Tag: Sub inspector

  • ಈ ನನ್ಮಗನ ಮೇಲೆ ಎಫ್‍ಐಆರ್ ಮಾಡ್ರಿ: ಸಬ್ ಇನ್‍ಸ್ಪೆಕ್ಟರ್ ಫುಲ್ ಗರಂ

    ಈ ನನ್ಮಗನ ಮೇಲೆ ಎಫ್‍ಐಆರ್ ಮಾಡ್ರಿ: ಸಬ್ ಇನ್‍ಸ್ಪೆಕ್ಟರ್ ಫುಲ್ ಗರಂ

    – ಊಟ ಇಲ್ದೇ ಇಲ್ಲಿ ಕೆಲ್ಸ ಮಾಡ್ತಿರೋದು ಕಾಣಲ್ವಾ?

    ಬೆಂಗಳೂರು: ಇಂದು ಲಾಕ್‍ಡೌನ್ ಇದ್ದರೂ ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ಬೈಕ್ ಸವಾರನ ಮೇಲೆ ಸಬ್ ಇನ್‍ಸ್ಪೆಕ್ಟರ್ ಫುಲ್ ಗರಂ ಆಗಿದ್ದಾರೆ.

    ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಪೊಲೀಸರು ಅನಾವಶ್ಯಕವಾಗಿ ರಸ್ತೆಗೆ ಇಳಿದವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಈ ವೇಳೆ ಬಂದ ಬೈಕ್ ಸವಾರನೋರ್ವ ಹೊರಗೆ ಬಂದಿದ್ದಕ್ಕೆ ಪೊಲೀಸರ ಮುಂದೆ ಸೂಕ್ತ ಕಾರಣ ನೀಡಿಲ್ಲ. ಪೊಲೀಸರು ಬೈಕ್ ವಶಪಡಿಸಿಕೊಳ್ಳಲು ಮುಂದಾದ ವೇಳೆ ಸವಾರ್ ಕಿರಿಕ್ ಮಾಡಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಸ್ಥಳದಲ್ಲಿದ್ದ ಎಸ್‍ಐ ಕಾನೂನುಗಿಂತ ದೊಡ್ಡವನ ನೀನು. ನಾನ್ ರಿಪೋರ್ಟ್ ಕೊಡ್ತೀನಿ. ಈ ನನ್ಮಗನ ಮೇಲೆ ಎಫ್‍ಐಆರ್ ಮಾಡ್ರಿ. ಕೀ ಕೊಡು ಅಂದ್ರೆ ಗಾಂಚಾಲಿ ಮಾಡ್ತಿಯಾ? ಬೆಳಗಿನಿಂದ ಊಟ ಇಲ್ಲದೇ ಕೆಲಸ ಮಾಡ್ತಾ ಇದ್ದೀವಿ. ನಾವು ಕೆಲಸ ಮಾಡೋದು ನಿನಗೆ ತಮಾಷೆನಾ ಎಂದು ಕೋಪಗೊಂಡು ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೊನೆಗೆ ಸವಾರನನ್ನು ವಶಕ್ಕೆ ಪಡೆದ ಪೊಲೀಸರು ಆತನನ್ನು ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ರಾಜ್ಯದಲ್ಲಿ ಕೊರೊನಾ ತಡೆಗಾಗಿ ಸರ್ಕಾರ ಸಂಡೇ ಲಾಕ್‍ಡೌನ್ ಮೊರೆ ಹೋಗಿದೆ. ಸೋಮವಾರ ಬೆಳಗಿನ ಜಾವ ಯಾರು ಹೊರಗೆ ಅನಗತ್ಯವಾಗಿ ಬರಕೂಡದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ಮುಖ್ಯಮಂತ್ರಿ ಪದಕಕ್ಕೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆ

    ಮುಖ್ಯಮಂತ್ರಿ ಪದಕಕ್ಕೆ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆ

    ಬೆಳಗಾವಿ/ಚಿಕ್ಕೋಡಿ: ಸರ್ಕಾರ ಪ್ರಕಟಿಸಿರುವ ಮುಖ್ಯಮಂತ್ರಿ ಪದಕಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಾನಂದ ಗುಡಗನಟ್ಟಿ ಆಯ್ಕೆಯಾಗಿದ್ದಾರೆ.

    2018ನೇ ಸಾಲಿನಲ್ಲಿ ಬೆಂಗಳೂರು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದರೋಡೆ, ಸರಗಳ್ಳತನ, ಅಪಹರಣ, ಕಳ್ಳತನ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ಅಪರಾಧಿಗಳನ್ನು ಮಟ್ಟ ಹಾಕಿದ್ದು, ಕಳುವಾಗಿದ್ದ 17 ದ್ವಿಚಕ್ರ ವಾಹನಗಳ, 46 ಕೆಜಿ ಚಿನ್ನವನ್ನ ಪತ್ತೆ ಹಚ್ಚಿ ವಶಪಡಿಸಿಕೊಳ್ಳುವಲ್ಲಿ ಇವರು ಯಶಸ್ವಿ ಕಾರ್ಯಾಚರಣೆಗಳನ್ನು ನಡೆಸಿ ಆರೋಪಿಗಳ ಹೆಡೆ ಮುರಿ ಕಟ್ಟಿದ್ದರು.

    ಶಿವಾನಂದ ಅವರ ಜನಪರ ಅತ್ಯುತ್ತಮ ಸೇವೆಯನ್ನು ನೋಡಿ ಸರ್ಕಾರ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಿದೆ. ಸದ್ಯ ಶಿವಾನಂದ ಗುಡಗನಟ್ಟಿ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಜನ ಸ್ನೇಹಿ ಸೇವೆಯನ್ನು ಕೂಡ ಪರಿಗಣಿಸಲಾಗಿದ್ದು, ಇದೇ ಮಾರ್ಚ್ 16ರಂದು ವಿಧಾನಸಭೆಯಲ್ಲಿ ಮುಖಮಂತ್ರಿ ಯಡಿಯೂರಪ್ಪ ಅವರು ಪದಕ ನೀಡಿ ಗೌರವಿಸಲಿದ್ದಾರೆ.

  • ಸಬ್ ಇನ್ಸ್‌ಪೆಕ್ಟರ್ ಕೆಲಸದ ಆಮಿಷ – ಪ್ರೀತಿಸುವಂತೆ ಬ್ಲ್ಯಾಕ್ ಮೇಲ್, ಯುವತಿಗೆ 5 ಲಕ್ಷ ರೂ. ವಂಚನೆ

    ಸಬ್ ಇನ್ಸ್‌ಪೆಕ್ಟರ್ ಕೆಲಸದ ಆಮಿಷ – ಪ್ರೀತಿಸುವಂತೆ ಬ್ಲ್ಯಾಕ್ ಮೇಲ್, ಯುವತಿಗೆ 5 ಲಕ್ಷ ರೂ. ವಂಚನೆ

    ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 5 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬಗಲಗುಂಟೆಯಲ್ಲಿ ನಡೆದಿದೆ.

    ಒಟ್ಟು ಎಂಟು ಆರೋಪಿಗಳು ಈ ಕೃತ್ಯ ಎಸಗಿದ್ದು, ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಿ ಪ್ರಸಾದ್ ಸಾಹೋ, ಮೋಹನ್, ಮೋಹನ್ ತಾಯಿ ರತ್ನಮ್ಮ, ತಂದೆ ರತ್ನಾಕರ ಹೆಗಡೆ, ವಿಜಯಾ ಕರ್ನಾಟಕ ಸಂಘದ ಸತೀಶ್ ಮತ್ತು ನಂಜಪ್ಪ, ನಾರಾಯಣ್ ದಾಸ್ ಜಾಜೂ, ಎಂ.ರಂಗಪ್ಪ ಯುವತಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.

    ಆರೋಪಿ ದೇವಿಪ್ರಸಾದ್ 5 ಲಕ್ಷ ರೂ. ಹಣ ಪಡೆದು, ಯುವತಿಗೆ ವಂಚಿಸಿದ್ದಾನೆ. ಪ್ರೀತಿಯ ನೆಪದಲ್ಲಿ ಯುವತಿಗೆ ಹತ್ತಿರವಾಗಿದ್ದ ದೇವಿಪ್ರಸಾದ್. ಅದೇ ಸಲಿಗೆಯಲ್ಲಿ ಯುವತಿಗೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಹಣ ಮರಳಿ ಹಣ ಕೇಳಿದ್ದಕ್ಕೆ ಅಶ್ಲೀಲ ಫೋಟೋ ಫೇಸ್‌ಬುಕ್‌ಗೆ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದ.

    ಪ್ರಕರಣದ ವಿವರ
    ಯುವತಿ ಗಂಗಾ(ಹೆಸರು ಬದಲಾಯಿಸಲಾಗಿದೆ) 2016ರಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದರು. ಎ1 ಆರೋಪಿ ದೇವಿ ಪ್ರಸಾದ್ ಸಾಹೋ ಎ7 ಆರೋಪಿ ನಾರಾಯಣ ದಾಸ್ ಜಾಜೂನನ್ನು ಗಂಗಾಗೆ ಪರಿಚಯಿಸಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ ಮೊದಲ ಹಂತದಲ್ಲಿ ಯುವತಿಯಿಂದ 3.50 ಲಕ್ಷ ರೂ. ಹಾಗೂ ಚಿನ್ನಾಭರಣ, ಲ್ಯಾಪ್‌ಟಾಪ್ ಪಡೆದಿದ್ದಾನೆ. ನಂತರ ಪ್ರೀತಿಸುವಂತೆ ಯುವತಿಗೆ ಕಿರುಕುಳ ನೀಡಿದ್ದಾರೆ.

    ಇದರಿಂದ ಬೇಸತ್ತ ಗಂಗಾ ದೇವಿ ಪ್ರಸಾದ್‌ಗೆ ಪರಿಚಿತನಾದ ಎ2 ಆರೋಪಿ ಮೋಹನ್‌ನನ್ನು ಸಂಪರ್ಕಿಸಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆರೋಪಿ ಮೋಹನ್, ನಾರಾಯಣ ದಾಸ್ ಜೊತೆ ಮಾತನಾಡಿ ಕೆಲಸ ಕೊಡಿಸುವ ಕುರಿತು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾನೆ. ಸೆ.4ರಂದು ಪ್ರಮುಖ ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಕರೆಸಿ ಕೈ ಹಿಡಿದು ಎಳೆದಾಡಿ ಅವಮಾನಿಸಿದ್ದಾನೆ. ಅಲ್ಲದೆ ಸಂತ್ರಸ್ತೆ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದು ತನ್ನೊಂದಿಗೆ ಗಂಗಾ ಇದ್ದ ಫೋಟೋಗಳನ್ನು ಗಂಡನ ಸಂಬಂಧಿಕರ ಫೇಸ್‌ಬುಕ್ ಖಾತೆಗೆ ಕಳುಹಿಸಿದ್ದಾನೆ.

    ಈ ಫೋಟೋಗಳನ್ನು ಫೇಸ್‌ಬುಕ್‌ನಿಂದ ತೆಗೆಯಲು 5 ಲಕ್ಷ ರೂ. ನೀಡುವಂತೆ ಎ2 ಆರೋಪಿ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾರೆ.

    ಈ ವೇಳೆ ಎ1 ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ. ಈ ಕುರಿತು ಮದುವೆ ನೋಂದಣಿ ಸಹ ಆಗಿದೆ ಎಂದು ತಿಳಿಸಿದ್ದ. ಈ ಕುರಿತು ನಕಲಿ ಮದುವೆ ಪತ್ರಗಳನ್ನು ಸಹ ಸೃಷ್ಟಿಸಿದ್ದ.

    ಎ7 ಆರೋಪಿ ನಾರಾಯಣ ದಾಸ್‌ಗೆ ಸಂತ್ರಸ್ತೆ 2.50 ಲಕ್ಷ ರೂ.ಹಣ ನೀಡದ್ದಕ್ಕೆ ಇಬ್ಬರೂ ಇರುವ ಫೋಟೋಗಳನ್ನು ಮತ್ತೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಲ್ಲದೆ ವಾಟ್ಸಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಅವಮಾನಿಸಿದ್ದಾನೆ. ಎ2 ಆರೋಪಿ ಮೋಹನ್ ಹಾಗೂ ಎ3 ಆರೋಪಿ ರತ್ನಮ್ಮ ಸಂತ್ರಸ್ತೆಯಿಂದ ಬಲವಂತವಾಗಿ 1.50 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಸಮಸ್ಯೆ ಬಗೆಹರಿಸುತ್ತೇವೆ ಎಂದು ಮತ್ತೆ 2.50 ರೂ.ಗಳನ್ನು ಪಡೆದಿದ್ದಾರೆ. ಇಷ್ಟು ಹಣ ಪಡೆದರೂ ಸಹ ಮತ್ತೆ 2.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

  • ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್, ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ: ಬೊಮ್ಮಾಯಿ

    ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್, ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ: ಬೊಮ್ಮಾಯಿ

    ಮೈಸೂರು: ಒಂದೂವರೆ ವರ್ಷದಲ್ಲಿ 16 ಸಾವಿರ ಪೊಲೀಸ್ ಹಾಗೂ ಒಂದು ಸಾವಿರ ಸಬ್ ಇನ್‍ಸ್ಪೆಕ್ಟರ್ ಹುದ್ದೆ ಭರ್ತಿ ಆಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

    ನಗರದಲ್ಲಿ ನಡೆದ ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಮಾತನಾಡಿದ ಸಚಿವರು, ತಂತ್ರಜ್ಞಾನ ಹೆಚ್ಚಾದಂತೆ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಇದನ್ನು ಭೇದಿಸುವುದು ಸವಾಲಿನ ಕೆಲಸ. ಪೊಲೀಸರು ಪ್ರಾಮಾಣಿಕರಾಗಿರಬೇಕು ಎಂದು ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

    ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆ ಸದಸ್ಯರು ರಾಜ್ಯಕ್ಕೆ ನುಸುಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಕರಾವಳಿ, ಬೆಂಗಳೂರು, ಮೈಸೂರಿನಲ್ಲಿ ಅವರ ಚಟುವಟಿಕೆ ಹೆಚ್ಚಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜಮ್ಮು-ಕಾಶ್ಮೀರ ಹಾಗೂ ಬಾಂಗ್ಲಾದೇಶದ ಗಡಿ ಮೂಲಕ ಉಗ್ರರು ದೇಶವನ್ನು ಪ್ರವೇಶಿಸಿದ್ದಾರೆ. ಬಾಂಗ್ಲಾದೇಶದವರು ಹೆಚ್ಚಾಗಿ ರಾಜ್ಯಕ್ಕೆ ಪ್ರವೇಶ ಮಾಡಿದ್ದಾರೆಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ ಎಂದು ತಿಳಿಸಿದರು.

    ಮಹಾರಾಷ್ಟ್ರದ ಹಲವು ಗ್ರಾಮಗಳಿಗೆ ನೀರು ಒದಗಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಪ್ರಚಾರದ ವೇಳೆ ಅಲ್ಲಿ ನೆರೆದಿದ್ದ ಜನರ ಕೋರಿಕೆಗೆ ಸ್ಪಂದಿಸಿ ಸಿಎಂ ಆ ರೀತಿ ಹೇಳಿದ್ದಾರೆ. ಅಲ್ಲಿನ ಜನರು ಕುಡಿಯಲು ನೀರು ಕೇಳುತ್ತಿದ್ದಾರೆ. ಕೊಡು ಕೊಳ್ಳುವಿಕೆ ಆಧಾರದ ಮೇಲೆ ಮಹಾರಾಷ್ಟ್ರ ನೀರು ಕೇಳಿದೆ. ನೀರು ಬಿಡುವ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ಅವರ ಪರ ಬ್ಯಾಟ್ ಬೀಸಿದರು.

  • ಪಾಕ್‍ನಲ್ಲಿ ಪೊಲೀಸ್ ಅಧಿಕಾರಿಯಾದ ಮೊದಲ ಹಿಂದೂ ಯುವತಿ

    ಪಾಕ್‍ನಲ್ಲಿ ಪೊಲೀಸ್ ಅಧಿಕಾರಿಯಾದ ಮೊದಲ ಹಿಂದೂ ಯುವತಿ

    ಇಸ್ಲಾಮಾಬಾದ್: ಪಾಕಿಸ್ತಾನ ಸಿಂಧ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಹಿಂದೂ ಯುವತಿಯೊಬ್ಬರು ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

    ಹಿಂದೂ ಯುವತಿಯಾದ ಪುಷ್ಪಾ ಕೊಲ್ಹಿ ಅವರು ಪಾಕಿಸ್ತಾನದ ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಜೀಯೋ ನ್ಯೂಸ್ ಇಂದು ವರದಿ ಮಾಡಿದೆ.

    ಪುಷ್ಪಾ ಅವರು ಸಿಂಧ್ ಪ್ರಾಂತ್ಯದ ಸಹಾಯಕ ಸಬ್ ಇನ್ಸ್ ಪೆಕ್ಟರ್ (ಎಎಸ್‍ಐ) ಆಗಿ ನೇಮಿಸಲಾಗಿದೆ. ಈ ವಿಚಾರದ ಬಗ್ಗೆ ಮೊದಲು ಟ್ವೀಟ್ ಮಾಡಿರುವ ಮಾನವ ಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್, ಹಿಂದೂ ಸಮುದಾಯದ ಪುಷ್ಪಾ ಕೋಲ್ಹಿ ಪಾಕ್‍ನ ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಮೊದಲ ಯುವತಿ ಮತ್ತು ಸಿಂಧ್ ಪೊಲೀಸ್ ಸಹಾಯಕ ಸಬ್ ಇನ್ಸ್ ಪೆಕ್ಟರ್ ಆಗಿದ್ದಾರೆ. ಅವರಿಗೆ ದೇವರು ಹೆಚ್ಚಿನ ಶಕ್ತಿ ಕೊಡಲಿ ಎಂದು ದೇವ್ ಟ್ವೀಟ್ ಮಾಡಿದ್ದಾರೆ.

    ಈ ಹಿಂದೆ ಜನವರಿ ತಿಂಗಳಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ್ದ ಮಹಿಳೆ ಸುಮನ್ ಪವನ್ ಬೊಡಾನಿ ಅವರು ಸಿಂಧ್ ಪ್ರಾಂತ್ಯದ ನಾಗರಿಕ ಮತ್ತು ನ್ಯಾಯಾಂಗ ನ್ಯಾಯಾಲಯದ ನ್ಯಾಧೀಶರನ್ನಾಗಿ ನೇಮಿಸಲಾಗಿತ್ತು. ಈ ವಿಚಾರವಾಗಿ ಮಾತನಾಡಿದ್ದ ಅವರು ನಾನು ಅಭಿವೃದ್ಧಿಯಾಗದ ಸಿಂಧ್ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದು, ಅಲ್ಲಿ ನಮ್ಮ ಜನರ ಬಡತನ ಮತ್ತು ಹಲವಾರು ಸಾಮಾಜಿಕ ತೊಂದರೆಯನ್ನು ನೋಡಿದ್ದೆ ಎಂದು ಹೇಳಿದ್ದಾರೆ.

    ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅಧಿಕೃತವಾದ ಅಂಕಿ ಅಂಶದ ಪ್ರಕಾರ 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಅದರಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಬಹುಪಾಲು ಹಿಂದೂ ಸಮುದಾಯದವರು ನೆಲೆಸಿದ್ದಾರೆ. ಅಲ್ಲಿ ಅವರು ಮುಸ್ಲಿಂ ಜನಸಂಖ್ಯೆಯೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಂಡು ಜೀವನ ಮಾಡುತ್ತಿದ್ದಾರೆ.

  • ಗ್ರಾಮದಲ್ಲಿ ಪಿಎಸ್‍ಐ ವಾಸ್ತವ್ಯ – ಜನರಿಂದ ಪ್ರಶಂಸೆ

    ಗ್ರಾಮದಲ್ಲಿ ಪಿಎಸ್‍ಐ ವಾಸ್ತವ್ಯ – ಜನರಿಂದ ಪ್ರಶಂಸೆ

    ಹಾಸನ: ಮುಖ್ಯಮಂತ್ರಿ ಅವರಂತೆ ಹಾಸನ ಜಿಲ್ಲಾಧಿಕಾರಿ ಅರಸೀಕೆರೆ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು. ಇದೀಗ ಚನ್ನರಾಯಪಟ್ಟಣ ನಗರ ಪಿಎಸ್‍ಐಯೊಬ್ಬರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪ್ರಶಂಸೆ ಗಳಿಸಿದ್ದಾರೆ.

    ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮ ಪಟ್ಟಣದ ಹೊರವಲಯದಲ್ಲಿದ್ದು ನಗರ ಠಾಣೆ ಪಿಎಸ್‍ಐ ಮಂಜುನಾಥ್ ತಮ್ಮ ಸಿಬ್ಬಂದಿಯೊಂದಿಗೆ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ವಿಚಾರಿಸಿದ್ದಾರೆ.

    ಗ್ರಾಮದ ದೇವಸ್ಥಾನದ ಬಳಿ ಗ್ರಾಮ ಸಭೆ ನಡೆಸಿದ ನಂತರ ಮಂಜುನಾಥ್ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಥವಾ ಸಹಾಯಕ್ಕಾಗಿ ಬರಲು ಸಾರ್ವಜನಿಕರು ಹಿಂಜರಿಯಬಾರದು ಎಂದು ಮನವಿ ಮಾಡಿದ ಸಬ್ ಇನ್ಸ್ ಪೆಕ್ಟರ್ ತಿಂಗಳಲ್ಲಿ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವುದು ನಿಯಮವಾಗಿದೆ ಎಂದು ತಿಳಿಸಿದರು.

    ಈ ಬಗ್ಗೆ ಮಾತನಾಡಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು, ಕೆಲವು ಜನರು ಪೊಲೀಸ್ ಠಾಣೆಗೆ ಹೋಗಲು ಸ್ವಲ್ಪ ಮುಜುಗರ ಮಾಡಿಕೊಳ್ಳುತ್ತಾರೆ. ಇದೇ ವಿಚಾರವಾಗಿ ಯಡಿಯೂರಿನಲ್ಲಿ ಡಬಲ್ ಮರ್ಡರ್ ಆಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಈಗ ಆತ ಬಂಧನದಲ್ಲಿ ಇದ್ದಾನೆ. ಈಗಲು ಕೆಲವರಿಗೆ ಪೊಲೀಸ್ ಠಾಣೆ ಎಂದರೆ ಸಂಕೋಚ ಹಾಗೂ ಭಯದ ವಾತಾವರಣ ಇದೆ. ಹಾಗಾಗಿ ನಾವು ಪ್ರತಿ ಹಳ್ಳಿ-ಹಳ್ಳಿಗೆ ಬೀಟ್ ಸೇವೆ ಮಾಡುತ್ತಿದ್ದೇವೆ ಎಂದರು.

    ನಮ್ಮ ಪೊಲೀಸ್ ಇಲಾಖೆಯಲ್ಲಿ ಫ್ರೆಂಡ್ಲಿ ಪೊಲೀಸಿಂಗ್ ಇದೆ. ನಾವು ಏಕೆ ಮುಕ್ತವಾಗಿ ಫೋನ್ ನಂಬರ್ ಕೊಡುತ್ತೇವೆ ಎಂದರೆ ನಿಮಗೆ ಸಂಕೋಚ ಇದ್ದು, ಠಾಣೆಗೆ ಬರುವುದಕ್ಕೆ ಆಗಲಿಲ್ಲ ಎಂದರೂ ಕರೆ ಮೂಲಕ ನಿಮ್ಮ ಸಮಸ್ಯೆ ಹೇಳಿಕೊಂಡರೆ, ನಾವು ಬೀಟ್ ಸರ್ವಿಸ್‍ನಲ್ಲಿರುವ ಅಧಿಕಾರಿಯನ್ನು ಕಳುಹಿಸುತ್ತೇವೆ. ಪೊಲೀಸ್ ಠಾಣೆಗೆ ಹೋದರೆ ಕೆಟ್ಟವರಾಗುತ್ತೇವೆ ಎಂದುಕೊಳ್ಳುತ್ತಾರೆ. ಪೊಲೀಸ್ ಠಾಣೆಯಲ್ಲಿ ಇರುವವರೆಲ್ಲ ಕೆಟ್ಟವರಲ್ಲ. ನಾವು ನಿಮ್ಮವರೆ. ನಮಗೂ ಅಕ್ಕ-ತಂಗಿ ಇದ್ದಾರೆ. ಪೊಲೀಸ್ ಠಾಣೆಗೆ ಬರಲು ಸಂಕೋಚ ಪಡೆದುಕೊಳ್ಳಬೇಡಿ ಎಂದು ಮಂಜುನಾಥ್ ಮನವಿ ಮಾಡಿದರು.

  • ಗಾಯಗೊಂಡ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆದ ಸಬ್ ಇನ್‌ಸ್ಪೆಕ್ಟರ್

    ಗಾಯಗೊಂಡ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆದ ಸಬ್ ಇನ್‌ಸ್ಪೆಕ್ಟರ್

    ಮೈಸೂರು: ನಗರದ ಸಬ್ ಇನ್‌ಸ್ಪೆಕ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

    ಉಮಾಶಂಕರ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ. ಉಮಾಶಂಕರ್ ತಮ್ಮ ಬೈಕಿನಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯ ಮುಡಾ ಸರ್ಕಲ್ ಬಳಿ ಹೋಗುತ್ತಿದ್ದರು. ಈ ವೇಳೆ ಕೆಎಸ್‍ಆರ್ ಟಿಸಿ ಬಸ್ ಉಮಾಶಂಕರ್ ಬೈಕಿಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಉಮಾಶಂಕರ್ ಗೆ ತೀವ್ರ ಪೆಟ್ಟು ಬಿದ್ದಿದೆ. ಅಲ್ಲದೆ ತೀವ್ರ ರಕ್ತಸ್ರಾವದಿಂದ ಗಾಯಾಳು ಉಮಾಶಂಕರ್ ಬಳಲುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

    ಅಂಬುಲೆನ್ಸ್ ಗೆ ಕರೆ ಮಾಡಿದರೂ ಸಕಾಲಕ್ಕೆ ಬಾರದ ಕಾರಣ, ಅದೇ ಮಾರ್ಗವಾಗಿ ತೆರಳುತ್ತಿದ್ದ ಕೆ.ಆರ್ ಸಂಚಾರಿ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶಿವಕುಮಾರ್, ತಮ್ಮ ಇಂಟರ್ ಸೆಪ್ಟರ್ ವಾಹನದಲ್ಲಿಯೇ ಉಮಾಶಂಕರ್ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪೊಲೀಸರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್

    ಹುಬ್ಬಳ್ಳಿ: ರಜೆ ಕೊಡಲು ನಿರಾಕರಿಸಿದ ಮೇಲಾಧಿಕಾರಿಗೆ ಮಹಿಳಾ ಪೇದೆ(ಡಬ್ಲ್ಯೂಪಿಸಿ) ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ ಉಪ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಸಿಪಿಐ ಡಿಸೋಜಾ ಅವರಿಗೆ ಮಹಿಳಾ ಪೇದೆಯೊಬ್ಬರು ಅವಾಜ್ ಹಾಕಿದ್ದಾರೆ. ರಜೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸಿಪಿಐ ಅವರನ್ನ ವಾಚಾಮಗೋಚರವಾಗಿ ನಿಂದಿಸಿ, ಶಾಪ ಹಾಕಿದ್ದಾರೆ.

    ಮೊದಲು ರಜೆ ಬೇಕು ಎಂದು ಸಿಪಿಐ ಬಳಿ ವಿನಯದಿಂದ ಕೇಳಿದ್ದಾರೆ. ಈ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಸಿಪಿಐ ಕ್ಯಾಬಿನ್ ಗೆ ನುಗ್ಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ವೇಳೆ ಠಾಣೆಯ ಸಿಬ್ಬಂದಿ ಸಮಾಧಾನ ಮಾಡಿದರೂ ಶಾಂತವಾಗದ ಡಬ್ಲ್ಯೂಪಿಸಿ ಸಂಜೆಯೊಳಗೆ ನಿನಗೇನಾದರೂ ಆಗಲಿ ಎಂದು ಸಿಪಿಐಗೆ ಶಾಪ ಹಾಕಿ ಕೋಪ ತೋರಿಸಿದ್ದಾರೆ. ಮಹಿಳಾ ಪೇದೆಯ ಈ ಆರ್ಭಟದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಉಪ ನಗರ ಠಾಣೆಯ ಸಿಪಿಐ ಡಿಸೋಜಾ ಒಬ್ಬ ಸಜ್ಜನ ಅಧಿಕಾರಿ. ಅವರ ವಿರುದ್ಧವೇ ಈ ರೀತಿ ಕಿರುಚಾಡಿದ್ದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೇದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

  • ಪಾನೀಯ ಕುಡ್ಸಿ ಮಹಿಳಾ ಪೇದೆ ಮೇಲೆ ಎಸ್‍ಐನಿಂದ ಅತ್ಯಾಚಾರ – ಅದನ್ನ ವಿಡಿಯೋ ಮಾಡ್ದ!

    ಪಾನೀಯ ಕುಡ್ಸಿ ಮಹಿಳಾ ಪೇದೆ ಮೇಲೆ ಎಸ್‍ಐನಿಂದ ಅತ್ಯಾಚಾರ – ಅದನ್ನ ವಿಡಿಯೋ ಮಾಡ್ದ!

    ಮುಂಬೈ: ರಕ್ಷಣೆ ಕೊಡಬೇಕಾದ ಸಬ್ ಇನ್ಸ್ ಪೆಕ್ಟರ್ ಮಹಿಳಾ ಪೇದೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

    ಆರೋಪಿಯನ್ನು ಎಸ್‍ಐ ಅಮಿತ್ ಶೇಲರ್ ಎಂದು ಗುರುತಿಸಲಾಗಿದೆ. ಕಳೆದ ಮಾರ್ಚ್‍ನಲ್ಲಿ ಎಸ್‍ಐ ನನಗೆ ಮತ್ತು ಬರುವ ತಂಪು ಪಾನೀಯ ಕುಡಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಮುಂಬೈನ ಕ್ರೈಂ ಬ್ರಾಂಚ್‍ನಲ್ಲಿ ದೂರು ನೀಡಿದ್ದಾರೆ.

    ಎಸ್‍ಐ ಅತ್ಯಾಚಾರ ಎಸಗಿದ್ದಲ್ಲದೇ ಆ ದೃಶ್ಯಾವಳಿಯನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

    ಸಿಬಿಡಿ, ಪನ್ವೇಲ್, ಕಾಮೋತೆ ಮತ್ತು ಖರರ್ಗರ್ ಮುಂತಾದ ಸ್ಥಳಗಳಲ್ಲಿ ಅನೇಕ ಬಾರಿ ಬೆದರಿಕೆ ಒಡ್ಡಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸದ್ಯಕ್ಕೆ ಪೇದೆ ನೀಡಿದ ದೂರಿನ ಆಧಾರದ ಮೇರೆಗೆ ಶೇಲರ್ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇನ್ನೂ ಆರೋಪಿಯನ್ನು ಬಂಧಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    2010ರಲ್ಲಿ ಆರೋಪಿ ಶೇಲರ್ ಹಾಗೂ ಪೇದೆ ಒಂದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಂದಿನಿಂದಲೂ ಪರಿಚಯಸ್ಥರು ಎಂದು ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್- ಫೋಟೋ ವೈರಲ್

    ಅಮ್ಮನ ಕಾಲಿಗೆ ಬಿದ್ದು ನಮಸ್ಕರಿಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್- ಫೋಟೋ ವೈರಲ್

    ಬೆಂಗಳೂರು: ಯಾವುದೇ ಒಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ತಂದೆ-ತಾಯಿ ಮಾಡಿದ ತ್ಯಾಗ ಇರುತ್ತದೆ. ಇದಕ್ಕೆ ಎಲ್ಲರೂ ತಲೆಬಾಗ್ಲೇ ಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹಣೆ ಎಂಬಂತೆ ಪೊಲೀಸ್ ಅಧಿಕಾರಿಯಾಗಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಯುವಕ ನೇರ ತಾಯಿಯ ಬಳಿ ತೆರಳಿ ತನ್ನ ಸಾಧನೆಗೆ ಕಾರಣರಾದ ಅಮ್ಮನ ಕಾಲಿಗೆ ಬಿದ್ದ ನಮಸ್ಕರಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಶಂಸೆಗೆ ಕಾರಣವಾಗಿದೆ.

    ಕರ್ನಾಟಕದ ರಿಸರ್ವ್ ಪೊಲೀಸ್ ಎಡಿಜಿಪಿ, ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಈ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಮಹತ್ವ ಸಮಯದಲ್ಲಿ ಈ ಫೋಟೋ ಕ್ಲಿಕ್ ಮಾಡಿದ್ದು, ಯಶಸ್ವಿಯಾಗಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ತರಬೇತಿ ಪೂರ್ಣಗೊಳಿಸಿದ ಯುವಕ ಅಮ್ಮನ ಕಾಲಿಗೆ ನಮಸ್ಕಾರ ಮಾಡುತ್ತಿದ್ದಾರೆ ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಪೊಲೀಸ್ ಅಧಿಕಾರಿಯಾಗಿ ತರಬೇತಿ ಪೂರ್ಣಗೊಳಿಸಿದ ಯುವಕ ತನ್ನ ಸಾಧನೆ ನೋಡಲು ಪದವಿ ಪ್ರದಾನ ಸಮಾರಂಭಕ್ಕೆ ಬರಲು ಅಮ್ಮನಿಗೆ ಸಾಧ್ಯವಾಗದ ಕಾರಣ ಸಮವಸ್ತ್ರದಲ್ಲೇ ನೇರ ತನ್ನೂರಿಗೆ ತೆರಳಿದ್ದು, ಈ ವೇಳೆ ಅಮ್ಮ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದನ್ನು ಕಂಡು ಅಲ್ಲಿಯೇ ಕಾಲಿಗೆ ನಮಸ್ಕಾರಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇದುವರೆಗೂ 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ. 3 ಸಾವಿರ ಮಂದಿ ರೀಟ್ವೀಟ್ ಮಾಡಿದ್ದಾರೆ. ಇದು ತಾಯಿಗೆ ಹೆಮ್ಮೆಯ ಸಮಯವಾಗಿದ್ದು, ಮಕ್ಕಳು ಸಾಧನೆ ಮಾಡಲು ಪೋಷಕರು ತಮ್ಮ ಸರ್ವಸ್ವವವನ್ನು ತ್ಯಾಗ ಮಾಡುತ್ತಾರೆ ಎಂದು ಟ್ವಿಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

    https://twitter.com/NewIndiaSpeaks/status/1044833586803867648?

    ಗಂಡನನ್ನು ಕಳೆದುಕೊಂಡ ತಾಯಿ ಮಗನನ್ನು ಬೆಳೆಸಲು ಎಲ್ಲಾ ಜವಾಬ್ದಾರಿಯನ್ನು ಒಬ್ಬರೇ ನಿರ್ವಹಿಸಿದ್ದು, ಸದ್ಯ ಅವರ ಮಗ ಉತ್ತಮ ಸಾಧನೆ ಮಾಡಿದ್ದಾರೆ. ಇಂತಹ ಮೌಲ್ಯಗಳು ಸಮಾಜದಲ್ಲಿ ಇಂದಿಗೂ ಇರುವುದರಿಂದ ನಾವು ಜೀವಿಸಲು ಸಾಧ್ಯವಾಗುತ್ತಿದೆ ಎಂದು ಜಯರಾಮ್ ಎಂಬವರು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಆದರೆ ಫೋಟೋದಲ್ಲಿರುವ ಅಧಿಕಾರಿ ಯಾರು ಎಂಬುದು ಮಾತ್ರ ರಿವೀಲ್ ಆಗಿಲ್ಲ. ಆ ಅಧಿಕಾರಿ ಯಾರು ಎಂಬ ಮಾಹಿತಿ ಇದೆಯಾ ಎಂದು ಟ್ವಿಟ್ಟಿಗರು ಭಾಸ್ಕರ್ ರಾವ್ ಅವರನ್ನು ಕೋರಿದ್ದು, ಈ ಕುರಿತು ಮಾಹಿತಿ ಕಲೆ ಹಾಕುತ್ತಿರುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/Shirina777/status/1044236229896593408?