Tag: Stuart Broad

  • ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

    ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 35 ರನ್ ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

    ಬುಮ್ರಾ ತಮ್ಮ ಬೆಂಕಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದರೆ, ಇದೀಗ ಬ್ಯಾಟಿಂಗ್‍ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇನ್ನಿಂಗ್ಸ್‌ನ 83ನೇ ಓವರ್ ಎಸೆಯಲು ಬಂದ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಎದುರು ಬಿರುಸಿನ ಬ್ಯಾಟಿಂಗ್ ಮೂಲಕ ಬುಮ್ರಾ ಒಂದೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಚೆಚ್ಚಿದರು. ಬುಮ್ರಾ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಬ್ರಾಡ್ ವೈಡ್-ನೋ ಬಾಲ್ ಎಲ್ಲಾ ಸೇರಿ ಒಟ್ಟಾರೆ 35 ರನ್ ಬಿಟ್ಟು ಕೊಟ್ಟು ಕಂಗಾಲಾದರು. ಈ ಓವರ್‌ನಲ್ಲಿ ಬುಮ್ರಾ, 2 ಸಿಕ್ಸ್ ಮತ್ತು 4 ಬೌಂಡರಿ ಸಹಿತ ಒಟ್ಟು 29 ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದರು. ಇದನ್ನೂ ಓದಿ: 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    2007ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಎದುರು 6 ಎಸೆತಗಳಲ್ಲಿ 6 ಸಿಕ್ಸರ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಸೆದು ಅನಗತ್ಯ ದಾಖಲೆ ಪುಟ ಸೇರಿದರು. ಇದನ್ನೂ ಓದಿ: ಕ್ಯಾಚ್ ಹಿಡಿಯಲು ಹೋದಾಗ ಪ್ಯಾಂಟಿಗೆ ಬಡಿದ ಬೇಲ್ಸ್ – ನೋವಿನಿಂದ ನರಳಾಡಿದ ವಾರ್ನರ್

    ಲಾರಾ ದಾಖಲೆ ಮುರಿದ ಬುಮ್ರಾ
    ಈ ಹಿಂದೆ ಟೆಸ್ಟ್ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಓವರ್ ಒಂದಕ್ಕೆ 28 ರನ್ ಬಾರಿಸಿ ದಾಖಲೆ ಬರೆದಿದ್ದರು. 2003ರಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ರಾಬಿನ್ ಪೀಟರ್ಸನ್ ಎದುರು 28 ರನ್ ಚಚ್ಚಿ ಲಾರಾ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಬುಮ್ರಾ ಮುರಿದಿದ್ದು ಓವರ್ ಒಂದಕ್ಕೆ 35 ರನ್ ಚಚ್ಚಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

    ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ರವೀಂದ್ರ ಜಡೇಜಾ 104 ರನ್ (194 ಎಸೆತ, 13 ಬೌಂಡರಿ) ಮತ್ತು ಬುಮ್ರಾ ಅಜೇಯ 31 ರನ್ (16 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 400 ರನ್‍ಗಳ ಗಡಿದಾಟಿಸಿದರು. ಅಂತಿಮವಾಗಿ ಭಾರತ ತಂಡ 84.5 ಓವರ್‌ಗಳಲ್ಲಿ 416 ರನ್‍ಗಳಿಗೆ ಆಲೌಟ್ ಆಯಿತು.

    Live Tv

  • ಬೆನ್ ಸ್ಟೋಕ್ಸ್‌ಗೆ ಒಲಿಯುವುದೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ?

    ಬೆನ್ ಸ್ಟೋಕ್ಸ್‌ಗೆ ಒಲಿಯುವುದೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ?

    ಲಂಡನ್: ಜೋ ರೂಟ್ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕತ್ವ ತೊರೆದ ಬಳಿಕ ಹೊಸ ನಾಯಕನ ಹುಡುಕಾಟದಲ್ಲಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದೆ. ಈ ನಡುವೆ ಇಂಗ್ಲೆಂಡ್ ತಂಡದಲ್ಲಿರುವ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ಗೆ ನಾಯಕನ ಪಟ್ಟ ಕಟ್ಟಬೇಕೆಂಬ ಕೂಗು ಕೇಳಿಬರುತ್ತಿದೆ.

    5 ವರ್ಷಗಳ ಕಾಲ ಇಂಗ್ಲೆಂಡ್ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಜೋ ರೂಟ್ ನಿನ್ನೆ ನಾಯಕತ್ವಕ್ಕೆ ಗುಡ್ ಬೈ ಹೇಳಿದರು. ಬಳಿಕ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನೂತನ ನಾಯಕನನ್ನು ನೇಮಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ಈ ನಡುವೆ ತಂಡದಲ್ಲಿರುವ ಆಲ್‍ರೌಂಡರ್ ಬೆನ್ ಸ್ಟೋಕ್ಸ್‌ರನ್ನು ನಾಯಕನ್ನಾಗಿ ನೇಮಿಸಬೇಕೆಂಬ ಅಭಿಪ್ರಾಯವನ್ನು ಮಾಜಿ ಆಟಗಾರರು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಬೆನ್ನೇರಿದ ಬ್ಯಾನ್ ಭೀತಿ

    ಬೆನ್ ಸ್ಟೋಕ್ಸ್ ಹೊರತು ಪಡಿಸಿ ಇಂಗ್ಲೆಂಡ್ ತಂಡದಲ್ಲಿರುವ ಹಿರಿಯ ಆಟಗಾರ ಸ್ಟುವರ್ಟ್ ಬ್ರಾಡ್‍ಗೆ ನಾಯಕತ್ವ ವಹಿಸಬಹುದು ಎಂಬ ಅಭಿಪ್ರಾಯವು ಇದೆ. ಇದೀಗ ಆಸ್ಟ್ರೇಲಿಯಾ ತಂಡ ವೇಗಿ ಪ್ಯಾಟ್ ಕಮ್ಮಿನ್ಸ್‌ಗೆ ನಾಯಕತ್ವ ವಹಿಸಿಕೊಟ್ಟು ಯಶಸ್ವಿಯಾಗಿದೆ. ಹಾಗಾಗಿ ಇಂಗ್ಲೆಂಡ್ ತಂಡ ಕೂಡ ಬೌಲರ್‌ಗೆ ನಾಯಕತ್ವವನ್ನು ವಹಿಸಿ ಪ್ರಯೋಗ ನಡೆಸಲು ಮನಸು ಮಾಡಿದೆ ಎಂಬ ಮಾತು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸ್ಟ್ರಾಂಗ್ ಕಮ್‍ಬ್ಯಾಕ್ – ಐಪಿಎಲ್‍ನಲ್ಲಿ ಬುಲೆಟ್ ಥ್ರೋ, ವಿಕೆಟ್ ಕಟ್

    ಕ್ರಿಕೆಟ್ ಪಂಡಿತರ ಲೆಕ್ಕಾಚಾರದ ಪ್ರಕಾರ ಬೆನ್ ಸ್ಟೋಕ್ಸ್ ಉತ್ತಮ ಆಯ್ಕೆ ಎಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಸ್ಟೋಕ್ಸ್ ತಂಡದಲ್ಲಿ ಉತ್ತಮ ಆಟಗಾರನಾಗಿದ್ದು ಇನ್ನಷ್ಟು ಕಾಲ ತಂಡದಲ್ಲಿ ಖಾಯಂ ಸದಸ್ಯನಾಗಿ ಇರುವ ಸಾಮರ್ಥ್ಯವಿದೆ. ಸ್ಟೋಕ್ಸ್ ಈಗಾಗಲೇ 79 ಟೆಸ್ಟ್ ಪಂದ್ಯಗಳಿಂದ 26 ಅರ್ಧಶತಕ, 11 ಶತಕ, 1 ದ್ವೀಶತಕ ಸಹಿತ 5,061 ರನ್ ಮತ್ತು 174 ವಿಕೆಟ್ ಕಿತ್ತು ಮಿಂಚಿದ್ದಾರೆ.

     

     

  • ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

    ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ: ಯುವರಾಜ್ ಸಿಂಗ್

    – ನನ್ನ ಫ್ಯಾನ್ಸ್ ಬ್ರಾಡ್‍ಗೆ ಮೆಚ್ಚುಗೆ ಸೂಚಿಸಬೇಕು

    ನವದೆಹಲಿ: ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್‌ ಒಂದನ್ನು ಹಾಕಿಕೊಂಡಿದ್ದಾರೆ.

    ಇಂಗ್ಲೆಂಡ್‍ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಭಾರತದ ಕ್ರಿಕೆಟ್ ಪ್ರೇಮಿಗಳು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಯಾಕೆಂದರೆ 2007ರ ಟಿ-20 ವಿಶ್ವಕಪ್‍ನಲ್ಲಿ ಯುವರಾಜ್ ಬ್ರಾಡ್ ಬೌಲಿಂಗ್‍ಗೆ ಆರು ಬಾಲಿಗೆ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಈಗ ಅದೇ ಯುವರಾಜ್ ಅವರು ಬ್ರಾಡ್ ಬರೆದಿರುವ ದಾಖಲೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹಾಡಿದ್ದಾರೆ.

    https://www.facebook.com/134771819253/posts/10158602500089254/

    ಇಂದು ಬ್ರಾಡ್ ಅವರ ವಿಚಾರವಾಗಿ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಯುವಿ, ನಾನು ಸ್ಟುವರ್ಟ್ ಬ್ರಾಡ್ ಬಗ್ಗೆ ಏನೇ ಬರೆದರೂ ಹಾಗೂ ಏನೇ ಪೋಸ್ಟ್ ಹಾಕಿದರು. ಜನರು ಅದನ್ನು ನಾನು ಆರು ಬಾಲಿಗೆ ಆರು ಸಿಕ್ಸ್ ಹೊಡೆದ ವಿಚಾರಕ್ಕೆ ಲಿಂಕ್ ಮಾಡುತ್ತಾರೆ. ಆದರೆ ಇಂದು ನನ್ನ ಅಭಿಮಾನಿಗಳಲ್ಲಿ ನಾನು ಮನವಿ ಮಾಡುತ್ತೇನೆ. ಏನೆಂದರೆ ಇಂದು ಬ್ರಾಡ್ ಮಾಡಿರುವ ಸಾಧನೆಗೆ ನೀವು ಮೆಚ್ಚುಗೆ ಸೂಚಿಸಬೇಕು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ಜೊತೆಗೆ ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಕಬಳಿಸುವುದು ತಮಾಷೆಯ ವಿಚಾರವಲ್ಲ. ಈ ದಾಖಲೆ ನಿರ್ಮಿಸಲು ವರ್ಷಾನುಗಟ್ಟಲೇ ಶ್ರಮ ಪಡಬೇಕು. ಇದಕ್ಕೆ ದೃಢ ನಿಶ್ಚಯ ಮತ್ತು ತಾಳ್ಮೆ ಜೊತೆಗೆ ಡೆಡಿಕೇಶನ್ ಬೇಕು. ನೀವು ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡರೇ ಮುಂದೆ ವಿಜಯಶಾಲಿಯಾಗುತ್ತೀರಾ. ಬ್ರಾಡಿ, ಓ ನನ್ನ ಗೆಳೆಯ ನೀನೊಂದು ದಂತಕಥೆ ಎಂದು ಯುವಿ ಬ್ರಾಡ್ ಬಗ್ಗೆ ಬರೆದುಕೊಂಡಿದ್ದಾರೆ. ಬ್ರಾಡ್ ಅವರು ಟೆಸ್ಟ್ ಕ್ರಿಕೆಟಿನಲ್ಲಿ 500 ವಿಕೆಟ್ ಪಡೆದ ಇಂಗ್ಲೆಂಡ್‍ನ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    2007ರ ಸೆಪ್ಟೆಂಬರ್ 10ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್‌ನ 17 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್‌ನಲ್ಲಿ ಫ್ಲಿಂಟಾಫ್ ವಿರುದ್ಧ ತಿರುಗಿಬಿದ್ದಿದ್ದ ಯುವಿ, ಬ್ಯಾಟ್ ತೋರಿಸಿ ಮುನ್ನುಗ್ಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದ್ದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 18ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಟಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಈ ಹಿಂದೆ ಹೇಳಿದ್ದರು.

  • ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ನವದೆಹಲಿ: ‘ನನ್ನ ಮಗನ ವೃತ್ತಿ ಜೀವನವನ್ನೇ ಇಲ್ಲಿಗೆ ಮುಗಿಸಿಬಿಟ್ಟೆ’ ಅಂತ ಇಂಗ್ಲೆಂಡ್‍ನ ಮಾಜಿ ಆಟಗಾರ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ನನ್ನ ವಿರುದ್ಧ ದೂರಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೆನೆದಿದ್ದಾರೆ.

    ಯುವಿ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್‍ನ ಟೂರ್ನಿಯಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಓವರಿನಲ್ಲಿ ಯುವರಾಜ್ ಸಿಂಗ್ ಬ್ಯಾಕ್ ಟು ಬ್ಯಾಕ್ ಆರು ಸಿಕ್ಸರ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ಟಿ20 ಮಾದರಿಯಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಂದು ನಡೆದ ಘಟನೆ ಬಳಿಕ ನಡೆದ ಆಸಕ್ತಿಕಾರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಅಂದು ಯುವಿ ಸಿಡಿಸಿದ ‘ಸಿಕ್ಸ‌ರ್‌ಗಳು’ ಸ್ಟುವರ್ಟ್ ಬ್ರಾಡ್ ಅವರ ವೃತ್ತಿಜೀವನವನ್ನು ಅಲ್ಲಿಗೆ ಕೊನೆಗೊಳಿಸಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸ್ಟುವರ್ಟ್ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿ, ತಂಡದಲ್ಲಿ ಉಳಿದರು. ಸದ್ಯ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್‍ನ ಟೆಸ್ಟ್ ತಂಡದಲ್ಲಿ ಜೇಮ್ಸ್ ಆಂಡರ್ಸನ್ ಜೊತೆಗೆ ವೇಗದ ಬೌಲರ್ ಪಟ್ಟಿಯಲ್ಲಿದ್ದಾರೆ. ಅವರು 2012 ಮತ್ತು 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು.

    ಅಂದಿನ ಪಂದ್ಯವನ್ನು ನೆನೆದ ಯುವಿ, ”ಸ್ಟುವರ್ಟ್ ಬ್ರಾಡ್ ತಂದೆ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಪಂದ್ಯದ ಮರುದಿನ ನನ್ನ ಬಳಿಗೆ ಬಂದಿದ್ದರು. ಆಗ ಅವರು, ನೀವು ನನ್ನ ಮಗನ ವೃತ್ತಿಜೀವನವನ್ನು ಬಹುತೇಕ ಮುಗಿಸಿದ್ದೀರಿ. ಈಗ ನೀವು ಅವನ ಶರ್ಟ್ ಮೇಲೆ ಸಹಿ ಮಾಡಬೇಕಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಜರ್ಸಿಯ ಮೇಲೆ ‘ಆಲ್ ದಿ ಬೆಸ್ಟ್’ ಎಂದು ಬರೆದು ಅವರಿಗೆ ಕೊಟ್ಟಿದ್ದೆ” ಎಂದರು.

    ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಆಡಿದ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯುವರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 485 ಟೆಸ್ಟ್ ವಿಕೆಟ್‍ಗಳನ್ನು ಪಡೆದಿರುವ ಅವರು ಇಂಗ್ಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಆಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಮತ್ತು ಟಿ20ಯಲ್ಲಿ 65 ವಿಕೆಟ್ ಗಳಿಸಿದ್ದಾರೆ. ಬ್ರಾಡ್ 2017ರಿಂದ ವೈಟ್-ಬಾಲ್ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ.

    ಅಂದಿನ ಪಂದ್ಯದಲ್ಲಿ ಏನಾಗಿತ್ತು?:
    2007ರ ಸೆಪ್ಟೆಂಬರ್ 10ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 17 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್‌ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದ್ದಿದ್ದ ಯುವಿ, ಬ್ಯಾಟ್ ತೋರಿಸಿ ಮುನ್ನುಗ್ಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 18ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಈ ಹಿಂದೆ ಹೇಳಿದ್ದರು.

  • ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಮೈದಾನದಲ್ಲೇ ಇಂಗ್ಲೆಂಡ್ ಆಟಗಾರರ ನಡ್ವೆ ವಾಗ್ವಾದ – ಸ್ಟೋಕ್ಸ್, ಬ್ರಾಡ್ ವಿಡಿಯೋ ವೈರಲ್

    ಸೆಂಚೂರಿಯನ್: ಇಂಗ್ಲೆಂಡ್ ತಂಡದ ಆಲ್‍ರೌಂಡರ್, ಉಪನಾಯಕ ಬೆನ್ ಸ್ಟೋಕ್ಸ್ ಬಿರುಸಿನಿಂದ ಮಾತನಾಡುವುದು ಸ್ವಲ್ಪ ಹೆಚ್ಚು. ಈ ಹಿಂದೆಯೂ ಕೂಡ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಕೂಡ ಕೇಳಿ ಬಂದ ಹಿನ್ನೆಲೆಯಲ್ಲಿ ತಂಡದಿಂದ ಕೆಲ ಸಮಯ ದೂರ ಉಳಿದಿದ್ದರು. ಮೈದಾನದಲ್ಲೂ ಎದುರಾಳಿ ಆಟಗಾರನನ್ನು ಸ್ಲೆಡ್ಜಿಂಗ್ ಮಾಡುವುದರಲ್ಲೂ ಸ್ಟೋಕ್ಸ್ ಮುಂದು. ಈಗ ಬ್ರಾಡ್ ಜೊತೆ ವಾಗ್ವಾದ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಯಾವ ಕಾರಣದಿಂದ ಇಬ್ಬರು ಆಟಗಾರರು ವಾಗ್ವಾದಕ್ಕೆ ಮುಂದಾಗಿದ್ದಾರೆ ಎಂಬುವುದು ಮಾತ್ರ ಈವರೆಗೂ ಸ್ವಷ್ಟವಾಗಿಲ್ಲ. ಆದರೆ ತಂಡದ ಆಟಗಾರರ ನಡುವೆಯೇ ಇಬ್ಬರು ಆಟಗಾರರು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಜೋ ರೂಟ್, ಜೋಸ್ ಬಟ್ಲರ್ ನಡುವೆ ಬಂದು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 3ನೇ ದಿನದಾಟದ ಬ್ರೇಕ್ ವೇಳೆ ಘಟನೆ ನಡೆದಿದೆ. ಸ್ಟೋಕ್ಸ್‍ಗೆ ಬ್ರಾಡ್ ಏನೋ ಹೇಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಘಟನೆಗೂ ಮುನ್ನ ಸ್ಟೋಕ್ಸ್ ಏನೋ ಅಂದ ಕಾರಣ ಬ್ರಾಡ್ ವಾಗ್ವಾದಕ್ಕಿಳಿದರು ಎನ್ನಲಾಗಿದೆ. ಈ ಘಟನೆಯೊಂದಿಗೆ ಇಂಗ್ಲೆಂಡ್ ತಂಡದ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದೆಯೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಆಟಗಾರರು ಮೈದಾನದಲ್ಲೇ ವಾಗ್ವಾದಕ್ಕೆ ಇಳಿದಿರುವ ಕುರಿತು ಇಂಗ್ಲೆಂಡ್ ಮಾಜಿ ನಾಯಕ ನಾಸಿರ್ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ. ಅಲ್ಲದೇ ಯಾವುದೇ ಅತೃಪ್ತಿ ಇದ್ದರೆ ಆಟಗಾರರು ಕುಳಿತು ಬಗೆಹರಿಸಿಕೊಳ್ಳಬೇಕಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಈ ಕುರಿತು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ಲಂಡನ್: ನಾಟಿಂಗ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್ ನಲ್ಲೇ ತಿರುಗೇಟು ನೀಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಪಂತ್ ಪಾದಾರ್ಪಣೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನ 92 ನೇ ಓವರ್ ನಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಸ್ಟುವರ್ಟ್ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವೀಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಸದ್ಯ ಪಂತ್ ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮಾತಿಗೆ ಬ್ರಾಡ್ ಉತ್ತರವನ್ನು ಸಹ ನೀಡಿದ್ದು, ಇಬ್ಬರ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ ಆಗಿದೆ.

    ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ವಿರುದ್ಧ ಕ್ರಮಕೈಗೊಂಡಿದ್ದ ಐಸಿಸಿ, ನಿಯಮ 2.2.7 ರ ಉಲ್ಲಂಘನೆ ಎಂದು ತೀರ್ಮಾನಿಸಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಬ್ರಾಡ್ ವರ್ತನೆ ವಿರುದ್ಧ ಗರಂ ಆಗಿದ್ದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೂಡ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಘಟನೆಯನ್ನು ನೆನಪು ಮಾಡಿ ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದಿದ್ದರು.

    ಉಳಿದಂತೆ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ರನ್ ಖಾತೆ ತೆರೆದಿದ್ದ ಪಂತ್ ದಾಖಲೆ ಬರೆದಿದ್ದರು. ಅಲ್ಲದೇ ಮೊದಲ ಟೆಸ್ಟ್‍ನಲ್ಲೇ ವಿಕೆಟ್ ಕೀಪಿಂಗ್ ನಲ್ಲಿ 7 ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.

    ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದು, ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್ ವಿರುದ್ಧ ದ 4ನೇ ಟೆಸ್ಟ್ ಪಂದ್ಯ ಸೌಥಾಂಪ್ಟನ್‍ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಆಗಸ್ಟ್ 30 ರಂದು ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456?

  • ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ಲಂಡನ್: ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಯುವ ಆಟಗಾರ ರಿಷಭ್ ಪಂತ್‍ರನ್ನು ಆನ್‍ಫೀಲ್ಡ್ ನಲ್ಲಿ ನಿಂದಿಸಿದ ಕಾರಣ ಐಸಿಸಿ ಇಂಗ್ಲೆಂಡ್ ಬೌಲರ್ ಬ್ರಾಡ್‍ಗೆ ದಂಡ ವಿಧಿಸಿದೆ.

    ನಾಟಿಂಗ್ ಹ್ಯಾಮ್ ಟೆಸ್ಟ್ ನ ಭಾರತದ ಮೊದಲ ಇನ್ನಿಂಗ್ಸ್ 92 ನೇ ಓವರ್ ವೇಳೆ ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ಅನುಚಿತವಾಗಿ ವರ್ತಿಸಿ ನಿಂದನೆ ಮಾಡಿದ್ದರು. ಬ್ರಾಡ್ ವರ್ತನೆ ಐಸಿಸಿ ನಿಯಮ 2.2.7 ರ ನಿಯಮ ಉಲ್ಲಂಘನೆ ಎಂದು ತೀರ್ಮಾನಿಸಿದ ಪಂದ್ಯದ ರೆಫರಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ.

    ಬ್ರಾಡ್ ವರ್ತನೆ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಸಹ ಗರಂ ಆಗಿದ್ದು, ಈ ಹಿಂದೆ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಗಳ ಘಟನೆಯನ್ನು ನೆನಪು ಮಾಡಿ ಕಾಲೆಳೆದಿದ್ದಾರೆ.

    ಸಂಭಾವಿತರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್‍ಗೆ ಕೆಲ ದಿನಗಳ ಹಿಂದೆಯಷ್ಟೇ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹೊಸ ತಿದ್ದುಪಡಿ ತಂದು ಮತ್ತಷ್ಟು ಕಠಿಣ ಶಿಕ್ಷೆ ನೀಡಲು ಮುಂದಾಗಿತ್ತು. ಇದರ ಅನ್ವಯ ಹೊಸ ತಿದ್ದುಪಡಿಗಳನ್ನು ಜಾರಿಗೆ ಮಾಡಿ ಮೋಸದಾಟ, ಬಾಲ್ ಟ್ಯಾಂಪರಿಂಗ್, ವೈಯಕ್ತಿಕ ನಿಂದನೆ ಕೃತ್ಯಗಳನ್ನು ಲೆವೆಲ್ 2 ಮತ್ತು 3 ಅಪರಾಧಗಳ ಅಡಿ ಎಂದು ಪರಿಗಣಿಸಿತ್ತು. ಅಲ್ಲದೇ ಅಶ್ಲೀಲ ಪದ ಬಳಕೆ, ಅಂಪೈರ್ ತೀರ್ಮಾನಕ್ಕೆ ವಿರೋಧ ಕೃತ್ಯಗಳನ್ನು ಲೆವೆಲ್ 1 ಅಪರಾಧ ಅಡಿ ಹಾಗೂ ವಿಶೇಷವಾಗಿ ಬಾಲ್ ಟ್ಯಾಂಪರಿಂಗ್ ಮಾಡಿದರೆ ಲೆವೆಲ್ 3 ಅಡಿ ಶಿಕ್ಷೆ ವಿಧಿಸುವ ಅವಕಾಶ ನೀಡಿತ್ತು. ತಿದ್ದುಪಡಿ ನಿಯಮಗಳ ಅನ್ವಯ ಲೆವೆಲ್ 3ರ ಕೃತ್ಯಗಳಿಗೆ 8 ಋಣಾತ್ಮಕ ಅಂಕಗಳಿಂದ 12 ಅಂಕಗಳಿಗೆ ಹೆಚ್ಚಿಸಿತ್ತು. ಅಲ್ಲದೇ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧಕ್ಕೆ ಸಮಾನಾಗಿರುವಂತೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456

  • ಗಾಲ್ಫ್ ಆಡುವಾಗ ಎಡವಟ್ಟು ಮಾಡ್ಕೊಂಡ ಜೇಮ್ಸ್ ಆ್ಯಂಡರಸನ್

    ಗಾಲ್ಫ್ ಆಡುವಾಗ ಎಡವಟ್ಟು ಮಾಡ್ಕೊಂಡ ಜೇಮ್ಸ್ ಆ್ಯಂಡರಸನ್

    -ಸ್ಮೈಲಿ ಎಮೋಜಿ ಹಾಕಿದ ಸ್ಟುವರ್ಟ್ ಬ್ರಾಡ್

    ಲಂಡನ್: ಇಂಗ್ಲೆಂಡ್ ಬೌಲರ್ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ವೇಳೆ ಮುಖಕ್ಕೆ ಗಾಯ ಮಾಡಿಕೊಂಡಿದ್ದಾರೆ. ಜೇಮ್ಸ್ ಗಾಲ್ಫ್ ಆಡುವ ಆಟದ ವಿಡಿಯೋವನ್ನು ಬೌಲರ್ ಸ್ಟುವರ್ಟ್ ಬ್ರಾಡ್ ತಮ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ತುಂಬಾ ಮರಗಳ ಮಧ್ಯದಲ್ಲಿ ಜೇಮ್ಸ್ ಆ್ಯಂಡರಸನ್ ಗಾಲ್ಫ್ ಆಡುವ ಸಾಹಸಕ್ಕೆ ಮುಂದಾಗಿದ್ದಾರೆ. ಚೆಂಡನ್ನು ಸ್ಟಿಕ್‍ನಿಂದ ಹೊಡೆದಾಗ ಅದು ಎದುರಿಗೆ ಮರಕ್ಕೆ ತಾಗಿ ಜೇಮ್ಸ್ ಮುಖಕ್ಕೆ ತಗುಲಿದೆ. ಈ ಎಲ್ಲ ದೃಶ್ಯಗಳಿರುವ ವಿಡಿಯೋವನ್ನು ಬ್ರಾಡ್ ತಮ್ಮ ಟ್ವಿಟ್ಟರ್ ಹಾಕಿಕೊಂಡು, ಜೇಮ್ಸ್ ಚೆನ್ನಾಗಿದ್ದು, ಹೆಚ್ಚಿನ ಗಾಯಗಳಾಗಿಲ್ಲ ಎಂದು ಹೇಳುತ್ತಾ ಕೊನೆಗೆ ನಗುತ್ತಿರುವ ಎಮೋಜಿಗಳನ್ನು ಹಾಕಿಕೊಂಡಿದ್ದಾರೆ. ಈ ವಿಡಿಯೋಗೆ ಪ್ರತಿಕ್ರಿಯಿಸಿರುವ ಜೇಮ್ಸ್, ನನಗೆ ಏನೂ ಆಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಎಜ್‍ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟದ ಬಳಿಕವೂ ಇಂಗ್ಲೆಂಡ್ 31 ರನ್ ರೋಚಕ ಗೆಲುವು ಪಡೆದಿತ್ತು. ಈ ಮೂಲಕ ಐತಿಹಾಸಿಕ 1000 ನೇ ಟೆಸ್ಟ್ ಪಂದ್ಯ ಗೆದ್ದು ಇಂಗ್ಲೆಂಡ್ ಡಬಲ್ ಸಂಭ್ರಮವನ್ನು ಆಚರಿಸಿತ್ತು.

    110ಕ್ಕೆ 5 ವಿಕೆಟ್ ಕಳೆದು ಕೊಂಡು ನಾಲ್ಕನೇಯ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಗೆಲ್ಲಲು 84 ರನ್ ಗಳು ಮಾತ್ರ ಅಗತ್ಯವಿತ್ತು. ಆದರೆ ದಿನದಾಟದ ಆರಂಭದಲ್ಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (20) ಔಟಾಗುವ ಮೂಲಕ ಟೀಂ ಇಂಡಿಯಾ ಆಘಾತ ಎದುರಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 149 ರನ್ ಗಳಿಸಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದ ನಾಯಕ ವಿರಾಟ್ ಕೊಹ್ಲಿ 2ನೇ ಇನ್ನಿಂಗ್ಸ್ ನಲ್ಲೂ ದಿಟ್ಟ ಹೋರಾಟ ನಡೆಸಿ ಅರ್ಧಶತಕ ಗಳಿಸಿದ್ದರು. ಆದರೆ ಈ ವೇಳೆ 51 ಗಳಿಸಿದ್ದ ಕೊಹ್ಲಿ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ತಂಡಕ್ಕೆ ಆಘಾತ ನೀಡಿದ್ದರು. ಕೊಹ್ಲಿ ವಿಕೆಟ್ ಕಳೆದುಕೊಂಡ ವೇಳೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಆದರೆ ಅದೇ ಓವರ್ ನಲ್ಲಿ ಮಹಮ್ಮದ್ ಶಮಿ ವಿಕೆಟ್ ಪಡೆದ ಬೆನ್ ಸ್ಟೋಕ್ಸ್ ತಂಡಕ್ಕೆ ಡಬಲ್ ಅಘಾತ ನೀಡಿದ್ದರು.

    ಮೊದಲ ಟೆಸ್ಟ್ ಪಂದ್ಯದ ಆರಂಭದಿಂದಲೂ ಏಳು ಬೀಳು ಕಂಡ ವಿರಾಟ್ ಬಳಗ ಕೊನೆಗೂ ಸೋಲುಂಡು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಪಂದ್ಯದ ನಂತರ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಸೋಲಲು ತಂಡದ ಆಟಗಾರರ ಕಳಪೆ ಬ್ಯಾಟಿಂಗ್ ಕಾರಣ. ಆದರೆ ರೋಚಕ ಪಂದ್ಯದಲ್ಲಿ ಭಾಗವಹಿಸಿದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews