Tag: Sumalatha Ambareesh
-

ಸುಮಲತಾ ಮನೆಗೆ ಯಶ್ ದಂಪತಿ ಭೇಟಿ – ಅಂಬಿ ಮೀಸೆ ಮೇಲೆ ಕೈಯಿಟ್ಟ ಐರಾ
ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಜೊತೆಗೆ ನಟಿ, ಮಂಡ್ಯ ಸಂಸದೆ ಆಗಿರುವ ಸುಮಲತಾ ಅಂಬರೀಶ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ಯಶ್ ‘ಕೆಜಿಎಫ್-2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಧಿಕಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಇಬ್ಬರು ತಮ್ಮ ಮಗಳು ಐರಾಳನ್ನು ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಸುಮಲತಾ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಐರಾ, ಅಂಬರೀಶ್ ಫೋಟೋದಲ್ಲಿ ಅವರ ಮೀಸೆ ಮೇಲೆ ಕೈಯಿಟ್ಟಿದ್ದಾಳೆ. ಯಶ್ ಮತ್ತು ರಾಧಿಕಾ, ಅಂಬರೀಶ್ ಮನೆಗೆ ಯಾವಾಗ ಭೇಟಿ ನೀಡಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರು ಸುಮಲತಾ ಅವರ ಮನೆಗೆ ಹೋಗಿರುವ ಫೋಟೋಗಳು ವೈರಲ್ ಆಗುತ್ತಿದೆ.

ಸುಮಲತಾ ಅಂಬರೀಶ್ ಮನೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ಕೊಟ್ಟು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದೇ ವೇಳೆ ಸುಮಲತಾ, ಯಶ್ ಮಗಳ ಜೊತೆ ಕೆಲ ಕಾಲ ಸಂತಸದಿಂದ ಕಾಲ ಕಳೆದಿದ್ದಾರೆ. ಜೊತೆಗೆ ಎಲ್ಲರೂ ಒಟ್ಟಾಗಿ ಫೋಟೋಗೆ ಪೋಸ್ ನೀಡಿದ್ದಾರೆ.
ಮಂಡ್ಯ ಚುನಾವಣೆ ಬಳಿಕ ಸುಮಲತಾ ಮತ್ತು ಯಶ್ ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ದಂಪತಿ ಮಗಳ ಸಮೇತ ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
-

ನಕಲಿ ಫೇಸ್‍ಬುಕ್ ಪುಟಗಳನ್ನು ಅನ್‍ಫಾಲೋ ಮಾಡಿ: ಸಂಸದೆ ಸುಮಲತಾ ಮನವಿ
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ನಕಲಿ ಪುಟಗಳ ಹಾವಳಿ ಹೆಚ್ಚಾಗಿದ್ದು, ಇಂತಹ ಪುಟಗಳನ್ನು ಫಾಲೋ ಮಾಡಬೇಡಿ ಎಂದು ಸ್ವತಃ ಸುಮಲತಾ ಅವರೇ ಅಭಿಮಾನಿಗಳಿಗೆ, ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ತಮ್ಮ ಅಧಿಕೃತ ಫೇಸ್‍ಬುಕ್ ಹಾಗೂ ಟ್ವಿಟ್ಟರ್ ಖಾತೆಯಿಂದ ಸುಮಲತಾ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನಕಲಿ ಪುಟಗಳ ಹಾವಳಿ ಇನ್ನೂ ಮುಂದುವರಿದಿದೆ. ಇಂತಹ ಫೇಸ್‍ಬುಕ್ ಪುಟಗಳನ್ನು ಫಾಲೋ ಮಾಡಬೇಡಿ. ಇದು ನನ್ನ ಅಧಿಕೃತ ಪುಟವಲ್ಲ, ಈ ಪೇಜ್ ನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ನಕಲಿ ಪುಟದ ಸ್ಕ್ರೀನ್‍ಶಾರ್ಟ್ ತೆಗೆದು ಅದನ್ನು ಕೂಡ ಶೇರ್ ಮಾಡಿ ನಕಲಿ ಪುಟಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
THIS IS A FAKE PAGE STILL CONTINUING , PLEASE UNFOLLOW THIS PAGE AS HE IS POSTING HARMFUL STUFF INSPITE OF MULTIPLE WARNINGS , HAVE REPORTED TO CYBER CRIME AND AWAITING THE END TO THIS NONSENSE pic.twitter.com/vkdyhYitwt
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) September 16, 2019
ಪೋಸ್ಟ್‌ನಲ್ಲಿ ಏನಿದೆ?
ಇದು ನಕಲಿ ಪುಟ ಇನ್ನೂ ಮುಂದುವರಿದಿದೆ. ದಯಮಾಡಿ ಈ ಪುಟವನ್ನು ಅನ್‍ಫಾಲೋ ಮಾಡಿ, ಈ ಪುಟ ಬಳಕೆದಾರ ಇದರಲ್ಲಿ ಹಲವು ಹಾನಿಕಾರಕ ವಿಷಯಗಳನ್ನು, ಸಾಕಷ್ಟು ಎಚ್ಚರಿಕೆಗಳನ್ನು ಪೋಸ್ಟ್ ಮಾಡುತ್ತಿದ್ದಾನೆ. ಈಗಾಗಲೇ ಈ ನಕಲಿ ಪುಟಗಳ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಈ ರೀತಿ ಅಸಂಬದ್ಧಕ್ಕೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಕಾಯುತ್ತಿದ್ದೇನೆ ಎಂದು ಬರೆದು, ನಕಲಿ ಪುಟಗಳ ಫೋಟೋ ಜೊತೆಗೆ ಅಪ್ಲೋಡ್ ಮಾಡಿದ್ದಾರೆ.ಈ ಹಿಂದೆ ಕೂಡ ಸುಮಲತಾ ಅವರು ತಮ್ಮ ಹೆಸರಿನಲ್ಲಿ ತೆರೆಯಲಾಗಿರುವ ನಕಲಿ ಫೇಸ್‍ಬುಕ್ ಪುಟಗಳ ಬಗ್ಗೆ ತಿಳಿದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಯಾವುದೇ ಅನಧಿಕೃತ ಪುಟಗಳು ನಿಮ್ಮ ಗಮನಕ್ಕೆ ಬಂದರೆ ಅದನ್ನು ದಯಮಾಡಿ ವರದಿ ಮಾಡಿ ಎಂದು ಕೋರಿಕೊಂಡಿದ್ದರು.
-

ಮಂಡ್ಯದಲ್ಲಿ ಎಂಪಿ ಆಫೀಸ್ ಓಪನ್- ಇನ್ಮುಂದೆ ಕಚೇರಿಯಲ್ಲೇ ಸುಮಲತಾ ಅಹವಾಲು ಸ್ವೀಕಾರ
ಮಂಡ್ಯ: ಜಿಲ್ಲೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಕಚೇರಿಯನ್ನು ಇಂದು ಉದ್ಘಾಟನೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಗೆ ಮೊದಲು ಪೂಜೆ ಮಾಡಿ ನಂತರ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಸುಮಲತಾ ಅವರು ತಮ್ಮ ಅಧಿಕೃತ ಕಚೇರಿಯಲ್ಲೇ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಒಳ್ಳೆಯ ದಿನ ಹೀಗಾಗಿ ನಾನು ಇಂದು ಕಚೇರಿ ಉದ್ಘಾಟನೆ ಮಾಡಿದ್ದೇನೆ. ಇದು ಅಂಬರೀಶ್ ಅವರು ಇದ್ದ ಕಚೇರಿಯಾಗಿದೆ. ಹೀಗಾಗಿ ಅಂಬರೀಶ್ ಅವರ ಆಫೀಸ್‍ನಲ್ಲಿ ಕೂರುವುದು ನನ್ನ ಭಾಗ್ಯವಾಗಿದೆ ಎಂದರು.

ಇದೇ ವೇಳೆ ಫೇಸ್ ಬುಕ್ ಫೇಕ್ ಅಕೌಂಟ್ ವಿಚಾರ ಪ್ರತಿಕ್ರಿಯಿಸಿ, ಇದು ಬೇಕು ಅಂತಾನೇ ಮಾಡುತ್ತಿದ್ದಾರೆ. ಒಂದಷ್ಟು ಫೇಸ್‍ಬುಕ್ ಖಾತೆಗಳನ್ನು ತೆಗೆಸಿದ್ದಾರೆ. ಆದರೆ ಒಂದನ್ನು ಮಾತ್ರ ತೆಗೆಸಲು ಸಾಧ್ಯವಾಗುತ್ತಿಲ್ಲ. ಇದು ಯಾರೋ ಪ್ರಭಾವಿಗಳು ಮಾಡಿಸುತ್ತಿದ್ದು, ರಾಜಕೀಯ ಡ್ಯಾಮೇಜ್ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಡಿಕೆ ಶಿವಕುಮಾರ್ ಅವರ ಪರ ಒಕ್ಕಲಿಗರು ಪ್ರತಿಭಟನೆ ಮಾಡುವ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದ ಸಂಸದೆ, ಉತ್ತರ ಕರ್ನಾಟಕಕ್ಕೆ ಕೇಂದ್ರದ ನೆರವು ವಿಚಾರ ಬಗ್ಗೆ ಗೊತ್ತಿಲ್ಲ. ಕೇಂದ್ರ ಏನೋ ಪ್ಯಾಕೇಜ್ ಮಾಡಿಕೊಂಡಿದೆ ಅಂತಿದ್ದರು. ಸರ್ಕಾರಿ ಪ್ರಕ್ರಿಯೆಗಳು ತಡವಾಗುತ್ತವೆ. ಹೀಗಾಗಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಜನರಿಗೆ ಪರಿಹಾರ ಸಿಗುತ್ತದೆ ಎಂದರು.

ಬೇರೆ ರಾಜ್ಯಕ್ಕೆ ಬೇಗ ನೆರವು ಕೊಡುವ ವಿಚಾರ ನನಗೆ ಗೊತ್ತಿಲ್ಲ. ಇದು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅದರ ಬಗ್ಗೆ ನನಗೆ ಐಡಿಯಾ ಇಲ್ಲ. ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಹುಮತ ಬಂದರೆ ಆದಷ್ಟು ಬೇಗ ರಾಜ್ಯದಲ್ಲಿ ಉಸ್ತುವಾರಿ ಸಚಿವರ ನೇಮಕ ಮಾಡುತ್ತಾರೆ. ಈಗ ಸ್ಪಲ್ಪ ತಡ ಆಗಿದೆ. ಬೇಗ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
-

ಚಿರು ಜೊತೆ ಸುಮಲತಾ ಡ್ಯಾನ್ಸ್- ವೈರಲ್ ವಿಡಿಯೋಗೆ ಸಂಸದೆ ಸ್ಪಷ್ಟನೆ
ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿ ಜೊತೆ ಮಂಡ್ಯ ಸಂಸದೆ ಸುಮಲತಾ ಸ್ಟೆಪ್ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗುತ್ತಿದೆ.
ಚಿರಂಜೀವಿ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಸುಮಲತಾ ಡ್ಯಾನ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸುಮಲತಾ ಅವರ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋ ಇದೆ. ಇದಕ್ಕೆ ಕಿಡಿಕಾರಿರುವ ಜನರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇರಬೇಕಾದರೆ ಸುಮಲತಾ ಡ್ಯಾನ್ಸ್ ಮಾಡಿರುವುದು ಸರಿನಾ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇದು ಹಳೆಯ ವಿಡಿಯೋ ಎಂದು ಸುಮಲತಾ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ.
ಇದು 4 ವರ್ಷಗಳ ಹಿಂದಿನ ಹಳೆಯ ವಿಡಿಯೋ ಆಗಿದೆ. ನನ್ನ ಹೆಸರಿನ ನಕಲಿ ಅಕೌಂಟ್‍ನಲ್ಲಿ ಕಿಡಿಗೇಡಿಗಳು ವಿಡಿಯೋ ಹಾಕಿದ್ದು, ಇದರಿಂದ ನನ್ನ ತೇಜೋವಧೆಗೆ ಯತ್ನಿಸಲಾಗಿದೆ ಎಂದಿದ್ದಾರೆ. ಅಲ್ಲದೆ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಂಸದೆ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಗುರುವಾರವಷ್ಟೇ ನಕಲಿ ಅಕೌಂಟ್ ಗಳ ಬಗ್ಗೆ ತಮ್ಮ ಫೆಸ್ ಬುಕ್ ಪೇಜಿನಲ್ಲಿ ಸುಮಲತಾ ಅವರು ಬರೆದುಕೊಂಡಿದ್ದರು.

ನಕಲಿ ಅಕೌಂಟ್ ಬಗ್ಗೆ ಪೋಸ್ಟ್:
ನನ್ನ ಹೆಸರಿನಲ್ಲಿ ಹಲವಾರು ನಕಲಿ ಫೇಸ್‍ಬುಕ್ ಖಾತೆಗಳನ್ನು ರಚಿಸಲಾಗಿದೆ ಎಂದು ನನ್ನ ಗಮನಕ್ಕೆ ತರಲಾಗಿದೆ. ಸೈಬರ್ ಅಪರಾಧ ಶಾಖೆಯ ಸಹಾಯದಿಂದ ಈ ಕಿಡಿಗೇಡಿ ತನದವರಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದು ನನ್ನ ಸ್ನೇಹಿತರಿಗಾಗಿ ಪರಿಶೀಲಿಸಿದ ಫೇಸ್‍ಬುಕ್ ಖಾತೆಯಾಗಿದೆ ಮತ್ತು ನನ್ನ ಸದಸ್ಯರೊಂದಿಗೆ ಸಂವಹನ ನಡೆಸುವ ಇನ್ನೊಂದು ಅಧಿಕೃತ ಪುಟವನ್ನು ಮಾತ್ರ ಹೊಂದಿದ್ದೇನೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.ಇದೇ ವೇಳೆ ತಮ್ಮ ಅಧಿಕೃತ ಫೇಸ್‍ಬುಕ್ ಖಾತೆಗಳ ಲಿಂಕ್ ಶೇರ್ ಮಾಡಿರುವ ಅವರು, ಯಾವುದೇ ಅನಧಿಕೃತ ಪುಟವನ್ನು ಯಾರಾದರೂ ಗಮನಿಸಿದರೆ ದಯವಿಟ್ಟು ಅದನ್ನು ತಕ್ಷಣ ವರದಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೇ ಕೆಲ ನಕಲಿ ಖಾತೆಗಳ ಸ್ಕ್ರೀನ್ ಸಾಟ್‍ಗಳನ್ನು ಪೋಸ್ಟ್ ಮಾಡಿ ಜಾಗೃತಿ ಮೂಡಿಸಿದ್ದಾರೆ.
-

ಗಿಡ ನೆಟ್ಟು ನನಗೆ ಫೋಟೋ ಕಳುಹಿಸಿ- ಸಂಸದೆ ಸುಮಲತಾರಿಂದ ಪರಿಸರ ಜಾಗೃತಿ
ಮಂಡ್ಯ: ಸಂಸದೆಯಾದ ಬಳಿಕ ಸುಮಲತಾ ಅವರು ಎಲ್ಲಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಲ್ಲಿ ಹಾರ, ಶಾಲು, ಪೇಟ ತೊಡಿಸಬೇಡಿ. ಬದಲಾಗಿ ಗಿಡ ನೆಡಿ ಎಂದು ಜನರಲ್ಲಿ ಪರಿಸರ ಜಾಗೃತಿ ಮೂಡಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನದ ಮುಗಿದ ಬಳಿಕ ಎಲ್ಲಾ ಕ್ಷೇತ್ರಗಳಿಗೂ ಭೇಟಿ ನೀಡುತ್ತಿದ್ದೇನೆ. ಮಳವಳ್ಳಿ, ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್ ನಗರ, ಮಂಡ್ಯ ಹೀಗೆ ಎಲ್ಲಾ ತಾಲೂಕುಗಳಿಗೂ ಹೋಗುತ್ತಿದ್ದೇನೆ. ಜನ ತುಂಬಾ ಪ್ರೀತಿಯಿಂದ ನನ್ನನ್ನು ಸ್ವಾಗತಿಸುತ್ತಿದ್ದಾರೆ ಎಂದರು.

ಹೋದ ಕಡೆಯೆಲ್ಲಾ ನನಗೆ ಜನ ಪ್ರೀತಿಯಿಂದ ಹೂವಿನ ಹಾರ, ಶಾಲು, ಪೇಟ ತೆಗೆದುಕೊಂಡು ಬಂದು ಸನ್ಮಾನ ಮಾಡುತ್ತಾರೆ. ಈ ಮೂಲಕ ಅವರು ನನ್ನ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ನಿಜಕ್ಕೂ ಅದು ನನಗೆ ಬೇಡ ಎಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಪ್ರೀತಿಯನ್ನು ತೋರಿಸಿಕೊಳ್ಳುವುದಕ್ಕೆ ಅವರು ಎಲ್ಲಿಯಾದರೂ ಒಂದು ಸಸಿ ನೆಟ್ಟು ಆ ಫೋಟೋ ನನಗೆ ಕಳುಹಿಸಿದರೆ ಅವರ ಹೆಸರು ಹಾಕಿ ನನ್ನ ಫೇಸ್ ಬುಕ್ ಪೇಜಿನಲ್ಲಿ ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ದುಡ್ಡು ವೇಸ್ಟ್ ಆಗಬಾರದು, ಪರಿಸರಕ್ಕೆ ಒಳ್ಳೆಯದಾಗಬೇಕು. ಇಲ್ಲವೆಂದಲ್ಲಿ ಬಡವರಿಗೆ ಒಂದುಷ್ಟು ಏನಾದರೂ ಕೊಡುವುದಾದರೆ ಕೊಡಲಿ. ಸನ್ಮಾನಕ್ಕಾಗಿ ಹಣ ವ್ಯರ್ಥ ಮಾಡದಂತೆ ಕಾರ್ಯಕರ್ತರು, ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಅಲ್ಲಿ ಸಂತ್ರಸ್ತರಿದ್ದಾರೆ. ಅವರಿಗೆ ಸಹಾಯ ಮಾಡಲಿ. ಬರುವ ವಾರದಲ್ಲಿ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡುವ ದೃಷ್ಟಿಯಿಂದ ಯಾರು ಯಾರು ಏನೇನು ಮಾಡಬೇಕು ಎಂಬುದನ್ನು ಯೋಚನೆ ಮಾಡುತ್ತೇನೆ. ಒಟ್ಟಿನಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುದನ್ನು ಒದೇ ವೇಳೆ ಮಂಡ್ಯ ಯುವಕರಲ್ಲಿ ಮನವಿ ಮಾಡಿಕೊಂಡರು.
-

ಇದು ನಿಜವಾಗ್ಲೂ ಶಾಕಿಂಗ್ ಸುದ್ದಿ -ಫೋನ್ ಕದ್ದಾಲಿಕೆಯ ಬಗ್ಗೆ ಸುಮಲತಾ ಪ್ರತಿಕ್ರಿಯೆ
ಮಂಡ್ಯ: ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ. ಇದು ನಿಜವಾಗಲೂ ಶಾಕಿಂಗ್ ಸುದ್ದಿ ಎಂದು ಸಂಸದೆ ಸುಮಲತಾ ಅಂಬರೀಶ್ ಅವರು ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದ ಪಣಕನಹಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುಮಲತಾ ಅವರು, ಚುನಾವಣೆ ವೇಳೆ ನಾನು ಏನೇನು ದೂರು ಕೊಟ್ಟಿದ್ದೆನೋ ಅದರಲ್ಲಿ ಒಂದೊಂದೆ ಸತ್ಯ ಬೆಳಕಿಗೆ ಬರುತ್ತಿದೆ. ನಮಗೆ ಫೋನ್ ಟ್ಯಾಪ್ ಮಾಡುತ್ತಿದ್ದಾರೆ ಎಂದು ಅನುಮಾನ ಇತ್ತು. ಆದರೆ ಯಾರು ಮಾಡಿದ್ದಾರೆ, ಏನು ಎಂದು ಗೊತ್ತಿಲ್ಲ. ಈಗ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿದೆ ಎಂದು ತಿಳಿದಿದೆ. ಸಿಬಿಐಗೆ ನೀಡಿರುವುದು ಒಳ್ಳೆಯ ಕೆಲಸ. ತನಿಖೆಯಿಂದ ಏನೇನು ವಿಚಾರ ಹೊರ ಬರುತ್ತದೆ ಎಂದು ನೋಡಬೇಕಿದೆ ಎಂದರು.

ಅವರು ಫೋನ್ ಕದ್ದಾಲಿಕೆ ಮಾಡಿದ್ದರೆ ಅದು ಅಪರಾಧವಾಗುತ್ತದೆ. ತಪ್ಪು ನಡೆದಿದೆ ಎಂದರೆ ನ್ಯಾಯ ಸಿಗಲೇಬೇಕು. ಇದು ನಿಜವಾಗಲೂ ಶಾಕಿಂಗ್ ಸುದ್ದಿ. ಈ ರೀತಿ ಫೋನ್ ಕದ್ದಾಲಿಕೆ ಮಾಡುವುದು ಕ್ರಿಮಿನಲ್ ಎಂದು ಗೊತ್ತಿದ್ದರೂ ಮಾಡಿದ್ದಾರೆ, ಇದು ನಿಜಕ್ಕೂ ತಪ್ಪು. ಈ ಸರ್ಕಾರ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ನಾನು ನೋಡಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
-

ಕುರುಕ್ಷೇತ್ರದ ಪ್ರೀಮಿಯರ್ ಶೋ ನೋಡಿ ನಿಖಿಲ್ ಹೊಗಳಿದ ಸುಮಲತಾ
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ರೆಬೆಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರಸ್ವಾಮಿ, ಅರ್ಜುನ್ ಸರ್ಜಾ, ರವಿಚಂದ್ರನ್ ಹೀಗೆ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಇಂದು ಬಿಡುಗಡೆಯಾಗಿದೆ.
ಬೆಂಗಳೂರಿನ ಮಂತ್ರಿಮಾಲ್‍ನಲ್ಲಿ ಗುರುವಾರ ಸಿನಿಮಾದ ಪ್ರೀಮಿಯರ್ ಶೋ ನಡೆದಿತ್ತು. ನಟ ದರ್ಶನ್, ಸುಮಲತಾ ಅಂಬರೀಶ್, ರಾಕ್‍ಲೈನ್ ವೆಂಕಟೇಶ್ ಅವರು ಪ್ರೀಮಿಯರ್ ಶೋ ವೀಕ್ಷಿಸಿದರು. ಬಳಿಕ ಮಾತಾಡಿದ ಸುಮಲತಾ ಅವರು ನಿಖಿಲ್ ಸೇರಿದಂತೆ ಎಲ್ಲರ ನಟನೆ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.

ಕುರುಕ್ಷೇತ್ರ ಬರಿ ಸಿನಿಮಾ ಎಂದರೆ ತಪ್ಪಾಗುತ್ತದೆ. ಎಲ್ಲ ನಟರಿಗೂ ಇದು ಒಂದು ಜರ್ನಿ ಎಂದೇ ಹೇಳಬಹುದು. ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರಿಗೆ ಕುರುಕ್ಷೇತ್ರ ಅವರಿಗೆ ಲ್ಯಾಂಡ್ ಮಾರ್ಕ್ ಆಗುತ್ತದೆ. ದುರ್ಯೋಧನ ಅಂದರೇ ದರ್ಶನ್ ಎನ್ನುವಷ್ಟರ ಮಟ್ಟಿಗೆ ಅವರ ನಟನೆ ಇದೆ. ಬರಿ ಡಿ ಬಾಸ್ ಅಲ್ಲ, ಇನ್ನು ಮುಂದೇ ದುರ್ಯೋಧನ ಬಾಸ್. ನನಗೆ ಈ ಸಿನಿಮಾ ತುಂಬಾ ಭಾವನಾತ್ಮಕ ವಿಚಾರವಾಗಿದೆ. ಅಂಬರೀಶ್ ಅವರನ್ನ ಮತ್ತೆ ಈ ಸಿನಿಮಾದಲ್ಲಿ ನೋಡುತ್ತಿದ್ದೇವೆ. ಅವರು ನಟಿಸಲ್ಲ ಎಂದರು ಮುನಿರತ್ನ ಅವರ ಕೋರಿಕೆ ಮೇಲೆ ನಟಿಸಿದ್ದರು. ಆದ್ದರಿಂದಲೇ ಸಅವರನ್ನು ಮತ್ತೆ ನೋಡುವ ಅವಕಾಶ ಸಿಕ್ಕಿದೆ. ಸಿನಿಮಾ ಬಗ್ಗೆ ಗಂಟೆಗಟ್ಟಲೇ ಮಾತನಾಡಬೇಕಾಗುತ್ತದೆ. ಪ್ರತಿಯೊಬ್ಬ ನಟರು ಕೂಡ ಉತ್ತಮವಾಗಿ ನಟಿಸಿದ್ದಾರೆ. ಅರ್ಜುನ್ ಸರ್ಜಾರ ನಟನೆ ಹೃದಯ ಸ್ಫರ್ಶಿಯಾಗಿದೆ. ನಿಖಿಲ್ ಅವರ ನಟನೆಯೂ ಸೂಪರ್ ಆಗಿದೆ. ಸಿನಿಮಾಗೆ ಶುಭಾ ಹಾರೈಸುತ್ತೇನೆ ಎಂದು ಸುಮಲತಾ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ದರ್ಶನ್ ಅವರು, ಎಲ್ಲರೂ ಸಿನಿಮಾ ನೋಡಿದ ಬಳಿಕ ನಾನು ಪ್ರತಿಕ್ರಿಯಿಸುತ್ತೇನೆ ಎಂದರು. ಸಿನಿಮಾ ಮುಕ್ತಾಯವಾದ ಬಳಿಕ 3 ನಿಮಿಷದ ಕೆಲ ದೃಶ್ಯಗಳಿವೆ ಎಲ್ಲರೂ ತಪ್ಪದೇ ಅದನ್ನು ವಿಕ್ಷೀಸಬೇಕು ಎಂದು ಮನವಿ ಮಾಡಿದರು.
-

ಸರ್ಕಾರದ ಉಳಿವಿಗೆ ಬಿಜೆಪಿ ಮಾಸ್ಟರ್ ಪ್ಲಾನ್- ಸುಮಲತಾ, ನಿಖಿಲ್ ಮತ್ತೆ ಮುಖಾಮುಖಿಯಾಗ್ತಾರಾ?
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಚುನಾವಣೆಯಲ್ಲಿ ಮತ್ತೆ ಮುಖಾಮುಖಿಯಾಗ್ತಾರಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸುಮಲತಾ ಅವರನ್ನು ರಾಜ್ಯ ರಾಜಕಾರಣಕ್ಕೆ ತರಲಿದ್ದಾರೆ. ಈ ಮೂಲಕ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಭಾರೀ ಪ್ಲಾನ್ ರೂಪಿಸಲಾಗಿದೆ. ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಅವರು ಸ್ಪರ್ಧಿಸುವುದು ಖಚಿತವಾದರೆ ಸುಮಲತಾ ಅವರನ್ನು ಪ್ರತಿಸ್ಪರ್ಧಿಯಾಗಿ ನಿಲ್ಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ನಾರಾಯಣಗೌಡ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಹೀಗಾಗಿ ಈ ಕ್ಷೇತ್ರಕ್ಕೆ ನಡೆಯಲಿರುವ ಉಪಚುನವಾವಣೆಯಲ್ಲಿ ನಿಖಿಲ್ ಅವರಿಗೆ ಅವಕಾಶ ನೀಡಬೇಕು ಎಂಬ ಕೂಗು ಜೆಡಿಎಸ್‍ನಲ್ಲಿ ಕೇಳಿಬಂದಿದೆ. ಹೀಗಾಗಿ ನಿಖಿಲ್ ಸ್ಪರ್ಧೆ ಮಾಡಿ ಗೆದ್ದರೆ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಕನಸು ಕಂಡಿರುವ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ. ಹೀಗಾಗಿ ಸುಮಲತಾ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ, ಕೆ.ಆರ್. ಪೇಟೆಯಿಂದ ಸ್ಪರ್ಧೆ ಮಾಡುವಂತೆ ಬಿಜೆಪಿ ಒತ್ತಾಯಿಸಲಿದೆ.
ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಶಾಸಕ ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ಈ ಬಾರಿ ಹೇಗಾದರೂ ಮಾಡಿ ಮಂಡ್ಯದಲ್ಲಿ ಖಾತೆ ತೆರೆಯಲು ಬಿಜೆಪಿ ಹರಸಾಹಸ ಪಡುತ್ತಿದೆ. ಈ ನಿಟ್ಟಿನಲ್ಲಿ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸಿ ಸರ್ಕಾರವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಪ್ಲಾನ್ ರೂಪಿಸುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅವರು ಕೆಆರ್ ಪೇಟೆ ಕ್ಷೇತ್ರವೊಂದರಲ್ಲೇ ಸುಮಾರು 15 ಸಾವಿರಕ್ಕೂ ಹೆಚ್ಚಿನ ಲೀಡ್ ಪಡೆದಿದ್ದರು. ಹೀಗಾಗಿ ಸುಮಲತಾ ಅವರನ್ನು ಉಪ ಚುನಾವಣೆಗೆ ನಿಲ್ಲಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಕೆಆರ್ ಪೇಟೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
-

ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆಯಾಗಬೇಕು : ಯಶ್
ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದು, ರಾಜ್ಯಕ್ಕೆ ಒಳ್ಳೆದಾಗಬೇಕು, ಸ್ಥಿರ ಸರ್ಕಾರ ರಚನೆ ಆಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದ್ದಾರೆ.
ಕೆಜಿಎಫ್ 2 ನಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು, ರಾಜಕೀಯದಲ್ಲಿ ಆಗುತ್ತಿರುವ ಗೊಂದಲಗಳಿಂದ ಸಹಜವಾಗಿ ಬೇಸರ ಆಗಿದೆ. ಮುಂದೆ ಬರುವ ಸರ್ಕಾರ ರಾಜ್ಯದ ಜನರ ಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಬಹಳಷ್ಟು ಯೋಜನೆಗಳು ಆಗಬೇಕಿದೆ ಎಂದು ಜನರು ಕಾಯುತ್ತಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರು.
ಪಕ್ಷಗಳ ಆಂತರಿಕ ಸಮಸ್ಯೆಯಿಂದ ರಾಜ್ಯದ ಜನರಿಗೆ ಅನ್ಯಾಯ ಆಗುವುದು ಒಳ್ಳೆದಲ್ಲ ಎಂಬುವುದು ಅಷ್ಟೇ ನಮ್ಮ ಉದ್ದೇಶ. ಯಾರು ಅಧಿಕಾರಕ್ಕೆ ಬಂದರೂ ಕೂಡ ಒಂದು ನಿಶ್ಚಿತ ಸರ್ಕಾರ ರಚನೆ ಆಗಬೇಕು. ಆ ಮೂಲಕ ಒಳ್ಳೆಯ ಯೋಜನೆಗಳು ಜಾರಿ ಆಗಬೇಕು. ಇಂತಹ ಸಂದರ್ಭದಲ್ಲಿ ಎಲ್ಲರಂತೆ ನಮಗೂ ಬೇಸರ ಆಗುತ್ತದೆ. ಆದರೆ ಮುಂದೆ ಬರುವ ಸರ್ಕಾರ ಉತ್ತಮವಾಗಿ ಇರಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಿದ್ದ ಯಶ್, ಸಂಸದೆಯಾಗಿ ಕಾರ್ಯನಿರ್ವಹಿಸುತ್ತಿರುವ ಸುಮಲತಾ ಅವರ ಕೆಲಸಗಳ ಬಗ್ಗೆಯೂ ಇದೇ ಸಂದರ್ಭದಲ್ಲಿ ಮಾತನಾಡಿದರು. ಮಂಡ್ಯಕ್ಕೆ ಹೊಸ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕೇಂದ್ರ ನಾಯಕರ ಸಲಹೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸುಮಲತಾ ಅವರ ಕೆಲಸ ನೋಡಿ ಖುಷಿ ಆಗುತ್ತಿದೆ, ಅವರು ಎಲ್ಲೆ ಹೋದರೂ ನನಗೆ ಆಗಾಗ ಮಾಹಿತಿ ನೀಡುತ್ತಾರೆ. ಜನತೆಗೆ ಬೇಕಾದ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂಬ ನಂಬಿಕೆ ಇದೆ. ಕೇಂದ್ರ ಸರ್ಕಾರದ ನಾಯಕರು ಕೂಡ ಉತ್ತಮವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದಿದ್ದಾರೆ. ಸುಮಲತಾರ ಕಾರ್ಯ ನಮಗೇ ಖುಷಿ ತಂದಿದೆ ಎಂದರು. ಇದನ್ನು ಓದಿ: ಜಿಲ್ಲೆಯ ಸಮಸ್ಯೆ ಬಗೆಹರಿಸಿಕೊಡಿ – ಅಮಿತ್ ಶಾ ಬಳಿ ಸುಮಲತಾ ಮನವಿ
