Tag: sunami kitty

  • ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ಸುನಾಮಿ ಕಿಟ್ಟಿ

    ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡ ಸುನಾಮಿ ಕಿಟ್ಟಿ

    ಪಿ.ಮೂರ್ತಿ ನಿರ್ಮಿಸಿರುವ, ಒರಟ ಶ್ರೀ (Orata shree) ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ (sunami Kitty) ನಾಯಕನಾಗಿ ನಟಿಸಿರುವ ‘ಕೋರ’ ಚಿತ್ರದ ‘ಬಾನಿನಿಂದ’ ಹಾಡು ಇತ್ತೀಚಿಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮಹರ್ಷಿ ಆನಂದ ಗುರೂಜಿ ಅವರು ಗೊಲ್ಲಹಳ್ಳಿ ಶಿವಪ್ರಸಾದ್ ಬರೆದಿರುವ, ರವೀಂದ್ರ ಸೊರಗಾವಿ ಅವರು ಹಾಡಿರುವ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಬಿ.ಆರ್.ಹೇಮಂತ್ ಕುಮಾರ್ ಈ ಚಿತ್ರದ ಸಂಗೀತ ನಿರ್ದೇಶಕರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

    ಕೋರ ಎಂದರೆ ಬುಡಕಟ್ಟು ಜನಾಂಗದ ಹೆಸರು ಎಂದು ಮಾತನಾಡಿದ ನಿರ್ಮಾಪಕ ಪಿ.ಮೂರ್ತಿ, ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ. ಏಪ್ರಿಲ್ ನಲ್ಲಿ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ.  ಒರಟ ಶ್ರೀ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸುನಾಮಿ ಕಿಟ್ಟಿ ಸೇರಿದಂತೆ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ನಮ್ಮ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ. ಏಕೆಂದರೆ ನಮ್ಮ ಚಿತ್ರದ ಚಿತ್ರೀಕರಣ ಬಹುತೇಕ ನಡೆದಿರುವುದು ಚಿಕ್ಕಮಗಳೂರು, ಹೊರನಾಡು, ಸಕಲೇಶಪುರದ ಸುತ್ತಲ್ಲಿನ ಅರಣ್ಯ ಪ್ರದೇಶದಲ್ಲಿ. ಆ ಸ್ಥಳಗಳಲ್ಲಿ ಅನುಕೂಲತೆ ಕಡಿಮೆ. ಅಂತಹ ಸ್ಥಳಗಳಲ್ಲೂ ಯಾವುದೇ ಅಡೆತಡೆ ಇಲ್ಲದೆ ಚಿತ್ರೀಕರಣವಾಗಲು ತಂಡದ ಸಹಕಾರವೇ ಕಾರಣ.  ಇನ್ನು ಹೇಮಂತ್ ಕುಮಾರ್ ಅವರು ಸಂಗೀತ ನೀಡಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ. ವಿಶೇಷವಾಗಿ ಇಂದು ಬಿಡುಗಡೆಯಾಗಿರುವ ಬಾನಿನಿಂದ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ. ಹಾಡು ಬಿಡುಗಡೆ ಮಾಡಿಕೊಟ್ಟ ಆನಂದ್ ಗುರೂಜಿ ಅವರಿಗೆ ಮತ್ತು ಆಗಮಿಸಿರುವ ಗಣ್ಯರಿಗೆ ಧನ್ಯವಾದ ಎಂದರು.

    ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ ಧನ್ಯವಾದ. ನಮ್ಮ ಚಿತ್ರದಲ್ಲಿ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಅವರು ಕೊಟ್ಟ ದುಡ್ಡಿಗೆ ಮೋಸ ಮಾಡದ ಚಿತ್ರವಿದು. ಸುನಾಮಿ ಕಿಟ್ಟಿ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚರಿಶ್ಮಾ ಕೋರ ಚಿತ್ರದ ನಾಯಕಿ. ನಿರ್ಮಾಪಕ‌ ಪಿ. ಮೂರ್ತಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಒರಟ ಶ್ರೀ. ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಧನ್ಯವಾದ ತಿಳಿಸಿತ್ತಾ,  ಹುಟ್ಟುಹಬ್ಬದ ಶುಭಾಶಯ ಕೂಡ ಹೇಳುತ್ತೇನೆ. ಅವರ ಹುಟ್ಟುಹಬ್ಬದ ದಿನ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ರಿಯಾಲಿಟಿ ಶೋ ಮೂಲಕ ಪರಿಚಿತನಾದ ನನಗೆ ಕರುನಾಡ ಜನತೆ ನೀಡಿರುವ ಪ್ರೀತಿ ಅಪಾರ. ಅದೇ ಪ್ರೀತಿ ಈಗಲೂ ಮುಂದುವರೆಯಲಿ ಎಂದು ಸುನಾಮಿ ಕಿಟ್ಟಿ ತಿಳಿಸಿದರು.

    ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ಗಾಯಕ ರವೀಂದ್ರ ಸೊರಗಾವಿ ಮುಂತಾದ ಚಿತ್ರತಂಡದ ಸದಸ್ಯರು “ಕೋರ” ಚಿತ್ರದ ಕುರಿತು ಮಾತನಾಡಿದರು.

  • ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬಿಗ್ ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅರೆಸ್ಟ್!

    ಬೆಂಗಳೂರು: ಬಿಗ್‍ಬಾಸ್ ಸೆಲಬ್ರಿಟಿ, ಇಂಡಿಯನ್ ರಿಯಾಲಿಟಿ ಶೋ ವಿನ್ನರ್ ಸುನಾಮಿ ಕಿಟ್ಟಿ ಅವರನ್ನು ಕಿಡ್ನಾಪ್ ಕೇಸ್ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಪ್ರಕರಣ ಸಂಬಂಧ ಸುನಾಮಿ ಕಿಟ್ಟಿ ಸೇರಿ ಮೂವರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಸುನೀಲ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

    ಏನಿದು ಪ್ರಕರಣ?
    ಸುನಾಮಿ ಕಿಟ್ಟಿಯ ಗೆಳೆಯ ಸುನೀಲ್ ಪತ್ನಿಯನ್ನು ತೌಶಿಕ್ ಎಂಬಾತ ಪ್ರೀತಿಸುತ್ತಿದ್ದನು. ಫೆಬ್ರವರಿ 28 ರಂದು ತೌಶಿಕ್ ತನ್ನ ಪ್ರಿಯತಮೆಯೊಂದಿಗೆ ಬಾರ್ ಗೆ ಊಟಕ್ಕೆ ಬಂದಿದ್ದನು. ಈ ವಿಚಾರ ತಿಳಿದು ಕಿಟ್ಟಿ ಗ್ಯಾಂಗ್, ಸುನೀಲ್ ಪತ್ನಿಯ ಪ್ರಿಯಕರ ಯಾರೆಂದು ತಿಳಿದುಕೊಳ್ಳಲು ಮುಂದಾಗಿದ್ದರು. ಆದ್ರೆ ಇದೇ ವೇಳೆ ತೌಶಿಕ್ ಬಾರ್ ನಿಂದ ಬಿಲ್ ಕೊಡದೇ ಗಡಿಬಿಡಿಯಲ್ಲಿ ಪರಾರಿಯಾಗಿದ್ದನು. ಈ ಪ್ರಯತ್ನದಲ್ಲಿ ಬಾರ್ ಸಪ್ಲೈಯರ್ ಗಿರೀಶ್ ನನ್ನೇ ತೌಶಿಕ್ ಎಂದು ಭಾವಿಸಿ ಕಿಟ್ಟಿ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ಅಲ್ಲದೇ ಹೊರಮಾವು ಬಳಿ ಸುನೀಲ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ಯಾ ಎಂದು ಪ್ರಶ್ನಿಸಿ ಗಿರೀಶ್ ಮೇಲೆ ಹಲ್ಲೆ ಕೂಡ ಮಾಡಿತ್ತು. ಈ ವೇಳೆ ಗಿರೀಶ್, ಸುನೀಲ್ ಯಾರು? ಅವರ ಪತ್ನಿ ಯಾರು ಎಂದು ಪ್ರಶ್ನಿಸಿದ್ರು.

    ಕಿಟ್ಟಿ ಗ್ಯಾಂಗ್ ತೌಶಿಕ್ ಫೋಟೋ ತೋರಿಸಿದ್ದಾರೆ. ಈ ವೇಳೆ ಗಿರೀಶ್, ಇವರು ನಮ್ಮ ಬಾರ್ ಗೆ ಬರ್ತಾರೆ ಅಂತ ಹೇಳಿದ್ರು. ಅಲ್ಲದೇ ತೌಶಿಕ್ ಬಿಲ್ ಕೊಡದೇ ಹೋಗಿದ್ದನ್ನು ಕೂಡ ಗಿರೀಶ್, ಸುನಾಮಿ ಕಿಟ್ಟಿ ಮುಂದೆ ಬಾಯ್ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಿಟ್ಟಿ ಗ್ಯಾಂಗ್, ಗಿರೀಶ್ ಕೈಯಲ್ಲಿಯೇ ತೌಶಿಕ್ ಗೆ ಕರೆ ಮಾಡಿಸಿ ಬಿಲ್ ಕೊಡುವಂತೆ ಹೇಳಿಸಿತ್ತು. ಅಂತೆಯೇ ಬಿಲ್ ಕೊಡಲು ಗೊರಗುಂಟೆ ಪಾಳ್ಯದ ಸಿಗ್ನಲ್ ಬಳಿ ಬರುವುದಾಗಿ ತೌಶಿಕ್ ತಿಳಿಸಿದ್ದನು. ಈ ವೇಳೆ ಗಿರೀಶ್ ನನ್ನು ಗೊರಗುಂಟೆಪಾಳ್ಯಕ್ಕೆ ಕರೆದುಕೊಂಡು ಹೋಗಿ ಗನ್ ಇಟ್ಟಿದ್ದ ಸುನಾಮಿ ಕಿಟ್ಟಿ ಗ್ಯಾಂಗ್, ನಾವು ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ.

    ಹಣ ಕೊಡಲು ಬರುತ್ತಿದ್ದಂತೆಯೇ ಕಿಟ್ಟಿ ಗ್ಯಾಂಗ್ ಗೊರಗುಂಟೆ ಪಾಳ್ಯದಲ್ಲಿ ತೌಶಿಕ್ ನನ್ನು ಕಿಡ್ನಾಪ್ ಮಾಡಿ ಬಳಿಕ ಇಬ್ಬರನ್ನು ಹೊರಮಾವು ಬಳಿಯ ತೋಟದ ಮನೆಗೆ ಕರೆದೊಯ್ದು ಹಲ್ಲೆಮಾಡಿದ್ದಾರೆಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇತ್ತ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಇತರರು ಈ ಸಂಬಂಧ ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಿದ ಪೊಲೀಸರು, ಬಾರ್ ನ ಸಿಸಿಟಿವಿ ಆಧರಿಸಿ, ಸುನಾಮಿ ಕಿಟ್ಟಿಯ ಫೋನ್ ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ. ಈತ ಆ ಬಾರ್ ಗೆ ಹೋಗಿ ಪ್ರತೀದಿನ ಕುಡಿಯುತ್ತಿದ್ದನು. ಆದ್ರೆ ಕಳೆದ ಎರಡು ದಿನಗಳಿಂದ ಕಿಟ್ಟಿ ಬಾರ್ ಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿಯೂ ಪೊಲೀಸರು ಕಿಟ್ಟಿ ಮೇಲೆ ಸಂಶಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

    ಕಿಟ್ಟಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಮೇಲೆಯೂ ಕೇಸ್ ದಾಖಲಾಗಿದೆ.