Tag: Sumaltha

  • ಮಂಡ್ಯ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ

    ಮಂಡ್ಯ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ

    ಬೆಂಗಳೂರು: ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆ ಮತ್ತು ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದೆ ಸುಮಲತಾ ಅಂಬರೀಶ್ ಮತ್ತು ಸಚಿವ ನಾರಾಯಣ ಸ್ವಾಮಿ ಇಂದು ಆರ್ ಟಿ ನಗರದಲ್ಲಿರುವ ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದನ್ನೂ ಓದಿ: ಇಂಟಲಿಜೆನ್ಸ್ ಈಶ್ವರಪ್ಪ ಹತ್ರ ಇದೆಯಾ..?- ಪ್ರಿಯಾಂಕ್ ಖರ್ಗೆ ಕಿಡಿ

    ಮೈ ಶುಗರ್ ಕಾರ್ಖಾನೆ ಆದಷ್ಟು ಬೇಗ ಶುರು ಮಾಡುವುದು, ಜಿಲ್ಲೆಯ ನೀರಾವರಿ ಯೋಜನೆ, ಯುವಕರಿಗೆ ಉದ್ಯೋಗ ಕಲ್ಪಿಸುವುದು, ಅಕ್ರಮ ಗಣಿಗಾರಿಕೆ ತಡೆ ಹಾಗೂ ಕೆಆರ್‍ಎಸ್ ಸುತ್ತ ಮುತ್ತ ಗಣಿಗಾರಿಕೆ ನಿಯಂತ್ರಣ, ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಯಿತು.

  • ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

    – ಆತ್ಮೀಯರ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ

    ಮಂಡ್ಯ: ಜಿಲ್ಲೆಯ ಜನರ ಋಣದ ಭಾರ ನನ್ನ ಮೇಲಿದ್ದು, ಆ ಋಣವನ್ನು ತೀರಿಸುವ ಕಾರ್ಯ ನನ್ನ ಮೇಲಿದೆ. ಅಭಿವೃದ್ಧಿಯ ವಿಚಾರಕ್ಕೆ ಜಿಲ್ಲೆಗೆ ದೊಡ್ಡ ಅನಾಯ್ಯವಾಗಿದ್ದು, ಅಂಬರೀಶ್ ಅವರ ಕಾಲದಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳಿಗೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಮಂಡ್ಯ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡುವ ಸಂಬಂಧ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದರು. ಅಂಬರೀಶ್ ಹಾಗೂ ನಾನು ಆತ್ಮೀಯ ಸ್ನೇಹಿತರು. ಅವರು ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರಿಗೆ ನೀಡಿದ ಗೌರವ ಇಡೀ ಜಿಲ್ಲೆಗೆ ನೀಡಿದ ಗೌರವ. ಇದನ್ನು ಅಂಬರೀಶ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಅಂದು ಮಂಡ್ಯ ಜಿಲ್ಲೆಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕರೆತರುವುದು ಬೇಡ ಎಂದವರು ಇಂದು ಈ ಮಣ್ಣಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಅಂಬರೀಶ್ ಅವರಿಂದ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡುತ್ತಿದ್ದು, ನಿಮ್ಮ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿದ್ದೇನೆ ಎಂದರು.

    ನನ್ನ ಕುಟುಂಬವನ್ನು ಇಂದು ಬೀದಿಗೆ ಎಳೆದಿದ್ದಾರೆ. ನಾನು ಎಂದಾದರೂ ನನ್ನ ಮಗನನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತನಾಡಿದ್ದೇನಾ ಎಂದು ಪ್ರಶ್ನಿಸಿದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ನನ್ನ ಜೀವನದ ಗುರಿಯಾಗಿದ್ದು, ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ನಮ್ಮನ್ನು ಗೆದ್ದು ತಂದಿದ್ದೀರಿ. ನಿಮ್ಮ ಆಶೀರ್ವಾದದಿಂದ ಈ ಜಾಗದಲ್ಲಿ ನಿಂತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಇದನ್ನು ಮರೆಯಲ್ಲ. ಕೇವಲ ಮಂಡ್ಯ ಜಿಲ್ಲೆಗಾಗಿ ಕಾರ್ಯಕ್ರಮ ಮಾಡುತ್ತೇನೆ ಎಂದು ಸಣ್ಣತನದ ಮಾತನಾಡುತ್ತಾರೆ. ಆದರೆ ಬೇರೆ ಬೇರೆ ಜಿಲ್ಲೆಗಳಿಗೆ ಯಾವ ಕೊಡುಗೆ ನೀಡಿದ್ದೇನೆ ನನಗೆ ಗೊತ್ತಿದೆ ಎಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದರು.

    ಬದುಕಿರುವುದೇ ನಿಮಗಾಗಿ: ಮತ್ತೆ ತಮ್ಮ ಬದುಕಿನ ಕುರಿತು ಪ್ರಸ್ತಾಪ ಮಾಡಿದ ಸಿಎಂ ಎಚ್‍ಡಿಕೆ ನಾನು ಬದುಕಿರುವುದು ನಿಮಗಾಗಿ, ನಾಡಿನ ಜನತೆಗಾಗಿ ಎಂದರು. ಅಲ್ಲದೇ ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಎಂದು ಸುಳ್ಳು ಹೇಳಿಲ್ಲ. ನಿನ್ನೆ ಬೆಳಗ್ಗೆ ಹತ್ತು ಗಂಟೆವರೆಗೂ 6 ಲಕ್ಷದ 40 ಸಾವಿರ ರೈತ ಕುಟುಂಬಗಳಿಗೆ 4 ಸಾವಿರದ 103 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇನೆ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಇನ್ನೂ 6 ಸಾವಿರ ದುಡ್ಡು ಇಟ್ಟಿದ್ದೇನೆ. ಕೇಂದ್ರ ಪ್ರಧಾನಿ ರೀತಿ ನಾನು ಮಾತನಾಡಲ್ಲ ಎಂದು ಕಿಡಿಕಾರಿದರು.

    ರೈತರ ಸಾಲಮನ್ನಾ ಮಾಡಿದರೆ ಮಾತ್ರ ರೈತರು ಆರಾಮವಾಗಿ ಇರುತ್ತಾರೆ ಎಂಬ ಭ್ರಮೆ ನನಗಿಲ್ಲ. ಸಮಗ್ರ ಅಭಿವೃದ್ಧಿಗಾಗಿ ನಾನು ದುಡಿಯುತ್ತೇನೆ. ಗಿರವಿ ಇಟ್ಟಿರುವ ಒಡವೆಗಳನ್ನ ಬಿಡಿಸಿಕೊಡುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಯೋಜನೆ ಮುಗಿಯುವವರೆಗೂ ಯಾವುದೇ ಮಾನಸಿಕ ಹಿಂಸೆ ಕೊಟ್ಟರೂ ಅಧಿಕಾರದಲ್ಲಿ ಇರುತ್ತೇನೆ. ಆದರೆ ಜಿಲ್ಲೆಯ ಟಿಕೆಟ್ ವಿಚಾರದಲ್ಲಿ ಈ ವೇದಿಕೆಯಲ್ಲಿ ಪ್ರಸ್ತಾಪ ಮಾಡಲ್ಲ. ಅದಕ್ಕೆ ರಾಜಕೀಯ ವೇದಿಕೆ ಇದೆ. ಆಗ ಮಾತನಾಡುತ್ತೇನೆ ಎಂದರು.

    ಜಿಲ್ಲೆಯ ಜನ ಹಣ ಪಡೆದು ಮೋಸ ಹೋಗುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗಲ್ಲ. ಇದೇ ರೀತಿ ನಿಮ್ಮ ಬೆಂಬಲ ನಮಗೆ ನೀಡಿ ಯಾವುದೇ ಕಾರಣಕ್ಕೂ ಅನುಕಂಪದ ಮಾತುಗಳಿಗೆ ಮರುಳಾಗಬೇಡಿ. ನಿಜವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು.

    ಕನ್ನಡಿಗ ಮತ್ತೊಮ್ಮೆ ಪ್ರಧಾನಿ: ರಾಜ್ಯದಲ್ಲಿ 20 ಸ್ಥಾನಗಳಿಗೆ ಹೆಚ್ಚು ಸ್ಥಾನ ಪಡೆದುಕೊಂಡರೆ ದೆಹಲಿಯಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗ ಬಹುದು ಎಂದು ಹೇಳಿದ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆಗುವ ವಿಚಾರವನ್ನು ಬಿಚ್ಚಿಟ್ಟರು. ಅಲ್ಲದೇ ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೇ ಒಂದು ಯೋಧರ ಕುಟುಂಬ ಅನಾಥರಾಗುವ ಘಟನೆ ನಡೆಯಲಿಲ್ಲ. ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎನ್ನುವ ಪ್ರಧಾನಿಗೆ ಸರಿಯಾದ ಉತ್ತರ ಕೊಡಿ ಎಂದರು.

    ಗುರು ಪತ್ನಿಗೆ ನಾಳೆಯೇ ಉದ್ಯೋಗ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುತಾತ್ಮ ಗುರು ಪತ್ನಿ ಕಲಾವತಿಯರಿಗೆ ಸಂತ್ವಾನ ಹೇಳಿದ ಸಿಎಂ ಕುಮಾರಸ್ವಾಮಿ ಅವರು, ಕಲಾವತಿಯವರು ಗೌರವಯುತವಾಗಿ ಬದುಕು ನಡೆಸಲು ಕೆಲಸ ನೀಡುವ ಆಶ್ವಾಸನೆ ನೀಡಿದ್ದೆ. ಅದರಂತೆ ಅವರಿಗೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ನಾಳೆಯೇ ಕೆಲಸ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾಗೆ ಟಿಕೆಟ್ ಕೊಡುತ್ತಾ ಜೆಡಿಎಸ್ – ಕಾಂಗ್ರೆಸ್ ಅಸ್ತ್ರವನ್ನೇ ದೋಸ್ತಿಯತ್ತ ತಿರುಗಿಸ್ತಾರಾ ಗೌಡ್ರು..?

    ಸುಮಲತಾಗೆ ಟಿಕೆಟ್ ಕೊಡುತ್ತಾ ಜೆಡಿಎಸ್ – ಕಾಂಗ್ರೆಸ್ ಅಸ್ತ್ರವನ್ನೇ ದೋಸ್ತಿಯತ್ತ ತಿರುಗಿಸ್ತಾರಾ ಗೌಡ್ರು..?

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳು ಕಣಕ್ಕಿಳಿಯುವ ವಿಚಾರದಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಮಂಡ್ಯದಿಂದ ಸುಮಲತಾ ಕಣಕ್ಕಿಳಿಯುತ್ತಾರಾ ಅನ್ನೋ ಚರ್ಚೆಯಾಗುತ್ತಿದೆ.

    ಶತಾಯಗತಾಯ ತಮ್ಮ ಪುತ್ರ ನಿಖಿಲ್‍ನನ್ನು ಕಣಕ್ಕಿಳಿಸಬೇಕೆಂದು ನಿರ್ಧರಿಸಿರುವ ಸಿಎಂ ಕುಮಾರಸ್ವಾಮಿ, ಮೈತ್ರಿಪಾಲನೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಸಿಎಂ ಪುತ್ರನ ಮಂಡ್ಯ ಪ್ರವೇಶವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಟೀಂ, ದಿವಂಗತ ಅಂಬರೀಶ್ ಪತ್ನಿ ಸುಮಲತಾ ಹೆಸರನ್ನು ತೇಲಿಬಿಟ್ಟು ಸಂಘರ್ಷಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ.

    ಅಂಬಿ ಅಭಿಮಾನಿಗಳು ಶುಕ್ರವಾರ ಸುಮಲತಾ ಅವರನ್ನು ಭೇಟಿ ಮಾಡಿ ಸ್ಪರ್ಧಿಸುವಂತೆ ಒತ್ತಾಯಿಸಿದಾಗ ಕಣಕ್ಕಿಳಿಯುವ ಇಂಗಿತವನ್ನು ಸುಮಲತಾ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಸುಮಲತಾ ಸ್ಪರ್ಧೆ ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಗಲಿದ್ದು, ಅವರನ್ನೇ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಿ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸುವ ತಂತ್ರಕ್ಕೆ ಜೆಡಿಎಸ್ ಮುಂದಾಗುವ ಸಾಧ್ಯತೆ ಇದೆ. ಹೀಗಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಪುತ್ರ ನಿಖಿಲ್ ಸ್ಪರ್ಧೆನೋ..? ಸುಮಲತಾ ರಂಗ ಪ್ರವೇಶವೋ ಎಂಬ ಚರ್ಚೆ ಜೋರಾಗಿ ನಡೆದಿದೆ. ಇದನ್ನು ಓದಿ: ರಾಜಕೀಯ ಪ್ರವೇಶದ ಬಗ್ಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ

    ಮಂಡ್ಯದಿಂದ ಸುಮಲತಾ ಸ್ಪರ್ಧೆಗೆ ಒತ್ತಡ ವಿಚಾರದ ಬಗ್ಗೆ ಸಿಎಂ ಕುಮಾರಸ್ವಾಮಿ ಸ್ಥಾನ ಬಿಡಲ್ಲ ಎಂದು ಪರೋಕ್ಷವಾಗಿ ಸೂಚನೆ ನೀಡಿದ್ದಾರೆ. ಮಂಡ್ಯ ಜೆಡಿಎಸ್‍ನ ಭದ್ರಕೋಟೆ. ಅಲ್ಲಿ ಸುಮಲತಾ ಸ್ಪರ್ಧೆ ಮಾಡಬಾರದು ಎಂದು ಏನೂ ಇಲ್ಲ. ಸ್ಪರ್ಧೆ ಮಾಡಲಿ ಬೇಡ ಎಂದು ಹೇಳೋಕೆ ಆಗುತ್ತಾ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಸ್ಪರ್ಧೆ ಮಾಡಲು ಅವಕಾಶವಿದೆ. ಟಿಕೆಟ್ ಹಂಚಿಕೆ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಆ ಸಂದರ್ಭ ಬಂದಾಗ ಟಿಕೆಟ್ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಅಲ್ಲದೇ ಚುನಾವಣೆಯ ಬಗ್ಗೆ ಕಾರ್ಯಕರ್ತರ ಅಭಿಪ್ರಾಯ ಕೂಡ ಕೇಳಬೇಕಾಗುತ್ತೆ. ಯಾರೋ ಕೇಳಿದರು ಎಂದು ನಿರ್ಧಾರ ಮಾಡೋಕೆ ಆಗಲ್ಲ. ಟಿಕೆಟ್ ಹಂಚಿಕೆ ಚರ್ಚೆ ಆಗಿಲ್ಲ. ಚರ್ಚೆಗೆ ಬಂದಾಗ ಈ ವಿಷಯದ ಬಗ್ಗೆ ತೀರ್ಮಾನ ಮಾಡುತ್ತೀವಿ. ಅಂಬರೀಶ್ ಕುಟುಂಬದವರು ನಮ್ಮ ಪಕ್ಷಕ್ಕೆ ಸೇರಿದವರಲ್ಲ. ಅವರು ಒಂದು ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ನಾವು ವಿರೋಧಿಸುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv