Tag: Sumalatha Ambarish

  • ಡಾಟರ್ ಆಫ್ ಪಾರ್ವತಮ್ಮನ ಟ್ರೈಲರ್ ಬಂತು!

    ಡಾಟರ್ ಆಫ್ ಪಾರ್ವತಮ್ಮನ ಟ್ರೈಲರ್ ಬಂತು!

    ಬೆಂಗಳೂರು: ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಬಗ್ಗೆ ಎಲ್ಲ ವರ್ಗದ ಪ್ರೇಕ್ಷಕರೂ ಆಕರ್ಷಿತರಾಗಿದ್ದಾರೆ. ಹಂತ ಹಂತವಾಗಿ ಜನರ ಗಮನವನ್ನು ಸೆಳೆಯುತ್ತಾ ಬಂದಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಅಸಲಿ ಮ್ಯಾಟರ್ ಏನೆಂಬುದರ ಝಲಕ್ ಈಗ ಟ್ರೈಲರ್ ಮೂಲಕ ಪ್ರೇಕ್ಷಕರ ಮುಂದೆ ಅನಾವರಣಗೊಂಡಿದೆ.

    ಜೆ ಶಂಕರ್ ನಿರ್ದೇಶನ ಮಾಡಿರೋ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ತುಂಬಾ ಅಬ್ಬರ ಶುರುವಿಟ್ಟಿದೆ. ಈವರೆಗೂ ಥರ ಥರದ ಪಾತ್ರಗಳಿಗೆ ಜೀವ ತುಂಬುತ್ತಲೇ ಪರಿಪೂರ್ಣ ನಟಿಯಾಗಿ ಗುರುತಿಸಿಕೊಂಡಿರುವವರು ಹರಿಪ್ರಿಯಾ. ನಾಯಕಿ ಪ್ರಧಾನವಾದ ಈ ಚಿತ್ರದಲ್ಲಿ ಹರಿಪ್ರಿಯಾ ಬೇರೆಯದ್ದೇ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆಂಬ ಮಾತುಗಳಿದ್ದವು. ಅದೀಗ ಟ್ರೈಲರ್ ಮೂಲಕ ನಿಜವಾಗಿದೆ.

    ಒಂದು ಕ್ರೈಂ ಮತ್ತು ಅದರ ಸುತ್ತಾ ನಡೆಯೋ ಥ್ರಿಲ್ಲರ್ ಕಥಾನಕವನ್ನು ಡಾಟರ್ ಆಫ್ ಪಾರ್ವತಮ್ಮ ಚಿತ್ರ ಒಳಗೊಂಡಿದೆ. ಇಲ್ಲಿ ಹೆಣ್ಣು ಮಗಳೊಬ್ಬಳ ನಿಗೂಢ ಕೊಲೆಯ ಸಿಕ್ಕು ಬಿಡಿಸುವ, ದುಷ್ಟರನ್ನು ಎದುರು ಹಾಕಿಕೊಂಡು ಜಯಿಸಿಕೊಳ್ಳುವ ಇನ್ವೆಸ್ಟಿಗೇಟಿವ್ ಆಫಿಸರ್ ಆಗಿ ಹರಿಪ್ರಿಯಾ ನಟಿಸಿದ್ದಾರೆ. ಇದರೊಂದಿಗೆ ಅಮ್ಮ ಮಗಳ ಭಾವನಾತ್ಮಕ ಕಥೆಯನ್ನೂ ಕೂಡಾ ಈ ಚಿತ್ರ ಒಳಗೊಂಡಿದೆ. ಸುಮಲತಾ ಅಂಬರೀಶ್ ಹರಿಪ್ರಿಯಾರ ತಾಯಿಯಾಗಿ ನಟಿಸಿದ್ದಾರೆ. ಇದಿಷ್ಟು ಸುಳಿವನ್ನು ಈ ಪಾದರಸದಂಥಾ ಟ್ರೈಲರ್ ಜಾಹೀರು ಮಾಡಿದೆ.

    ಈ ಚಿತ್ರವನ್ನು ದಿಶಾ ಎಂಟರ್ ಪ್ರೈಸಸ್ ಮೂಲಕ ಕೆಎಂ ಶಶಿಧರ್ ನಿರ್ಮಾಣ ಮಾಡಿದ್ದಾರೆ. ವಿಜಯಲಕ್ಷ್ಮಿ ಹಾಗೂ ಕೃಷ್ಣೇಗೌಡರೂ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ಅರುಳ್ ಕೆ ಸೋಮಸುಂದರನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ, ಪ್ರಗತಿ ರಿಷಬ್ ಶೆಟ್ಟಿ ಮತ್ತು ಪುಟ್ಟರಾಜು ಅವರ ವಸ್ತ್ರ ವಿನ್ಯಾಸ ಈ ಚಿತ್ರಕ್ಕಿದೆ.

  • ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಅಂಬಿ, ಡಿಬಾಸ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದ ಅಭಿಷೇಕ್

    ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ತಾಯಿ ಸುಮಲತಾ ಅಂಬರೀಶ್ ಅವರ ಪರವಾಗಿ ಪ್ರಚಾರ ಮಾಡುತ್ತಿರುವ ಅಭಿಷೇಕ್, ತಂದೆ ಅಂಬರೀಶ್ ಮತ್ತು ಡಿ.ಬಾಸ್ ದರ್ಶನ್ ಸ್ಟೈಲ್‍ನಲ್ಲಿ ಡೈಲಾಗ್ ಹೊಡೆದಿದ್ದಾರೆ.

    ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಿ.ಹೊಸಹಳ್ಳಿ ಗ್ರಾಮದಲ್ಲಿ ಸುಮಲತಾ ಅವರು ಇಂದು ಪ್ರಚಾರ ನಡೆಸಿದ್ದರು. ಈ ವೇಳೆ ಅಭಿಷೇಕ್ ಅವರು, ಮಂಡ್ಯದವರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ಬಿಟ್ಟುಕೊಡುವ ಚಾನ್ಸೇ ಇಲ್ಲ ಎಂದು ರೆಬಲ್ ಸ್ಟಾರ್ ಅಂಬರೀಶ್ ಡೈಲಾಗ್ ಹೊಡೆದರು. ಬಳಿಕ ಡಿ ಬಾಸ್ ಡೈಲಾಗ್ ಬೇಕಾ ಎಂದು ಮತದಾರರನ್ನು ಕೇಳಿ, ಅಮ್ಮ ನಡೆದಿದ್ದೆ ದಾರಿ, ತಾಕತ್ತಿದ್ರೆ ಕಟ್ಟಾಕ್ರೋ ಎಂದು ಡೈಲಾಗ್ ಹೇಳಿದರು.

    ಅಭಿಷೇಕ್ ಮಾತನಾಡುವಾಗ ಮೈಕ್ ಕೈ ಕೊಟ್ಟಿತು. ಆಗ ಮಗನ ಕೈಯಿಂದ ಮೈಕ್ ಪಡೆದ ಸುಮಲತಾ ಅವರು, ಮೊನ್ನೆ ಕರೆಂಟ್ ತೆಗೆದರು. ಇವತ್ಯಾರು ಮೈಕ್ ಕಟ್ ಮಾಡಿದ್ದು ಎಂದು ವ್ಯಂಗ್ಯವಾಡಿದರು.

  • ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗಪಡಿಸಿಕೊಳ್ಳಲ್ಲ: ಸುಮಲತಾಗೆ ನಿಖಿಲ್ ಟಾಂಗ್

    ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗಪಡಿಸಿಕೊಳ್ಳಲ್ಲ: ಸುಮಲತಾಗೆ ನಿಖಿಲ್ ಟಾಂಗ್

    – ನಮ್ಮ ಕಾರ್ಯಕರ್ತರೇ ನನ್ನ ಸೈನಿಕರು

    ಮಂಡ್ಯ: ಸುಮಲತಾ ಅಂಬರೀಶ್ ಅವರ ಬೆಂಬಲಕ್ಕೆ ಸ್ಯಾಂಡಲ್‍ವುಡ್‍ನ ಅನೇಕ ನಟ, ನಟಿಯರು, ನಿರ್ಮಾಪಕರು ನಿಂತಿದ್ದಾರೆ. ಹೀಗಾಗಿ ಫಿಲ್ಮಿ ಸ್ಟೈಲ್‍ನಲ್ಲಿಯೇ ನಿಖಿಲ್ ಕುಮಾರಸ್ವಾಮಿ, ಸುಮತಲಾ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಸ್ಯಾಂಡಲ್‍ವುಡ್‍ನಲ್ಲಿ ಯಾರು ನನ್ನ ಪರ ಪ್ರಚಾರಕ್ಕೆ ಬರಲ್ಲ. ಅಷ್ಟೇ ಅಲ್ಲದೆ ನಾನು ಸ್ಯಾಂಡಲ್‍ವುಡ್‍ನ ಯಾರನ್ನೂ ದುರುಪಯೋಗ ಪಡಿಸಿಕೊಳ್ಳಲ್ಲ. ನಮ್ಮ ಕಾರ್ಯಕರ್ತರೇ ನನ್ನ ಸೈನಿಕರು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

    ಸುಮಲತಾ ಅವರ ಪರ ಪ್ರಚಾರ ಮಾಡುವುದಾಗಿ ನಟ ದರ್ಶನ್ ಬಹಿರಂಗಪಡಿಸಿದ್ದಾರೆ. ಜೊತೆಗೆ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಇಡೀ ಸ್ಯಾಂಡಲ್‍ವುಡ್ ಸುಮಲತಾ ಪರ ಪ್ರಚಾರ ಮಾಡಲು ಸಿದ್ಧವಾಗಿದೆ. ನನಗೆ ಟಿಕೆಟ್ ನೀಡುವ ಕುರಿತು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಮಂಡ್ಯದಲ್ಲಿ ನಾಳೆ ಘೋಷಣೆ ಮಾಡಲಿದ್ದಾರೆ ಎಂದು ನಿಖಿಲ್ ತಿಳಿಸಿದರು.

    ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ. ರಾಜಕಾರಣದಿಂದ ನಮ್ಮಿಬ್ಬರ ಸಂಬಂಧ ಹಾಳಾಗಲು ನಾನು ಅವಕಾಶ ಮಾಡಿಕೊಡುವುದಿಲ್ಲ. ಅಭಿಷೇಕ್ ಹಾಗೂ ನಾನು ಇಬ್ಬರು ಬ್ಯುಸಿ ಇದ್ದೇವೆ. ಇತ್ತೀಚೆಗೆ ಇಬ್ಬರು ಸೇರಿ ಮಾತನಾಡಿಲ್ಲ. ಲೋಕಸಭಾ ಚುನಾವಣೆಯ ನಂತರ ಫ್ರೀ ಮಾಡಿಕೊಂಡು ಮಾತನಾಡುತ್ತೇವೆ ಎಂದು ತಿಳಿಸಿದರು.

    ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತೇನೆ. ದೇವರ ಮೇಲೆ ನಮ್ಮ ಕುಟುಂಬಕ್ಕೆ ಹಿಂದಿನಿಂದಲೂ ನಂಬಿಕೆ. ದೇವರ ಅನುಗ್ರಹದಿಂದ ನಮ್ಮ ಕುಟುಂಬಕ್ಕೆ ಒಳ್ಳೆಯದಾಗಿದೆ. ಹೀಗಾಗಿ ದೇವರಿಗೆ ಪೂಜೆ ಮಾಡಿ ಇಂದಿನಿಂದ ಪ್ರಚಾರ ಆರಂಭಿಸಿದ್ದೇನೆ ಎಂದು ಹೇಳಿದರು.

    ಟೆಂಪಲ್ ರನ್: ಮದ್ದೂರು ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ಹಾಗೂ ಚಿಕ್ಕಂಕನಹಳ್ಳಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗೊಲ್ಲರದೊಡ್ಡಿ ಗ್ರಾಮದ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಮದ್ದೂರು ಭಾಗದ ಜನ ಯಾವುದೇ ಕಾರ್ಯ ನೆರವೇರಿಸುವಾಗ ಮೊದಲು ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮರಸ್ವಾಮಿ ಅವರು ಕೂಡ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ರೇವಣ್ಣ ಸತ್ತಿದ್ರೆ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗ್ತಿದ್ರಂತೆ: ಈಶ್ವರಪ್ಪ

    ರೇವಣ್ಣ ಸತ್ತಿದ್ರೆ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗ್ತಿದ್ರಂತೆ: ಈಶ್ವರಪ್ಪ

    ಬಾಗಲಕೋಟೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಬೆನ್ನಲ್ಲೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸಾವಿನ ವಿಚಾರವಾಗಿ ಮಾತನಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರವಾಗಿ ಸುಮಲತಾ ಅಂಬರೀಶ್ ಅವರನ್ನು ಟೀಕಿಸಿದ್ದ ಸಚಿವ ರೇವಣ್ಣ ವಿರುದ್ಧ ಕೆ.ಎಸ್.ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ. ಸಚಿವರು ಮಾತನಾಡಿದರು ಎಂದು ನೀವು ಮಾತನಾಡಿದ್ದು ಎಷ್ಟು ಸರಿ. ಅಂತೆ-ಕಂತೆ ಕಟ್ಟಿಕೊಂಡು ಹೇಳಿಕೆ ನೀಡುವುದು ಸರಿಯಲ್ಲ ಎಂದು ಜನರು ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಈಶ್ವರಪ್ಪ ಹೇಳಿದ್ದೇನು?:
    ಪತಿ ಅಂಬರೀಶ್ ಸತ್ತು ಎರಡು ತಿಂಗಳಾಗಿಲ್ಲ ಆಗಲೇ ಸುಮಲತಾ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ ಎಂದು ಸಚಿವ ರೇವಣ್ಣ ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ ಮಂಡ್ಯದ ವ್ಯಕ್ತಿಯೊಬ್ಬ ಖಡಕ್ ಉತ್ತರ ನೀಡಿದ. ಆ ವ್ಯಕ್ತಿಯ ಮಾತನ್ನು ನಿಮ್ಮ ಮುಂದೆ ಹೇಳಲು ನನಗೆ ಸಂಕೋಚವಾಗುತ್ತದೆ. ಆದರೂ ಹೇಳುತ್ತೇನೆ.

    ಸಚಿವ ರೇವಣ್ಣ ಸತ್ತಿದ್ದರೆ ಮಾರನೇ ದಿನವೇ ಭವಾನಿ ರೇವಣ್ಣ ಕ್ಯಾಂಡಿಡೇಟ್ ಆಗುತ್ತಿದ್ದರು ಎಂದು ಆ ವ್ಯಕ್ತಿ ಹೇಳಿದ. ಹೀಗೆ ಅನಿಸಿಕೊಳ್ಳಲು ರೇವಣ್ಣ ಅವರು ಸುಮಲತಾ ಅವರ ಬಗ್ಗೆ ಮಾತನಾಡಬೇಕಿತ್ತಾ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೆ ಸುಮಲತಾ ಪರ ಬ್ಯಾಟ್ ಬೀಸಿ ರೇವಣ್ಣಗೆ ಟಾಂಗ್ ಕೊಟ್ಟ ಸುಧಾಕರ್

    ಮತ್ತೆ ಸುಮಲತಾ ಪರ ಬ್ಯಾಟ್ ಬೀಸಿ ರೇವಣ್ಣಗೆ ಟಾಂಗ್ ಕೊಟ್ಟ ಸುಧಾಕರ್

    ಚಿಕ್ಕಬಳ್ಳಾಪುರ: ಪತಿ ನಿಧನವಾದ ಬಳಿಕ ತಾಯಂದಿರು ರಾಜಕೀಯ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಬಾರದು ಎನ್ನುವ ಆಲೋಚನೆ ಅನಾಗರಿಕತೆಯನ್ನು ತೋರಿಸುತ್ತದೆ ಎಂದು ಶಾಸಕ ಡಾ.ಸುಧಾಕರ್ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಸಚಿವ ರೇವಣ್ಣ ಅವರು ಮಹಾನ್ ದೈವ ಭಕ್ತರೆಂದು ನಾನು ತಿಳಿದುಕೊಂಡಿದ್ದೆ. ಅವರ ಬಾಯಿಂದ ಈ ಮಾತು ನಿರೀಕ್ಷೆ ಮಾಡಿರಲಿಲ್ಲ. ಸಚಿವರು ಯಾವ ಆಲೋಚನೆಯಿಂದ ಸುಮಲತಾ ಅವರ ಬಗ್ಗೆ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಆದರೆ ಸುಮಲತಾ ಅವರಲ್ಲಿ ತಕ್ಷಣ ಕ್ಷಮಾಪಣೆ ಕೇಳಬೇಕೆಂದು ಸಚಿವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಇದನ್ನು ಓದಿ: ಸುಮಲತಾ ಪರ ಬ್ಯಾಟ್ ಮಾಡಿ ಸಿಎಂಗೆ ಶಾಸಕ ಸುಧಾಕರ್ ಟಾಂಗ್!

    ಸುಮಲತಾ ಅಂಬರೀಶ್ ಅವರಿಗೆ ಕ್ಷಮೆ ಕೇಳಿದರೆ ಸಚಿವರಿಗೆ ಗೌರವ ಬರುತ್ತದೆ. ಈಗಾಗಲೇ ಸುಮಲತಾ ತುಂಬಾ ದುಃಖದಲ್ಲಿದ್ದಾರೆ. ಹೀಗಿದ್ದರೂ ಸಹ ಅವರು ಚುನಾವಣೆಗೆ ನಿಲ್ಲಲು ಹಾಗೂ ಮಂಡ್ಯದ ಜನರ ಜೊತೆ ನಿಲ್ಲುವ ಧೈರ್ಯ ತೋರಿದ್ದಾರೆ. ಅದನ್ನು ನಾವು ಮೆಚ್ಚಬೇಕು. ಅಂತಹವರಿಗೆ ನಮ್ಮಿಂದ ಆಗುವ ಸಹಾಯ ಮಾಡಬೇಕೇ ಹೊರತು ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಗಂಡ ಸತ್ತು ಒಂದೂವರೆ ತಿಂಗಳಾಗಿಲ್ಲ, ಇದೆಲ್ಲಾ ಬೇಕಾ?: ಸುಮಲತಾ ವಿರುದ್ಧ ರೇವಣ್ಣ ಕಿಡಿ

    ಬೆಂಗಳೂರು: ಪತಿ, ಮಾಜಿ ಸಚಿವ ಅಂಬರೀಶ್ ಸತ್ತು ಇನ್ನೂ ಒಂದೂವರೆ ತಿಂಗಳಾಗಿಲ್ಲ. ಸುಮಲತಾ ಅವರಿಗೆ ಇದೆಲ್ಲ ಬೇಕಿತ್ತಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರು ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಟ್ಟರು. ಆದರೆ ಸುಮಲತಾ ಅವರಿಗೆ ಯಾವುದೇ ಕೃತಜ್ಞತೆಯೂ ಇಲ್ಲ. ಸುಮಲತಾ ಅವರು ಚಾಲೆಂಜ್ ಮಾಡುತ್ತಿದ್ದಾರೆ. ಇದನ್ನ ನಾವು ಎದುರಿಸಲು ಸಿದ್ಧರಾಗಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದಿ: ರಾತ್ರಿ ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ್ರು ಸುಮಲತಾ..!

    ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಸುಮಲತಾ ಅವರು, ಈ ರೀತಿಯ ಟೀಕೆಗಳು ರಾಜಕಾರಣದಿಂದ ಹೊರತಾಗಿಲ್ಲ. ಕೆಲವರು ವೈಯಕ್ತಿಕ ವಿಚಾರಗಳನ್ನೇ ಬಳಸಿಕೊಂಡು ವಾಗ್ದಾಳಿ ನಡೆಸುತ್ತಾರೆ. ಇದು ಅವರಿಗೆ ಅಭ್ಯಾಸವಾಗಿರುತ್ತದೆ. ಇದಕ್ಕೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಇದು ನಮ್ಮ ಸಂಸ್ಕಾರವೂ ಅಲ್ಲ. ಅಂಬರೀಶ್ ಅವರು 25 ವರ್ಷ ರಾಜಕೀಯದಲ್ಲಿ ಇದ್ದರೂ ಯಾರೊಬ್ಬರ ವಿರುದ್ಧವೂ ಟೀಕೆ ಮಾಡಲಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ದರ್ಶನ್ ಇರುವಾಗ ಅಲ್ಲಿ ನಾನ್ಯಾಕೆ- ಸುಮಲತಾ ರಾಜಕೀಯ ಎಂಟ್ರಿ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ

    ಈ ರೀತಿಯ ಟೀಕೆಗಳಿಗೆ ಜನರೇ ಉತ್ತರ ನೀಡುತ್ತಾರೆ. ನನಗೆ ರಾಜಕಾರಣಕ್ಕಿಂತ ಸಂಬಂಧಗಳೇ ಮುಖ್ಯ. ಈ ನಿಟ್ಟಿನಲ್ಲಿ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಮಂಡ್ಯದ ಜನರ ಜೊತೆಗೆ ಅಂಬರೀಶ್ ಹಾಗೂ ನನಗೆ ಋಣಾನುಬಂಧವಿದೆ ಎಂದು ಹೇಳಿದರು.

    ನನ್ನ ವಿರುದ್ಧ ಟೀಕೆ ಮಾಡಿದರೂ ಜನರು ಮಾತ್ರ ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರ ಬೆಂಬಲ ಮುಖ್ಯ. ಹೀಗಾಗಿ ನನಗೆ ಯಾವುದೇ ಹೆದರಿಕೆಯಿಲ್ಲ. ನನ್ನ ವಿರುದ್ಧ ಟೀಕೆ ಮಾಡುವವರು ತಿಳಿದು ಮಾತನಾಡಬೇಕು ಎಂದು ಕಿಡಿಕಾರಿದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಅಂಬರೀಶ್ ತಂದೆ ಸ್ಥಾನದಲ್ಲಿ ಕಾಣುತ್ತಿದ್ದರು. ಹೀಗಾಗಿ ಅವರ ಕುಟುಂಬದವರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಪಕ್ಷದಿಂದ ಮೆಚ್ಚುಗೆ ಬೇಕಿತ್ತು. ಹೀಗಾಗಿ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗೆ ನಾನು ಬೇಜಾರು ಮಾಡಿಕೊಳ್ಳಲ್ಲ ಎಂದು ತಿರುಗೇಟು ಕೊಟ್ಟರು.

    ಅಂಬರೀಶ್ ಅವರು ಸ್ವಾರ್ಥ, ದ್ವೇಷ ರಾಜಕಾರಣ ಮಾಡಿಲ್ಲ. ಇತ್ತ ನನ್ನ ಬೆಂಬಲಕ್ಕೆ ಮಂಡ್ಯದ ಜನತೆ ನಿಂತಿದೆ. ನಾನು ರಾಜಕೀಯಕ್ಕೆ ಬಂದಿದ್ದ ಕಾರಣವೇ ಜನರು. ಯಾರನ್ನೂ ದ್ವೇಷಿಸುವ, ಎದುರು ಹಾಕಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿಲ್ಲ. ನಾನು ಯಾರಿಗೂ ಸವಾಲು ಹಾಕಿಲ್ಲ ಎಂದು ತಿಳಿಸಿದರು.

    ಬಿಜೆಪಿ ಮುಖಂಡರನ್ನು ಭೇಟಿ ಮಾಡಿದ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಮಂಡ್ಯದ ಸಮಸ್ಯೆಗಳ ಕುರಿತು ಮೀರಾ ಶಿವಲಿಂಗಯ್ಯ ಅವರು ಸಲಹೆ ನೀಡಿದ್ದಾರೆ. ಇದರ ಹೊರತಾಗಿ ನಾವು ರಾಜಕೀಯ ವಿಚಾರವಾಗಿ ಮಾತನಾಡಿಲ್ಲ. ಮಂಡ್ಯ ಅಭಿವೃದ್ಧಿಯ ಕುರಿತು ಕೆಲವು ಸಲಹೆ ನೀಡಿದ್ದಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಡ್ಯದಿಂದ ನಿಖಿಲ್ ಸ್ಪರ್ಧೆ – ಪರೋಕ್ಷವಾಗಿ ತಿಳಿಸಿದ ದೇವೇಗೌಡ

    ಮಂಡ್ಯದಿಂದ ನಿಖಿಲ್ ಸ್ಪರ್ಧೆ – ಪರೋಕ್ಷವಾಗಿ ತಿಳಿಸಿದ ದೇವೇಗೌಡ

    ಮಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುವದನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.

    ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಕುರಿತು ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಟಿಕೆಟ್ ಇಚ್ಛೆ ಹೊಂದಿದ್ದಾರೆ. ಜೊತೆಗೆ ನಿಖಿಲ್ ಅವರನ್ನು ರಾಜಕೀಯಕ್ಕೆ ಬರುವಂತೆ ಜಿಲ್ಲೆಯ ಜನತೆ ಒತ್ತಾಯಿಸುತ್ತಿದ್ದಾರೆ ಎಂದ ಅವರು, ಮಂಡ್ಯದಲ್ಲಿ ಹಿಂದಿನಿಂದಲೂ ಜೆಡಿಎಸ್ ಪ್ರಬಲವಾಗಿದೆ. ನಿಖಿಲ್ ಸ್ಪರ್ಧಿಸುವುದಾದರೆ ಸ್ಪರ್ಧೆ ಮಾಡಲಿ ಎಂದು ಹೇಳಿದರು. ಇದನ್ನು ಓದಿ: ಜೆಡಿಎಸ್ ಪಕ್ಷದಿಂದಲೇ ಸುಮಲತಾಗೆ ಟಿಕೆಟ್ ಕೊಡಬಹುದು: ಚಲುವರಾಯ ಸ್ವಾಮಿ

    ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆಂದರು ಹೇಳಿದರು. ಹೀಗಾಗಿ ಸ್ಪರ್ಧಿಸುವಂತೆ ಹೇಳಿದ್ದೇನೆ. ತಾತ ಪ್ರಜ್ವಲ್ ರೇವಣ್ಣ ಅವರಿಗೆ ಮಾತ್ರ ಆಸಕ್ತಿವಹಿಸುತ್ತಾರೆಂದು ಎಂದುಕೊಳ್ಳುವುದು ಬೇಡ. ಅದಕ್ಕಾಗಿ ನಿಖಿಲ್‍ಗೂ ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದೇನೆ ಎಂದು ಹೇಳಿದರು. ಇದನ್ನು ಓದಿ: ಎಡಬಿಡಂಗಿಗಳು ಮೈತ್ರಿ ಅಭ್ಯರ್ಥಿ ವಿರೋಧಿಸ್ತಾರೆ: ಕಾಂಗ್ರೆಸ್ ವಿರುದ್ಧ ಸುರೇಶ್‍ಗೌಡ ಕಿಡಿ

    ನಮ್ಮದು ರಾಜಕಿಯ ಕುಟುಂಬ ಅಲ್ಲ, ರೈತರ ಕುಟುಂಬ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿರಲಿಲ್ಲ. ರೇವಣ್ಣನಿಗೋಸ್ಕರ ಇಂಡಸ್ಟ್ರಿಯಲ್ ಸೈಟ್ ಖರೀದಿಸಿದ್ದೆ. ಆದರೆ ರೇವಣ್ಣ ಅದನ್ನು ಬಿಟ್ಟು ರಾಜಕೀಯಕ್ಕೆ ಬಂದ. ಪ್ರಜ್ವಲ್‍ಗೂ ರಾಜಕೀಯಕ್ಕೆ ಬರಬೇಡ ಎಂ.ಟೆಕ್ ಮಾಡುವಂತೆ ಹೇಳಿದ್ದೆ. ಆದರೆ ಅವನು ಮನಸ್ಸು ಮಾಡಲಿಲ್ಲ. ಹೀಗಾಗಿ ಪಕ್ಷದ ಮುಖಂಡರ ಜೊತೆ ಮಾತಾಡಿದ್ದೇನೆ. ದೇವರ ಇಚ್ಛೆ ಏನೋ, ಗೊತ್ತಿಲ್ಲ. ಎಲ್ಲರೂ ರಾಜಕೀಯಕ್ಕೆ ಬಂದಿದ್ದಾರೆ ಎಂದು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.

    ಲೋಕಸಭಾ ಚುನಾವಣೆಗೆ ಒಂದು ವಾರದಲ್ಲಿ ದಿನಾಂಕ ನಿಗದಿಯಾಗಲಿದೆ. ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಬರುವ ಊಹಾಪೋಹಗಳು ಅಷ್ಟೇ. ನಾವು ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶವನ್ನು ಕೊಡಲ್ಲ. ರಾಷ್ಟ್ರೀಯ ಪಕ್ಷದ ಮುಖಂಡರು ಬಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಲು ಒತ್ತಾಯಿಸಿದರು. ಬಿಜೆಪಿಯ ಪ್ರಗತಿಯನ್ನು ತಡೆಗಟ್ಟುವ ಉದ್ದೇಶದಿಂದ ಮೈತ್ರಿಯಾಗಿದ್ದೇವೆ. ಮೈತ್ರಿಗೆ ಅಪಾಯವಾಗುವ ರೀತಿ ಅವಕಾಶ ಕೊಡಲ್ಲ ಎಂದು ತಿಳಿಸಿದರು.

    ರಾಜದಲ್ಲಿ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‍ಗೆ ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‍ಗೆ ಹೇಳಿದ್ದೇನೆ. ಆದರೆ ಮಾತುಕತೆಯ ಬಳಿಕ ಅಂತಿಮ ತೀರ್ಮಾನಕ್ಕೆ ಬರುತ್ತೇವೆ. ಜೊತೆಗೆ ತೀರ್ಮಾನವನ್ನು ಸೌಹಾರ್ದಯುತವಾಗಿ ಒಪ್ಪಿಕೊಳ್ಳುತ್ತೇವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    – ಮಂಡ್ಯ ಕ್ಷೇತ್ರ ಕಾಂಗ್ರೆಸ್‍ಗೆ ಹಂಚಿಕೆಯಾದ್ರೆ ಸುಮಲತಾ ನಮ್ಮ ಅಭ್ಯರ್ಥಿ
    – ಹಿಂದೂ, ಮುಸ್ಲಿಂ ಮಧ್ಯೆ ಜಗಳ ಹಚ್ಚೋ ಅನಂತಕುಮಾರ್ ಹೆಗ್ಡೆಗೆ ಜನ ಬುದ್ಧಿ ಕಲಿಸ್ತಾರೆ

    ಬಾಗಲಕೋಟೆ: ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನನ್ನ ಬೆಂಬಲವಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸೀಟು ಹಂಚಿಕೆಯಾಗಬೇಕಿದೆ. ಮಂಡ್ಯ ಕ್ಷೇತ್ರ ಜೆಡಿಎಸ್‍ಗೆ ಹೋಗುತ್ತೋ ಅಥವಾ ಕಾಂಗ್ರೆಸ್‍ಗೆ ಬರುತ್ತೋ ಗೊತ್ತಿಲ್ಲ. ಒಂದು ವೇಳೆ ಮಂಡ್ಯ ಕ್ಷೇತ್ರ ಕಾಂಗ್ರೆಸ್ಸಿಗೆ ಹಂಚಿಕೆಯಾದರೆ ಸುಮಲತಾ ಅವರೇ ನಮ್ಮ ಅಭ್ಯರ್ಥಿ. ಸುಮಲತಾ ಅಂಬರೀಶ್ ಅವರ ಹೆಸರು ಶಿಫಾರಸ್ಸಿಗೆ ನನ್ನ ಮೊದಲ ಬೆಂಬಲವಿದೆ ಎಂದು ಹೇಳಿದರು.

    ದಿವಂಗತ ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಅವರ ನಿಧನದ ಅನುಕಂಪದ ಸಹಕಾರದಿಂದ ಸುಮಲತಾ ಮಂಡ್ಯದಿಂದ ಗೆಲ್ಲುತ್ತಾರೆ. ಹೀಗಾಗಿ ಅವರಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.

    ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರಿಗೆ ಕಾರವಾರ ಜನ ಬುದ್ಧಿ ಕಲಿಸುತ್ತಾರೆ. ರಾಮಕೃಷ್ಣ ಹೆಗಡೆ ಸೇರಿದಂತೆ ಹೆಗಡೆ ಮನೆತನಗಳ ಹೆಸರಿಗೆ ಅನಂತಕುಮಾರ್ ಹೆಗ್ಡೆ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದರು.

    ಒಂದು ವೇಳೆ ನಾನು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವನಾಗಿದ್ದರೆ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ದೊಡ್ಡ ಆಂದೋಲನವನ್ನೇ ಆರಂಭಿಸುತ್ತಿದ್ದೆ. ಆದರೆ ಸಂವಿಧಾನದ ಅರ್ಹತೆ, ಅವಕಾಶಗಳ ಆಧಾರದ ಮೇಲೆ ಲೋಕಸಭೆ ಸದಸ್ಯರಾಗಿರುವ ಅನಂತಕುಮಾರ್ ಹೆಗ್ಡೆ, ಸಂವಿಧಾನವನ್ನೇ ಬದಲಾವಣೆ ಮಾಡಲು ಹೊಟಿದ್ದಾರೆ ಎಂದು ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಳಿದಷ್ಟು ಕ್ಷೇತ್ರಗಳು ಸಿಗದೇ ಇದ್ರೆ ಮುಂದೆ ನೋಡೋಣ: ರೇವಣ್ಣ

    ಕೇಳಿದಷ್ಟು ಕ್ಷೇತ್ರಗಳು ಸಿಗದೇ ಇದ್ರೆ ಮುಂದೆ ನೋಡೋಣ: ರೇವಣ್ಣ

    ಬೆಂಗಳೂರು: ಜೆಡಿಎಸ್ ಕೇಳಿರುವಷ್ಟು ಲೋಕಸಭಾ ಕ್ಷೇತ್ರಗಳು ಸಿಗದೇ ಹೋದರೆ ಮುಂದೆ ನೋಡೋಣ ಲೋಕೋಪಯೋಗಿ ಸಚಿವ ಎಚ್‍ಡಿ ರೇವಣ್ಣ ಹೇಳಿದ್ದಾರೆ.

    ಕಾಂಗ್ರೆಸ್‍ನೊಂದಿಗೆ ಲೋಕಸಭಾ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಜೆಡಿಎಸ್ ಶಾಸಕರು, ಮುಖಂಡರು ಒನ್ ಥರ್ಡ್ ಅಂದ್ರೆ 10 ರಿಂದ 12 ಸೀಟುಗಳನ್ನು ಕೇಳುತ್ತಿದ್ದಾರೆ. ಈ ವಿಚಾರವಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಹೈಕಮಾಂಡ್ ಚರ್ಚೆ ಮಾಡುತ್ತಿದೆ. ಜೆಡಿಎಸ್ ಕೇಳಿರುವಷ್ಟು ಸೀಟು ಸಿಗದೇ ಹೋದರೆ ಮುಂದೆ ನೋಡೋಣ ಎಂದು ಹೇಳಿದರು.

    ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷದ ಒಟ್ಟು 7 ಶಾಸಕರಿದ್ದಾರೆ. ಹೀಗಾಗಿ ಸುಮಲತಾ ಅಂಬರೀಶ್ ಅವರಿಗೆ ನಾವ್ಯಾಕೆ ಲೋಕಸಭಾ ಟಿಕೆಟ್ ಬಿಟ್ಟುಕೊಡಬೇಕು ಎಂದು ತಿಳಿಸಿದರು.

    ಕಾಂಗ್ರೆಸ್‍ನಿಂದ ಸುಮಲತಾ ಸ್ಪರ್ಧಿಸಿದ್ರೆ ನಿಮ್ಮ ಅಭ್ಯರ್ಥಿಯನ್ನು ಹಾಕಲ್ವಾ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಗುಡುಗಿದ ಸಚಿವರು, ನಾವ್ಯಾಕೆ ಅಭ್ಯರ್ಥಿಯನ್ನು ಹಿಂಪಡೆಯಬೇಕು? ಅವರೇನು ನಮ್ಮ ಪಕ್ಷದವರೇ ಎನ್ನುವ ಮೂಲಕ ಪರೋಕ್ಷವಾಗಿ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಕೇಳಿದ್ರೆ ಎಂಬ ಪ್ರಶ್ನೆಗೆ ರೇವಣ್ಣ ಉತ್ತರಿಸಿದ ಸಚಿವರು, ಅವರು ಟಿಕೆಟ್ ಕೇಳ್ತಾ ಇರೋದು ಕಾಂಗ್ರೆಸ್‍ನಿಂದ ಎಂದು ಹಾರಿಕೆ ಉತ್ತರ ನೀಡಿ ದೋಸ್ತಿ ನಾಯಕರ ಮೇಲೆ ಸಂಪೂರ್ಣ ಜವಾಬ್ದಾರಿ ಹಾಕಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದುಷ್ಟರ ಎದೆ ಅದುರಿಸೋ ‘ತಾಯಿಗೆ ತಕ್ಕ ಮಗ’!

    ದುಷ್ಟರ ಎದೆ ಅದುರಿಸೋ ‘ತಾಯಿಗೆ ತಕ್ಕ ಮಗ’!

    ಬೆಂಗಳೂರು: ಶಶಾಂಕ್ ನಿರ್ದೇಶನ ಮಾಡಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿರೋ ಚಿತ್ರ ತಾಯಿಗೆ ತಕ್ಕ ಮಗ. ಅಗಾಧವಾದ ನಿರೀಕ್ಷೆಗಳ ಒಡ್ಡೋಲಗದಲ್ಲಿ ಈ ಚಿತ್ರ ತೆರೆ ಕಂಡಿದೆ. ಪ್ರೇಕ್ಷಕರು ಯಾವ ಕುತೂಹಲವಿಟ್ಟುಕೊಂಡು ಕಾತರರಾಗಿದ್ದರೋ ಅದನ್ನು ಈ ಚಿತ್ರ ತಣಿಸುವಂತೆಯೇ ಮೂಡಿ ಬಂದಿದೆ.

    ಆಕೆ ವಕೀಲ ವೃತ್ತಿಯನ್ನು ನ್ಯಾಯಕ್ಕಾಗಿಯೇ ಮುಡಿಪಾಗಿಟ್ಟ ತಾಯಿ. ಎಂಥಾ ಸಂದರ್ಭದಲ್ಲಿಯಾದರೂ ಅನ್ಯಾಯದ ವಿರುದ್ಧ ಕಾನೂನು ಸಮರ ನಡೆಸುವ ಗಟ್ಟಿಗಿತ್ತಿಯಾದ ಆಕೆಗೊಬ್ಬ ಮಗ. ಅವನು ಮೋಹನದಾಸ. ಅಮ್ಮ ಅಂದರೆ ಈತನ ಪ್ರಪಂಚ. ನ್ಯಾಯ, ನೀತಿಯ ವಿಚಾರದಲ್ಲಿ ಮಾತ್ರವಲ್ಲದೇ ಎಲ್ಲದರಲ್ಲಿಯೂ ಈತ ತಾಯಿಗೆ ತಕ್ಕ ಮಗ.

    ಇಂಥಾ ವಕೀಲೆ ತನ್ನ ವೃತ್ತಿಯ ನಿಮಿತ್ತವಾಗಿಯೇ ದುಷ್ಟ, ಭ್ರಷ್ಟ ರಾಜಕಾರಣಿಯೋರ್ವನನ್ನ ಎದುರು ಹಾಕಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತೆ. ಆ ರಾಜಕಾರಣಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಿ ಬಿಡಬಲ್ಲ ಕಿರಾತಕ. ಆತನ ಮಗ ತಂದೆಯ ಅಧಿಕಾರದ ಅಮಲಿನಲ್ಲಿ ಬೇಡದ್ದನ್ನೇ ಮಾಡುತ್ತಾ ಸಮಾಜ ಕಂಟಕನಾಗಿರುತ್ತಾನೆ. ಸದಾ ಅಮ್ಮನ ರಕ್ಷಣೆಗೆ ನಿಲ್ಲುತ್ತಾ ದುಷ್ಟರನ್ನು ಬಗ್ಗು ಬಡಿಯುವ ಜಾಯಮಾನದ ಮೋಹನದಾಸ ಆ ರಾಜಕಾರಣಿ ಮತ್ತು ಮಗನ ವಿರುದ್ಧವೂ ಸೆಣಸಬೇಕಾಗಿ ಬರುತ್ತದೆ. ಈ ನ್ಯಾಯ ಪಥದ ಹೋರಾಟದಲ್ಲಿ ತಾಯಿ ಮತ್ತು ಮಗ ಗೆಲ್ಲುತ್ತಾರಾ? ಅವರ ಕಥೆ ಏನಾಗುತ್ತೆ ಎಂಬುದೇ ಅಸಲಿ ಕುತೂಹಲ.

    ಈ ಕಥಾ ಎಳೆ ತುಸು ಗಂಭೀರವಾಗಿ ಕಾಣಿಸೋದರಲ್ಲಿ ಅಚ್ಚರಿಯೇನಿಲ್ಲ. ಆದರೆ ಅದನ್ನು ಎಲ್ಲಿಯೂ ಹಾಗನ್ನಿಸದಂತೆ ನಿರ್ದೇಶಕ ಶಶಾಂಕ್ ಕಟ್ಟಿ ಕೊಟ್ಟಿದ್ದಾರೆ. ಸಾಧು ಕೋಕಿಲಾ ಸಮರ್ಥವಾಗಿ ನಗಿಸುತ್ತಾರೆ. ಭಜರಂಗಿ ಲೋಕಿ ಖಳನಾಗಿ ವಿಜೃಂಭಿಸಿದರೆ ಆತನ ಎದುರಿಗೆ ಅಜೇಯ್ ರಾವ್ ಅಕ್ಷರಶಃ ಅಬ್ಬರಿಸಿದ್ದಾರೆ. ಈ ಮೂಲಕವೇ ಅವರು ಆಕ್ಷನ್ ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ನೀಡುತ್ತಾರೆ. ಸುಮಲತಾ ಅವರದ್ದೂ ಕೂಡಾ ನೆನಪಲ್ಲುಳಿಯುವಂಥಾ ನಟನೆ. ಇದೆಲ್ಲದಕ್ಕೆ ಹಾಡು ಮತ್ತು ಹಿನ್ನೆಲೆ ಸಂಗೀತಗಳೂ ಸಾಥ್ ನೀಡಿವೆ.

    ಹಾಗಂತ ಇಡೀ ಚಿತ್ರದಲ್ಲಿ ಯಾವ ಕೊರತೆಯೂ ಇಲ್ಲ ಅನ್ನುವಂತಿಲ್ಲ. ಆದರೆ ಶಶಾಂಕ್ ಇಲ್ಲಿ ಅನುಸರಿಸಿರೋ ಮನೋರಂಜನೆಯ ಕಮರ್ಷಿಯಲ್ ಮಾರ್ಗ ಅಂಥಾ ಕುಂದು ಕೊರತೆಗಳನ್ನು ದೊಡ್ಡದಾಗಿ ಕಾಡದಂತೆ ಮಾಡುವಲ್ಲಿ ಯಶ ಕಂಡಿದೆ. ಈ ಮೂಲಕ ತಾಯಿಗೆ ತಕ್ಕ ಮಗ ಪ್ರೇಕ್ಷಕರನ್ನು ನಿರೀಕ್ಷೆಯಂತೆಯೇ ಹಿಡಿದಿಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews