Tag: Stuart Binny

  • ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ

    ಬೆಂಗಳೂರು: ಭಾರತದ ಕ್ರಿಕೆಟ್ ತಂಡದ ಆಲ್‍ರೌಂಡರ್ ಆಟಗಾರ, ಕನ್ನಡಿಗ ಸ್ಟುವರ್ಟ್ ಬಿನ್ನಿ ಅಂತರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದಾರೆ.

    ಈ ಬಗ್ಗೆ ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದ ಬಿನ್ನಿ “ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸುತ್ತಿರುವುದನ್ನು ನಾನು ನಿಮಗೆ ತಿಳಿಸಲು ಬಯಸುತ್ತೇನೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾನು ದೇಶವನ್ನು ಪ್ರತಿನಿಧಿಸಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ”. ಬಿಸಿಸಿಐ ನನ್ನ ಕ್ರಿಕೆಟ್ ಪಯಣದಲ್ಲಿ ಮಹತ್ವದ ಪಾತ್ರ ವಹಿಸಿರುವುದು ಸಂತೋಷ ನೀಡಿದೆ. ಇಷ್ಟು ವರ್ಷಗಳ ಕಾಲ ಅವರ ಬೆಂಬಲ ಹಾಗೂ ನಂಬಿಕೆ ಅಮೂಲ್ಯವಾದದ್ದಾಗಿದೆ. ಬಿಸಿಸಿಐ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಬೆಂಬಲ ಇಲ್ಲದೇ ಇದ್ದಿದ್ದರೆ ನನ್ನ ಕ್ರಿಕೆಟ್ ಜೀವನ ಇಷ್ಟು ಉತ್ತುಂಗಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ, ರಾಜ್ಯದ ನಾಯಕತ್ವ ವಹಿಸಿ ಟ್ರೋಫಿಗಳನ್ನು ಗೆದ್ದಿರುವುದು ಗೌರವದ ವಿಷಯವಾಗಿದೆ ಎಂದು ಸ್ಟುವರ್ಟ್ ಬಿನ್ನಿ ಹೇಳಿದ್ದಾರೆ. ಇದನ್ನೂ ಓದಿ: ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಕ್ರಿಕೆಟ್ ಆಟ ನನ್ನ ರಕ್ತಗತವಾಗಿದೆ, ಐಪಿಎಲ್ ನಲ್ಲೂ ಕೂಡ ನನ್ನನ್ನು ಆಡಿಸಿರುವಂತಹ ಫ್ರಾಂಚೈಸ್‍ಗಳಾದ ಮುಂಬೈ ಇಂಡಿಯನ್ಸ್, ಆರ್‍ಸಿಬಿ, ಆರ್.ಆರ್ ತಂಡಗಳಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ಎಲ್ಲವನ್ನೂ ಕೊಟ್ಟಿರುವ ಕ್ರಿಕೆಟ್‍ಗೆ ನಾನು ಮರಳಿ ಕೊಡುವ ಬಗ್ಗೆ ಸದಾ ಮಗ್ನನಾಗಿರುತ್ತೇನೆ, ನನ್ನ ಮುಂದಿನ ಇನ್ನಿಂಗ್ಸ್ ಗೆ ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದ ಎಂದಿದ್ದಾರೆ.

    ಬಿನ್ನಿ 2014ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು, ಭಾರತದ ಪರ ಈ ವರೆಗೂ 6 ಟೆಸ್ಟ್, 14 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಏಕದಿನದ ಪಂದ್ಯದಲ್ಲಿ 4 ರನ್ ನೀಡಿ 6 ವಿಕೆಟ್ ಕಿತ್ತಿರುವುದು ಸ್ಟುವರ್ಟ್ ಬಿನ್ನಿ ಅವರ ಅತ್ಯುತ್ತಮ ಸಾಧನೆಯಾಗಿದೆ. ಇದಲ್ಲದೆ ಐಪಿಎಲ್‍ನ 2003-04 ಸೀಸನ್ ನಲ್ಲಿ ರಾಜ್ಯ ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಮೊದಲ ಬಾರಿ ಬಿನ್ನಿ ಆಡಿದ್ದರು.  ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

    2014ರಿಂದ 2016ರ ವರೆಗೆ ಭಾರತ ತಂಡದ ಪರ ಆಡಿರುವ ಬಿನ್ನಿ ಮೂರು ಮಾದರಿ ಕ್ರಿಕೆಟ್‍ನಿಂದ 24 ವಿಕೆಟ್ ಮತ್ತು 459ರನ್ ಸಿಡಿಸಿದ್ದಾರೆ. 2014ರ ಜೂ.17ರಂದು ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬಿನ್ನಿ ಕೇವಲ ನಾಲ್ಕು ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈ ಮೂಲಕ ಇನ್ನೋರ್ವ ಕನ್ನಡಿಗ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಇದನ್ನೂ ಓದಿ: ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

  • ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಸ್ಟುವರ್ಟ್ ಬಿನ್ನಿ, ಮಾಯಂತಿ ಲ್ಯಾಂಗರ್ ದಂಪತಿಗೆ ಗಂಡು ಮಗು ಜನನ

    ಬೆಂಗಳೂರು: ಖ್ಯಾತ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    2020ರ ಐಪಿಎಲ್ ಟೂರ್ನಿಯ ನಿರೂಪಕರ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಬಿಡುಗಡೆ ಮಾಡಿದ್ದು, ಆದರೆ ಪಟ್ಟಿಯಲ್ಲಿ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಕೈಬಿಡಲಾಗಿತ್ತು. ಪಟ್ಟಿ ಬಿಡುಗಡೆಯಾಗುತ್ತಿದಂತೆ ತಮ್ಮ ನೆಚ್ಚಿನ ನಿರೂಪಣೆಯನ್ನು ಕೈಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕಾಡಿತ್ತು. ಸದ್ಯ ಈ ಪ್ರಶ್ನೆಗಳಿಗೆ ಮಾಯಂತಿ ಲ್ಯಾಂಗರ್ ಉತ್ತರಿಸಿದ್ದು, ಗಂಡು ಮಗುವಿಗೆ ತಾಯಿಯಾಗಿರುವ ವಿಚಾರವನ್ನು ತಿಳಿಸಿದ್ದಾರೆ.

    ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಮಾಯಂತಿ ಲ್ಯಾಂಗರ್, ಕಳೆದ 5 ವರ್ಷಗಳಿಂದ ಸ್ಟಾರ್ ಸ್ಪೋರ್ಟ್ಸ್ ನಲ್ಲಿರುವ ನನ್ನ ಕುಟುಂಬ ಅವರ ಉನ್ನತ ಈವೆಂಟ್‍ಗಳನ್ನು ಎದುರಿಸುವ ಅದ್ಭುತ ಅವಕಾಶವನ್ನು ನನಗೆ ನೀಡಿದೆ. ನನಗೆ ಅಗತ್ಯವಿರುವ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದೆ. ನಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲೂ 5 ತಿಂಗಳವರೆಗೆ ಕಾರ್ಯಕ್ರಮ ಹೋಸ್ಟ್ ಮಾಡಲು ಹಲವು ಹೊಂದಾಣಿಕೆಗಳನ್ನು ಮಾಡಿದೆ. 2020ರ ಐಪಿಎಲ್ ಟೂರ್ನಿ ನಿಗದಿಯಂತೆ ಮುಂದುವರಿಯುತ್ತಿದ್ದು, ಈಗಾಗಲೇ ಸಾಕಷ್ಟು ಜನರು ಅಲ್ಲಿ ತಲುಪಿದ್ದಾರೆ. 6 ವಾರಗಳ ಹಿಂದೆ ಗಂಡು ಮಗುವನ್ನು ನಾನು ಮತ್ತು ಸ್ಟುವರ್ಟ್ ಪಡೆದಿದ್ದು, ಜೀವನ ಉತ್ತಮವಾಗಿ ಬದಲಾಗಿದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಇತರೇ ನಿರೂಪಕರಿಗೆ ಶುಭಕೋರಿರುವ ಮಾಯಂತಿ, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲೇ ಟೂರ್ನಿಯನ್ನು ನೋಡಲು ಇಷ್ಟಪಡುತ್ತೇನೆ ಎಂದಿದ್ದಾರೆ.

    ನಾಳೆಯಿಂದ ಐಪಿಎಲ್ ಟೂರ್ನಿ ಆರಂಭವಾಗಲಿದ್ದು, ಸುರೇನ್ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.

  • ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ಟೀಂ ಇಂಡಿಯಾಗೆ ಈ ನಾಲ್ವರ ಕಮ್‍ಬ್ಯಾಕ್ ಕಷ್ಟ ಕಷ್ಟ!

    ನವದೆಹಲಿ: ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಮಾಜಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಅನೇಕರು ಸರ್ವ ಪ್ರಯತ್ನ ನಡೆಸಿದ್ದಾರೆ. ಈ ಪೈಕಿ ನಾಲ್ವರು ಮತ್ತೆ ರಾಷ್ಟ್ರೀಯ ತಂಡ ಸೇರುವುದು ಕಷ್ಟ ಎಂಬ ಮಾತುಗಳು ಕೇಳಿ ಬಂದಿವೆ.

    ಭಾರತದ ಕ್ರಿಕೆಟ್ ತಂಡದ ಪರ ಟೆಸ್ಟ್ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹರ್ಭಜನ್ ಸಿಂಗ್ ಇತ್ತೀಚೆಗೆ ತಂಡಕ್ಕೆ ಕಮ್‍ಬ್ಯಾಕ್ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಐಪಿಎಲ್ ಮೂಲಕ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲು ಎಂ.ಎಸ್.ಧೋನಿ ಮುಂದಾಗಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಟೂರ್ನಿ ಅನಿರ್ಧಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.

    ಹರ್ಭಜನ್ ಸಿಂಗ್ ಸುಮಾರು 11 ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಪ್ರಮುಖ ಆಯ್ಕೆಯಾಗಿದ್ದರು. 2011ರ ವಿಶ್ವಕಪ್ ನಂತರ ಎಂ.ಎಸ್. ಧೋನಿ ಮತ್ತು ತಂಡದ ಆಡಳಿತ ಮಂಡಳಿ ಅವರನ್ನು ಕೈಬಿಟ್ಟು ಆರ್.ಅಶ್ವಿನ್‍ಗೆ ಮಣೆ ಹಾಕಿತು. ಹೀಗಾಗಿ ಮುಂದಿನ 6 ವರ್ಷಗಳವರೆಗೆ ಎಲ್ಲಾ ಸ್ವರೂಪಗಳಲ್ಲಿ ಸ್ಪಿನ್ ದಾಳಿಯನ್ನು ಆರ್.ಅಶ್ವಿನ್ ಮುನ್ನಡೆಸಿದರು.

    ಸದ್ಯ ಐಪಿಎಲ್ ಮಾತ್ರ ಆಡುತ್ತಿರುವ ಹರ್ಭಜನ್ ಸಿಂಗ್ ಮತ್ತೆ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗುವ ನಿರೀಕ್ಷೆಯಿಲ್ಲ. ಆದರೆ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಹೊರತಾಗಿಯೂ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಇತ್ತ ಅಂಬಟಿ ರಾಯುಡು, ಸ್ಟುವರ್ಟ್ ಬಿನ್ನಿ, ಮನೋಜ್ ತಿವಾರಿ ಹಾಗೂ ಪಾರ್ಥಿವ್ ಪಟೇಲ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವುದು ಭಾರೀ ಕಷ್ಟ ಎನ್ನಲಾಗುತ್ತಿದೆ.

    ಅಂಬಟಿ ರಾಯುಡು:
    2019ರ ವಿಶ್ವಕಪ್‍ಗೆ ಅಂಬಟಿ ರಾಯುಡು ಅವರನ್ನು ಆಯ್ಕೆ ಸಮಿತಿ ಕೈಬಿಟ್ಟಿದ್ದು ಅಚ್ಚರಿ ಮೂಡಿಸಿತ್ತು. ಅಷ್ಟೇ ಅಲ್ಲದೆ ಟೂರ್ನಿ ನಡುವೆ ಆಟಗಾರರು ಗಾಯದಿಂದ ವಿಶ್ರಾಂತಿಗೆ ಜಾರಿದಾಗ ಎರಡು ಅವಕಾಶಗಳು ಇದ್ದಾಗಲೂ ಅವರನ್ನು ಕಡೆಗಣಿಸಲಾಗಿತ್ತು. ಬದಲಾಗಿ ರಿಷಬ್ ಪಂತ್ ಮತ್ತು ಮಾಯಾಂಕ್ ಅಗರ್ವಾಲ್ ಅವರಿಗೆ ಮಣೆ ಹಾಕಲಾಗಿತ್ತು. ಈ ಮೂಲಕ ಟೀಂ ಇಂಡಿಯಾದಲ್ಲಿ ಅಂಬಟಿ ರಾಯುಡು ಕಮ್‍ಬ್ಯಾಕ್ ಕಷ್ಟ ಎನ್ನುವ ಸಂದೇಶವನ್ನು ಬಿಸಿಸಿಐ ಪರೋಕ್ಷವಾಗಿ ರವಾನಿಸಿತ್ತು. ಶ್ರೇಯಸ್ ಅಯ್ಯರ್ ಉತ್ತಮ ಫಾರ್ಮ್ ನಲ್ಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದರಿಂದಾಗಿ ರಾಯುಡು ಅವರಿಗಿದ್ದ ಅವಕಾಶ ಕೈತಪ್ಪಿದೆ.

    ಸ್ಟುವರ್ಟ್ ಬಿನ್ನಿ:
    2016ರಿಂದ ಟೀಂ ಇಂಡಿಯಾದಿಂದ ಹೊರಗುಳಿದ ನಂತರ ಸ್ಟುವರ್ಟ್ ಬಿನ್ನಿ ದೇಶೀಯ ಕ್ರಿಕೆಟ್‍ನಲ್ಲಿ ಮುಂದುವರಿದಿದ್ದಾರೆ. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಹೊರಗುಳಿದಿದ್ದರು. 2019-20ರ ಮಧ್ಯೆ ನಾಗಾಲ್ಯಾಂಡ್ ತಂಡ ಸೇರಲು ಮುಂದಾಗಿದ್ದರು. ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡವು ಬಿನ್ನಿ ಅವರನ್ನು 13ನೇ ಆವೃತ್ತಿಗೆ ಕೈಬಿಟ್ಟಿದೆ. ಬಳಿಕ ನಡೆದ ಹರಾಜಿನಲ್ಲಿ ಸ್ಟುವರ್ಟ್ ಬಿನ್ನಿ ಅವರನ್ನು ಯಾವುದೇ ತಂಡ ಖರೀದಿಸಲು ಮುಂದೆ ಬರಲಿಲ್ಲ.

    ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಲ್ಲಿ ಆಲ್‍ರೌಂಡರ್ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಾಗಿ ಬಿನ್ನಿ ಕಮ್‍ಬ್ಯಾಕ್ ಕಷ್ಟ ಎಂದು ಹೇಳಲಾಗುತ್ತಿದೆ. 2015ರ ವಿಶ್ವಕಪ್ ತಂಡದ ಸದಸ್ಯರಾಗಿದ್ದ ಬಿನ್ನಿ 2014ರಿಂದ 2016ರವರೆಗೆ ಆರು ಟೆಸ್ಟ್, 14 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಮನೋಜ್ ತಿವಾರಿ:
    ಎಂ.ಎಸ್.ಧೋನಿ ಹಾಗೂ ತಂಡದ ಆಯ್ಕೆ ಸಮಿತಿಯ ಒಂದು ಕಾಲದ ಮೊದಲ ಆಯ್ಕೆಯ ಆಟಗಾರ ಮನೋಜ್ ತಿವಾರಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಪರದಾಡಿದರು. ಶತಕ ಗಳಿಸಿದ ನಂತರವೂ ಅವರು ಆಡುವ ಇಲೆವನ್ ತಂಡದಿಂದ ಹೊರಗುಳಿದರು. ಟೀಂ ಇಂಡಿಯಾ ಜೊತೆಗೆ ಪ್ರಪಂಚದಾದ್ಯಂತ ಪ್ರವಾಸ ಮಾಡಿದರು ಮನೋಜ್ ತಿವಾರಿ, 2008ರಿಂದ 2015ರವರೆಗೆ ಕೇವಲ 12 ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅವರು 2018ರಿಂದ ಭಾರತ ಎ ಪರ ಆಡಿಲ್ಲ. ತಿವಾರಿ ದೇಶೀಯ ಕ್ರಿಕೆಟ್‍ನಲ್ಲಿ ಬಂಗಾಳ ಪರ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ರಾಷ್ಟ್ರೀಯ ತಂಡಕ್ಕೆ ಕರೆಸಿಕೊಳ್ಳುವ ಸಾಧ್ಯತೆಗಳು ವಿರಳ ಎನ್ನಲಾಗುತ್ತಿದೆ.

    ಪಾರ್ಥಿವ್ ಪಟೇಲ್:
    ಎಂ.ಎಸ್.ಧೋನಿ ಅವರ ಎಂಟ್ರಿ ಪಾರ್ಥಿವ್ ಪಟೇಲ್ ಅವರನ್ನು ಟೀಂ ಇಂಡಿಯಾದಿಂದ ದೂರವಾಗುವಂತೆ ಮಾಡಿತು ಎನ್ನಲಾಗುತ್ತಿದೆ. 2018-19ರಲ್ಲಿ ನಡೆದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅವರು ಟೆಸ್ಟ್ ತಂಡದ ಭಾಗವಾಗಿದ್ದರು. ಆದರೆ ರಿಷಬ್ ಪಂತ್ ಅವರು ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರಿಂದ ಅವಕಾಶ ಸಿಗಲಿಲ್ಲ. ಪಾರ್ಥಿವ್ ಪಟೇಲ್ ಐಪಿಎಲ್ ಮತ್ತು ದೇಶೀಯ ಕ್ರಿಕೆಟ್ ಆಡುವುದನ್ನು ಮುಂದುವರಿಸಿದ್ದಾರೆ. ಆದರೆ ವೃದ್ಧಿಮಾನ್ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.

  • ವಿನಯ್ ಕುಮಾರ್ ಬೆನ್ನಲ್ಲೇ ಕರ್ನಾಟಕ ಟೀಂಗೆ ಬಿನ್ನಿ ಗುಡ್‍ಬೈ!

    ವಿನಯ್ ಕುಮಾರ್ ಬೆನ್ನಲ್ಲೇ ಕರ್ನಾಟಕ ಟೀಂಗೆ ಬಿನ್ನಿ ಗುಡ್‍ಬೈ!

    ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಮುಂಚೂಣಿ ಆಟಗಾರನಾಗಿ 15 ವರ್ಷಗಳ ಕಾಲಗಳಲ್ಲಿ 2 ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಗೆಲ್ಲಿಸಿಕೊಟ್ಟ ವೇಗದ ಬೌಲರ್ ವಿನಯ್ ಕುಮಾರ್ ಇತ್ತೀಚೆಗೆ ರಾಜ್ಯ ಕ್ರಿಕೆಟ್‍ಗೆ ಗುಡ್‍ಬೈ ಹೇಳಿದ್ದರು. ಈ ಬೆನ್ನಲ್ಲೇ ಕನ್ನಡಿಗ ಸ್ಟುವರ್ಟ್ ಬಿನ್ನಿ ಕರ್ನಾಟಕ ತಂಡವನ್ನು ಬಿಟ್ಟು ನಾಗಾಲ್ಯಾಂಡ್ ತಂಡವನ್ನು ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

    ಸ್ಟುವರ್ಟ್ ಬಿನ್ನಿ ಈಗಾಗಲೇ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಆಕ್ಷೇಪಣೆ ಇಲ್ಲವೆಂದು NOC (non objection certificate) ಪ್ರಮಾಣಪತ್ರ ಪಡೆದಿದ್ದಾರೆ. ದೇಶಿ ಕ್ರಿಕೆಟ್‍ನಲ್ಲಿ ನಾಗಾಲ್ಯಾಂಡ್ ಅತೀ ಕಡಿಮೆ ಅನುಭವ ಹೊಂದಿರುವ ತಂಡವಾಗಿದೆ. ಹೀಗಾಗಿ ಬೇರೆ ರಾಜ್ಯದ ಅನುಭವಿ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ, ಕಿರಿಯರಿಗೆ ಮಾರ್ಗದರ್ಶನದ ಜೊತೆಯಲ್ಲಿ ತಂಡವನ್ನು ಬೆಳೆಸುವ ಗುರಿಯನ್ನು ನಾಗಾಲ್ಯಾಂಡ್ ಕ್ರಿಕೆಟ್ ಸಂಸ್ಥೆ ಹೊಂದಿದೆ.

    ಶೀಘ್ರದಲ್ಲಿಯೇ ನಾಗಾಲ್ಯಾಂಡ್ ತಂಡವನ್ನ ಸೇರಿಕೊಳ್ಳಲಿರುವ ಬಿನ್ನಿ, ಪ್ರಸಕ್ತ ಆವೃತ್ತಿಯಲ್ಲಿ ನಾಗಾಲ್ಯಾಂಡ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಬಿನ್ನಿ ಅವರ ಜೊತೆಗೆ ಮಹಾರಾಷ್ಟ್ರದಿಂದ ಯೋಗೇಶ್ ಟಕವಾಲೆ ಹಾಗೂ ಶ್ರೀಕಾಂತ್ ಮುಂಡೆ ನಾಗಾಲ್ಯಾಂಡ್ ತಂಡ ಸೇರಿಕೊಳ್ಳಲಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಎ.ರಹಮಾನ್ ಅವರು, ನಮ್ಮ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಲು ಅನುಭವಿಗಳನ್ನು ಕರೆತರುವ ಉದ್ದೇಶ ಹೊಂದಿದ್ದೆವು. ಈ ನಿಟ್ಟಿನಲ್ಲಿ ಸ್ಟುವರ್ಟ್ ಬಿನ್ನಿ ಅವರ ಕೂಡ ನಮ್ಮ ತಂಡ ಸೇರಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

  • ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಪತಿಯನ್ನ ಟ್ರೋಲ್ ಮಾಡಿದವರಿಗೆ ಸ್ಟುವರ್ಟ್ ಪತ್ನಿ ತಿರುಗೇಟು

    ಮೊಹಾಲಿ: ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಪತಿ ಸ್ಟುವರ್ಟ್ ಬಿನ್ನಿ ಅವರನ್ನು ಟ್ರೋಲ್ ಮಾಡಿದವರಿಗೆ ಪತ್ನಿ ಮಯಾಂತಿ ತಿರುಗೇಟು ನೀಡಿದ್ದಾರೆ.

    ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಬ್ಯಾಟ್ ನಡೆಸಿದ ಸ್ಟುವರ್ಟ್ ಬಿನ್ನಿ 2019ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನಾಡಿದರು. ಪಂದ್ಯದಲ್ಲಿ ಸ್ಫೋಟಕ 33 ರನ್ ಗಳಿಸಿದರೂ ಕೂಡ ರಾಜಸ್ಥಾನ ತಂಡಕ್ಕೆ ಗೆಲುವು ತಂದುಕೊಡಲು ವಿಫಲರಾದರು. ಪರಿಣಾಮ ಬಿನ್ನಿಯನ್ನು ಕೆಲ ಮಂದಿ ಟ್ವಿಟ್ಟರ್ ನಲ್ಲಿ ಟ್ರೋಲ್ ಮಾಡಿ ಕಾಲೆಳೆದಿದ್ದರು. ಈ ಟ್ರೋಲ್ ಗಳಿಗೆ ಪ್ರತಿಕ್ರಿಯೆ ನೀಡಿರುವ ಸ್ಟುವರ್ಟ್ ಬಿನ್ನಿ ಅವರ ಪತ್ನಿ ತಿರುಗೇಟು ನೀಡಿದ್ದಾರೆ.

    11 ಎಸೆತಗಳನ್ನು ಎದುರಿಸಿದ ಬಿನ್ನಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 33 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ ತಂಡ 20 ಓವರಿನಲ್ಲಿ 190 ರನ್ ಗಳಿಸಿ 12 ರನ್ ಗಳ ಅಂತರದಲ್ಲಿ ಸೋಲು ಕಂಡಿತ್ತು.

    ಬಿನ್ನಿ ಪಂದ್ಯದಲ್ಲಿ ತೋರಿದ ಪ್ರದರ್ಶನದ ಬಳಿಕ ಮಯಾಂತಿ ತಮ್ಮ ಡಿಪಿ ಫೋಟೋವನ್ನು ಪತಿಯೊಂದಿಗೆ ಹಾಕಿಕೊಂಡಿರುತ್ತಾರೆ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಕಾಲೆಳೆದಿದ್ದರು. ಈ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಮಯಾಂತಿ, ನಿಮ್ಮ ಬಳಿ ನನ್ನ ನಂಬರ್ ಇಲ್ಲದ ಕಾರಣ ನಾನು ಯಾವ ಡಿಪಿ ಹಾಕಿದ್ದೇನೆ ಎನ್ನುವುದು ನಿಮಗೆ ತಿಳಿಯುವುದಿಲ್ಲ. ಆದರೂ ಈ ವಿಚಾರವನ್ನು ಕೆದಕಿದ್ದಕ್ಕೆ ಧನ್ಯವಾದ. ಸೂಪರ್ ಪಿಕ್ ಎಂದು ಬರೆದು ತಿರುಗೇಟು ನೀಡಿದ್ದಾರೆ.

    ಕ್ರಿಕೆಟಿನಲ್ಲಿ ತಮ್ಮ ಹಾಟ್ ಮತ್ತು ಬೋಲ್ಡ್ ಹೋಸ್ಟ್ ಆಗಿ ಹೆಸರು ಮಾಡಿರುವ ಮಯಾಂತಿ ಅವರನ್ನು ಪತಿ ಸ್ಟುವರ್ಟ್ ಬಿನ್ನಿ ಅವರೊಂದಿಗೆ ಕೆಲ ಮಂದಿ ಟ್ರೋಲ್ ಮಾಡುವುದು ಎಲ್ಲರಿಗೂ ತಿಳಿದ ಸಂಗತಿ. ಈ ಹಿಂದೆಯೂ ತಮ್ಮನ್ನು ಡಿನ್ನರ್‍ಗೆ ಆಹ್ವಾನ ನೀಡಿದ್ದ ವ್ಯಕ್ತಿಗೆ ತಿರುಗೇಟು ನೀಡಿದ್ದ ಮಯಾಂತಿ ತಮ್ಮ ಈ ನಡೆಯಿಂದಲೇ ಮತ್ತಷ್ಟು ಹೆಸರು ಪಡೆದಿದ್ದರು.

  • ನನ್ನ ಜೊತೆ ಡಿನ್ನರಿಗೆ ಬನ್ನಿ – ವೈರಲ್ ಆಯ್ತು ಸ್ಟುವರ್ಟ್ ಬಿನ್ನಿ ಪತ್ನಿಯ ಪ್ರತಿಕ್ರಿಯೆ

    ನನ್ನ ಜೊತೆ ಡಿನ್ನರಿಗೆ ಬನ್ನಿ – ವೈರಲ್ ಆಯ್ತು ಸ್ಟುವರ್ಟ್ ಬಿನ್ನಿ ಪತ್ನಿಯ ಪ್ರತಿಕ್ರಿಯೆ

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಡಿನ್ನರಿಗೆ ಕರೆದಿದ್ದ ವ್ಯಕ್ತಿಯೊಬ್ಬನಿಗೆ ಭಾರತ ತಂಡದ ಅಲ್‍ರೌಂಡರ್ ಸ್ಟುವರ್ಟ್ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್ ನೀಡಿದ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

    ಬಿನ್ನಿ ಪತ್ನಿ ಮಯಾಂತಿ ಐಪಿಎಲ್ ನ ಸ್ಪೋಟ್ಸ್ ಆಂಕರ್ ಆಗಿದ್ದು, ಫಯ್ಯದ್ ಎಂಬ ವ್ಯಕ್ತಿಯೊಬ್ಬ ಟ್ವಿಟ್ಟರಿನಲ್ಲಿ ಮಯಾಂತಿಗೆ “ನನಗೆ ನಿಮ್ಮನ್ನು ಡಿನ್ನರಿಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತೇನೆ. ನಿಮ್ಮ ಸೌಂದರ್ಯವನ್ನು ವರ್ಣಿಸಲು ನನ್ನ ಹತ್ತಿರ ಯಾವುದೇ ಪದಗಳಿಲ್ಲ” ಎಂದು ಟ್ವೀಟ್ ಮಾಡಿದ್ದಾನೆ.

    ನಿಮ್ಮನ್ನು ನೋಡುತ್ತಿದ್ದರೆ ನನಗೆ ಐಪಿಎಲ್ ನೋಡಲು ಇಷ್ಟವಾಗುವುದಿಲ್ಲ. ನಿಮ್ಮ ಕ್ಲಾಸ್ ಹಾಗೂ ನಿಮ್ಮ ಪರ್ಸನಾಲಿಟಿ ಕಾಂಬಿನೇಷನ್ ಅದ್ಭುತವಾಗಿದೆ. ನಿಮ್ಮನ್ನು ಡಿನ್ನರಿಗೆ ಕರೆದುಕೊಂಡು ಹೋಗಲು ಇಷ್ಟಪಡುತ್ತೇನೆ ಎಂದು ಟ್ವೀಟ್ ಮಾಡಿ ಆಹ್ವಾನಿಸಿದ್ದಾನೆ.

    ಅಭಿಮಾನಿಯ ಟ್ವೀಟ್‍ಗೆ ಮಯಾಂತಿ ಪ್ರತಿಕ್ರಿಯಿಸಿ, “ಧನ್ಯವಾದ! ನಾನು ಹಾಗೂ ನನ್ನ ಪತಿ ನಿಮ್ಮ ಜೊತೆ ಡಿನ್ನರಿಗೆ ಬರುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ. ಮಯಾಂತಿಯ ಈ ಟ್ವೀಟ್‍ಗೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದನ್ನು ತಮಾಷೆ ರೀತಿಯಲ್ಲಿ ತೆಗೆದುಕೊಂಡಿದ್ದಾರೆ.

    ಮಯಾಂತಿ ಐಪಿಎಲ್‍ನ ಪ್ರಮುಖ ಆಂಕರ್ ಆಗಿದ್ದು, ಕಳೆದ ಎಲ್ಲಾ ಸೀಸನಿಂದಲೂ ಪಂದ್ಯದಲ್ಲಿ ಆಂಕರ್ ಮಾಡುತ್ತಿದ್ದಾರೆ.