Tag: sudha

  • ಸುಧಾ ಆಪ್ತೆಯ ಮನೆ ಮೇಲೆ ದಾಳಿ –  ಕೆಜಿಗಟ್ಟಲೇ ಚಿನ್ನ, ಬೆಳ್ಳಿ ನೋಡಿ ದಂಗಾದ ಅಧಿಕಾರಿಗಳು

    ಸುಧಾ ಆಪ್ತೆಯ ಮನೆ ಮೇಲೆ ದಾಳಿ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ನೋಡಿ ದಂಗಾದ ಅಧಿಕಾರಿಗಳು

    – ಇನ್ನೂ ಮುಂದುವರಿದಿದೆ ಹಣ ಎಣಿಕೆ ಲೆಕ್ಕಾಚಾರ
    –  ಸುಧಾ ಏಜೆಂಟ್‌  ರೇಣುಕಾ ಚಂದ್ರಶೇಖರ್?

    ಬೆಂಗಳೂರು: ಕೆಎಎಎಸ್ ಅಧಿಕಾರಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತ ಅಧಿಕಾರಿ ಡಾ.ಸುಧಾ ಮೇಲೆ ನಡೆದ ಎಸಿಬಿ ರೇಡ್‍ನಲ್ಲಿ ಮತ್ತೊಂದು ತಿಮಿಂಗಲ ಸಿಕ್ಕಿ ಬಿದ್ದಿದೆ. ಸುಧಾ ಅತ್ಯಾಪ್ತೆ ರೇಣುಕಾ ಚಂದ್ರಶೇಖರ್ ಮನೆ ಮೇಲೆ ರೇಡ್ ಮಾಡಿದ್ದ ಎಸಿಬಿ ಅಧಿಕಾರಿಗಳು ಸಿಕ್ಕಿದ ಸಂಪತ್ತುಗಳನ್ನು ನೋಡಿ  ದಂಗಾಗಿ ಹೋಗಿದ್ದಾರೆ.

    ಬ್ಯಾಟರಾಯನಪುರದಲ್ಲಿರುವ ರೇಣುಕಾ ಚಂದ್ರಶೇಖರ್ ಪ್ಲಾಟ್‍ನಲ್ಲಿ ಮಣಬಾರದಷ್ಟು ಚಿನ್ನಾಭರಣ, ನಗ-ನಾಣ್ಯ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಇದೆಲ್ಲದರ ಒಟ್ಟು ಮೌಲ್ಯ 250 ಕೋಟಿ ದಾಟಬಹುದು ಎಂದು ಎಸಿಬಿ ಅಧಿಕಾರಿಗಳು ಅಂದಾಜಿಸಿದ್ದಾರೆ.

    ರೇಣುಕಾ ಚಂದ್ರಶೇಖರ್ ಮನೆಯಲ್ಲಿ ಇನ್ನೂ ಹಣ ಎಣಿಕೆ ಮತ್ತು ದಾಖಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ. ಬ್ಯಾಂಕ್ ವ್ಯವಹಾರ ಲೆಕ್ಕಾಚಾರ ಮಾಡಲು ಇನ್ನೂ ಮೂರು ದಿನ ಬೇಕಾಗಬಹುದು ಅಂತ ಎಸಿಬಿ ಹೇಳಿದ್ದು, ರೇಣುಕಾ ಆಸ್ತಿ-ಪಾಸ್ತಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಗೆ ಸಿಕ್ಕಿರುವ ಎಸಿಬಿ ಮೂಲಗಳ ಮಾಹಿತಿ ಪ್ರಕಾರ, ರೇಣುಕಾ ಚಂದ್ರಶೇಖರ್ ಅವರು ಡಾ. ಸುಧಾ ಅವರ ಏಜೆಂಟ್ ಆಗಿದ್ದರು ಎನ್ನಲಾಗುತ್ತಿದೆ. ಸುಧಾ ಹೇಳಿದ ಕಡೆ ಹಣ ಪಡೆಯುತ್ತಿದ್ದ ಅನುಮಾನದ ಮೇಲೆ ರೇಣುಕಾ ಮನೆ ಮೇಲೆ ದಾಳಿ ನಡೆದಿದೆ.

    ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ರೇಣುಕಾ 4 ಕಂಪನಿ ಹೊಂದಿದ್ದಾರೆ. ಈ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಡಾ. ಸುಧಾ ಬೇನಾಮಿ ಇದೆಯೇ ಎಂಬುದರ ಬಗ್ಗೆಯೂ ಎಸಿಬಿ ತನಿಖೆ ಮಾಡುತ್ತಿದೆ. ಜೊತೆಗೆ, ರೇಣುಕಾ ಪತಿ ಚಂದ್ರಶೇಖರ್ ನಿವೃತ್ತ ಡಿವೈಎಸ್ಪಿ ಆಗಿದ್ದಾರೆ.

    ರೇಣುಕಾ ಪುತ್ರ ಕೂಡ ಎಇಇ ಆಗಿ ಕೆಲಸ ಮಾಡ್ತಿದ್ದಾರೆ. ನಾಳೆ ಕೆಎಎಸ್ ಅಧಿಕಾರಿ ಸುಧಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿದೆ.

    ಸುಧಾ ಫ್ರೆಂಡ್ ಮನೇಲಿ ಸಿಕ್ಕಿದ್ದೇನು?
    * ಬರೋಬ್ಬರಿ ಮೂರೂವರೆ ಕೆ.ಜಿ ಚಿನ್ನ
    * 7 ಕೆಜಿ ಬೆಳ್ಳಿ, 36 ಲಕ್ಷ ನಗದು
    * ಸುಮಾರು 250 ಕೋಟಿ ಆಸ್ತಿ ಪತ್ರ
    * 40 ಬ್ಯಾಂಕ್‍ಗಳ ಪಾಸ್‍ಬುಕ್
    * ಬ್ಯಾಂಕ್‍ಗಳಲ್ಲಿ 4 ಕೋಟಿ ಡಿಪಾಸಿಟ್
    * ನೂರಕ್ಕೂ ಹೆಚ್ಚು ಚೆಕ್‍ಗಳು, ಒಪ್ಪಂದ ಪತ್ರಗಳು

  • ಕೆಎಎಸ್ ಅಧಿಕಾರಿ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ನಗದು!

    ಕೆಎಎಸ್ ಅಧಿಕಾರಿ ಮನೆಯಲ್ಲಿ ಸಿಕ್ತು ಕೆಜಿಗಟ್ಟಲೆ ಚಿನ್ನ, ನಗದು!

    – ಖಜಾನೆ ನೋಡಿ ಅಧಿಕಾರಿಗಳು ಶಾಕ್
    – ಸರ್ಕಾರಿ ಅಧಿಕಾರಿಯ ಹೈಫೈ ಲೈಫ್

    ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಡಾ. ಸುಧಾ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ವೇಳೆ ಖಜಾನೆ ನೋಡಿ ಅಧಿಕಾರಿಗಳೇ ದಂಗಾಗಿದ್ದಾರೆ.

    ಕೊಡಿಗೇಹಳ್ಳಿಯ ಭವ್ಯ ಬಂಗಲೆಯಲ್ಲಿ ವಾಸವಾಗಿರುವ ಸುಧಾ ಬಳಿ ಕೆಜಿ ಗಟ್ಟಲೆ ಚಿನ್ನಾಭರಣ ಹಾಗೂ ಸುಮಾರು 10 ಲಕ್ಷ ನಗದು ಸಿಕ್ಕಿದೆ. ಚಿನ್ನದ ಡಾಬಾ, ಕಾಸಿನ ಸರ, ಉಂಗುರಗಳನ್ನು ಜಪ್ತಿ ಮಾಡಲಾಗಿದೆ. ಚಿನ್ನದ ಸರಗಳ ರಾಶಿ ಹಾಗೂ ಕಿವಿಯೋಲೆಗಳು ಪತ್ತೆಯಾಗಿವೆ.

    ಸತತ 5 ಗಂಟೆಯಿಂದ ಸುಧಾ ಮನೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಸಿಬಿ ದಾಳಿ ಮಾಡಿದಾಗ ಅಧಿಕಾರಿ ಸುಮಾರು ಅರ್ಧ ಗಂಟೆಗಳ ಕಾಲ ಡೋರ್ ಓಪನ್ ಮಾಡದೇ ಇದ್ದರು.

    ಸುಧಾ ಅವರ ಬೆಂಗಳೂರಿನ ಮನೆ, ಕಚೇರಿ ಸೇರಿದಂತೆ 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ತೆಂಕಬಟ್ಟಿನ ಮನೆ ಮೇಲೂ ದಾಳಿ ನಡೆಸಲಾಗಿದೆ. ಈ ಹಿಂದೆ ಬಿಡಿಎನಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ಡಾ. ಬಿ. ಸುಧಾ ಅವರ ವಿರುದ್ಧ ಎಸಿಬಿಯಲ್ಲಿ ಅಕ್ರಮ ಆಸ್ತಿ ಗಳಿಕೆ ಹಾಗೂ ಅವ್ಯವಹಾರದ ಕುರಿತಾಗಿ ದೂರು ದಾಖಲಾಗಿತ್ತು. ಸುಧಾ ಪ್ರಸ್ತುತ ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಬಿಡಿಎಯಲ್ಲಿ ಭೂ ಸ್ವಾಧೀನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ವೇಳೆ ಡಾ. ಸುಧಾ ಭೂ ಪರಿಹಾರ ನೀಡುವ ವಿಚಾರದಲ್ಲಿ ತಮ್ಮ ಗಂಡ ಮತ್ತು ದಲ್ಲಾಳಿಗಳ ಮೂಲಕ ಲಂಚ ಪಡೆಯುತ್ತಿದ್ದರು. ಅಲ್ಲದೆ ತಮ್ಮ ಸಂಬಳಕ್ಕಿಂತಲೂ ಆದಾಯದ ಮೊತ್ತ ಜಾಸ್ತಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಎಸಿಬಿಗೆ ಆದೇಶಿಸಲಾಗಿತ್ತು.