Tag: summons

  • ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ನಿತ್ಯಾನಂದನಿಗೆ ಸಮನ್ಸ್ ನೀಡಿದ ಹೈಕೋರ್ಟ್

    ಬೆಂಗಳೂರು: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಹೈಕೋರ್ಟ್ ಸಮನ್ಸ್ ನೀಡಿದೆ.

    ನಿತ್ಯಾನಂದ ಸ್ವಾಮಿ ಜಾಮೀನು ರದ್ದತಿ ಕೋರಿ ದೂರುದಾರ ಲೆನಿನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಏಕ ಸದಸ್ಯ ಪೀಠ ಸಮನ್ಸ್ ಜಾರಿ ಮಾಡಿದೆ.

    ಅರ್ಜಿ ವಿಚಾರಣೆ ವೇಳೆ ನಿತ್ಯಾನಂದನಿಗೆ ಎಷ್ಟು ಬಾರಿ ಸಮನ್ಸ್ ನೀಡಲಾಗಿದೆ. ಎಷ್ಟು ಬಾರಿ ವಿಚಾರಣೆಗೆ ಹಾಜರಾಗಿದ್ದಾನೆ ಎಂಬ ಪ್ರಶ್ನೆ ಹಾಕಿತ್ತು. ಇದಕ್ಕೆ ಉತ್ತರಿಸಿದ ಲೆನಿನ್ ಪರ ವಕೀಲರು, ನಿತ್ಯಾನಂದನಿಗೆ 45 ಬಾರಿ ಸಮನ್ಸ್ ನೀಡಲಾಗಿದೆ 45 ಬಾರಿ ವಿಚಾರಣೆಗೆ ನಿತ್ಯಾನಂದ ಗೈರು ಹಾಜರಾಗಿದ್ದಾರೆ. ನಿತ್ಯಾನಂದ ಭಾರತದಿಂದ ಪರಾರಿಯಾಗಿ ಒಂದೂವರೆ ವರ್ಷ ಕಳೆದಿದೆ ಎಂದು ಮಾಹಿತಿ ನೀಡಿದರು.

    ನಿತ್ಯಾನಂದನಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್, ರಾಜ್ಯ ಸರ್ಕಾರ, ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ನಿತ್ಯಾನಂದನ ಪ್ರಕರಣ ಬಗ್ಗೆ ಉತ್ತರ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಿತ್ಯಾನಂದ ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ದೂರುದಾರ ಲೆನಿನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು.

  • ‘ಚಷ್ಮಾ’ ಹುಡುಗಿಗೆ ಮತ್ತೊಂದು ‘ಕಿರಿಕ್’- ರಶ್ಮಿಕಾ, ಕುಟುಂಬಸ್ಥರಿಗೆ ಐಟಿ ಸಮನ್ಸ್

    ‘ಚಷ್ಮಾ’ ಹುಡುಗಿಗೆ ಮತ್ತೊಂದು ‘ಕಿರಿಕ್’- ರಶ್ಮಿಕಾ, ಕುಟುಂಬಸ್ಥರಿಗೆ ಐಟಿ ಸಮನ್ಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ರಷ್, ಕಿರಿಕ್ ರಾಣಿ ರಶ್ಮಿಕಾ ಮಂದಣ್ಣ ಮತ್ತು ಕುಟುಂಬಸ್ಥರಿಗೆ ಐಟಿ ಸಮನ್ಸ್ ನೀಡಿದೆ.

    ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದು, ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ. ಮೈಸೂರಿನ ಐಟಿ ಕಚೇರಿಗೆ ಹಾಜರಾಗುವಂತೆ ರಶ್ಮಿಕಾ ಮತ್ತು ಕುಟುಂಬಸ್ಥರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕಿರಿಕ್ ಬೆಡಗಿ ಮನೆಯಲ್ಲಿ ಐಟಿ ಬೇಟೆ – ದಾಳಿ ವೇಳೆ ಸಿಕ್ಕಿದ್ದು 25 ಲಕ್ಷ ಕ್ಯಾಶ್

    ಐಟಿ ಅಧಿಕಾರಿಗಳು ರಶ್ಮಿಕಾ ಮನೆಯಲ್ಲಿ ಸತತ ಎರಡು ದಿನಗಳ ಕಾಲ ದಾಳಿ ನಡೆಸಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದರು. ಜೊತೆಗೆ ದಾಖಲೆ ಇಲ್ಲದ 25 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ತೆರಿಗೆ ವಂಚನೆ ಮಾಡಿರುವ ಕೋಟ್ಯಂತರ ಆಸ್ತಿಯ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಅಕೌಂಟ್‍ನಲ್ಲಿ ದುಡ್ಡೇ ಇಲ್ಲ ಎಂದಿದ್ದ 5 ದಿನದಲ್ಲೇ ರಶ್ಮಿಕಾಗೆ ಐಟಿ ಶಾಕ್

    ಈ ಎಲ್ಲಾ ಮಾಹಿತಿಯ ಆಧಾರದ ಮೇಲೆ ಐಟಿ ಅಧಿಕಾರಿಗಳು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

    ದಾಳಿ ವೇಳೆ ರಶ್ಮಿಕಾ ಮನೆಯಲ್ಲಿ 3.94 ಕೋಟಿ ರೂ. ಮೊತ್ತದ ಅಘೋಷಿತ ಆದಾಯ ಪತ್ತೆಯಾಗಿದೆ. 1.5 ಕೋಟಿ ರೂಪಾಯಿಗೆ ತೆರಿಗೆ ಕಟ್ಟಿಲ್ಲ. ಇಷ್ಟು ಮಾತ್ರವಲ್ಲದೆ ರಶ್ಮಿಕಾ ಹೆಸರಲ್ಲಿ ಎರಡು ಪ್ಯಾನ್ ಕಾರ್ಡ್ ಇರುವುದು ಕೂಡ ಬೆಳಕಿಗೆ ಬಂದಿದೆ. ಒಂದು ಪ್ಯಾನ್ ಕಾರ್ಡ್ ಮೂಲಕ 2016-17ರವರೆಗಷ್ಟೇ ಆದಾಯ ತೆರಿಗೆ ಸಲ್ಲಿಕೆ ಮಾಡಲಾಗಿದೆ. ರಶ್ಮಿಕಾ ತಂದೆ ಒಡೆತನದ ಕಲ್ಯಾಣ ಮಂಟಪದ ಬಗ್ಗೆಯೂ ಗುಮಾನಿಯಿದ್ದು, ಕಲ್ಯಾಣ ಮಂಟಪದ ವ್ಯವಹಾರದ ಬಗ್ಗೆಯೂ ಕೆಲ ಮಾಹಿತಿ ಮುಚ್ಚಿಟ್ಟ ಆರೋಪ ಕೇಳಿ ಬಂದಿದೆ.

    ಐಟಿ ದಾಳಿ:
    ಗುರುವಾರ ಮುಂಜಾನೆ 7:30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು, ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದರು. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.

    ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಬಳಿಕ 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

  • ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ಡಿಕೆಶಿ ಪತ್ನಿ, ತಾಯಿಗೆ ಸಮನ್ಸ್ ನೀಡಬೇಡಿ: ದೆಹಲಿ ಹೈಕೋರ್ಟ್

    ನವದೆಹಲಿ: ಮುಂದಿನ ಆದೇಶದವರೆಗೂ ಡಿ.ಕೆ ಶಿವಕುಮಾರ್ ಪತ್ನಿ ಉಷಾ ಮತ್ತು ತಾಯಿ ಗೌರಮ್ಮ ಅವರಿಗೆ ಸಮನ್ಸ್ ನೀಡದಂತೆ ಇಡಿ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೆ ನಾಳೆ ನಡೆಯಬೇಕಿದ್ದ ವಿಚಾರಣೆಯಿಂದಲೂ ರಿಲೀಫ್ ಕೊಟ್ಟಿದೆ.

    ಇಡಿ ಅಧಿಕಾರಿಗಳು ನೀಡಿದ್ದ ಸಮನ್ಸ್ ರದ್ದು ಮತ್ತು ಬೆಂಗಳೂರಿನಲ್ಲಿ ವಿಚಾರಣೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬ್ರಿಜೇಶ್ ಸೇಥಿ ನೇತೃತ್ವದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. ಇಂದು ವಿಚಾರಣೆ ನಡೆಸಿದ ಪೀಠ ಉಷಾ ಮತ್ತು ಗೌರಮ್ಮ ಪರ ವಕೀಲ ದಯಾನ್ ಕೃಷ್ಣನ್ ಅವರ ವಾದ ಕೇಳಿತು.

    ಮಹಿಳೆಯರನ್ನು ಠಾಣೆಯಲ್ಲೇ ವಿಚಾರಣೆ ನಡೆಸಬೇಕು ಎಂಬ ಯಾವ ನಿಯಮಗಳಿಲ್ಲ. ಹಿಂದೆ ದೆಹಲಿ ಮದ್ರಾಸ್ ಹೈಕೋರ್ಟ್ ಸೇರಿ ಸುಪ್ರೀಂಕೋರ್ಟ್ ಹಲವು ಆದೇಶಗಳನ್ನು ನೀಡಿದೆ ಇದ್ಯಾವುದನ್ನು ಅರಿಯದೇ ಇಡಿ ಅಧಿಕಾರಿಗಳು ದೆಹಲಿಗೆ ಬರುವಂತೆ ಸಮನ್ಸ್ ನೀಡಿದ್ದಾರೆ. ಆದರೆ ಗೌರಮ್ಮ ಅವರಿಗೆ 85 ವರ್ಷ ಆಗಿದ್ದು ಆರೋಗ್ಯ ಸಹಕರಿಸಲ್ಲ ಅಲ್ಲದೇ ಉಷಾ ಅವರು ಗೃಹಿಣಿ ಆಗಿರುವುದರಿಂದ ಅವರ ಮನೆಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

    ನಾವು ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಆದರೆ ದೆಹಲಿಯಲ್ಲಿ ವಿಚಾರಣೆ ಬೇಡ ಎನ್ನುತ್ತಿದ್ದೇವೆ ಬೆಂಗಳೂರಿನಲ್ಲಿ ವಿಚಾರಣೆ ಎದುರಿಸಲು ಸಿದ್ದವಾಗಿದ್ದೇವೆ ವಕೀಲರ ಸಮ್ಮುಖದಲ್ಲಿ ವಿಚಾರಣೆ ನಡೆಯಲಿ ಅಂತಾ ದಯಾನ್ ಕೃಷ್ಣನ್ ವಾದ ಮಂಡಿಸಿದ್ರು. ಇಡಿ ಪರ ಹಿರಿಯ ವಕೀಲರು ಗೈರಾದ ಹಿನ್ನಲೆ ವಾದ ಮಂಡನೆಗೆ ಅವಕಾಶ ಕೊಡಬೇಕು ಅಂತಾ ಜ್ಯೂನಿಯರ್ ವಕೀಲರು ಮನವಿ ಮಾಡಿದರು. ಇದನ್ನು ಕೇಳ್ತಿದ್ದಂತೆ ಮುಂದಿನ ದಿನಾಂಕದಂದು ವಾದ ಮಂಡಿಸದಿದ್ದಲ್ಲಿ ನಿಮ್ಮನ್ನ ಪರಿಗಣಿಸದೇ ತೀರ್ಪು ನೀಡುವುದಾಗಿ ಎಚ್ಚರಿಸಿ ನವೆಂಬರ್ 15 ಕ್ಕೆ ವಿಚಾರಣೆ ಮುಂದೂಡಿದರು.

  • ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು – ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಅತ್ತೆ ಗೈರಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಇಡಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ.

    ಇಂದು ವಿಚಾರಣೆಗೆ ಹಾಜರಾಗುವಂತೆ ಗೌರಮ್ಮಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಅನಾರೋಗ್ಯ ಹಿನ್ನೆಲೆ ದೆಹಲಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ಗೌರಮ್ಮ ಅವರು ಸಮನ್ಸ್ ಗೆ ಉತ್ತರ ನೀಡಿದ್ದಾರೆ. ಅಲ್ಲದೆ, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

    ಡಿ.ಕೆ.ಶಿವಕುಮಾರ್ ಪತ್ನಿಯಿಂದಲೂ ಇದೇ ರೀತಿ ಮನವಿ ಮಾಡಲಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಅಕ್ಟೋಬರ್ 17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಷಾ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದೀಗ ಸಮನ್ಸ್ ಗೆ ಗೌರಮ್ಮ ಹಾಗೂ ಉಷಾ ಅವರು ಉತ್ತರಿಸಿದ್ದು, ಈ ಕುರಿತು ಇಡಿ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    ಅಕ್ರಮ ಹಣ ವರ್ಗಾವಣೆ ಪ್ರರಕಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ಮತ್ತಷ್ಟು ವಿಚಾರಣೆಗೆ ನಡೆಸಿರುವ ಇಡಿ ಡಿಕೆಶಿ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

    ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ಸೋಮವಾರ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದರು. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಜ್ಜಿ-ಮೊಮ್ಮಗಳ ವ್ಯವಹಾರ: ಡಿಕೆಶಿ ಕುಟುಂಬದಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದು, ಡಿಕೆಶಿ ತಾಯಿ ಗೌರಮ್ಮ ಅವರು ಮೊಮ್ಮಗಳ ನಡುವೆ ಕೋಟಿ ರೂ. ವ್ಯವಹಾರ ನಡೆದಿದೆ. ಮೊದಲಿಗೆ ಮೊಮ್ಮಗಳು ಐಶ್ವರ್ಯ ಅವರ ಖಾತೆಗೆ 2018 ಜೂನ್ ತಿಂಗಳಿನಲ್ಲಿ ಅಜ್ಜಿ ಗೌರಮ್ಮ ಅವರು 3 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾರೆ. ಅಲ್ಲದೇ ಐಶ್ವರ್ಯಾ ಹೆಸರಿಗೆ 2001 ರಲ್ಲಿ ಉತ್ತರಹಳ್ಳಿಯಲ್ಲಿದ್ದ 3 ಎಕ್ರೆ ಭೂಮಿಯನ್ನು ಗಿಫ್ಟ್ ನೀಡಿ ಬರೆದುಕೊಟ್ಟಿದ್ದರು. ಆ ಬಳಿಕ 2002ರಲ್ಲಿ ಹೊಸಕೆರೆಹಳ್ಳಿಯ 3 ಎಕರೆ ಭೂಮಿಯನ್ನು ಗಿಫ್ಟ್ ನೀಡಿದ್ದರು. ಇದರ ನಡುವೆಯೇ ಐಶ್ವರ್ಯಾಗೆ ಮೂರು ನಿವೇಶನಗಳನ್ನು ಗೌರಮ್ಮ ನೀಡಿದ್ದರು. ಒಟ್ಟು 193 ಕೋಟಿ ರೂ.ಗಳನ್ನು ಐಶ್ವರ್ಯಾ ಅವರ ಖಾತೆಗೆ ಜಮೆ ಮಾಡಿದ್ದರು.

    ಅಮ್ಮ-ಮಕ್ಕಳ ನಡುವಿನ ವ್ಯವಹಾರ: ಮೊಮ್ಮಗಳಿಗೆ ಭೂಮಿ ಹಾಗೂ ಹಣವನ್ನು ನೀಡಿದ್ದ ಗೌರಮ್ಮ ಅವರು ಪುತ್ರ ಡಿಕೆ ಶಿವಕುಮಾರ್ ಅವರಿಂದ ಎರಡು ಹಂತದಲ್ಲಿ 22.11 ಕೋಟಿ ರೂ. ಹಾಗೂ 15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಮತ್ತೆ ಡಿಕೆಶಿ ಅವರಿಗೆ 35 ಲಕ್ಷ ರೂ. ಗಳನ್ನು ಗೌರಮ್ಮ ಸಾಲ ನೀಡಿದ್ದಾರೆ. ಅಲ್ಲದೇ ಮತ್ತೊಬ್ಬ ಪುತ್ರ ಡಿಕೆ ಸುರೇಶ್‍ರಿಂದ ಗೌರಮ್ಮ ಅವರಿಗೆ 4.89 ಕೋಟಿ ರೂ. ಸಾಲ ನೀಡಲಾಗಿದೆ.

    ಬೇನಾಮಿ ಆಸ್ತಿ ತನಿಖೆ: ಕುಟುಂಬದ ಸದಸ್ಯರ ನಡುವೆಯೇ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಇಡಿ ಅಧಿಕಾರಿಗಳಿಗೆ ಗೌರಮ್ಮರ ಹೆಸರಲ್ಲಿ 273 ಕೋಟಿ ರೂ. ಬೇನಾಮಿ ಆಸ್ತಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ, ಡಿಕೆ ಸುರೇಶ್, ಗೌರಮ್ಮ ನಡುವೆ ಒಟ್ಟು 43 ಕೋ. ರೂ. ಸಾಲ ವ್ಯವಹಾರ ನಡೆದಿದೆ. 2005ರಲ್ಲಿ ಹೊಸಕೆರೆಹಳ್ಳಿಯಲ್ಲಿ 1 ಕೋಟಿ ರೂ. ಗಳಿಗೆ 4.9 ಗುಂಟೆ ಜಮೀನನ್ನು ಗೌರಮ್ಮ ಹೆಸರಲ್ಲಿ ಖರೀದಿ ಮಾಡಲಾಗಿದ್ದು, ಆದರೆ ಆದಾದ 2ನೇ ವರ್ಷದಲ್ಲಿ ಅಂದರೆ 2007ರಲ್ಲಿ ಇದೇ ಜಮೀನನ್ನು 11 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ಉಳಿದಂತೆ ಗೌರಮ್ಮ ಅವರ ಹೆಸರಿನಲ್ಲಿ ಯಲಹಂಕದಲ್ಲಿ 20 ಎಕರೆ 9 ಗುಂಟೆ ಜಮೀನು, ಉತ್ತರಹಳ್ಳಿಯಲ್ಲಿ 1.7 ಗುಂಟೆ ಜಮೀನು, ಕನಕಪುರದಲ್ಲಿ 3 ಕಲ್ಲಿನ ಕ್ವಾರಿ, 23 ಗ್ರಾನೈಟ್ ಬ್ಯುಸಿನೆಸ್ ಸಂಸ್ಥೆಗಳಿಗೆ.

    ಡಿಕೆಶಿ ಪತ್ನಿಗೆ ಸಮನ್ಸ್ ಯಾಕೆ?
    ಮೊಮ್ಮಗಳು ಹಾಗೂ ಇಬ್ಬರ ಪುತ್ರರ ನಡುವೆ ತಾಯಿ ಗೌರಮ್ಮ ಅವರು ನಡೆಸಿರುವ ವ್ಯವಹಾರದಂತೆಯೇ ಡಿಕೆಶಿ ಪತ್ನಿ ಉಷಾ ಅವರ ಹೆಸರಿನಲ್ಲೂ ಹಣದ ವ್ಯವಹಾರ ನಡೆದಿದೆ. ಪತಿ ಡಿಕೆ ಶಿವಕುಮಾರ್ ಅವರಿಗೆ ಪತ್ನಿ ಉಷಾ ಅವರು 2.60 ಕೋಟಿ ರೂ. ಸಾಲ ನೀಡಿದ್ದಾರೆ. ಮಾವ ಕೆಂಪೇಗೌಡರಿಂದ 5.42 ಕೋಟಿ ರೂ. ಹಾಗೂ ಅತ್ತೆ ಗೌರಮ್ಮರಿಂದ 15.86 ಕೋಟಿ ಸಾಲ ಪಡೆದಿದ್ದಾರೆ.

    ಉಳಿದಂತೆ ಪುತ್ರಿ ಐಶ್ವರ್ಯಾ ಅವರಿಗೆ 2.70 ಕೋಟಿ ರೂ. ಹಾಗೂ ಪತಿಯ ಸಹೋದರ ಡಿಕೆ ಸುರೇಶ್‍ಗೆ 11 ಕೋಟಿ ಸಾಲ ನೀಡಿದ್ದಾರೆ. ಅಲ್ಲದೇ 13 ಕೋಟಿ ರೂ. ಮೌಲ್ಯದ ಚಿನ್ನಾಭರಣ ಖರೀದಿಯನ್ನು ಉಷಾ ಅವರು ಮಾಡಿದ್ದು, ಶ್ರೀರಾಮ್ ಪ್ರಾಪರ್ಟೀಸ್‍ನಿಂದ ದಾಖಲೆ ಇಲ್ಲದ 5 ಕೋಟಿ ರೂ. ಹಣವನ್ನು ಸ್ವೀಕಾರ ಮಾಡಿದ್ದಾರೆ. ಶೋಭಾ ಡೆವಲಪರ್ಸ್, ಇಂದ್ರಪ್ರಸ್ತ ಡೆವಲಪರ್ಸ್ ನಲ್ಲಿ ಶೇ.40ರಷ್ಟು ಷೇರು ಖರೀದಿ ಸೇರಿದಂತೆ ಸಲಾರ್ಪುರಿಯಾ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಪಾಲು ಹೊಂದಿದ್ದಾರೆ. ಉಳಿದಂತೆ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಮನೆ ನಿರ್ಮಾಣಕ್ಕೆ ಫೆಡರಲ್ ಬ್ಯಾಂಕ್‍ನಿಂದ 7.61 ಕೋಟಿ ರೂ. ಹಾಗೂ ಆರ್.ಟಿ.ನಗರ ಫೆಡರಲ್ ಬ್ಯಾಂಕ್‍ನಲ್ಲಿ 4 ಕೋಟಿ 25 ಲಕ್ಷ ಮನೆ ಸಾಲ. ಶೋಭಾ ಡೆವಲಪರ್ಸ್‍ನಿಂದ 8.48 ಕೋಟಿ ರೂ.ಗಳನ್ನು ಉಷಾ ಅವರು ಸಾಲ ಪಡೆದಿದ್ದಾರೆ. ಈ ಹಣಕಾಸಿನ ವ್ಯವಹಾರ ಬಗ್ಗೆಯೂ ಇಡಿ ಅಧಿಕಾರಿಗಳು ವಿಚಾರಣೆ ವೇಳೆ ಮಾಹಿತಿ ಪಡೆಯುವ ಸಾಧ್ಯತೆ ಇದೆ.

  • ಡಿಕೆಶಿ ತಾಯಿ ಗೌರಮ್ಮಗೂ ಇಡಿ ಸಮನ್ಸ್

    ಡಿಕೆಶಿ ತಾಯಿ ಗೌರಮ್ಮಗೂ ಇಡಿ ಸಮನ್ಸ್

    ಬೆಂಗಳೂರು: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದ ಬೆನ್ನಲ್ಲೇ ತಾಯಿ ಗೌರಮ್ಮಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿದ ವಿಚಾರ ಲಭ್ಯವಾಗಿದೆ.

    ನಾಳೆ ವಿಚಾರಣೆ ಬರುವಂತೆ ಗೌರಮ್ಮ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದ್ದು, ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ಆಗಮಿಸುವಂತೆ ಸೂಚಿಸಲಾಗಿದೆ. ಡಿ.ಕೆ ಶಿವಕುಮಾರ್ ಸೇರಿ ಅವರ ಕುಟುಂಬದ ನಾಲ್ಕನೇ ಸದಸ್ಯರಿಗೆ ಇಡಿ ಸಮನ್ಸ್ ನೀಡಿದೆ. ಈ ಹಿಂದೆ ಪುತ್ರಿ ಐಶ್ವರ್ಯ ಮತ್ತು ಸಹೋದರ ಡಿ.ಕೆ ಸುರೇಶ್ ಅವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಈಗ ಡಿಕೆಶಿ ತಾಯಿ ಗೌರಮ್ಮಗೂ ಸಮನ್ಸ್ ಕೊಟ್ಟಿದ್ದಾರೆ.

    ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇಡಿ ಈಗ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಈ ವಿಚಾರವಾಗಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ, ಸಹೋದರ ಡಿ.ಕೆ ಸುರೇಶ್, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕ ರಾಜಣ್ಣ ಸೇರಿದಂತೆ ಹಲವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಇತ್ತ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಕೋರ್ಟಿಗೆ ಡಿಕೆಶಿ ಪರ ವಕೀಲರು ಬರಲಿಲ್ಲ. ಹೀಗಾಗಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

    ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಿ, ಹೆಚ್ಚುವರಿ ವರದಿ ಸಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.

  • ಸಮನ್ಸ್ ಬಂದರೆ ತಕ್ಷಣ ವಿಚಾರಣೆಗೆ ಹಾಜರಾಗ್ತೇನೆ – ಡಿ.ಕೆ.ಸುರೇಶ್

    ಸಮನ್ಸ್ ಬಂದರೆ ತಕ್ಷಣ ವಿಚಾರಣೆಗೆ ಹಾಜರಾಗ್ತೇನೆ – ಡಿ.ಕೆ.ಸುರೇಶ್

    – ನನಗೆ ಯಾವ ನೋಟಿಸ್ ಬಂದಿಲ್ಲ

    ನವದೆಹಲಿ: ಈವರೆಗೆ ಜಾರಿ ನಿರ್ದೇಶನಾಲಯದಿಂದ ಯಾವುದೇ ಸಮನ್ಸ್ ಬಂದಿಲ್ಲ. ನನಗೆ ಸಮನ್ಸ್ ನೀಡಿದರೆ ಬಂದು ಕ್ಷಣವೂ ತಡಮಾಡದೇ ಸಂಬಂಧಪಟ್ಟ ಅಧಿಕಾರಿಗಳ ಬಳಿ ಹಾಜರಾಗುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಸಮನ್ಸ್ ಜಾರಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಸಮನ್ಸ್ ಜಾರಿಯಾದರೆ ಒಂದು ಕ್ಷಣವೂ ತಡ ಮಾಡದೆ ವಿಚಾರಣೆಗೆ ಹಾಜರಾಗುತ್ತೇನೆ. ನನ್ನ ಬಳಿ ಮುಚ್ಚಿಡುವ ವ್ಯವಸ್ಥೆಗಳೇನು ಇಲ್ಲ ಎಂದು ತಿಳಿಸಿದರು.

    ಸಮನ್ಸ್ ಜಾರಿಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಸುಮಾರು ದಿನಗಳಿಂದಲೂ ವರದಿಯಾಗುತ್ತಿದೆ. ನನಗೆ ಈ ಕುರಿತು ಯಾವ ಮಾಹಿತಿಯೂ ಇಲ್ಲ ಎಂದು ದೆಹಲಿಯಲ್ಲಿ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದರು.

    ಡಿ.ಕೆ.ಶಿವಕುಮಾರ್ ಅವರನ್ನು ಈಗತಾನೆ ಭೇಟಿ ಮಾಡಿ ಬಂದಿದ್ದೇನೆ. ಅವರೂ ಆರೋಗ್ಯವಾಗಿದ್ದಾರೆ. ಎಲ್ಲ ಎದುರಿಸಲು ಮನಸಿಕವಾಗಿ ಸಿದ್ಧವಾಗಿದ್ದಾರೆ. ಇವು ಕಷ್ಟದ ದಿನಗಳು ಎಂದು ತಿಳಿದುಕೊಂಡು ಇದರಿಂದ ಆದಷ್ಟು ಬೇಗ ಹೊರ ಬರುವ ಪ್ರಯತ್ನವನ್ನು ಮಾಡುತ್ತೇವೆ. ಅ. 9ರವರೆಗೆ ನ್ಯಾಯಾಲಯಕ್ಕೆ ರಜೆ ಇದೆ. ಹೀಗಾಗಿ 14ನೇ ತಾರೀಖಿಗೆ ವಿಚಾರಣೆಗೆ ತೆಗೆದುಕೊಂಡಿದ್ದಾರೆ. 10ರಂದು ವಿಚಾರಣೆ ನಡೆಸಲು ನ್ಯಾಯಾಧೀಶರು ಸಿದ್ಧರಿದ್ದರು. ಆದರೆ ರಜೆ ಇರುವುದರಿಂದ ವಕೀಲರು ಅಧಿಕಾರಿಗಳು ರಜೆ ಬೇಕು ಎಂದು ಕೇಳಿದರು ಹೀಗಾಗಿ 14ಕ್ಕೆ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ್ದಾರೆ ಎಂದು ಮಾಹಿತಿ ನೀಡಿದರು. ಡಿ.ಕೆ.ಸುರೇಶ್ ನಿವಾಸಕ್ಕೆ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕ ಹ್ಯಾರಿಸ್ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

    ಸಂಸದ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ ಎನ್ನುವ ವಿಚಾರ ಇಡಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಪುತ್ರಿ ಬಳಿಕ ಡಿಕೆಶಿ ಮಾವನಿಗೂ ಇಡಿ ಸಮನ್ಸ್

    ಪುತ್ರಿ ಬಳಿಕ ಡಿಕೆಶಿ ಮಾವನಿಗೂ ಇಡಿ ಸಮನ್ಸ್

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಪುತ್ರಿಯ ಬಳಿಕ ಇದೀಗ ಅವರ ಮಾವ ತಿಮ್ಮಯ್ಯ ಅವರಿಗೂ ಇಡಿ ಸಮನ್ಸ್ ನೀಡಿದೆ.

    ಮೈಸೂರಿನಲ್ಲಿರುವ ಡಿಕೆಶಿ ಮಾವ ತಿಮ್ಮಯ್ಯಗೆ ಮಾತ್ರವಲ್ಲದೇ ಸ್ನೇಹಿತ ಶಶಿಕುಮಾರ್, ಆಡಿಟರ್ ಚಂದ್ರಶೇಖರ್ ತಿಮ್ಮಯ್ಯ, ಸಿಂಗಾಪುರದ ಗೆಳೆಯ ರಜನೀಶ್ ಗೋಪಿನಾಥ್ ಹಾಗೂ ವ್ಯವಹಾರಿಕ ಸಂಬಂಧಿ ಅನಿಲ್ ಜೈನ್ ಗೂ ಇಡಿ ಸಮನ್ಸ್ ಜಾರಿ ಮಾಡಿದೆ. ಮತ್ತೊಂದೆಡೆ ಪುತ್ರಿ ಐಶ್ವರ್ಯಾ ಹೆಸರಿನಲ್ಲಿದ್ದ ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ.

    184 ಜನರ ಲಿಸ್ಟ್ ನಲ್ಲಿ ಇವರುಗಳ ಹೆಸರೂ ಇದೆ. ಐಟಿ ದಾಳಿ ನಡೆದ ಸಂದರ್ಭದಲ್ಲಿ ಸರಿಸುಮಾರು 64 ಕಡೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದರು. ಇದನ್ನೂ ಓದಿ: 78 ಕೋಟಿ ಹೂಡಿಕೆ – ಐಶ್ವರ್ಯ ಕಂಪನಿಯ ಆಸ್ತಿ ದಾಖಲೆ ಜಪ್ತಿ – ಏನಿದು ಗಿಫ್ಟ್ ಡೀಡ್?

    ಐಟಿ ದಾಳಿ ಬಳಿಕ ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇನ್ನು ಹಲವು ಮಂದಿಯನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ಇಡಿ ಹೇಳಿತ್ತು.

    ಇತ್ತ ಮಾವ ತಿಮ್ಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿದರೆ ಹಣ ವರ್ಗಾವಣೆಯ ಬಗ್ಗೆ ಮಾಹಿತಿ ಸಿಗಬಹುದು ಅಥವಾ ವ್ಯವಹಾರಿಕ ಸಂಬಂಧಗಳ ಮಾಹಿತಿ ಕಲೆ ಹಾಕಬಹುದು ಎಂಬ ನಿಟ್ಟಿನಲ್ಲಿ ಇಡಿ ಸಮನ್ಸ್ ನೀಡಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಐಶ್ವರ್ಯಾ ಖಾತೆಯಿಂದ 108 ಕೋಟಿ ವರ್ಗಾವಣೆ – ಕೋರ್ಟಿಗೆ ಇಡಿ ಮಾಹಿತಿ

  • ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ನನ್ನ ಮತ್ತು ಡಿಕೆಶಿ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ – ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ನನ್ನ ಮತ್ತು ಡಿಕೆ ಶಿವಕುಮಾರ್ ಅವರ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, 14 ನೇ ತಾರೀಕಿಗೆ ಬರುವಂತೆ ಇಡಿ ಸಮನ್ಸ್ ಕೊಟ್ಟಿದ್ದರು. ಆದರೆ 14 ಕ್ಕೆ ಬರುವಂತೆ ಸಾಧ್ಯವಿಲ್ಲ ಎಂದು ಹೇಳಿದ್ದೆ, ಹೀಗಾಗಿ ನಾಳೆ ಹೋಗುತ್ತಿದ್ದೇನೆ ಎಂದು ಹೇಳಿದರು.

    ಈ ವಿಚಾರದಲ್ಲಿ 180 ಜನರಿಗೆ ಕರೆದಿದ್ದಾರೆ, ಅದರಲ್ಲಿ ನನ್ನನ್ನೂ ಕರೆದಿದ್ದಾರೆ. ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಬೆಂಗಳೂರಿನಲ್ಲಿ ವಿಚಾರಣೆಗೆ ಬರುತ್ತೇನೆ. ಇಲ್ಲವೇ ಬೆಳಗಾವಿಯಲ್ಲೇ ವಿಚಾರಣೆ ನಡೆಸಿ ಎಂದು ಕೇಳಿಕೊಂಡಿದ್ದೇನೆ. ಆದರೆ ಇನ್ನೂ ಇಡಿಯಿಂದ ಉತ್ತರ ಬಂದಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ವ್ಯವಹಾರಗಳೂ ಇಲ್ಲ. ಹಾಗಿದ್ದರೂ ಯಾಕೆ ಕರೆದಿದ್ದಾರೆ ಎನ್ನುವುದು ವಿಚಾರಣೆಗೆ ಹಾಜರಾದ ಬಳಿಕ ಗೊತ್ತಾಗಬೇಕಷ್ಟೇ ಎಂದು ಹೇಳಿದರು. ಡಿಕೆ ಶಿವಕುಮಾರ್ ಅಕೌಂಟ್ ನಿಂದ ಹೆಬ್ಬಾಳ್ಕರ್‍ ಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಇಡಿಗೆ ದಾಖಲೆ ಲಭ್ಯವಾದ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಿದೆ ಎನ್ನಲಾಗುತ್ತಿದೆ.

  • ಡಿಕೆಶಿ ಆಪ್ತೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಇಡಿಯಿಂದ ಸಮನ್ಸ್

    ಡಿಕೆಶಿ ಆಪ್ತೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಗೆ ಇಡಿಯಿಂದ ಸಮನ್ಸ್

    ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಜಾರಿ ನಿರ್ದೇಶನಾಲಯ ಮೌಖಿಕ ಸಮನ್ಸ್ ನೀಡಿದೆ.

    ಅಕ್ರಮ ಹಣಕಾಸು ವ್ಯವಹಾರದ ಸಂಬಂಧ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಇತ್ತ ಮಾಜಿ ಸಚಿವರ ಪುತ್ರಿ ಐಶ್ವರ್ಯಾ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಈ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಇಡಿ ಅಧಿಕಾರಿಗಳು  ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಇದನ್ನೂ ಓದಿ: ಡಿಕೆಶಿ 317 ಖಾತೆ, 800 ಕೋಟಿ ಆಸ್ತಿ ಪತ್ತೆ

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ನನಗೆ ಇಡಿ ಸಮನ್ಸ್ ನೀಡಿರುವುದು ನಿಜ. ಸಾಕ್ಷಿಯಾಗಿ ಹೇಳಿಕೆ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 14ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ ನನಗೆ ಬರುವುದಕ್ಕೆ ಆಗುವುದಿಲ್ಲ, ಸೆಪ್ಟೆಂಬರ್ 18ರಂದು ವಿಚಾರಣೆಗೆ ಹಾಜರಾಗುತ್ತೇನೆ ಅಂತ ಮನವಿ ಮಾಡಿಕೊಂಡಿದ್ದೆ. ಖಂಡಿತವಾಗಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: 78 ಕೋಟಿ ಹೂಡಿಕೆ – ಐಶ್ವರ್ಯ ಶಿವಕುಮಾರ್‌ಗೆ ಇಡಿ ಸಮನ್ಸ್

    ಏನಿದು ಪ್ರಕರಣ?
    2017ರ ಆಗಸ್ಟ್ 2 ರಂದು ದೆಹಲಿಯ ಡಿಕೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ದಾಖಲೆ ಇಲ್ಲದ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ವಿಚಾರಣೆ ವೇಳೆ ಡಿಕೆಶಿ ಸುಳ್ಳು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಐಟಿ ಅಧಿಕಾರಿಗಳು ಈ ಹಿಂದೆ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಅಪಾರ್ಟ್ ಮೆಂಟ್‍ನಲ್ಲಿ ಪತ್ತೆ ಹಣದ ಜತೆಗೆ ಹವಾಲಾ ಮೂಲಕ ಏಜೆಂಟ್‍ಗಳ ಸಹಾಯದಿಂದ ಡಿಕೆ ಶಿವಕುಮಾರ್ ಕೋಟ್ಯಂತರ ರೂ.ಗಳನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ನೋಟು ನಿಷೇಧಗೊಂಡ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಸಾವಿರಾರು ಕೋಟಿ ರೂ.ಗಳನ್ನು ಬದಲಾಯಿಸಿದ್ದಾರೆ. ಆಪ್ತರ ಮೂಲಕ ಕಪ್ಪುಹಣವನ್ನು ಬಿಳಿಯಾಗಿ ಪರಿವರ್ತಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ವಿದೇಶದಲ್ಲೂ ಡಿಕೆಶಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಸಮನ್ಸ್ ರದ್ದು ಪಡಿಸುವಂತೆ ಕೋರಿ ಡಿಕೆ ಶಿವಕುಮಾರ್ ಹೈ ಕೋರ್ಟ್ ಮೊರೆ ಹೋಗಿದ್ದರು. ಡಿಕೆ ಶಿವಕುಮಾರ್ ಅವರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ ಹಿನ್ನೆಲೆಯಲ್ಲಿ ಇಡಿ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿತ್ತು.

    ವಿಚಾರಣೆಗೆ ಹಾಜರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಸತತ ನಾಲ್ಕು ದಿನಗಳ ಕಾಲ ವಿಚಾರಣೆ ನಡೆಸಿದ್ದ ಇಡಿ, ಸೆಪ್ಟೆಂಬರ್ 3ರಂದು ರಾತ್ರಿ 8.20 ಗಂಟೆಗೆ ಮಾಜಿ ಸಚಿವರನ್ನು ಬಂಧಿಸಿತ್ತು. ಈ ವೇಳೆ ಇಡಿ ಕಚೇರಿಯ ಮುಂದೆ ಹೈಡ್ರಾಮಾ ನಡೆದಿತ್ತು. ಡಿ.ಕೆ.ಶಿವಕುಮಾರ್ ಅವರ ಬಂಧನ ಖಂಡಿಸಿ ರಾಜ್ಯದಲ್ಲಿ ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದ್ದವು.

  • ಐಶ್ವರ್ಯ ಆತ್ಮವಿಶ್ವಾಸದಿಂದ ವಿಚಾರಣೆ ಎದುರಿಸುತ್ತಾರೆ: ಡಿಕೆ ಸುರೇಶ್

    ಐಶ್ವರ್ಯ ಆತ್ಮವಿಶ್ವಾಸದಿಂದ ವಿಚಾರಣೆ ಎದುರಿಸುತ್ತಾರೆ: ಡಿಕೆ ಸುರೇಶ್

    ನವದೆಹಲಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ಇಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ ನಾಯಕರು ನಡೆಸಿದ ಪ್ರತಿಭಟನೆಗೆ ಸಂಸದ ಡಿಕೆ ಸುರೇಶ್ ಅವರು ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ನಾಳೆ ಇಡಿ ವಿಚಾರಣೆಗೆ ಎದುರಿಸಲಿರುವ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಧೈರ್ಯದಿಂದ ವಿಚಾರಣೆ ಎದುರಿಸಲಿದ್ದಾರೆ ಎಂದು ಹೇಳಿದ್ದಾರೆ.

    ನವದೆಹಲಿಯಲ್ಲಿ ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಶಾಂತಿಯಿಂದ ನಡೆದಿದೆ. ಸಮಾಜದ ಸಾಕಷ್ಟು ಗಣ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿ ನಮಗೆ ಬೆಂಬಲ ನೀಡಿದ್ದಾರೆ. ಪರಿಣಾಮ ನಮಗೆ ಮತ್ತಷ್ಟು ಕಾನೂನು ಹೋರಾಟವನ್ನು ಮಾಡುವ ಆತ್ಮಸ್ಥೈರ್ಯ ನೀಡಿದೆ ಎಂದರು. ಇದನ್ನು ಓದಿ: ಪ್ರತಿಭಟನೆಗೆ ಬಿಜೆಪಿ ಒಕ್ಕಲಿಗ ನಾಯಕರು ಬೆಂಬಲ ನೀಡಿದ್ರು: ಕರವೇ ನಾರಾಯಣಗೌಡ

    ಇದೇ ವೇಳೆ ನಾಳೆ ವಿಚಾರಣೆಗೆ ಎದುರಿಸಲಿರುವ ಐಶ್ವರ್ಯ ಅವರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿಗೆ ತಲೆಬಾಗಿ ವಿಚಾರಣೆ ಎದುರಿಸಬೇಕು. ನಾನೇ ವಿಚಾರಣೆ ಎದುರಿಸುತ್ತೇನೆ ಎಂದು ಐಶ್ವರ್ಯ ಹೇಳಿದ್ದು, ತುಂಬಾ ಆತ್ಮವಿಶ್ವಾಸದಲ್ಲಿದ್ದಾಳೆ. ಐಶ್ವರ್ಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ನಮ್ಮ ಕುಟುಂಬದ ಯಾರೇ ಆದ್ರು ವಿಚಾರಣೆ ಎದುರಿಸುತ್ತೇವೆ. ಡಿಕೆ ಶಿವಕುಮಾರ್ ಅವರು ಐಶ್ವರ್ಯ ಅವರಿಗೆ ಏಕೆ ಬರುತ್ತಿಯಾ? ಬರಬೇಡ ಎಂದು ಹೇಳಿದ್ದರು. ಆತ್ಮವಿಶ್ವಾಸದಿಂದ ಇರುವ ಅವರು ತನ್ನ ಮೇಲಿನ ವಿಚಾರಣೆ ಎದುರಿಸುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ಅವರ ಹೆಸರಿನಲ್ಲಿ ಇರುವ ಆಸ್ತಿಯ ಮಾಹಿತಿಯನ್ನು ಪ್ರತಿ ಚುನಾವಣಾ ಸಂದರ್ಭದಲ್ಲಿ ಲೋಕಾಯುಕ್ತ ಹಾಗೂ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ ಎಂದರು. ಇದನ್ನು ಓದಿ: ಡಿಕೆಶಿ ಎರಡನೇ ಸಿದ್ಧಾರ್ಥ್ ಆಗಬಾರದು: ನಂಜಾವಧೂತ ಸ್ವಾಮೀಜಿ

    ಇಂದು ನಡೆದ ಪ್ರತಿಭಟನೆಯ ಬಗ್ಗೆ ಡಿಕೆಶಿವಕುಮಾರ್ ಆಂತಕಗೊಂಡಿದ್ದರು. ದೊಡ್ಡ ಮಟ್ಟದಲ್ಲಿ ನಡೆದ ಪ್ರತಿಭಟನೆಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಎಂಬ ಆತಂಕ ಅವರಿಗೆ ಇತ್ತು. ಆದ್ದರಿಂದಲೇ ನಿನ್ನೆ ಶಾಂತಿಯುತ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಇಂದಿನ ಶಾಂತಿಯುತವಾಗಿ ನಡೆದ ಕಾರಣ ಡಿಕೆಶಿ ಅವರಿಗೆ ಖುಷಿಯಾಗಿದೆ. ಅವರು ಆರೋಗ್ಯವಾಗಿದ್ದು, ಇಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಜನರ ಬೆಂಬಲ ನೋಡಿ ಅವರ ಆತ್ಮ ವಿಶ್ವಾಸ ಹೆಚ್ಚಿದೆ. ಮುಂದಿನ ಕಾನೂನು ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು. ಇದನ್ನು ಓದಿ: ಪ್ರತಿಭಟನೆಗೆ ನನಗೆ ಆಹ್ವಾನ ನೀಡಿಲ್ಲ: ಎಚ್‍.ಡಿ ಕುಮಾರಸ್ವಾಮಿ