿದ್ದಾರೆ. ಆದರೂ ಅವರ ಕೈ ಕಾಲುಗಳನ್ನು ಬಿಟ್ಟು ಪೋಸ್ಟರ್ ಗಳಲ್ಲಿ ಮುಖವನ್ನೂ ಹಾಕಿಲ್ಲ.

    ಇದು ದೇಸಾಯಿ ಸ್ಟೈಲ್. ಈಗ ಥೇಟರ್ ಮುಂದೆ ನಿರ್ದೇಶಕರ ಕಟೌಟ್ ನಿಂತಿದೆ. ನಿಜ ದೇಸಾಯಿ ಸ್ಟಾರ್ ಗಳನ್ನು ಹುಟ್ಟುಹಾಕಿದ ಡೈರೆಕ್ಟರ್. ಒಂದು ಕಾಲಕ್ಕೆ ಸ್ಟಾರ್ ನಿರ್ದೇಶಕ ಅನಿಸಿಕೊಂಡಿದ್ದವರು. ಉದ್ಘರ್ಷ ಮೂಲಕ ಮತ್ತೆ ಅವರು ಹಳೇ ಛಾರ್ಮಿಗೆ ಮರಳುವಂತಾಗಬೇಕಿದೆ. ಆಗ ಥಿಯೇಟರ್ ಮುಂದೆ ನಿಂತ ಕಟೌಟಿಗೂ ಬೆಲೆ ಬರುತ್ತದೆ. ಅಲ್ಲವೆ?

  • ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಉತ್ಕರ್ಷ, ನಿಷ್ಕರ್ಷ, ಸಂಘರ್ಷ ಮತ್ತು ಉದ್ಘರ್ಷ!

    ಬೆಂಗಳೂರು: ಮರ್ಮ ಎಂಬ ಚಿತ್ರದಿಂದ ಆರಂಭವಾಗಿ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿಯವರು ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ಖುಷಿಗಳು ಒಂದೆರಡಲ್ಲ. ಕನ್ನಡ ಚಿತ್ರರಂಗ ಒಂಥರಾ ಏಕತಾನತೆಯಿಂದ ಕೂಡಿದ್ದ ಕಾಲದಲ್ಲಿಯೇ ಹೊಸಾ ಬಗೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ರುಚಿ ಹತ್ತಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರೀಗ ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?

    ತರ್ಕ, ಉತ್ಕರ್ಷದಂಥಾ ಚಿತ್ರಗಳ ಮೂಲಕ ಹೊಸಾ ಟ್ರೆಂಡಿಂಗ್ ಹುಟ್ಟು ಹಾಕಿದ್ದವರು ದೇಸಾಯಿ. ಅವರು ಬಹು ಕಾಲದದ ನಂತರ ಈ ಕಥೆ ಮಾಡಿಕೊಂಡು ಅಖಾಡಕ್ಕಿಳಿದಾಗ ಅಂಥಾದ್ದೇ ರಗಡ್ ಸೌಂಡಿಂಗ್ ಇರೋ ಶೀರ್ಷಿಕೆಗಾಗಿ ಹುಡುಕಾಟ ನಡೆಸಿದ್ದರಂತೆ. ಕಡೆಗೂ ಅವರೇ ಉದ್ಘರ್ಷ ಅನ್ನೋ ಪದವನ್ನು ಹುಟ್ಟು ಹಾಕಿದ್ದರಂತೆ. ಅದರ ಅರ್ಥ ಅದೇನಿದೆಯೋ… ಆದರೆ ಅದರಲ್ಲೊಂದು ಸೌಂಡಿಂಗ್ ಇದೆ ಎಂಬ ಕಾರಣದಿಂದ ಅವರು ಈ ಟೈಟಲ್ ಅಂತಿಮಗೊಳಿಸಿದ್ದರಂತೆ.

    ಇದು ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಮೂಲಕ ಉದ್ಘರ್ಷದ ಅಸಲೀ ಖದರ್ ಏನೆಂಬುದು ಜಾಹೀರಾಗಿದೆ. ಬಿಡುಗಡೆಯಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಈ ಟ್ರೈಲರ್ ಹುಟ್ಟಿಸಿರೋ ಸಂಚಲನ ಸಣ್ಣ ಮಟ್ಟದ್ದೇನಲ್ಲ. ಉದ್ಘರ್ಷ ಎಂಬ ಅನಿರೀಕ್ಷಿತವಾಗಿ ಹುಟ್ಟು ಪಡೆದ ಟೈಟಲ್ಲೀಗ ಎಲ್ಲರ ಬಾಯಲ್ಲೂ ನಲಿದಾಡುತ್ತಿದೆ.

    ಪ್ರೇಕ್ಷಕರನ್ನ ಪ್ರತೀ ಕ್ಷಣವೂ ಕುತೂಹಲದ ಕಾವಲಿಯಲ್ಲಿ ಕೂರಿಸುವಂಥಾ ಉದ್ಘರ್ಷ ಈ ವಾರ ತೆರೆ ಕಾಣುತ್ತಿದೆ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ಉದ್ಘರ್ಷದ ಅಬ್ಬರ ಈ ವಾರವೇ ಶುರುವಾಗಲಿದೆ!

  • ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಉದ್ಘರ್ಷ ಟ್ರೇಲರ್ ಗೆ ಶಿವಣ್ಣ ಫಿದಾ, ದೇಸಾಯಿ ಬಗ್ಗೆ ಸೆಂಚುರಿ ಸ್ಟಾರ್ ಹೇಳಿದ್ದೇನು?

    ಬೆಂಗಳೂರು: ಉದ್ಘರ್ಷ.. ಉದ್ಘರ್ಷ.. ಉದ್ಘರ್ಷ.. ಇನ್ನೇನು ಇದೇ ಶುಕ್ರುವಾರ ಬಿಡುಗಡೆಯಾಗಲಿರೋ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಲೇ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೇ ದೊಡ್ಡ ದೊಡ್ಡ ಸ್ಟಾರ್ ಗಳು ಸಹ ಉದ್ಘರ್ಷ ಚಿತ್ರಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

    ಬಹಳ ದಿನಗಳ ನಂತರ ಮತ್ತೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ದೇಸಾಯಿ ನಿರ್ದೇಶಿಸುತ್ತಿದ್ದಾರೆ ಅನ್ನೋ ಸುದ್ದಿ ಹೊರ ಬಿದ್ದಾಗಿನಿಂದಲೇ ಉದ್ಘರ್ಷ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಮನೆ ಮಾಡಿತ್ತು. ಅಲ್ಲದೇ ರಕ್ತ ಸಿಕ್ತ ಹುಡುಗಿಯ ಕಾಲಿನ ಫಸ್ಟ್ ಲುಕ್ ಬಿಡುಗಡೆ ಮಾಡುವುದರ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ದೇಸಾಯಿ, ಉದ್ಘರ್ಷ ಚಿತ್ರದ ಟ್ರೈಲರ್ ಗೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಬಳಿ ಧ್ವನಿ ಕೊಡಿಸಿ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದರು. ನಂತರ ಆ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದ್ದು ಮತ್ತೊಂದು ಕಿಕ್ ಕೊಟ್ಟಿತ್ತು.

    ಈಗ ವಿಶೇಷ ಅಂದ್ರೆ ಟ್ರೇಲರ್ ನೋಡಿ ಫುಲ್ ಫಿದಾ ಆಗಿರೋ ಸೆಂಚುರಿ ಸ್ಟಾರ್ ಶಿವಣ್ಣ, ದೇಸಾಯಿ ಅವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಜೊತೆಗೆ, ದೇಸಾಯಿಯವರ ನಮ್ಮೂರ ಮಂದಾರ ಹೂವೆ ಹಾಗೂ ಪ್ರೇಮರಾಗ ಹಾಡು ಗೆಳತಿ ಚಿತ್ರದಲ್ಲಿ ನಟಿಸಿದ್ದನ್ನು ನೆನಪಿಸಿಕೊಂಡಿರೋ ಶಿವಣ್ಣ, ಉದ್ಘರ್ಷ ಮೂಲಕ ದೇಸಾಯಿ ಈಸ್ ಬ್ಯಾಕ್ ಅಂತಾ ಹೇಳಿದ್ದಾರೆ.

  • ಉದ್ಘರ್ಷ: ಚಿತ್ರಕಥೆಯೇ ನಿಜವಾದ ಹೀರೋ ಅಂದ್ರು ದೇಸಾಯಿ!

    ಉದ್ಘರ್ಷ: ಚಿತ್ರಕಥೆಯೇ ನಿಜವಾದ ಹೀರೋ ಅಂದ್ರು ದೇಸಾಯಿ!

    ಬೆಂಗಳೂರು: ಎಂಬತ್ತರ ದಶಕದಲ್ಲಿಯೇ ಈಗಿನ ಕಾಲಮಾನಕ್ಕೆ ತಕ್ಕುದಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ಉದ್ಘರ್ಷ ಚಿತ್ರದ ಬಗ್ಗೆ ಜನ ಆಕರ್ಷಿತರಾಗಿರೋದು ಕೂಡಾ ದೇಸಾಯಿಯವರ ಕ್ರಿಯೇಟಿವಿಟಿ ಮತ್ತು ದೂರದೃಷ್ಟಿಯ ಕಾರಣದಿಂದಲೇ.

    ಹಾಗೆ ಎಲ್ಲೆಡೆ ವ್ಯಾಪಕವಾಗಿ ಟಾಕ್ ಕ್ರಿಯೇಟ್ ಮಾಡಿರೋ ಉದ್ಘರ್ಷ ಚಿತ್ರ ಈ ವಾರ ಬಿಡುಗಡೆಗೊಳ್ಳುತ್ತಿದೆ. ಈ ಸಿನಿಮಾ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ಖಳನಟ ಠಾಕೂರ್ ಅನೂಪ್ ಸಿಂಗ್ ನಾಯಕನಾಗಿದ್ದಾರೆ. ಕಬಾಲಿ ಖ್ಯಾತಿಯ ದನ್ಷಿಕಾ, ತಾನ್ಯಾ ಹೋಪ್ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಬೇರೆ ಬೇರೆ ಭಾಷೆಗಳ ಖ್ಯಾತ ನಟನಟಿಯರ ತಾರಾಗಣವೇ ಈ ಚಿತ್ರದಲ್ಲಿದೆ.

    ದೇಸಾಯಿಯವರು ಮನಸು ಮಾಡಿದರೆ ಖ್ಯಾತ ಸ್ಟಾರ್ ನಟರನ್ನೇ ಹೀರೋ ಆಗಿ ಕರೆತರ ಬಹುದಿತ್ತು. ಆದರೆ ದೇಸಾಯಿ ಅವರೇಕೆ ಅಷ್ಟಾಗಿ ಪರಿಚಿತರಲ್ಲದ ನಟನಟಿಯರನ್ನ ಈ ಚಿತ್ರಕ್ಕೆ ಆರಿಸಿಕೊಂಡಿದ್ದಾರೆಂಬ ಪ್ರಶ್ನೆ ಹಲವರಲ್ಲಿದೆ. ಅದಕ್ಕೆ ದೇಸಾಯಿಯವರೇ ಉತ್ತರವನ್ನೂ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಚಿತ್ರಕಥೆಯೇ ಹೀರೋ ಸ್ಥಾನದಲ್ಲಿದೆಯಂತೆ. ಇಲ್ಲಿನ ಪಾತ್ರಗಳೆಲ್ಲವೂ ಅದನ್ನು ನಿರ್ವಹಿಸಿದ ಕಲಾವಿದರನ್ನು ಮೀರಿಕೊಂಡು ವಿಶಿಷ್ಠ ಪಾತ್ರಗಳಾಗಿಯಷ್ಟೇ ಪ್ರೇಕ್ಷಕರನ್ನ ಕಾಡಲಿವೆಯಂತೆ.

    ಒಟ್ಟಾರೆಯಾಗಿ, ಉದ್ಘರ್ಷ ಪ್ರತೀ ಕ್ಷಣವೂ ಪ್ರೇಕ್ಷಕರನ್ನು ತುದೀ ಸೀಟಿಗೆ ತಂದು ಕೂರಿಸುವಷ್ಟು ರೋಚಕವಾಗಿ ಮೂಡಿ ಬಂದಿದೆಯಂತೆ. ಕೇವಲ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಪ್ರೇಮಿಗಳಿಗೆ ಮಾತ್ರವಲ್ಲದೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಉದ್ಘರ್ಷ ಇಷ್ಟವಾಗಲಿದೆ ಅನ್ನೋದು ಸುನೀಲ್ ಕುಮಾರ್ ದೇಸಾಯಿ ಅವರ ಭರವಸೆ.

  • ಉದ್ಘರ್ಷದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

    ಉದ್ಘರ್ಷದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು?

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಕ್ರಿಯೇಟಿವ್ ನಿರ್ದೇಶಕ. ಕನ್ನಡದಲ್ಲಿ ಒಂದು ಬಗೆಯ ಚಿತ್ರಗಳು ಮಾತ್ರವೇ ಗಿರಕಿ ಹೊಡೆಯುತ್ತಿದ್ದ ಕಾಲದಲ್ಲಿಯೇ ಏಕಾಏಕಿ ಥ್ರಿಲ್ಲರ್ ಚಿತ್ರಗಳ ಮೂಲಕ ಅಚ್ಚರಿ ಹುಟ್ಟಿಸಿದ್ದವರು ದೇಸಾಯಿ. ಇದೀಗ ಅವರು ನಿರ್ದೇಶನ ಮಾಡಿರುವ ಉದ್ಘರ್ಷ ಇದೇ ಮಾರ್ಚ್ 22ರಂದು ತೆರೆ ಕಾಣಲು ರೆಡಿಯಾಗಿದೆ.

    ದೇಸಾಯಿಯವರು ಈ ಸಿನಿಮಾ ಆರಂಭಿಸಿದಾಗಲೇ ಸುದ್ದಿ ಶುರುವಾಗಿತ್ತು. ಯಾಕೆಂದರೆ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಮತ್ತೆ ಮರಳಿದ್ದಾರೆಂದರೆ ಅಂಥಾ ಸಂಚಲನ ಸೃಷ್ಟಿಯಾಗೋದು ಸಹಜವೇ. ಒಟ್ಟಾರೆಯಾಗಿ ಈ ಚಿತ್ರದ ಅಂತರಾಳ ಏನನ್ನೋದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಸಾಕ್ಷಿಯಾಗಿದೆ.

    ದರ್ಶನ್ ಬಿಡುಗಡೆ ಮಾಡಿರೋ ಟ್ರೈಲರ್ ಕಡಿಮೆ ಅವಧಿಯಲ್ಲಿಯೇ ಟ್ರೆಂಡ್ ಸೆಟ್ ಮಾಡಿತ್ತು. ಗಾಢವಾದ ಕುತೂಹಲ ಮತ್ತು ಬಾಲಿವುಡ್ ಚಿತ್ರಗಳಿಗೇ ಸೆಡ್ಡು ಹೊಡೆಯುವಂಥಾ ತಾಂತ್ರಿಕ ಶ್ರೀಮಂತಿಕೆಯೂ ಈ ಮೂಲಕವೇ ಪ್ರೇಕ್ಷಕರ ಅರಿವಿಗೆ ಬಂದಿತ್ತು. ಈ ಟ್ರೈಲರ್ ನೋಡಿ ಬಿಡುಗಡೆ ಮಾಡಿರೋ ದರ್ಶನ್ ಅವರೇ ಥ್ರಿಲ್ ಆಗಿದ್ದಾರೆ.

    ದೇಸಾಯಿಯವರು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲೊಂದು ಹೊಸತನವಿರುತ್ತೆ. ಉದ್ಘರ್ಷ ಕೂಡಾ ಅಂಥಾದ್ದೇ ಹೊಸತನದಿಂದ ಕೂಡಿರೋ ಸುಳಿವು ಸಿಕ್ಕಿದೆ. ಈ ಸಿನಿಮಾ ಕೂಡಾ ಸೂಪರ್ ಹಿಟ್ ಆಗಲಿ ಅಂತ ದರ್ಶನ್ ಹಾರೈಸಿದ್ದಾರೆ. ದರ್ಶನ್ ಅವರೇ ಮೆಚ್ಚಿಕೊಂಡಿರೋ ಈ ಚಿತ್ರವೀಗ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೆ ಅಣಿಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ದೇಸಾಯಿಯವರ ಉದ್ಘರ್ಷ ಮೋಡಿ!

    ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ದೇಸಾಯಿಯವರ ಉದ್ಘರ್ಷ ಮೋಡಿ!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ಎಂಬ ಥ್ರಿಲ್ಲರ್ ಸಿನಿಮಾಗಳ ಮಾಸ್ಟರ್ ಮತ್ತೆ ಮೋಡಿ ಮಾಡಲು ತಯಾರಾಗಿದ್ದಾರೆ. ಅವರು ಬಹು ಕಾಲದ ನಂತರ ನಿರ್ದೇಶನ ಮಾಡಿರೋ ರೋಚಕ ಥ್ರಿಲ್ಲರ್ ಕಥೆಯ ಉದ್ಘರ್ಷ ಚಿತ್ರ ಇದೇ ಮಾರ್ಚ್ 22ರಂದು ಬಿಡುಗಡೆಗೆ ರೆಡಿಯಾಗಿದೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು, ತಮಿಳು ಸೇರಿದಂತೆ ಐದೈದು ಭಾಷೆಗಳಲ್ಲಿ ಏಕಕಾಲದಲ್ಲಿಯೇ ಬಿಡುಗಡೆಯಾಗಲಿರೋ ಈ ಸಿನಿಮಾ ಮೂಲಕ ದೇಸಾಯಿ ಭರ್ಜರಿ ಗೆಲುವು ದಾಖಲಿಸೀ ಸಕಾರಾತ್ಮಕ ಲಕ್ಷಣಗಳೇ ಮಿರುಗುತ್ತಿವೆ.

    ಸುನೀಲ್ ಕುಮಾರ್ ದೇಸಾಯಿ ಎಂಬ ಹೆಸರು ಕೇಳಿದರೇನೇ ಥ್ರಿಲ್ಲರ್ ಕಥಾನಕಗಳ ಚಿತ್ರಗಳೆಲ್ಲ ಕಣುಂದೆ ಚಲಿಸಲಾರಂಭಿಸುತ್ತವೆ. ಎಂಭತ್ತರ ದಶಕದಲ್ಲಿಯೇ ಥ್ರಿಲ್ಲರ್ ಕಥೆಗಳ ರುಚಿ ಹತ್ತಿಸಿದ್ದ ದೇಸಾಯಿ ಇದೀಗ ಉದ್ಘರ್ಷ ಚಿತ್ರದ ಮೂಲಕ ಈ ಜನರೇಷನ್ನಿನ ಪ್ರೇಕ್ಷಕರನ್ನೂ ಆವರಿಸಿಕೊಳ್ಳಲು ತಯಾರಾಗಿದ್ದಾರೆ.

    ಉದ್ಘರ್ಷದ ಅಸಲೀ ಆವೇಗ ಎಂಥಾದ್ದೆಂಬುದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೈಲರ್ ಗಿಂತ ಬೇರೆ ಪುರಾವೆ ಬೇಕಿಲ್ಲ. ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿರೋ ಈ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದರು. ಹಾಗೆ ಬಿಡುಗಡೆಯಾದ ಕ್ಷಣಾರ್ಧದಿಂದಲೇ ಇದು ಸದ್ದು ಮಾಡಿದ ರೀತಿ ಕಂಡು ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಅಚ್ಚರಿ ಮನೆ ಮಾಡಿತ್ತು.

    ಹೀಗೆ ಮೂಡಿಕೊಂಡಿರೋ ಎಲ್ಲ ಕುತೂಹಲಗಳನ್ನೂ ತೃಪ್ತಗೊಳಿಸುವಂತೆ ಉದ್ಘರ್ಷ ಮೂಡಿ ಬಂದಿದೆಯೆಂಬ ಭರವಸೆ ದೇಸಾಯಿಯವರದ್ದು. ಇಲ್ಲಿನ ದೃಶ್ಯಾವಳಿಗಳನ್ನು ಕ್ಷಣ ಕ್ಷಣವೂ ಚಿತ್ರ ವಿಚಿತ್ರ ತಿರುವುಗಳಿಂದ ಬೆಚ್ಚಿ ಬೀಳಿಸುವಂತೆ ದೇಸಾಯಿ ರೂಪಿಸಿದ್ದಾರಂತೆ. ಕೇವಲ ಥ್ರಿಲ್ಲರ್ ಕಥೆ ಮಾತ್ರವಲ್ಲ, ತಾಂತ್ರಿಕವಾಗಿಯೂ ಕೂಡಾ ಉದ್ಘರ್ಷ ಹೊಸಾ ಅನುಭವಗಳನ್ನೇ ಪ್ರೇಕ್ಷಕರಿಗೆ ನೀಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿಚ್ಚನ ಧ್ವನಿಯಿರೋ ಉದ್ಘರ್ಷ ಟ್ರೈಲರ್ ಲಾಂಚ್ ಮಾಡಿದ್ರು ದರ್ಶನ್!

    ಕಿಚ್ಚನ ಧ್ವನಿಯಿರೋ ಉದ್ಘರ್ಷ ಟ್ರೈಲರ್ ಲಾಂಚ್ ಮಾಡಿದ್ರು ದರ್ಶನ್!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಟ್ರೈಲರ್ ಲಾಂಚ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ದೇಸಾಯಿ ಮತ್ತೆ ಮರಳಿರೋ ಸ್ಪಷ್ಟ ಸೂಚನೆಯನ್ನೇ ರವಾನಿಸಿದೆ!

    ಮರ್ಡರ್ ಮಿಸ್ಟರಿ, ಅದರ ಸುತ್ತಾ ಛಕಛಕನೆ ಸಾಗೋ ದೃಶ್ಯಾವಳಿ ಹೊಂದಿರೋ ಈ ಟ್ರೈಲರ್ ಒಟ್ಟಾರೆ ಚಿತ್ರದ ಬಗ್ಗೆ ಮತ್ತಷ್ಟು ಕ್ರೇಜ್ ಹುಟ್ಟುವಂತೆ ಮಾಡಿದೆ. ಅನೂಪ್ ಠಾಕೂರ್ ಸಿಂಗ್ ಎಂಬ ಅಜಾನುಬಾಹು ನಾಯಕನಿಗೆ ಸೆಡ್ಡು ಹೊಡೆಯುವಂಥಾ ಖಳನಟರ ಪಡೆಯೂ ಅಬ್ಬರಿಸಿರೋ ರೀತಿಯಂತೂ ಮಾಸ್ ಪ್ರೇಕ್ಷಕರನ್ನೂ ಉದ್ಘರ್ಷದತ್ತ ಆಕರ್ಷಿಸಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಿರುವ ಈ ಟ್ರೈಲರಿಗೆ ಕಿಚ್ಚ ಸುದೀಪ್ ಖಡಕ್ ವಾಯ್ಸ್ ನೀಡಿದ್ದಾರೆ. ಜೊತೆಗೆ ಈ ಚಿತ್ರದ ಮೂಲಕ ಸುನೀಲ್ ಕುಮಾರ್ ದೇಸಾಯಿ ಯುಗ ಮತ್ತೆ ಶುರುವಾಗಲಿದೆ ಎಂಬಂಥಾ ಹಿಂಟ್ ಅನ್ನೂ ಬಿಟ್ಟು ಕೊಟ್ಟಿದ್ದಾರೆ. ಎಂಭತ್ತರ ದಶಕದ ಆಚೀಚಿನ ದಿನಗಳಲ್ಲಿಯೇ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕಗಳ ರುಚಿ ಹತ್ತಿಸಿ ಗೆದ್ದವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಉದ್ಘರ್ಷ ಮತ್ತೊಂದು ಮಹಾ ಗೆಲುವಿನ ರೂವಾರಿಯಾಗೋ ಲಕ್ಷಣಗಳನ್ನು ಈ ಟ್ರೈಲರ್ ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉದ್ಘರ್ಷ ಚಿತ್ರಕ್ಕೆ ಸುದೀಪ್-ದರ್ಶನ್ ಸಾಥ್! – ಇನ್ನೆರಡು ದಿನಗಳಲ್ಲಿ ಬರಲಿದೆ ಟ್ರೈಲರ್!

    ಉದ್ಘರ್ಷ ಚಿತ್ರಕ್ಕೆ ಸುದೀಪ್-ದರ್ಶನ್ ಸಾಥ್! – ಇನ್ನೆರಡು ದಿನಗಳಲ್ಲಿ ಬರಲಿದೆ ಟ್ರೈಲರ್!

    ಬೆಂಗಳೂರು: ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಬಹು ನಿರೀಕ್ಷಿತ ಉದ್ಘರ್ಷ ಇನ್ನೇನು ಬಿಡುಗಡೆಯಾಗಲಿದೆ. ಈಗಾಗಲೇ ವಿಭಿನ್ನವಾದ ಪೋಸ್ಟರ್ ಸೇರಿದಂತೆ ಎಲ್ಲ ಬಗೆಯಲ್ಲಿಯೂ ಪ್ರೇಕ್ಷಕರನ್ನು ಆಕರ್ಷಿಸಿರುವ ಈ ಚಿತ್ರದ ಟ್ರೈಲರ್ ಇದೇ ತಿಂಗಳ 5ರಂದು ಬಿಡುಗಡೆಯಾಗಲಿದೆ.

    ವಿಶೇಷವೆಂದರೆ ಈ ಟ್ರೈಲರ್ ಗೆ ಕಿಚ್ಚ ಸುದೀಪ್ ಅವರು ಖಡಕ್ ವಾಯ್ಸ್ ನೀಡಿದ್ದಾರೆ. ಇದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುಗಡೆಗೊಳಿಸಲಿದ್ದಾರೆ. ಈ ಮೂಲಕ ಈ ಕುಚಿಕು ಗೆಳೆಯರ ಸಮಾಗಮವಾಗಿದೆ. ಸುದೀಪ್ ಅವರಂತೂ ತಮ್ಮ ಗುರುಗಳಾದ ಸುನೀಲ್ ಕುಮಾರ್ ದೇಸಾಯಿ ಅವರ ಉದ್ಘರ್ಷಕ್ಕೆ ಆರಂಭದಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಸಾಥ್ ನೀಡಲು ಮುಂದಾಗಿದ್ದಾರೆ.

    ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್. ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್.ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv