Tag: Subodh Saoji

  • ಬಿಜೆಪಿ ಶಾಸಕ ಕದಮ್ ನಾಲಗೆ ಕತ್ತರಿಸಿದ್ರೆ 5 ಲಕ್ಷ ರೂ. ಬಹುಮಾನ: ಕಾಂಗ್ರೆಸ್ ನಾಯಕ ಘೋಷಣೆ

    ಬಿಜೆಪಿ ಶಾಸಕ ಕದಮ್ ನಾಲಗೆ ಕತ್ತರಿಸಿದ್ರೆ 5 ಲಕ್ಷ ರೂ. ಬಹುಮಾನ: ಕಾಂಗ್ರೆಸ್ ನಾಯಕ ಘೋಷಣೆ

    ಮುಂಬೈ: ಹುಡುಗಿಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಾಮನಾಥ್ ಕದಮ್ ನಾಲಗೆ ಕತ್ತರಿಸಿದರೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸುಬೋಧ್ ಸವ್ಜಿ ಹೇಳಿದ್ದಾರೆ.

    ರಾಮನಾಥ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಹೀಗಾಗಿ ಅವರ ನಾಲಗೆಯನ್ನು ಕತ್ತರಿಸಲು ಮುಂದೆ ಬರುವವರಿಗೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಸುಭೋಧ್ ಸವ್ಜಿ ಹೇಳಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ರಾಮನಾಥ್ ಕದಮ್ ತಮ್ಮ ಹೇಳಿಕೆ ಕುರಿತು ಸ್ಪಷ್ಟಿಕರಣ ನೀಡಿ, ಕ್ಷಮೆ ಕೇಳಿದ್ದಾರೆ. ಆದರೂ ಸುಬೋಧ್ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಎಂದು ವರದಿಯಾಗಿದೆ.

    ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಶಾಸಕ ರಾಮನಾಥ್ ಅವರಿಗೆ ಮಹಾರಾಷ್ಟ್ರ ಮಹಿಳಾ ಆಯೋಗವು ನೋಟಿಸ್ ನೀಡಿದೆ. ಇತ್ತ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಮ್ ಕದಮ್, ಸಾರ್ವಜನಿಕ ಕಾರ್ಯಕ್ರಮದಲ್ಲಿ ಎಲ್ಲರೂ ಸಂತೋಷದಿಂದ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಸ್ಥಳೀಯ ಯುವಕರನ್ನು ಕುರಿತು ಮಾತನಾಡಿದ್ದೇನೆ. ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಮಾತನಾಡಿದ ಹಿಂದಿನ ಹಾಗೂ ಮುಂದಿನ ದೃಶ್ಯಗಳನ್ನು ಕಟ್ ಮಾಡಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದರು.

    ರಾಮನಾಥ್ ಕದಮ್ ಹೇಳಿದ್ದೇನು?
    `ದಹೀ ಹಂಡಿ’ ಸಾರ್ವಜನಿಕ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಿದ್ದರು. ಜನತೆಯನ್ನು ಕುರಿತು ಮಾತನಾಡುವಾಗ ಸ್ಥಳದಲ್ಲಿದ್ದ ಯುವಕನೋರ್ವ, ನಾನು ಒಬ್ಬ ಹುಡುಗಿಗೆ ಪ್ರಪೋಸ್ ಮಾಡಿರುವೆ. ಆದರೆ ಆಕೆ ಒಪ್ಪುತ್ತಿಲ್ಲ. ಈ ವಿಚಾರದಲ್ಲಿ ನನಗೆ ನಿಮ್ಮ ಸಹಾಯ ಬೇಕಿದೆ ಅಂತಾ ಮನವಿ ಮಾಡಿಕೊಂಡಿದ್ದನು. ಆಗ ರಾಮನಾಥ್ ಅವರು, ‘ಹುಡುಗಿಯರು ನಿಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ ಅಂದ್ರೆ ನನಗೆ ಹೇಳಿ, ಆಕೆಯನ್ನು ಕಿಡ್ನಾಪ್ ನಾನು ಸಹಾಯ ಮಾಡುತ್ತೇನೆ’ ಎಂದಿದ್ದರು.

    ನಾನು ನಿನಗೆ ನೂರಕ್ಕೆ ನೂರರಷ್ಟು ಸಹಾಯ ಮಾಡುತ್ತೇನೆ. ಮೊದಲು ನನ್ನೊಂದಿಗೆ ನಿನ್ನ ಪೋಷಕರನ್ನು ಭೇಟಿ ಮಾಡಿಸು. ಅಲ್ಲಿ ಅವರು ಒಪ್ಪಿಕೊಂಡರೆ ಮುಂದೆ ಏನು ಮಾಡಬೇಕೆಂದು ನಿರ್ಣಯಿಸಬಹುದು ಅಂತಾ ಹೇಳಿದ್ದರು. ಇದೇ ಗುಂಪಿನಲ್ಲಿ ಮತ್ತೊಬ್ಬ ಯುವಕ, ಹಾಗಾದರೆ ನಾವು ಪ್ರೀತಿಸಿದ ಹುಡುಗಿ ಜೊತೆ ನಮ್ಮ ಮದುವೆ ಮಾಡಿಸುತ್ತೀರಾ ಎಂದು ಪ್ರಶ್ನಿಸಿದ್ದರು. ಕೂಡಲೇ ಶಾಸಕರು, ಆಕೆಯನ್ನು ಅಪಹರಿಸಲು ನಿಮಗೆ ಸಹಾಯ ಮಾಡುತ್ತೇನೆ. ಬೇಕಾದ್ರೆ ಎಲ್ಲ ಯುವಕರು ನನ್ನ ಮೊಬೈಲ್ ನಂಬರ್ ತೆಗೆದುಕೊಳ್ಳಿ. ಯಾವುದೇ ಸಮಯದಲ್ಲಿ ನನಗೆ ಕರೆ ಮಾಡಿ ಸಹಾಯ ಕೇಳಬಹುದು ಎಂದು ತಮ್ಮ ಮೊಬೈಲ್ ನಂಬರ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv