Tag: Sukumara Shetty

  • ಬೈಂದೂರಲ್ಲಿ 550 ಕೋಟಿ ಕುಡಿಯುವ ನೀರಿನ ಯೋಜನೆ- ಬಿ.ವೈ ರಾಘವೇಂದ್ರ, ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಸಭೆ

    ಬೈಂದೂರಲ್ಲಿ 550 ಕೋಟಿ ಕುಡಿಯುವ ನೀರಿನ ಯೋಜನೆ- ಬಿ.ವೈ ರಾಘವೇಂದ್ರ, ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಸಭೆ

    ಉಡುಪಿ: ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಸಭೆ ಮಂಗಳವಾರ ಹೆಮ್ಮಾಡಿಯಲ್ಲಿ ನಡೆಯಿತು. 550 ಕೋಟಿ ರುಪಾಯಿ ವೆಚ್ಚದಲ್ಲಿ 2 ಕ್ಲಸ್ಟರ್ ಮಾಡಲಾಗಿದ್ದು, ಆರಂಭದಲ್ಲಿ 60 ಸಾವಿರ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಯೋಜನೆ ಇದಾಗಿದೆ.

    ಬಹು ನೀರಿನ ಕುಡಿಯುವ ಯೋಜನೆ ಪ್ರಕಾರ ಭವಿಷ್ಯದ ದೃಷ್ಟಿಯಿಂದ 71 ಸಾವಿರ ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದ್ದು, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಹೆಮ್ಮಾಡಿಯಲ್ಲಿ ನಡೆದ ಸಭೆಯಲ್ಲಿ ಮೊದಲ ಹಂತದ ಚರ್ಚೆ ಅಭಿಪ್ರಾಯ ಸಂಗ್ರಹ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ವರಾಹಿ ಡ್ಯಾಂ ಮತ್ತು ಗುಲ್ವಾಡಿಯಿಂದ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಪೂರೈಸಲಾಗುವುದು. ವಿಧಾನಸಭಾ ಕ್ಷೇತ್ರದಲ್ಲಿ 220 ಟ್ಯಾಂಕ್ ನಿರ್ಮಾಣವಾಗಲಿದೆ. 2 ವರ್ಷದಲ್ಲಿ ಕೆಲಸ ಪೂರ್ಣ ಮಾಡ್ತೇವೆ ಎಂದರು. ಸಿಎಂ ಯಡಿಯೂರಪ್ಪ ಪ್ರತಿನಿಧಿಸಿದ ಕ್ಷೇತ್ರ ಇದಾಗಿದ್ದು ಆದ್ಯತೆ ಮೇರೆಗೆ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ದೇಶದ ಪ್ರತಿ ಗ್ರಾಮಕ್ಕೂ, ಪ್ರತಿ ಮನೆಗೂ ನೀರು ತಪುಪಿಸುತ್ತೇವೆ ಎಂದರು.

    ಶಾಸಕ ಸುಕುಮಾರ ಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಐದು ನದಿಗಳು ಹರಿದು ಸಮುದ್ರ ಸೇರಿದರೂ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಕುಡಿಯುವ ಸ್ಥಿತಿ ಇದೆ. ಆದ್ಯತೆ ಮೇರೆಗೆ ಬೈಂದೂರಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದೆ. ತಾಲೂಕಿನಲ್ಲಿ ಉಪ್ಪು ನೀರಿಗೆ ತಡೆಯೊಡ್ಡುವ ಉದ್ದೇಶದಿಂದ ಅಲ್ಲಲ್ಲಿ 110 ಕೋಟಿ ವೆಚ್ಚದಲ್ಲಿ ವೆಂಟೆಂಡ್ ಡ್ಯಾಂ ನಿರ್ಮಿಸುತ್ತೇವೆ. ಮೀನುಗಾರಿಕಾ ಬಂದರು, ಜಟ್ಟಿ, ರಸ್ತೆಗಳು ಹೀಗೆ ಅಭಿವೃದ್ಧಿ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಈಗಾಗಲೇ ಜಿಲ್ಲೆಗೆ 1,350 ಕೋಟಿ ರುಪಾಯಿಯ ವಿವಿಧ ಯೋಜನೆ ತಂದಿದ್ದೇವೆ. ಸಮಗ್ರ ತಾಲೂಕು ಅಭಿವೃದ್ಧಿ ಪಣ ತೊಟ್ಟು ಕೆಲಸ ಮಾಡುತ್ತಿದ್ದೇನೆ ಎಂದರು.

    ಜಿಲ್ಲಾ ಪಂಚಾಯತ್ ಸಿಇಒ ನವೀನ್ ಭಟ್, ಎಸಿ ಕೆ, ರಾಜು, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಇಒ ಕೇಶವ ಶೆಟ್ಟಿಗಾರ್, ಜಿ.ಪಂ, ತಾಲೂಕು ಪಂಚಾಯತ್ ಸದಸ್ಯರು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

  • ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಪೋಷಕರಿಗೆ ಆರ್ಥಿಕ ಸಂಕಷ್ಟ – 70 ಲಕ್ಷ ಫೀಸ್ ಮನ್ನಾ ಮಾಡಿದ ಶಾಸಕ ಸುಕುಮಾರ ಶೆಟ್ಟಿ

    ಉಡುಪಿ: ದೇಶಾದ್ಯಂತ ಕೊರೊನಾ ಆವರಿಸಿದ್ದು, ಆರ್ಥಿಕವಾಗಿ ಸಮಸ್ಯೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಫೀಸ್ ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಈ ವರ್ಷ ತಮ್ಮ ಶಿಕ್ಷಣ ಸಂಸ್ಥೆಗಳ 70 ಲಕ್ಷ ಫೀಸ್ ಮನ್ನಾ ಮಾಡಲು ನಿರ್ಧಾರ ಮಾಡಿದ್ದಾರೆ.

    ಕಳೆದ ವರ್ಷದ ಒಂದೂವರೆ ಕೋಟಿ ಫೀಸ್ ಮಕ್ಕಳಿಂದ ಬಾಕಿಯಿದೆ. ಮಕ್ಕಳಿಗೆ ನಾವು ಶುಲ್ಕಕ್ಕಾಗಿ ಯಾವತ್ತೂ ಒತ್ತಡ ಹೇರಿಲ್ಲ. ಈ ಬಾರಿ ಫೀಸ್ ಶುಲ್ಕದ ಪೈಕಿ 70 ಲಕ್ಷ ರುಪಾಯಿ ಮನ್ನಾ ಮಾಡ್ತೇವೆ. ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷರಾಗಿರುವ ಅವರು, ನಾಲ್ಕು ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ಪ್ರಾಥಮಿಕದಿಂದ ಪದವಿವರೆಗೆ ನಾಲ್ಕು ಸಂಸ್ಥೆಗಳನ್ನು ಟ್ರಸ್ಟ್ ಮೂಲಕ ನಡೆಸುತ್ತಿದ್ದಾರೆ.

    ಸಮಾಜದ ಕಟ್ಟ ಕಡೆಯ ಕುಟುಂಬದ ಮಕ್ಕಳಿಗೆ ಫೀಸ್ ತೆಗೆದುಕೊಳ್ಳಲ್ಲ. ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತೇವೆ. ಕೆಲ ಕುಟುಂಬಗಳಿಗೆ ಅರ್ಧ ಫೀಸ್ ತೆಗೆದುಕೊಳ್ಳುತ್ತೇವೆ. ಶ್ರೀಮಂತರ ಮಕ್ಕಳಿಗೆ ಫುಲ್ ಫೀಸ್ ಎಂದು ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಹೇಳಿದ್ದಾರೆ. ಶಿಕ್ಷಣ ಗುಣಮಟ್ಟ ವಿಚಾರದಲ್ಲಿ ರಾಜಿ ಇಲ್ಲ. ಒತ್ತಡ ಹೇರಿ, ಬಲವಂತವಾಗಿ ಫೀಸ್ ಕಿತ್ತುಕೊಳ್ಳುವ ಪರಿಪಾಠ ಹಿಂದಿನಿಂದಲೇ ಇಲ್ಲ. ಮುಂದೆಯೂ ಮಾಡದಂತೆ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಾಸಕರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

    ನಮ್ಮ ನಾಲ್ಕು ಶಾಲೆಗಳನ್ನು ಬೆಂಗಳೂರಿನ ಶಾಲೆಗಳ ಜೊತೆ ತುಲನೆ ಮಾಡಬೇಡಿ. ನಮ್ಮ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 15-18 ಸಾವಿರ, ಪಿಯುಸಿ, ಪದವಿ ಮಕ್ಕಳಿಗೆ 20 ಸಾವಿರ ಫೀಸ್ ಇದೆ. ಮೂರು ಅಥವಾ ನಾಲ್ಕು ಕಂತಿನಲ್ಲಿ ಫೀಸ್ ತೆಗೆದುಕೊಳ್ಳುತ್ತೇವೆ. ಈ ಬಾರಿ ಕೊರೊನಾ ಎಲ್ಲರನ್ನು ಜರ್ಜರಿತ ಮಾಡಿದೆ. ಪೋಷಕರ ಕೈಯಲ್ಲಿ ಕಾಸಿಲ್ಲ, ಹಾಗಂತ ಮಕ್ಕಳಿಗೆ ಶಿಕ್ಷಣ ಕೊಡುವುದು ಅತ್ಯಾವಶ್ಯಕ ಎಂದು ಸುಕುಮಾರ್ ತಿಳಿಸಿದ್ದಾರೆ.

    ಶಿಕ್ಷಕರಿಗೆ ಸಂಬಳ, ಬಸ್ ನಿರ್ವಹಣೆ, ಸಿಬ್ಬಂದಿ ಸಂಬಳ 45 ಲಕ್ಷದಷ್ಟು ಪ್ರತೀ ತಿಂಗಳಿಗೆ ಖರ್ಚು ಬರುತ್ತದೆ. ಬೈಂದೂರು ಗ್ರಾಮೀಣ ಭಾಗದ ಶಾಲೆ, ಇಲ್ಲಿನ ಮಕ್ಕಳನ್ನು ಪ್ರತಿಭಾವಂತರನ್ನು ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಅಗತ್ಯತೆ ಇದೆ. ಆರ್ಥಿಕವಾಗಿ ಸಬಲರಾಗಿರುವವರು ಫೀಸ್ ವಿಚಾರದಲ್ಲಿ ಚೌಕಾಶಿ ಮಾಡಬಾರದು ಎಂದು ಶಾಸಕ ಸುಕುಮಾರ ಶೆಟ್ಟಿ ವಿನಂತಿ ಮಾಡಿದರು.

  • ಬೋರ್‌ವೆಲ್‌ಗೆ ಬಿದ್ದ ಯುವಕನ ರಕ್ಷಣೆ- ತಂಡಕ್ಕೆ 25 ಸಾವಿರ ನಗದು ಘೋಷಿಸಿದ ಸುಕುಮಾರ ಶೆಟ್ಟಿ

    ಬೋರ್‌ವೆಲ್‌ಗೆ ಬಿದ್ದ ಯುವಕನ ರಕ್ಷಣೆ- ತಂಡಕ್ಕೆ 25 ಸಾವಿರ ನಗದು ಘೋಷಿಸಿದ ಸುಕುಮಾರ ಶೆಟ್ಟಿ

    ಉಡುಪಿ: ಜಿಲ್ಲೆಯ ಮರವಂತೆಯಲ್ಲಿ ಬೋರ್‌ವೆಲ್‌ಗೆ ಬಿದ್ದ ರೋಹಿತ್ ಖಾರ್ವಿ ರಕ್ಷಣೆ ಮಾಡಿದ ತಂಡಕ್ಕೆ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಪ್ರಶಸ್ತಿ ಘೋಷಣೆ ಮಾಡಿದ್ದಾರೆ.

    ಮರವಂತೆಯ ಅಗ್ನಿಶಾಮಕ ದಳದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ 25 ಸಾವಿರ ನಗದು ನೀಡಿ, ಮರವಂತೆಯಲ್ಲೇ ಸನ್ಮಾನ ಮಾಡುತ್ತೇನೆ. ಇದು ನನ್ನ ವೈಯಕ್ತಿಕ ಮೊತ್ತ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಬೋರ್‌ವೆಲ್‌ ಪಕ್ಕ ಭೂಕುಸಿತ – 6 ಗಂಟೆ ಹೋರಾಡಿ ಸಾವನ್ನೇ ಗೆದ್ದ ಯುವಕ

    ಯುವಕ ರೋಹಿತ್ ಖಾರ್ವಿಗೆ ಯಾವುದೇ ಗಾಯವಾಗದಂತೆ ರಕ್ಷಣೆಯಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಿ ಎಲ್ಲರಿಗೂ ಶಕ್ತಿ ಕೊಟ್ಟಳು. ಅಗ್ನಿಶಾಮಕ, ಜಿಲ್ಲಾಡಳಿತ ಕಾರ್ಯ ಯಶಸ್ವಿಯಾಗಿದೆ. ಘಟನಾ ಸ್ಥಳದಲ್ಲಿ ಸ್ಥಳೀಯರು, ಮಾಧ್ಯಮಗಳು ನಿರಂತರ ಕೆಲಸ ಮಾಡಿವೆ. ಅವರೆಲ್ಲರಿಗೂ ಅಭಿನಂದನೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ವಿಧಾನಸಭಾ ಕಲಾಪದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಕಾರಣ ಸ್ಥಳಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರು, ಭಜನಾ ಮಂಡಳಿಗಳು ಸಹಕಾರ ನೀಡಿವೆ. ಎಲ್ಲರಿಗೂ ಧನ್ಯವಾದ ಎಂದು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು. ಇದನ್ನೂ ಓದಿ: ಬೋರ್‌ವೆಲ್‌ ಪಕ್ಕ ಭೂಕುಸಿತ- ಕುತ್ತಿಗೆವರೆಗೆ ಹೂತ ಯುವಕ

  • ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಉಡುಪಿಯ ಇಬ್ಬರು ಬಿಜೆಪಿ ಶಾಸಕರು ಗೈರು

    ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಉಡುಪಿಯ ಇಬ್ಬರು ಬಿಜೆಪಿ ಶಾಸಕರು ಗೈರು

    – ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರ ಮೊದಲ ಭೇಟಿ ಹೊತ್ತಲ್ಲೇ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿನಂದನಾ ಸಭೆಗೆ ಜಿಲ್ಲೆಯ ಎರಡು ಬಂಟ ಶಾಸಕರು ಗೈರಾಗಿದ್ದಾರೆ.

    ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ನಳೀನ್ ಕುಮಾರ್ ಕಟೀಲ್ ಅವರು ಉಡುಪಿಗೆ ಆಗಮಿಸಿದ್ದರು. ಈ ಸಂದರ್ಭ ಜಿಲ್ಲಾ ಬಿಜೆಪಿ ನಾಯಕರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಶೇಷಶಯನ ಸಭಾ ಭವನದಲ್ಲಿ ನಳೀನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಸಭೆಯೂ ಆಯೋಜನೆಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಗೈರಾಗಿದ್ದ ಇಬ್ಬರು ಶಾಕಸಕರ ವಿಚಾರವೇ ಇಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯ್ತು.

    ಈ ಮೂಲಕ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಬಹಿರಂಗಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಈ ಸಭೆಗೆ ಗೈರು ಹಾಜರಾಗಿದ್ದಾರೆ. ವೇದಿಕೆಯಲ್ಲಿ ಹಾಲಾಡಿಗೆ ಕುರ್ಚಿ ಇಟ್ಟು, ಹೆಸರಿನ ಸ್ಟಿಕ್ಕರ್ ಅಂಟಿಸಿ ಬಿಜೆಪಿ ಕಾರ್ಯಕರ್ತರಯ ಕಾದದ್ದೇ ಬಂತು ವಿನಃ ಶಾಸಕರು ಮಾತ್ರ ಬರಲಿಲ್ಲ.

    ನಳಿನ್ ಕುಮಾರ್ ಕಟೀಲ್, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬೈಂದೂರು ಸುಕುಮಾರ ಶೆಟ್ಟಿ ಬಂಟ ಸಮುದಾಯದವರು. ಜಾತಿಗೆ ಜಾತಿ ಹಗೆ ಅನ್ನೋದು ಕರಾವಳಿಯಲ್ಲಿ ಚಾಲ್ತಿಯಲ್ಲಿರುವ ಗಾದೆಯಾಗಿದೆ. ಅದರಂತೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಯಡಿಯೂರಪ್ಪ ಬೆಂಬಲಿಗನಾಗಿರೋದರಿಂದ ಕಟೀಲ್ ಅವರ ಅಭಿನಂದನಾ ಸಭೆಗೆ ಬಂದಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ರಚನೆ ಮಾಡುವಾಗ ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟರಿಗೆ ಸ್ಥಾನ ಸಿಗುವ ನಿರೀಕ್ಷೆಯನ್ನು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮತ್ತು ಬಂಟ ಸಮುದಾಯ ಇರಿಸಿತ್ತು. ಆದರೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿಗೆ ಮಂತ್ರಿ ಸ್ಥಾನ ನೀಡಿದ್ದಕ್ಕೆ ಕುಂದಾಪುರ ಶಾಸಕರು ತೀವ್ರ ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.

    ಜಿಲ್ಲೆಯ ಬಂಟ ಸಮುದಾಯ ಕೂಡ ಬಿಜೆಪಿ ಹೈಕಮಾಂಡ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತ್ತು. ಹೀಗಾಗಿಯೇ ಇಂದು ಕುಂದಾಪುರ ಶಾಸಕರು ರಾಜ್ಯಾಧ್ಯಕ್ಷರ ಅಭಿನಂದನಾ ಸಭೆಗೆ ಗೈರಾಗಿದ್ದಾರೆ. ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ್ ಶೆಟ್ಟಿ ಕೂಡ ಗೈರಾಗುವ ಮೂಲಕ ತಮ್ನ ಅಸಮಾಧಾನವನ್ನು ಹೊರಗೆಡವಿದ್ದಾರೆ. ಸಚಿವ ಸಂಪುಟ ರಚನೆ ಬಳಿಕ ಒಳಗೊಳಗೆ ಅಸಮಾಧಾನ ಕುದಿಯುತ್ತಿದ್ದರೂ ನಮ್ಮಲ್ಲಿ ಅಸಮಾಧಾನ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.