Tag: suluvadi

  • 44 ಗಂಟೆ ತಡವಾಗಿ ಬಂದ್ರು – ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

    44 ಗಂಟೆ ತಡವಾಗಿ ಬಂದ್ರು – ನಾ ಬಂದು ಏನ್ಮಾಡಬೇಕಿತ್ತೆಂದು ಆರೋಗ್ಯ ಸಚಿವರ ಉಡಾಫೆ

    – ಪ್ರಸಾದ ವಿಷ ವಿಚಾರ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ!
    – ಆರೋಗ್ಯ ಸಚಿವರಿಗೇ ಮಾಹಿತಿ ಕೊರತೆಯ ಅನಾರೋಗ್ಯ!
    – ಸಿಎಂ ಬಂದಿರುವಾಗ ನಾ ಬಂದು ಇನ್ನೇನಾಗಬೇಕಿದೆ?

    ಮೈಸೂರು: ಕೇಳ್ರಪ್ಪೋ ಕೇಳಿ…., ಸುಳ್ವಾಡಿ ಗ್ರಾಮದಲ್ಲಿ ಮಾರಮ್ಮ ದೇಗುಲದ ವಿಷ ಪ್ರಸಾದ ಸೇವನೆ ವಿಷಯ ನಮ್ಮ ಘನತೆವತ್ತ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೆ ಗೊತ್ತಾಗಿದ್ದೇ ನಿನ್ನೆ ಸಂಜೆಯಂತೆ. ಶುಕ್ರವಾರ ಮಧ್ಯಾಹ್ನ ನಡೆದ ಘಟನೆ ಆರೋಗ್ಯ ಸಚಿವ ಶಿವಾನಂದ ಪಾಟೀಲರ ಗಮನಕ್ಕೆ ಬಂದಿದ್ದು ನಿನ್ನೆ ಸಂಜೆ 4 ಗಂಟೆಗಂತೆ. ಈ ಮೂಲಕ ಸಚಿವರು ರಾಜ್ಯವೇ ಬೆಚ್ಚಿಬಿದ್ದ ಪ್ರಕರಣ ತಮ್ಮ ಗಮನಕ್ಕೆ ತಡವಾಗಿ ಬಂತು ಎಂದು ಅಜ್ಞಾನದ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ನಾನು ಬಂದು ಏನು ಮಾಡೋದಿತ್ತು ಎಂಬ ಉಡಾಫೆಯನ್ನೂ ಪ್ರದರ್ಶಿಸಿದ್ದಾರೆ.

    ಇಂದು ಬೆಳಗ್ಗೆ ಮೈಸೂರಿಗೆ ಬಂದ ಸಚಿವರು ಮಾಧ್ಯಮಗಳ ಜೊತೆ ಮಾತನಾಡುತ್ತಾ, 44 ಗಂಟೆ ತಡವಾಗಿ ಬಂದಿದ್ದಕ್ಕೆ ತಮ್ಮನ್ನು ತಾವೇ ಸಮರ್ಥಿಸಿಕೊಂಡರು. 13 ಜನರ ಸಾವಿನ ಪ್ರಕರಣದ ಬಗ್ಗೆ ಸಚಿವರ ಅಜ್ಞಾನ ಎಷ್ಟಿತ್ತೆಂದರೆ, ನನಗೆ ವಿಷಯ ಗೊತ್ತಾಗಿದ್ದೇ ನಿನ್ನೆ ಸಂಜೆ 4 ಗಂಟೆಗೆ. ನಾನಿರೋದು ವಿಜಯಪುರದಲ್ಲಿ. ಅಲ್ಲಿಂದ ಇಲ್ಲಿಗೆ ಬರೋಕೆ ಟೈಂ ಆಗುತ್ತೆ. ಮುಖ್ಯಮಂತ್ರಿಗಳೇ ಬಂದಿದ್ದಾರೆ ತಾನೇ…? ನಾ ಬಂದು ಇನ್ನೇನು ಆಗಬೇಕಿದೆ. ನನಗಿಂತ ದೊಡ್ಡವರೇ ಬಂದಿದ್ದರಲ್ಲ ಬಿಡಿ ಎಂದು ರಾಜ್ಯಕ್ಕೆ ರಾಜ್ಯವೇ ಮರುಗಿದ ಪ್ರಕರಣಕ್ಕೆ ಉಢಾಫೆ ಉತ್ತರ ನೀಡಿದರು.

    ಮಾರಮ್ಮ ದೇವಿಯ ಪ್ರಸಾದದಲ್ಲಿ ವಿಷ ಸೇರಿತ್ತು ಎಂಬುದನ್ನು ಖಚಿತ ಮಾಡಿಕೊಳ್ಳುವ ವಿಚಾರದಲ್ಲಿ ವಿಳಂಬವಾಯಿತು. ಹೀಗಾಗಿ ಅಸ್ವಸ್ಥರಿಗೆ ಚಿಕಿತ್ಸೆ ನೀಡಲು ಮೈಸೂರಿಗೆ ಸ್ಥಳಾಂತರ ಮಾಡುವಾಗ ತಡವಾಗಿದ್ದು ಸತ್ಯ ಎಂದು ಒಪ್ಪಿಕೊಂಡರು. ಕೆ.ಆರ್. ಆಸ್ಪತ್ರೆಗೆ ಪುಟ್ಟರಂಗಶೆಟ್ಟಿ, ಸಂಸದ ಧೃವನಾರಾಯಣ್ ಜೊತೆ ಭೇಟಿ ನೀಡಿದ ಆರೋಗ್ಯ ಸಚಿವರಾದ ಶಿವಾನಂದ್ ಪಾಟೀಲ್, ಅಪೋಲೋ ಆಸ್ಪತ್ರೆಯಲ್ಲಿ 6 ಮಂದಿ ಪರಿಸ್ಥಿತಿ ಗಂಭೀರವಾಗಿದೆ ಎಂದರು.

    ಅಜ್ಞಾನ ದರ್ಶನದ ನಡುವೆಯೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡ ಸಚಿವರು, ನಾನು ಬಂದ ಮೇಲೆ ಹಲವು ವಿಚಾರಗಳನ್ನು ಸರಿಪಡಿಸಿದ್ದೇನೆ. 400 ಅಂಬ್ಯುಲೆನ್ಸ್ ಖರೀದಿ ಮಾಡಿದ್ದೇವೆ. 360 ವೈದ್ಯರನ್ನ ನೇಮಿಸಿಕೊಂಡಿದ್ದೇವೆ. ಇನ್ನೂ 1000 ಹುದ್ದೆ ಕೊರತೆ ಇದ್ದು, ಅವೆಲ್ಲವನ್ನು ತುಂಬುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.

    ಇಡೀ ರಾಜ್ಯವೇ ಮಾರಮ್ಮ ದೇವಿಯ ಪ್ರಸಾದಕ್ಕೆ ವಿಷ ಹಾಕಿದ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರೂ ಅವರ ಗಮನಕ್ಕೆ ಬಂದಿರಲಿಲ್ಲ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದಕ್ಕೆ ಸಚಿವರೇ ಉತ್ತರ ನೀಡಬೇಕು. ಘಟನೆಯ ತೀವ್ರತೆ ಅರಿತು ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಲು ಚೆನ್ನೈಗೆ ತೆರಳಿದ್ದ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಕುಮಾರಸ್ವಾಮಿ ಅವರು ಅಲ್ಲಿಂದಲೇ ನೇರವಾಗಿ ವಿಶೇಷ ವಿಮಾನದ ಮೂಲಕ ಮೈಸೂರಿಗೆ ಧಾವಿಸಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಧರ್ಮಸೇನ, ಸಚಿವ ಜಿ.ಟಿ.ದೇವೇಗೌಡ, ಸಂಸದ ಧೃವನಾರಾಯಣ, ಪ್ರತಾಪ್ ಸಿಂಹ ಸೇರಿದಂತೆ ಸ್ಥಳೀಯ ಶಾಸಕರೆಲ್ಲಾ ಆಸ್ಪತ್ರೆಗೆ ಆಗಮಿಸಿ ಎಲ್ಲರ ಯೋಗ ಕ್ಷೇಮ ವಿಚಾರಿಸಿದ್ದರು.

    ಆದರೆ ಸರ್ಕಾರದ ಆರೋಗ್ಯ ಇಲಾಖೆಯನ್ನು ಮುನ್ನಡೆಸಬೇಕಾದ ಶಿವಾನಂದ ಪಾಟೀಲರು ನನಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದು ಮಾತ್ರ ವಿಪರ್ಯಾಸ. 44 ಗಂಟೆ ತಡವಾಗಿ ಬಂದರೂ ತಾನು ಮಾಡಿದ್ದೇ ಸರಿ ಎಂದ ಸಚಿವ ಶಿವಾನಂದ ಪಾಟೀಲರ ಉಡಾಫೆ ಉತ್ತರಕ್ಕೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿ ಜೀವ ಉಳಿಸಲು ಬರುವಾಗ ಪತಿ ಸಾವು – ಮುಗಿಲು ಮುಟ್ಟಿದೆ ಮಕ್ಕಳ ಗೋಳು!

    ಪತ್ನಿ ಜೀವ ಉಳಿಸಲು ಬರುವಾಗ ಪತಿ ಸಾವು – ಮುಗಿಲು ಮುಟ್ಟಿದೆ ಮಕ್ಕಳ ಗೋಳು!

    – ಕೆಪಿ ನಾಗರಾಜ್
    ಮೈಸೂರು: ಪ್ರಸಾದ ತಿಂದು ನರಳಾಡುತ್ತಿದ್ದ ಪತ್ನಿಯನ್ನು ಬದುಕಿಸಿಕೊಳ್ಳಲು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿದ್ದ ಪತಿ ದಾರಿ ಮಧ್ಯೆ ತೀವ್ರವಾಗಿ ವಾಂತಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಅಪ್ಪನನ್ನು ಕಳೆದುಕೊಂಡ ಮಕ್ಕಳು ಅಮ್ಮನನ್ನಾದರೂ ಉಳಿಸಿಕೊಡಿ ಎಂದು ರೋಧಿಸುತ್ತಿರುವ ದೃಶ್ಯ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿವೆ.

    ಏನಾಗಿತ್ತು?: ಸುಳವಾಡಿ ಗ್ರಾಮದ ಮಾರಮ್ಮನ ದೇವಸ್ಥಾನಕ್ಕೆ ಮಾರ್ಟಳ್ಳಿಯ ಕೃಷ್ಣ ನಾಯ್ಕ ಪತ್ನಿ ಮೋನಿ ಬಾಯಿ ಜೊತೆ ಹೋಗಿದ್ದರು. ನಮಗೆ ಕೆಲಸ ಸರಿಯಾಗಿ ಸಿಗುತ್ತಿಲ್ಲ. ನಮ್ಮ ಕುಟುಂಬಕ್ಕೆ ದಯೆ ತೋರು ಎಂದು ಮಾರಮ್ಮನಿಗೆ ಪೂಜೆಯನ್ನೂ ಸಲ್ಲಿಸಿದ್ದಾರೆ. ಪೂಜೆ ಬಳಿಕ ದೇಗುಲದಲ್ಲಿ ಪ್ರಸಾದ ವಿತರಣೆ ಮಾಡಿದ್ದಾರೆ. ಇದನ್ನು ದೇವಸ್ಥಾನದಲ್ಲೇ ಕೃಷ್ಣ ನಾಯ್ಕ ದಂಪತಿ ತಿಂದಿದ್ದಾರೆ. ಮನೆಗೆ ಬಂದು ಮಗಳಿಗೆ ಪ್ರಸಾದ ಕೊಟ್ಟಿದ್ದಾರೆ. ಆದರೆ ಮಗಳು ಪ್ರಿಯಾ ತಕ್ಷಣ ಪ್ರಸಾದ ತಿನ್ನಲಿಲ್ಲ. ಇದಾದ ಸ್ವಲ್ಪ ಸಮಯದಲ್ಲೇ ಕೃಷ್ಣ ನಾಯ್ಕರ ಪತ್ನಿ ಮೋನಿ ಬಾಯಿಗೆ ವಾಂತಿ, ತಲೆ ಸುತ್ತು ಶುರುವಾಗಿದೆ. ಆದರೆ ತಾವು ತಿಂದಿದ್ದು ವಿಷಪೂರಿತ ಆಹಾರ ಎಂದು ಗೊತ್ತಾಗದ ಕೃಷ್ಣ ನಾಯ್ಕ ಪತ್ನಿಯ ಬಳಿ, ಬಿಸಿಲಿನಿಂದಾಗಿ ಹೀಗಾಗಿದೆ. ಏನೂ ಆಗಲ್ಲ ಎಂದು ಸಮಾಧಾನ ಮಾಡಿದ್ದಾರೆ.

    ಆದರೆ ಸಮಯ ಕಳೆದಂತೆ ಪತ್ನಿಯ ವಾಂತಿ ಮತ್ತಷ್ಟು ಹೆಚ್ಚಾಗುತ್ತಿದ್ದಂತೆ ಪತ್ನಿಯನ್ನು ಕರೆದುಕೊಂಡು ಅವರು ಸಮೀಪದ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಇವರಂತೆಯೇ ಆಗಮಿಸಿದ್ದವರನ್ನು ನೋಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಪ್ರಸಾದಲ್ಲಿ ವಿಷ ಸೇರ್ಪಡೆಯಾಗಿರುವ ವಿಚಾರ ಗೊತ್ತಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಅವರನ್ನು ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಅಷ್ಟರಲ್ಲೇ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಹೀಗಾಗಿ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾರೆ. ಮೈಸೂರು ತಲುಪೋ ಮುನ್ನವೇ ಕೃಷ್ಣ ನಾಯ್ಕ ಅವರಿಗೂ ವಾಂತಿ ಶುರುವಾಗಿದೆ. ಅವರನ್ನು ನೇರವಾಗಿ ಕೆಆರ್ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ವೆಂಟಿಲೇಟರ್ ಕೊರತೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಕರೆ ತಂದೆವು.

    ಆದರೆ ಇಲ್ಲಿಗೆ ಬಂದು 5 ನಿಮಿಷಕ್ಕೇ ಅಪ್ಪ ನನ್ನ ಬಿಟ್ಟು ಬಿಟ್ಟು ಹೊರಟು ಹೋದ್ರು ಎಂದು ಕಣ್ಣೀರು ಹಾಕುತ್ತಲೇ ನಡೆದ ಘಟನೆಯನ್ನು ವಿವರಿಸಿದರು ಮೃತ ಕೃಷ್ಣ ನಾಯ್ಕರ ಪುತ್ರಿ ಪ್ರಿಯಾ.

    ನನ್ನ ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಅಪ್ಪ ಅಮ್ಮ ಊರು ಬಿಟ್ಟು ಬೇರೆ ಊರಲ್ಲಿ ಕೆಲಸ ಮಾಡಿ ನಮ್ಮ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈಗ ಅಪ್ಪನನ್ನು ಕಳೆದುಕೊಂಡಿದ್ದೇವೆ. ಅಮ್ಮನೂ ಕ್ರಿಟಿಕಲ್ ಸ್ಟೇಜಲ್ಲಿದ್ದಾರೆ. ಏನೂ ಹೇಳೋಕಾಗಲ್ಲ ಅಂತಿದ್ದಾರೆ. ಅವರನ್ನು ಉಳಿಸಿಕೊಡಿ. ಅವರೂ ಹೋದರೆ ನಮ್ಮ ವಿದ್ಯಾಭ್ಯಾಸವೇ ನಿಂತು ಹೋಗುತ್ತದೆ. ನಮ್ಮ ಕುಟುಂಬದಲ್ಲಿ ನಾನು ಚಿಕ್ಕವಳು. ಅಕ್ಕ ಹಾಗೂ ನನಗೊಬ್ಬ ತಮ್ಮ ಇದ್ದಾರೆ. ಎಲ್ರೂ ಹೋದ್ರೆ ನಮ್ಮನ್ನು ಓದ್ಸೋರು ಯಾರಿದ್ದಾರೆ..? ನಮ್ಮ ಅಮ್ಮನ ಚಿಕಿತ್ಸೆಗೆ ನೆರವಾಗಿ. ಯಾರು ಏನೋ ಮಾಡ್ಕೊಂಡು ನಮ್ಮ ಅಪ್ಪನನ್ನು ನನ್ನಿಂದ ಕಿತ್ತುಕೊಂಡಿದ್ದಾರೆ.

    ನಮ್ಮ ಅಮ್ಮನನ್ನು ಹೇಗಾದರೂ ಮಾಡಿ ಉಳಿಸಿಕೊಡಿ ಸಾರ್ ಎಂದು ಗೋಗರೆದಳು ಪ್ರಿಯಾ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಎಂಬಂತೆ ಏನೂ ಅರಿಯದ ಈ ಮುಗ್ಧ ಮಕ್ಕಳ ಅಪ್ಪ ಯಾರದೋ ಸಿಟ್ಟು, ದ್ವೇಷಕ್ಕೆ ಬಾರದ ಲೋಕಕ್ಕೆ ಹೋಗಿದ್ದಾರೆ. ಅಮ್ಮ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ನಂಬಿದ ದೇವರು ಕೈ ಬಿಡಲ್ಲ ಎಂಬ ಆಶಯದೊಂದಿಗೆ ಮಕ್ಕಳು ಪ್ರಾರ್ಥಿಸುತ್ತಿದ್ದಾರೆ ‘ದೇವರೇ ನಮ್ಮಮ್ಮನ ಉಳಿಸಿಕೊಡಿ…!’.

    https://www.youtube.com/watch?v=IeYaHG3q9I4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv