Tag: Sunil Gavaskar

  • ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಕೊಹ್ಲಿಗೆ ಎಚ್ಚರಿಕೆ ನೀಡದ ಅಂಪೈರ್‌ಗಳ ವಿರುದ್ಧ ಗವಾಸ್ಕರ್ ಗರಂ

    ಅಹಮದಾಬಾದ್‌: ಪಂಜಾಬ್‌ (Punjab Kings) ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli) ಅವರಿಗೆ ಎಚ್ಚರಿಕೆ ನೀಡದ್ದಕ್ಕೆ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಸುನಿಲ್‌ ಗವಾಸ್ಕರ್ (Sunil Gavaskar) ಅವರು ಅಂಪೈರ್‌ಗಳನ್ನು ಟೀಕಿಸಿದ್ದಾರೆ.

    ವಿರಾಟ್‌ ಕೊಹ್ಲಿ ಹೆಚ್ಚು ಬೌಂಡರಿ, ಸಿಕ್ಸ್‌ ಹೊಡೆಯಲು ಹೋಗದೇ ವಿಕೆಟ್‌ ಉಳಿಸುವ ಮೂಲಕ ಸಿಂಗಲ್‌, ಡಬಲ್‌ ರನ್‌ ಓಡುತ್ತಿದ್ದರು. 12ನೇ ಓವರ್‌ನಲ್ಲಿ ಚಹಲ್‌ ಎಸೆದ ಎಸೆತವನ್ನು ಕೊಹ್ಲಿ ಲಾಂಗ್‌ ಅನ್‌ ಕಡೆಗೆ ತಳ್ಳಿದರು. ಕೊಹ್ಲಿ ಮತ್ತು ಲಿವಿಂಗ್‌ಸ್ಟೋನ್ ಎರಡು ರನ್‌ ಓಡಿದರು. ರನ್‌ ಓಡುವಾಗ ಕೊಹ್ಲಿ ಪಿಚ್‌ ಮೇಲೆ ನೇರವಾಗಿ ಓಡಿದ್ದರು.

    ಈ ವಿಚಾರವನ್ನು ಪ್ರಸ್ತಾಪ ಮಾಡಿದ ಗವಸ್ಕಾರ್‌, ಕೊಹ್ಲಿ ವಿಕೆಟ್‌ಗಳ ಮಧ್ಯೆ ವೇಗವಾಗಿ ಓಡುತ್ತಾರೆ. ಚೆಂಡನ್ನು ಹೊಡೆದ ತಕ್ಷಣವೇ ಇದರಲ್ಲಿ 2 ರನ್‌ ಬರುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದರು. ಮತ್ತೆ ತಮ್ಮ ವಿವರಣೆಯನ್ನು ಮುಂದುವರಿಸಿ, ಯಾವೊಬ್ಬ ಅಂಪೈರ್‌ ಕೊಹ್ಲಿಗೆ ಏನು ಹೇಳುವುದಿಲ್ಲ. ಅವರು ಮತ್ತೆ ಪಿಚ್‌ ಮೇಲೆ ನೇರವಾಗಿ ಓಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತೆ ಬ್ಯಾಟಿಂಗ್‌ ಮಾಡಬೇಕಿದೆ ಎಂದು ಎಂದು ಹೇಳುವ ಮೂಲಕ ಎಚ್ಚರಿಕೆ ನೀಡದ ಅಂಪೈರ್‌ಗಳನ್ನು ಟೀಕಿಸಿದರು. ಇದನ್ನೂ ಓದಿ: IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಕ್ರಿಕೆಟ್‌ನಲ್ಲಿ ರನ್‌ ಓಡುವಾಗ ಬ್ಯಾಟರ್‌ಗಳು ಪಿಚ್‌ ಮೇಲೆ ಓಡುವಂತಿಲ್ಲ. ಪಿಚ್‌ ಮೇಲೆ ಓಡಿದ್ದರೆ ಅದು ಹಾಳಾಗಿ ಬೌಲಿಂಗ್‌ಗೆ ಸಮಸ್ಯೆ ಆಗುತ್ತದೆ. ಒಂದು ವೇಳೆ ಬ್ಯಾಟರ್‌ಗಳು ಪಿಚ್‌ ಮೇಲೆ ಓಡಿದ್ದರೆ ಅಂಪೈರ್‌ಗಳು ಎಚ್ಚರಿಕೆ ನೀಡುತ್ತಾರೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಈಗ ಆರ್‌ಸಿಬಿಯ ಯಶಸ್ವಿ ನಾಯಕ

    ಫೈನಲ್‌ ಪಂದ್ಯದಲ್ಲಿ ಕೊಹ್ಲಿ 43 ರನ್‌(35 ಎಸೆತ, 3 ಬೌಂಡರಿ) ಹೊಡೆದಿದ್ದರು. ಈ ಟೂರ್ನಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 657 ರನ್‌ ಹೊಡೆಯುವ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಬ್ಯಾಟರ್‌ಗಳ ಪೈಕಿ 3ನೇ ಸ್ಥಾನ ಪಡೆದಿದ್ದು ಒಟ್ಟು 8 ಅರ್ಧಶತಕ ಹೊಡೆದಿದ್ದಾರೆ.

    2008 ರಿಂದ ಆರ್‌ಸಿಬಿ ತಂಡದಲ್ಲೇ ಆಡುತ್ತಿರುವ ಕೊಹ್ಲಿ 267 ಪಂದ್ಯಗಳಿಂದ 8,661 ರನ್‌ ಹೊಡೆದಿದ್ದಾರೆ. 8 ಶತಕ, 63 ಬಾರಿ ಅರ್ಧಶತಕ ಬಾರಿಸಿದ್ದಾರೆ.

  • ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

    ಸ್ಲಿಮ್‌ ಆಗಿರೊರೇ ಬೇಕಿದ್ರೆ ಮಾಡೆಲ್‌ ಆಯ್ಕೆ ಮಾಡಿಕೊಳ್ಳಿ – ರೋಹಿತ್‌ ದಪ್ಪ ಎಂಬ ಶಮಾ ಹೇಳಿಕೆಗೆ ಗವಾಸ್ಕರ್‌ ಆಕ್ಷೇಪ

    ನವದೆಹಲಿ: ಕಾಂಗ್ರೆಸ್‌ ವಕ್ತಾರೆ ಶಮಾ ಮೊಹಮ್ಮದ್‌ (Shama Mohamed), ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಕುರಿತು ನೀಡಿದ ಹೇಳಿಕೆ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಕ್ರಿಕೆಟ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಸಹ ಪ್ರತಿಕ್ರಿಯೆ ನೀಡಿದ್ದು, ಶಮಾ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಕ್ರಿಕೆಟ್‌ನಲ್ಲಿ ದೈಹಿಕ ಸಾಮರ್ಥ್ಯ ಇರಬೇಕು ನಿಜ. ಆದ್ರೆ ಅದೊಂದೇ ಮುಖ್ಯವಾಗುವುದಿಲ್ಲ. ನಾನು, ಈ ಮೊದಲೂ ಹೇಳಿದ್ದೇನೆ, ನೀವು ಸ್ಲಿಮ್‌ ಆಗಿರುವ ವ್ಯಕ್ತಿಗಳನ್ನ ಬಯಸಿದ್ರೆ ಮಾಡೆಲಿಂಗ್‌ಗೆ ಹೋಗಿ, ಎಲ್ಲಾ ಮಾಡೆಲ್‌ಗಳನ್ನ ಆಯ್ಕೆ ಮಾಡಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.

    ಕ್ರಿಕೆಟ್‌ನಲ್ಲಿ ಮಾನಸಿಕತೆಯೂ ಹೆಚ್ಚು ಮುಖ್ಯವಾಗುತ್ತದೆ, ಅದಕ್ಕಾಗಿ ಅವರು ಎಷ್ಟು ಚೆನ್ನಾಗಿ ಆಡುತ್ತಾರೆ ಅನ್ನೋದನ್ನು ನೋಡಬೇಕಾಗುತ್ತದೆ. ನಾವು ಸರ್ಫರಾಜ್‌ ಖಾನ್‌ ಬಗ್ಗೆ ಮಾತನಾಡಿದ್ದೇವೆ. ಅವರು ದಪ್ಪ ಇದ್ದಾರೆ ಅನ್ನೋ ಕಾರಣಕ್ಕೆ ಬಹಳ ಸಮಯದವರೆಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲಿಲ್ಲ. ಆದ್ರೆ ಭಾರತ ತಂಡಕ್ಕೆ ಸೇರ್ಪಡೆಯಾದ ನಂತರ ಅವರ ಪ್ರದರ್ಶನ ಅಮೋಘವಾಗಿದೆ. ಕೊನೆಯಬಾರಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಆಡಿದಾಗಲೂ ಒಂದೇ ಇನ್ನಿಂಗ್ಸ್‌ನಲ್ಲಿ 150 ರನ್‌ ಗಳಿಸಿದ್ದರು ಎಂದು ಸ್ಮರಿಸಿದರು.

    ಶಮಾ ಹೇಳಿದ್ದೇನು?
    ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಶಮಾ, ರೋಹಿತ್ ಶರ್ಮಾ (Rohit Sharma) ದಪ್ಪಗಿದ್ದಾರೆ. ಅವರು ತೂಕ ಕಳೆದುಕೊಳ್ಳಬೇಕಾಗಿದೆ, ರೋಹಿತ್ ಭಾರತ ಕಂಡ ಅತ್ಯಂತ ಪ್ರಭಾವಶಾಲಿಯಲ್ಲದ ನಾಯಕ ಎಂದು ಬರೆದುಕೊಂಡಿದ್ದರು. ಶಮಾ ಹೇಳಿಕೆಗೆ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ವಿವಾದ ಜೋರಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಛೀಮಾರಿ ಹಾಕಿದ್ದು, ಟ್ವೀಟ್ ಡಿಲೀಟ್ ಮಾಡುವಂತೆ ತಾಕೀತು ಮಾಡಿತ್ತು.

    ಶಮಾ ಮೊಹಮ್ಮದ್ ಯಾರು?
    ಶಮಾ ಮೊಹಮ್ಮದ್ 1973ರ ಮೇ 17 ಕೇರಳದ ಕಣ್ಣೂರು ಜಿಲ್ಲೆಯ ಚೆರುಕಲ್ಲೈನಲ್ಲಿ ಜನಿಸಿದರು. ಶಮಾ ಮೊಹಮ್ಮದ್ ಕಾಂಗ್ರೆಸ್ ವಕ್ತಾರರಾಗಿರುವುದರ ಜೊತೆಗೆ ದಂತವೈದ್ಯರೂ ಆಗಿದ್ದಾರೆ. ಕೇರಳ ಮೂಲದ ವೈದ್ಯೆಯಾದ ಶಮಾ 2015 ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಮೂಲಗಳ ಪ್ರಕಾರ ಶಮಾ ಕುವೈತ್‌ನ ಇಂಡಿಯನ್ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸಸ್‌ನಲ್ಲಿ ಪದವಿ ಪಡೆದರು. 2018 ರಲ್ಲಿ ಕಾಂಗ್ರೆಸ್ ಅವರನ್ನು ಮೊದಲ ಬಾರಿಗೆ ತನ್ನ ರಾಷ್ಟ್ರೀಯ ಮಾಧ್ಯಮ ಪ್ಯಾನಲಿಸ್ಟ್ ಆಗಿ ನೇಮಿಸಿತು. ನಂತರ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ಮಾಡಲಾಯಿತು.

  • ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ – ಕೋಚ್‌ಗಳು ಏನ್‌ ಮಾಡ್ತಿದ್ದಾರೆ? – ಗವಾಸ್ಕರ್‌ ತೀವ್ರ ತರಾಟೆ

    – ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ

    ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿ ಮುಕ್ತಾಯಗೊಂಡಿದ್ದು, ಭಾರತ ಹೀನಾಯ ಸೋಲಿನೊಂದಿಗೆ ಸರಣಿ ಸೋಲುಕಂಡಿದೆ. ಇದರೊಂದಿಗೆ ಟಿ20 ವಿಶ್ವಕಪ್‌ ಗೆದ್ದ ಬಳಿಕ ಏಕದಿನ ಮತ್ತು ಟೆಸ್ಟ್‌ನಲ್ಲಿ ಸತತ 3ನೇ ಸರಣಿಯಲ್ಲಿ ಭಾರತ ಸೋಲು ಕಂಡಿದೆ. ಟೀಂ ಇಂಡಿಯಾದ ಕಳಪೆ ಬ್ಯಾಟಿಂಗ್‌ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar) ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಬ್ಯಾಟಿಂಗ್‌ ಕೋಚ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಪಂದ್ಯದ ಬಳಿಕ ಸ್ಟಾರ್‌ಸ್ಫೋರ್ಟ್ಸ್‌ ಜೊತೆಗೆ ಮಾತನಾಡಿದ ಸುನೀಲ್‌ ಗವಾಸ್ಕರ್‌, ನಾನು ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಬಗ್ಗೆ ಮಾತನಾಡುತ್ತಿಲ್ಲ. ಆದ್ರೆ ಟೀಂ ಇಂಡಿಯಾ ಬ್ಯಾಟಿಂಗ್‌ ಕೋಚ್‌ಗಳು ಏನ್‌ ಮಾಡ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

    ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಭಾರತ 46 ರನ್‌ಗಳಿಗೆ ಆಲೌಟ್‌ ಆಗಿದ್ದನ್ನು ನೋಡಿದ್ದೇವೆ. ಅಲ್ಲದೇ ಆ ಸರಣಿಯಲ್ಲೂ ಭಾರತ ಸೋಲು ಅನುಭವಿಸಿತು. ಬೌಲಿಂಗ್‌ ಪ್ರದರ್ಶನ ಉತ್ತಮವಾಗಿದೆ. ಆದ್ರೆ ಬ್ಯಾಟಿಂಗ್‌ನಲ್ಲಿ ಧಮ್‌ ಇಲ್ಲ. ನಾನೊಬ್ಬ ಟೆಸ್ಟ್‌ ಪ್ಲೇಯರ್‌ ಆಗಿ ಇದನ್ನ ಮಾತನಾಡ್ತಿದ್ದೇನೆ. ಇಂಗ್ಲೆಂಡ್‌ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ 2 ತಿಂಗಳ ಅಭ್ಯಾಸ ಇತ್ತು. ಈಗ ಕೋಚ್‌ಗಳು ಬ್ಯಾಟಿಂಗ್‌ನಲ್ಲಿ ಏನ್‌ ಇಂಪ್ರೂವ್ಮೆಂಟ್‌ ಆಗಿದೆ ಅಂತ ಹೇಳಲಿ ಎಂದು ಕಿಡಿಕಾರಿದ್ದಾರೆ.

    ಸಿಡ್ನಿಯಲ್ಲಿ ಸುನೀಲ್‌ ಗವಾಸ್ಕರ್‌ಗೆ ಅಪಮಾನ
    ಇನ್ನೂ ಸರಣಿ ಅಂತ್ಯದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್‌ಗೆ ಆಯೋಜಕರು ಅಪಮಾನ ಮಾಡಿದ್ದಾರೆ ಎನ್ನಲಾಗಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಸುನಿಲ್ ಗವಾಸ್ಕರ್ ಅವರಿಗೆ ಆಯೋಜಕರು ಅಪಮಾನ ಮಾಡಿದ್ದು, ಅವರ ಗೈರಿನಲ್ಲೇ ಪ್ರಶಸ್ತಿ ಪ್ರದಾನ ಮಾಡಿರುವ ಘಟನೆ ನಡೆದಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೆ ಹೀನಾಯ ಸೋಲು – ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌‌ ಫೈನಲ್‌ಗೆ ಆಸೀಸ್‌ ಲಗ್ಗೆ

    ಆಸ್ಟ್ರೇಲಿಯಾದ ಅಲನ್ ಬಾರ್ಡರ್‌ ಹಾಗೂ ಭಾರತದ ಸುನಿಲ್ ಗವಾಸ್ಕರ್ ಹೆಸರಿನಲ್ಲಿ ಈ ಸರಣಿ ನಡೆದಿತ್ತು. ಸರಣಿ ಗೆದ್ದ ಆಸ್ಟ್ರೇಲಿಯಾ ತಂಡಕ್ಕೆ ಬಾರ್ಡರ್ ಅವರು ಟ್ರೋಫಿಯನ್ನು ನೀಡಿದರು. ಆದ್ರೆ ಅದೇ ಸಮಯದಲ್ಲಿ ಗವಾಸ್ಕರ್, ಸ್ಥಳದಲ್ಲಿದ್ದರೂ ಅವರನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಭಾರತ ವಿರುದ್ಧ ಸರಣಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡಕ್ಕೆ ಟ್ರೋಫಿ ನೀಡಲು ತಮ್ಮನ್ನು ಆಹ್ವಾನಿಸದಿದ್ದಕ್ಕಾಗಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಟದ ಮಧ್ಯೆಯೇ ಮೈದಾನ ತೊರೆದ ಬುಮ್ರಾ – ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ! 

  • ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    ಕೊನೇ ಓವರ್‌ನಲ್ಲಿ 26 ರನ್‌ ಚಚ್ಚಿಸಿಕೊಂಡ ಪಾಂಡ್ಯ – ಹಾರ್ದಿಕ್‌ ಕಳಪೆ ಬೌಲಿಂಗ್‌ಗೆ ಫುಲ್‌ ಕ್ಲಾಸ್‌

    – 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಮಹಿ
    – ಹ್ಯಾಟ್ರಿಕ್‌ ಸಿಕ್ಸರ್‌ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್‌

    ಮುಂಬೈ: ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವಿರುದ್ಧ ಸೂಪರ್‌ ಸಂಡೆ ನಡೆದ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ (Hardik Pandya) ಅವರ ಕಳಪೆ ಬೌಲಿಂಗ್‌ ಮಾಜಿ ಕ್ರಿಕೆಟಿಗರ ಬೇಸರಕ್ಕೆ ಕಾರಣವಾಗಿದೆ. ಕಳೆದ 2 ಪಂದ್ಯಗಳಲ್ಲಿ ಬೌಲಿಂಗ್‌ ಮಾಡದ ಪಾಂಡ್ಯ ಸಿಎಸ್‌ಕೆ ವಿರುದ್ಧ ಹೆಚ್ಚು ರನ್‌ ಹೊಡೆಸಿಕೊಂಡಿದ್ದು ಭಾರೀ ಟಿಕೆಗೆ ಗುರಿಯಾಗಿದ್ದಾರೆ. ಪಾಂಡ್ಯ ವಿರುದ್ಧ ಸುನೀಲ್‌ ಗವಾಸ್ಕರ್‌, ಇರ್ಫಾನ್‌ ಪಠಾಣ್‌ ಅವರಂತಹ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.

    ಮುಂಬೈ ತಂಡದ ಸೋಲಿನ ಬಳಿಕ ಪ್ರತಿಕ್ರಿಯೆ ನೀಡಿದ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ (Sunil Gavaskar), ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ಕಳಪೆಯಾಗಿತ್ತು. ಅವರ ಬೌಲಿಂಗ್‌ ಸಹ ಅಷ್ಟೇನು ಪರಿಣಾಮ ಬೀರಲಿಲ್ಲ, ಸಾಮಾನ್ಯ ಬೌಲಿಂಗ್‌ ಆಗಿತ್ತು. ಬಹುಶಃ ನಾನು ದೀರ್ಘಕಾಲದ ನಂತರ ನೋಡಿದ ಅತ್ಯಂತ ಕೆಟ್ಟ ಬೌಲಿಂಗ್‌ ಇದಾಗಿತ್ತು. ಯಾವುದೇ ಬ್ಯಾಟರ್‌ಗಳು ಸಾಮಾನ್ಯವಾಗಿ ಸ್ಟ್ರೈಟ್‌ ಲೆಂತ್‌ ಬಾಲ್‌ ಹಾಗೂ ಲೆಗ್‌ಸೈಡ್‌ ಫುಲ್‌ಟಾಸ್‌ ಬಾಲ್‌ಗಳನ್ನ ಹುಡುಕುತ್ತಾರೆ. ಅಂತಹ ಅವಕಾಶಗಳು ಸಿಕ್ಕಾಗ ಸಿಕ್ಸರ್‌ ಬಾರಿಸುತ್ತಾರೆ. ಮಹಿ ಈ ಅವಕಾಶವನ್ನೂ ಸರಿಯಾಗಿ ಬಳಸಿಕೊಂಡರು, ಆದ್ರೆ ಪಾಂಡ್ಯ ಅವರ ಬೌಲಿಂಗ್‌ ನಿಯಂತ್ರಿಸುವಲ್ಲಿ ವಿಫಲವಾಗಿತ್ತು ಎಂದು ಟೀಕಿಸಿದ್ದಾರೆ.

    ಇನ್ನೂ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಕುರಿತು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan), ಕೊನೇ ಓವರ್‌ನಲ್ಲಿ ಕ್ಯಾಪ್ಟನ್‌ ಪಾಂಡ್ಯ ತಾವೇ ಬೌಲಿಂಗ್‌ಗೆ ಇಳಿದಿದ್ದು, ಆಕಾಶ್‌ ಮಧ್ವಾಲ್‌ ಅವರ ಬೌಲಿಂಗ್‌ ಮೇಲಿನ ನಂಬಿಕೆಯ ಕೊರತೆಯನ್ನು ತೋರಿಸಿದೆ. ಅಲ್ಲದೇ ಡೆತ್‌ ಓರವ್‌ ಬೌಲರ್‌ ಆಗಿ ಅವರ ಕೌಶಲ್ಯದ ಕೊರತೆಯನ್ನೂ ತೋರಿಸಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ.

    ಕೊನೇ ಓವರ್‌ ಥ್ರಿಲ್ಲರ್‌:
    ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ ಪರ ಕೊನೇ ಓವರ್‌ ರೋಚಕವಾಗಿತ್ತು. 19 ಓವರ್‌ಗಳಲ್ಲಿ ಸಿಎಸ್‌ಕೆ 180 ರನ್‌ಗಳನ್ನಷ್ಟೇ ಗಳಿಸಿತ್ತು. ಕೊನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಪಾಂಡ್ಯ ಒಂದು ಎಸೆತ ಪೂರೈಸುವಷ್ಟರಲ್ಲೇ 2 ವೈಡ್‌, 1 ಬೌಂಡರಿ ಚಚ್ಚಿಸಿಕೊಂಡು 6 ರನ್‌ ಬಿಟ್ಟುಕೊಟ್ಟಿದ್ದರು. 2ನೇ ಎಸೆತದಲ್ಲಿ ಡೇರಿಲ್‌ ಮಿಚೆಲ್‌ ಕ್ಯಾಚ್‌ ನೀಡಿ ಔಟಾದರು. ನಂತರ ಕ್ರೀಸ್‌ಗಿಳಿದ ಮಹಿ, ಪಾಂಡ್ಯ ಅವರ 3,4,5ನೇ ಎಸೆತಗಳನ್ನು ಸತತವಾಗಿ ಹ್ಯಾಟ್ರಿಕ್‌ ಸಿಕ್ಸರ್‌ಗಟ್ಟಿದರು, ಕೊನೇ ಎಸೆತದಲ್ಲಿ 2 ರನ್‌ ಬಾರಿಸಿದರು. ಇದರಿಂದ ಸಿಎಸ್‌ಕೆ ತಂಡ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಕೊನೇ ಓವರ್‌ನಲ್ಲಿ 26 ರನ್‌ ಬಿಟ್ಟುಕೊಟ್ಟ ಪಾಂಡ್ಯ ತಾವು ಮಾಡಿದ 3 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು 43 ರನ್‌ ಚಚ್ಚಿಸಿಕೊಂಡಿದ್ದರು.

    ಹುಚ್ಚೆದ್ದು ಕುಣಿದ ಮಹಿ ಫ್ಯಾನ್ಸ್‌:
    ಕೊನೇ 4 ಎಸೆತಗಳನ್ನ ಎದುರಿಸಿದರೂ 500 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಧೋನಿ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಅಂತಿಮ ಓವರ್‌ನಲ್ಲಿ ಕಣಕ್ಕಿಳಿದರೂ ಕೇವಲ 4 ಎಸೆತಗಳಲ್ಲೇ 20 ರನ್‌ ಚಚ್ಚಿದರು. ಅಂತಿಮವಾಗಿ ಸಿಎಸ್‌ಕೆ ಮುಂಬೈ ವಿರುದ್ಧ 20 ರನ್‌ಗಳ ಜಯ ಸಾಧಿಸಿತು.

  • ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

    ನವದೆಹಲಿ: ಕೌಟುಂಬಿಕ ಕಾರಣಗಳನ್ನು ಎದುರಿಟ್ಟು ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಿಂದ ದೂರ ಉಳಿದ ರೋಹಿತ್ ಶರ್ಮಾ (Rohit Sharma) ನಡೆಗೆ ಭಾರತ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ (Sunil Gavaskar) ಗರಂ ಆಗಿದ್ದಾರೆ.

    ಪ್ರತಿ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಆಡಬೇಕು. ವಯಕ್ತಿಕ ವಿಷಯಗಳನ್ನು ಬಿಟ್ಟು ತಂಡವನ್ನು ಸದೃಢಗೊಳಿಸುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 4 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋಲು – ನಂ.1 ಪಟ್ಟ ಕಳೆದುಕೊಂಡ ಭಾರತ

    ವಿಶ್ವಕಪ್ ಪಂದ್ಯ (World Cup) ನಡೆಯಲಿರುವ ಈ ವರ್ಷ ಆಟಗಾರರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದಂತೆ ಕೌಟುಂಬಿಕ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.

    ರೋಹಿತ್ ಗೈರಿನಲ್ಲಿ ಮೊದಲ ಪಂದ್ಯದ ಹಾರ್ದಿಕ್ ಪಾಂಡ್ಯಾ ( Hardik Pandya) ನಾಯಕತ್ವದಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ ಗೆಲುವು ದಾಖಲಿಸಿತ್ತು. ಈ ಮೂಲಕ 1-0 ಮುನ್ನಡೆ ಪಡೆದಿತ್ತು.

    ನಂತರದ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿ ತಂಡ ಸೋಲು ಅನುಭವಿಸಿತ್ತು. ಈ ಮೂಲಕ 1-2 ಅಂತರದಲ್ಲಿ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. ಇದನ್ನೂ ಓದಿ: 3 ಪಂದ್ಯ, ಫಸ್ಟ್ ಬಾಲಿಗೆ ಔಟ್ – ಕೆಟ್ಟ ದಾಖಲೆ ಬರೆದ ಸೂರ್ಯ

  • ವಿಶ್ವಕಪ್ ಗೆದ್ದರೆ ಬಾಬರ್ 2048ಕ್ಕೆ ಪಾಕ್ ಪ್ರಧಾನಿ ಆಗ್ತಾರೆ – ಗಾವಸ್ಕರ್ ಭವಿಷ್ಯ

    ವಿಶ್ವಕಪ್ ಗೆದ್ದರೆ ಬಾಬರ್ 2048ಕ್ಕೆ ಪಾಕ್ ಪ್ರಧಾನಿ ಆಗ್ತಾರೆ – ಗಾವಸ್ಕರ್ ಭವಿಷ್ಯ

    ಮೆಲ್ಬರ್ನ್: ರಣರೋಚಕ ಟಿ20 ವಿಶ್ವಕಪ್ (T20 WorldCup) ಅಂತಿಮಘಟ್ಟ ತಲುಪಿದೆ. ಭಾನುವಾರ (ನ.13) ಇಂಗ್ಲೆಂಡ್ (England) ಹಾಗೂ ಪಾಕಿಸ್ತಾನ (Pakistan) ತಂಡಗಳು ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ಸೆಣಸಲಿವೆ. ಆದರೆ ಫೈನಲ್ ಪಂದ್ಯವನ್ನು 1992ರ ವಿಶ್ವಕಪ್ ಪಂದ್ಯಕ್ಕೆ ಹೋಲಿಕೆ ಮಾಡಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ (Sunil Gavaskar), `ಪಾಕಿಸ್ತಾನ 2022ರ ಟಿ20 ವಿಶ್ವಕಪ್ ಗೆದ್ದರೇ 2048ಕ್ಕೆ ತಂಡದ ನಾಯಕ ಬಾಬರ್ ಆಜಂ (Babar Azam) ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

    ಪ್ರಸ್ತುತ ವಿಶ್ವಕಪ್ ಪಂದ್ಯವನ್ನು 1992 ವಿಶ್ವಕಪ್‌ಗೆ ಹೋಲಿಸಿರುವ ಗಾವಸ್ಕರ್, `ನಿಮಗೆ ಗೊತ್ತಾ ಈ ಬಾರಿ ವಿಶ್ವಕಪ್ ಗೆದ್ದರೆ, ಬಾಬರ್ ಆಜಂ (Babar Azam) ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ (Pakistan PrimeMinister) ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಸ್ಟೇಡಿಯಂನ ಹೆಸರು ಬದಲಾಯಿಸುತ್ತೇವೆ – ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

    1992ರಲ್ಲಿ ಏಕದಿನ ವಿಶ್ವಕಪ್‌ನಲ್ಲೂ ಪಾಕಿಸ್ತಾನ-ಇಂಗ್ಲೆಂಡ್ (PAKvsENG) ಫೈನಲ್ ಪ್ರವೇಶಿಸಿತ್ತು. ಮಹತ್ವದ ತಿರುವುಗಳ ನಡುವೆಯೂ ಇಮ್ರಾನ್ ಖಾನ್ ನಾಯಕತ್ವದಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಿನ ಪಂದ್ಯದಲ್ಲಿ ವಾಸೀಮ್ ಅಕ್ರಮ್ ಭರ್ಜರಿ ಪ್ರದರ್ಶನ ನೀಡಿದ್ದರು.

    2022ರ T20 ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ ಈಗ ಫೈನಲ್ ತಲುಪಿದೆ. ಮೊದಲ ಪಂದ್ಯದಲ್ಲಿ 20 ಓವರ್‌ಗಳಲ್ಲಿ 159 ರನ್‌ಗಳಿಸಿ ಭಾರತದ (Team India) ಎದುರು ಸೋಲನ್ನು ಅನುಭಿಸಿತು. 2ನೇ ಪಂದ್ಯದಲ್ಲಿ ಕೇವಲ 129 ರನ್‌ಗಳಿಸಿ ಜಿಂಬಾಬ್ವೆ ಎದುರು ಮಂಡಿಯೂರಿತ್ತು. ನಂತರ ಅಬ್ಬರಿಸಲು ಆರಂಭಿಸಿದ ಪಾಕ್ ಸತತ ಮೂರು ಪಂದ್ಯಗಳಲ್ಲಿ ಗೆದ್ದು ಅಧಿಕ ರನ್‌ರೇಟ್‌ನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿತು. ಸೆಮಿ ಕದನದಲ್ಲಿ ಕಿವೀಸ್ ಪಡೆಗೆ ಮಣ್ಣುಮುಕ್ಕಿಸಿ, ಈಗ 3ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಗಾವಸ್ಕರ್ ಇದನ್ನು 1992ರ ವಿಶ್ವಕಪ್ ಕದನಕ್ಕೆ ಹೋಲಿಸಿದ್ದಾರೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪಾಕ್ ತಂಡದ ನಾಯಕ ಬಾಬರ್ ಆಜಂ, ನಾವು ಖಂಡಿತವಾಗಿಯೂ ಟ್ರೋಫಿ ಗೆಲ್ಲಲು ಪ್ರಯತ್ನಿಸುತ್ತೇವೆ. ಈ ದೊಡ್ಡ ಮೈದಾನದಲ್ಲಿ ತಂಡವನ್ನು ಮುನ್ನಡೆಸುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾನಿಯಾ, ಮಲಿಕ್ ದಾಂಪತ್ಯ ಜೀವನ ಅಂತ್ಯ? – ಹುಳಿ ಹಿಂಡಿದ ಸ್ಟಾರ್ ನಟಿ

    1992 ಹಾಗೂ 2022ರ ವಿಶ್ವಕಪ್‌ಗಳಲ್ಲಿ ಮೆಲ್ಬರ್ನ್‌ನಲ್ಲಿ ಭಾರತದ ಎದುರೇ ಆರಂಭಿಕ ಪಂದ್ಯಗಳನ್ನಾಡಿದ ಪಾಕ್ ಎರಡೂ ಪಂದ್ಯಗಳಲ್ಲೂ ಸೋತಿದೆ.

    Live Tv
    [brid partner=56869869 player=32851 video=960834 autoplay=true]

  • ಅವನಿಗಿಂತ ಉತ್ತಮ ಫಿನಿಶರ್ ಇಲ್ಲ, ಆತ T20 ವಿಶ್ವಕಪ್ ಪಂದ್ಯಕ್ಕೆ ಅರ್ಹ – ಬಜ್ಜಿ ಹೇಳಿದ್ದು ಯಾರಿಗೆ?

    ಅವನಿಗಿಂತ ಉತ್ತಮ ಫಿನಿಶರ್ ಇಲ್ಲ, ಆತ T20 ವಿಶ್ವಕಪ್ ಪಂದ್ಯಕ್ಕೆ ಅರ್ಹ – ಬಜ್ಜಿ ಹೇಳಿದ್ದು ಯಾರಿಗೆ?

    ಮುಂಬೈ: 2022ರ IPL ಆವೃತ್ತಿ ಹೊಸ – ಹೊಸ ಪ್ರತಿಭೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಕಳೆದ ಐಪಿಎಲ್‌ನಲ್ಲಿ ಕಳಪೆ ಆಟ ಪ್ರದರ್ಶಿಸಿ ಟೀಂ ಇಂಡಿಯಾದಿಂದ ಹೊರಗುಳಿಯುವ ಸಾಧ್ಯತೆಗಳಿದ್ದ ಪ್ಲೇಯರ್‌ಗಳು ಈ ಬಾರಿ ಬೆಸ್ಟ್ ಕ್ರಿಕೆಟರ್ಸ್ ಎನ್ನಿಸಿಕೊಂಡಿದ್ದಾರೆ. ಇನ್ನು ಕೆಲ ಹಿರಿಯ ಆಟಗಾರರು ಲಯ ಕಂಡುಕೊಂಡು ಶಹಬ್ಬಾಸ್ ಎನಿಸಿಕೊಳ್ಳುತ್ತಿದ್ದಾರೆ.

    dinesh karthik

    ಟೀ-20 ವಿಶ್ವಕಪ್‌ನಲ್ಲಿ ಕಳೆದ ಬಾರಿ ಲೀಗ್ ಹಂತದಲ್ಲೇ ಹೊರಗುಳಿದಿದ್ದ ಟೀಂ ಇಂಡಿಯಾ ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು, ಅದಕ್ಕಾಗಿ ಯಾವೆಲ್ಲಾ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಚರ್ಚೆಯನ್ನೂ ನಡೆಸುತ್ತಿದೆ. ಈ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಹಾಗೂ ಸುನೀಲ್ ಗವಾಸ್ಕರ್ ಓರ್ವ ಆಟಗಾರನ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದನ್ನೂ ಓದಿ: ಟೀಕೆಗಳ ನಡುವೆಯೂ ಮೈಲಿಗಲ್ಲು ಸಾಧಿಸಿದ ಕಿಂಗ್ ಕೊಹ್ಲಿ

    ಒಂದು ವೇಳೆ ನಾನು ಆಯ್ಕೆಗಾರರ ಸಮಿತಿಯಲ್ಲಿದ್ದರೆ, ಆತನನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಎಂದು ಭರವಸೆ ನೀಡಿದ್ದಾರೆ. ಅದು ಮತ್ಯಾರೂ ಅಲ್ಲ, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್.

    dinesh karthik

    ಈ ಕುರಿತು ಮಾತನಾಡಿರುವ ಸಿಂಗ್, ದಿನೇಶ್ ಕಾರ್ತಿಕ್ ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಪಂದ್ಯವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ನನ್ನ ಪ್ರಕಾರ, ಈ ಬಾರಿಯ ಐಪಿಎಲ್‌ನಲ್ಲಿ ಅತ್ಯುತ್ತಮ ಫಿನಿಷರ್ ಯಾರೆಂದರೆ ಅದು ದಿನೇಶ ಕಾರ್ತಿಕ್. ಅವರು ಆಫ್ ಸೈಡ್‌ಗಿಂತಲೂ ಲೆಗ್ ಸೈಡ್‌ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಅವರಿಗಿಂತ ಉತ್ತಮ ಫಿನಿಷರ್ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನಾನು ಆಯ್ಕೆಗಾರನಾದರೆ, ದಿನೇಶ್ ಕಾರ್ತಿಕ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಅವಕಾಶ ನೀಡಲಿದ್ದೇನೆ. ಆತ ಅರ್ಹನಾಗಿದ್ದಾನೆ. ಟೀಂ ಇಂಡಿಯಾಕ್ಕೆ ಅತ್ಯುತ್ತಮ ಫಿನಿಶರ್ ಬೇಕೆಂದಿದ್ದರೆ ಅದು ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ ಆಗಿರಬೇಕು. ಅವರು ತಂಡವನ್ನು ಬಲಿಷ್ಠಗೊಳಿಸುತ್ತಾರೆ ಎಂದು ಹರ್ಭಜನ್ ಹೇಳಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

    dinesh karthik

    15ನೇ ಆವೃತ್ತಿಯ ಐಪಿಎಲ್‌ನ 12 ಪಂದ್ಯಗಳಲ್ಲಿ 274 ರನ್‌ಗಳಿಸಿರುವ ದಿನೇಶ್ ಕಾರ್ತಿಕ್ ಕೆಲ ಮ್ಯಾಚ್‌ಗಳಲ್ಲಿ ಉತ್ತಮ ಫಿನಿಶರ್ ಆಗಿ ಬ್ಯಾಟಿಂಗ್ ಅಬ್ಬರಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾ ತಂಡದೊಂದಿಗೆ ಟಿ20 ಸರಣಿ ನಡೆಯಲಿದೆ. ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮಾತುಗಳು ಕೇಳಿಬರುತ್ತಿವೆ.

    ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸಹ, ಕಳೆದ ಬಾರಿ ಟಿ20 ವರ್ಲ್ಡ್ ಕಪ್‌ನಲ್ಲಿ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿಲ್ಲ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಅವರು ಆಡಿದ ರೀತಿ ಉತ್ತಮವಾಗಿದೆ. ನಾನು ಆಯ್ಕೆ ತಂಡದಲ್ಲಿದ್ದರೆ, ಖಂಡಿತವಾಗಿ ದಿನೇಶ್ ಕಾರ್ತಿಕ್ ಅವರನ್ನು ಟಿ20 ವರ್ಲ್ಡ್ ಕಪ್‌ಗೆ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    IPL 2022 GT VS LSG

    ರೇಸ್‌ನಲ್ಲಿ ಪಾಂಡ್ಯ: ಕಳೆದ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಈ ಬಾರಿ ಹೊಸ ತಂಡದ ಮೂಲಕ ನಾಯಕನಾಗಿ ಪ್ರತಿನಿಧಿಸಿದ್ದು, ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದಾರೆ. ತಂಡದ ನಾಯಕನಾಗಿ ಉತ್ತಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಈ ಐಪಿಎಲ್‌ನ 12 ಪಂದ್ಯಗಳಲ್ಲಿ 273 ರನ್‌ಗಳನ್ನು ಸಿಡಿಸಿ, ತಂಡ ಸೇರ್ಪಡೆಯಾದ ಮೊದಲ ಐಪಿಎಲ್‌ನಲ್ಲೇ ಪ್ಲೇ ಆಫ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ಬೆಂಗಳೂರಿನ ನೀರು ಕಾರಣ – ರಾಹುಲ್ ಅದ್ಭುತ ಆಟದ ಸೀಕ್ರೆಟ್ ಬಿಚ್ಚಿಟ್ಟ ಗವಾಸ್ಕರ್

    ಬೆಂಗಳೂರಿನ ನೀರು ಕಾರಣ – ರಾಹುಲ್ ಅದ್ಭುತ ಆಟದ ಸೀಕ್ರೆಟ್ ಬಿಚ್ಚಿಟ್ಟ ಗವಾಸ್ಕರ್

    – ಬೆಂಗ್ಳೂರು ವಾಟರ್ ಹಲವಾರು ಉತ್ತಮ ಕ್ರೀಡಾಪಟುಗಳನ್ನು ಹುಟ್ಟಿಹಾಕಿದೆ

    ಅಬುಧಾಬಿ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕನ್ನಡಿಗ ಕೆಎಲ್ ರಾಹುಲ್ ಅವರ ಅದ್ಭುತ ಆಟಕ್ಕೆ ಬೆಂಗಳೂರಿನ ನೀರು ಕಾರಣ ಎಂದು ಹೇಳುವ ಮೂಲಕ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರು ಸಿಲಿಕಾನ್ ಸಿಟಿಯನ್ನು ಹಾಡಿಹೊಗಳಿದ್ದಾರೆ.

    ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗರು ಬಹಳ ಚೆನ್ನಾಗಿ ಆಡುತ್ತಿದ್ದಾರೆ. ಅದರಲ್ಲೂ ಕೆಎಲ್ ರಾಹುಲ್ ಅವರು ಭರ್ಜರಿ ಫಾರ್ಮ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಐಪಿಎಲ್‍ನಲ್ಲಿ ಅವರು ಮೊದಲ ಬಾರಿಗೆ ಪಂಜಾಬ್ ತಂಡವನ್ನು ನಾಯಕನಾಗಿ ಮುನ್ನಡೆಸುವುದರ ಜೊತೆಗೆ, ಐಪಿಎಲ್-2020ಯಲ್ಲಿ ಅತೀ ಹೆಚ್ಚು ರನ್ ಬಾರಿಸಿ ಆರೆಂಜ್ ಕ್ಯಾಪ್ ತೊಟ್ಟು ಆಡುತ್ತಿದ್ದಾರೆ.

    ಕೆಎಲ್ ರಾಹುಲ್ ವಿಚಾರವಾಗಿ ಕಮೆಂಟರಿ ವೇಳೆ ಮಾತನಾಡಿರುವ ಸುನಿಲ್ ಗವಾಸ್ಕರ್ ಅವರು, ಅದು ಬೆಂಗಳೂರು ನೀರು. ಬೆಂಗಳೂರು ಹಲವಾರು ವಿಶ್ವ ಪ್ರಸಿದ್ಧ ಕ್ರೀಡಾಪಟುಗಳನ್ನು ನೀಡಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲ, ಎಲ್ಲ ಕ್ರೀಡೆಯಲ್ಲು ಉತ್ತಮ ಆಟಗಾರರಿದ್ದಾರೆ. ಬೆಂಗಳೂರಿನ ಪ್ರಕಾಶ್ ಪಡುಕೋಣೆ ನನ್ನ ಮೆಚ್ಚಿನ ಕ್ರೀಡಾಪಟು. ಗುಂಡಪ್ಪ ವಿಶ್ವನಾಥ್, ಎರಪಲ್ಲಿ ಪ್ರಸನ್ನ, ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ರೀತಿಯ ವಿಶ್ವಮಟ್ಟದ ಕ್ರೀಡಾಪಟುಗಳನ್ನು ಬೆಂಗಳೂರು ಹುಟ್ಟುಹಾಕಿದೆ ಎಂದು ಬೆಂಗಳೂರನ್ನು ಪ್ರಶಂಸಿಸಿದ್ದಾರೆ.

    ಇದೇ ವೇಳೆ ರಾಹುಲ್ ಬಗ್ಗೆ ಮಾತನಾಡಿ, ರಾಹುಲ್ ಉತ್ತಮವಾಗಿ ಆಡಿಕೊಂಡು ಬಂದಿದ್ದಾರೆ. ಇದಕ್ಕೆ ಬೆಂಗಳೂರಿನ ನೀರೇ ಕಾರಣವಿರಬಹುದು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಕೆಎಲ್ ರಾಹುಲ್ ಅವರು ಈಗಾಗಲೇ 10 ಪಂದ್ಯಗಳಲ್ಲಿ ಐದು ಅರ್ಧಶತಕ ಮತ್ತು ಒಂದು ಶತಕದ ನೆರವಿನಿಂದ 540 ರನ್ ಗಳಿಸಿ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ.

    ರಾಹುಲ್ ದಾಖಲೆ
    ಸತತ ಮೂರು ಐಪಿಎಲ್‍ನಲ್ಲಿ 500ಕ್ಕೂ ಅಧಿಕ ರನ್‍ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‍ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ. 2019ರಲ್ಲಿ ರಾಹುಲ್ 14 ಪಂದ್ಯಗಳಿಂದ 593 ರನ್ ಹೊಡೆಯುವ ಮೂಲಕ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. 2018ರಲ್ಲಿ ರಾಹುಲ್ 14 ಪಂದ್ಯಗಳನ್ನು ಆಡುವ ಮೂಲಕ 659 ರನ್ ಹೊಡೆದು ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು.

    ಸದ್ಯ ಐಪಿಎಲ್‍ನಲ್ಲಿ ರಾಹುಲ್ ನಾಯಕತ್ವದ ಪಂಜಾಬ್ ತಂಡ 10 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕರಲ್ಲಿ ಗೆದ್ದು, ಆರರಲ್ಲಿ ಸೋತು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪ್ಲೇ ಆಫ್‍ಗೆ ಎಂಟ್ರಿ ಕೊಡಲು ಮುಂದಿನ ನಾಲ್ಕು ಪಂದ್ಯವನ್ನು ಒಳ್ಳೆಯ ರನ್‍ರೇಟಿನಲ್ಲಿ ಪಂಜಾಬ್ ಗೆಲ್ಲಬೇಕಿದೆ. ಆದರೆ ನಾಯಕ ಕೆಎಲ್ ರಾಹುಲ್ ಉತ್ತಮ ಫಾರ್ಮ್‍ನಲ್ಲಿ ಇದ್ದಾರೆ. ಜೊತೆಗೆ ಕ್ರಿಸ್ ಗೇಲ್ ಕೂಡ ವಾಪಸ್ ಆಗಿದ್ದಾರೆ. ಇದರ ಜೊತೆಗೆ ಕಳೆದ ಮೂರು ಪಂದ್ಯಗಳಲ್ಲಿ ಪಂಜಾಬ್ ಭರ್ಜರಿ ಗೆಲುವು ಸಾಧಿಸಿದೆ.

  • ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಐಪಿಎಲ್‍ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರ ಪಕ್ಷಪಾತ?- ಗವಾಸ್ಕರ್ ಆಕ್ರೋಶ

    ಅಬುಧಾಬಿ: ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಪಕ್ಷಪಾತದಿಂದ ಆಡುತ್ತಿದ್ದಾರೆ ಎಂಬ ಅನುಮಾನ ರಾಜಸ್ಥಾನ ಮತ್ತು ಕೋಲ್ಕತ್ತಾ ವಿರುದ್ಧದ ಪಂದ್ಯದ ಬಳಿಕ ಮೂಡಿದೆ.

    ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಐಯಾನ್ ಮಾರ್ಗನ್ ಎದುರು ವೇಗದ ಬೌಲರ್ ಜೋಫ್ರಾ ಆರ್ಚರ್, ಟಾಮ್ ಕರ್ರನ್ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇದೇ ವಿಚಾರದ ಕುರಿತು ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್ ಗರಂ ಆಗಿದ್ದಾರೆ.

    ಕೋಲ್ಕತ್ತಾ ತಂಡ 13.1 ಓವರ್ ಗಳಲ್ಲಿ 106 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಐಯಾನ್ ಮಾರ್ಗನ್ ಬ್ಯಾಟಿಂಗ್‍ಗೆ ಇಳಿದಿದ್ದರು. ಪಂದ್ಯದಲ್ಲಿ 23 ಎಸೆತಗಳಲ್ಲಿ 34 ರನ್ ಗಳಿಸಿದ ಮಾರ್ಗನ್ ಚೆಂಡನ್ನು ಮಿಡಲ್ ಮಾಡಲು ವಿಫಲರಾಗುತ್ತಿದ್ದರು. ಆದರೂ ಆರ್ಚರ್ ಮತ್ತು ಕರ್ರನ್ ಆತನ ವಿರುದ್ಧ ಕನಿಷ್ಠ ಒಂದು ಬೌನ್ಸರ್ ಕೂಡ ಎಸೆಯಲಿಲ್ಲ. ಸ್ಲಾಗ್ ಓವರ್ ಗಳಲ್ಲಿ 2 ಸಿಕ್ಸರ್ ಸಿಡಿಸಿದ ಮಾರ್ಗನ್ ತಂಡಕ್ಕೆ ಉಪಯುಕ್ತವಾದರು. ಇದನ್ನೂ ಓದಿ: ಗುರು ದ್ರಾವಿಡ್ ಪರಿಶ್ರಮ – ಐಪಿಎಲ್ ಅಲ್ಲ ಇದು ಇಂಡಿಯನ್ ಪ್ಲೇಯರ್ಸ್ ಲೀಗ್

    ಐಪಿಎಲ್‍ನಲ್ಲಿ ಫಾಸ್ಟೆಸ್ಟ್ ಬೌಲರ್ ಎಂದು ಗುರುತಿಸಿಕೊಂಡಿರುವ ಆರ್ಚರ್ ಪಂದ್ಯದಲ್ಲಿ ಇಯಾನ್ ಮಾರ್ಗನ್‍ಗೆ ಒಂದು ಬೌನ್ಸರ್ ಕೂಡ ಹಾಕಿಲಿಲ್ಲ. ಆರ್ಚರ್ ರಂತಹ ಆಟಗಾರನಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಇನ್ನು ಕರ್ರನ್ ಆದ್ರೆ ಏಕಾಏಕಿ ಫುಲ್‍ಟಾಸ್ ಎಸೆದು ತನ್ನ ಕ್ಯಾಪ್ಟನ್ ಸಿಕ್ಸರ್ ಸಿಡಿಸುವಂತೆ ಮಾಡಿದ್ದರು ಎಂದು ಸುನಿಲ್ ಗವಾಸ್ಕರ್ ಆರೋಪಿಸಿದ್ದಾರೆ. ಪಂದ್ಯದಲ್ಲಿ ಕೋಲ್ಕತ್ತಾ ತಂಡ 6 ವಿಕೆಟ್ ನಷ್ಟಕ್ಕೆ 174 ರನ್ ಸಿಡಿಸಿದ್ರೆ, ರಾಜಸ್ಥಾನ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯ್ತು.

  • ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಗವಾಸ್ಕರ್

    ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಗವಾಸ್ಕರ್

    ಮುಂಬೈ: ಅನುಷ್ಕಾ ಶರ್ಮಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಕ್ರಿಕೆಟಿಗ ಮತ್ತು ವಿಶ್ಲೇಷಕ ಸುನಿಲ್ ಗವಾಸ್ಕರ್ ಅವರು ಹೇಳಿದ್ದಾರೆ.

    ಗುರುವಾರ ನಡೆದ ಪಂಜಾಬ್ ಮತ್ತು ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಜೊತೆಗೆ ಎರಡು ಸುಲಭದ ಕ್ಯಾಚನ್ನು ಕೈಚೆಲ್ಲಿದ್ದರು. ಈ ವೇಳೆ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಅವರ ಪತ್ನಿ ಅನುಷ್ಕಾಳನ್ನು ಅಲ್ಲಿಗೆ ಎಳೆದು ತಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

    ಈಗ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸುನಿಲ್ ಗವಾಸ್ಕರ್, ನಾನು ಅಕಾಶ್ ಚೋಪ್ರಾ ಹಿಂದಿ ಮಾಧ್ಯಮವೊಂದಕ್ಕೆ ಕಮೆಂಟರಿ ಮಾಡುತ್ತಿದ್ದೇವು. ಆಗ ಅಕಾಶ್ ಆಟಗಾರರಿಗೆ ಅಭ್ಯಾಸ ಮಾಡಲು ಕಮ್ಮಿ ಸಮಯ ಸಿಕ್ಕಿದೆ ಎಂದರು. ಅದಕ್ಕೆ ನಾನು ಹೌದು ರೋಹಿತ್ ಶರ್ಮಾ ಕೂಡ ಮೊದಲ ಪಂದ್ಯದಲ್ಲಿ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಧೋನಿ ಕೂಡ ಸರಿಯಾಗಿ ಆಡಲಿಲ್ಲ. ಈಗ ಕೊಹ್ಲಿ ಕೂಡ ಬ್ಯಾಟ್ ಮಾಡಲು ಕಷ್ಟ ಪಡುತ್ತಿದ್ದಾರೆ ಎಂದಿದ್ದೆ.

    ಇದರ ಮುಂದುವರಿದ ಭಾಗವಾಗಿ ನಾನು, ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಕೂಡ ವಿರಾಟ್ ಅಭ್ಯಾಸ ಮಾಡಿರಲಿಲ್ಲ. ಅವರು ಅವರ ಪತ್ನಿ ಅನುಷ್ಕಾ ಜೊತೆ ಟಿನ್ನಿಸ್ ಬಾಲಿನಲ್ಲಿ ಅವರ ಅಪಾರ್ಟ್‍ಮೆಂಟ್ ಒಳಗೆ ಅಭ್ಯಾಸ ಮಾಡುತ್ತಿದ್ದರು ಎಂದಿದ್ದೇನೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಿರಾಟ್ ಮತ್ತು ಅನುಷ್ಕಾ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿತ್ತು ಇದನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ ಎಂದು ಗವಾಸ್ಕರ್ ಗಾಳಿ ಸುದ್ದಿಗೆ ತೆರೆ ಎಳಿದ್ದಾರೆ.

    ನನ್ನ ಹೇಳಿಕೆಯನ್ನು ಜನರು ತಿರುಚಿದ್ದಾರೆ. ಅನುಷ್ಕಾ ಜೊತೆ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ. ಅನುಷ್ಕಾ ಬೌಲಿಂಗ್‍ಗೆ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳುವುದು ತಪ್ಪಾ? ಇದರಲ್ಲಿ ಯಾವ ಪದ ಅಸಭ್ಯವಾಗಿದೆ. ಇದರಲ್ಲಿ ನಾನು ಯಾವುದನ್ನು ಸೆಕ್ಸಿಯಾಗಿ ಹೇಳಿದ್ದೇನೆ. ಕೇವಲ ನಾನು ವೈರಲ್ ಆದ ವಿಡಿಯೋವನ್ನು ಮನದಲ್ಲಿಟ್ಟುಕೊಂಡು ಮಾತನಾಡಿದ್ದೇನೆ. ಕೊರೊನಾ ಸಮಯದಲ್ಲಿ ಅವರು ಅಭ್ಯಾಸ ಮಾಡಿಲ್ಲ ಎಂಬುದನ್ನು ನಾನು ಹೇಳಿದ್ದೇನೆ. ಇದರಲ್ಲಿ ಏನೂ ತಪ್ಪಿದೆ ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

    ನಾನು ಈ ಹಿಂದೆಯಿಂದಲೂ ಕ್ರಿಕೆಟಿಗರ ಜೊತೆ ಅವರ ಹೆಂಡತಿಯರು ವಿದೇಶಕ್ಕೆ ಪ್ರವಾಸಕ್ಕೆ ಹೋಗುವುದನ್ನು ಬೆಂಬಲಿಸಿದ್ದೇನೆ. ಯಾವ ರೀತಿ ಓರ್ವ ಆಫೀಸ್‍ಗೆ ಹೋಗಿ ಮರಳಿ ತನ್ನ ಮನೆಗೆ ಬಂದು ಹೆಂಡತಿ ಜೊತೆ ಇರುತ್ತಾನೆ ಹಾಗೇ ಕ್ರಿಕೆಟ್ ಆಟಗಾರರು ಕೂಡ ಪಂದ್ಯ ಮುಗಿದ ಬಳಿಕ ಪತ್ನಿಯರ ಜೊತೆ ಕುಟುಂಬದ ಜೊತೆ ಕಾಲಕಳೆಯಬೇಕು ಎಂದು ನಾನು ಹೇಳಿದ್ದೇನೆ. ನಾನು ಎಂದು ಅನುಷ್ಕಾಳ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಆಕೆಯ ಮೇಲೆ ನಾನು ಯಾಕೆ ಆರೋಪ ಮಾಡಬೇಕು ಎಂದು ಸನ್ನಿ ಪ್ರಶ್ನಿಸಿದ್ದಾರೆ.

    ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಆಡುತ್ತಿರುವಾಗ ಕಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್, ಕೊಹ್ಲಿಯ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಹಿಂದಿಯಲ್ಲಿ ಕೊಹ್ಲಿ ಲಾಕ್‍ಡೌನ್ ಸಮಯದಲ್ಲಿ ಕೇವಲ ಅನುಷ್ಕಾ ಶರ್ಮಾ ಬೌಲಿಂಗ್‍ಗೆ ಬ್ಯಾಟ್ ಮಾಡಿದ್ದಾರೆ ಎಂದು ಹೇಳಿದ್ದರು. ಇದಾದ ಬಳಿಕ ಈ ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈಗ ಇದಕ್ಕೆ ಸನ್ನಿ ಸ್ಪಷ್ಟೀಕರಣ ನೀಡಿದ್ದಾರೆ.