Tag: Sunil joshi

  • ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ

    ಬೆಂಗಳೂರು-ಗದಗ ವೋಲ್ವೋ ಬಸ್ ಪುನಃ ಆರಂಭಿಸುವಂತೆ ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ ಮನವಿ

    ಗದಗ: ವೋಲ್ವೋ ಬಸ್ ಪುನಃ ಆರಂಭಿಸುವಂತೆ ಟೀಂ ಇಂಡಿಯಾದ(Team India) ಮಾಜಿ ಆಟಗಾರ, ಸ್ಪಿನ್ ಮಾಂತ್ರಿಕ ಸುನೀಲ್ ಜೋಷಿ (Sunil Joshi) ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

    ಬೆಂಗಳೂರಿನಿಂದ (Bengaluru) ಗದಗ ನಗರಕ್ಕೆ ವೋಲ್ವೋ ಬಸ್ (Volvo Bus) ಸೇವೆಯನ್ನು ಪುನರಾರಂಭಗೊಳಿಸುವಂತೆಸಿಎಂ ಸಿದ್ದರಾಮಯ್ಯ (CM Siddaramaiah), ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy), ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ (H. K. Patil ) ಅವರಿಗೆ ಎಕ್ಸ್ನಲ್ಲಿ ಟ್ಯಾಗ್ ಮಾಡುವ ಮೂಲಕ ಜೋಷಿ ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ:

    ಬೆಂಗಳೂರಿನಿಂದ ಗದಗಕ್ಕೆ (Gadag) ಹೋಗುವ ವೋಲ್ವೋ ಬಸ್ ಸೇವೆಯನ್ನು ರದ್ದುಗೊಳಿಸಲಾಗಿದೆ ಮತ್ತು ಇದಕ್ಕೆ ಯಾವುದೇ ವಿವರ ನೀಡಲಾಗಿಲ್ಲ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ, ಈ ವಿಷಯದಲ್ಲಿ ತಕ್ಷಣವೇ ಚರ್ಚಿಸಬೇಕೆಂದು ವಿನಂತಿಸುತ್ತೇನೆ. ನಿಮ್ಮ ಸಹಕಾರ ತುಂಬಾ ಮೆಚ್ಚುಗೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ದಯವಿಟ್ಟು ಈ ಬಸ್ ಅನ್ನು ಮತ್ತೆ ಶುರುಮಾಡಿ ಎಂದು ವಿನಂತಿಯಿಂದ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.ಇದನ್ನೂ ಓದಿ:

    2023ರ ಜನವರಿ 9 ರಂದು ಸಾರಿಗೆ ಸಚಿವರಾಗಿದ್ದ ಶ್ರೀರಾಮಲು ಅವರು ಬೆಂಗಳೂರಿನಿಂದ ಗದಗಕ್ಕೆ ವೋಲ್ವೋ ಬಸ್ ಸೇವೆಯನ್ನು ಆರಂಭಿಸಿದ್ದರು. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್-1 ರಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಸಂಜೆ 6.15ಕ್ಕೆ ಗದಗ ತಲುಪುತ್ತಿತ್ತು. ಆದರೆ ಈಗ ಈ ಬಸ್ಸು ಸೇವೆಯನ್ನು ರದ್ದುಗೊಳಿಸಲಾಗಿದೆ. ಬಸ್ ಸೇವೆ ರದ್ದಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

  • ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಿಂದ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಿಂದ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಬೆಂಗಳೂರು: ಭಾರತದ ಖ್ಯಾತ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ರಾಮ ಮಂದಿರ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿ ನಿಧಿ ಅರ್ಪಣೆ ಮಾಡಿದ್ದಾರೆ.

     

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಅಭಿಯಾನ ದೇಶದ್ಯಾಂತ ನಡೆಯುತ್ತಿದೆ. ಹೀಗಾಗಿ ಖ್ಯಾತ ನಟಿ ಮತ್ತು ವಕೀಲರಾದ ಮಾಳವಿಕಾ ಅವಿನಾಶ್ ಅವರು ಭಾರತ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ವಿಜಯ್ ಭಾರದ್ವಾಜ್ ಹಾಗೂ ರಣಜಿ ಆಟಗಾರ ಅಖಿಲ್ ಅವರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಿದರು.

    ನಿಧಿ ನೀಡಿದ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್, ತುಂಬಾ ಖುಷಿಯಾಗುತ್ತಿದೆ ನಾನು ಈ ಅಭಿಯಾನಕ್ಕೆ ಕೈ ಜೋಡಿಸುತ್ತೇನೆ, ರಾಮ ಮಂದಿರದ ನಿರ್ಮಾಣ ದೇಶದ ನಿರ್ಮಾಣ ಎನ್ನುವ ಮೂಲಕ ಸಂತಸ ಹಂಚಿಕೊಂಡರು.

     

    ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಹಲವು ಸ್ಟಾರ್ ನಟ-ನಟಿಯರು ಮತ್ತು ಸೆಲೆಬ್ರಿಟಿಗಳು ರಾಮ ಮಂದಿರಕ್ಕೆ ನಿಧಿ ಅರ್ಪಣೆ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ನಕ್ಷೆ ಈಗಾಗಲೇ ನಿರ್ಮಾಣವಾಗಿದ್ದ, ವಿಶ್ವದ ಮೂರನೇ ಅತೀ ದೊಡ್ಡ ಹಿಂದೂ ದೇಗುಲವಾಗಿ ಗುರುತಿಸಿಕೊಳ್ಳಲಿದೆ.

     

  • ಸೆಲ್ಫಿ ವಿಡಿಯೋ ಮೂಲಕ ಬಾಲ್ಯದ ನೆನಪು ಹಂಚಿಕೊಂಡ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ

    ಸೆಲ್ಫಿ ವಿಡಿಯೋ ಮೂಲಕ ಬಾಲ್ಯದ ನೆನಪು ಹಂಚಿಕೊಂಡ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ

    ಗದಗ: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡ ಟೀಂ ಇಂಡಿಯಾದ ಮಾಜಿ ಆಟಗಾರ ಗದಗದ ಸುನಿಲ್ ಜೋಶಿ ತಮ್ಮ ಬಾಲ್ಯದ ನೆನಪುಗಳನ್ನ ಸೆಲ್ಫಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

    ಬಾಲ್ಯದ ತುಂಟಾಟ, ಶಾಲಾ-ಕಾಲೇಜ್, ಆಟ-ಹುಡುಗಾಟದ ದಿನಗಳನ್ನು ನೆನಪಿಸಿಕೊಂಡು ವಿಡಿಯೋ ಒಂದನ್ನು ಮಾಡಿ ಗದಗದ ವಕೀಲಚಾಳ್ ವಾರಿಯರ್ಸ ವಾಟ್ಸಪ್ ಗ್ರೂಪ್‍ಗೆ ಕಳುಹಿಸಿದ್ದಾರೆ. ಈ ಒಂದು ವಿಡಿಯೋ ಗದಗ ಫ್ರೆಂಡ್ಸ್ ಗ್ರೂಪ್ ಮತ್ತು ಆ ಬಡಾವಣಿಯ ಜನರ ಸಂತಸ ಹೆಚ್ಚಿಸಿದ್ದು, ಅದರಲ್ಲೂ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಜೋಶಿ ಅವರು ಮಾತನಾಡಿದ್ದು ವಕೀಲಚಾಳ್ ಮಂದಿಯ ಸಂತಸವನ್ನು ಇನ್ನಷ್ಟು ಇಮ್ಮುಡಿಗೊಳಿಸಿದೆ.

    ಸುನಿಲ್ ಜೋಷಿ ವಿಡಿಯೋದ ಸಂಭಾಷಣೆ:
    ನಮಸ್ಕಾರ ಎಲ್ಲಾ ಗದಗನ ವಕೀಲಚಾಳ್ ವಾರಿಯರ್ಸ್‍ಗೆ. ಏನು ಹೇಳಬೇಕು ಸಿಕ್ಕಾಪಟ್ಟೆ ಖುಷಿ ಆಗ್ತಿದೆ. ಏನಂತಂದ್ರ ವಕೀಲಚಾಳ್‍ದಲ್ಲಿ ಹುಟ್ಟಿ, ವಕೀಲಚಾಳ್‍ನಲ್ಲಿ ನೀರು ಕುಡಿದು, ವಕೀಲಚಾಳ್‍ದಲ್ಲಿ ಬೆಳದು ಇವತ್ತು ನಿಮ್ಮೆಲರ ಪ್ರೋತ್ಸಾಹದಿಂದ ಇಷ್ಟು ಎತ್ತರಕ್ಕೆ ಬೆಳೆದು ನಿಂತಿದ್ದೇನೆ. ನಮ್ಮೆಲ್ಲಾ ಸೀನಿಯರ್ಸ್, ನನ್ನ ಸ್ನೇಹಿತರು ಪ್ರೋತ್ಸಾಹಿಸಿದ್ದಾರೆ. ಸ್ನೇಹಿತರ ಜೊತೆ ಗುಂಡಾ ಆಡಿರಬಹುದು, ಚಿಣಿಪಣಿ, ಸರಿಬಡಗಿ, ಛಾಪಾ ಆಡಿರಬಹುದು ಎಲ್ಲಾ ನೆನೆಸಿಕೊಂಡರೆ ಖುಷಿ ಆಗ್ತದ. ಎಲ್ಲಾ ನಿಮ್ಮ ಆಶೀರ್ವಾದ. ಬೆಸ್ಟ್ ವಿಷಸ್ ಅಂದ್ರೆ ನಮ್ಮ ಓಣಿ ಒಳಗ್ ಏನ್ ಒಗ್ಗಟ್ಟು ಇತ್ತು. ಯಾವುದೇ ಹಬ್ಬ ಬರಲಿ, ಕಾರ ಹುಣ್ಣಿಮೆ ಬರಲಿ, ಪಟಾ ಹಾರಸೋದ ಇರಲಿ, ಹೋಳಿ ಹುಣ್ಣಿಮೆ ಬಂದ್ರ ಕಟ್ಟಿಗಿ ಕಳವು ಮಾಡುವುದು ಇರ್ಲಿ, ಎಷ್ಟು ಖುಷಿ ಕೊಡ್ತಿತ್ತು ಅಂದ್ರ ಇವತ್ತಿನ ದಿನ ಈ ಸ್ಟೇಜಿಗೆ ಬಂದಿನಿ ಅಂದ್ರೆ ನಿಮ್ಮೆದೆಲ್ಲಾ ಸಪೋರ್ಟ್ ಕಾರಣ. ನನ್ನ ಜೊತೆ ನಿಮ್ಮ ಆಶಿರ್ವಾದ ಇರಲಿ. ನಾನು ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥನಾಗಿ ನೇಮಕಗೊಂಡ ಬಳಿಕ ನನಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ. ನಿಮ್ಮ ಪ್ರೀತಿ, ಪ್ರೋತ್ಸಾಹ ನೋಡಿ ಖುಷಿ ಆಗುತ್ತಿದೆ ಎಂದು ತಾವೇ ಒಂದು ಸೆಲ್ಫಿ ವಿಡಿಯೋ ಮಾಡಿ ವಕೀಲಚಾಳ್ ವಾರಿಯರ್ಸ್ ಗ್ರೂಪ್‍ನಲ್ಲಿ ಹಾಕಿದ್ದಾರೆ.

    ದೊಡ್ಡ ಸ್ಥಾನದಲ್ಲಿ ಇದ್ದರೂ ಸಹ ಬಾಲ್ಯದ ದಿನಗಳನ್ನು ಮರೆಯದೆ, ನೆನಪಿನಲ್ಲಿ ಇಟ್ಟುಕೊಂಡಿರುವ ಸುನಿಲ್ ಜೋಶಿ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ ಅಂತ ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.

  • ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಮುಂಬೈ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕರ್ನಾಟಕದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಆಯ್ಕೆ ಆಗಿದ್ದಾರೆ.

    ಸುನಿಲ್ ಜೋಶಿ ಜೊತೆಗೆ ಹರ್ವಿಂದರ್ ಸಿಂಗ್ ಅವರಿಗೂ ಆಯ್ಕೆ ಸಮಿತಿಯಲ್ಲಿ ಅವಕಾಶ ಸಿಕ್ಕಿದೆ. ಈಗಾಗಲೇ ದೇವಾಂಗ್ ಗಾಂಧಿ, ಶರಣ್‍ದೀಪ್ ಸಿಂಗ್, ಜತಿನ್ ಪರಾಂಜಪೆ ಆಯ್ಕೆ ಸಮಿತಿಯಲ್ಲಿದ್ದಾರೆ. ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಕೇರಳದ ಮಾಜಿ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರನ್ನು ಹಿಂದಿಕ್ಕಿ ಜೋಷಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ಆಯ್ಕೆ ಸಮಿತಿಯ ಪ್ರಸ್ತುತ ಮೂವರು ಸದಸ್ಯರಾದ ಜತಿನ್ ಪರಂಜಪೆ (ಪಶ್ಚಿಮ ವಲಯ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಸರಂದೀಪ್ ಸಿಂಗ್ (ಉತ್ತರ ವಲಯ) ಮುಂದಿನ 1 ವರ್ಷದವರೆಗೆ ಈ ಹುದ್ದೆಯಲ್ಲಿ ಮುಂದುವರಿಸಲಿದ್ದಾರೆ.

    ಸುನಿಲ್ ಜೋಶಿ ಅವರ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯ ಮದನ್ ಲಾಲ್, ಮುಂದಿನ 1 ವರ್ಷದವರೆಗೆ ಪ್ರಸ್ತುತ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ಸಿಎಸಿ ನಿರ್ಣಯಿಸುತ್ತದೆ. ನಂತರ ಒಪ್ಪಂದವನ್ನು ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕೆಲಸಕ್ಕಾಗಿ ನಾವು ಇಬ್ಬರು ಅತ್ಯುತ್ತಮ ವ್ಯಕ್ತಿಗಳಾದ ಸುನಿಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಸುನಿಲ್ ಜೋಶಿ ಅವರ ಆಲೋಚನೆ ಬಹಳ ಸ್ಪಷ್ಟವಾಗಿದೆ. ವಿಶೇಷವಾಗಿ ಅವರು ಬಹಳ ಅನುಭವಿ ಆಟಗಾರ. ಬಾಂಗ್ಲಾದೇಶದ ಕ್ರಿಕೆಟ್ ತಂಡದೊಂದಿಗೆ ಅವರು ಕೆಲಸ ಮಾಡಿದ್ದಾರೆ ಎಂದು ಮದನ್ ಲಾಲ್ ತಿಳಿಸಿದ್ದಾರೆ.

    ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಭಾರತಕ್ಕಾಗಿ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‍ನಲ್ಲಿ 41 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 69 ವಿಕೆಟ್‍ಗಳನ್ನು ಪಡೆದಿದ್ದಾರೆ. ಜೋಶಿ ಹೈದರಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಹರ್ವಿಂದರ್ ಸಿಂಗ್ ಭಾರತದ ಪರ 3 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಪಂಜಾಬ್ ಮತ್ತು ರೈಲ್ವೆ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

    ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷನ ನಾಯಕ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಸಂದರ್ಶನಕ್ಕೆ ಐದು ಅಭ್ಯರ್ಥಿಗಳನ್ನು ಕಿರು-ಪಟ್ಟಿ ಮಾಡಿತ್ತು. ಇದರಲ್ಲಿ ಭಾರತದ ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್, ಮಾಜಿ ಸ್ಪಿನ್ನರ್ ರಾಜೇಶ್ ಚೌಹಾನ್ ಮತ್ತು ಕ್ರಿಕೆಟಿಗ, ನಿರೂಪಕ ಲಕ್ಷ್ಮಣ ಶಿವರಾಮಕೃಷ್ಣನ್ ಸೇರಿದ್ದರು. ಈ ಸಮಿತಿಯು ಅನುಭವಿ ಆಟಗಾರರಾದ ಅಜಿತ್ ಅಗರ್ಕರ್ ಮತ್ತು ನಯಾನ್ ಮೊಂಗಿಯಾ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿಲ್ಲ. ಆದರೆ ಅಗರ್ಕರ್ ಸಂಪೂರ್ಣವಾಗಿ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

  • ಪ್ರಜ್ಞಾಸಿಂಗ್ ವಿರುದ್ಧ 12 ವರ್ಷದ ಹಿಂದಿನ ಕೇಸ್ ತೆರೆಯಲು ಮುಂದಾದ ಮಧ್ಯಪ್ರದೇಶ ಸರ್ಕಾರ

    ಪ್ರಜ್ಞಾಸಿಂಗ್ ವಿರುದ್ಧ 12 ವರ್ಷದ ಹಿಂದಿನ ಕೇಸ್ ತೆರೆಯಲು ಮುಂದಾದ ಮಧ್ಯಪ್ರದೇಶ ಸರ್ಕಾರ

    ಭೋಪಾಲ್: ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಭೋಪಾಲ್ ಕ್ಷೇತ್ರದಿಂದ ಗೆಲ್ಲಲ್ಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದ ಬೆನ್ನಲ್ಲೇ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರವು ಪ್ರಜ್ಞಾಸಿಂಗ್ ವಿರುದ್ಧ ದಾಖಲಾಗಿರುವ 12 ವರ್ಷದ ಹಿಂದಿನ ಪ್ರಕರಣ ತೆರೆಯಲು ಮುಂದಾಗಿದೆ.

    ಆರ್‌ಎಸ್‌ಎಸ್‌ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣವನ್ನು ಪುನಃ ತೆರೆದು, ತನಿಖೆ ನಡೆಸಲು ಮಧ್ಯಪ್ರದೇಶ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಹೈಕೋರ್ಟ್ ಗೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಪಿ.ಸಿ.ಶರ್ಮಾ ತಿಳಿಸಿದ್ದಾರೆ.

    ಸುನಿಲ್ ಜೋಶಿ ಅವರ ಕೊಲೆಗೆ ಸಂಬಂಧಿಸಿದ ವರದಿಯನ್ನು ಸಲ್ಲಿಸುವಂತೆ ದೇವಾಸ್ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಈ ಕುರಿತು ಕಾನೂನು ಅಭಿಪ್ರಾಯ ಪಡೆದು ಹೈಕೋರ್ಟ್ ಮೆಟ್ಟಿಲು ಏರಲಾಗುತ್ತದೆ ಎಂದು ಪಿ.ಸಿ.ಶರ್ಮಾ ಹೇಳಿದ್ದಾರೆ.

    ಏನಿದು ಪ್ರಕರಣ?:
    ಆರ್‍ಎಸ್‍ಎಸ್‍ನ ಮಾಜಿ ಪ್ರಚಾರಕ ಸುನಿಲ್ ಜೋಶಿ ಅವರು 2007ರ ಅಜ್ಮೇರ್ ದರ್ಗಾ ಸ್ಫೋಟ ಪ್ರಕರಣದ ಆರೋಪಿಯಾಗಿದ್ದರು. ಆದರೆ ಅವರನ್ನು 2007 ಡಿಸೆಂಬರ್ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಕುರಿತು ಸಾಧ್ವಿ ಪ್ರಜ್ಞಾಸಿಂಗ್ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೂಕ್ತ ಸಾಕ್ಷಾಧಾರಗಳಿಲ್ಲದ ಕಾರಣ ಕೋರ್ಟ್ ಸ್ವಾಧ್ವಿ ಅವರನ್ನು 2017ರಲ್ಲಿ ಖುಲಾಸೆಗೊಳಿಸಿತ್ತು.

    ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಗೆಲುವು ಸಾಧಿಸುತ್ತಾರೆ ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ತಿಳಿವೆ. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.