Tag: sulvadi

  • ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

    ಏನಿದು ಪ್ರಕರಣ?
    ಸುಳ್ವಾಡಿ ಮಾರಮ್ಮನ ವಿಷ ದುರಂತ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷವಾಗಿದೆ. ದೇವಾಲಯದ ಆಡಳಿತ ಚುಕ್ಕಾಣಿಗೋಸ್ಕರ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಜನ ಸಾವನ್ನಪ್ಪಿದ್ದು, 120 ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣ ಸಂಬಂಧ ಇಮ್ಮಡಿ ಮಹದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ್ ಎಂಬ ಆರೋಪಿಗಳ ಬಂಧನವಾಗಿತ್ತು.

    ಕಳೆದ ಬಾರಿಯೂ ಸಹ ಮೃತಪಟ್ಟ ಎಲ್ಲಾ ಕುಟುಂಬಸ್ಥರು ಸೇರಿ ಸುಳ್ವಾಡಿ ಗ್ರಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿದರು. ಅದೇ ರೀತಿ ಈ ಬಾರಿಯೂ ಸಹ ಸುಳ್ವಾಡಿ ದೇವಾಲಯದ ಮುಂಭಾಗ ವಿಷ ಪ್ರಸಾದ ತಿಂದು ಮಡಿದವರ ಆತ್ಮಕ್ಕೆ ಶಾಂತಿ ಕೋರಲು ಸಾಮೂಹಿಕ ಶ್ರದ್ಧಾಂಜಲಿ ನಡೆಸಲಾಯಿತು. ಈ ಸಭೆ ನಡೆಯುವಾಗ ಕೆಲವರು ತಮ್ಮ ಮನೆಯವರನ್ನು ನೆನೆದು ಕಣ್ಣೀರು ಹಾಕಿದರು.

    ಈ ಸಭೆಯಲ್ಲಿ ಸ್ಥಳೀಯ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಇತರರು ಸೇರಿದ್ದು, ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

  • ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಸುಳ್ವಾಡಿ ಮಾರಮ್ಮ ದೇಗುಲ ತೆರೆಯುವಂತೆ ಭಕ್ತರ ಕಣ್ಣೀರು

    ಚಾಮರಾಜನಗರ: ವಿಷ ಪ್ರಸಾದ ಸೇವನೆಯಿಂದ 17 ಮಂದಿ ಸಾವನ್ನಪ್ಪಿ 120ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದರು ಸಹ ಭಕ್ತರಿಗೆ ಆ ದೇವಿಯ ಮೇಲಿನ ಭಕ್ತಿ ಒಂದಿನಿತು ಕಡಿಮೆಯಾಗಿಲ್ಲ. ಈ ದುರಂತದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಚ್ಚಿ ಒಂದು ವರ್ಷ ಕಳೆಯುತ್ತಾ ಬಂದಿದೆ. ದೇವಿಯ ದರ್ಶನ ಸಿಗದೇ ಭಕ್ತರು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ಮುನಿಸಿಕೊಂಡಿದ್ದಾಳೆ ಎಂಬುದು ಅಲ್ಲಿನ ಜನರ ನಂಬಿಕೆ. ಹೀಗಾಗಿಯೇ ಹಲವಾರು ರೀತಿಯ ರೋಗ ರುಜಿನಗಳು, ಸಂಕಷ್ಟಗಳು ಬರುತ್ತಿವೆ ಎಂದು ಭಕ್ತರು ನಂಬಿದ್ದಾರೆ.

    ಹೌದು. ಜಿಲ್ಲೆಯ ಹನೂರು ತಾಲೋಕಿನ ಸುಳ್ವಾಡಿ ಕಿಚ್ ಗುತ್ ಮಾರಮ್ಮ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯುವ ಹುನ್ನಾರಕ್ಕೆ 17 ಮಂದಿ ಬಲಿಯಾಗಿದ್ದರು. ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಹಾಗು ಇತರ ಮೂವರು ಸೇರಿ ಪ್ರಸಾದದಲ್ಲಿ ವಿಷಬೆರೆಸಿ ದೊಡ್ಡ ದುರಂತಕ್ಕೆ ಕಾರಣವಾಗಿ ಕಂಬಿ ಎಣಿಸುತ್ತಿದ್ದಾರೆ.

    ಈ ದುರಂತದ ಹಿನ್ನೆಲೆಯಲ್ಲಿ ಕಿಚ್ ಗುತ್ ಮಾರಮ್ಮ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾಯಿಸಿ ಬೀಗ ಜಡಿಯಲಾಗಿದೆ. ಹೀಗಾಗಿ ಪೂಜೆಯು ನಿಂತು ಹೋಗಿದೆ. ದೇವಸ್ಥಾನ ಮುಚ್ಚಿರುವುದರಿಂದ ಮಾರಮ್ಮ ದೇವಿ ಮುನಿಸಿಕೊಂಡಿದ್ದಾಳೆ. ಹಾಗಾಗಿ ಸುತ್ತಮುತ್ತಲ ಗ್ರಾಮಗಳಲ್ಲಿ ರೋಗ ರುಜಿನಗಳು ಕಾಣಿಸಿಕೊಳ್ಳುತ್ತಿವೆ. ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ತಾಯಿ ಮಾರಮ್ಮನ ಬಾಗಿಲು ಮುಚ್ಚಿದ ನಂತ್ರ ಸಂಕಷ್ಟಗಳು ಎದುರಾಗಿದ್ದು ಇದೆಲ್ಲ ದೂರಾಗಬೇಕು ಅಂದರೆ ದೇವಾಸ್ಥಾನದ ಬಾಗಿಲು ತೆರೆಯುವಂತೆ ಅಳಲು ತೋಡಿಕೊಂಡರು.

    ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಿಕ್ಷಣ ಸಚಿವ ಇಂದು ಸುಳ್ವಾಡಿ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಭಕ್ತರ ಕಣ್ಣಿರ ಕಟ್ಟೆ ಒಡೆಯಿತು. ದೇವಸ್ಥಾನವನ್ನು ಕೂಡಲೇ ತೆರೆಯುವಂತೆ ಭಕ್ತರು ಗೋಳಿಟ್ಟ ಪ್ರಸಂಗ ನಡೆಯಿತು. ಈ ವೇಳೆ ಸಚಿವರು, ಕಿಚ್ ಗುತ್ ಮಾರಮ್ಮ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಅನುಮತಿ ಪಡೆದು ಆದಷ್ಟು ಬೇಗ ಅರ್ಚಕರನ್ನು ನೇಮಿಸಿ ದೇವಸ್ಥಾನ ತೆರೆಯುವುದಾಗಿ ಭರವಸೆ ನೀಡಿದರು.

    ಇದಕ್ಕೂ ಮೊದಲು ಸಚಿವ ಸುರೇಶ್ ಕುಮಾರ್ ವಿಷ ದುರಂತದ ಸಂತ್ರಸ್ತರನ್ನು ಭೇಟಿಯಾಗಿದ್ದು, ಹಿಂದಿನ ಸರ್ಕಾರ ನೀಡಿದ್ದ ಭರವಸೆಯಂತೆ ಮೃತಪಟ್ಟವರ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

  • ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಜೈಲಿನಿಂದ್ಲೇ ಸುಳ್ವಾಡಿ ಹಂತಕನ ದರ್ಬಾರ್ – ಮಠದ ಆಸ್ತಿಯನ್ನು ತನ್ನ ಹೆಸ್ರಿಗೆ ಮಾಡ್ಕೊಂಡ ಇಮ್ಮಡಿ

    ಚಾಮರಾಜನಗರ: ಸುಳ್ವಾಡಿ ದುರಂತದ ಕ್ರಿಮಿ ಇಮ್ಮಡಿ ಮಹದೇವ ಸ್ವಾಮೀಜಿ ಜೈಲಿನಲ್ಲಿ ಇದ್ದುಕೊಂಡು ದರ್ಬಾರ್ ನಡೆಸುತ್ತಿದ್ದಾನೆ. ಈತನ ಪ್ಲಾನ್‍ಗೆ ಜೈಲಾಧಿಕಾರಿಗಳು ಫುಲ್ ಸಪೋರ್ಟ್ ಮಾಡಿದ್ದಾರೆ.

    ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ ಸುಳ್ವಾಡಿ ವಿಷಪ್ರಸಾದ ದುರಂತ ನಡೆದು 5 ತಿಂಗಳಾಯಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಸುಳ್ವಾಡಿ ಮಾರಮ್ಮ ದೇವಸ್ಥಾನದ ಆಡಳಿತದ ಚುಕ್ಕಾಣಿ ಹಿಡಿಯಲು ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ಇತರ ಮೂವರು ಸೇರಿ ಮಾಡಿದ ಪಿತೂರಿಗೆ 17 ಮಂದಿ ಬಲಿಯಾಗಿ 112 ಮಂದಿ ಅಸ್ವಸ್ಥರಾಗಿದ್ದರು. ವಿಷವಿಕ್ಕಿದ ಪಾಪಿಗಳು ಜೈಲಲ್ಲಿದ್ದಾರೆ. ಆದರೆ ಇಮ್ಮಡಿ ಮಹದೇವಸ್ವಾಮಿ ಮಾತ್ರ ಜೈಲಿನಲ್ಲಿ ಇದ್ದುಕೊಂಡೇ ಸಾಲೂರು ಮಠದ ಆಸ್ತಿಯನ್ನು ತನ್ನ ವೈಯಕ್ತಿಕ ಖಾತೆ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

     

    1997ರಲ್ಲಿ ಇಮ್ಮಡಿ ಮಹದೇವಸ್ವಾಮಿ, ಕಾರ್ಯದರ್ಶಿ, ಮಲೆಮಹದೇಶ್ವರ ಕೃಪ ವಿದ್ಯಾಸಂಸ್ಥೆ ಹೆಸರಲ್ಲಿ ಲಿಂಗಣಾಪುರ ಎಂಬಲ್ಲಿ 2 ಎಕರೆ 44 ಸೆಂಟ್ಸ್ ಜಮೀನನ್ನು ಖರೀದಿಸಿದ್ದನು. ಆದರೆ ಈಗ ಈತ ಜೈಲಿಂದ ಹೇಗಾದ್ರೂ ಹೊರಬರಲು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಈ ಆಸ್ತಿಯನ್ನು ಮಾರಾಟ ಮಾಡಲು ಇದೇ ಮೇ 3ರಂದು ತನ್ನ ಸ್ವಂತ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾನೆ ಎನ್ನಲಾಗಿದೆ.

    2018ರ ಫೆಬ್ರವರಿ 20 ರಂದು ಖಾತೆ ಮಾಡಿಕೊಡಲು ಇಮ್ಮಡಿ ಮಹದೇವಸ್ವಾಮೀಜಿ ಅರ್ಜಿ ಸಲ್ಲಿಸಿದ್ದ. ಅರ್ಜಿ ಕೊಟ್ಟ ಒಂದು ತಿಂಗಳೊಳಗೆ ವಿಲೇವಾರಿ ಮಾಡಬೇಕು. ಆದರೆ 1 ವರ್ಷವಾದ್ರೂ ಅರ್ಜಿಯ ಬಗ್ಗೆ ಕ್ರಮಕೈಗೊಳ್ಳದ ಅಧಿಕಾರಿಗಳು ಇದ್ದಕ್ಕಿದ್ದಂತೆ 2 ವಾರಗಳ ಹಿಂದೆ ಇಮ್ಮಡಿ ಮಹದೇವಸ್ವಾಮಿ ಹೆಸರಿಗೆ ಖಾತೆ ಮಾಡಿಕೊಟ್ಟಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

  • ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಸುಳ್ವಾಡಿ ವಿಷ ಪ್ರಸಾದ ದುರಂತ ಬೆನ್ನಲ್ಲೇ ಮತ್ತೊಂದು ಘೋರ ಅವಘಡ

    ಚಿಕ್ಕಬಳ್ಳಾಪುರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ವಿಷ ಪ್ರಸಾದ ಸೇವಿಸಿ 17 ಮಂದಿ ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ ಇದೀಗ ಇಂತದ್ದೇ ಘೋರ ಘಟನೆಯೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಹೌದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ನರಸಿಂಹ ಪೇಟೆಯ ಗಂಗಮ್ಮ ಗುಡಿ ದೇವಸ್ಥಾನದಲ್ಲಿ ಶುಕ್ರವಾರ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯವಿತ್ತು. ಈ ವೇಳೆ ದೇವರ ಪ್ರಸಾದ ಸೇವಿಸಿ ಕವಿತಾ(28) ಸಾವನ್ನಪ್ಪಿ, ಒಂದೇ ಕುಟುಂಬದ 5 ಮಂದಿ ಅಸ್ವಸ್ಥರಾಗಿದ್ದಾರೆ. ಗಂಗಾಧರ, ರಾಜ, ರಾಧ ಹಾಗು ಮಕ್ಕಳಾದ ಗಾನವಿ, ಶರಣ ಅಸ್ವಸ್ಥರು.

    ಇಬ್ಬರು ಮಕ್ಕಳು ಹಾಗೂ ರಾಜ ಅವರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಅಸ್ವಸ್ಥರು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ನಡೆದಿದ್ದೇನು..?
    ರಾಜ ಎಂಬವರು ದೇವಸ್ಥಾನದಿಂದ ಸ್ವೀಟ್ ಪೊಂಗಲ್ ತಂದಿದ್ದರು. ಪ್ರಸಾದವನ್ನು ಸೇವಿಸಿದ ಬಳಿಕ ಎಲ್ಲರಿಗೂ ವಾಂತಿಯಾಗಿದ್ದರಿಂದ, ಕೂಡಲೇ ಎಲ್ಲರನ್ನೂ ಸ್ಥಳೀಯರು ಚಿಂತಾಮಣಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕವಿತಾ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಅಸ್ವಸ್ಥರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆತರಲಾಗಿದೆ.

    ಪ್ರಸಾದ ಸೇವಿಸಿದ ಬಳಿಕವೇ ನಾವೆಲ್ಲರೂ ಅಸ್ವಸ್ಥರಾಗಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಆದ್ರೆ ದೇವಸ್ಥಾನದಲ್ಲಿ 100-150 ಜನ ಪ್ರಸಾದ ಸೇವಿಸಿದ್ದಾರೆ. ಹೀಗಾಗಿ ಒಂದೇ ಕುಟುಂಬಕ್ಕೆ ವಿಷ ಪ್ರಸಾದ ಸಿಕ್ಕಿತಾ ಅನ್ನೋ ಪ್ರಶ್ನೆ ಇದೀಗ ಮೂಡಿಬಂದಿದ್ದು, ವಿಚಾರಣೆ ಬಳಿಕವಷ್ಟೇ ಸತ್ಯಾಂಶ ಬೆಳಕಿಗೆ ಬರಬೇಕಿದೆ.

    ಘಟನೆ ಸಂಬಂಧ ಪೊಲೀಸರು ದೇವಸ್ಥಾನದ ಟ್ರಸ್ಟಿ ಮತ್ತು ಅರ್ಚಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶುಕ್ರವಾರ ಪೂಜಾ ಕೈಂಕರ್ಯದಲ್ಲಿ ಎಷ್ಟು ಜನ ಭಾಗಿಯಾಗಿದ್ದರು? ಪ್ರಸಾದ ತಯಾರಿಕೆ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    ಸುಳ್ವಾಡಿ ವಿಷ ಪ್ರಸಾದ ಪ್ರಕರಣದ ಆರೋಪಿಗಳ ಪರ ಮಡಿಕೇರಿ ವಕೀಲ ವಕಾಲತ್ತು

    – ಜಾಮೀನು, ಪ್ರಕರಣ ವಿಚಾರಣೆ ಜ.29ಕ್ಕೆ

    ಚಾಮರಾಜನಗರ: ಸುಳ್ವಾಡಿಯ ಮಾರಮ್ಮ ದೇವಿ ಪ್ರಸಾದಕ್ಕೆ ವಿಷಬೆರೆಸಿ 17 ಜನ ಅಮಾಯಕರನ್ನು ಬಲಿ ಪಡೆದ ಪ್ರಕರಣದ ಎ1 ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ವಕಾಲತ್ತು ವಹಿಸಲು ಮಡಿಕೇರಿ ಮೂಲದ ವಕೀಲರು ಮುಂದಾಗಿದ್ದಾರೆ.

    ಮಡಿಕೇರಿ ಮೂಲದ ವಕೀಲ ಅಪ್ಪಣ್ಣ, ತಮ್ಮ ಕಿರಿಯ ವಕೀಲರಾದ ಸುದೇಶ್ ಹಾಗೂ ಲೋಹಿತ್ ಎಂಬವರ ಮೂಲಕ ಇಂದು ಇಮ್ಮಡಿ ಮಹದೇವಸ್ವಾಮಿ ಪರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲಾ ನ್ಯಾಯಲಯದಲ್ಲಿ ಜನವರಿ 29ಕ್ಕೆ ನಡೆಯುವ ವಿಚಾರಣೆ ಮುನ್ನವೇ ಜಾಮೀನು ನೀಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ನ್ಯಾಯಾಧೀಶರ ಮುಂದೆ ಇಂದು ಮಧ್ಯಾಹ್ನ ಅರ್ಜಿ ಬರುತ್ತಿದ್ದಂತೆ, ಅದಕ್ಕೆ ತಕರಾರು ಅರ್ಜಿ ಸಲ್ಲಿಸಲು ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ್ದಾರೆ. ಇದನ್ನು ಓದಿ: ವಿಷ ಪ್ರಸಾದ ಪ್ರಕರಣ- ದೇವಸ್ಥಾನದ ಆವರಣದಲ್ಲಿ ಭಕ್ತೆಯ ಗೋಳಾಟ

    ಸರ್ಕಾರಿ ಅಭಿಯೋಜಕರು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ಜನವರಿ 29ರಂದು ಪ್ರಕರಣದ ವಿಚಾರಣೆ ಜೊತೆಗೆ ಜಾಮೀನು ವಿಚಾರಣೆ ನಡೆಸಲಾಗುತ್ತದೆ ಎಂದು ನ್ಯಾಯಾಧೀಶರಾದ ಬಸವರಾಜು ತಿಳಿಸಿದ್ದಾರೆ. ಈ ಮಧ್ಯೆ ಆರೋಪಿಗಳ ಪರ ವಕಾಲತ್ತು ವಹಿಸಬಾರದೆಂಬ ತಮ್ಮ ನಿರ್ಣಯ ಬೆಂಬಲಿಸುವಂತೆ ಮಡಿಕೇರಿ ವಕೀಲರಿಗೆ ಮನವಿ ಸಲ್ಲಿಸಲು ಚಾಮರಾಜನಗರ ವಕೀಲರ ಸಂಘ ನಿರ್ಧರಿಸಿದೆ. ಇದನ್ನು ಓದಿ: ಅಂಬಿಕಾ ಮನೆ ಬಾಡಿಗೆಯಲ್ಲೂ ಮಧ್ಯಸ್ಥಿಕೆ ವಹಿಸಿದ್ದ ಇಮ್ಮಡಿ ಮಹದೇವ ಸ್ವಾಮೀಜಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿ ಮತ್ತೆ ಆಸ್ಪತ್ರೆಗೆ ದಾಖಲು

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ ಚಿಕಿತ್ಸೆ ಪಡೆದಿದ್ದ 6 ಮಂದಿಗೆ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಎಂ.ಜಿ.ದೊಡ್ಡಿ ಗ್ರಾಮದ ರೇಖಾ, ಪಳನಿಯಮ್ಮ, ಮಲ್ಲಿಗೆ, ವೀರಮ್ಮ, ಕಮಲ ಮತ್ತು ಪಳನಿ ಎಂಬವರಿಗೆ ಹೊಟ್ಟೆ ಉರಿ, ಎದೆ ನೋವು, ತಲೆ ನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಇತ್ತ ಸುಳ್ವಾಡಿ ದುರಂತ ಇನ್ನು ಹಸಿಯಾಗಿರುವಾಗಲೇ ಅಂಥದ್ದೇ ಪ್ರಕರಣವೊಂದು ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಮಾರಮ್ಮನ ಪ್ರಸಾದದಲ್ಲಿ ವಿಷ ಬೆರೆಸಿದರೆ, ಇಲ್ಲಿ ಕುಡಿಯುವ ನೀರಿಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ್ದಾರೆ. ಸುರಪುರ ತಾಲೂಕಿನ ಮುದನೂರ ಕೆ ಗ್ರಾಮದ ಹೊರಭಾಗದಲ್ಲಿರುವ ಬಾವಿಯ ನೀರು ಶಾಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಕ್ಕೆ ಫಿಲ್ಟರ್ ಅಗಿ ಸರಬರಾಜಾಗ್ತಿತ್ತು. ಆದ್ರೆ ಯಾರೋ ಕಿಡಿಗೇಡಿಗಳು ಈ ನೀರಿಗೆ ಭತ್ತದ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕ ಬೆರೆಸಿದ್ದಾರೆ.

    ಈ ನೀರು ಕುಡಿದ ಪಂಪ್ ಆಪರೇಟರ್ ತಾಯಿ ನಾಗಮ್ಮ ಸೇರಿ ಐವರು ಅಸ್ವಸ್ಥರಾಗಿದ್ದು ಕೆಂಬಾವಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪಂಪ್ ಆಪರೇಟರ್ ಮೌನೇಶ್ ನೀರು ಪೂರೈಕೆ ಸ್ಥಗಿತಗೊಳಿಸಿ ಗ್ರಾಮದಲ್ಲಿ ಯಾರು ಈ ನೀರು ಕುಡಿಯಬೇಡಿ ಎಂದು ಡಂಗೂರ ಸಾರಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಸದ್ಯ ಬಾವಿಯ ನೀರು ಖಾಲಿ ಮಾಡಿಸಲಾಗ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ

    ಮೈಸೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ ಸಾವಿಗೀಡಾದವರ ಒಂದೊಂದು ಮನಕಲಕುವ ಘಟನೆಗಳನ್ನು ಕೇಳಿದ್ರೆ ನಿಮ್ಮ ಮನವೂ ಕಲಕುತ್ತದೆ. ದೇವಸ್ಥಾನದ ಅಡುಗೆ ತಯಾರಿಸಿದ ಪುಟ್ಟಸ್ವಾಮಿ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಮಗಳನ್ನು ಉಳಿಸಿಕೊಳ್ಳಲು ಪರದಾಡಿದ ತಮ್ಮ ಕಣ್ಣೀರ ಕಥೆಯೊಂದನ್ನು ಪಬ್ಲಿಕ್ ಟಿವಿ ಜೊತೆ ಬಿಚ್ಚಿಟ್ಟಿದ್ದಾರೆ.

    ನನ್ನ ಹೊಟ್ಟೆಗೆ ವಿಷ ಪ್ರಸಾದ ಸೇರಿದೆ ಅಂತ ಗೊತ್ತಿದ್ರೂ ನನ್ನ ಮಗಳನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ಮಾಡಿದ್ದೆ. ಆದ್ರೆ ಕೊನೆಗೂ ನನ್ನ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಮಾತ್ರವಲ್ಲದೇ ಆಕೆಯ ಅಂತ್ಯಕ್ರಿಯೆಗೆ ಹೋಗುವ ಅವಕಾಶವನ್ನೂ ದೇವರು ನನಗೆ ನೀಡಿಲ್ಲ ಅಂತ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದಾರೆ.

    ಪುಟ್ಟಸ್ವಾಮಿ ಹೇಳಿದ್ದೇನು..?
    ನಾನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಮಗಳು ನನ್ನ ನೋಡಲು ಬಂದಿದ್ದಳು. ಬೆಳಗ್ಗೆ ಗುದ್ದಲಿ ಪೂಜೆ ಇತ್ತು. ಆದ್ದರಿಂದ ಅಡುಗೆಗೆ ಸ್ವಲ್ಪ ಸಹಾಯ ಮಾಡಿದೆ. ಅಡುಗೆ ಆದ ಬಳಿಕ ನನ್ನ ಮಗಳು ಊಟ ಮಾಡಿದ್ದಾಳೆ. ಅವಳ ಊಟದಲ್ಲಿ ಅರ್ಧ ಉಳಿದಿತ್ತು. ಆವಾಗ ಆಕೆ ಅಪ್ಪ ನನಗೆ ಬೇಡ ನನಗೆ ಊಟ ಮಾಡಲು ಆಗುತ್ತಿಲ್ಲ ಅಂತ ಹೇಳಿದಳು. ನಾನೂ ಊಟ ಮಾಡಿದೆ ಅಂತ ಪುಟ್ಟಸ್ವಾಮಿ ಹೇಳಿದ್ರು.

    ಸ್ವಲ್ಪ ಹೊತ್ತು ಬಳಿಕ ನನ್ನ ಮಗಳು ಬಿದ್ದು ಒದ್ದಾಡುತ್ತಿದ್ದಳು. ಮಗಳು ಯಾಕೆ ಬಿದ್ದು ಒದ್ದಾಡುತ್ತಿದ್ದಾಳೆ ಅಂತ ಊರಿನ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಸುಳ್ವಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ಬೇರೆ ಕಡೆ ಅಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಅಂದ್ರು. ಆದ್ರೆ ನಾನು ಬರುವಾಗಲೇ ಅಂಬುಲೆನ್ಸ್ ಹೊರಟಿತ್ತು. ಹೀಗಾಗಿ ನಾನು ಬೈಕಿನಲ್ಲಿ ಆಕೆಯನ್ನು ಸುಳ್ವಾಡಿಯಿಂದ 15 ಕಿ.ಮೀ ದೂರದಲ್ಲಿರುವ ರಾಮಾಪುರಕ್ಕೆ ಕರೆದುಕೊಂಡು ಬಂದೆ ಅಂತ ತಮ್ಮ ದುಃಖ ತೋಡಿಕೊಂಡರು.

    ನನ್ನ ಮಗಳನ್ನು ಆಸ್ಪತ್ರೆಗೆ ಸೇರಿಸಿದಾಗ ನನ್ನ ಹೊಟ್ಟೆಯೂ ತೊಳೆಸಿದಂತೆ ಆಗುತ್ತಿತ್ತು. ಆದ್ರೆ ಮೊದಲು ನನ್ನ ಮಗಳು ಚೆನ್ನಾಗಿರಬೇಕು. ನನಗೆ ಏನಾದ್ರೂ ಪರವಾಗಿಲ್ಲ. ಹೀಗಾಗಿ ಫಸ್ಟ್ ಮಗಳನ್ನು ತೋರಿಸಿ ಆಮೇಲೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಅಂತ ಯೋಚಿಸಿದೆ. ಅದುವರೆಗೂ ನನ್ನ ಬಗ್ಗೆ ಯಾರ ಜೊತೆನೂ ಹೇಳಿಕೊಂಡಿಲ್ಲ. ಎಲ್ಲರ ಬಳಿಯೂ ನಾನು ಚೆನ್ನಾಗಿದ್ದೇನೆ ಅಂತಾನೇ ಹೇಳುತ್ತಾ ಬಂದೆ. ಆದ್ರೆ ಹೊಟ್ಟೆ ತೊಳೆಸುತ್ತಾ ಇತ್ತು. ವಾಂತಿ ಬರುವಂತೆ ಆಗುತ್ತಿತ್ತು. ನನ್ನ ಚಲನವಲನ ಕಂಡು ಸ್ಥಳೀಯರು ನೀನು ಮೊದಲು ಗಾಡಿ ಹತ್ತು ಅಂತ ಹೇಳುತ್ತಿದ್ದರು. ಆವಾಗ ನಾನು, ನನ್ನ ಮಗಳೇ ಹಿಂಗೆ ಇರುವಾಗ ನಾನು ಫಸ್ಟ್ ಗಾಡಿ ಹತ್ತಿ ಏನು ಮಾಡಲಿ ಅಂತ ಪ್ರಶ್ನಿಸಿದೆ. ನನಗೆ ಆಗಲೇ ತುಂಬಾ ಬೇಜಾರಾಗುತ್ತಿತ್ತು ಅಂತ ದುಃಖಿತರಾದ್ರು.

    ಕೊನೆಗೆ ನನ್ನ ಮಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಳು. ಆಕೆ ತೀರಿಕೊಂಡ ನಂತರ ನಾನು ಸತ್ತು ಹೋಗುತ್ತೆನೋ ಅಂತ ನನಗೂ ಹೊಟ್ಟೆ ತೊಳೆಸುತ್ತೆ, ವಾಂತಿ ಬಂದಂಗೆ ಆಗುತ್ತಿದೆ ಅಂತ ಹೇಳಿಕೊಂಡೆ. ಆಮೇಲೆ ಅವರು ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಯಾರು ಎಂಬುದನ್ನು ಕಂಡುಹಿಡಿಯಬೇಕು. ಅಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿ ಗದ್ಗದಿತರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv