Tag: Sumithra

  • ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

    ಗುರುಪ್ರಸಾದ್‌ಗೆ ಕೋಟಿಗಟ್ಟಲೇ ಸಾಲ, ರಮ್ಮಿ ಗೀಳು, ಖಿನ್ನತೆ ಇತ್ತಾ?: ಪತ್ನಿ ಸುಮಿತ್ರಾ ಸ್ಪಷ್ಟನೆ

    ‘ಮಠ’ ಖ್ಯಾತಿಯ ಗುರುಪ್ರಸಾದ್ (Guruprasad) ಅವರು ನವೆಂಬರ್ 3ರಂದು ಆತ್ಮಹತ್ಯೆ ಮಾಡಿಕೊಂಡರು. ಈ ಬೆನ್ನಲ್ಲೇ, ಅವರ ಸಾವಿನ ಬಗ್ಗೆ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಅವರ ಪತ್ನಿ ಸುಮಿತ್ರಾ (Sumithra) ಗುರುಪ್ರಸಾದ್ ಕುರಿತು ಹಬ್ಬಿದ್ದ ವದಂತಿಗೆ ಪತ್ರದ ಮೂಲಕ ಕ್ಲ್ಯಾರಿಟಿ ನೀಡಿದ್ದಾರೆ. ಗುರುಪ್ರಸಾದ್ ಅವರ ರಮ್ಮಿ ಗೀಳು, ಸಾಲ, ಖಿನ್ನತೆ, ಕಾಯಿಲೆ ಬಗ್ಗೆ ಸುಮಿತ್ರಾ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಗೀತಾ ಶಿವರಾಜ್‌ಕುಮಾರ್ ನಿರ್ಮಾಣದಲ್ಲಿ ಧೀರೆನ್‌ ಹೊಸ ಸಿನಿಮಾ

    ಸಮಸ್ತ ಕನ್ನಡ ನಾಡ ಜನತೆಗೆ ನಿಮ್ಮ ಸುಮಿತ್ರ ಗುರುಪ್ರಸಾದ್ ಮಾಡುವ ನಮಸ್ಕಾರಗಳು, ಎಲ್ಲಾ ಸ್ನೇಹದ ವರ್ಗದವರಿಗೂ ಸಿನಿಮಾ ವರ್ಗದವರಿಗೂ ಹಾಗೂ ಮಾಧ್ಯಮ ವರ್ಗದವರಿಗೂ ಹಂಚಿಕೊಳ್ಳುವುದಿದೆ. ನೀವೆಲ್ಲರೂ ನನಗೆ ಸಂಪೂರ್ಣವಾಗಿ ಸಹಕರಿಸುತ್ತೀರಿ ಎಂದು ನಂಬಿ ಹೇಳಿಕೊಳ್ಳುತ್ತಿದ್ದೇನೆ. ಕೈ ಮುಗಿದು ಬೇಡಿಕೊಳ್ಳುತ್ತೀನಿ, ದಯವಿಟ್ಟು ಈಗಾಗಲೇ ನಮ್ಮ ಕುಟುಂಬ ನೊಂದಿದ್ದೀವಿ ನೋವಿನಲ್ಲಿ ಬದುಕಿದ್ದೇವೆ. ಕಾರಣ, ತಮ್ಮೆಲ್ಲರಿಗೂ ಗೊತ್ತಿದೆ. ಒಬ್ಬ ವ್ಯಕ್ತಿ ಸತ್ತ ಮೇಲೆ ಅದು ಯಾರೇ ಆಗಿರಲಿ ಅವರನ್ನು ದೇವರು ಅಂತ ಪರಿಗಣಿಸ್ತಾರೆ ಅಂತ ಹೇಳಿರುವುದನ್ನು ಕೇಳಿಸಿಕೊಂಡಿರುವುದು ನನ್ನ ತಿಳುವಳಿಕೆ. ಸತ್ತ ವ್ಯಕ್ತಿ ಬಗ್ಗೆ ಯಾಕೆ ಇಲ್ಲದ ಸಲ್ಲದ ಮಾತುಗಳು ಎಂದು ಕೇಳಿದ್ದಾರೆ ಸುಮಿತ್ರಾ.

    1) ಅವರಿಗೆ ಯಾವ ಕೋಟಿ ಕೋಟಿ ಕಟ್ಟುವಷ್ಟು ಸಾಲ ಇರಲಿಲ್ಲ. 2) ಆನ್‌ಲೈನ್ ರಮ್ಮಿ ಇತ್ತು, ಅದು ಎಷ್ಟಕ್ಕೆ ಬೇಕೋ ಅಷ್ಟು. ತನ್ನ ಬಿಡುವಿನ ಟೈಂಪಾಸ್‌ಗಾಗಿ. ಗಳಿಸಿದ್ದು ಉಂಟು, ಕಳೆದುಕೊಂಡಿದ್ದು ಉಂಟು. ಅದು ಅತಿರೇಕಕ್ಕೆ ಇರಲಿಲ್ಲ. 3) ಸಾಲಗಾರ ಎಂದು ಕೇಸ್ ನಡೆಯುತ್ತಿತ್ತಂತೆ, ಆದರೆ ನಂಬಿಕಸ್ತರಿಂದ ಮೋಸದ ವಂಚನೆ ಅದು ಕಾನೂನು ಮೂಲಕ ಸಾಬೀತಾಗಿರಲಿಲ್ಲ. 4) ಡಿಪ್ರೆಷನ್ ಪೇಷಂಟ್ ಹೌದು. ಅದಕ್ಕೆ ವೈದ್ಯರ ಸಲಹೆ ಮೇರೆಗೆ ಮಾತ್ರೆಗಳು ತೆಗೆದುಕೊಳ್ಳುತ್ತಿದ್ದರು. 5) ಒತ್ತಡಗಳು ಎಂಬ ಕಾಯಿಲೆ. ಸೋರಿಸಿಸ್ (ಚರ್ಮರೋಗ) ಯಾವುದು ಇಲ್ಲ. 6) ಸುಮಿತ್ರಾ ಗುರು ಪ್ರಸಾದ್ ಆದ ನಾನು ಮತ್ತೆ ಪ್ರಗ್ನೆಂಟ್ ಎನ್ನುವುದು ಸುಳ್ಳು ಸುದ್ದಿ ಎಂದಿದ್ದಾರೆ.

    ಇವೆಲ್ಲ ಹರಿದಾಡುತ್ತಿದೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆತನ ಪ್ರತಿಭೆ ಅಗಾಧವಾದದ್ದು. ಆತನ ಬರವಣಿಗೆ, ಆತನ ಚಿಂತನೆಗಳು ಆತನ ಪ್ರಯೋಗಗಳು ಹಾಗೂ ಆತನ ವ್ಯಕ್ತಿತ್ವ ಎಲ್ಲವೂ ಒಂದು ರೀತಿ ವಿಭಿನ್ನವಾಗಿ ಇತ್ತು. ಅದು ತಮ್ಮೆಲ್ಲರಿಗೂ ತಿಳಿದಿರುವುದೇ. ಹಾಗಾಗಿ ಆತನ ಕೊಡುಗೆಗಳಿಗೆ, ಆತನ ಬರವಣಿಗೆಗೆ, ಆತನ ಪ್ರತಿಭೆಗೆ ಆತನ ಚಿಂತನೆಗಳಿಗೆ, ಆತನ ಯಶಸ್ವಿಗೆ, ಆತನ ಮಾತಿನ ಚಾತಿಗೆ ನಕ್ಕು ನಲಿದು ಮೈಮರೆತಿದ್ದೀರಿ. ಅಷ್ಟರಮಟ್ಟಿಗೆ ಚತುರರು ಎಂದು ನಿಮ್ಮೆಲ್ಲರಿಗೂ ಗೊತ್ತಿದೆ. ಹಾಗೆ, ತಾವೆಲ್ಲರೂ ಕೈಜೋಡಿಸಿದ್ದೀರಿ ಸಹಕರಿಸಿದ್ದೀರಿ ಹಾಗೆ ಪ್ರೋತ್ಸಾಹಿಸಿದ್ದೀರಿ. ಹಾಗೆ ಕೆಲವೊಂದು ತಮ್ಮೆಲ್ಲರಿಗೂ ಸರಿ ಹೋಗದಿದ್ದು ಉಂಟು. ಏಕೆಂದರೆ ನೇರ ನುಡಿ ಮಾತುಗಾರ ಕೆಲವೊಂದು ಎಲ್ಲರಿಗೂ ಸರಿ ಅನಿಸಿದ್ದು ಆತನಿಗೆ ಸರಿ ಇಲ್ಲ ಎನಿಸಿದ್ದು ಕೆಲವೊಬ್ಬರಿಂದ ಮನಸ್ತಾಪಕ್ಕೆ ಒಳಗಾಗಿದ್ದು ಎಲ್ಲವೂ ಉಂಟು. ಇವುಗಳಿಂದ ಖುಷಿಪಟ್ಟವರು ಇದ್ದಾರೆ, ನೋವುಪಟ್ಟವರು ಇದ್ದಾರೆ. ಮನುಷ್ಯ ಅಂದಮೇಲೆ ಸರಿ-ತಪ್ಪು ಕೆಟ್ಟದ್ದು-ಒಳ್ಳೆಯ ಮಾಡಿಯೇ ತೀರುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ.

    ಆತ ಕುಡುಕ ಆಗಿದ್ದ. ಹೀಗಿತ್ತು, ಹಾಗಿತ್ತು ನೋವುಂಟು ಮಾಡಿದ್ದ ಅದು, ಇದು ಹಾಗೆ ಹೀಗೆ ಆತ ಸರಿ ಇಲ್ಲ. ಹೆಂಡ್ತಿ ಮಕ್ಕಳು ಸರಿ ಇಟ್ಕೊಂಡಿರ್ಲಿಲ್ಲ ಎಂಬ ಮಾತುಗಳು ಎಲ್ಲರೂ ಸಾಮಾಜಿಕವಾಗಿ ಮಾಡೋದೇ. ತಮ್ಮ ಸಂಸಾರಗಳಲ್ಲಿ ನಡೆಯುವುದೇ. ಜೊತೆಗೆ ಇಂಥ ಮಾತುಗಳಿಗೆ ಸಂದರ್ಭಕ್ಕೆ ಆ ಸಮಯಕ್ಕೆ ಅವರುಗಳು ಸಹಕರಿಸಿದ್ದು ಉಂಟು ಅವರೊಟ್ಟಿಗೆ ಕಾಲ ಕಳೆದಿದ್ದು ಇತ್ತು. ಏನು ಹೇಳಬೇಕಾದರೂ ಆತ ಬದುಕಿದ್ದಾಗ ಅಥವಾ ಒಬ್ಬ ವ್ಯಕ್ತಿ ಬದುಕಿದ್ದಾಗ ಅವನನ್ನು ತಿದ್ದು ಬುದ್ಧಿ ಹೇಳುವುದು ಪ್ರಾಮಾಣಿಕರ, ಮನುಷ್ಯರ ಮಹತ್ವ ಕಾರ್ಯ. ಅದು ಬಿಟ್ಟು ಸತ್ತ ಮೇಲೆ ವ್ಯಕ್ತಿಯ ವ್ಯಕ್ತಿತ್ವವನ್ನು ಅವಮಾನಿಸುವುದು ಎಷ್ಟರಮಟ್ಟಿಗೆ ಸರಿ? ಎಂದಿದ್ದಾರೆ.

    ಕೆಲವೊಂದು ವೈಯುಕ್ತಿಕ ವಿಚಾರಗಳು ಅವರಿಗೆ ಸಂಬಂಧಪಟ್ಟದ್ದು. ಅವರ ಕುಟುಂಬಕ್ಕೆ ಸಂಬಂಧಪಟ್ಟದ್ದು ಅಲ್ಲವಾ? ಹೆಂಡತಿಯಾಗಿ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು, ಕೆಲ ಮಾಹಿತಿಗಳು ಮೊದಲು ಗೊತ್ತಾಗ್ಬೇಕಿರೋದು ತಿಳ್ಕೊಬೇಕಾಗಿರೋದು ನನಗೆ. ಅದು ಬಿಟ್ಟು ಒಂದು ತಿಂಗಳ ಬಳಿಕ ಆ ಮಾಹಿತಿ ಹೊರಗೆ ಬಿತ್ತು, ಈ ಮಾಹಿತಿ ಹೊರಗೆ ಬಿತ್ತು ಅಂತ ಹೇಳಿಕೆಗಳು. 3 ಕೋಟಿ ಮೀರಿದೆ ರಮ್ಮಿ ಚಟ ಸಾಲದ ಹೊರೆಗಳು ಎಂತಲ್ಲ ಆರೋಪಗಳು ದಿನೇ ದಿನೇ ನಡಿತಾನೆ ಇದೆ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ. ಇದ್ಯಾವುದು ಸತ್ಯ ಅಲ್ಲ. ಹೆಂಡತಿಯಾಗಿ ನನಗೆ ಯಾವ ವಿಚಾರಗಳು ಸರಿಯಾಗಿ ಕಡಾ ಖಂಡಿತವಾಗಿ ಪೊಲೀಸರು ಇನ್ನೂ ತಿಳಿಸಿಲ್ಲ. ಅದಕ್ಕೆ ಆದಂತಹ ಸಮಯ ತೆಗೆದುಕೊಂಡಿದ್ದಾರೆ. ನನ್ನ ಕಡೆಯಿಂದ ಸಹಕಾರವು ನಡೆಯುತ್ತಿದೆ. ಅವರ ಬಳಿ ಐಫೋನ್ ಇರಲಿಲ್ಲ. ಏಳು ಮೊಬೈಲ್‌ಗಳಂತೂ ಇತ್ತು. ಕೆಲವೊಂದು ಹಳೆಯದ್ದು ಕೆಲವೊಂದು ಹೊಸದು. ಸಮಾಜಕ್ಕೆ ತಪ್ಪು ಮಾಹಿತಿ ನೀಡಬಾರದೆಂದು ಕೇಳಿಕೊಳ್ಳುತ್ತಿದ್ದೇನೆ. ನನ್ನಿಂದ ಏನಾದರೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನೋವಾಗಿದ್ದಲ್ಲಿ ಕ್ಷಮೆ ಯೋಚಿಸುತ್ತೇನೆ. ದಯವಿಟ್ಟು ಎಲ್ಲರೂ ಆತನ ಯಶಸ್ವಿಗೆ ಆತನ ಸಾಧನೆಗೆ ಕೈಜೋಡಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ.

    ಇಂತಿ.. ನಿಮ್ಮ ಮನೆ ಮಗಳು ಸುಮಿತ್ರಾ ಗುರುಪ್ರಸಾದ್

  • ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

    ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ: ಗುರುಪ್ರಸಾದ್‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

    ಬೆಂಗಳೂರು: ನನ್ನ ಪತಿ ಸಾವಿನಲ್ಲಿ ಯಾವುದೇ ಅನುಮಾನ ಇಲ್ಲ, ಸಾಲದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಅವರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ ಎಂದು ನಿರ್ದೇಶಕ ಗುರುಪ್ರಸಾದ್‌ (Guruprasad) ಅವರ ಎರಡನೇ ಪತ್ನಿ ಸುಮಿತ್ರಾ (Sumithra) ದೂರು ನೀಡಿದ್ದಾರೆ.

    ಸುಮಿತ್ರಾ (Sumithra) ನೀಡಿದ ದೂರಿನ ಹಿನ್ನೆಲೆಯಲ್ಲಿ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ  ಅಸಹಜ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಾಲ್ಕು ಅನುಮಾನಗಳಿಗೆ ಕಾರಣವಾದ ಗುರುಪ್ರಸಾದ್ ಸಾವು!

     

    ದೂರಿನಲ್ಲಿ ಏನಿದೆ?
    2020 ರಲ್ಲಿ ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ ಅವರನ್ನು ನಾನು ವಿವಾಹವಾದೆ. ನಮಗೆ ಮೂರೂವರೆ ವರ್ಷದ ಹೆಣ್ಣು ಮಗುವಿದೆ. ಈ ಹಿಂದೆ ಗುರುಪ್ರಸಾದ್‌ಗೆ ಆರತಿ ಜೊತೆ ಮದುವೆಯಾಗಿ ನಂತರ ಡಿವೋರ್ಸ್‌ ಆಗಿತ್ತು. ಮದುವೆಯಾದ ನಂತರ 4 ವರ್ಷಗಳ ಕಾಲ ಕನಕಪುರ ರಸ್ತೆಯಲ್ಲಿ ಎನ್.ಎ.ಪಿ.ಎ ವ್ಯಾಲಿ, ರಾಜರಾಜೇಶ್ವರಿ ನಗರದ ಈಸಿ ಡಿವೈನ್ ಬ್ಲಾಕ್ ಹಾಗೂ ಬಸವೇಶ್ವರನಗರದ ಬಾಲಾಜಿ ರೆಸಿಡೆನ್ಸಿಯಲ್ಲಿ ಜೀವನ ಸಾಗಿಸುತ್ತಿದ್ದೆವು. ನಂತರ ನಾನು ನನ್ನ ಯಜಮಾನರು 6 ತಿಂಗಳಿನಿಂದ ಮನೆ ಖಾಲಿ ಮಾಡಿಕೊಂಡು ಹುಸ್ಕೂರು ರಸ್ತೆಯಲ್ಲಿರುವ ನ್ಯೂ ಹೆವನ್ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸವಾಗಿದ್ದೆವು.

    ನನಗೆ ಆರೋಗ್ಯ ಸರಿಯಿಲ್ಲದ ಕಾರಣ ನಮ್ಮ ಯಜಮಾನರು ನನ್ನನ್ನು ತಾಯಿಯ ಮನೆಯಲ್ಲಿ ಇರಲು ಹೇಳಿ ಕಳುಹಿಸಿಕೊಟ್ಟರು. ಲೋಕಸಭಾ ಚುನಾವಣಾ ಸಮಯದಲ್ಲಿ ಕೊನೆಯ ಬಾರಿ ನಾವಿಬ್ಬರು ಭೇಟಿಯಾಗಿದ್ದೆವು. ಗುರುಪ್ರಸಾದ್‌ ಚಲನಚಿತ್ರ ಕೆಲಸದಲ್ಲಿ ಬ್ಯುಸಿಯಾಗಿದ್ದ ಕಾರಣ ನಾನು ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೆ. ಅಕ್ಟೋಬರ್‌ 25 ರಂದು ನಾನು ಕೊನೆಯಾದಾಗಿ ಫೋನ್‌ ಮಾಡಿದ್ದೆ. ಆದರೆ ಅವರು ರಿಸೀವ್‌ ಮಾಡಿರಲಿಲ್ಲ. ಪತಿ ಬ್ಯುಸಿ ಇರಬಹುದು ಎಂದು ಸುಮ್ಮನಾಗಿದ್ದೆ. ಇದನ್ನೂ ಓದಿ: ವರ್ಷದಲ್ಲಿ ಮೂರು ಮನೆಯನ್ನು ಬದಲಿಸಿದ್ದ ಗುರುಪ್ರಸಾದ್‌

     

    ನವೆಂಬರ್‌ 3 ರಂದು ಬೆಳಗ್ಗೆ 11 ಗಂಟೆಯ ವೇಳೆಗೆ ಅಪಾರ್ಟ್‌ಮೆಂಟ್ ನಿವಾಸಿ ಜಯರಾಮ್ ಎಂಬುವರು ದೂರವಾಣಿ ಮೂಲಕ ನೀವು ವಾಸವಿದ್ದ ಮನೆಯಿಂದ ಏನೋ ಒಂದು ರೀತಿಯ ವಾಸನೆ ಬರುತ್ತಿದೆ. ಮನೆಯ ಬಾಗಿಲು ಬಳಿ ಹೋಗಿ ಬಾಗಿಲು ತಟ್ಟಿದರೂ ಯಾರು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದರು.

    ನಾನು ಗಾಬರಿಯಿಂದ ಕುಟುಂಬದವರ ಜೊತೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದೆ. ಅಕ್ಕಪಕ್ಕದವರ ಸಹಾಯದಿಂದ ಹಾಗೂ ಪೊಲೀಸರ ನೆರವಿನೊಂದಿಗೆ ಬಾಗಿಲನ್ನು ಒಡೆದು ನೋಡಿದಾಗ ಪತಿ ಗುರುಪ್ರಸಾದ್‌ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಇರುವುದನ್ನು ನೋಡಿದೆ. ಪತಿಯ ಶರೀರ ಊದಿಕೊಂಡಿತ್ತು. ಇದನ್ನೂ ಓದಿ: ಗುರುಪ್ರಸಾದ್ ಮಗುವಿಗೆ ಸಹಾಯ ಮಾಡುತ್ತೇನೆ: ನಟ ಜಗ್ಗೇಶ್

    ನಮ್ಮ ಯಜಮಾನರು ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡ ವಿಚಾರ ನನಗೆ ತಿಳಿದಿದೆ. ಸಾಲವನ್ನು ಹೇಗಾದರೂ ತೀರಿಸೋಣ ಎಂದು ನಾನು ಧೈರ್ಯ ಹೇಳಿದ್ದೆ. ಆದರೆ ಪತಿ ಸಾಲ ಬಾಧೆಯಿಂದ ಖಿನ್ನತೆಗೆ ಜಾರಿ ಜೀವನದಲ್ಲಿ ಜಿಗುಪ್ಸೆಗೊಂಡು 3-4 ದಿನಗಳ ಹಿಂದೆ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ನೂಲಿನ ಹಗ್ಗದಿಂದ ಮಹಡಿಯ ಕಬ್ಬಿಣದ ಕೊಕ್ಕೆಗೆ ಕುಣಿಕೆ ಮಾಡಿ ಕತ್ತನ್ನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಗಂಡನ ಸಾವಿನಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ತಾನು ಸ್ಥಳಕ್ಕೆ ಬಂದು ಮುಂದಿನ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ.