Tag: Student Hostel

  • ವಸತಿ ನಿಲಯಕ್ಕಾಗಿ 1 ನಿಮಿಷದಲ್ಲಿ 1 ಕೋಟಿ ಹಣ ಸಂಗ್ರಹಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ವಸತಿ ನಿಲಯಕ್ಕಾಗಿ 1 ನಿಮಿಷದಲ್ಲಿ 1 ಕೋಟಿ ಹಣ ಸಂಗ್ರಹಿಸಿದ ಶಾಸಕ ದತ್ತಾತ್ರೇಯ ಪಾಟೀಲ್

    ಕಲಬುರಗಿ: ವೀರಶೈವ ಸಮಾಜದ ವಿದ್ಯಾರ್ಥಿನಿಯರ ನಿಲಯ ನಿರ್ಮಾಣ ಕಾಮಗಾರಿಗಾಗಿ ಒಂದೇ ಒಂದು ನಿಮಿಷದಲ್ಲಿ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಅವರು 1 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ.

    ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗೆ ಪಟ್ಟಣಕ್ಕೆ ಬಂದು ವಸತಿ ಮಾಡಲು ಸೂಕ್ತ ಸೂರು ಇರಲಿಲ್ಲ. ಹೀಗಾಗಿ ಕಲಬುರಗಿಯಲ್ಲಿ ನಡೆದ ವೀರಶೈವ-ಲಿಂಗಾಯತ ಶಕ್ತಿ ಕೇಂದ್ರದ ವತಿಯಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ, ಶರಣ ಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಯಾದ ಚಿರಂಜೀವಿ ದೊಡಪ್ಪ ಅಪ್ಪ ಸೇರಿದಂತೆ ಹಲವು ಮಠಾಧೀಶರು ಮತ್ತು ನಾಯಕರು ಭಾಗವಹಿಸಿದ್ದರು.

    ಈ ವೇಳೆ ಕಲಬುರಗಿ ನಗರದಲ್ಲಿ ವೀರಶೈವ ಸಮಾಜದ ವಿದ್ಯಾರ್ಥಿನಿಯರಿಗಾಗಿ ಒಂದು ವಸತಿ ನಿಲಯ ನಿರ್ಮಿಸಬೇಕು ಎಂದು ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ವಿಷಯವನ್ನು ಪ್ರಸ್ತಾಪಿಸಿ ವೈಯಕ್ತಿಕ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಕೂಡಲೇ ವೇದಿಕೆ ಮೇಲಿದ್ದ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ವೇದಿಕೆ ಮೇಲಿರುವ ಎಲ್ಲರೂ ಕೂಡ ಬಹುತೇಕ ಆರ್ಥಿಕ ಸಬಲರಾಗಿದ್ದೇವೆ. ಹೀಗಾಗಿ ಪ್ರತಿಯೊಬ್ಬರು 5 ಲಕ್ಷ ರೂಪಾಯಿ ದೇಣಿಗೆ ನೀಡಬೇಕೆಂದು ಕರೆ ಕೊಟ್ಟು, ಯಾರು ಹಣ ನೀಡುತ್ತೀರಿ ಕೈ ಎತ್ತಿ ವೀರಶೈವ ಸಮಾಜದ ಅಭಿವೃದ್ಧಿಗೆ ಕಿರು ಕಾಣಿಕೆ ನೀಡಿ ಎಂದು ಮನವಿ ಮಾಡಿದರು.

    ಶಾಸಕರು ಹೀಗೆ ಹೇಳುತ್ತಿದ್ದಂತೆ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಶಾಸಕ ವೆಂಕಟರೆಡ್ಡಿ ಮುದ್ನಾಳ, ಎಂಎಲ್‍ಸಿ ಚಂದ್ರಶೇಖರ ಪಾಟೀಲ್, ಬಿ.ಜಿ ಪಾಟೀಲ್, ಶಾಸಕ ಎಂ.ವೈ ಪಾಟೀಲ್ ಸೇರಿದಂತೆ ವೇದಿಕೆ ಮೇಲಿದ್ದ 15ಕ್ಕೂ ಹೆಚ್ಚು ಜನ ಕೈ ಎತ್ತಿ ವೈಯಕ್ತಿಕವಾಗಿ 5 ಲಕ್ಷ ರೂಪಾಯಿ ಹಣ ನೀಡುವುದಾಗಿ ಹೇಳಿದರು. ಈ ಮೂಲಕ ಕೇವಲ ಒಂದು ನಿಮಿಷದಲ್ಲಿಯೇ ಕಟ್ಟಡ ಕಾಮಗಾರಿಗೆ ಬೇಕಾದ 1 ಕೋಟಿ ಹಣ ಒಟ್ಟಾಗಿದ್ದು, ಕಾಮಗಾರಿ ಆರಂಭಿಸುತ್ತಿದ್ದಂತೆ ಎಲ್ಲರೂ ಹಣ ನೀಡುವುದಾಗಿ ಘೋಷಿಸಿಕೊಂಡರು.

    ಒಂದು ನಿಮಿಷದಲ್ಲಿಯೇ 1 ಕೋಟಿ ಹಣ ಸಂಗ್ರಹಿಸಲು ದತ್ತಾತ್ರೇಯ ಪಾಟೀಲ್ ಹಾಗೂ ಶರಣಬಸಪ್ಪ ದರ್ಶನಾಪುರ ಅವರ ಈ ಮಾಸ್ಟರ್ ಐಡಿಯಾ ವರ್ಕೌಟ್ ಆಗಿದ್ದು, ಆದಷ್ಟು ಬೇಗ ಭೂಮಿ ಪೂಜೆಯ ದಿನಾಂಕ ನಿಗದಿ ಮಾಡಿ ಅದೇ ದಿನ ಎಲ್ಲರೂ ಹಣ ನೀಡುವುದಾಗಿ ಹೇಳಿದರು.

  • ವಿದ್ಯಾಕಾಶಿ ಧಾರವಾಡದಲ್ಲಿ ಮೊದ್ಲ ವಸತಿ ನಿಲಯ ಸ್ಥಾಪಿಸಿದ್ದ ಪೇಜಾವರ ಶ್ರೀಗಳು

    ವಿದ್ಯಾಕಾಶಿ ಧಾರವಾಡದಲ್ಲಿ ಮೊದ್ಲ ವಸತಿ ನಿಲಯ ಸ್ಥಾಪಿಸಿದ್ದ ಪೇಜಾವರ ಶ್ರೀಗಳು

    ಧಾರವಾಡ: ಪೇಜಾವರ ಶ್ರೀಗಳು ರಾಜ್ಯದಲ್ಲೇ ಮೊದಲ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದು ವಿದ್ಯಾನಗರಿ ಧಾರವಾಡದಲ್ಲಿ.

    1955 ರಲ್ಲಿ ನಗರದ ರಾಯರಮಠದ ಬಳಿ ಇರುವ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದ್ದ ಶ್ರೀಗಳು, ಅದಕ್ಕೆ ಪ್ರಹ್ಲಾದ ವಿದ್ಯಾರ್ಥಿ ನಿಲಯ ಎಂದು ಹೆಸರು ಕೊಟ್ಟಿದ್ದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಇದೇ ನಿಲಯದಲ್ಲಿ ಉಳಿದುಕೊಳ್ಳುತ್ತಿದ್ದರು. ಅಲ್ಲದೇ ತಮ್ಮ ಆತ್ಮೀಯರಾದವರು ಎಲ್ಲರೂ ಅವರನ್ನು ವಸತಿ ನಿಲಯದಲ್ಲೇ ಬಂದು ಭೇಟಿ ಮಾಡುತ್ತಿದ್ದರು.

    ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಈ ವಸತಿ ನಿಲಯ ನಿರ್ಮಾಣ ಮಾಡಲಾಗಿತ್ತು. ಅಲ್ಲಿ ಸಂಧ್ಯಾವಂದನೆ, ಪ್ರವಚನ, ಸಂಸ್ಕಾರಗಳನ್ನು ಬೋಧನೆ ಮಾಡಲಾಗುತ್ತೆ. ಈ ವ್ಯವಸ್ಥೆ ಮಾಡಿದ್ದಕ್ಕಾಗಿಯೇ ಇಲ್ಲಿ ಹಲವು ವಿದ್ಯಾರ್ಥಿಗಳು ಸಮಾಜದ ಎಲ್ಲ ರೀತಿಯ ನಿಯಮಗಳನ್ನು ಹಾಗೂ ಧಾರ್ಮಿಕವಾಗಿ ಒಳ್ಳೆಯ ಸಂಸ್ಕಾರಗಳನ್ನು ಕಲಿತಿದ್ದಾರೆ ಎಂದು ಅಲ್ಲಿಯೇ ಅಭ್ಯಾಸ ಮಾಡುವ ವಿದ್ಯಾರ್ಥಿ ಅಕ್ಷಯ ಭಟ್ಟ ಹೇಳಿದ್ದಾರೆ.

    ಇನ್ನು ಈ ವಸತಿ ನಿಲಯದ ಅಧ್ಯಕ್ಷರಾಗಿರುವ ಡಾ. ಕವಲಗುಡ್ಡ ಅವರು, ಪೇಜಾವರ ಶ್ರೀಗಳಿಗೆ ಈ ವಸತಿ ನಿಲಯ ಸ್ಥಾಪನೆ ಮಾಡಲು ಜಮೀನನ್ನು ಕೊಡಲಾಗಿತ್ತು. ಆದರೆ ಕಳೆದ 2002 ರಲ್ಲಿ ಹಳೆಯ ಕಟ್ಟಡ ಕೆಡವಿ, ಹೊಸ ಕಟ್ಟಡ ಕಟ್ಟಲು 39 ಲಕ್ಷ ರೂ. ಹಣವನ್ನು ನೀಡಿದ್ದರು ಎಂದು ತಿಳಿಸಿದ್ದರು. ಇದೇ ವೇಳೆ ವಸತಿ ನಿಲಯದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಪ್ರಹ್ಲಾದ ಅವರು ಮಾತನಾಡಿ, ಶ್ರೀಗಳನ್ನು ನಾವು ಕಳೆದುಕೊಂಡಿದ್ದು ದೊಡ್ಡ ದುರಂತ ಎಂದು ಹೇಳಿದರು. ಇನ್ನು ಅವರು ಧಾರವಾಡಕ್ಕೆ ಬಂದಾಗ ಸದಾ ಈ ವಸತಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳಿಗೆ ಕೆಲ ವಿಷಯಗಳ ಆಚಾರ ವಿಚಾರ ತಿಳಿಸುತ್ತಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.