Tag: Suburban Rail

  • ಬೆಂಗ್ಳೂರಿಗರಿಗೆ ಸಿಹಿ ಸುದ್ದಿ: ಸಬ್ ಅರ್ಬನ್ ರೈಲು ಯೋಜನೆಗೆ ನೀತಿ ಆಯೋಗದಿಂದ ಗ್ರೀನ್‌ಸಿಗ್ನಲ್

    ಬೆಂಗ್ಳೂರಿಗರಿಗೆ ಸಿಹಿ ಸುದ್ದಿ: ಸಬ್ ಅರ್ಬನ್ ರೈಲು ಯೋಜನೆಗೆ ನೀತಿ ಆಯೋಗದಿಂದ ಗ್ರೀನ್‌ಸಿಗ್ನಲ್

    ಬೆಂಗಳೂರು: ಬೆಂಗಳೂರಿಗೆ ಉಪನಗರ ರೈಲು ಯೋಜನೆಗೆ ಕೇಂದ್ರ ನೀತಿ ಆಯೋಗ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಮೂಲಕ ದೀಪಾವಳಿ ಬಳಿಕ ಬೆಂಗಳೂರಿಗರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಸಬ್ ಅರ್ಬನ್ ರೈಲಿಗೆ ಇದ್ದ ತೊಡಕುಗಳು ನಿವಾರಣೆಯಾಗಿವೆ. ಬೆಂಗಳೂರಿಗೆ ಸಬ್ ಅರ್ಬನ್ ರೈಲು ಎರಡು ದಶಕಗಳ ಬೇಡಿಕೆಯಾಗಿತ್ತು. ಸೋಮವಾರ ರೈಲ್ವೇ ಚೇರ್ ಮೆನ್, ರೈಲ್ವೆ ಸಚಿವ ಪಿಯೂಷ್ ಗೋಯಲ್, ಆರ್ಥಿಕ ಇಲಾಖೆ ಮುಖ್ಯಸ್ಥರು ಹಾಗೂ ನೀತಿ ಆಯೋಗದ ಮುಖ್ಯಸ್ಥರ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲಿಗೆ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಈ ಹಿಂದೆ ಇದ್ದ ಕಾನೂನು ತೊಡಕುಗಳು ನಿವಾರಣೆಯಾಗಿವೆ. ಆದಷ್ಟು ಬೇಗ ಕೇಂದ್ರ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಸಿಗಬೇಕಿದೆ. ನಮ್ಮ ರಾಜ್ಯದ ಎಲ್ಲಾ ಸಚಿವರು, ಶಾಸಕರು, ಸಂಸದರು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇವೆ. ದಿವಂಗತ, ಮಾಜಿ ಸಚಿವ ಅನಂತ್‌ಕುಮಾರ್ ಸೇರಿದಂತೆ ಸಾಕಷ್ಟು ನಾಯಕರು ಸಬ್ ಅರ್ಬನ್ ರೈಲಿಗಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

    ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು ಸೇವೆ ಒದಗಿಸಲು ಕೇಂದ್ರ ಸರ್ಕಾರ 2018ರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಅದರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ ಎಂದು ಪ್ರಕಟಿಸಿದ್ದರು.

    ಸಬ್ ಅರ್ಬನ್ ರೈಲಿನಿಂದ ನಗರ ಮತ್ತು ಸುತ್ತಮುತ್ತಲಿನ ಉಪನಗರಗಳಿಗೆ ರೈಲು ಸಂಪರ್ಕ ಏರ್ಪಡಲಿದೆ. ರಾಮನಗರ-ಬೆಂಗಳೂರು, ಬೆಂಗಳೂರು-ಮಂಡ್ಯ, ಕೇಂದ್ರ ರೈಲ್ವೇ ನಿಲ್ದಾಣ-ಯಶವಂತಪುರ, ಯಶವಂತಪುರ- ತುಮಕೂರು, ಯಲಹಂಕ-ಬೈಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ.

    ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ವಿಮಾನ ನಿಲ್ದಾಣಕ್ಕೆ ನೇರಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು 1996ರಿಂದಲೇ ಅನಂತ್ ಕುಮಾರ್ ಅವರು ಸರ್ಕಾರಗಳನ್ನು ಒತ್ತಾಯಿದ್ದರು. ಇದೀಗ ಅವರ ಸಿಲಿಕಾನ್ ಸಿಟಿಯ ಕನಸು ಈಡೇರಿದೆ. ಒಟ್ಟಿನಲ್ಲಿ ಲಕ್ಷಾಂತರ ಜನರಿಗೆ ಅನುಕೂಲವಾಗುವ ಈ ಯೋಜನೆಯಿಂದ ಟ್ರಾಫಿಕ್ ಜಾಮ್ ತಪ್ಪಲಿದೆ.

  • ಕೊನೆಗೂ ಬೆಂಗಳೂರಿಗೆ ಸಬರ್ಬನ್ ರೈಲು ಸೇವೆಯ ಭಾಗ್ಯ

    ಕೊನೆಗೂ ಬೆಂಗಳೂರಿಗೆ ಸಬರ್ಬನ್ ರೈಲು ಸೇವೆಯ ಭಾಗ್ಯ

    ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಫೆಬ್ರವರಿ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಉಪನಗರ ರೈಲು ಸೇವೆಗೆ ಅನುಮೋದನೆ ಕೊಟ್ಟಿದ್ದ ಸರ್ಕಾರ ಈಗ ಅಧಿಕೃತ ಆದೇಶ ಹೊರಡಿಸಿದೆ.

    ಸುಮಾರು 23 ಸಾವಿರ ಕೋಟಿ ರೂ. ಮೊತ್ತದ ಬೆಂಗಳೂರಿನಲ್ಲಿ 161 ಕಿ.ಮೀ ಉದ್ದದ ಉಪನಗರ ರೈಲು ಯೋಜನೆಯನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50ರ ಅನುಪಾತದಲ್ಲಿ ವೆಚ್ಚ ಭರಿಸಲಿವೆ. ಒಟ್ಟು ನಾಲ್ಕು ಕಾರಿಡಾರ್ ಗಳಲ್ಲಿ ಯೋಜನೆ ಜಾರಿಯಾಗಲಿದ್ದು, ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಕೆಂಗೇರಿ, ವೈಟ್‍ಫೀಲ್ಡ್, ರಾಜಾನುಕುಂಟೆ, ನೆಲಮಂಗಲ, ಬೈಯಪ್ಪನಹಳ್ಳಿ, ದೇವನಹಳ್ಳಿ ಸೇರಿದಂತೆ ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

    ಯೋಜನೆಯ ಮಾರ್ಗದಲ್ಲಿ ಒಟ್ಟು 80 ನಿಲ್ದಾಣಗಳು ಬರಲಿವೆ. ಇತ್ತೀಚೆಗಷ್ಟೇ ಸಿಎಂ ಕುಮಾರಸ್ವಾಮಿ ಜೊತೆ ರೈಲ್ವೇ ಸಚಿವ ಪಿಯೂಶ್ ಗೋಯಲ್ ಯೋಜನೆಯ ಶೀಘ್ರ ಜಾರಿ ಕುರಿತು ಚರ್ಚೆ ನಡೆಸಿದ್ರು. ಕೇಂದ್ರ ಸರ್ಕಾರದ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ಉಪನಗರ ಯೋಜನೆಗೆ ಅನುಮೋದನೆ ನೀಡುವ ಸಿಗುವ ಸಾಧ್ಯತೆ ಇದೆ.

    ಬೆಂಗಳೂರಿನಲ್ಲಿ ಉಪನಗರ ರೈಲು 70 ಕಿ.ಮೀ ಎತ್ತರಿಸಿದ ಮಾರ್ಗ ಹಾಗೂ 90 ಕಿ.ಮೀ ಸಾಮಾನ್ಯ ಮಾರ್ಗದಲ್ಲಿ ಚಾಲನೆ ಮಾಡಲಿದೆ. ಇದು ಒಟ್ಟು 23 ಸಾವಿರ ಕೋಟಿ ಮೊತ್ತದ ಕಾಮಗಾರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನನಸಾಯ್ತು ಸಿಲಿಕಾನ್ ಸಿಟಿ ಮಂದಿಯ ಕನಸು- ಸಂಚಾರ ಆರಂಭಿಸಿದ ಸಬರ್ಬನ್ ರೈಲುಗಳು

    ನನಸಾಯ್ತು ಸಿಲಿಕಾನ್ ಸಿಟಿ ಮಂದಿಯ ಕನಸು- ಸಂಚಾರ ಆರಂಭಿಸಿದ ಸಬರ್ಬನ್ ರೈಲುಗಳು

    ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಯ ಬಹುದಿನಗಳ ಕನಸು ಇಂದು ನನಸಾಗಿದ್ದು, ಇಂದಿನಿಂದ ಸಬರ್ಬನ್ ರೈಲುಗಳು ಸಂಚಾರ ಆರಂಭಿಸಿವೆ.

    ನಗರದಲ್ಲಿ 8 ಸಬರ್ಬನ್ ರೈಲುಗಳ ಓಡಾಟ ಆರಂಭಿಸಿದ್ದು, ಐಟಿ, ಬಿಟಿ ಉದ್ಯೋಗಿಗಳಿಗೆ ಈಗ ಸುಗಮ ಸಂಚಾರದ ವ್ಯವಸ್ಥೆಯಾಗಿದೆ. ನಗರದ ಜನರ ಸೇವೆಗಿಳಿದ 8 ಸಬರ್ಬನ್ ಟ್ರೈನ್ ಪ್ರಾರಂಭವಾಗಿವೆ. ನಾಲ್ಕು ವಿದ್ಯುತ್ ಚಾಲಿತ (ಮೆಮು) ರೈಲುಗಳು, ನಾಲ್ಕು ಡೀಸೆಲ್ ಚಾಲಿತ (ಡೆಮು) ರೈಲುಗಳ ಸಂಚಾರ ಆರಂಭವಾಗಿದೆ.

    ಬೈಯಪ್ಪನಹಳ್ಳಿ – ವೈಟ್ ಫೀಲ್ಡ್ ಮತ್ತು ವೈಟ್ ಫೀಲ್ಡ್ – ಬೈಯಪ್ಪನಹಳ್ಳಿ ಮಾರ್ಗದಲ್ಲಿ ವಿದ್ಯುತ್ ಚಾಲಿತ ರೈಲುಗಳು ಸಂಚರಿಸಿದರೆ, ಬಾಣಸವಾಡಿ – ಹೊಸೂರು ಮಾರ್ಗದಲ್ಲಿ ಡೀಸೆಲ್ ಚಾಲಿತ ರೈಲುಗಳ ಹಳಿ ಮೇಲೆ ಓಡಲಿದೆ.

    ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ವೈಟ್ ಫೀಲ್ಡ್ ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಭಾನುವಾರ ಹೊರತುಪಡಿಸಿ ಉಳಿದ 6 ದಿನಗಳವರೆಗೂ ಸಬರ್ಬನ್ ರೈಲು ಸಂಚಾರ ಮಾಡುತ್ತವೆ. ಈ ರೈಲಿನಲ್ಲಿ ಒಮ್ಮೆಗೆ 2,400 ಮಂದಿ ಪ್ರಯಾಣಿಕರು ಸಂಚರಿಸಬಹುದು. ಈಗಾಗಲೇ 110 ಉಪನಗರ ರೈಲು ಗಳು ನಗರದಲ್ಲಿ ಸಂಚರಿಸುತ್ತಿವೆ. ಇದರ ಜತೆಗೆ ಈಗ 8 ಹೆಚ್ಚುವರಿ ರೈಲುಗಳು ಸೇರ್ಪಡೆಯಾಗಿವೆ.

    ಮೆಮು ರೈಲು ವೇಳಾಪಟ್ಟಿ
    * ಬೈಯಪ್ಪನಹಳ್ಳಿಯಿಂದ ಸಂಜೆ 4.45 ಕ್ಕೆ ನಿರ್ಗಮಿಸಿ ವೈಟ್‍ಫಿಲ್ಡ್ ಗೆ 5.05 ಕ್ಕೆ ತಲುಪುತ್ತದೆ.
    * ವೈಟ್‍ಫಿಲ್ಡ್ ನಿಂದ ಬೆಳಿಗ್ಗೆ 9 ಗಂಟೆಗೆ ನಿರ್ಗಮಿಸಿ ಬೈಯಪ್ಪನಹಳ್ಳಿಗೆ 9.20ಕ್ಕೆ ಹೋಗುತ್ತದೆ.
    * ಮತ್ತೆ ಬೈಯಪ್ಪನಹಳ್ಳಿಯಿಂದ ಸಂಜೆ 6.45 ಕ್ಕೆ ನಿರ್ಗಮಿಸಿ ಸಂಜೆ 7.15 ಕ್ಕೆ ಕೆಎಸ್‍ಆರ್‍ಗೆ ತಲುಪುತ್ತದೆ.
    * ಕೆಎಸ್‍ಆರ್ ನಿಂದ ಬೆಳಿಗ್ಗೆ 7.50ಕ್ಕೆ ಹೊರಟು ಬೈಯಪ್ಪನಹಳ್ಳಿಗೆ 8.15 ಕ್ಕೆ ತಲುಪುತ್ತದೆ.

    ಡೆಮು ರೈಲು ವೇಳಾಪಟ್ಟಿ
    * ಬಾಣಸವಾಡಿಯಿಂದ ಬೆಳಿಗ್ಗೆ9.50ಕ್ಕೆ ನಿರ್ಗಮಿಸಿ ಹೊಸೂರಿಗೆ 11 ಗಂಟೆ ತಲುಪುತ್ತದೆ.
    * ಹೊಸೂರಿನಿಂದ ಮಧ್ಯಾಹ್ನ 11.15 ಕ್ಕೆ ಹೊರಟು 12.25 ಕ್ಕೆ ಬಾಣಸವಾಡಿಗೆ ತಲುಪುತ್ತದೆ.
    * ಬಾಣಸವಾಡಿಯಿಂದ ಮಧ್ಯಾಹ್ನ 12.40 ಕ್ಕೆ ನಿರ್ಗಮಿಸಿ 1.45 ಕ್ಕೆ ಹೊಸೂರಿಗೆ ತಲುಪುತ್ತದೆ.
    * ಹೊಸೂರಿನಿಂದ ಸಂಜೆ 3.20ಕ್ಕೆ ಹೊರಟು 4.40 ಕ್ಕೆ ಬಾಣಸವಾಡಿಗೆ ತಲುಪುತ್ತದೆ.