Tag: Sumalatha Ambareesh

  • ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ

    ಬಿಎಸ್‌ವೈ ಸಮ್ಮುಖದಲ್ಲಿ ಸುಮಲತಾ ಅಂಬರೀಶ್‌ ಬಿಜೆಪಿ ಸೇರ್ಪಡೆ

    ಬೆಂಗಳೂರು: ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರು ಇಂದು ಭಾರತೀಯ ಜನತಾ ಪಕ್ಷ (BJP)ಕ್ಕೆ ಸೇರ್ಪಡೆಗೊಂಡಿದ್ದಾರೆ.

    ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುಮಲತಾ ಅವರಿಗೆ ಪಕ್ಷದ ಬಾವುಟ ನೀಡಿ ಬಿಜೆಪಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡರು. ಬಳಿಕ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ  ರಾಧಾಮೋಹನ್ ದಾಸ್ ಅಗರವಾಲ್ ಅವರು ಸುಮಲತಾರಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವದ ಪತ್ರ ನೀಡಿದರು.

    ಸುಮಲತಾ ಅಂಬರೀಶ್ ಜೊತೆಗೆ ದೊಡ್ಡ ಗಣೇಶ್, ಕೊಪ್ಪಳ ಮಾಜಿ ಸಂಸದ ಎಸ್ ಶಿವರಾಮೇಗೌಡ (ಕಾಂಗ್ರೆಸ್ ತೊರೆದು ಬಿಜೆಪಿ ಸೆರ್ಪಡೆ), ಸಚಿವ ಶಿವಾನಂದ ಪಾಟೀಲ್ ಸಂಬಂಧಿ ಹರ್ಷಗೌಡ ಪಾಟೀಲ್, ಹಳಿಯಾಳದ ಶ್ರೀನಿವಾಸ್ ಹಾಗೂ ಹಳಿಯಾಳದ ತುಕಾರಾಂ ಗೌಡ ಪಾಟೀಲ್ ಬಿಜೆಪಿಗೆ ಸೇರಿದರು.

    ಬಿ.ಎಸ್‌ ಯಡಿಯೂರಪ್ಪ, ಬಿ.ವೈ ವಿಜಯೇಂದ್ರ, ಆರ್‌ ಅಶೋಕ್, ಡಿ.ವಿ ಸದಾನಂದ ಗೌಡ, ಸಿ.ಟಿ ರವಿ, ಕೆ.ಸಿ ನಾರಾಯಣ ಗೌಡ, ಮುನಿರತ್ನ ಹಾಗೂ ಮಂಡ್ಯ ಬಿಜೆಪಿ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಪಕ್ಷ ಸೇರ್ಪಡೆಗೂ ಮುನ್ನ ಸುಮಲತಾ ಅವರು ಕಂಠೀರವ ಸ್ಡುಡಿಯೋದ ಆವರಣದಲ್ಲಿರುವ ಅಂಬರೀಶ್ (Ambareesh) ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ , ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಮೈತ್ರಿ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ಅವರಿಗೆ ಟಿಕೆಟ್ ಮಿಸ್‌ ಆಯ್ತು. ಆದರೂ ಅವರು ಬಿಜೆಪಿ (BJP) ಸೇರುತ್ತಾರೆ ಎಂದೇ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

    ಆ ಬಳಿಕ ಸುಮಲತಾ ಅವರೇ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಮಂಡ್ಯದ ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿಸಿಕೊಂಡು ಹಾಗೂ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎನ್ನುವ ಆಶಯದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಸುಮಲತಾ ಅವರು ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.

  • ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನನ್ನ ಬೆಂಬಲ: ಸುಮಲತಾ ಅಂಬರೀಶ್‌

    ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನನ್ನ ಬೆಂಬಲ: ಸುಮಲತಾ ಅಂಬರೀಶ್‌

    – ಬಿಜೆಪಿ ಸೇರ್ಪಡೆಯಾಗ್ತೀನಿ ಎಂದ ಮಂಡ್ಯ ಸಂಸದೆ

    ಮಂಡ್ಯ: ಬಿಜೆಪಿ-ಜೆಡಿಎಸ್‌ ಮೈತ್ರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಸ್ಪಷ್ಟಪಡಿಸಿದರು.

    ಮಂಡ್ಯದಲ್ಲಿ ಬುಧವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ಎಂಪಿ, ಎಂಎಲ್‌ಎಗೆ ಟಿಕೆಟ್‌ ಸಿಗದಿದ್ದರೆ ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಎಂಪಿ ಸೀಟ್ ಬಿಟ್ಟುಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ಮೋದಿ ಅವರ ಕಾರ್ಯಕ್ಷಮತೆ ಮೆಚ್ಚಿ ನಾನು ಬಿಜೆಪಿ ಸೇರ್ಪಡೆಯಾಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ದೇವೇಗೌಡರು ನಾಯಕರನ್ನು ಬೆಳೆಸಿದ್ದಾರೆಯೇ ಹೊರತು ತುಳಿದು ಗೊತ್ತಿಲ್ಲ: ವೆಂಕಟೇಶ್‌ಗೆ ಪ್ರತಾಪ್‌ ಸಿಂಹ ತಿರುಗೇಟು

    ಮಂಡ್ಯ ಮಣ್ಣನ್ನು ಸುಮಲತಾ ಅಂಬರೀಶ್ ಎಂದೆಂದಿಗೂ ಬಿಡಲ್ಲ ಎಂದು ಭಾವನಾತ್ಮಕವಾಗಿ ಸುಮಲತಾ ಪ್ರಮಾಣ ಮಾಡಿದರು. ಮಂಡ್ಯದ ಋಣ, ಮಂಡ್ಯ ಜನರನ್ನ ಎಂದೆಂದಿಗೂ ಬಿಡೋದಿಲ್ಲ. ಈ ಪ್ರೀತಿ ಆಶೀರ್ವಾದ ಹೀಗೆ ಇರಲಿ. ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ಪ್ರಯತ್ನಗಳಲ್ಲೂ ಜೊತೆಯಲ್ಲಿರಿ. ಸಂಸದೆಯಾಗಿ ನಿಮಗೆ ನಾನು ಪರಿಚಯ ಆಗಲಿಲ್ಲ. ಅಂಬರೀಶ್ ಪತ್ನಿಯಾಗಿ, ಮಂಡ್ಯ ಸೊಸೆಯಾಗಿ‌ ನಿಮಗೆ ಪರಿಚಯ. ನೀವು ನನಗೆ ತಾಯಿ ಸ್ಥಾನ ಕೊಟ್ಟೀದ್ದೀರಾ. ತಾಯಿಯಿಂದ ಮಕ್ಕಳನ್ನು ದೂರ ಮಾಡಲು ಆಗಲ್ಲ ಎಂದು ನುಡಿದರು.

    ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರಕ್ಕೆ ಬಂದಿದ್ದೇನೆ. ಪಕ್ಷೇತರವಾಗಿ ಸ್ಪರ್ಧೆ ಬೇಡ, ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ. ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರು. ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನನಗೆ ಹೇಳಿದ್ರು. ನಾಯಕತ್ವ ಬೆಳೆಸೋ ಗುಣ ಬಿಜೆಪಿಯಲ್ಲಿದೆ. ಭಾರತವನ್ನ ಇಡೀ ಪ್ರಪಂಚ ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. ಮೋದಿ ಅವರದ್ದು ಅಭಿವೃದ್ಧಿ ಮಂತ್ರ. ಒಂದೇ ಒಂದು ಕಳಂಕ ಅವರ ಮೇಲಿಲ್ಲ. ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇನೆ. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಮಂಡ್ಯವನ್ನ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯಾರೇ ಹೇಳಲಿ, ಬಿಡಲಿ ನಮ್ಮ ಕ್ಷೇತ್ರದಲ್ಲಿ ಸುಧಾಕರ್‌ಗೆ ಬಹುಮತ ಕೊಡುತ್ತೇವೆ: ಎಸ್‌ಆರ್‌ ವಿಶ್ವನಾಥ್‌

  • ಸಹಕಾರವೋ? ಪಕ್ಷೇತರ ಸ್ಪರ್ಧೆಯೋ? – ಇಂದು ಸುಮಲತಾ ಅಂಬರೀಶ್ ನಿರ್ಧಾರ ಪ್ರಕಟ

    ಸಹಕಾರವೋ? ಪಕ್ಷೇತರ ಸ್ಪರ್ಧೆಯೋ? – ಇಂದು ಸುಮಲತಾ ಅಂಬರೀಶ್ ನಿರ್ಧಾರ ಪ್ರಕಟ

    ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸುಮಲತಾ ಗೆದ್ದು ಸಂಸದರಾದರೂ ಕೂಡ ಜೆಡಿಎಸ್‌ನವರು ಸಂಸದೆ ಸುಮಲತಾ (Sumalatha Ambareesh) ಅವರಿಗೆ ಯಾವುದೇ ಸಹಕಾರ ನೀಡದೆ ಪ್ರತಿ ಹಂತದಲ್ಲೂ ಸುಮಲತಾ ವರ್ಸಸ್ ದಳಪತಿಗಳ ನಡುವೆ ವಾಕ್ಸಮರ ನಡೆಯುತ್ತಿತ್ತು. ಸದ್ಯ ಮಂಡ್ಯ (Mandya) ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾಗಿದ್ದು, ನಿತ್ಯವೂ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿತ್ತು. ಕಾರಣ, ಅಂದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಕ್ಷೇತ್ರದಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಿದ್ದರು. ಅಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವೇ ಮಂಡ್ಯದಲ್ಲಿ ಬೀಡುಬಿಟ್ಟರೂ ಸ್ವಾಭಿಮಾನದ ಅಲೆಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ. ಸ್ವಾಭಿಮಾನದ ಸೆರಗೊಡ್ಡಿ ಮತ ಭಿಕ್ಷೆ ಬೇಡಿದ ಪರಿಣಾಮ ಸುಮಲತಾ ಅಂಬರೀಶ್ ಗೆದ್ದು, ಅಂದಿನ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋಲಬೇಕಾಯಿತು. ಇದನ್ನೂ ಓದಿ: Taiwan Earthquake – 7.4 ತೀವ್ರತೆಯ ಪ್ರಬಲ ಭೂಕಂಪ – ಸುನಾಮಿ ಎಚ್ಚರಿಕೆ

    ಅತ್ತ ಸುಮಲತಾ ಅಂಬರೀಶ್ ಸಂಸದರಾದ ನಂತರ ಬಿಜೆಪಿ ಪಕ್ಷಕ್ಕೆ ಬಾಹ್ಯ ಬೆಂಬಲ ಘೋಷಿಸಿದರು. ಇತ್ತ ಕಳೆದ ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ (JDS) ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಇದು ಸಂಸದೆ ಸುಮಲತಾಗೆ ತೀವ್ರ ನಿರಾಸೆ ಉಂಟು ಮಾಡಿದೆ. ಮಂಡ್ಯ ಬಿಜೆಪಿ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದ ಸುಮಲತಾಗೆ ಟಿಕೆಟ್ ಕೈತಪ್ಪಿದೆ. ಸಾಲದೆಂಬಂತೆ ತನ್ನ ರಾಜಕೀಯ ಎದುರಾಳಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಸಬೇಕಾ? ತಟಸ್ಥವಾಗಿ ಉಳಿಯಬೇಕಾ? ಅಥವಾ ಕಳೆದ ಬಾರಿಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕಾ ಎಂಬ ಗೊಂದಲ ಸುಮಲತಾ ಹಾಗೂ ಆಪ್ತರದ್ದಾಗಿದೆ. ಇದರ ನಡುವೆಯೇ ಇಂದು ಮಂಡ್ಯದಲ್ಲಿ ಮಹತ್ವದ ಸಭೆ ಕರೆದಿರೋ ಸುಮಲತಾ, ಇಂದು ಮಂಡ್ಯದಲ್ಲೇ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಇದನ್ನೂ ಓದಿ: ಸೋನು ಗೌಡ ಕೇಸ್ – ಬಾಲಕಿ ಪೋಷಕರಿಗೆ ಕೌನ್ಸಿಲಿಂಗ್‌ಗೆ ಮುಂದಾದ ರಕ್ಷಣಾ ಆಯೋಗ

    ಇಂದು ಬೆಳಗ್ಗೆ 10.30ಕ್ಕೆ ಮಂಡ್ಯದ ಕಾಳಿಕಾಂಬ ದೇಗುಲದ ಬಳಿ ಸುಮಲತಾ ಬೆಂಬಲಿಗರ ಸಭೆ ಕರೆಯಲಾಗಿದೆ. ಈ ಸಂಬಂಧ ತನ್ನ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿರೋ ಸುಮಲತಾ ಇಂದಿನ ಸಭೆಗೆ ಬೆಂಬಲಿಗರನ್ನು ವಿಶೇಷವಾಗಿಯೇ ಆಹ್ವಾನಿಸಿದ್ದಾರೆ. ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ. ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಶ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ಮಂಡ್ಯಕ್ಕಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ. ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ. ಇಂದು ಬೆಳಿಗ್ಗೆ 10 ಗಂಟೆಗೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟಪಡಿಸುವ ಹಾಗೂ ಮಂಡ್ಯ ಲೋಕಸಭಾ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಶ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸೋಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪಾರಿವಾಳಗಳನ್ನೇ ಬೇಹುಗಾರಿಕೆಗೆ ಬಳಸೋದ್ಯಾಕೆ? 

    ಸುಮಲತಾರ ಈ ಒಂದು ಪೋಸ್ಟ್ ಅವರ ನಡೆ ಏನು ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿಗಷ್ಟೇ ರಾಜಕೀಯ ವೈರತ್ವ ಮರೆತು ಸುಮಲತಾ ಮನೆಗೆ ಭೇಟಿ ನೀಡಿದ್ದ ಹೆಚ್‌ಡಿ ಕುಮಾರಸ್ವಾಮಿ ತಮ್ಮನ್ನು ಬೆಂಬಲಿಸುವಂತೆ ಕೋರಿದ್ದರು. ಹಳೆಯದನ್ನು ಮರೆತು ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡ್ತಾರಾ? ತಟಸ್ಥರಾಗಿದ್ದು ಜೆಡಿಎಸ್ ವಿರುದ್ಧ ಹಗೆ ಸಾಧಿಸುತ್ತಾರಾ? ಅಥವಾ ಕಳೆದ ಬಾರಿಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನದ ಕಹಳೆ ಮೊಳಗಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿಗೆ ಗನ್‌ಮ್ಯಾನ್‌!

  • ಅಕ್ಕನ ಸಹಕಾರ ಕೋರಿದ್ದೇನೆ – ಸುಮಲತಾ ಭೇಟಿ ಬಳಿಕ ಹೆಚ್‌ಡಿಕೆ ರಿಯಾಕ್ಷನ್

    ಅಕ್ಕನ ಸಹಕಾರ ಕೋರಿದ್ದೇನೆ – ಸುಮಲತಾ ಭೇಟಿ ಬಳಿಕ ಹೆಚ್‌ಡಿಕೆ ರಿಯಾಕ್ಷನ್

    – ಡಿಕೆಶಿ ನನಗೆ ವೈರಿಯಲ್ಲ ಎಂದ ಮಾಜಿ ಸಿಎಂ

    ಬೆಂಗಳೂರು: ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ (BJP JDS Alliance )ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಸಂಸದೆ ಸುಮಲತಾ (Sumalatha Ambareesh) ಅವರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಸುಮಲತಾರನ್ನ ಭೇಟಿಯಾಗಿ ಮೈತ್ರಿ ಬೆಂಬಲಿಸುವಂತೆ ಮಾತುಕತೆ ನಡೆಸಿದ್ದಾರೆ.

    ಸುಮಲತಾ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್‌ಡಿಕೆ (HD Kumaraswamy), ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ಆಗಿದೆ. ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮ್ಯಾಚ್‌ ಫಿಕ್ಸಿಂಗ್‌ ಇಲ್ಲದೇ 400 ಸೀಟು ಗೆಲ್ಲಲು ಸಾಧ್ಯವಿಲ್ಲ – ಮೋದಿ ವಿರುದ್ಧ ಘರ್ಜಿಸಿದ ರಾಗಾ

    ಅಂಬರೀಷ್ ಮನೆ ನನಗೆ ಹೊಸದಲ್ಲ. ಸುಮಲತಾ ಅಕ್ಕ ಅವರ ಸಹಕಾರ ಕೋರಿದ್ದೇನೆ, ಮಂಡ್ಯದಲ್ಲಿ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ವಿಜಯೇಂದ್ರ ಅವರ ಜೊತೆ ಹಲವು ವಿಚಾರಗಳನ್ನ ಚರ್ಚಿಸಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚೆ ಮಾಡಿದ ಬಳಿಕ ನಿರ್ಧಾರ ಪ್ರಕಟಿಸುತ್ತೇನೆ. ಏಪ್ರಿಲ್ 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಡಿಕೆಶಿ ನನಗೆ ವೈರಿಯಲ್ಲ:
    ಇದೇ ವೇಳೆ ಡಿಕೆಶಿ ಕುರಿತು ಮಾತನಾಡಿದ ಹೆಚ್‌ಡಿಕೆ, ಡಿಕೆ ಶಿವಕುಮಾರ್ ನನಗೆ ವೈರಿಯಲ್ಲ, ಅವರು ನನ್ನ ದೊಡ್ಡ ಹಿತೈಷಿ. 5 ವರ್ಷ ಸರ್ಕಾರ ಸಂಪೂರ್ಣ ನಡೆಸಲಿ, 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ವಿ ಅಂತ ಪದೇ ಪದೇ ಹೇಳ್ತಿದ್ದಾರೆ. 5 ವರ್ಷ ನಾಮಕಾವಸ್ತೆಯಾಗಿ ಅಧಿಕಾರ ಕೊಟ್ಟಿದ್ದರು. ಒಂದು ದಿನವೂ ಅಧಿಕಾರ ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ. ಯಾರು ಶತೃ, ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.

  • ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಮುನಿಸು ಮರೆತು ಸುಮಲತಾ ಭೇಟಿಯಾದ ಹೆಚ್‌ಡಿಕೆ – ಮಂಡ್ಯದಲ್ಲಿ ಬೆಂಬಲಿಸುವಂತೆ ಮನವಿ

    ಬೆಂಗಳೂರು: ಮಂಡ್ಯದಿಂದ ಬಿಜೆಪಿ-ಜೆಡಿಎಸ್‌ ಮೈತ್ರಿ (BJP JDS Alliance) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರು ಕೊನೆಗೂ ಮುನಿಸು ಮರೆತು ಸಂಸದೆ ಸುಮಲತಾ ಅವರನ್ನ ಭೇಟಿಯಾಗಿದ್ದು, ಊಹಾ-ಪೋಹಗಳಿಗೆ ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಸುಮಲತಾರನ್ನ ಭೇಟಿಯಾಗಿದ್ದಾರೆ. ಇದೇ ವೇಳೆ ಮಂಡ್ಯ ಕ್ಷೇತ್ರದಲ್ಲಿ ಮೈತ್ರಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

    ಬೆಂಗಳೂರಿನಲ್ಲಿರುವ ಸುಮಲತಾರ (Sumalatha Ambareesh) ನಿವಾಸಕ್ಕೆ ಭೇಟಿ ನೀಡುತ್ತಿದ್ದಂತೆ ಪುತ್ರ ಅಭಿಷೇಕ್ ಮತ್ತು ಚಲನಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಕುಮಾರಸ್ವಾಮಿ ಅವರನ್ನ ಸ್ವಾಗತಿಸಿದರು. ಬಳಿಕ ಸುಮಲತಾ ಅವರು ಹೆಚ್‌ಡಿಕೆ ಅವರನ್ನ ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

    ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಬದಲಾದ ರಾಜಕೀಯದಲ್ಲಿ ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಸುಮಲತಾರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಸುಮಲತಾ ನಿರ್ಧಾರ ಪ್ರಕಟಕ್ಕೂ ಮುನ್ನವೇ ಆಪ್ತನಿಂದ ಶಾಕ್ – ಹೆಚ್‍ಡಿಕೆ ಪರ ಪ್ರಚಾರಕ್ಕಿಳಿದ ಸಚ್ಚಿದಾನಂದ

    ಶನಿವಾರವಷ್ಟೇ ಸಂಸದೆ ಸುಮಲತಾ ಅಂಬರೀಷ್‌ ಬೆಂಗಳೂರಿನ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ್ದರು. ಸಭೆಯಲ್ಲಿ ಬೆಂಬಲಿಗರು ಪಕ್ಷೇತರವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಿದ್ದರು. ಇದಕ್ಕೆ ಸುಮಲತಾ ಅಂಬರೀಶ್ ನಾನು ನಿಮ್ಮ ಆಸೆಗೆ ವಿರುದ್ಧ ಹೋಗಲ್ಲ. ಯೋಚನೆ ಮಾಡಿ ಏ.3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಅವರು ಸುಮಲತಾ ನಿವಾಸಕ್ಕೆ ತೆರಳಿ ತಮ್ಮ ಸ್ಪರ್ಧೆಗೆ ಬೆಂಬಲ ಕೋರಿದ್ದಾರೆ.

  • ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ

    ಇಂದು ಸುಮಲತಾರನ್ನು ಭೇಟಿಯಾಗಲಿದ್ದಾರೆ ಹೆಚ್‌ಡಿಕೆ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮೈತ್ರಿ ಬೆಂಬಲಿಸುವಂತೆ ಇಂದು ಮಂಡ್ಯ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸುಮಲತಾ (Sumalatha Ambareesh) ಅವರನ್ನು ಭೇಟಿಯಾಗಲಿದ್ದಾರೆ.

    ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅವರು ಪಕ್ಷೇತರ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಈ ವೇಳೆ ಕುಮಾರಸ್ವಾಮಿ ಹಾಗೂ ಸುಮಲತಾ ಅವರ ನಡುವೆ ಮಾತಿನ ಸಮರ ನಡೆದಿತ್ತು. ಇದೀಗ ಬದಲಾದ ರಾಜಕೀಯದಲ್ಲಿ ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವಂತೆ ಇಂದು ಕುಮಾರಸ್ವಾಮಿ ಅವರು ಸುಮಲತಾ ಅವರ ಬೆಂಗಳೂರು ನಿವಾಸಕ್ಕೆ ಮಧ್ಯಾಹ್ನ 3 ಗಂಟೆಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಬಯಲಿಗೆ ಬಾರದೇ ಇರಲು ಸರ್ಕಾರದಿಂದಲೇ ಕಡತ ಕಳ್ಳತನ : ಬಿಜೆಪಿ ಕಿಡಿ

    ಶನಿವಾರವಷ್ಟೇ ಸಂಸದೆ ಸುಮಲತಾ ಅಂಬರೀಶ್ ಬೆಂಗಳೂರಿನ ನಿವಾಸದಲ್ಲಿ ತಮ್ಮ ಬೆಂಬಲಿಗರ ಸಭೆ ಮಾಡಿದ್ದರು. ಸಭೆಯಲ್ಲಿ ಬೆಂಬಲಿಗರು ಪಕ್ಷೇತರವಾಗಿ ಮತ್ತು ಮಂಡ್ಯದಲ್ಲಿ ಸ್ಪರ್ಧೆ ಮಾಡುವಂತೆ ಒತ್ತಾಸೆ ಮಾಡಿದ್ದರು. ಇದಕ್ಕೆ ಸುಮಲತಾ ಅಂಬರೀಶ್ ನಾನು ನಿಮ್ಮ ಆಸೆಗೆ ವಿರುದ್ಧ ಹೋಗಲ್ಲ. ಯೋಚನೆ ಮಾಡಿ ಏ.3ರಂದು ಮಂಡ್ಯದಲ್ಲಿ ಸಭೆ ಮಾಡಿ ನನ್ನ ನಿರ್ಧಾರ ಹೇಳುತ್ತೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಕುಮಾರಸ್ವಾಮಿ ಅವರು ಸುಮಲತಾ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಲಿದ್ದಾರೆ. ಇದನ್ನೂ ಓದಿ: ಎಂ ಚಂದ್ರಪ್ಪ ಜೊತೆಗಿನ ಎಂಎಲ್‌ಸಿ ರವಿಕುಮಾರ್ ಸಂಧಾನ ಸಭೆ ವಿಫಲ

  • ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ಬಿಜೆಪಿ ಬೇಸ್ ಉಳಿಯುತ್ತೆ: ಸುಮಲತಾ

    ಮಂಡ್ಯದಲ್ಲಿ ಸ್ಪರ್ಧೆ ಮಾಡಿದ್ರೆ ಬಿಜೆಪಿ ಬೇಸ್ ಉಳಿಯುತ್ತೆ: ಸುಮಲತಾ

    – ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಸಂಸದೆ ಹೇಳಿದ್ದೇನು?

    ನವದೆಹಲಿ: ನಾನು ಸ್ಪರ್ಧೆ ಮಾಡಬೇಕು ಅನ್ನೋದಕ್ಕಿಂತ ಮಂಡ್ಯದಲ್ಲಿ ಸ್ಪರ್ಧೆ ಮಾಡಬೇಕು. ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಬಿಜೆಪಿ ಬೇಸ್ ಉಳಿಯುತ್ತದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.

    ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಬಗ್ಗೆ ಸುಮಲತಾ ಚರ್ಚಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ನಿಶ್ಚಿಂತೆಯಾಗಿರಿ, ಏನೂ ನಿರ್ಧಾರ ಆಗಿಲ್ಲ ಎಂದು ನಡ್ಡಾ ಹೇಳಿದ್ದಾರೆ. ನಿಮ್ಮಂತ ನಾಯಕಿ ಪಕ್ಷಕ್ಕೆ ಬೇಕು ಎಂದಿದ್ದಾರೆ. ಇಂದು ಸಿಇಸಿ ಮೀಟಿಂಗ್ ಆಗುತ್ತದೆ. ಬಳಿಕ ಅಂತಿಮ ನಿರ್ಧಾರ ತಿಳಿಸುವುದಾಗಿ ನಡ್ಡಾ ಹೇಳಿದ್ದಾರೆ ಎಂದರು.

    ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಊಹಾಪೋಹದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಕ್ಷೇತ್ರ ಖಾಲಿ ಇರುತ್ತದೆ ಅಲ್ಲಿ ನನ್ನ ಹೆಸರು ಜೋಡಿಸುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು. ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ ಅವರನ್ನೇ ಕೇಳುತ್ತೇನೆ. ಇಂದು ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಅದನ್ನು ಬೆಂಬಲಿಗರೊಂದಿಗೆ ಚರ್ಚಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.

    ಹೈಕಮಾಂಡ್ ನಿರ್ಧಾರಕ್ಕೆ ಬದ್ಧ: ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತೇವೆ ಅನ್ನೋದು ಸಹಜ. ಏನೂ ಸಮಸ್ಯೆ ಆಗದೆ ಇರೋತರ ಮಾಡಬೇಕಾಗುತ್ತದೆ. ಪಕ್ಷ ಏನು ಹೇಳುತ್ತದೆ ಅದನ್ನು ಮಾಡುತ್ತೇನೆ. ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ. ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ. ಇವತ್ತಿನ ಮಾತುಕತೆ ಮ್ಯೂಚುವಲ್ ಆಗಿತ್ತು. ಕಾರ್ಯಕರ್ತರನ್ನು ಬಿಟ್ಟುಕೊಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದಿದ್ದೇನೆ. ನಿಮ್ಮ ಬೆಂಬಲಿಗರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ನಡ್ಡಾ ಭರವಸೆ ನೀಡಿದ್ದಾರೆ. ಮೋದಿಯವರು ಕೂಡ ಇದೇ ಭರವಸೆ ಕೊಟ್ಟಿದ್ದಾರೆ. ಅಮಿತ್ ಶಾ ಅವರನ್ನು ಭೇಟಿ ಮಾಡಲು ಹೇಳಿದ್ದಾರೆ. ಪ್ರಧಾನಿ ಕಚೇರಿಯಿಂದ ಅಮಿತ್ ಶಾ ಭೇಟಿ ಮಾಡಲು ಹೇಳಿದ್ದಾರೆ. ಸಮಯ ಸಿಕ್ಕರೆ ನಾಳೆಯೊಳಗೆ ಭೇಟಿ ಮಾಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ತಿಳಿಸಿದರು.

  • ಬುಲಾವ್ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿದ ಸಂಸದೆ ಸುಮಲತಾ

    ಬುಲಾವ್ ಬೆನ್ನಲ್ಲೇ ದಿಢೀರ್ ದೆಹಲಿಗೆ ತೆರಳಿದ ಸಂಸದೆ ಸುಮಲತಾ

    ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರನ್ನು ಶನಿವಾರ ಭೇಟಿಯಾದ ಬೆನ್ನಲ್ಲಿಯೇ ಇಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ದೆಹಲಿಗೆ ತೆರಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಜೆಡಿಎಸ್‍ಗೆ (JDS) ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವುದು ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಮಂಡ್ಯದಲ್ಲಿ ಸ್ಪರ್ಧೆಗೆ ದಳಪತಿಗಳ ಸಿದ್ಧತೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಸುಮಲತಾಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.

    ಕೂಡಲೇ ದೆಹಲಿಗೆ ಬರಬೇಕೆಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲಿಯೇ ಇಂದು ಮಧ್ಯಾಹ್ನವೇ ಸುಮಲತಾ ಅವರು ರಾಷ್ಟ್ರರಾಜಧಾನಿಗೆ ಹೋಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (AmitShah) ಹಾಗೂ ಜೆಪಿ ನಡ್ಡಾ (JP Nadda) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

    ಒಂದು ವೇಳೆ ಮಂಡ್ಯ ಟಿಕೆಟ್ ಕೈ ತಪ್ಪಿದ್ರೆ ಸುಮಲತಾ ನಡೆಯೇನು..?, ಪಕ್ಷೇತರರಾಗಿ ಸ್ಪರ್ಧಿಸ್ತಾರಾ…? ಕಣದಿಂದ ಸರಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಸುಮಲತಾ ಅವರ ಮುಂದಿನ ನಡೆ ತೀವ್ರ ಕುತೂಹಲ ಹುಟ್ಟಿಸಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಟಿಕೆಟ್ ಫೈಟ್- ಹೊರಗಿನವರಿಗೆ ಟಿಕೆಟ್ ಬೇಡವೆಂದ್ರು ವಿಶ್ವನಾಥ್

  • ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

    ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ

    – ಸಂಸದೆ ಸುಮಲತಾಗೆ ಟಾಂಗ್

    ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಕ್ಷೇತ್ರಕ್ಕೆ ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಅವರು ತಮ್ಮ ಅಭ್ಯರ್ಥಿಯನ್ನು ಪರಿಚಯಿಸಿದ್ದಾರೆ.

    ಮಂಡ್ಯದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಭಾಷಣದ ಆರಂಭದಲ್ಲೇ ಸ್ಟಾರ್ ಚಂದ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಯಾರು ಅಂತಾ ನಿಮಗೆಲ್ಲ ಗೊತ್ತಲ್ವಾ?. ಸ್ಟಾರ್ ಚಂದ್ರು ಅವರು ಅಂತಾ ಪರಿಚಯಿಸಿದರು. ಈ ಮೂಲಕ ಸ್ಟಾರ್ ಚಂದ್ರು (Star Chandru) ಅವರನ್ನ ಮಂಡ್ಯದ ಗಂಡು ಎಂದು ಡಿಕೆಶಿ ಬಣ್ಣಿಸಿದರು. ಡಿಕೆಶಿ ಪರಿಚಯಿಸ್ತಿದ್ದಂತೆ ಸ್ಟಾರ್ ಚಂದ್ರು ಅವರು ಎದ್ದು ನಿಂತು ಕೈ ಮುಗಿದು ನಮಸ್ಕರಿಸಿದರು.

    ತೆನೆ ಬಿಸಾಕಿ ಕಮಲ ತಬ್ಬಿದ ಕುಮಾರಣ್ಣ: ನಾನು, ಸಿದ್ದರಾಮಯ್ಯ ನಿಮ್ಮಿಂದ ಜೈಕಾರ, ಹೂ ಹಾರ ಹಾಕಿಸಿಕೊಳ್ಳಲು ಬಂದಿಲ್ಲ. 5 ಗ್ಯಾರಂಟಿ ಅನುಷ್ಠಾನಕ್ಕೆ ಕಾರಣಕರ್ತರಾದ ನಿಮಗೆ ಧನ್ಯವಾದ ಹೇಳಲು ಬಂದಿದ್ದೇವೆ. ದೇವರು ವರವನ್ನು ಕೊಡಲ್ಲ, ಶಾಪವನ್ನು ಕೊಡಲ್ಲ ಅವಕಾಶ ಮಾತ್ರ ಕೊಡುತ್ತಾನೆ. ನೀವು ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿ ಆಡಳಿತ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ ಎಂದಿದ್ದೆ. 5 ಗ್ಯಾರಂಟಿ ನೋಡಿ ಅರಳಿದ ಕಮಲ ಮುದುಡಿತು. ಕುಮಾರಣ್ಣ ತೆನೆ ಬಿಸಾಕಿ ಕಮಲ ತಬ್ಬಿದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಪ್ರತಾಪ್ ಸಿಂಹ 10 ವರ್ಷದಲ್ಲಿ ಉತ್ತಮವಾದ ಕೆಲಸ ಮಾಡಿದ್ದಾರೆ, ಟಿಕೆಟ್ ಸಿಗುವ ವಿಶ್ವಾಸವಿದೆ: ಜಿಟಿಡಿ

    ಕೃಷ್ಣನ‌ ತಂತ್ರ ಇದ್ರೆ ಯಶಸ್ಸು: ತಾಯಂದಿರ ಮೊಗದಲ್ಲಿ ನಗು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳು ಬಳಕೆ ಆಗುತ್ತಿವೆ. ಫ್ರೀಯಾಗಿ ಬಸ್‌ನಲ್ಲಿ ಓಡಾಡುತ್ತಿದ್ದೀರಾ?. ಇದೇ ವೇಳೆ 2000 ಸಾವಿರ ಬರ್ತಿದೆಯಾ ಎಂದು ಕೇಳಿದರು. ನಿಮ್ಮ‌ ಹೆಂಡತಿಯರಿಗೂ 2000 ಬರ್ತಿದೆ ಅಲ್ವಾ ಕೈ ಎತ್ತಿ ಎಂದು ಹಾಸ್ಯ ಚಟಾಕಿ ಹಾರಿಸಿದ ಡಿಕೆ, ಇಂತಹ ಕಾರ್ಯಕ್ರಮ ಮಾಡಿದ್ದು ಕುಮಾರಸ್ವಾಮಿ, ಯಡಿಯೂರಪ್ಪ ಅಲ್ಲ. ಗ್ಯಾರಂಟಿ ಯೋಜನೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ನುಡಿದಂತೆ ನಡೆದದ್ದು ಕಾಂಗ್ರೆಸ್ ಸರ್ಕಾರ. ಧರ್ಮರಾಯ ಧರ್ಮತ್ವ, ಕರ್ಣನ ದಾನ, ಅರ್ಜುನ ಗುರಿ, ಕೃಷ್ಣನ‌ ತಂತ್ರ ಇದ್ರೆ ಯಶಸ್ಸು ಎಂದು ಹೇಳಿದರು.

    ರೈತರೇ ಆತ್ಮಸಾಕ್ಷಿ ಮುಟ್ಟಿ ಹೇಳಿ: ಇವತ್ತಿಗೆ ಕೆಪಿಸಿಸಿ ಅಧ್ಯಕ್ಷನಾಗಿ 4 ವರ್ಷ ತುಂಬಿದೆ. ಖಾಲಿ ಇದ್ದ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಹೇಳಿ. ಕೆರೆ ತುಂಬಿಸಲು, ನಾಲೆ ಅಭಿವೃದ್ಧಿಗೆ 2000 ಕೋಟಿ ಮಂಜೂರು. KRS ಪ್ರವಾಸಿ ಕೇಂದ್ರ ಮಾಡಲು ತೀರ್ಮಾನ. ರೈತರ ಬದುಕು, ನೀರಿಗಾಗಿ ಮೇಕೆದಾಟು ಯೋಜನೆ. ಮೇಕೆದಾಟು ಅನುಷ್ಠಾನ ಆದರೆ ಕಷ್ಟಕಾಲದಲ್ಲಿ ಸಹಕಾರಿ. ಬಿಜೆಪಿ, ಜೆಡಿಎಸ್‌ ಸರ್ಕಾರ ಇದ್ದಾಗ ಇದ್ಯಾವುದನ್ನು ಮಾಡಲಿಲ್ಲ. ರೈತರಿದ್ದೀರಾ ನಿಮ್ಮ ಬೆಳೆಗಳನ್ನು ಉಳಿಸಿದ್ದೇವೆ, ಆತ್ಮಸಾಕ್ಷಿ ಮುಟ್ಟಿ ಹೇಳಿ ಎಂದರು.

    ಅಂಬರೀಶ್‌ ಹೆಸರಲ್ಲಿ ರಸ್ತೆ: ಇವತ್ತು ನಂಟಸ್ಥನ ಮಾಡಿಕೊಂಡು ಓಡಾಡುವ ಜೆಡಿಎಸ್‌-ಬಿಜೆಪಿ (JDS- BJP) ಏನು ಮಾಡಿದ್ದಾರೆ. ದೇವೇಗೌಡರು ಇವತ್ತು ಅಯ್ಯಯ್ಯೋ ಎಂದು ಕಣ್ಣೀರು ಹಾಕುತ್ತಿದ್ದಾರೆ. ನಿಮ್ಮ ಕಣ್ಣೀರು ನಿಮ್ಮ‌ ಮನೆಗೆ ಹೊರತು ರಾಜ್ಯಕ್ಕಲ್ಲ ದೇವೇಗೌಡರೇ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಉಳಿಸಲು ಗ್ಯಾರಂಟಿ ಯೋಜನೆ. ನಿಮ್ಮ‌ ಋಣ ತೀರಿಸಿದ ಸಮಾಧಾನ ನಮಗಿದೆ. ಅಂಬರೀಶ್ ನಮ್ಮ ಪಕ್ಷದಲ್ಲಿ ಮಂತ್ರಿಯಾಗಿದ್ದರು. ಅಂಬರೀಶ್ (Ambareesh) ಅವರ ಹೆಸರಲ್ಲಿ ರಸ್ತೆ ಮಾಡುತ್ತೇವೆ. ಪ್ರಾಣ ಬಿಡುವಾಗ ಕಾಂಗ್ರೆಸ್ಸಿಗರಾಗಿ ಬಿಟ್ರು. ಇದೆಲ್ಲಾ ನಿಮ್ಮ ತಲೇಲಿ ಇರಲಿ. ಅಂಬರೀಶ್ ಸ್ನೇಹಿತರನ್ನೇ ಅಭ್ಯರ್ಥಿ ಮಾಡಿದ್ದೇವೆ. ಸೂರ್ಯ ಚಂದ್ರರಷ್ಟೇ ಸ್ಟಾರ್ ಗೆಲುವು ಸತ್ಯ. ನಿಜತಾನೇ ಅಮ್ಮಾ, ಅಕ್ಕಾ ಎಂದು ಡಿಕೆಶಿ ಮತಯಾಚಿಸುವ ಮೂಲಕ ಸಂಸದೆ‌ ಸುಮಲತಾಗೆ ಡಿಸಿಎಂ‌ ಡಿಕೆಶಿ ಟಾಂಗ್ ಕೊಟ್ಟರು.

  • ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣಕ್ಕೆ MP ಸುಮಲತಾ ತೀವ್ರ ವಿರೋಧ

    ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣಕ್ಕೆ MP ಸುಮಲತಾ ತೀವ್ರ ವಿರೋಧ

    ಬೆಂಗಳೂರು: ಮಂಡ್ಯದಲ್ಲಿ ಹೊಸ ಮೈಶುಗರ್‌ ಕಾರ್ಖಾನೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಸಂಸದೆ, ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ (My Sugar Factory) ಮತ್ತಷ್ಟು ಬಲಪಡಿಸಲಿ ಎಂದು ಆಗ್ರಹಿಸಿದ್ದಾರೆ.

    ಪೋಸ್ಟ್‌ನಲ್ಲೇನಿದೆ..?: ಮಂಡ್ಯದ ಅಸ್ಮಿತೆ, ರೈತರ ಒಡನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಗೆ ಮರುಜೀವ ಕೊಡುವುದಕ್ಕಾಗಿ ನಾನು ಮಾಡಿದ ಹೋರಾಟ ತಮಗೆಲ್ಲ ಗೊತ್ತಿದೆ. ಆ ಫ್ಯಾಕ್ಟರಿಗೆ ಮತ್ತಷ್ಟು ಶಕ್ತಿ ತುಂಬುವ ಬದಲು, ಹೊಸ ಕಾರ್ಖಾನೆ ಹಾಗೂ ಅದೇ ಆವರಣದಲ್ಲಿ ಐಟಿ ಹಬ್ ಮಾಡಲು ಕರ್ನಾಟಕ ಸರಕಾರ ಹೊರಟಿರುವುದಕ್ಕೆ ನನ್ನ ವಿರೋಧವಿದೆ.

    ಅಗತ್ಯ ಬಿದ್ದರೆ ಮೈ ಶುಗರ್ ಫ್ಯಾಕ್ಟರಿಯ ಆಸ್ತಿಯನ್ನು ಮಾರಾಟಕ್ಕೆ ಇಡುತ್ತೇವೆ ಎನ್ನುವ ಸರಕಾರದ ನಿಲುವಿಗೆ ನನ್ನ ತೀವ್ರ ವಿರೋಧವಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಐಟಿ ಹಬ್ ಅನ್ನು ಬೇರೆ ಯಾವುದಾದರೂ ಸ್ಥಳದಲ್ಲಿ ಮಾಡಿ, ಮೈ ಶುಗರ್ ಆವರಣದಲ್ಲಿ ಮಾಡುವುದಕ್ಕೆ ನಾನಂತೂ ಬಿಡುವುದಿಲ್ಲ. ಇದನ್ನೂ ಓದಿ: ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್‌ ಶಾಕ್‌ – 14 ಮಕ್ಕಳು ಆಸ್ಪತ್ರೆಗೆ ದಾಖಲು

    ಈವರೆಗೂ ಮೈ ಶುಗರ್ ಫ್ಯಾಕ್ಟರಿಗೆ ಬಂದಿರುವ ಹಣ ಏನಾಯಿತು ಎನ್ನುವುದಕ್ಕೆ ಉತ್ತರವೇ ಇಲ್ಲ. ಆದರೂ, ಹೊಸ ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ ಮತ್ತಷ್ಟು ಬಲಪಡಿಸಲಿ ಎಂದು ಸಂಸದೆ ಆಗ್ರಹಿಸಿದ್ದಾರೆ.