Tag: Subhash Rathod

  • ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಚಿಂಚೋಳಿ ಉಪಕದನ: ಕೈ, ಬಿಜೆಪಿ ಅಭ್ಯರ್ಥಿಗಳು ಪ್ಲಸ್, ಮೈನಸ್ ಏನು? 2018ರ ಫಲಿತಾಂಶ ಏನಾಗಿತ್ತು?

    ಬೆಂಗಳೂರು: ಕುಂದಗೋಳ ಉಪ ಚುನಾವಣೆ ಜೊತೆಗೆ ಚಿಂಚೋಳಿಯಲ್ಲಿಯೂ ಬೈ ಎಲೆಕ್ಷನ್ ನಡೆಯುತ್ತಿದೆ. ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಉಮೇಶ್ ಜಾಧವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಉಮೇಶ್ ಜಾಧವ್ ಅವರನ್ನೇ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಣಕ್ಕಿಳಿಸಿತ್ತು.

    ಬಿಜೆಪಿಯಿಂದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಕಣದಲ್ಲಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಸುಭಾಷ್ ರಾಠೋಡ್ ಚುನಾವಣಾ ಅಖಾಡಕ್ಕೆ ಧುಮಿಕಿದ್ದಾರೆ. ಚಿಂಚೋಳಿಯಲ್ಲಿ ಅವಿನಾಶ್ ಜಾಧವ್ ಕೇವಲ ಹೆಸರಿಗೆ ಸ್ಪರ್ಧೆ ಮಾಡಿದಂತಾಗಿದ್ದು, ತಂದೆ ಉಮೇಶ್ ಜಾಧವ್ ಮಗನ ಪರವಾಗಿ ಕಾಲಿಗೆ ಚಕ್ರಕಟ್ಟಿಕೊಂಡಂತೆ ಕ್ಷೇತ್ರದ ತುಂಬೆಲ್ಲಾ ತಿರುಗಾಡುತ್ತಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಕುಟುಂಬ ರಾಜಕಾರಣ ವಿರೋಧಿಸಿ ಕಾಂಗ್ರೆಸ್ ತೊರೆದ ಉಮೇಶ್ ಜಾಧವ್, ಇದೀಗ ಪುತ್ರನಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿದ ಬೆನ್ನಲ್ಲೇ ಬಿಜೆಪಿ ಸ್ಥಳೀಯ ಹಿರಿಯ ಮುಖಂಡ ಸುನಿಲ್ ವಲ್ಯಾಪುರೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್‍ನಿಂದ ಹೊರ ಬಂದು ಉಮೇಶ್ ಜಾಧವ್ ಅವರಿಗೆ ತಿರುಗೇಟು ನೀಡಲು ಕಾಂಗ್ರೆಸ್ ತನ್ನ ಎಲ್ಲ ರಣತಂತ್ರಗಳನ್ನು ಪ್ರಯೋಗಿಸಲು ಮುಂದಾಗುತ್ತಿದೆ. ಒಂದು ವೇಳೆ ಅವಿನಾಶ್ ಜಾಧವ್ ಸೋತ್ರೆ ಅದು ಉಮೇಶ್ ಜಾಧವ್ ಸೋಲು ಎಂಬಂತೆ ಆಗಲಿದೆ ಎಂಬ ಮಾತುಗಳು ರಾಜಕೀಯ ಕೇಳಿ ಬರುತ್ತಿವೆ.

    ಮತದಾರರು (2018ರ ಪ್ರಕಾರ)
    ಒಟ್ಟು ಮತದಾರರು: 1,90,976
    ಪುರುಷ ಮತದಾರರು: 97,243
    ಮಹಿಳಾ ಮತದಾರರು: 93,718
    ಚಲಾವಣೆಯಾದ ಮತಗಳು: 1,31,916 (69.6%)

    2018ರ ಫಲಿತಾಂಶ
    2018ರಲ್ಲಿ ನಡೆದ ಚುನಾವಣೆಯ ಚಿಂಚೋಳಿ ಅಖಾಡದಲ್ಲಿ ಒಟ್ಟು 10 ಜನರಿದ್ದರು. ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಉಮೇಶ್ ಜಾಧವ್ 73,905 ಮತಗಳನ್ನು ಪಡೆದು ಶಾಸಕರಾಗಿದ್ದರು. ಬಿಜೆಪಿ ಸುನಿಲ್ ವಲ್ಯಾಪುರೆ 54,693 ಮತ ಪಡೆದು 19,212 ವೋಟ್ ಅಂತರದಿಂದ ಸೋಲು ಅನುಭವಿಸಿದ್ದರು. ಜೆಡಿಎಸ್ ನಿಂದ ಕಣಕ್ಕಿಳಿದ ಸುಶೀಲಾಬಾಯಿ ಕೋವಿ ಎಂಬವರು ಕೇವಲ 1,621 ಮತ ಪಡೆದಿದ್ದರು. ನೋಟಾ 1,082 ಮತಗಳನ್ನು ಪಡೆದಿತ್ತು. ಒಟ್ಟಾರೆ ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.69.6ರಷ್ಟು ಮತದಾನವಾಗಿತ್ತು.

    ಒಂದು ರೀತಿ ಚಿಂಚೋಳಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ. ಹಾಗಾದ್ರೆ ಅವಿನಾಶ್ ಜಾಧವ್ ಮತ್ತು ಸುಭಾಷ್ ರಾಠೋಡ ಪ್ಲಸ್, ಮೈನಸ್ ಪಾಯಿಂಟ್ ಈ ಕೆಳಗಿನಂತಿವೆ.

    ಸುಭಾಷ್ ರಾಠೋಡ್ (ಕಾಂಗ್ರೆಸ್)
    ಪ್ಲಸ್ ಪಾಯಿಂಟ್
    * ಉಮೇಶ್ ಜಾಧವ್ ಪಕ್ಷಾಂತರ ಮಾಡಿದ್ದು
    * ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೆಂಬಲ
    * ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕ
    * ಬಿಜೆಪಿ ಬಂಡಾಯ
    * ಅವಿನಾಶ್ ಜಾಧವ್ ರಾಜಕಾರಣಕ್ಕೆ ಹೊಸ ಮುಖ

    ಮೈನಸ್ ಪಾಯಿಂಟ್
    * ಪ್ರಚಾರದಿಂದ ದೂರ ಉಳಿದುಕೊಂಡ ಕೈ ನಾಯಕರು
    * ಕೈ ನಾಯಕರ ಆಂತರಿಕ ಕಲಹ
    * ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಬಿಜೆಪಿ ರಾಷ್ಟ್ರೀಯ ನಾಯಕರು

    ಅವಿನಾಶ್ ಜಾಧವ್
    ಪ್ಲಸ್ ಪಾಯಿಂಟ್
    * ತಂದೆ ಉಮೇಶ್ ಜಾಧವ್ ಕ್ಷೇತ್ರದಲ್ಲಿನ ಹಿಡಿತ
    * ರಾಷ್ಟ್ರೀಯ ನಾಯಕರ ಬೆಂಬಲ
    * ಲೋಕಸಭಾ ಚುನಾವಣೆ ಸಮಯವಾಗಿದ್ದರಿಂದ ಮೋದಿ ಅಲೆ

    ಮೈನಸ್ ಪಾಯಿಂಟ್
    * ಟಿಕೆಟ್ ವಂಚಿತ ನಾಯಕರ ಅಸಮಾಧಾನ
    * ಕ್ಷೇತ್ರಕ್ಕೆ ಹೊಸ ಮುಖ
    * ಬಿಜೆಪಿ ಬಂಡಾಯ