Tag: Sumalatha Ambarish

  • ನುಡಿದಂತೆ ನಡೆದ ಸುಮಲತಾ- ಸ್ವಂತ ಖರ್ಚಿನಲ್ಲಿ ಮಂಡ್ಯಕ್ಕೆ ನಿತ್ಯ 2000 ಲೀ. ಆಕ್ಸಿಜನ್

    ನುಡಿದಂತೆ ನಡೆದ ಸುಮಲತಾ- ಸ್ವಂತ ಖರ್ಚಿನಲ್ಲಿ ಮಂಡ್ಯಕ್ಕೆ ನಿತ್ಯ 2000 ಲೀ. ಆಕ್ಸಿಜನ್

    ಮಂಡ್ಯ: ಜಿಲ್ಲೆಯಲ್ಲಿ ಎದುರಾಗುತ್ತಿರುವ ಆಕ್ಸಿಜನ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜಿಲ್ಲೆಗೆ ಪ್ರತಿ ದಿನ 2000 ಲೀಟರ್ ಸಾಮರ್ಥ್ಯದ 20 ಜಂಬೋ ಸಿಲಿಂಡರ್ ಗಳನ್ನು ನೀಡಲು ಮುಂದಾಗಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಸಂಸದೆ ಸುಮಲತಾ ಅಂಬರೀಶ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದಿದ್ದರು. ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚೆ ಮಾಡಲಾಯಿತು. ಇದೇ ವೇಳೆ ಜಿಲ್ಲೆಯಲ್ಲಿ ಎದುರಾಗಿರುವ ಆಕ್ಸಿಜನ್ ಕೊರತೆ ನೀಗಿಸಲು ಏನು ಮಾಡಬೇಕೆಂದು ಸಹ ಚಿಂತನೆ ಮಾಡಲಾಯಿತು. ಆದರೆ ಸದ್ಯ ಸರ್ಕಾರದಿಂದ ಎಂಪಿ ಫಂಡ್ ಅಥವಾ ಬೇರೆ ಯಾವುದೂ ಅನುದಾನ ಇಲ್ಲದ ಕಾರಣ ಸುಮಲತಾ ಅವರು ನನ್ನ ಸ್ವಂತ ಖರ್ಚಿನಲ್ಲಿ ಪ್ರತಿ ದಿನ 2000 ಲೀಟರ್ ಆಕ್ಸಿಜನ್ ಕಳಿಸಿಕೊಡುತ್ತೇನೆ ಎಂದು ತಿಳಿಸಿದ್ದರು.

    ಸುಮಲತಾ ಅವರು ಅಂದು ಕೊಟ್ಟ ಭರವಸೆಯಂತೆ ಇಂದು 2000 ಲೀಟರ್ ಸಾಮರ್ಥ್ಯ 20 ಜಂಬೋ ಸಿಲಿಂಡರ್‍ನ್ನು ಜಿಲ್ಲಾಡಳಿತದ ಮೂಲಕ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಪ್ರತಿ ದಿನ ಇದೇ ರೀತಿ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಸದೆ ಸುಮಲತಾ ಅಂಬರೀಶ್ ಅವರು ನುಡಿದಂತೆ ನಡೆದುಕೊಂಡಿದ್ದಾರೆ. ಸುಮಲತಾ ಅವರ ಈ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

  • ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯದ ಗಣಿಗಾರಿಕೆ ಪ್ರದೇಶಗಳಿಗೆ ಸುಮಲತಾ, ನಿರಾಣಿ ಭೇಟಿ

    ಮಂಡ್ಯ: ಸಂಸತ್‍ನಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಸಚಿವ ಮುರುಗೇಶ್ ನಿರಾಣಿ ಅವರೊಂದಿಗೆ ಮಂಡ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿದರು.

    ಮೊದಲು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಸಮೀಪ ನಡೆಯುತ್ತಿರುವ ಗಣಿಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿದರು. ಈ ವೇಳೆ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ನಡೆಸುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕಾರಿಗಳ ಬಳಿ ಇದ್ದ ಮಾಹಿತಿಯನ್ನು ಸಚಿವ ಮುರುಗೇಶ್ ನಿರಾಣಿ ಅವರಿಗೆ ನೀಡಲು ಸೂಚನೆ ನೀಡಿದರು. ಬಳಿಕ ದಿಲೀಪ್ ಕನ್‍ಸ್ಟ್ರಕ್ಷನ್ ಅವರು ಅಕ್ರಮವಾಗಿ ಮಾಡಿರುವ ಗಣಿಗಾರಿಕೆಯ ವರದಿ ತೆಗೆದುಕೊಂಡು ಅವರಿಗೆ ದಂಡ ವಿಧಿಸುವುದಾಗಿ ಮುರುಗೇಶ್ ನಿರಾಣಿ ಅವರು ತಿಳಿಸಿದರು. ಅಲ್ಲದೇ ರಾಜಧನ ಪಾವತಿ ಮಾಡದವರ ವಿರುದ್ಧ ಕ್ರಮಕೈಗೊಂಡು ಅವರಿಂದ ರಾಜಧನ ವಸೂಲಿ ಮಾಡುವುದಾಗಿ ಅವರು ತಿಳಿಸಿದರು.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ನಾನು ಸಂಸದೆ ಆದಾಗಿನಿಂದ ಮಂಡ್ಯ ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನನ್ನ ಉದ್ದೇಶ ನನ್ನ ಜನರಿಗೆ ಹಾಗೂ ರೈತರಿಗೆ ಅನ್ಯಾಯವಾಗ ಬಾರದು, ನಾನು ಅಭಿವೃದ್ಧಿಯ ಪರವಾಗಿ ಇದ್ದೇನೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕು. ಆದರೆ ಮಂಡ್ಯ ಜಿಲ್ಲೆಯಲ್ಲಿ ಕೆಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಇದರಿಂದಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ನಾನು ಈ ಬಗ್ಗೆ ಸಚಿವರಾದ ಮುರುಗೇಶ್ ನಿರಾಣಿ ಅವರಿಗೆ ಹೇಳಿದ್ದೆ. ಅದರಂತೆ ಇಂದು ಅವರೊಂದಿಗೆ ಬಂದು ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದರು.

  • ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸುಮಲತಾ ಅಂಬರೀಶ್

    ರಾಜ್ಯದಲ್ಲೇ ಅತೀ ಹೆಚ್ಚು ದಿಶಾ ಸಭೆ ನಡೆಸಿದ ಸುಮಲತಾ ಅಂಬರೀಶ್

    ಮಂಡ್ಯ: ರಾಜ್ಯದಲ್ಲೇ ಅತೀ ಹೆಚ್ಚು ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಗಳನ್ನು ನಿಯಮಬದ್ಧವಾಗಿ ನಡೆಸಿದ ಏಕೈಕ ಸಂಸದೆ ಎಂಬ ಹೆಗ್ಗಳಿಕೆಗೆ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರು ಪಾತ್ರರಾಗಿದ್ದಾರೆ.

    ಪ್ರತಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತ್ರೈಮಾಸಿಕಕ್ಕೆ ಒಂದು ದಿಶಾ ಸಭೆಯಂತೆ ವರ್ಷಕ್ಕೆ ವರ್ಷಕ್ಕೆ ನಾಲ್ಕು ಸಭೆಗಳನ್ನು ಮಾಡಬೇಕೆಂಬ ನಿಯಮ ಇದೆ. ಆದರೆ ರಾಜ್ಯದ ಕೆಲ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ 2 ಸಭೆಗಳನ್ನು ನಡೆಸಿದ್ದರೆ, ಇನ್ನೂ ಕೆಲ ಸಂಸದರು ಕೇವಲ ಒಂದು ಸಭೆಯನ್ನು ಮಾತ್ರ ಮಾಡಿದ್ದಾರೆ. ಆದರೆ ಮಂಡ್ಯ ಲೋಕಸಭಾ ಸದಸ್ಯ ಸುಮಲತಾ ಅಂಬರೀಶ್ ಅವರು 2020-21ನೇ ಸಾಲಿನಲ್ಲಿ ನಾಲ್ಕು ಸಭೆಗಳನ್ನು ಮಾಡುವ ಮೂಲಕ ರಾಜ್ಯ ಮಾತ್ರವಲ್ಲದೆ ದೇಶದಲ್ಲಿ ಗಮನ ಸೆಳೆದಿದ್ದಾರೆ. ರಾಜ್ಯದಲ್ಲಿ ಅತೀ ಹೆಚ್ಚು ದಿಶಾ ಸಭೆಗಳನ್ನು ಮಾಡಿದ ಮೊದಲ ಸಂಸದೆ ಎಂದು ಭಾರತ ಸರ್ಕಾರದ ವೆಬ್‍ಸೈಟ್‍ನಲ್ಲಿ ದಾಖಲಾಗಿದೆ.

    ಸುಮಲತಾ ಅಂಬರೀಶ್ ಅವರು ಕಳೆದ ನಾಲ್ಕು ದಿಶಾ ಸಭೆಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಯ ಬಗ್ಗೆ ಹಾಗೂ ಇತರ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಇದಲ್ಲದೇ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ.

  • ಶಿಕ್ಷಕರ ದಿನಾಚರಣೆಯಂದು ಅಂಬಿಯನ್ನು ನೆನೆದ ಡಿ ಬಾಸ್

    ಶಿಕ್ಷಕರ ದಿನಾಚರಣೆಯಂದು ಅಂಬಿಯನ್ನು ನೆನೆದ ಡಿ ಬಾಸ್

    ಬೆಂಗಳೂರು: ಡಿ ಬಾಸ್ ದರ್ಶನ್ ಕಲಿಯುಗದ ಕರ್ಣ ಅಂಬರೀಶ್ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಎಂಬುದು ತಿಳಿದೇ ಇದೆ. ಅದೇ ರೀತಿ ಅಂಬರೀಶ್-ಸುಮಲತಾ ದಂಪತಿ ಸಹ ದಾಸನನ್ನು ತಮ್ಮ ಮನೆ ಮಗನಂತೆ ಕಾಣುತ್ತಾರೆ. ಹೀಗಾಗಿ ಹಿರಿಯರಿಗೆ ಗೌರವ ನೀಡುವ ಸಮಯ ಸಿಕ್ಕಾಗಲೆಲ್ಲ ಡಿ ಬಾಸ್ ಇವರನ್ನು ನೆನದು ಪೋಸ್ಟ್ ಹಾಕುತ್ತಾರೆ. ಅದೇ ರೀತಿ ಇದೀಗ ಶಿಕ್ಷಕರ ದಿನಾಚರಣೆಯಂದು ವಿಶೇಷ ಪೋಸ್ಟ್ ಹಾಕಿದ್ದಾರೆ.

    ಶಿಕ್ಷಕರ ದಿನಾಚರಣೆ ಅಂಗವಾಗಿ ದರ್ಶನ್ ವಿಶೇಷ ಪೋಸ್ಟ್ ಹಾಕಿದ್ದು, ಈ ಮೂಲಕ ತಮ್ಮ ಜೀವನದಲ್ಲಿ ಪಾಠ ಕಲಿಸಿದ ಗುರುವಿನ ಸಮಾನರಾದ ಮಹತ್ವದ ವ್ಯಕ್ತಿಗಳನ್ನು ನೆನೆದಿದ್ದಾರೆ. ತಮ್ಮ ತಂದೆ, ತಾಯಿ ತುಗುದೀಪ ಶ್ರೀನಿವಾಸ್ ದಂಪತಿ ಹಾಗೂ ಅಂಬರೀಶ್- ಸುಮಲತಾ ದಂಪತಿಯ ಫೋಟೋ ಹಾಕಿ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

    ಈ ಕುರಿತು ಸಾಲುಗಳನ್ನು ಬರೆದಿರುವ ಅವರು, ಹುಟ್ಟಿನಿಂದ ಸಾಯುವ ವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಹುಟ್ಟಿನಿಂದ ಸಾಯುವವರೆಗೂ ಸರಿಯಾದ ಮಾರ್ಗದರ್ಶನ ನೀಡಿ ನಮ್ಮನ್ನು ನಮ್ಮ ಗುರಿಯತ್ತ ಕೊಂಡೊಯ್ಯಲು ಶ್ರಮಿಸುವ ಶಿಕ್ಷಕರಿಗೆ, ಗುರು ಹಿರಿಯರಿಗೆ ಶಿಕ್ಷಕರ ದಿನಾಚರಣೆಯ ಹಾರ್ಧಿಕ ಶುಭಾಶಯಗಳು ????

    Posted by Darshan Thoogudeepa Srinivas on Saturday, September 5, 2020

    ಗುರು, ಹಿರಿಯರನ್ನು ನೆನೆಯುವ ಸಂದರ್ಭ ಬಂದಾಗಲೆಲ್ಲ ಅವರ ತಂದೆ ತಾಯಿ ಹಾಗೂ ಅಂಬರೀಶ್- ಸುಮಲತಾರನ್ನು ಡಿ ಬಾಸ್ ನೆನೆಯುತ್ತಾರೆ. ಅವರ ಹುಟ್ಟುಹಬ್ಬದ ಸಂದರ್ಭದಲ್ಲೂ ಸಹ ವಿಶೇಷ ಸಾಲುಗಳ ಮೂಲಕ ಭಾವನಾತ್ಮಕವಾಗಿ ಶುಭಕೋರುತ್ತಾರೆ. ಸುಮಲತಾ ಅಂಬರೀಶ್ ಸಹ ದರ್ಶನ್ ಹುಟ್ಟುಹಬ್ಬಕ್ಕೆ ಮುದ್ದಿನ ಮಗ ಎಂದೇ ಸಂಬೋೀಧಿಸಿ ಶುಭಾಶಯ ತಿಳಿಸುತ್ತಾರೆ.

    ಆಗಸ್ಟ್ 27ರಂದು ಸುಮಲತಾ ಅಂಬರೀಶ್ ಹುಟ್ಟುಹಬ್ಬದಂದು ವಿಶೇಷ ಪೋಸ್ಟ್ ಮೂಲಕ ದರ್ಶನ್ ಶುಭ ಕೋರಿದ್ದರು. ಮದರ್ ಇಂಡಿಯಾ ಸುಮಲತಾ ಅಂಬರೀಶ್ ಅಮ್ಮನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಅದೇ ರೀತಿ ಸುಮಲತಾ ಅಂಬರೀಶ್ ಸಹ ಮಗ ಎಂದು ಹೇಳಿಯೇ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ.

    “ಮದರ್ ಇಂಡಿಯಾ” Sumalatha Ambareesh ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.????????

    Posted by Darshan Thoogudeepa Srinivas on Wednesday, August 26, 2020

    ದರ್ಶನ್ ಹಾಗೂ ಅಂಬರೀಶ್ ಕುಟುಂಬ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ. ಈ ಮೂಲಕ ತಮ್ಮ ಪ್ರೀತಿಯನ್ನು ಮೆರೆಯುತ್ತಾರೆ. ಅಂಬರೀಶ್ ಕುಟುಂಬದ ಮಗನಂತೆ ದರ್ಶನ್ ಇದ್ದಾರೆ. ಹೀಗಾಗಿ ದರ್ಶನ್‍ಗೆ ಅಂಬರೀಶ್ ಹಾಗೂ ಸುಮಲತಾ ಎಂದರೆ ಎಲ್ಲಿಲ್ಲದ ಪ್ರೀತಿ. ಇಂದು ಶಿಕ್ಷಕರ ದಿನಾಚರಣೆ ದಿನ ಸಹ ತಂದೆ ತಾಯಿ ಜೊತೆ ಅಂಬರೀಶ್ ಅವರನ್ನೂ ನೆನೆದಿದ್ದಾರೆ.

  • ಹಿಂದೆ ನಾವು ಬೆಂಬಲ ಕೊಟ್ಟಿದ್ದೇವೆ, ಈಗ ಸುಮಲತಾ ಕೊಡಲೇಬೇಕು – ಕರಂದ್ಲಾಜೆ

    ಹಿಂದೆ ನಾವು ಬೆಂಬಲ ಕೊಟ್ಟಿದ್ದೇವೆ, ಈಗ ಸುಮಲತಾ ಕೊಡಲೇಬೇಕು – ಕರಂದ್ಲಾಜೆ

    ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ನಾವು ಬೆಂಬಲ ಕೊಟ್ಟಿದ್ದೇವೆ. ಈಗ ಸಂಸದೆ ಸುಮಲತಾ ಅಂಬರೀಶ್ ಅವರು ನಮಗೆ ಬೆಂಬಲ ಕೊಡಲೇ ಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸುಮಲತಾ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ನಾವು ಬೆಂಬಲ ಕೊಟ್ಟಿದ್ದೇವೆ. ಈ ಸುಮಲತಾ ಬೆಂಬಲ ಕೊಡಲೇ ಬೇಕು. ಏಕೆಂದರೆ ನಾವು ಬೆಂಬಲ ಕೊಟ್ಟಿದ್ದೆವು. ಹೀಗಾಗಿ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

    ಬೆಂಬಲಿಸಿ ಎಂದು ನಾವು ಒತ್ತಾಯ ಮಾಡುವ ಪ್ರಶ್ನೆಯೇ ಇಲ್ಲ. ಅವರೇ ಕೇಂದ್ರ, ರಾಜ್ಯ ಸರ್ಕಾರಕ್ಕೆ ನನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ. ಈಗ ಏನು ಬದಲಾವಣೆ ಆಗಿದೆಯೋ ಗೊತ್ತಿಲ್ಲ ಎಂದರು.

    ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಎಂದರೆ ಸುಳ್ಳು, ಸುಳ್ಳು ಎಂದರೆ ಸಿದ್ದರಾಮಯ್ಯ. ಅನ್ನ ಭಾಗ್ಯ ಯೋಜನೆ ನನ್ನದು ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಅದು ಕೇಂದ್ರ ಸರ್ಕಾರದ ಯೋಜನೆ, ಕೇಂದ್ರ ಸರ್ಕಾರ ಅದಕ್ಕೆ ಹಣ ನೀಡಿದೆ. ಕೇಂದ್ರದ ಯೋಜನೆಯನ್ನು ನನ್ನದು ಎನ್ನುತ್ತಾರೆ. ಅವರದು ಸ್ವಂತ ಸಾಧನೆ ಏನೆಂದು ಹೇಳಲಿ ಎಂದು ಸವಾಲು ಹಾಕಿದರು.

    ಒಂದು ಜನಾಂಗಕ್ಕೆ ಒಂದು ಸಾಧನೆ ಹೇಳಲಿ, ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪತನದಲ್ಲಿದೆ. ಈ ಅಧಃಪತನಕ್ಕೆ ಸಿದ್ದರಾಮಯ್ಯ ನವರ ಕೊಡುಗೆ ಅಪಾರ. ನಿಜಕ್ಕೂ ಅವರಿಗೆ ನಾವು ಅಭಿನಂದನೆ ಸಲ್ಲಿಸಬೇಕು ಎಂದು ಹರಿಹಾಯ್ದರು.

  • ಅಭಿಷೇಕ್ ಹೆಸರನ್ನು ರಾಜಕೀಯಕ್ಕೆ ಎಳೆಯಬೇಡಿ – ಸುಮಲತಾ ಅಂಬರೀಶ್ ಸ್ಪಷ್ಟನೆ

    ಅಭಿಷೇಕ್ ಹೆಸರನ್ನು ರಾಜಕೀಯಕ್ಕೆ ಎಳೆಯಬೇಡಿ – ಸುಮಲತಾ ಅಂಬರೀಶ್ ಸ್ಪಷ್ಟನೆ

    ಬೆಂಗಳೂರು: ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ನೀಡಿದ್ದು, ಅಭಿಷೇಕ್ ಹೆಸರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ತಿಳಿಸಿದ್ದಾರೆ.

    ಅಂಬರೀಶ್ ಅವರ 9ನೇ ತಿಂಗಳ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಲ್ಲಿ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಚರ್ಚೆ ನಡೆಯುತ್ತಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿ ಹೆಸರು ರಾಜಕಾರಣಕ್ಕೆ ದಯವಿಟ್ಟು ತರಬೇಡಿ. ಅವನು ಇನ್ನೂ ಸಿನಿಮಾ ಮಾಡಬೇಕು. ಅದಕೆ ಸಮಯವಿದೆ. ಸದ್ಯಕ್ಕೆ ಅವನು ರಾಜಕೀಯ ಪ್ರವೇಶಿಸುವ ಸನ್ನಿವೇಶ ಇಲ್ಲ. ಆತನೇ ಈ ಕುರಿತು ನಿರ್ಧರಿಸಿದರೆ ಮುಂದೆ ನೋಡೋಣ. ಅಲ್ಲಿಯವರೆಗೂ ಅತನನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ತಿಳಿಸಿದರು.

    ಫೋನ್ ಟ್ಯಾಪಿಂಗ್ ಕುರಿತು ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಕುರಿತು ನಾನು ತನಿಖೆಗೆ ಒತ್ತಾಯ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ಆಗುತ್ತಿದ್ದ ಅನುಮಾನವಿತ್ತು. ಈಗ ಅದು ಬೆಳಕಿಗೆ ಬಂದಿದೆ. ಸಿಬಿಐ ತನಿಖೆಗೆ ವಹಿಸಿದ್ದಾರೆ, ಏನಾಗುತ್ತದೆಯೋ ಕಾದು ನೋಡೋಣ ಎಂದು ಹೇಳಿದರು.

    ಅಂಬರೀಶ್ ಅವರ ಅವರ 9ನೇ ತಿಂಗಳ ತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಸುಮಲತಾ ಪೂಜೆ ಸಲ್ಲಿಸಿದರು. ಅಂಬರೀಶ್ ಕುಟುಂಬಸ್ಥರು ಭಾಗಿಯಾಗಿದ್ದರು. ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.

  • ‘ಸುಮಲತಾ ಎಲ್ಲಿದ್ಯಮ್ಮಾ’ – ಟ್ರೋಲ್‍ಗಳಿಗೆ ಕಿವಿಕೊಡಲ್ಲ ಎಂದ ಸುಮಲತಾ

    ‘ಸುಮಲತಾ ಎಲ್ಲಿದ್ಯಮ್ಮಾ’ – ಟ್ರೋಲ್‍ಗಳಿಗೆ ಕಿವಿಕೊಡಲ್ಲ ಎಂದ ಸುಮಲತಾ

    ಮಂಡ್ಯ: ನಾನು ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ ಹಾಗೂ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ಷೇತ್ರ ಬಿಟ್ಟು ದೆಹಲಿಗೆ ಹಾಲಿಡೇ ಟ್ರಿಪ್‍ಗೆ ತೆರಳಿರಲಿಲ್ಲ. ಅಧಿವೇಶನಕ್ಕೆ ತೆರಳಿದ್ದೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.

    ನಿಖಿಲ್ ಎಲ್ಲಿದ್ಯಪ್ಪಾ ಎಂದು ಟ್ರೋಲ್ ಮಾಡಿದ ರೀತಿಯಲ್ಲಿ, ಸುಮಲತಾ ಎಲ್ಲಿದ್ಯಮ್ಮಾ ಎಂದು ಟ್ರೋಲ್ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಕ್ರಿಸಿರುವ ಅವರು, ಸೋಶಿಯಲ್ ಮೀಡಿಯಾದ ಟ್ರೋಲ್ ಹಾಗೂ ಟೀಕೆಗಳನ್ನು ಗಂಭಿರವಾಗಿ ಪರಿಗಣಿಸುವುದಿಲ್ಲ. ನಾನು ರಜೆಯ ಮಜಾ ಮಾಡಲು ದೆಹಲಿಗೆ ಹೋಗಿರಲಿಲ್ಲ. ಬದಲಿಗೆ ಅಧಿವೇಶನಕ್ಕೆ ತೆರಳಿದ್ದೆ. ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ. ಸದನಕ್ಕೆ ಹಾಜರಾಗದಿದ್ದಲ್ಲಿ ಜನರಲ್ಲಿ ತಪ್ಪು ತಿಳುವಳಿಕೆ ಉಂಟಾಗುತ್ತದೆ. ಹೀಗಾಗಿ ಅಧಿವೇಶನದಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದ್ದಾರೆ.

    ಒಬ್ಬ ಸಂಸದೆಯಾಗಿ ಕೇಂದ್ರದ ನಾಯಕರೊಂದಿಗೆ ಸಂಪರ್ಕ ಸಾಧಿಸದಿದ್ದಲ್ಲಿ ಕ್ಷೇತ್ರದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಏನೇ ಟೀಕೆ ಮಾಡಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಸರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂಬ ನಂಬಿಕೆ ನನಗಿದೆ ಎಂದರು.

    ದರ್ಶನ್ ಬರುತ್ತಿಲ್ಲ, ಯಶ್ ಬರುತ್ತಿಲ್ಲ ಎಂದು ಹೇಳುವುದಲ್ಲ ಸಮಸ್ಯೆ ಪರಿಹಾರಕ್ಕೆ ಎಲ್ಲರೂ ಕೆಲಸ ಮಾಡಬೇಕು. ಡೇಂಜರ್, ರೆಡ್ ಅಲರ್ಟ್ ರೀತಿಯ ವಾತಾವರಣ ಮಂಡ್ಯದಲ್ಲಿಲ್ಲ. ಡೇಂಜರ್ ರೀತಿಯಲ್ಲಿ ಯಾವುದೇ ಪ್ರವಾಹವಿಲ್ಲ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ. ಕಾವೇರಿ ನೀರಿನ ವಿಚಾರ ಕಾವೇರಿ ಪ್ರಾಧಿಕಾರದ ಅಡಿಯಲ್ಲಿ ನಡೆಯಲಿದೆ. ಕಾವೇರಿ ಟ್ರಿಬ್ಯುನಲ್ ವಿಚಾರದಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

    ಮಂಗಳವಾರದಿಂದ ಸೆಪ್ಟೆಂಬರ್ ವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದೇನೆ. ಅಧಿಕಾರಿಗಳು, ಸಾರ್ವಜನಿಕರ ಜೊತೆ ಸಭೆ ಕರೆದು ಚರ್ಚಿಸಲಾಗುವುದು. ಸಮಾವೇಶದಿಂದ ಸಮಯ ವ್ಯರ್ಥವಾಗಲಿದೆ. ಹೀಗಾಗಿ ಸಮಾವೇಶದ ಬದಲಿಗೆ ಜನರ ಬಳಿಗೆ ಹೋಗುತ್ತೇವೆ. ಜನತಾ ದರ್ಶನದ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಅಧಿಕೃತವಾಗಿ ಕಚೇರಿ ತೆರೆಯಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಈ ಮೂಲಕ ಜನರ ಸಮಸ್ಯೆ ಪರಿಹಾರ, ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.

    ನೆರೆ ಪೀಡಿತರ ನೆರವಿಗೆ ಸಿನಿಮಾ ಇಂಡಸ್ಟ್ರಿ ಮೂಲಕ ಪರಿಹಾರ ನೀಡುವ ಕುರಿತು ಚರ್ಚೆ ನಡೆದಿದೆ. ಇನ್ನೆರಡು ದಿನಗಳಲ್ಲಿ ಈ ಕುರಿತು ಅಂತಿಮ ಚರ್ಚೆ ನಡೆಸಲಾಗುವುದು. ಆದರೆ, ಕನ್ನಡ ಫಿಲ್ಮ್ ಇಂಡಸ್ಟ್ರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

    ಉತ್ತಮ ನಿರ್ಧಾರ
    ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಉತ್ತಮವಾಗಿದೆ. ನಾವು ಹಲವು ಬಾರಿ ಶೂಟಿಂಗ್‍ಗಾಗಿ ಕಾಶ್ಮೀರಕ್ಕೆ ತೆರಳಿದಾಗ ಅಲ್ಲಿನ ಹಲವು ಷರತ್ತುಗಳು ಅರಿವಿಗೆ ಬಂದಿದ್ದವು. ಇದ್ಯಾವ ನ್ಯಾಯ ಎಂದು ಮನಸ್ಸಿಗೆ ಆಗಲೇ ಅನ್ನಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ರದ್ದಾಗಿರುವುದು ಸಂತೋಷ ತಂದಿದೆ ಎಂದು ಸುಮಲತಾ ತಿಳಿಸಿದರು.

    ಪ್ರಧಾನಿಯವರನ್ನು ಭೇಟಿ ಮಾಡಿದ ವೇಳೆ ಮಂಡ್ಯದ ಅಭಿವೃದ್ಧಿಗೆ ಮನವಿ ಮಾಡಿದ್ದೆ. ನಿಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದ್ದರು. ಡ್ಯಾಂ ಸೇಫ್ಟಿ ಬಿಲ್ ವಿಚಾರ ಬಂದಾಗ ಕೆಆರ್ ಎಸ್ ಬಗ್ಗೆ ಮಾತನಾಡಿದ್ದು, ಲೋಕಸಭೆಯಲ್ಲಿ ಗಮನ ಸೆಳೆಯಲಾಗುವುದು. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳು ಸಭೆ ಕರೆದಾಗಲೂ ಈ ಕುರಿತು ಮನವಿ ಮಾಡಿದ್ದೇನೆ. ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.

  • ಸುಮಲತಾರನ್ನ ಭೇಟಿಯಾದ ಮೊದಲ ಮತ ಚಲಾಯಿಸಿದ್ದ ಯೋಧ

    ಸುಮಲತಾರನ್ನ ಭೇಟಿಯಾದ ಮೊದಲ ಮತ ಚಲಾಯಿಸಿದ್ದ ಯೋಧ

    ಮಂಡ್ಯ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರ ಪರ ಮತ ಚಲಾಯಿಸಿ ಫೋಟೋ ಹಂಚಿಕೊಂಡಿದ್ದ ಯೋಧ ರಾಜನಾಯಕ್ ಇಂದು ಸುಮಲತಾರನ್ನ ಭೇಟಿ ಮಾಡಿದ್ದಾರೆ.

    ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದವರಾದ ರಾಜನಾಯಕ್ ಅವರು ಅಂಚೆ ಮತದಾನ ಮಾಡಿ ಸುಮಲತಾ ಅವರಿಗೆ ಮತ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಈ ಫೋಟೋ ಸಖತ್ ವೈರಲ್ ಆಗಿತ್ತು.

    ಇಂದು ಸುಮಲತಾರನ್ನ ಮಂಡ್ಯದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ ಶುಭ ಕೋರಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಗೆಲುವು ಪಡೆದಿರುವುದು ಸಂತಸ ತಂದಿದೆ. ಅವರಿಗೆ ಶುಭ ಕೋರಲು ಇಂದು ಆಗಮಿಸಿದ್ದೆ. ನಾನು ಅಂಬಿ ಅವರ ಅಭಿಮಾನಿಯಾಗಿದ್ದೆ. ಈಗ ಸುಮಲತಾ ಅವರಿಗೆ ಬೆಂಬಲ ನೀಡಿದ್ದೆ. ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದೆ. ಅವರ ಪಕ್ಕ ಕುಳಿತು ಊಟ ಮಾಡಿದ್ದು, ನನಗೆ ಸ್ಮರಣಿಯ. ಭೇಟಿ ವೇಳೆ ಅವರಿಗೆ ತೆಂಗಿನ ಸಸಿಯನ್ನ ನೀಡಿದ್ದು, ಅವರು ನನಗೆ ಮತ್ತೊಂದು ಸಸಿ ನೀಡಿದ್ದಾರೆ. ಅವರ ನೆನಪಿನಲ್ಲೇ ಇದನ್ನು ತೋಟದಲ್ಲಿ ನಾಟಿ ಮಾಡುತ್ತೇನೆ ಎಂದರು.

     

    ಯೋಧ ರಾಜನಾಯಕ್ ಸುಮಲತಾ ಅವರಿಗೆ ಹಾಕಿದ ಮತ ಮತ ಏಣಿಕೆ ವೇಳೆ ಅಸಿಂಧು ಆಗಿತ್ತು. ಮತದಾನ ಗೌಪ್ಯತೆ ಬಹಿರಂಗವಾದ ಹಿನ್ನೆಲೆಯಲ್ಲಿ ಅವರ ಮತ ಅಸಿಂಧು ಆಗಿತ್ತು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ರಾಜನಾಯಕ್, ನನಗೆ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಫೋಟೋ ಶೇರ್ ಮಾಡಿದ್ದೆ. ನನ್ನ ಸಂತೋಷಕ್ಕಾಗಿ ನಾನು ಇದನ್ನು ಮಾಡಿದ್ದೆ ಅಷ್ಟೇ ಎಂದು ಸ್ಪಷ್ಟಪಡಿಸಿದರು. ರಜೆಯ ಹಿನ್ನೆಲೆಯಲ್ಲಿ ರಾಜನಾಯಕ್ ಗ್ರಾಮಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಸುಮಲತಾರನ್ನು ಭೇಟಿ ಮಾಡಿದ್ದಾರೆ.