ಬಾಗಲಕೋಟೆ: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಅಂತಾರೆ ಅದೇ ರೀತಿ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಕಬ್ಬು ಬೆಳೆಗಾರರ ಮಧ್ಯದ ಹಗ್ಗಜಗ್ಗಾಟದಲ್ಲಿ ಕಬ್ಬು ಕಟಾವ್ ಮಾಡುವ ಕೂಲಿ ಕಾರ್ಮಿಕರು ಬಡವಾಗಿದ್ದಾರೆ. ದೂರದೂರಿನಿಂದ ಕೂಲಿಯರಸಿ ಹೊಟ್ಟೆಪಾಡಿಗಾಗಿ ಬಂದವರು ಈಗ ಹೊಟ್ಟೆಗೆ ತಣ್ಣೀರಿನ ಪಟ್ಟಿ ಕಟ್ಟಿಕೊಳ್ಳುವಂತಾಗಿದೆ.
ಕಬ್ಬು ಬಾಕಿ ಪಾವತಿ ಮತ್ತು ಸೂಕ್ತ ಬೆಲೆಗಾಗಿ ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆ ಮಾಲೀಕರ ಹಗ್ಗಜಗ್ಗಾಟ ಮುಂದುವರೆಯುತ್ತಲೇ ಇದೆ. ಇದರ ಗುದ್ದಾಟದಿಂದಾಗಿ ಮಹಾರಾಷ್ಟ್ರದಿಂದ ಕಬ್ಬು ಕಟಾವ್ ಮಾಡುವ ಕೂಲಿ ಕೆಲಸಕ್ಕಾಗಿ ಬಂದ ಸಹಸ್ರಾರು ಕಾರ್ಮಿಕರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ. ಕೈ ತುಂಬ ಕೂಲಿ ಸಿಗುತ್ತದೆ ಎಂದು ಮಕ್ಕಳು ಮಡದಿಯನ್ನು ಕಟ್ಟಿಕೊಂಡು ಬಂದ ಮಹಾರಾಷ್ಟ್ರದ ಕೂಲಿಕಾರ್ಮಿಕರು ಕಂಗಾಲಾಗಿ ಕೂತಿದ್ದಾರೆ. ಕೈಯಲ್ಲಿ ಇದ್ದಷ್ಟು ಹಣ ಖಾಲಿ ಮಾಡಿಕೊಂಡು ಈಗ ರೇಷನ್ ಗೂ ಹಣವಿಲ್ಲದೆ, ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ.
ಪ್ರತಿ ವರ್ಷ ಬಾಗಲಕೋಟೆಗೆ ಮಹಾರಾಷ್ಟ್ರದಿಂದ 20 ಸಾವಿರ ಕೂಲಿ ಕಾರ್ಮಿಕರು ಬರುತ್ತಾರೆ. ಕಬ್ಬು ಸೀಜನ್‍ನಲ್ಲಿ ನಾಲ್ಕಾರು ಕಾಸು ಮಾಡ್ಕೊಂಡು ಊರಿಗೆ ವಾಪಸ್ ಹೋಗ್ತಾರೆ. ಆದರೆ ಈಗ ಕಬ್ಬಿನ ಬಾಕಿ ಪಾವತಿ ಮತ್ತು ಸೂಕ್ತ ಬೆಲೆ ಘೋಷಣೆವರೆಗೂ ಕಾರ್ಖಾನೆ ಆರಂಭಿಸಲು ಬಿಡೋದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಇದರಿಂದ ಕಾರ್ಖಾನೆಗಳು ಕಬ್ಬು ನುರಿಯೋದನ್ನು ನಿಲ್ಲಿಸಿದ್ದು, ಕೆಲಸವಿಲ್ಲದೆ ಕೂಲಿ ಕಾರ್ಮಿಕರು ಊರಿಗೆ ಮರಳುತ್ತಿದ್ದಾರೆ.
ಕಬ್ಬು ಬೆಳೆಗಾರರು ಮತ್ತು ರೈತರ ಸಂಘರ್ಷದಿಂದಾಗಿ ಕೂಲಿ ಕಾರ್ಮಿಕರಿಗೂ ತೊಂದರೆ ಉಂಟಾಗಿದೆ. ಎಲ್ಲಾ ಕಾರ್ಮಿಕರು ವಾಪಸ್ ಹೋಗ್ತಿದ್ದು, ಹೀಗೇ ಆದ್ರೆ ಮುಂದೊಂದ್ ದಿನ ಕೆಲಸಕ್ಕೆ ಕಾರ್ಮಿಕರೇ ಇಲ್ಲದಂತಾ ಆಗೋದರಲ್ಲಿ ಆಶ್ಚರ್ಯವಿಲ್ಲ.
ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ನಡೆಸಿದ ಸಂಧಾನ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮುಂದಿಟ್ಟ 50:50 ಸೂತ್ರಕ್ಕೆ ಮಾಲೀಕರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಬ್ಬು ಬೆಳೆದು ಕಣ್ಣೀರು ಸುರಿಸಿದ್ದ ರೈತರ ಕಣ್ಣೀರನ್ನು ಒರೆಸಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ.
ಸಂಧಾನ ಸಭೆಯ ನಿರ್ಣಯ:
ನ್ಯಾಯ ಹಾಗೂ ಲಾಭದಾಯಕ ಬೆಲೆಗಿಂತ (ಎಫ್.ಆರ್.ಪಿ) ಹೆಚ್ಚಿನ ಮೊತ್ತ ನೀಡುವ ಪ್ರಸ್ತಾವನೆಗೆ ಮಾಲೀಕರಿಂದ ವಿರೋಧ ವ್ಯಕ್ತವಾಯಿತು. ಬಳಿಕ ಎಫ್.ಆರ್.ಪಿ ದರವನ್ನು ಕೊಡುವುದಕ್ಕೆ ಒಪ್ಪಿಕೊಂಡರು. ಈಗ ಎಫ್.ಆರ್.ಪಿ ದರ 2,750 ರೂ. ಇದೆ. ಉಳಿದಂತೆ ಮಾಲೀಕರಿಂದ 150 ರೂ., ಸರ್ಕಾರದಿಂದ 150 ರೂ. ಸೇರಿ ಒಟ್ಟು 300 ರೂ. ಪ್ರೋತ್ಸಾಹಧನವಾಗಿ ನೀಡಲು ಸಭೆ ನಿರ್ಧಾರ ಕೈಗೊಳ್ಳಲಾಯಿತು. ಈ ಮೂಲಕ ರೈತರು ಪ್ರತಿ ಟನ್ ಕಬ್ಬಿಗೆ 3,050 ರೂ. ಪಡೆಯಲಿದ್ದಾರೆ.
ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಾಗಲಕೋಟೆ, ವಿಜಯಪುರ ಕಾರ್ಖಾನೆ ಮಾಲೀಕರು ಮುರುಗೇಶ್ ನಿರಾಣಿ, ಆನಂದ್ ನ್ಯಾಮಗೌಡ, ಎಸ್.ಆರ್ ಪಾಟೀಲ ಅವರು ತಕ್ಷಣ ಬಾಕಿ ಬಿಲ್ ಪಾವತಿ ಮಾಡಬೇಕು ಎಂದು ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಲೀಕರು, ತಕ್ಷಣ ಪಾವತಿ ಕಷ್ಟ, ಹಂಗಾಮು ಒಳಗೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇತ್ತ ಬೆಳಗಾವಿ ಸಕ್ಕರೆ ಕಾರ್ಖಾನೆ ಮಾಲೀಕರು 15 ದಿನ ಗಡುವು ಕೇಳಿದ್ದಾರೆ.
ಬರೀ ರೈತರ ವಾದ ಕೇಳಿದರೆ ನಮ್ಮದೂ ಸಮಸ್ಯೆ ಇದೆ. ಅದನ್ನು ಸ್ವಲ್ಪ ಕೇಳಿ ಎಂದು ಮಾಲೀಕರು ತಮ್ಮ ವಾದವನ್ನು ಸಿಎಂ ಕುಮಾರಸ್ವಾಮಿ ಅವರ ಮುಂದೆ ಮಂಡಿಸಿದ್ದಾರೆ.
ಸಕ್ಕರೆ ಸಾಹುಕಾರರ ವಾದವೇನು?: ಎಫ್.ಆರ್.ಪಿ ದರದಲ್ಲಿ ಒಪ್ಪಂದ ಮಾಡಿಕೊಂಡಾಗ ಸಕ್ಕರೆ ದರ ಕೆಜಿಗೆ 35 ರಷ್ಟಿತ್ತು, ಈಗ 27ಕ್ಕೆ ಇಳಿದಿದೆ. ಟನ್‍ಗೆ 2,900 ರೂ. ಒಪ್ಪಂದ ಆಗಿದ್ದೂ ಲಾಭ ಬಂದ ಸಂದರ್ಭದಲ್ಲಿ 3,400 ರೂ. ನೀಡಿದ್ದೇವೆ. ಕಂಪೆನಿಗಳಿಂದ ವಿದ್ಯುತ್ ಖರೀದಿಯಲ್ಲಿ ಸರ್ಕಾರ ಮೋಸ ಮಾಡಿದೆ. ಪ್ರತಿ ಯೂನಿಟ್‍ಗೆ 5.87 ರೂ. ಒಪ್ಪಂದ ಮಾಡಿಕೊಂಡಿತ್ತು, ಈಗ 3.87 ರೂ. ನೀಡುತ್ತಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಕಾರ್ಖಾನೆಗಳು ಉತ್ತಮ ದರದಲ್ಲಿ ವಿದ್ಯುತ್ ಖರೀದಿಸುತ್ತಿವೆ ಎಂದು ಹೇಳಿದ್ದಾರೆ.
ಬರಗಾಲದಿಂದ ಕೇವಲ 8ರಿಂದ 10 ಲಕ್ಷ ಟನ್ ಕಬ್ಬು ಅರೆಯುತ್ತಿದ್ದೇವೆ. ಇದಕ್ಕೂ ಮೊದಲು 30 ರಿಂದ 40 ಲಕ್ಷ ಟನ್ ಕಬ್ಬು ಅರೆಯಲಾಗುತ್ತಿತ್ತು. ಇಥೆನಾಲ್‍ಗೆ ಕೇಂದ್ರ ಸರ್ಕಾರ ಸಬ್ಸಿಡಿ ಕೊಟ್ಟಿದೆ. ರಾಜ್ಯದಿಂದ ಯಾವುದೇ ಪ್ರೋತ್ಸಾಹ ಇಲ್ಲ. ನೆರೆ ರಾಜ್ಯಗಳು ಬಡ್ಡಿ ರಹಿತ ಸಾಲ ನೀಡಿ ಸಹಾಯಕ್ಕೆ ಬಂದಿವೆ, ರಾಜ್ಯದಲ್ಲಿ ಏನೂ ಆಗಿಲ್ಲ. 6-8 ತಿಂಗಳಾದ್ರೂ ಕಾರ್ಖಾನೆ ಖರೀದಿಸಿದ ವಿದ್ಯುತ್‍ಗೆ ಸರ್ಕಾರ ಹಣ ಪಾವತಿಸಿಲ್ಲ. 15 ದಿನದೊಳಗೆ ಪಾವತಿಸಿ ಅಂದರೆ ಹೇಗೆ? ಸರ್ಕಾರವೂ ಬಾಕಿಯನ್ನು 15 ದಿನದಲ್ಲಿ ಪಾವತಿಸಲಿ. 10 ತಿಂಗಳಾದರೂ ಹೈಲೆವೆಲ್ ಕಮಿಟಿ ಸಭೆ ನಡೆಸಿಲ್ಲ. ಕಾರ್ಖಾನೆಗಳಿಗೆ ಬೇಕಾದ ಕ್ಲಿಯರೆನ್ಸ್ ಸಿಕ್ಕಿಲ್ಲ ಎಂದು ಮಾಲೀಕರು ಸಿಎಂಗೆ ತಿಳಿಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಕ್ಕರೆ ಕಾರ್ಖಾನೆ ಮಾಲೀಕ ಬಾಲಚಂದ್ರ ಜಾರಕಿಹೊಳಿ, ಮೇಜರ್ ಸಮಸ್ಯೆ ಬಾಗಲಕೋಟೆಯದ್ದು. ನಾವು ಎಫ್.ಆರ್.ಪಿಗಿಂತ ಹೆಚ್ಚು ದರ ಕೊಟ್ಟಿದ್ದೇವೆ. ನಮ್ಮದು ಸಮಸ್ಯೆ ಇಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕೆಲವರು ಬಾಕಿ ಪಾವತಿಗೆ ಸಮಯ ಕೇಳಿದ್ದಾರೆ. ಎಲ್ಲ ಸರಿ ಹೋಗುತ್ತೆ ಅಂದ್ರು. ಆದರೆ ಸಭೆಯಲ್ಲಿ ನಡೆದ ಚರ್ಚೆ ವಿಷಯದಲ್ಲಿ ಗೊಂದಲವಿದೆ. ಕಬ್ಬಿನ ದರ ಹಾಗೂ ಬಾಕಿ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ, ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ ಎಂದು ಬೆಳಗಾವಿಯಲ್ಲಿ ರೈತ ಸಂಘದ ಮುಖಂಡ ಚೂನಪ್ಪ ಪೂಜಾರಿ ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಶಾಸಕರಾಗಿರುವ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಎಸ್.ಆರ್.ಪಾಟೀಲ್, ಶ್ರೀಮಂತ ಪಾಟೀಲ್, ಶಶಿಕಲಾ ಜೊಲ್ಲೆ, ಆನಂದ ನ್ಯಾಮಗೌಡ ಹಾಜರಿದ್ದರು.
ಬೆಳಗಾವಿ: ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದ್ದ ರೈತರನ್ನು ಗೂಂಡಾಗಳು ಎಂದು ಕರೆದಿದ್ದ ಸಿಎಂ ಕುಮಾರಸ್ವಾಮಿ ಅವರು ಆಡಿದ್ದ ಮಾತಿನ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದ್ದು, ಇಡೀ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ರೈತ ಹೋರಾಟಗಾರ ಅಶೋಕ್ ಅವರು, ನಾನು ರೈತ ಸಂಘ ಸೇರುವ ಮೊದಲು ಜೆಡಿಎಸ್ ಪಕ್ಷದ ಕಾರ್ಯಕರ್ತನಾಗಿದ್ದೆ. ಆದರೆ ರೈತರಿಗೆ ರಾಜಕೀಯ ಪಕ್ಷಗಳಿಂದ ಸರಿಯಾದ ಬೆಂಬಲ ಸಿಗದ ಕಾರಣ ರಾಜಕೀಯ ಪಕ್ಷ ತೊರೆದು ರೈತ ಸಂಘ ಸೇರಿದೆ. ಆದ್ದರಿಂದ ಮುಖ್ಯಮಂತ್ರಿಗಳು ನನ್ನ ಮೇಲೆ ಈ ರೀತಿ ಆರೋಪ ಮಾಡಿದ್ದಾರೆ. ಅವರ ಮಾತಿನ ಶೈಲಿ ಅವರಿಗೆ ಪ್ರಿಯವಾಗಬೇಕು. ನಾನು ರೈತನೇ ಅಲ್ಲ ಎನ್ನುವುದಾರೆ ದಾಖಲೆ ಪರಿಶೀಲನೆ ನಡೆಸಲಿ. 2010ರ ಬಳಿಕ ನಾನು ಪ್ರತಿವರ್ಷ ಕಾರ್ಖಾನೆಗೆ ಕಬ್ಬು ನೀಡಿದ್ದಾಗಿ ತಿಳಿಸಿದ್ದಾರೆ.
ನಾನು ಈ ಹಿಂದೆ ಜೆಡಿಎಸ್ ಯುವ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸಿಎಂ ನನಗೆ ಮೊದಲಿನಿಂದಲೂ ತುಂಬಾ ಪರಿಚಯ. ಅವರು ನಮ್ಮ ಮನೆಗೂ ಒಮ್ಮೆ ಭೇಟಿ ಕೂಡ ನೀಡಿದ್ದರು. ಆದರೆ ನಾನು ಜೆಡಿಎಸ್ ಪಕ್ಷದಿಂದ ಹೊರ ಬಂದು ರೈತ ಸಂಘ ಸೇರಿದೆ. ಹೀಗಾಗಿ ಸಿಎಂ ಅವರು ಈ ರೀತಿ ಆರೋಪ ಮಾಡಿರಬಹುದು ಎಂದು ಅಶೋಕ್ ಹೇಳಿದರು.
ರೈತರಿಗೆ ಪಾವತಿ ಆಗಬೇಕಾದ ಹಣದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವು. ಆದರೆ ರಸ್ತೆಗಿಳಿದು ಹೋರಾಟ ನಡೆಸಲು ಮುಂದಾದರೆ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಅದ್ದರಿಂದ ಸುವರ್ಣ ಸೌಧದ ಮುಂದೆಯೇ ಹೋರಾಟ ನಡೆಸಲು ಮುಂದಾಗಿದ್ದೇವು. ಈ ವೇಳೆ ಪೊಲೀಸರು ಅಡ್ಡಿಪಡಿಸಿದ ಕಾರಣ ಅನಿವಾರ್ಯವಾಗಿ ಬೀಗ ಮುರಿದು ಒಳಹೋಗುವ ಪ್ರಯತ್ನ ನಡೆಸಲಾಯಿತು. ನಮ್ಮ ಹೋರಾಟ ಕೇವಲ ಇಲ್ಲಿಗೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಿಎಂ ಕುಮಾರಸ್ವಾಮಿ ಅವರೊಂದಿಗೆ ಮಂಗಳವಾರ ನಡೆದ ಸಭೆ ಯಶಸ್ವಿಯಾಗಿಲ್ಲ. ಸುಪ್ರೀಂ ಕೋರ್ಟ್ ರೈತರಿಗೆ 15 ದಿನಗಳಲ್ಲಿ ಬಿಲ್ ನೀಡಲು ಸೂಚನೆ ನೀಡಿದೆ. ಆದರೆ ಕಾರ್ಖಾನೆ ಮಾಲೀಕರು ನ್ಯಾಯಾಲಯ ಸೂಚನೆ ಅನುಸರಿಸುತ್ತಿಲ್ಲ. ಅದ್ದರಿಂದ ನಮ್ಮ ಹೋರಾಟ ಮುಂದುವರಿಸುತ್ತೇವೆ. ಮುಂದಿನ ಚಳಿಗಾಲದ ಅಧಿವೇಶನದಲ್ಲೂ ನಮ್ಮ ಹೋರಾಟ ಮುಂದುವರಿಯುತ್ತದೆ. ಸರ್ಕಾರವೇ ರೈತರ ಪರ ನಿರ್ಣಯ ಕೈಗೊಂಡು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಬೇಕಿದೆ ಎಂದು ಮನವಿ ಮಾಡಿದರು.
ಮಂಡ್ಯ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಏನ್ ಪ್ರಿಂಟ್ ಮಾಡುವ ಮಿಷನ್ ಇಟ್ಟಿದ್ದಾರಾ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, ಕಬ್ಬು ಬೆಳೆಗಾರರ ಹೋರಾಟದ ಕುರಿತು ವ್ಯಂಗ್ಯವಾಗಿ ಮಾತನಾಡಿದ್ದಾರೆ.
ನಗರದಲ್ಲಿ ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟದ ಕುರಿತು ಮಾತನಾಡಿದ ಅವರು, ಎಲ್ಲದಕ್ಕೂ ಸಿಎಂ ಕುಮಾರಸ್ವಾಮಿ ಅವರನ್ನೇ ಹಿಡಿದುಕೊಂಡರೆ ಹೇಗೆ? ಕಬ್ಬು ಬೆಳೆಗಾರರಿಗೆ ಸಮಸ್ಯೆ ಇರುವುದು ರಾಷ್ಟ್ರಕ್ಕೆ ಗೊತ್ತಿದೆ. ರೈತರನ್ನು ಸಂಕಷ್ಟಕ್ಕೆ ಬಿಡಬಾರದು ಹಾಗೇ ಕಾರ್ಖಾನೆಗಳ ಬಗ್ಗೆ ಕೂಡ ಯೋಚಿಸಬೇಕು. ಪ್ರತಿಭಟನಕಾರರು ಕಾರ್ಖಾನೆ ಸುಡುವುದು, ಕಬ್ಬು ಪೂರೈಕೆ ತಡೆಯುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವ ಕುರಿತು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕು. ಈ ಪ್ರತಿಭಟನೆ ಹಿಂದೆ ಯಾರು ಇದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಎಲ್ಲದಕ್ಕೂ ರಾಜ್ಯ ಸರ್ಕಾರವನ್ನು ದೂರುವುದು ಸರಿಯಲ್ಲ. ರಾಜ್ಯ ಸರ್ಕಾರದ ಬಳಿ ನೋಟ್ ಮುದ್ರಣ ಮಾಡುವ ಯಂತ್ರ ಇದೆಯೇ ಎಂದು ರೇವಣ್ಣ ಪ್ರಶ್ನೆ ಮಾಡಿದರು. ಇದನ್ನು ಓದಿ:ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ- ಪ್ರತಿಭಟನಾ ನಿರತ ಮಹಿಳೆಗೆ ಏಕವಚನದಲ್ಲಿ ಸಿಎಂ ಕಿಡಿ
ಇದೇ ವೇಳೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಸಿಎಂ ಆಗಬೇಕು ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಯಾರು ಸಿಎಂ ಆಗಬೇಕು ಎನ್ನುವುದು ನನಗೆ ಸಂಬಂಧವಿಲ್ಲದ ವಿಚಾರ. ಅದು ಏನಿದ್ದರೂ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. ಇದು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ ಎಂದ ಸಚಿವರು, ನಾನು ಶಾಸಕ ಶ್ರೀರಾಮುಲು ಬಗ್ಗೆ ಮಾತನಾಡಲ್ಲ. ಅವರೊಬ್ಬ ದೊಡ್ಡ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.