Tag: Sulwadi Maramma Temple

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣ – ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ

    ಸುಳ್ವಾಡಿ ವಿಷ ಪ್ರಸಾದ ಪ್ರಕರಣ – ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ

    ಚಾಮರಾಜನಗರ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ ಆಗಿದೆ.

    ಜಾಮೀನು ಅರ್ಜಿ ವಜಾಗೊಳಿಸಿ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್ ಭಾರತಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲೂ ಜಾಮೀನು ಅರ್ಜಿ ವಜಾ ಆಗಿತ್ತು.

    ಅನಾರೋಗ್ಯದ ಕಾರಣ ನೀಡಿ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಮತ್ತೆ ಜಾಮೀನು ಅರ್ಜಿಯನ್ನು ಚಾಮರಾಜನಗರ ಜಿಲ್ಲಾ ನ್ಯಾಯಾಲಯವು ವಜಾ ಮಾಡಿದೆ. ಕಳೆದ 5 ವರ್ಷ 11 ತಿಂಗಳಿಂದ ಇಮ್ಮಡಿ ಮಹದೇವಸ್ವಾಮಿ ಜೈಲಿನಲ್ಲಿದ್ದಾರೆ.

    ಮಹದೇಶ್ವರ ಬೆಟ್ಟ ಸಾಲೂರು ಮಠದ ಕಿರಿಯ ಸ್ವಾಮೀಜಿ ಆಗಿದ್ದ ಇಮ್ಮಡಿ ಮಹದೇವಸ್ವಾಮಿ, ಸುಳ್ವಾಡಿ ಕಿಚ್‌ಗುತ್ ಮಾರಮ್ಮ ದೇವಸ್ಥಾನದ ಆಡಳಿತದಲ್ಲಿ ಅಧಿಪತ್ಯ ಸ್ಥಾಪಿಸಲು ಪಿತೂರಿ ನಡೆಸಿದ್ದರು. ಮತ್ತೊಂದು ಗುಂಪಿಗೆ ಕೆಟ್ಟ ಹೆಸರು ತರಲು ಪ್ರಸಾದಕ್ಕೆ ವಿಷ ಬೆರೆಸಿದ್ದ ಆರೋಪ ಕೇಳಿಬಂದಿತ್ತು.

    2018ರ ಡಿ.14 ರಲ್ಲಿ ನಡೆದ ಘಟನೆಯಲ್ಲಿ 17 ಮಂದಿ ಭಕ್ತರು ಮೃತಪಟ್ಟಿದ್ದರು. 127 ಮಂದಿ ಅಸ್ವಸ್ಥಗೊಂಡಿದ್ದರು. ಸದ್ಯ ಮೊದಲ ಆರೋಪಿ ಇಮ್ಮಡಿ ಮಹದೇವಸ್ವಾಮಿ, ಎರಡನೇ ಆರೋಪಿ ಅಂಬಿಕಾ, ಮೂರನೇ ಆರೋಪಿ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್, ನಾಲ್ಕನೇ ಆರೋಪಿ ತಂಬಡಿ ದೊಡ್ಡಯ್ಯ ಮೈಸೂರಿನ ಜೈಲಿನಲ್ಲಿದ್ದಾರೆ.

  • ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಟ್ಟು ಶ್ರದ್ಧಾಂಜಲಿ

    ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಗಿಡ ನೆಡುವ ಮೂಲಕ ವಿಶೇಷವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದ ಸೇವಿಸಿ ಸಾವನ್ನಪ್ಪಿದವರಿಗೆ ವಿಶೇಷ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಪಕ್ಕದಲ್ಲಿ ಅರಳಿ ಹಾಗೂ ಬೇವಿನ ಗಿಡ ನೆಟ್ಟು ವಿಷ ದುರಂತದಲ್ಲಿ ಮಡಿದವರಿಗಾಗಿ ಹಾಲು ತುಪ್ಪ ಎರೆದು ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.

    ಡಿಸೆಂಬರ್ 14, 2018 ರಲ್ಲಿ ಸುಳ್ವಾಡಿ ಮಾರಮ್ಮನ ವಿಷ ದುರಂತದಲ್ಲಿ 17 ಜನ ವಿಷ ಪ್ರಾಶನ ಮಾಡಿ ಸಾವನ್ನಪ್ಪಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸಾವನ್ನಪ್ಪಿದ ಎಲ್ಲರಿಗೂ ಮೃತರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.