Tag: Sunday special

  • ಸಂಡೇ ಸ್ಪೆಷಲ್ ಮಸಾಲೆ ತ್ರಿಪಲ್ ದೋಸೆ

    ಸಂಡೇ ಸ್ಪೆಷಲ್ ಮಸಾಲೆ ತ್ರಿಪಲ್ ದೋಸೆ

    ವತ್ತು ಸಂಡೇ, ಸಾಮಾನ್ಯವಾಗಿ ಬಹುತೇಕ ಮಂದಿ ವೀಕೆಂಡ್ ಮುಗಿಸಿ, ಕೆಲಸದ ಒತ್ತಡ ಬಿಟ್ಟು ಇಂದು ರಿಲ್ಯಾಕ್ಸ್ ಮೂಡ್‌ನಲ್ಲಿ ಇರುತ್ತಾರೆ. ಎಲ್ಲರೂ ಮನೆಯಲ್ಲಿದ್ದಾರೆ ಇವತ್ತೇನಾದರು ಸ್ಪೆಷಲ್ ತಿಂಡಿ ಮಾಡೋಣ ಅಂತ ಅಂದುಕೊಂಡವರಿಗೆ ಯಾವ ತಿಂಡಿ ಮಾಡೋಣ ಎಂದು ಕನ್‌ಫ್ಯೂಸ್ ಕೂಡ ಇರತ್ತದೆ. ಹೀಗಾಗಿ ಮನೆಯಲ್ಲಿ ಸುಲಭವಾಗಿ ಸ್ಪೆಷಲ್ ಮಸಾಲೆ ತ್ರಿಪಲ್ ದೋಸೆ ಮಾಡಿ ಸವಿದು ರಜಾ ದಿನವನ್ನು ಎಂಜಾಯ್ ಮಾಡಿ.

    ಬೇಕಾದ ಸಾಮಾಗ್ರಿಗಳು
    * ಅಕ್ಕಿ ಹಿಟ್ಟು – ಒಂದು ಸಣ್ಣ ಬಟ್ಟಲು
    * ಗೋಧಿ ಹಿಟ್ಟು – ಒಂದು ಸಣ್ಣ ಬಟ್ಟಲು
    * ರಾಗಿ ಹಿಟ್ಟು – ಒಂದು ಸಣ್ಣ ಬಟ್ಟಲು
    * ಮೀಡಿಯಂ ರವೆ – 3-4 ಸ್ಪೂನ್
    * ಈರುಳ್ಳಿ- ಮಿಡಿಯಂ ಸೈಜ್
    * ಬೆಳ್ಳುಳ್ಳಿ, ಶುಂಠಿ ಪೇಸ್ಟ್ – ಅರ್ಧ ಚಮಚ
    * ಚಕ್ಕೆ, ಲವಂಗ – 1-2
    * ಹಸಿ ಮೆಣಸಿನಕಾಯಿ – ಖಾರಕ್ಕೆ ತಕ್ಕಷ್ಟು
    * ಅರಿಶಿನ – ಚಿಟಿಕೆ
    * ಕ್ಯಾರೆಟ್ ತುರಿ – ಅರ್ಧ ಬಟ್ಟಲು
    * ಕಾಯಿ ತುರಿ – ಅರ್ಧ ಬಟ್ಟಲು
    * ಕೊತ್ತಂಬರಿ – ಸಣ್ಣಗೆ ಹೆಚ್ಚಿದ್ದು
    * ಉಪ್ಪು
    * ಎಣ್ಣೆ
    * ಜೀರಿಗೆ

    ಮಾಡುವ ವಿಧಾನ
    * ಮೊದಲು ಒಂದು ಮಿಕ್ಸಿ ಜಾರ್‌ಗೆ ಸಮ ಪ್ರಮಾಣದಲ್ಲಿ ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ರಾಗಿ ಹಿಟ್ಟು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕು ನುಣ್ಣಗೆ ರುಬ್ಬಿಕೊಳ್ಳಿ.
    * ಬಳಿಕ ರುಬ್ಬಿದ ಮಿಶ್ರಣವನ್ನು ಒಂದು ಬೌಲ್‌ಗೆ ಹಾಕಿಕೊಳ್ಳಿ.
    * ಆ ನಂತರ ಹಿಟ್ಟು ರುಬ್ಬಿಕೊಂಡ ಜಾರ್‌ಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಚಕ್ಕೆ ಲವಂಗ, ಹಸಿ ಮೆಣಸಿನಕಾಯಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ನೀರು ಹಾಕಬೇಡಿ, ಈರುಳ್ಳಿ ರುಬ್ಬುವಾಗ ನೀರು ಬಿಡುತ್ತೆ) ( ಬಾಯಿಗೆ ಸಿಗುವ ತರಹ ಇರಬೇಕೆಂದರೆ ಈರುಳ್ಳಿ, ಹಸಿ ಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಬಹುದು)

    * ರುಬ್ಬಿದ ಮಿಶ್ರಣ ಇರುವ ಬೌಲ್‌ಗೆ ಮಸಾಲೆ ಮಿಶ್ರಣ ಹಾಕಿ, ಜೊತೆಗೆ ರವೆ, ಕ್ಯಾರೆಟ್ ತುರಿ, ಅರಿಶಿನ, ಕೊತ್ತಂಬರಿ ಸೊಪ್ಪು, ಜೀರಿಗೆ, ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    * ಕಲಸಿಟ್ಟುಕೊಂಡ ಹಿಟ್ಟನ್ನು 15 ರಿಂದ 30 ನಿಮಿಷ ನೆನೆಯಲು ಬಿಡಿ.
    * ಬಳಿಕ ಕಾದ ತವದ ಮೇಲೆ ಸೌಟಿನಿಂದ ದೋಸೆ ಮಾಡಿ(ಆದರೆ ದೋಸೆ ರೀತಿ ಜೋರಾಗಿ ತಿರುಗಿಸಬೇಡಿ), ಎಣ್ಣೆ ಹಾಕಿ ಎರಡೂ ಕಡೆ ಬೇಯಿಸಿ.

    ದೋಸೆ ತಯಾರಾದ ಬಳಿಕ ಅದನ್ನು ಪ್ಲೇಟ್‌ಗೆ ಹಾಕಿ ಬಿಸಿ ಇರುವಾಗಲೇ ಮೇಲೆ ತುಪ್ಪ ಹಾಕಿಕೊಂಡು ರುಚಿರುಚಿಯಾದ ಮಸಾಲೆ ತ್ರಿಪಲ್ ದೋಸೆ ಸವಿಯಿರಿ.

  • ಸಂಡೇ ಸ್ಪೆಷಲ್ ಮಟನ್ ಕೈಮಾ ಬಾಲ್ಸ್ ಸಾಂಬರ್

    ಸಂಡೇ ಸ್ಪೆಷಲ್ ಮಟನ್ ಕೈಮಾ ಬಾಲ್ಸ್ ಸಾಂಬರ್

    ಸಾಮಾನ್ಯವಾಗಿ ಸಂಡೆ ಮನೆಮಂದಿಯೆಲ್ಲಾ ಮನೆಯಲ್ಲೇ ಇರುತ್ತಾರೆ. ಏನಾದರೂ ಸ್ಪೆಷಲ್ ಅಡುಗೆ ಮಾಡಬೇಕಲ್ವ ಏನ್ ಮಾಡೋದಪ್ಪ ಎಂದು ಯೋಚನೆ ಮಾಡ್ತಿದ್ದೀರಾ? ಚಿಂತೆ ಬೇಡ ನಿಮಗಾಗಿಯೇ ಸಂಡೆ ಸ್ಪೆಷಲ್ ಮಟನ್ ಕೈಮಾ ಬಾಲ್ಸ್ ಸಾಂಬರ್ ಮಾಡೋ ಸುಲಭ ವಿಧಾನ ಇಲ್ಲಿದೆ.

    ಮಟನ್ ಸಾಂಬರ್ ಮಾಡೋದು ಕಾಮನ್. ಆದರೆ ಸ್ಪೇಷಲ್ ಆಗಿ ರುಚಿಕರ ಮಟನ್ ಕೈಮಾ ಬಾಲ್ಸ್ ಸಾಂಬರ್ ಮಾಡಿ ರಜಾ ಮಜಾವನ್ನು ಮಟನ್ ಊಟದೊಂದಿಗೆ ಎಂಜಾಯ್ ಮಾಡಿ.

    ಬೇಕಾಗುವ ಸಾಮಾಗ್ರಿಗಳು:
    1. ತೊಳೆದಿಟ್ಟುಕೊಂಡ ಮಟನ್- 1/2 ಕೆ.ಜಿ
    2. ಟೊಮೆಟೋ: 1-2 (ಚಿಕ್ಕದಾಗಿ ಕತ್ತರಿಸಿಕೊಳ್ಳಿ)
    3. ಈರುಳ್ಳಿ- 2 (ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ)
    4. ಶುಂಠಿ-ಬೆಳ್ಳುಳ್ಳಿ ಪೇಸ್ಟ್- 2 ಅಥವಾ 3 ಚಮಚ
    5. ಹುರಿಗಡಲೆ – 3 ಚಮಚ
    6. ಖಾರದ ಪುಡಿ – 3 ಚಮಚ
    7. ದನಿಯಾ ಪುಡಿ – 2 ಚಮಚ
    8. ತೆಂಗಿನ ಕಾಯಿ ತುರಿ: 3/4 ಕಪ್
    9. ಏಲಕ್ಕಿ- 1, ಲವಂಗ – 2, ಸ್ವಲ್ಪ ಚಕ್ಕೆ
    10. ಗರಂ ಮಸಾಲಾ, ಅರಶಿಣ ಪುಡಿ, ಕಾಳು ಮೆಣಸಿನ ಪುಡಿ – 1/2 ಚಮಚ
    11. ಹಸಿಮೆಣಸಿನಕಾಯಿ – 1
    12. ಸ್ಪಲ್ಪ ಕೊತ್ತಂಬರಿ ಸೊಪ್ಪು
    13. ರುಚಿಗೆ ತಕ್ಕಷ್ಟು ಉಪ್ಪು
    14. ಅಡುಗೆ ಎಣ್ಣೆ – 4, 5 ಚಮಚ

    ಮಾಡುವ ವಿಧಾನ:
    * ಮೊದಲು 3 ಚಮಚ ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ.
    * ಬಳಿಕ ತೊಳೆದಿಟ್ಟುಕೊಂಡಿರುವ ಮಟನ್ ಕೈಮಾದಿಂದ ನೀರನ್ನು ಸಂಪೂರ್ಣವಾಗಿ ತೆಗೆಯಿರಿ.
    * ನಂತರ ಒಂದು ಪ್ಲೇಟ್‍ನಲ್ಲಿ ಮಟನ್ ಕೈಮಾ ಹಾಕಿಕೊಂಡು ಅದಕ್ಕೆ 1 ಚಮಚ ಖಾರದ ಪುಡಿ, 1 ಕತ್ತರಿಸಿದ ಹಸಿಮೆಣಸಿನಕಾಯಿ, ಅರ್ಧ ಚಮಚ ಕಾಳು ಮೆಣಸಿನ ಪುಡಿ, ಗರಂ ಮಸಾಲೆ, ಅರಶಿನ ಪುಡಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುರಿಗಡಲೆ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿರಿ.
    * ಕಲಸಿರುವ ಕೈಮಾ ಮಿಶ್ರಣವನ್ನು ಮಿಕ್ಸಿ ಜಾರ್ ಗೆ ಹಾಕಿ ಮಿಶ್ರಣವನ್ನು ತರಿತರಿಯಾಗಿ ರುಬ್ಬಿಕೊಳ್ಳಿ.

    * ಆ ಮೇಲೆ ಸಾಂಬರ್ ಮಸಾಲೆಗಾಗಿ ಮಿಕ್ಸಿ ಜಾರ್ ಗೆ 3/4 ಕಪ್ ತೆಂಗಿನ ಕಾಯಿ ತುರಿ, ಸ್ವಲ್ಪ ಚಕ್ಕೆ, 1 ಏಲಕ್ಕಿ, 2 ಲವಂಗ, 1 ದೊಡ್ಡದಾಗಿ ಹೆಚ್ಚಿರುವ ಈರುಳ್ಳಿ ಹಾಗೂ ಸ್ವಲ್ಪ ನೀರು ಬೆರೆಸಿ ಸಣ್ಣದಾಗಿ ರುಬ್ಬಿಕೊಳ್ಳಿ.
    * ಒಂದು ಪಾನ್ ಅನ್ನು ಸ್ಟವ್ ಮೇಲೆ ಇಟ್ಟು ಅದು ಕಾದ ನಂತರ ಅದಕ್ಕೆ 4 ಚಮಚ ಅಡುಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ 1 ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

    * 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೂ ಫ್ರೈ ಮಾಡಿ. ಆ ಮೇಲೆ 1 ಚಿಕ್ಕದಾಗಿ ಕತ್ತರಿಸಿದ ಟೊಮಾಟೋ ಹಾಕಿ ಫ್ರೈ ಮಾಡಿ. ನಂತರ ಅದಕ್ಕೆ 1-2 ಚಮಚ ಖಾರದ ಪುಡಿ, ಸ್ವಲ್ಪ ಅರಶಿನ ಪುಡಿ, 2 ಚಮಚ ದನಿಯಾ ಪುಡಿಯನ್ನು ಹಾಕಿ 1 ನಿಮಿಷ ಫ್ರೈ ಮಾಡಿಕೊಳ್ಳಿ.
    * ಈ ಮಿಶ್ರಣಕ್ಕೆ ರುಬ್ಬಿಕೊಂಡಿರುವ ತೆಂಗಿನ ಕಾಯಿ ಮಿಶ್ರಣ ಹಾಕಿ ಮತ್ತೆ 1 ನಿಮಿಷ ಫ್ರೈ ಮಾಡಿ. ನಂತರ ಸಾಂಬರ್ ಹದಕ್ಕೆ ಬರುವಂತೆ ಸ್ವಲ್ಪ ನೀರನ್ನು ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಸಾಂಬರ್ ಕುದಿಯಲು ಬಿಡಿ.

    ಈಗ ಮಟನ್ ಕೈಮಾ ಮಿಶ್ರಣದಿಂದ ಸಣ್ಣ ಸಣ್ಣ ಕೈಮಾ ಉಂಡೆಗಳನ್ನು ತಯಾರಿಸಿಕೊಳ್ಳಿ. ಬಳಿಕ ಸಾಂಬರ್ ಕುದಿ ಬಂದ ನಂತರ ಅದಕ್ಕೆ ಕೈಮಾ ಉಂಡೆಗಳನ್ನು ನಿಧಾನವಾಗಿ ಹಾಕಿ ಪಾನ್‍ಗೆ ಪ್ಲೇಟ್ ಮುಚ್ಚಿ ಸಣ್ಣ ಉರಿಯಲ್ಲಿ 15 – 20 ನಿಮಿಷ ಬೇಯಲು ಬಿಡಿ. ನಂತರ ಸ್ವಲ್ಪ ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 2 ನಿಮಿಷ ಕುದಿಯಲು ಬಿಡಿ. ಬಳಿಕ ಅದನ್ನು ಸರ್ವಿಂಗ್ ಪ್ಲೇಟ್‍ಗೆ ಹಾಕಿ ಅನ್ನದ ಜೊತೆ ಅಥವಾ ರೊಟ್ಟಿ, ಚಪಾತಿ ಜೊತೆ ಸವಿದು ಖುಷಿಪಡಿ.