Tag: summer season

  • ಹಾವುಗಳು ಕಾಣಿಸಿದರೆ ಗಾಬರಿಗೊಳ್ಳದಿರಿ, ಬಡಿದು ಕೊಲ್ಲದಿರಿ – ಉರಗ ರಕ್ಷಣೆಗೆ ಬಿಬಿಎಂಪಿ ಸಹಾಯವಾಣಿ ಬಿಡುಗಡೆ

    ಹಾವುಗಳು ಕಾಣಿಸಿದರೆ ಗಾಬರಿಗೊಳ್ಳದಿರಿ, ಬಡಿದು ಕೊಲ್ಲದಿರಿ – ಉರಗ ರಕ್ಷಣೆಗೆ ಬಿಬಿಎಂಪಿ ಸಹಾಯವಾಣಿ ಬಿಡುಗಡೆ

    ಬೆಂಗಳೂರು: ಬೇಸಿಗೆ (Summer Season) ಬಂತೆಂದರೆ ಬಿಸಿಲಿನ ತಾಪದಿಂದ ಪಾರಾಗಲು ತಣ್ಣನೆಯ ವಾತಾವರಣ ಅರಸಿ ಜನವಸತಿ ಪ್ರದೇಶಗಳತ್ತ ಹಾವುಗಳು (Snakes) ಬರುವುದು ಸಹಜ. ತಂಪು ವಾತಾವರಣ ಹರಸುತ್ತಾ ದೇಹವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದ್ದರಿಂದಲೇ ಬೇಸಿಗೆ ಸಮಯದಲ್ಲಿ ಸಂದುಗಳನ್ನ ಹುಡುಕುತ್ತವೆ ಇದೇ ವೇಳೆ ಮನೆಗಳಿಗೂ ಬರಬಹುದು. ಇದರಿಂದ ಆತಂಕಗೊಳ್ಳುವ ಕೆಲವರು ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ, ಇನ್ನೂ ಕೆಲವರು ಉರಗ ರಕ್ಷಕರಿಗೆ ತಿಳಿಸಿ ರಕ್ಷಣೆ ಮಾಡುತ್ತಾರೆ.

    ಇದೀಗ‌ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೂ ಹಾವುಗಳ ರಕ್ಷಣೆಗೆ ಮುಂದಾಗಿದೆ. ಮನೆಯ ಸುತ್ತಮುತ್ತ ಹಾವುಗಳು ಕಂಡರೆ ಅವುಗಳನ್ನು ರಕ್ಷಿಸಲು ಕೂಡಲೇ ಮಾಹಿತಿ ನೀಡುವಂತೆ ಸಹಾಯವಾಣಿ ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದೆ.

    ಮೇ ತಿಂಗಳು ಉರಗಗಳ ಸಂತಾನೋತ್ಪತ್ತಿ ಸಮಯ. ಮುಖ್ಯವಾಗಿ ಸರ್ಪಗಳ ಮೊಟ್ಟೆಗಳು ಒಡೆದು ಮರಿಗಳು ಹೊರಬರುವ ಕಾಲವಾಗಿದೆ. ಈ ಸಮಯದಲ್ಲಿ ಹೆಚ್ಚು ಹಾವುಗಳು ಕಾಣಸಿಗುತ್ತದೆ. ಗಾಬರಿಗೊಳ್ಳದಿರಿ ಹಾಗೂ ಅದನ್ನು ಬಡಿದು ಕೊಲ್ಲದಿರಿ. ಹಾವುಗಳ ರಕ್ಷಣೆಗಾಗಿ ಬಿಬಿಎಂಪಿ ಸಹಾಯವಾಣಿ (BBMP Helpline) 9902794711 ಗೆ ಕರೆ ಮಾಡಿ ಎಂದು ತಿಳಿಸಿದೆ.

    ಹಾವುಗಳನ್ನು ಹಿಡಿಯುವುದು, ಕೊಲ್ಲುವುದು ಶಿಕ್ಷಾರ್ಹ ಅಪರಾಧ ಏಕೆ?
    1972ರ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಹಾವುಗಳನ್ನು ಕೊಲ್ಲುವುದು, ಸ್ಥಳಾಂತರ ಮಾಡುವುದು, ಓಡಿಸುವುದು, ಸೆರೆ ಹಿಡಿಯುವುದು, ಬಲೆಗೆ ಬೀಳಿಸುವುದು, ದೇಹದ ಅಂಗಗಳನ್ನು ತೆಗೆಯುವುದು, ಮೊಟ್ಟೆಯ ಗೂಡು ನಾಶ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನೂ ಓದಿ: ಸ್ಟೆಪ್‌ಲ್ಯಾಡರ್ ಎಡವಟ್ಟು- ವಿಮಾನದಿಂದ ಇಳಿಯಲು ಯತ್ನಿಸಿ ಕೆಳಗೆ ಬಿದ್ದ ಸಿಬ್ಬಂದಿ ವೀಡಿಯೋ ವೈರಲ್‌

    ಪ್ರಮಾಣೀಕೃತ ಪರವಾನಗಿ ಪಡೆದ ಪರಿಣಿತರು, ಉರಗ ತಜ್ಞರು ಮಾತ್ರ ಹಾವು ಹಿಡಿಯಲು ಅರ್ಹರು. ನಿರ್ವಹಣೆ ಗೊತ್ತಿಲ್ಲದವರು ಹಿಡಿಯುವುದರಿಂದ ಅಪಾಯ ಉಂಟಾಗುವ ಸಾಧ್ಯತೆಯೇ ಹೆಚ್ಚು. ಮನುಷ್ಯ-ಹಾವುಗಳ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಅರಿವು ಕಾರ‍್ಯಕ್ರಮ ಜಾರಿಗೆ ತಂದಿದೆ. ಇದನ್ನೂ ಓದಿ: ಉಚಿತ ಪಡಿತರ ಜನರ ತೆರಿಗೆ ಹಣದಿಂದ ನೀಡಲಾಗುತ್ತಿದೆ, ದಯೆ ರೂಪದಲ್ಲಿ ಬಿಂಬಿಸುವ ಅಗತ್ಯವಿಲ್ಲ: ಮಾಯಾವತಿ ಟೀಕೆ

  • ಬಿಸಿಲ ಬೇಗೆಗೆ ಕಂಗೆಟ್ಟ ಕರುನಾಡಿಗರು- ರಾಜ್ಯಕ್ಕೆ ಮತ್ತೆ ಹೀಟ್ ವೇವ್ ಆತಂಕ

    ಬಿಸಿಲ ಬೇಗೆಗೆ ಕಂಗೆಟ್ಟ ಕರುನಾಡಿಗರು- ರಾಜ್ಯಕ್ಕೆ ಮತ್ತೆ ಹೀಟ್ ವೇವ್ ಆತಂಕ

    – ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಇರಲಿ ಎಚ್ಚರ

    ಬೆಂಗಳೂರು: ರಾಜ್ಯದಲ್ಲಿ ದಿನಕಳೆದಂತೆ ಬಿಸಿಲಿನ ಬೇಗೆ ಹೆಚ್ಚಾಗ್ತಾ ಇದೆ. ಈ ನಡುವೆ ಹೀಟ್ ವೇವ್ (Heat Wave) ಆತಂಕ ಕೂಡ ಹೆಚ್ಚಾಗಿದ್ದು, ಹವಾಮಾನದ ತಾಪಮಾನದ ಬಗ್ಗೆ ಕಡ್ಡಾಯ ಗಮನ ಹರಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

    ಹೌದು. ಬೇಸಿಗೆ ಬಂದಾಗಿದೆ. ಜೊತೆಗೆ ಸುಡುಬಿಸಿಲಿನ ಅಬ್ಬರ ಕೂಡ ಜೋರಾಗಿಯೇ ಇದೆ. ಈ ನಡುವೆ ರಾಜ್ಯದಲ್ಲಿ ಹೀಟ್ ವೇವ್ ಆತಂಕ ಶುರುವಾಗಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.

    ಗರಿಷ್ಠ ತಾಪಮಾನವು ಬಯಲು ಪ್ರದೇಶಗಳಲ್ಲಿ ಕನಿಷ್ಠ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವನ್ನು ತಲುಪಿದರೆ ಆ ಪ್ರದೇಶವನ್ನು ಶಾಖದ ಅಲೆಯ ಹಿಡಿತ ಅಥವಾ ಹೀಟ್ ವೇವ್ ಎಂದು ಕರೆಯಲಾಗುತ್ತೆ. ಗರಿಷ್ಠ ತಾಪಮಾನ ನಿರ್ಗಮನವು 4.5 ಮತ್ತು 6 ಡಿಗ್ರಿಗಳ ನಡುವೆ ಇದ್ದಾಗ, ಭಾರತೀಯ ಹವಾಮಾನ ಇಲಾಖೆ ಶಾಖದ ಅಲೆಯನ್ನು ಘೋಷಿಸುತ್ತದೆ. ಇದನ್ನೂ ಓದಿ: ಅಬ್ಬಾ..! ಇದೆಂಥಾ ಮೀನು? – ಡೆಡ್ಲಿ ಫಿಶ್‌ ಸೇವಿಸಿ ಮಹಿಳೆ ಸಾವು; ಕೋಮಾದಲ್ಲಿ ಪತಿ

    ಸದ್ಯ ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣದ ಜಿಲ್ಲೆಗಳಲ್ಲೂ ತಾಪಮಾನ ಹೆಚ್ಚಾಗ್ತಿರೋದು ಆತಂಕ ಹೆಚ್ಚಿಸಿದೆ. ಉತ್ತರ ಕರ್ನಾಟಕದಲ್ಲಿ ಸದ್ಯ ತಾಪಮಾನದಲ್ಲಿ 38-39ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್, ದಾಖಲಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್‍ಗೆ ಏರಿದೆ. ಜೂನ್‍ವರೆಗೆ ಬಿರುಬಿಸಿಲು ಕಾಡಲಿದೆ ಎಂದು ಹವಾಮಾನ ಇಲಾಖೆ (Weather Department) ಮುನ್ಸೂಚನೆ ನೀಡಿದೆ.

    ಆರೋಗ್ಯದ ಬಗ್ಗೆ ಇರಲಿ ಎಚ್ಚರಿಕೆ: ಹೊರಗೆ ಹೋಗುವಾಗ ಸನ್‍ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ದೇಹಕ್ಕೆ ತಂಪು ನೀಡುವ ಹತ್ತಿ ಹಾಗೂ ಸಡಿಲ ಬಟ್ಟೆ ಧರಿಸಿ. ನೀರು, ನೈಸರ್ಗಿಕ ಪಾನೀಯ ಸೇರಿ ಹೆಚ್ಚು ದ್ರವಾಹಾರ ಸೇವಿಸಿ. ವಾಂತಿ-ಭೇದಿಯಾದರೆ ಜ್ಯೂಸ್, ಎಳನೀರು, ಓಆರ್‍ಎಸ್ ಸೇವಿಸಿ. ಮಧುಮೇಹಿಗಳು ಮಜ್ಜಿಗೆ, ನೀರು, ಗಂಜಿ ಸೇವಿಸುವುದು ಉತ್ತಮ. ಮಕ್ಕಳು, ಗರ್ಭಿಣಿಯರು, ವೃದ್ಧರು ಅನಗತ್ಯ ಹೊರ ಹೋಗಬೇಡಿ. ಸೊಳ್ಳೆಗಳು ಕಚ್ಚದಂತೆ ಎಚ್ಚರವಹಿಸಿ.. ಮನೆ, ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಿ.

    ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವುದು, ವಾತಾವರಣದಲ್ಲಿ ತೇವಾಂಶ ಇಲ್ಲದಿರುವ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದೆ. ಸಂಜೆ 5 ಗಂಟೆವರೆಗೆ ಬಿಸಿಲಿನ ಪ್ರಖರತೆ ಕಂಡು ಬರುತ್ತಿದೆ. ಒಟ್ಟಾರೆ ಬಿಸಿಲು ಹೆಚ್ಚಾಗುತ್ತಿದೆ. ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಅಗತ್ಯ ಎಚ್ಚರಿಕೆ ವಹಿಸಿದ್ರೆ ಸೂಕ್ತ.

  • ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

    ರಾಜ್ಯದಲ್ಲಿ ಹೆಚ್ಚಾದ ಬಿಸಿಗಾಳಿ – ಬೇಸಿಗೆ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ

    ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದಾದ್ಯಂತ ಬಿಸಿಗಾಳಿ ಹೆಚ್ಚಾಗಿದ್ದು, ಬೇಸಿಗೆಕಾಲದ (Summer Season) ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

    ಈ ಬಾರಿ ಅಧಿಕ ಉಷ್ಣಾಂಶವಿದ್ದು, ಇದರಿಂದಾಗಿ ನಾನಾ ರೀತಿಯ ಅನಾರೋಗ್ಯ ಸಮಸ್ಯೆ ಕಾಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುಬೇಕು ಎಂದು ಹೇಳಿದೆ. ಜೊತೆಗೆ ಬೇಸಿಗೆ ಗೈಡ್‌ಲೈನ್ಸ್ ಅನ್ನು ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿದೆ.

    ಆರೋಗ್ಯ ಇಲಾಖೆಯ ಗೈಡ್‌ಲೈನ್ಸ್‌ ಪ್ರಕಾರ, ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯಬೇಕು. ಪ್ರಯಾಣದ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಕಾಟನ್ ಬಟ್ಟೆ ಧರಿಸುವುದು ಉತ್ತಮವಾಗಿದೆ. ಮಧ್ಯಾಹ್ನ 12 ರಿಂದ 3ರ ವರೆಗಿನ ಬಿಸಿಲಿಗೆ ಹೊರಗಡೆ ಓಡಾಡಬಾರದು. ಇದನ್ನೂ ಓದಿ: ಬರ್ಮುಡಾ ಧರಿಸಿ ರೇಣುಕಾಚಾರ್ಯ ಜಯಂತಿ ಆಚರಿಸಿದ ಸಿಬ್ಬಂದಿ – ಸ್ವಾಮೀಜಿ ಕಾಲಿಗೆ ಬಿದ್ದು ತಹಶೀಲ್ದಾರ್ ಕ್ಷಮೆ

    weather

    ಸಾಧ್ಯವಾದಷ್ಟು ಮನೆಯ ಕಿಟಕಿಗಳನ್ನು ಓಪನ್ ಮಾಡಿಡಿ. ಅಡುಗೆ ಕೋಣೆಗೆ ವೆಂಟಿಲೇಷನ್ ಖಚಿತಪಡಿಸಿಕೊಳ್ಳಿ. ಹೊರಗಡೆ ಕೆಲಸ ಮಾಡುವವರು ಪ್ರತಿ 20 ನಿಮಿಷಕ್ಕೊಮ್ಮೆ ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯಬೇಕು. ಮಕ್ಕಳು, ವೃದ್ಧರು, ಸಾಕು ಪ್ರಾಣಿಗಳನ್ನು ಕಾರಿನ ಒಳಗೆ ಕೂರಿಸಿ ಹೊರಗಿಂದ ಲಾಕ್ ಮಾಡಬಾರದು. ಟೀ, ಕಾಫಿ, ಮದ್ಯ ಸೇವಿಸುವುದನ್ನು ಅವಾಯ್ಡ್ ಮಾಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವಳು ಮತ್ತೊಬ್ಬನೊಂದಿಗೆ ಮದುವೆಯಾಗಿ ಚೆನ್ನಾಗಿರುವುದನ್ನು ಸಹಿಸದೇ ಗೃಹಿಣಿಯ ಕೊಲೆಗೈದ ಪಾಗಲ್ ಪ್ರೇಮಿ

  • ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೇಸಿಗೆ ಕಾಲ ಆರಂಭವಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲು ಮತ್ತು ಬೆವರು ಇವೆರಡು ತ್ವಚೆಯನ್ನು ಹಾಳು ಮಾಡುತ್ತವೆ. ಇದರ ಜೊತೆಗೆ ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡಿಕೊಳ್ಳುವುದು ಸಹ ತುಂಬಾ ಮುಖ್ಯವಾಗಿದೆ. ಹೀಗಾಗಿ ಬಿಸಿಲಿನಲ್ಲಿ ತ್ವಚೆಯನ್ನು (Skin Care) ಆರೈಕೆಗೆ ಕೆಲವೊಂದು ಸಲಹೆಗಳನ್ನು ಅನುಸರಿಸಿ.

    ದಿನಕ್ಕೆ ಕನಿಷ್ಠ 2 ಬಾರಿ ಮುಖ ಸ್ವಚ್ಛಗೊಳಿಸಿ: ಬೇಸಿಗೆಕಾಲದಲ್ಲಿ ಬಿಸಿಲಿನಿಂದಾಗಿ ಹೆಚ್ಚಾಗಿ ಬೆವರುತ್ತೇವೆ. ಅಷ್ಟೇ ಅಲ್ಲದೇ ಚರ್ಮದಲ್ಲಿಯೂ ಹೆಚ್ಚು ಎಣ್ಣೆ ಅಂಶ ಕಾಣಿಸುತ್ತದೆ. ಇದರಿಂದಾಗಿ ದಿನಕ್ಕೆ 2 ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು. ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯುವ ಮೊದಲು ಒಂದು ನಿಮಿಷಗಳ ಕಾಲ ಮುಖದ ಮೇಲೆ ಮೃದುವಾದ ಮಸಾಜ್ ಮಾಡಿ.

    ಸನ್‍ಸ್ಕ್ರೀನ್ ಹೆಚ್ಚು ಬಳಸಿ: ಬಿಸಿಲಿನ ಕಿರಣದಿಂದಾಗಿ ಚರ್ಮವು ಸುಡುವುದಷ್ಟೇ ಅಂದ ಕೆಡುತ್ತದೆ. ಹೀಗಾಗಿ ನೀವು ಹೊರಗಡೆ ಹೋಗುವ ಮುನ್ನ ಸನ್‍ಸ್ಕ್ರೀನ್‍ಗಳನ್ನು ಬಳಸುವುದು ಅಗತ್ಯವಾಗಿದೆ. ಇದರಿಂದಾಗಿ ತಕ್ಕಮಟ್ಟಿಗೆ ನಿಮ್ಮ ಚರ್ಮದ ತ್ವಚೆಯು ಕೆಡದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ.

    ಅಲೋವೆರಾ (Elovera): ಲೋಳೆರಸ ಬಿಸಿಲಿನಿಂದ ಸುಟ್ಟ ಗಾಯಕ್ಕೆ ಶಮನ ನೀಡುವುದಲ್ಲದೆ, ಚರ್ಮದಲ್ಲಿ ತೇವಾಂಶವನ್ನು ಧನಾತ್ಮಕವಾಗಿ ಕಾಪಾಡುತ್ತದೆ. ತಾಜಾ ಅಲೋವೆರಾ ತೆಗೆದು ಅದನ್ನು ಸಂಪೂರ್ಣವಾಗಿ ಮುಖಕ್ಕೆ ಮಸಾಜ್ ಮಾಡಿ. ಅಲೋವೆರಾ ಲೋಳೆಯನ್ನು ಐಸ್ ಟ್ರೇಗೆ ಹಾಕಿಟ್ಟು ಬಳಿಕ ಅದನ್ನು ಮುಖಕ್ಕೆ ಉಜ್ಜಿಕೊಳ್ಳಿ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

    ಸೌತೆಕಾಯಿ: ಸೌತೆಕಾಯಿ (Cucumber) ಬೇಸಿಗೆಯಲ್ಲಿ ಚರ್ಮಕ್ಕೆ ಹಿತ ನೀಡುವುದಲ್ಲದೆ, ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ದಿನನಿತ್ಯವು ಸೌತೆಕಾಯಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಬಿಸಿಲಿನಿಂದಾಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಹಚ್ಚಿದರೆ ತಂಪಾಗುತ್ತದೆ. ಜೊತೆಗೆ ಹೊಳಪು ಬರುತ್ತದೆ. ಇದನ್ನೂ ಓದಿ: ಮಧುಮೇಹಿಗಳಿಗೆ ಆಹಾರದ ಹೊರತಾಗಿ ಸಕ್ಕರೆ ಮಟ್ಟ ನಿಯಂತ್ರಿಸಲು ಇಲ್ಲಿದೆ ಕೆಲವು ಸಲಹೆ

    ಮಲಗುವ ಮುನ್ನ ಚರ್ಮಕ್ಕೆ ಆರೈಕೆ ಹೀಗಿರಲಿ: ಬೇಸಿಗೆಯಲ್ಲಿ (Summer) ರಾತ್ರಿ ಸಮಯದಲ್ಲಿ ಚರ್ಮದ ಆರೈಕೆಯನ್ನು ಕಡೆಗಣಿಸುವಂತಿಲ್ಲ. ಮಲಗುವ ಮುನ್ನ ಕೊಬ್ಬರಿ ಎಣ್ಣೆ ಹಾಗೂ ನೈಟ್ ಕ್ರೀಮ್‍ಗಳನ್ನು ಬಳಸಿ. ಇದರಿಂದಾಗಿ ಚರ್ಮದದಲ್ಲಿ ಉಂಟಾದ ಡ್ಯಾಮೇಜ್‍ಗಳನ್ನು ಸರಿಪಡಿಸಬಹುದಾಗಿದೆ. ಇದನ್ನೂ ಓದಿ: ನೀವು ವೈನ್‌ ಕುಡಿಯುತ್ತೀರಾ? ವೈನ್‌ ಸೇವಿಸಿದ್ರೆ ಈ 6 ಆರೋಗ್ಯ ಪ್ರಯೋಜನ ಗ್ಯಾರಂಟಿ

  • ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಬೇಸಿಗೆ ಮುನ್ನವೇ ಜೀವಜಲಕ್ಕಾಗಿ ಹಾಹಾಕಾರ

    ಕೊಪ್ಪಳ: ಬೇಸಿಗೆ ಕಾಲದ ಮುನ್ನವೇ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಕಳೆದ 15 ದಿನಗಳಿಂದ ನೀರು ಬಾರದ ಕಾರಣ ಗ್ರಾಮಸ್ಥರು ಹೊಲದಲ್ಲಿರುವ ಕೃಷಿಹೊಂಡಗಳ ನೀರನ್ನು ಕುಡಿದು ಬದುಕು ಸಾಗಿಸುತ್ತಿದ್ದಾರೆ.

    ಜಿಲ್ಲೆಯ ಕುಕನೂರು ತಾಲೂಕಿನ ಭಟಪ್ಪನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಬೋರ್ ವೇಲ್ ನೀರು ಸ್ಥಗಿತಗೊಂಡ ಕಾರಣ, ಗ್ರಾಮಸ್ಥರು ದೂರದಲ್ಲಿರುವ ಕೃಷಿ ಹೊಂಡಗಳಿಗೆ ಹೋಗಿ ನೀರು ತರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಂಡಲಗಿರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಸುಮಾರು 300 ಕುಟುಂಬಗಳಿವೆ. ಜನತೆಗೆ ನೀರು ಪೂರೈಕೆ ಮಾಡಬೇಕಾದ ಗ್ರಾ.ಪಂಯವರು 15 ದಿನಗಳಾದರೂ ಮಷಿನ್ ದುರಸ್ತಿಗೊಳಿಸಿಲ್ಲ. ಪರಿಣಾಮ ಈ ಗ್ರಾಮಸ್ಥರು ಬೆಳಗ್ಗೆಯಿಂದ ಸಂಜೆ ತನಕ ಹೊಲದಲ್ಲಿ ನಿರ್ಮಿಸಿರುವ ರೈತರ ಕೃಷಿಹೊಂಡಗಳನ್ನು ಹುಡುಕಿಕೊಂಡು ಹೋಗಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಮೈಲುಗಟ್ಟಲೇ ನಡೆದು ಹೋದರೆ ಮಾತ್ರ ನೀರು ಗ್ರಾಮಕ್ಕೆ ಪೂರೈಕೆಯಾಗುತ್ತಿದ್ದ ಪಂಪ್‍ಸೆಟ್ ಕಳೆದ 15 ದಿನಗಳ ಹಿಂದೆ ಕೈಕೊಟ್ಟಿದೆ. ಇಂದು ರಿಪೇರಿ ಮಾಡಿಸುತ್ತಾರೆ. ನಾಳೆ ರಿಪೇರಿ ಮಾಡಿಸುತ್ತಾರೆ ಎಂದು ಗ್ರಾಮಸ್ಥರು ದೊಡ್ಡ ಮನಸ್ಸು ಮಾಡಿ, ಮೈಲುಗಟ್ಟಲೇ ನಡೆದುಕೊಂಡು ಹೋಗಿ ಕೃಷಿ ಹೊಂಡಗಳಲ್ಲಿ ಸಂಗ್ರಹವಾಗಿರುವ ಮಳೆ ನೀರನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಗ್ರಾ.ಪಂ.ಯವರು ಮಾತ್ರ ಇದುವರೆಗೂ ಮಷಿನ್ ರಿಪೇರಿ ಮಾಡಿಸಿಲ್ಲ ಎಂದು ಹೇಳಲಾಗುತ್ತಿದೆ. ಗ್ರಾಮದ ಮತ್ತೊಬ್ಬರು ಹೇಳುವ ಪ್ರಕಾರ, ಮಷಿನ್ ರಿಪೇರಿ ಮಾಡಿಸಿದ್ದಾರೆ. ಆದರೆ ಪೈಪ್‍ಲೈನ್ ಒಡೆದು ನೀರು ಸೋರಿಕೆಯಾಗುತ್ತಿದೆ. ಹೀಗಾಗಿ ನಮ್ಮ ಊರಿಗೆ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.

    ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ ನೀರು ತರಬೇಕು. ದೂರದಲ್ಲಿರುವ ಕೃಷಿಹೊಂಡಗಳಿಗೆ ಸುಡು ಬಿಸಿಲಿನಲ್ಲಿ ನಡೆದುಕೊಂಡು ಹೋಗಿ ತಲೆ ಮೇಲೆ ಕೊಡ ಹೊತ್ತುಕೊಂಡು ವಿದ್ಯಾರ್ಥಿಗಳು ನೀರು ತರುತ್ತಿರುವ ದೃಶ್ಯವಂತೂ ಪ್ರಜ್ಞಾವಂತರ ಕರಳು ಕಿತ್ತು ಬರುವುಂತಿದೆ. ತುಂಬಿದ ಕೊಡಗಳನ್ನು ಹೊತ್ತುಕೊಂಡು ಪುಟ್ಟಪುಟ್ಟ ಮಕ್ಕಳು ನಡುರಸ್ತೆಯಲ್ಲಿ ಭಾರವನ್ನು ತಾಳದೇ ಮುಖ ಕಿವಿಚಿಕೊಂಡು ಮನೆ ಕಡೆ ದಾವಿಸುತ್ತಿರುವಾಗ, ಜನಪ್ರತಿನಿಧಿಗಳ ಹಾಗೂ ಗ್ರಾ.ಪಂ. ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

    ನೀರಿನ ರಾಜಕೀಯಕ್ಕೆ ಹೆಸರಾದ ತಾಲೂಕು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಯಲಬುರ್ಗಾ ವಿಧಾನಸಭಾ ಕ್ಷೇತ್ರವು ನೀರು ಮತ್ತು ನೀರಾವರಿ ರಾಜಕೀಯಕ್ಕೆ ಹೆಸರಾಗಿದೆ. ಇಲ್ಲಿನ ರಾಜಕಾರಣಿಗಳು ಪ್ರತಿ ಚುನಾವಣೆಯಲ್ಲಿ ನೀರಾವರಿ ಮತ್ತು ಕುಡಿಯುವ ನೀರಿನ ಅಸ್ತಂಗಳನ್ನು ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರುತ್ತಾರೆ. ಆದರೆ ಈ ಕ್ಷೇತ್ರದ ಜನರಿಗೆ ಮಾತ್ರ ಶಾಶ್ವತವಾಗಿ ನೀರಾವರಿ ಸೌಲಭ್ಯವೂ ಕಲ್ಪಿಸಿಲ್ಲ. ಶಾಶ್ವತವಾಗಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಿಲ್ಲ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

    ಭರವಸೆಯಲ್ಲಿಯೇ ಬೆಂದು ಹೋಗುತ್ತಿರುವ ಜನ ಗ್ರಾ.ಪಂಯಿಂದ ಹಿಡಿದು ಜಿಲ್ಲಾ ಉಸ್ತುವಾರಿ ಸಚಿವರವರೆಗೂ ಜಿಲ್ಲೆಯ ಜನತೆಗೆ ಪ್ರತಿ ವರ್ಷ ಭರವಸೆಗಳನ್ನು ಕೊಟ್ಟು, ನಿಮ್ಮೂರಿನ ರೈತರಿಗೆ ನೀರಿವಾರಿ ಸೌಲಭ್ಯ ಕಲ್ಪಿಸ್ತಿವಿ. ನಿಮ್ಮೂರಿಗೆ ಶಾಶ್ವತವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುತ್ತೇವೆ. ಹಾಗೇ ಹೀಗೇ ಎಂದು ಕೇವಲ ಭರವಸೆಗಳನ್ನೇ ಕೊಟ್ಟು ಈ ಭಾಗದ ಜನರನ್ನು ಭರವಸೆಯಲ್ಲಿಯೇ ಬೆಂದು ಹೋಗುವುಂತೆ ಮಾಡಿದ್ದಾರೆ. ತುಂಗಭದ್ರಾ ಹಿನ್ನೀರಿನಿಂದ ಬನ್ನಿಕೊಪ್ಪ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ. ನಾರಾಯಣಪುರ ಜಲಾಶಯದಿಂದ ಈ ಗ್ರಾಮಗಳಿಗೆ ತಲುಪಬೇಕಾಗಿದ್ದ 762 ಕೋಟಿ ರೂ. ವೆಚ್ಚದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಲ್ಲದೇ ಈ ಗ್ರಾಮದಲ್ಲಿ ಅಳವಡಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗಿ ವರ್ಷ ಕಳೆದರೂ ಇದುವರೆಗೂ ಈ ಘಟಕವನ್ನು ರಿಪೇರಿ ಮಾಡಿಲ್ಲ ಎಂದು ಗ್ರಾಮಸ್ಥರಾದ ಮಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್ನಾದರೂ ಸಂಬಂಧ ಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಕಾರಣ ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಯಿಂದ ಕೃಷಿ ಹೊಂಡಗಳಲ್ಲಿ ಸಂಗ್ರಹಗೊಂಡ ನೀರು ಕುಡಿಯಲು ಯೋಗ್ಯವಾಗಿರುವುದಿಲ್ಲ. 15 ದಿನಗಳಿಂದ ಇದೇ ನೀರನ್ನು ಕುಡಿಯುತ್ತಿರುವ ಈ ಗ್ರಾಮಸ್ಥರು, ಆರೋಗ್ಯದಲ್ಲಿ ಏರುಪೇರಾದರೆ ಜವಾಬ್ದಾರರು ಯಾರು ಎನ್ನುವ ಪ್ರಶ್ನೆಗೆ ಕೇವಲ ಗ್ರಾ.ಪಂ. ಮಾತ್ರವಲ್ಲ ಇಡೀ ಜಿಲ್ಲಾಡಳಿತವೇ ಉತ್ತರಿಸಬೇಕಾಗುತ್ತದೆ.

  • ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವನೆಯಿಂದ ನಮ್ಮ ದೇಹ ತಣ್ಣಗೆ ಇರುತ್ತದೆ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಇದು ಸುಳ್ಳು. ಏಕೆಂದರೆ ಈ ಪದಾರ್ಥಗಳು ಸೇವಿಸುವುದರಿಂದ ಇನ್ನಷ್ಟು ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

    ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    ಮೆಣಸಿನಕಾಯಿಯಿಂದ ಆಗುವ ಲಾಭಗಳು:
    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant) ಜೊತೆಗೆ ಡೈಯಟ್ರಿ ಫೈಬರ್(Dietary fiber) ಅಂಶಗಳು ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತ ಪ್ರಮಾಣದ ಹಸಿಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ರೋಗದಿಂದ ದೂರ ಇರಬಹುದಾಗಿದೆ.

    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ(Antibacterial) ಅಂಶ ಕೂಡ ಇರುತ್ತದೆ. ಹಸಿಮೆಣಸಿನಕಾಯಿ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ಹೋಗುತ್ತದೆ. ಇದರಿಂದ ಇಮ್ಯೂನ್ಯೂ ಸಿಸ್ಟಮ್(Immune System) ಶಕ್ತಿಯುತವಾಗುತ್ತದೆ ಹಾಗೂ ಅಲರ್ಜಿ, ಸೋಂಕಿನಿಂದ ರಕ್ಷಿಸುತ್ತದೆ.

    ಸಂಶೋಧನೆ ಪ್ರಕಾರ ಹಸಿಮೆಣಸಿನಕಾಯಿ ಸೇವನೆಯಿಂದ ರಕ್ತದಲ್ಲಿ ಇರುವ ಶುಗರ್ ನಾರ್ಮಲ್ ಆಗುತ್ತದೆ. ಡಯಾಬಿಟಿಸ್(Diabetes) ರೋಗ ಇರುವವರು ಹಸಿ ಮೆಣಸಿನಕಾಯಿಯನ್ನು ಮಿತಿಯಲ್ಲಿ ಸೇವಿಸಬೇಕು. ಮೆಣಸಿನಕಾಯಿ ಸೇವನೆಯಿಂದ ವಿಟಮಿನ್-ಎ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.

  • ಬೆಂಗ್ಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ – ತಲೆ ಎತ್ತಿತು ಟ್ಯಾಂಕರ್ ನೀರಿನ ಮಾಫಿಯಾ

    ಬೆಂಗ್ಳೂರಲ್ಲಿ ಶುರುವಾಯ್ತು ನೀರಿಗೆ ಹಾಹಾಕಾರ – ತಲೆ ಎತ್ತಿತು ಟ್ಯಾಂಕರ್ ನೀರಿನ ಮಾಫಿಯಾ

    ಬೆಂಗಳೂರು: ನಗರದಲ್ಲಿ ಈ ಬಾರಿ ನೆತ್ತಿ ಸುಡುವ ಬಿಸಿಲಿನ ಜೊತೆಗೆ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಈ ಹಿನ್ನೆಲೆ ನಗರದಲ್ಲಿ ಟ್ಯಾಂಕರ್ ನೀರಿನ ದಂಧೆ ಜೋರಾಗಿದೆ. ಒಂದು ಲೋಡ್ ಟ್ಯಾಂಕರ್ ನೀರಿನ ದರ ಕೇಳಿದ್ರೆ ನೀವೂ ಅಚ್ಚರಿ ಪಡುತ್ತೀರಿ. ಟ್ಯಾಂಕರ್ ನೀರಿನ ದಂಧೆಯನ್ನು ಪಬ್ಲಿಕ್ ಟಿವಿ ಬಯಲು ಮಾಡಿದೆ.

    ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾದವರ ಆಟಾಟೋಪ ಜೋರಾಗಿರುತ್ತೆ. ಸಾಮಾನ್ಯ ಸಂದರ್ಭದಲ್ಲಿ ಟ್ಯಾಂಕರ್ ನೀರಿಗೆ 500 ರಿಂದ 600 ರೂ ಇರುತ್ತದೆ. ಆದ್ರೆ ಬೇಸಿಗೆಯಲ್ಲಿ 1 ಟ್ಯಾಂಕರ್ ನೀರನ್ನು ದುಪ್ಪಟ್ಟು ದರದಲ್ಲಿ ಮಾರುತ್ತಾರೆ. ಟ್ಯಾಂಕರ್ ನೀರಿನ ದಂಧೆಕೋರರು ಪಬ್ಲಿಕ್ ಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ.

    ವರದಿಗಾರ: ಸರ್.. 1 ಟ್ಯಾಂಕರ್ ನೀರೆಷ್ಟು..?
    ಟ್ಯಾಂಕರ್ ಮಾಲೀಕ: 1 ಸಾವಿರ ರೂ. ಆಗುತ್ತೆ
    ವರದಿಗಾರ: ಅಷ್ಟಾಗುತ್ತಾ?
    ಟ್ಯಾಂಕರ್ ಮಾಲೀಕ: ನೀರು ಎಲ್ಲೂ ಸಿಕ್ತಿಲ್ಲ. ನಾನೇ 400 ರೂ. ಕೊಟ್ಟು ತರುತ್ತಿದ್ದೀನಿ..

    ನೀರು ತರಿಸಿಕೊಂಡವರು: ಕೆಂಪಾಪುರ ಆ ಕಡೆಯೆಲ್ಲ 2 ಸಾವಿರ ಆಗುತ್ತೆ ಒಂದ್ ಲೋಡ್‍ಗೆ. ನೀರೇ ಎಲ್ಲೂ ಇಲ್ಲ. ಬೋರ್‍ವೆಲ್‍ಗಳಲ್ಲಿ ನೀರ್ ಬರ್ತಿಲ್ಲ. ಇಲ್ಲೆಲ್ಲ 1 ಸಾವಿರ ರೂ..
    ಟ್ಯಾಂಕರ್ ಮಾಲೀಕ: ನಮ್ ಹತ್ರ 1 ಸಾವಿರ ರೂ. ಈಗ ಆರ್ಡರ್ ಕೊಟ್ರೆ ಸಂಜೆಗೆ ತಂದು ಕೊಡ್ತೀವಿ. ಇಮ್ಮಿಡಿಯೇಟ್ ನೀರು ಕೊಡಲ್ಲ. ಇವ್ರೇ ನಿನ್ನೆ ಹೇಳಿರೋದು. ಇವತ್ ತಂದ್ಕೊಡ್ತಿದ್ದೀವಿ..
    ವರದಿಗಾರ: ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತಾ..?
    ಟ್ಯಾಂಕರ್ ಮಾಲೀಕ : ಹೌದು ಬೇಸಿಗೆ ಮುಗಿದ್ಮೇಲೆ ಕಡಿಮೆ ಆಗುತ್ತೆ. ಆಗ 600 ರೂ. ಆಗುತ್ತೆ ಲೋಡ್‍ಗೆ..

    ನೀರು ಕೊಡೋರು 1 ಸಾವಿರ ಅಂದ್ರೆ ನೀರ್ ತರಿಸ್ಕೊಳ್ಳೋರೇ ಬೇರೆ ಕಡೆ 2 ಸಾವಿರ ಇದೆ. ಇಲ್ಲೇ ಪರವಾಗಿಲ್ಲ ಅಂತಾರೆ. ಇಷ್ಟೊಂದು ಹಣ ಕೊಟ್ರೂ ತಕ್ಷಣಕ್ಕೆ ನಿಮಗೆ ನೀರು ಸಿಗಲ್ಲ ಎಂದು ಬೇರೆ ನಾಟಕ ಆಡ್ತಾರೆ. ಕನಿಷ್ಠ ಇನ್ನೆರಡು ತಿಂಗಳು ನಗರದಲ್ಲಿ ಟ್ಯಾಂಕರ್ ದಂಧೆ ಎಗ್ಗಿಲ್ಲದೇ ನಡೆಯೋದಂತೂ ಪಕ್ಕಾ. ಪಾಪ ಜನಕ್ಕೆ ಬೇರೆ ದಾರಿ ಇಲ್ಲದೇ ಕೊಳ್ಳಲೇಬೇಕು. ಇವರ ಆಟಕ್ಕೆ ಬಿಬಿಎಂಪಿ ಕಡಿವಾಣ ಹಾಕಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv