Tag: sub urban

  • ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾದಿಂದ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ – ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದರು.

    ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದರು.

    ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರು ಈಗಾಗಲೇ ನನ್ನ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ಹಲವು ಮಹತ್ತರ ಕೆಲಸ ಮಾಡಿದ್ದಾರೆ. ನಾನು ಇಲಾಖೆಯ ಕೆಲಸಗಳಿಗೆ ಇನ್ನಷ್ಟು ವೇಗ ಒದಗಿಸುತ್ತೇನೆ. ಜನೌಷಧಿ ಕೇಂದ್ರಗಳು ಜನರ ನಡುವೆ ಮೆಚ್ಚುಗೆ ಗಳಿಸಿವೆ. ಕೆಲವು ಕಡೆ ಜನೌಷಧಿ ಕೇಂದ್ರಗಳಿಗೆ ಔಷಧಿಗಳ ಕೊರತೆ ಆಗಿದ್ದು ಔಷಧಿಗಳ ಕೊರತೆ ನಿವಾರಿಸಲು ಕ್ರಮಕೈಗೊಳ್ಳುತ್ತೇನೆ. ಕ್ಯಾನ್ಸರ್ ಸಂಬಂಧಿ ಔಷಧಿಗಳನ್ನೂ ಜನೌಷಧಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಪ್ರಥಮ ಕೇಂದ್ರ ಕ್ಯಾಬಿನೆಟ್ ಸಭೆಯ ಬಗ್ಗೆ ಮಾತನಾಡಿ, ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ರೈತಪರ ನಿಲುವುಗಳನ್ನು ಕೈಗೊಂಡಿದ್ದಾರೆ. ಇದು ಕೇಂದ್ರ ಸರ್ಕಾರದ ಮುಂದಿನ ನಡೆಗೆ ದಿಕ್ಸೂಚಿಯಾಗಿದೆ. ಮುಂದಿನ 15 ದಿನಗಳಲ್ಲಿ ನನ್ನ ಗೃಹ ಕಚೇರಿಯಲ್ಲಿ ಸಣ್ಣ ಕಾರ್ಯಾಲಯ ಸ್ಥಾಪನೆ ಮಾಡುತ್ತೇವೆ. ನಾವು ನಾಲ್ವರು ಕೇಂದ್ರ ಮಂತ್ರಿಗಳು ರಾಜ್ಯದ ಜನರಿಗೆ ಸದಾ ಲಭ್ಯ. ಮುಂದಿನ ನೂರು ದಿನಗಳಲ್ಲಿ ಏನಾಗಬೇಕು ಎನ್ನುವ ರೂಪುರೇಷೆ ಸಿದ್ಧಪಡಿಸಲು ಪ್ರಧಾನಿಯವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಹಿಂದೆ ಕುಮಾರಸ್ವಾಮಿ ಮಾಡಿದ ಗ್ರಾಮವಾಸ್ತವ್ಯ ಅವರಿಗೆ ಸರಿಯಾದ ಫಲಕೊಟ್ಟಿಲ್ಲ. ಅವರು ವಾಸ್ತವ್ಯ ಮಾಡಿದ್ದ ಹಳ್ಳಿಗಳಲ್ಲೇ ಅವರಿಗೆ ತಿರುಗು ಬಾಣವಾಗಿತ್ತು. ಹಾಗಾಗಿ ಈಗ ಶಾಲೆಯಲ್ಲಿ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹುಡುಗರು ಶಾಲೆಗಳಿಗೆ ಕಲಿಯಲು ಹೋಗುತ್ತಾರೆ. ಈಗ ಕುಮಾರಸ್ವಾಮಿಯವರೂ ಸಹ ಶಾಲಾ ವಾಸ್ತವ್ಯವದ ಮೂಲಕ ಕಲಿಯಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಅವರ ಕಾಲೆಳೆದ ಡಿವಿಎಸ್, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನಾನು ಭವಿಷ್ಯ ಹೇಳಿದ್ದು ನಿಜ. ಅದರಂತೆ ಕುಮಾರಸ್ವಾಮಿ ರಾಜೀನಾಮೆಗೆ ಮುಂದಾಗಿದ್ದು ನಿಜ. ಆದರೆ ಬೇರೆಯವರು ಬಾಗಿಲು ಬಂದ್ ಮಾಡಿ ಅವರನ್ನು ಒಳಗೆ ಕೂರುವಂತೆ ಮಾಡಿದರು. ನಾನೇನು ಮಾಡಲಿ? ಭವಿಷ್ಯ ಕೇಳಿಕೊಂಡು ಬಂದು ಗೆಲ್ಲುತ್ತೇನೆ ಎಂದ ದೇವೇಗೌಡರೇ ಸೋತುಹೋದರು. ಇನ್ನು ನಮ್ಮ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸುಳಿವು ನೀಡಿದ ಸದಾನಂದಗೌಡರು, ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಲ್ಲ. ಅವರಾಗಿಯೇ ಬೀಳಿಸಿದರೆ ನಾವು ಹೊಣೆಯಲ್ಲ. ಹಾಗೇನಾದರೂ ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ರಾಜ್ಯದಲ್ಲಿ ನಾವು ಮತ್ತೆ ಬಹುದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬೆಂಗ್ಳೂರು ಕನಸು-ನನಸು: ಸಬ್ ಅರ್ಬನ್ ರೈಲು ಹಳಿ ನಿರ್ಮಾಣಕ್ಕೆ ಸೈ ಎಂದ ಕೇಂದ್ರ

    ಬೆಂಗ್ಳೂರು ಕನಸು-ನನಸು: ಸಬ್ ಅರ್ಬನ್ ರೈಲು ಹಳಿ ನಿರ್ಮಾಣಕ್ಕೆ ಸೈ ಎಂದ ಕೇಂದ್ರ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ ರೈಲು ಸೇವೆ ಒದಗಿಸಲು ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಬಜೆಟ್ ನಲ್ಲಿ ಘೋಷಣೆ ಮಾಡಿದೆ.

    ಬಜೆಟ್ ನಲ್ಲಿ ರೈಲ್ವೆ ಇಲಾಖೆಯಲ್ಲಿಯೂ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು 40 ಸಾವಿರ ಕೋಟಿ ರೂ. ಮೀಸಲಿಡಲಾಗಿದ್ದು, ಅದರಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ 17 ಸಾವಿರ ಕೋಟಿ ರೂ. ನೀಡಲಾಗುತ್ತಿದೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

    ಇದರಿಂದ ನಗರ ಮತ್ತು ಸುತ್ತಮುತ್ತಲಿನ ಉಪನಗರಗಳಿಗೆ ರೈಲು ಸಂಪರ್ಕ ಏರ್ಪಡಲಿದೆ. ರಾಮನಗರ-ಬೆಂಗಳೂರು, ಬೆಂಗಳೂರು-ಮಂಡ್ಯ, ಕೇಂದ್ರ ರೈಲ್ವೇ ನಿಲ್ದಾಣ-ಯಶವಂತಪುರ, ಯಶವಂತಪುರ- ತುಮಕೂರು, ಯಲಹಂಕ-ಬೈಯಪ್ಪನಹಳ್ಳಿ, ಯಲಹಂಕ-ದೊಡ್ಡಬಳ್ಳಾಪುರ, ಯಲಹಂಕ-ಚಿಕ್ಕಬಳ್ಳಾಪುರ ನಡುವೆ ಬೆಂಗಳೂರು ಸಬ್ ಅರ್ಬನ್ ರೈಲು ಸೇವೆ ಆರಂಭವಾಗಲಿದೆ.

    ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ವಿಮಾನ ನಿಲ್ದಾಣಕ್ಕೆ ನೇರಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು 1996ರಿಂದಲೇ ಈಗ ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಅವರು ಸರ್ಕಾರಗಳನ್ನು ಒತ್ತಾಯ ಮಾಡುತ್ತಲೇ ಬಂದಿದ್ದರು. ಇದೀಗ ಅವರ ಸಿಲಿಕಾನ್ ಸಿಟಿಯ ಕನಸು ಈಡೇರಿದೆ. ಒಟ್ಟಿನಲ್ಲಿ ಲಕ್ಷಾಂತರ ಜನರಿಗೆ ಅನುಕೂಲವಾಗುವ ಈ ಯೋಜನೆಯಿಂದ ಟ್ರಾಫಿಕ್ ಜಾಮ್ ತಪ್ಪಲಿದೆ.