ಮುಂಬೈ: ಎಡಗೈ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನ ಬಳಿಕ ವಾರ್ನರ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಂಭ್ರಮಾಚರಣೆಯನ್ನು ಮಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಲ್ಲಿರುವ ಫೇಮಸ್ ಡೈಲಾಗ್ ಹೌ ಇಸ್ ದಿ ಜೋಶ್ ಎಂಬಂತೆ ವಾರ್ನರ್ ತಮ್ಮ ತಂಡದ ಸದಸ್ಯರನ್ನು ಉದ್ದೇಶಿಸಿ ಫುಲ್ ಜೋಶ್ ತೋರಿಸಿದ್ದಾರೆ. ಈ ವೀಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿ ದಾಖಲೆ ಬರೆದ ಡೇವಿಡ್ ವಾರ್ನರ್
ವಾರ್ನರ್ ತಮ್ಮ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ, 3 ಸಿಕ್ಸ್‌ಗಳನ್ನು ಒಳಗೊಂಡಂತೆ 92 ರನ್‌ಗಳನ್ನು ಗಳಿಸುವ ಮೂಲಕ ಟಿ-20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಗಳಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಹಾಗೂ ಕಾನ್ವೆ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಫಲವಾಗಿ ಚೆನ್ನೈ ತಂಡವು 13 ರನ್‌ಗಳ ಜಯ ಸಾಧಿಸಿತು.
ಸಿಎಸ್‌ಕೆ ನೀಡಿದ 203 ರನ್‌ಗಳ ಗುರಿ ಪಡೆದ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಿದ ಹೈದರಾಬಾದ್ ತಂಡವು ಮೊದಲ ಓವರ್‌ನಲ್ಲಿ ಫೋರ್, ಸಿಕ್ಸರ್‌ಗಳನ್ನು ಸಿಡಿಸುತ್ತಾ ರನ್ ಮಳೆಗರೆಯುತ್ತಾ ಉತ್ತಮ ಶುಭಾರಂಭವನ್ನೇ ನೀಡಿತ್ತು. ಮೊದಲ 5 ಓವರ್‌ಗೆ 52 ರನ್ ಸಿಡಿಸಿದ್ದ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಅವರ ಜೊತೆಯಾಟವು ಪವರ್ ಪ್ಲೇ ಮುಗಿಯುವ ವೇಳೆಗೆ 60 ರನ್‌ಗಳನ್ನು ಪೂರೈಸಿತ್ತು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 39 ರನ್ (5 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದರು.
ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದರಾಬಾದ್ ಹಾರಟಕ್ಕೆ ಬ್ರೇಕ್ ಹಾಕಿದ ವೇಗಿಯ ಬೌಲರ್ ಮುಖೇಶ್ ಚೌಧರಿ 6ನೇ ಓವರ್‌ನಲ್ಲಿ ಸತತ 2 ವಿಕೆಟ್‌ಗಳನ್ನು ಉರುಳಿಸಿದರು. 3 ನೇ ಕ್ರಮಾಂಕದಲ್ಲಿ ಬಂದ ರಾಹುಲ್ ತ್ರಿಪಾಟಿ ಸಹ ಶೂನ್ಯಕ್ಕೆ ನಿರ್ಗಮಿಸಿದ್ದು, ಹೈದರಾಬಾದ್ ಗೆಲುವಿನ ಕನಸಿಗೆ ಆರಂಭಿಕ ಆಘಾತ ನೀಡಿತು.
ಪವರ್ ಪ್ಲೇ ನಂತರ ನಿಧಾನಗತಿಯಲ್ಲಿ ಮುಂದುವರಿದ ಹೈದರಾಬಾದ್ ತಂಡವು 10 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 95 ರನ್ ಗಳಿಸಿತ್ತು. 2 ವಿಕೆಟ್ ಕಳೆದುಕೊಂಡ ನಂತರ ಚೆನ್ನೈ ಬೌಲರ್‌ಗಳ ವಿರುದ್ಧ ತಮ್ಮ ದಾಳಿ ಮುಂದುವರಿಸಿದ ಟೀಂ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 37 ಎಸೆತಗಳಲ್ಲಿ 47 ರನ್‌ಗಳನ್ನು (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ನಂತರ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಐಡೆನ್ ಮಾರ್ಕ್ರಾಮ್ 17 ರನ್, ಶಶಾಂಕ್ ಸಿಂಗ್ 15 ರನ್‌ಗಳಿಸಿದರು.
ನಿಕೋಲಸ್ ಅರ್ಧಶತಕ ಹೋರಾಟ: ಮಧ್ಯಮ ಕ್ರಮಾಂಕದಲ್ಲಿ ಬಂದ ನಿಕೋಲಸ್ ಪೂರನ್ ಆಕರ್ಷಕ ಅರ್ಧ ಶತಕ ಗಳಿಸುವ ಮೂಲಕ ತಂಡದ ಗೆಲುವಿಗೆ ಕೊನೆಯವರೆಗೂ ಹೋರಾಡಿದರು. ಚೆನ್ನೈ ಬೌಲರ್‌ಗಳನ್ನು ಬೆಂಡೆತ್ತಿದ ನಿಕೋಲಸ್ 33 ಎಸೆತಗಳಲ್ಲಿ 64 ರನ್‌ಗಳಿಸಿದರು. ಹೈದರಾಬಾದ್ ತಂಡದಲ್ಲಿ 4 ಓವರ್‌ಗೆ ಅತಿಹೆಚ್ಚು 42 ರನ್ ನೀಡಿದ ಟಿ.ನಟರಾಜನ್ 2 ವಿಕೆಟ್‌ಗಳನ್ನು ಪಡೆದರು.
ಮುಖೇಶ್ ಚೌಧರಿ ಬೌಲಿಂಗ್ ಕಮಾಲ್: ಹೈದ್ರಾಬಾದ್ ತಂಡದ ಪ್ರಮುಖ ಬ್ಯಾಟರ್‌ಗಳನ್ನು ಉರುಳಿಸಿದ ಮುಖೇಶ್ ಚೌಧರಿ ತಮ್ಮ ಆಕರ್ಷಕ ಬೌಲಿಂಗ್‌ನಿಂದ ಕಮಾಲ್ ಮಾಡಿದರು. 3 ಓವರ್‌ಗಳಲ್ಲಿ 22 ರನ್‌ಗಳನ್ನಷ್ಟೇ ನೀಡಿ 4 ವಿಕೆಟ್ ಕಬಳಿಸಿದರು. ಇದರು ತಂಡದ ಗೆಲುವಿಗೆ ಕಾರಣವಾಯ್ತು.
ಋತುರಾಜ್ ಶತಕ ವಂಚಿತ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಆರಂಭದ ನಾಲ್ಕೂದು ಓವರ್‌ನಲ್ಲಿ ಸಾಧಾರಣ ಮೊತ್ತವನ್ನೇ ದಾಖಲಿಸಿದರು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಹೈದ್ರಾಬಾದ್ ಬೌಲರ್‌ಗಳನ್ನು ಬೆಂಡೆತ್ತಿದ್ದ ಋರುರಾಜ್ ಗಾಯಕ್ವಾಡ್ ಹಾಗೂ ಡಿಪಿ ಕಾನ್ವೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 203 ರನ್‌ಗಳ ಬೃಹತ್ ಮೊತ್ತ ದಾಖಲಿಸಿದರು. 99 ರನ್‌ಗಳಿಸಿದ ಋತುರಾಜ್ ಶತಕ ವಂಚಿತರಾಗಿದ್ದು, ಸಿಎಸ್‌ಕೆ ತಂಡಕ್ಕೆ ಕೊಂಚ ಬೇಸರವನ್ನುಂಟುಮಾಡಿತು.
ಹೈದರಾಬಾದ್ ತಂಡದ ಬಲಿಷ್ಠ ಬೌಲಿಂಗ್ ಪಡೆಯನ್ನು ಪುಡಿಗಟ್ಟಿದ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 202 ರನ್‌ಗಳಿಸಿ ಹೈದರಾಬಾದ್ ತಂಡಕ್ಕೆ 203 ರನ್‌ಗಳ ಗುರಿ ನೀಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೇವಲ 57 ಎಸೆತಗಳಲ್ಲಿ 99 ರನ್ (6 ಸಿಕ್ಸರ್, 6 ಬೌಂಡರಿ) ಚಚ್ಚಿದರು. ಈ ಮೂಲಕ ಐಪಿಎಲ್‌ನಲ್ಲಿ 1 ಸಾವಿರ ರನ್‌ಗಳನ್ನು ಪೂರೈಸಿದರು.
ಇವರಿಗೆ ಅದ್ಭುತವಾಗಿ ಸಾಥ್ ನೀಡಿದ ಕಾನ್ವೆ 55 ಎಸೆತಗಳಲ್ಲಿ 85 ರನ್‌ಗಳಿಸಿ ಅಜೇಯರಾಗುಳಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಮಹೇಂದ್ರಸಿಂಗ್ ಧೋನಿ 7 ಎಸೆತಗಳಲ್ಲಿ 1 ಬೌಂಡರಿ ಸೇರಿ 8 ರನ್‌ಗಳಿಸಿ ಕ್ಯಾಚ್ ನೀಡಿ ಹೊರನಡೆದರು. ನಿರ್ಗಮಿತ ನಾಯಕ ರವಿಂದ್ರ ಜಡೇಜಾ 1 ರನ್‌ಗಳಿಸಿ ಅಜೇಯರಾಗುಳಿದರು.
ರನ್ ಏರಿದ್ದು ಹೇಗೆ?
45 ಎಸೆತ 50 ರನ್
65 ಎಸೆತ 100 ರನ್
88 ಎಸೆತ 150 ರನ್
120 ಎಸೆತ 202 ರನ್
ಅಬುಧಾಬಿ: ಸನ್‍ರೈಸರ್ಸ್ ಹೈದರಾಬಾದ್ ತಂಡದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಅವರು ಗಾಯದ ಸಮಸ್ಯೆಯಿಂದ ಐಪಿಎಲ್-2020ಯಿಂದ ಹೊರಬಿದ್ದಿದ್ದಾರೆ.
ಕಳೆದ ಅಕ್ಟೋಬರ್ 2ರಂದು ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್ ಆಡಿದ್ದರು. ಈ ಪಂದ್ಯದ 19ನೇ ಓವರ್ ಬೌಲ್ ಮಾಡಲು ಬಂದ ಭುವಿ ಒಂದು ಬಾಲ್ ಎಸೆದು ಗಾಯದ ಸಮಸ್ಯೆಗೆ ತುತ್ತಾಗಿ ಪಂದ್ಯದಿಂದ ಹೊರ ಹೋಗಿದ್ದರು.
ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದ ಭುವನೇಶ್ವರ್ ಕುಮಾರ್ ಅವರು ಈಗ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಭುನವೇಶ್ವರ್ ಕುಮಾರ್ ಅವರು ಡ್ರೀಮ್-11 ಐಪಿಎಲ್‍ನಿಂದ ಹೊರಬಿದ್ದಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ಕೇಳಿಕೊಳ್ಳುತ್ತೇವೆ. ಅವರ ಸ್ಥಾನಕ್ಕೆ ಪೃಥ್ವಿ ರಾಜ್ ಯರ್ರಾ ಅವರು ಬರಲಿದ್ದಾರೆ ಎಂದು ತಿಳಿಸಿದೆ.
Update 🚨
Bhuvneshwar Kumar is ruled out of #Dream11IPL 2020 due to injury. We wish him a speedy recovery!
Prithvi Raj Yarra will replace Bhuvi for the remainder of the season.#OrangeArmy#KeepRising
ಸ್ನಾಯ ಸೆಳೆತದ ಸಮಸ್ಯೆಯಿಂದ ಭುವನೇಶ್ವರ್ ಕುಮಾರ್ ಅವರು ಐಪಿಎಲ್‍ನಿಂದ ಹೊರಬಿದ್ದಿದ್ದಾರೆ. ಅವರಿಗೆ 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಬೇಕಿದ್ದು, ಅವರು ಈ ಬಾರಿಯ ಐಪಿಎಲ್‍ನಿಂದ ಹೊರನಡೆದಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಬಾರಿಯ ಐಪಿಎಲ್‍ನಲ್ಲಿ ಹೈದರಬಾದ್ ಪರ 4 ಪಂದ್ಯಗಳನ್ನು ಆಡಿದ್ದ ಭುವಿ 3 ವಿಕೆಟ್ ಪಡೆದುಕೊಂಡಿದ್ದರು. ಅವರ ಅನುಪಸ್ಥಿತಿ ಹೈದರಾಬಾದ್ ತಂಡವನ್ನು ಕಾಡಲಿದ್ದು, ಡೆತ್ ಓವರ್ ಬೌಲಿಂಗ್ ಸಮಸ್ಯೆ ತಂಡಕ್ಕೆ ಎದುರಾಗಿದೆ.
ಯಾರು ಈ ಪೃಥ್ವಿರಾಜ್?
ಗಾಯದ ಸಮಸ್ಯೆಯಿಂದ ಹೊರಬಿದ್ದ ಭುವನೇಶ್ವರ್ ಕುಮಾರ್ ಅವರ ಜಾಗಕ್ಕೆ ಹೈದರಾಬಾದ್ ತಂಡ ಯುವ ವೇಗಿ ಪೃಥ್ವಿ ರಾಜ್ ಯರ್ರಾ ಅವರನ್ನು ಕರೆತಂದಿದೆ. ಪೃಥ್ವಿ ರಾಜ್ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಆಂಧ್ರ ರಾಜ್ಯ ತಂಡಲ್ಲಿ ರಣಜಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದಾರೆ. ಜೊತೆಗೆ 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಐಪಿಎಲ್ ಆಡಿದ್ದಾರೆ.
ಶಾರ್ಜಾ: ಮುಂಬೈ ತಂಡದ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆದ 17ನೇ ಪಂದ್ಯದಲ್ಲಿ ಸೋತಿದೆ. ಈ ಮೂಲಕ ಟೂರ್ನಿಯಲ್ಲಿ ತನ್ನ ಸೋಲಿನ ಪಯಣವನ್ನು ಮುಂದುವರಿಸಿದೆ.
ಇಂದು ಶಾರ್ಜಾದಲ್ಲಿ ನಡೆದ ಮೊದಲ ಮ್ಯಾಚಿನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು, ಕ್ವಿಂಟನ್ ಡಿ ಕಾಕ್ ಅವರ ಅರ್ಧಶತಕ ಮತ್ತು ಕೊನೆಯಲ್ಲಿ ಪಾಂಡ್ಯ ಸಹೋದರ ಅಬ್ಬರದಿಂದ 20 ಓವರಿನಲ್ಲಿ 208 ರನ್ ಸೇರಿಸಿದರು. ಇದನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ನಾಯಕ ವಾರ್ನರ್ ಅವರ ಅರ್ಧಶತಕದ ಹೊರತಾಗಿಯೂ 20 ಓವರಿನಲ್ಲಿ 174 ರನ್ ಸಿಡಿಸಿ 34 ರನ್‍ಗಳ ಅಂತರದಲ್ಲಿ ಸೋತಿತು.
ಫಾಸ್ಟ್ ಬೌಲಿಂಗ್ ದಾಳಿ
ಇಂದು ಆರಂಭದಿಂದಲೇ ಮುಂಬೈ ವೇಗದ ಬೌಲರ್ ಗಳು ಉತ್ತಮವಾಗಿ ಬೌಲ್ ಮಾಡಿದರು. ತನ್ನ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಟ್ರೆಂಟ್ ಬೌಲ್ಟ್ ಅವರು ಕೇವಲ 28 ರನ್ ನೀಡಿ ಎರಡು ವಿಕೆಟ್ ಗಬಳಿಸಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಜೇಮ್ಸ್ ಪ್ಯಾಟಿನ್ಸನ್ ಅವರು ನಾಲ್ಕು ಓವರ್ ಬೌಲ್ ಮಾಡಿ 29 ರನ್ ಕೊಟ್ಟು ಎರಡು ವಿಕೆಟ್ ಪಡೆದರು. ನಾಲ್ಕು ಓವರ್ ಬೌಲ್ ಮಾಡಿದ ಜಸ್‍ಪ್ರೀತ್ ಬುಮ್ರಾ ಅವರು ಕೂಡ ಎರಡು ವಿಕೆಟ್ ಪಡೆದು ಮಿಂಚಿದರು.
A fine catch by Ishan Kishan ends David Warner's stay out there in the middle.#SRH are five down with 142 runs on the board.
ಹೈದರಾಬಾದ್ ತಂಡಕ್ಕೆ ಉತ್ತಮವಾದ ಆರಂಭ ದೊರೆಯಿತು. ತಂಡ ನಾಲ್ಕು ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 34 ರನ್ ಸೇರಿಸಿತ್ತು. ಆದರೆ 4ನೇ ಓವರಿನ ಮೊದಲ ಬಾಲಿನಲ್ಲೆ ಉತ್ತಮವಾಗಿ ಆಡುತ್ತಿದ್ದ 15 ಬಾಲಿಗೆ 25 ರನ್ ಸಿಡಿಸಿ ಜಾನಿ ಬೈರ್‍ಸ್ಟೋವ್ ಟ್ರೆಂಟ್ ಬೌಲ್ಟ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಮನೀಶ್ ಪಾಂಡೆ ಮತ್ತು ಡೇವಿಡ್ ವಾರ್ನರ್ ಸೇರಿಕೊಂಡು ಪವರ್ ಪ್ಲೇನ ಕೊನೆಯ ಓವರಿನಲ್ಲಿ 14 ರನ್ ಚಚ್ಚಿ ಆರು ಓವರ್ ಅಂತ್ಯದ ವೇಳೆಗೆ 56 ರನ್ ಸೇರಿಸಿದರು.
ಪವರ್ ಪ್ಲೇ ಬಳಿಕ ಭರ್ಜರಿ ಬ್ಯಾಟಿಂಗ್ ಮಾಡಿದ ವಾರ್ನರ್ ಪಾಂಡೆ ಜೋಡಿ ಕೇವಲ 27 ಬಾಲಿನಲ್ಲಿ ಅರ್ಧಶತಕದ ಜೊತೆಯಾಟವಾಡಿತು. ಈ ವೇಳೆ 19 ಬಾಲಿಗೆ 30 ರನ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದ್ದ ಪಾಂಡೆ, ಜೇಮ್ಸ್ ಪ್ಯಾಟಿನ್ಸನ್ ಬಾಲಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು. ಈ ವೇಳೆ ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ನಾಯಕ ಡೇವಿಡ್ ವಾರ್ನರ್ ಅವರು 35 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು.
A key breakthrough for #MumbaiIndians as Pattinson gets the wicket of Manish Pandey.
ಈ ವೇಳೆ ಇಲ್ಲದ ಹೊಡೆತಕ್ಕೆ ಕೈ ಹಾಕಿದ ಕೇನ್ ವಿಲಿಯಮ್ಸನ್ ಅವರು ಕ್ವಿಂಟನ್ ಡಿ ಕಾಕ್ ಅವರಿಗೆ ಸುಲಭ ಕ್ಯಾಚ್ ಕೊಟ್ಟು ವಾಪಸ್ ಹೋದರು. ನಂತರ ಪ್ರಿಯಮ್ ಗಾರ್ಗ್ ಅವರು ಕ್ರುನಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ನಂತರ ಅಬ್ಬರಿಸುತ್ತಿದ್ದ ನಾಯಕ ಡೇವಿಡ್ ವಾರ್ನರ್ ಅವರು ಇಶಾನ್ ಕಿಶನ್ ಅವರು ಹಿಡಿದ ಅದ್ಭುತ ಡೈವಿಂಗ್ ಕ್ಯಾಚಿಗೆ ಬಲಿಯಾದರು. ಈ ಮೂಲಕ 44 ಬಾಲಿಗೆ ಐದು ಫೋರ್ ಎರಡು ಸಿಕ್ಸರ್ ಸಮೇತ 60 ರನ್ ಸಿಡಿಸಿ ಜೇಮ್ಸ್ ಪ್ಯಾಟಿನ್ಸನ್ ಬೌಲಿಂಗ್‍ಗೆ ಔಟ್ ಆದರು.
ನಂತರ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸುತ್ತಿದ್ದ ಅಬ್ದುಲ್ ಸಮದ್ ಅವರು ದೊಡ್ಡ ಹೊಡೆತಕ್ಕೆ ಕೈ ಹಾಕಿ 9 ಬಾಲಿಗೆ 20 ರನ್ ಕಲೆ ಹಾಕಿ ಔಟ್ ಆದರು. ನಂತರ ಅಭಿಷೇಕ್ ಶರ್ಮಾ ಅವರನ್ನು ಅದೇ ಓವರಿನಲ್ಲಿ ಜಸ್‍ಪ್ರೀತ್ ಬುಮ್ರಾ ಅವರು ಬೌಲ್ಡ್ ಮಾಡಿದರು. ಈ ಮೂಲಕ ಹೈದರಾಬಾದ್ ತಂಡ ಸೋಲನ್ನು ಒಪ್ಪಿಕೊಂಡಿತು.
ಶಾರ್ಜಾ: ಯುವ ಆಟಗಾರ ಶುಭಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಫಲದಿಂದ ಕೋಲ್ಕತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಕೋಲ್ಕತ್ತಾ ತಂಡ ಐಪಿಎಲ್-2020ಯಲ್ಲಿ ಮೊದಲ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತ್ತಾ ವೇಗಿಗಳ ದಾಳಿಗೆ ತತ್ತರಿಸಿ ಹೋಯ್ತು. ಕೊನೆಗೆ ಕನ್ನಡಿಗ ಮನೀಶ್ ಪಾಂಡೆಯವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 143 ರನ್ ಸೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ಶುಭಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರ ಅದ್ಭುತ ಜೊತೆಯಾಟದಿಂದ ಇನ್ನೂ ಎರಡು ಓವರ್ ಬಾಕಿ ಇರುವಾಗಲೇ 145 ರನ್ ಚಚ್ಚಿದ ಕೋಲ್ಕತ್ತಾ 7 ವಿಕೆಟ್ ಗಳಿಂದ ಜಯ ಸಾಧಿಸಿತು.
ಇದೇ ವೇಳೆ ಶುಭಮನ್ ಮತ್ತು ಮೋರ್ಗಾನ್, 70 ಬಾಲಿಗೆ 92 ರನ್‍ಗಳ ಉತ್ತಮ ಜೊತೆಯಾಟವಾಡಿದರು. ಇದರಲ್ಲಿ ಮೋರ್ಗಾನ್ ಅವರು 29 ಬಾಲಿಗೆ ಮೂರು ಫೋರ್ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ಮಿಂಚಿದರು. ಆರಂಭದಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಗಿಲ್, 62 ಎಸೆತದಲ್ಲಿ 70 ರನ್ ಸಿಡಿಸಿದರು. ಗಿಲ್ ಈ ಇನ್ನಿಂಗ್ಸ್ ನಲ್ಲಿ 5 ಫೋರ್ ಮತ್ತು 2 ಸಿಕ್ಸರ್ ಸಿಡಿಸುವ ಮೂಲಕ ಕೋಲ್ಕತ್ತಾ ತಂಡವನ್ನು ಗೆಲುವಿನ ದಡ ಸೇರಿಸಿದರು.
FIFTY!
That's a well made half-century for @RealShubmanGill off 42 deliveries.
ಕೋಲ್ಕತ್ತಾಗೆ ಆರಂಭಿಕ ಆಘಾತ ನೀಡಿದ ಹೈದರಾಬಾದ್ ವೇಗಿ ಖಲೀಲ್ ಅಹ್ಮದ್, ಸೊನ್ನೆ ಸುತ್ತಿ ಸುನಿಲ್ ನರೈನ್ ಪೆವಲಿಯನ್ ಸೇರಿದರು. ನಂತರ ಜೊತೆಯಾದ ಗಿಲ್ ಮತ್ತು ನಿತೀಶ್ ರಾಣಾ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದರು. ಆದರೆ 4 ಓವರಿನ ನಾಲ್ಕನೇ ಬಾಲಿನಲ್ಲಿ ನಟರಾಜ್ ಅವರಿಗೆ ಔಟ್ ಆಗಿ 13 ಬಾಲಿಗೆ 26 ರನ್ ಗಳಿಸಿದ್ದ ನಿತೀಶ್ ರಾಣಾ ಔಟ್ ಆದರು. ಈ ಮೂಲಕ ಕೋಲ್ಕತ್ತಾ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 52 ರನ್ ಸೇರಿಸಿತ್ತು.
How many of them did you pick in your Fantasy Team tonight? 🤔 #KKRvSRH
ನಂತರ ಬಂದ ನಾಯಕ ದಿನೇಶ್ ಕಾರ್ತಿಕ್‍ಗೆ ರಶೀದ್ ಖಾನ್ ಅವರು ಮೂರನೇ ಬಾಲಿನಲ್ಲೇ ಶಾಕ್ ನೀಡಿದರು. ಮೂರು ಬಾಲುಗಳನ್ನು ಎದುರಿಸಿದ ಕಾರ್ತಿಕ್ ಡಾಕ್ ಔಟ್ ಆಗಿ ಹೊರನಡೆದರು. ಈ ಮೂಲಕ ಕೋಲ್ಕತ್ತಾದ ಇಬ್ಬರು ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳು ಡಾಕ್ ಔಟ್ ಆದರು. ಮೊದಲಿನಿಂದಲೂ ಉತ್ತಮವಾಗಿ ಆಡಿಕೊಂಡು ಬಂದ ಶುಭಮನ್ ಗಿಲ್ 42 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು.
ಶಾರ್ಜಾ: ಕನ್ನಡಿಗ ಮನೀಶ್ ಪಾಂಡೆ ಅರ್ಧಶತಕದ ನೆರವಿನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ 143 ರನ್‍ಗಳ ಟಾರ್ಗೆಟ್ ನೀಡಿದೆ.
ಈ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ಮನೀಶ್ ಪಾಂಡೆ ಅರ್ಧಶತಕ ಸಿಡಿಸಿ ಮಿಂಚಿದರು. ವಿಕೆಟ್ ಕಳೆದುಕೊಳ್ಳುತ್ತಿದ್ದ ಹೈದರಾಬಾದ್ ತಂಡಕ್ಕೆ ಆಸರೆಯಾಗಿ ನಿಂತ ಮನೀಶ್, 38 ಎಸೆತದಲ್ಲಿ 51 ರನ್ ಸಿಡಿಸಿ ತಂಡದ ಚೇತರಿಕೆಗೆ ಕಾರಣವಾದರು. ಮನೀಶ್ ಈ ಇನ್ನಿಂಗ್ಸ್ ನಲ್ಲಿ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ವೃದ್ಧಿಮಾನ್ ಸಹಾ ಅವರು 31 ಎಸೆತಕ್ಕೆ 30 ರನ್ ಪೇರಿಸಿದರು.
Russell comes into the attack and gets the wicket of well-set batsman, Manish Pandey.
ಆರಂಭದಿಂದಲೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಬೌಲರ್ ಗಳು ಶಿಶ್ತು ಬದ್ಧದಾಳಿಯನ್ನು ಮಾಡಿದರು. ಹೀಗಾಗಿ ಉತ್ತಮ ಲಯದಲ್ಲಿದ್ದ ಜಾನಿ ಬೈರ್‍ಸ್ಟೋವ್ ಅವರನ್ನು ವೇಗಿ ಪ್ಯಾಟ್ ಕಮ್ಮಿನ್ಸ್ ಅವರು 3ನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಮಾಡಿದರು. ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ನಾಯಕ ಡೇವಿಡ್ ವಾರ್ನರ್ ಅವರು ತಾಳ್ಮೆಯಿಂದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯಕ್ಕೆ ಹೈದರಾಬಾದ್ ಒಂದು ವಿಕೆಟ್ ಕಳೆದುಕೊಂಡು 40 ರನ್ ಸೇರಿಸಿತು.
ನಂತರ ವಾರ್ನರ್ ಮತ್ತು ಪಾಂಡೆ ಮಂದಗತಿಯ ಆಟವಾಡಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವರುಣ್ ಚಕ್ರವರ್ತಿ ಅವರ ಬೌಲಿಂಗ್ ಮೋಡಿಗೆ 30 ಎಸೆತಗಳಲ್ಲಿ 36 ರನ್ ಗಳಿಸಿದ್ದ ವಾರ್ನರ್ ಅವರು ಸಿಂಪಲ್ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ನಂತರ ವೃದ್ಧಿಮಾನ್ ಸಹಾ ಕಣ್ಣಕ್ಕಿಳಿದರು, ಸಹಾ ಮತ್ತು ಪಾಂಡೆ ಸೇರಿಕೊಂಡು 12 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 76ಕ್ಕೆ ಏರಿಸಿದರು.
ಇದೇ ವೇಳೆ ಸಹಾ ಮತ್ತು ಪಾಂಡೆ ಅರ್ಧಶತಕದ ಜೊತೆಯಾಟವಾಡಿದರು. ಈ ಜೋಡಿ 41 ಬಾಲಿಗೆ 51 ರನ್ ಸಿಡಿಸಿತು. ಹೀಗಾಗಿ 16 ಓವರ್ ಮುಕ್ತಾಯದ ವೇಳೆಗೆ ಹೈದರಾಬಾದ್ ತಂಡ ಎರಡು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿತು. ಜೊತೆಗೆ 35 ಎಸೆತಗಳಲ್ಲಿ ಮನಿಷ್ ಪಾಂಡೆಯವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ಆಂಡ್ರೆ ರಸ್ಸೆಲ್ ಅವರ ಬೌಲಿಂಗ್‍ಗೆ ಸುಲಭ ಕ್ಯಾಚ್ ಕೊಟ್ಟು ಹೊರನಡೆದರು. ನಂತರ ಸಹಾ ರನ್ ಔಟ್ ಆದರು.
ಅಬುಧಾಬಿ: ಐಪಿಎಲ್ ಆರಂಭದಲ್ಲೇ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್‍ರೌಂಡರ್ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದಾರೆ.
ಕಳೆದ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮಾರ್ಷ್ ಗಾಯಗೊಂಡಿದ್ದರು. ಬೌಲಿಂಗ್ ಮಾಡುವ ವೇಳೆ ಹೊಸ ಶೂ ಧರಿಸಿದ್ದ ಕಾರಣ ಅವರ ಪಾದಕ್ಕೆ ಗಾಯವಾಗಿತ್ತು. ಈಗ ಇದೇ ಸಮಸ್ಯೆಯಿಂದ ಮಾರ್ಷ್ ಟೂರ್ನಿಯಿಂದ ಹೊರಬಂದಿದ್ದು, ಹೈದರಾಬಾದ್ ತಂಡಕ್ಕೆ ಆರಂಭಿಕ ಹಿನ್ನೆಡೆಯಾಗಿದೆ.
ಈ ವಿಚಾರವಾಗಿ ತನ್ನ ಅಧಿಕೃತ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ, ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಮಿಚೆಲ್ ಮಾರ್ಷ್ ಅವರು ಟೂರ್ನಿಯಿಂದ ಹೊರಬಂದಿದ್ದಾರೆ. ಅವರು ಬೇಗ ಗಾಯದಿಂದ ಗುಣಮುಖರಾಗಲಿ ಎಂದು ನಾವು ಹಾರೈಸುತ್ತೇವೆ. ವೆಸ್ಟ್ ಇಂಡೀಸ್ ತಂಡದ ಆಲ್‍ರೌಂಡರ್ ಜೇಸನ್ ಹೋಲ್ಡರ್ ಅವರು ಅವರ ಜಾಗಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದೆ.
🚨 Official Statement 🚨
Mitchell Marsh has been ruled out due to injury. We wish him a speedy recovery. Jason Holder will replace him for #Dream11IPL 2020 .#OrangeArmy#KeepRising
ಸೋಮವಾರ ನಡೆದ ಆರ್‍ಸಿಬಿ ವಿರುದ್ಧ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಅವರು ಐದನೇ ಓವರ್ ಬೌಲಿಂಗ್ ಮಾಡಿದ್ದರು. ಈ ಓವರಿನ ಎರಡನೇ ಬಾಲ್ ಎಸೆದಾಗ ಫಿಂಚ್ ಅವರು ಅದನ್ನು ನೇರವಾಗಿ ಹೊಡೆದರು, ಈ ವೇಳೆ ಇದನ್ನು ತಡೆಯಲು ಹೋಗಿ ಮಾರ್ಷ್ ಅವರು ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಇದಾದ ನಂತರವೂ ಕೂಡ ಎರಡು ಬಾಲ್ ಬೌಲ್ ಮಾಡಿದ ಮಾರ್ಷ್ ನಂತರ, ಪಾದದ ನೋವಿನಿಂದ ಮೈದಾನದಿಂದ ಹೊರಬಂದಿದ್ದರು.
ಕೇವಲ ನಾಲ್ಕು ಬಾಲ್ ಬೌಲ್ ಮಾಡಿ ಮಾರ್ಷ್ ಹೊರಬಂದರು, ಇದಾದ ನಂತರ ವಿಜಯ್ ಶಂಕರ್ ಅವರು ಉಳಿದ ಎರಡು ಬಾಲನ್ನು ಹಾಕಿದ್ದರು. ನಂತರ ಹೈದರಾಬಾದ್ ಬ್ಯಾಟಿಂಗ್ ವೇಳೆ ಕೂಡ ಗಾಯವಾಗಿದ್ದರೂ ಮಿಚೆಲ್ ಮಾರ್ಷ್ ತಂಡಕ್ಕಾಗಿ ಬ್ಯಾಟಿಂಗ್ ಬೀಸಲು ಬಂದಿದ್ದರು. ಆದರೆ ಮೊದಲ ಬಾಲಿನಲ್ಲೇ ಕ್ಯಾಚ್ ಕೊಟ್ಟು ಔಟ್ ಆದರು. ಆದರೆ ನಿಲ್ಲಲೂ ಆಗದ ಸ್ಥಿತಿಯಲ್ಲಿ ತಂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಬ್ಯಾಟಿಂಗ್ ಮಾಡಲು ಬಂದ ಮಾರ್ಷ್‍ಗೆ ಅಪಾರ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗಿತ್ತು.
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ 7ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಚೆನ್ನೈ ತಂಡದ ಆಟಗಾರರು ಗೆಲುವಿನ ಬಳಿಕ ಸಂಭ್ರಮಾಚರಣೆ ಮಾಡಿದ್ದು, ಸಿಎಸ್‍ಕೆ ತಂಡದ ಹಾಡಿಗೆ ಬ್ರಾವೋ ಡಾನ್ಸ್ ಮಾಡಿ ಧೋನಿಗೆ ಗೌರವ ಸೂಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಎಸ್‍ಕೆ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕೆರೆಬಿಯನ್ ಆಟಗಾರ, ಚೆನ್ನೈ ತಂಡದ ಬೌಲರ್ ಬ್ರಾವೋ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಡ್ರೆಸ್ಸಿಂಗ್ ರೂಮ್ ನಲ್ಲಿದ್ದ ಧೋನಿ ಕೂಲ್ ಆಗಿಯೇ ಸಂಭ್ರಮಿಸಿ, ಇಬ್ಬರು ಆಟಗಾರರತ್ತ ನಗೆ ಬೀರಿದ್ದಾರೆ. ಮಂಗಳವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಎರಡು ವಿಕೆಟ್‍ಗಳಿಂದ ಮಣಿಸಿದ ಸಿಎಸ್‍ಕೆ, ನೇರವಾಗಿ ಫೈನಲ್ ಪ್ರವೇಶ ಪಡೆಯಿತು. ಚೆನ್ನೈ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಫಾ ಡು ಪ್ಲೆಸಿಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದ ಕೊನೆಯ 3 ಓವರ್ ಗಳಲ್ಲಿ 43 ರನ್ ಗಳಿಸುವ ಒತ್ತಡದಲ್ಲಿದ್ದ ತಂಡಕ್ಕೆ ಡು ಪ್ಲೆಸಿಸ್ 18 ನೇ ಓವರ್ ನಲ್ಲಿ 20 ರನ್ ಸಿಡಿಸಿದರು. ಒಟ್ಟಾರೆ ಪಂದ್ಯದಲ್ಲಿ 42 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ನೆರವಿನಿಂದ 67 ರನ್ ಸಿಡಿಸಿ ಮಿಂಚಿದರು.
ಹೈದರಾಬಾದ್ ವಿರುದ್ಧ ಗೆಲುವಿನೊಂದಿಗೆ ಚೆನ್ನೈ 7ನೇ ಬಾರಿ ಐಪಿಎಲ್ ಪ್ರವೇಶಿಸಿದ ಹೆಗ್ಗಳಿಕೆ ಪಡೆದಿದೆ. ಪಂದ್ಯದ ಬಳಿಕ ಮಾತನಾಡಿದ ಧೋನಿ, ತಮ್ಮ ಗೆಲುವಿಗೆ ಡ್ರೆಸ್ಸಿಂಗ್ ರೂಮ್ ವಾತಾವರಣ ಕಾರಣ. ತಂಡದ ಪ್ರತಿಯೊಬ್ಬ ಆಟಗಾರ ಹಾಗೂ ಸಿಬ್ಬಂದಿಯ ಪರಿಶ್ರಮ ಇಲ್ಲದಿದ್ದರೆ ಗೆಲುವು ಸಾಧಿಸುವುದು ಕಷ್ಟಸಾಧ್ಯ ಎಂದು ಹೇಳಿದರು.
ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.
ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.
ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.
Gayle now has 279 sixes in IPL, which is 100 more than the next best, Rohit Sharma (179).
Most sixes in IPL: 279* Gayle 179 Rohit 174 Raina 167 ABD 166 Kohli#KXIPvSRH
ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 1 ವಿಕೆಟ್ ರೋಚಕ ಗೆಲುವು ದಾಖಲಿಸಿದೆ.
ಸನ್ ರೈಸರ್ಸ್ ಪರ ಉತ್ತಮ ಆರಂಭ ನೀಡಿದ ಧವನ್ ಹಾಗೂ ಸಹಾ ಬ್ಯಾಟಿಂಗ್ ನೆರವಿನೊಡನೆ ಉತ್ತಮ ಆರಂಭ ಪಡೆಯಿತು. ಬಿರುಸಿನ ಪ್ರದರ್ಶನ ನೀಡಿದ ಧವನ್ ಕೇವಲ 28 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 45 ರನ್ ಸಿಡಿಸಿ ಮಾರ್ಕಂಡೆ ಬೌಲಿಂಗ್ ನಲ್ಲಿ ಔಟಾದರು. ಇತ್ತ 20 ಎಸೆತಗಳಲ್ಲಿ 22 ರನ್ ಗಳಿಸಿದ್ದ ಸಹಾ ರನ್ನು ಸಹ ಮಾರ್ಕಂಡೆ ಎಲ್‍ಬಿ ಗೆ ಕೆಡವಿದರು. ಬಳಿಕ ಬಂದ ನಾಯಕ ವಿಲಿಯಂಸನ್ 6 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
ಈ ವೇಳೆ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಮನಿಷ್ ಪಾಂಡೆ (11 ರನ್), ಶಕೀಬ್ ಅಲ್ ಹಸನ್ (12) ವಿಕೆಟ್ ಪಡೆಯುವ ಮೂಲಕ ಮತ್ತೊಮ್ಮೆ ಮಾರ್ಕಂಡೆ ಹೈದರಾಬಾದ್ ತಂಡಕ್ಕೆ ಹೊಡೆತ ನೀಡಿದರು. ಇನ್ನು ಸ್ಫೋಟಕ ಆಟಗಾರ ಯೂಸಫ್ ಪಠಾಣ್ (14) ಹಾಗೂ ರಶೀದ್ ಖಾನ್ (0)ರನ್ನು ಬುಮ್ರಾ ಬಲಿ ಪಡೆದು ಗೆಲುವಿನ ಆಸೆ ಚಿಗುರುವಂತೆ ಮಾಡಿದರು.
ಕೊನೆಯ 12 ಎಸೆತಗಳಲ್ಲಿ 12 ರನ್ ಗಳಿಸಬೇಕಿದ್ದ ವೇಳೆ ರಹಮಾನ್ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದರು. 19 ನೇ ಓವರ್ ನಲ್ಲಿ ಕೇವಲ 1 ರನ್ ನೀಡಿದ ರಹಮಾನ್ ಕೌಲ್ ಹಾಗೂ ಸಂದೀಪ್ ಶರ್ಮಾ ವಿಕೆಟ್ ಪಡೆದರು. ಕೊನೆಯ ಓವರ್ ನಲ್ಲಿ 11 ರನ್ ಗಳಿಸ ಬೇಕಾದ ಒತ್ತಡಕ್ಕೆ ಸಿಲುಕಿದ ಹೂಡಾ (25 ಎಸೆತ, 32 ರನ್ ತಲಾ 1 ಸಿಕ್ಸರ್, ಬೌಂಡರಿ) ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಂಡದ ಗೆಲುವಿಗೆ ರೋಚಕ ತಿರುವು ನೀಡಿದರು. ಮುಂಬೈ ಪರ ಮಾರ್ಕಂಡೆ 4, ಮುಸ್ತಾಫಿಜುರ್ 3 ಹಾಗೂ ಬುಮ್ರಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ನಿರಾಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮುಂಬೈ ಪರ ಆರಂಭಿಕರಾದ ನಾಯಕ ರೋಹಿತ್ ಶರ್ಮಾ (10 ಎಸೆತ 11ರನ್) ಮೊದಲ ಓವರ್ ನಲ್ಲೇ ಜೀವದಾನ ಪಡೆದರೂ ಅದನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ವಿಫಲರಾದರು. ಮತ್ತೊಂದೆಡೆ ಆಕ್ರಮಣಕಾರಿ ಆಟ ಪ್ರಾರಂಭಿಸಿದ್ದ ಎವಿನ್ ಲೂವಿಸ್ (54 ರನ್, 17 ಎಸೆತ, 3 ಬೌಂಡರಿ, 2 ಸಿಕ್ಸರ್) ಸುಲಭ ಕ್ಯಾಚ್ ನೀಡಿ ಔಟಾದರು. ಬಳಿಕ ಬಂದ ಇಶಾನ್ ಕಿಶಾನ್ (9) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಕೃನಾಲ್ ಪಾಂಡ್ಯ (10 ರನ್) ಈ ಬಾರಿ ಉತ್ತಮ ಬ್ಯಾಟಿಂಗ್ ನಡೆಸಲಿಲ್ಲ.
ನಿರಂತರವಾಗಿ ವಿಕೆಟ್ ಕಳೆದಕೊಳ್ಳುತ್ತ ಸಾಗಿದ ತಂಡಕ್ಕೆ ಚೇತರಿಕೆ ನೀಡಲು ಯತ್ನಿಸಿದ ಪೊಲಾರ್ಡ್ ಹಾಗೂ ಸೂರ್ಯಕುಮಾರ್ ಯಾದವ್ ನಿಧಾನಗತಿ ಬ್ಯಾಟ್ ನಡೆಸಿದರು. ಈ ವೇಳೆ ಪೊಲಾರ್ಡ್ 23 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಳಿಂದ 28 ರನ್ ಗಳಿಸಿ ಔಟಾದರು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಸೂರ್ಯಕುಮಾರ್ 28 ರನ್ ಗಳಿಸಿ ಔಟದರು. ಬಳಿಕ ಬಂದ ಮುಂಬೈ ಬೌಲರ್ ಗಳಾದ ಬೆನ್ ಕಟ್ಟಿಂಗ್ (9), ಪ್ರದೀಪ್ ಸಾಂಗ್ವಾನ್ (2), ಮಾಯಂಕ್ ಮಾರ್ಕಂಡೆ (6) ಹಾಗೂ ಜಸ್ಪ್ರೀತ್ ಬುಮ್ರಾ (4) ರನ್ ಗಳಿಸಿದರು. ಇದರೊಂದಿಗೆ ಮುಂಬೈ 20 ಓವರ್ ಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಸನ್ ರೈಸರ್ಸ್ ಪರ ಸಂದೀಪ್ ಶರ್ಮಾ, ಸಿದ್ದಾರ್ಥ್ ಕೌಲ್, ಬಿಲ್ಲಿ ಸ್ಟಾನ್‍ಲೇಕ್ ತಲಾ ಎರಡು ವಿಕೆಟ್ ಮತ್ತು ರಶೀದ್ ಖಾನ್ ಮತ್ತು ಶಕಿಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದರು.