Tag: Stones

  • ಗಣೇಶ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದ ಪೊಲೀಸರು – ಯುವಕರಿಂದ ಕಲ್ಲು ತೂರಾಟ

    ಗಣೇಶ ವಿಸರ್ಜನೆ ವೇಳೆ ಡಿಜೆ ಆಫ್ ಮಾಡಿ ಎಂದ ಪೊಲೀಸರು – ಯುವಕರಿಂದ ಕಲ್ಲು ತೂರಾಟ

    ಚಾಮರಾಜನಗರ: ಗಣೇಶನ ಮೂರ್ತಿ ವಿಸರ್ಜನೆ (Ganesha Procession) ಸಂದರ್ಭದಲ್ಲಿ ಡಿಜೆ (DJ) ಆಫ್ ಮಾಡಿ ಎಂದಿದ್ದಕ್ಕೆ ಕೋಪಗೊಂಡ ಯುವಕರು ಪೊಲೀಸರ (Police) ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಚಾಮರಾಜನಗರದ (Chamarajanagar) ಉಪ್ಪಾರ ಬೀದಿಯಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಸಂತೇಮರಹಳ್ಳಿ ವೃತ್ತದ ಸಮೀಪ ಇರುವ ಗಣಪತಿಯನ್ನು ಭಾನುವಾರ ವಿರ್ಸಜನೆಗಾಗಿ ಮೆರವಣಿಗೆ ಮಾಡಲಾಗುತ್ತಿತ್ತು, ರಾತ್ರಿ 11 ಗಂಟೆ ಆದರೂ ಡಿಜೆ ಆಫ್ ಮಾಡದೇ ಯುವಕರು ಮೆರವಣಿಗೆಯಲ್ಲಿ ಕುಣಿಯುತ್ತಿದ್ದರಿಂದ ಪೊಲೀಸರು ಡಿಜೆ ಆಫ್ ಮಾಡಿ ಎಂದಿದ್ದಾರೆ. ಇದರಿಂದ ಕುಪಿತಗೊಂಡ ಮಹೇಂದ್ರ, ನಾಗೇಶ್, ಮಹೇಶ್, ಮುರುಗೇಶ್ ಸೇರಿದಂತೆ 15ಕ್ಕೂ ಹೆಚ್ಚು ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದನ್ನೂ ಓದಿ: ಕೆಮ್ಮುತ್ತಲೇ ವಿಚಾರಣೆಗೆ ಹಾಜರಾದ ಡಿ.ಕೆ ಶಿವಕುಮಾರ್

    ಘಟನೆಯಲ್ಲಿ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಪಿಎ ಮಹಾದೇವ್ ಸೇರಿದಂತೆ ಎಎಸ್‍ಪಿ ಶಿವಶಂಕರ್, ಚಾಲಕ ಬಸವರಾಜು ಎಂಬುವರ ಕಾಲು, ಕೈಗಳಿಗೆ ಗಾಯಗಳಾಗಿದೆ. ಘಟನೆ ಸಂಬಂಧ ಎಎಸ್‍ಪಿ ಶಿವಶಂಕರ್ ದೂರು ನೀಡಿದ್ದು, ಇಂದು ಹತ್ತಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಭಾರೀ ಸಾಲದ ಸುಳಿಯಲ್ಲಿ KPTCL, ವಿದ್ಯುತ್‌ ಕಂಪನಿಗಳು: ಯಾವ ಕಂಪನಿಯದ್ದು ಎಷ್ಟು ಸಾಲ?

    Live Tv
    [brid partner=56869869 player=32851 video=960834 autoplay=true]

  • ಕಲ್ಲು ತೂರಾಟ – ರಾಜಕೀಯ ವೈಷಮ್ಯಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿ

    ಕಲ್ಲು ತೂರಾಟ – ರಾಜಕೀಯ ವೈಷಮ್ಯಕ್ಕೆ ಮನೆಯ ಕಿಟಕಿ ಗಾಜುಗಳು ಪುಡಿಪುಡಿ

    ಹಾಸನ: ರಾಜಕೀಯ ವೈಷಮ್ಯಕ್ಕೆ ಕಲ್ಲು ತೂರಾಟ ಮಾಡಿ ಮನೆಯ ಗಾಜನ್ನು ಒಡೆದು ಪುಡಿಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ರಾಂಪುರ ಗ್ರಾಮದಲ್ಲಿ ನಡೆದಿದೆ.

    ಕ್ಷುಲ್ಲಕ ರಾಂಪುರ ಗ್ರಾಮದಲ್ಲಿ ಜೆಡಿಎಸ್ ಮುಖಂಡರು ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ಭಾನುವಾರ ಸಂಜೆ ಕಲ್ಲು ತೂರಾಟ ನಡೆಸಿ ಮನೆ ಹಾಗೂ ಬೈಕ್ ಜಖಂಗೊಳಿಸಿದ್ದಾರೆ. ಮನೆಯ ಕಿಟಕಿ ಗಾಜುಗಳು ಸಂಪೂರ್ಣ ಪುಡಿ ಪುಡಿಯಾಗಿದ್ದು, ಪರಿಕರಗಳು ಹಾಳಾಗಿವೆ.

    ಜೆಡಿಎಸ್‍ನ ಸುರೇಶ್ ಹಾಗೂ ಮತ್ತವರ ಬೆಂಬಲಿಗರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಜೊತೆ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡ ಶೇಖರಪ್ಪ ಎಂಬವರ ಮನೆ ಮೇಲೆ ದಾಳಿ ನಡೆದಿದೆ.

    ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಚಿಕಿತ್ಸೆಗೆಂದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮೀನಿಗೆ ದಾರಿ ಬಿಡುವ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಎರಡು ದಿನಗಳ ಹಿಂದೆ ಎನ್.ಆರ್. ಸಂತೋಷ್ ನಡೆಸಿದ ಪಾದಯಾತ್ರೆಯಲ್ಲಿ ಶೇಖರಪ್ಪ ಪಾಲ್ಗೊಂಡಿದ್ದರು. ಬಿಜೆಪಿ ಬಲವರ್ಧನೆಗೆ ಕಾರ್ಯಚಟುವಟಿಕೆ ಪ್ರಾರಂಭಿಸಿದ್ದರು. ಭಾನುವಾರದ ಹೊಡೆದಾಟಕ್ಕೆ ರಾಜಕೀಯವೂ ಕಾರಣ ಎನ್ನಲಾಗಿದೆ. ಸ್ಥಳದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಿಡು ಬಿಟ್ಟಿದ್ದಾರೆ.

  • ರಾಜುಗೌಡ ಹುಟ್ಟುಹಬ್ಬದ ಬ್ಯಾನರ್, ಪೋಸ್ಟರ್ ಹರಿದ ಕಿಡಿಗೇಡಿಗಳು

    ರಾಜುಗೌಡ ಹುಟ್ಟುಹಬ್ಬದ ಬ್ಯಾನರ್, ಪೋಸ್ಟರ್ ಹರಿದ ಕಿಡಿಗೇಡಿಗಳು

    ಯಾದಗಿರಿ: ಶಾಸಕ ರಾಜುಗೌಡ ಹುಟ್ಟುಹಬ್ಬದ ನಿಮಿತ್ತ ಬ್ಯಾನರ್ ಮತ್ತು ಪೋಸ್ಟರ್ ಹಾಕಲು ತೆರಳುತ್ತಿದ್ದ ವಾಹನದ ಮೇಲೆ ಕೆಲ ಕಿಡಿಗೇಡಿಗಳು ಕಲ್ಲುಗಳಿಂದ ಹಲ್ಲೆ ನಡೆಸುವ ಮೂಲಕ ರಾಜುಗೌಡರ ಭಾವಚಿತ್ರವುಳ್ಳ ಬ್ಯಾನರ್ ಗಳನ್ನು ಹರಿದು, ವಾಹನವನ್ನು ಜಖಂಗೊಳಿಸಿದ ಘಟನೆ ಜಿಲ್ಲೆಯ ಸುರಪುರ ನಗರದಲ್ಲಿ ನಡೆದಿದೆ.

    ಕಳೆದ ರಾತ್ರಿ ಶಾಸಕರಿಗೆ ಶುಭ ಕೋರಿದ ಪೋಸ್ಟರ್ ಮತ್ತು ಬ್ಯಾನರ್ ಗಳನ್ನ ನಗರದ ಹಲವೆಡೆ ಹಚ್ಚಲು ಗಾಂಧಿ ವೃತ್ತದ ಬಳಿ ತೆರಳುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಲಾಯಿತು. ಕೆಲ ಕಾಂಗ್ರೆಸ್ ಕಾರ್ಯಕರ್ತರೇ ಈ ಕೆಲಸ ಮಾಡಿದ್ದಾರೆ ಅನ್ನೋ ಮಾತು ಕೂಡ ಕೇಳಿ ಬಂದಿವೆ. ಏಕಾಏಕಿ ಕಲ್ಲು ತೂರಾಟ ಮಾಡಿದ್ದರಿಂದ ವಾಹನದ ಗ್ಲಾಸ್ ಪುಡಿಪುಡಿಯಾಗಿದ್ದು, ಪೋಸ್ಟರ್ ಮತ್ತು ಬ್ಯಾನರ್ ಗಳು ಚೆಲ್ಲಾಪಿಲ್ಲಿಯಾಗಿದೆ. ಸದ್ಯಕ್ಕೆ ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

    ಕಳೆದ ತಿಂಗಳಷ್ಟೇ ಕ್ಷೇತ್ರದ ಕೊಡೆಕಲ್ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಭಾವಚಿತ್ರ ಲಗತ್ತಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಹಲ್ಲೆಗೆ ಪ್ರತೀಕಾರ ತೆಗೆದುಕೊಳ್ಳುವ ದೃಷ್ಟಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಈ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಹಾಲಿ ಶಾಸಕ ರಾಜುಗೌಡ ಮತ್ತು ರಾಜಾ ವೆಂಕಟಪ್ಪ ನಾಯಕ ದ್ವೇಷ ಮುಂದುವರಿದಿದ್ದು, ಶಾಸಕರುಗಳ ಕಿತ್ತಾಟಕ್ಕೆ ಕೈ ಮತ್ತು ಕಮಲದ ಕಾರ್ಯಕರ್ತರ ಮಧ್ಯ ದ್ವೇಷ ಮತ್ತಷ್ಟು ಹೆಚ್ಚಾಗಿದೆ. ಬ್ಯಾನರ್ ಮತ್ತು ಪೋಸ್ಟರ್ ವಿಚಾರಕ್ಕೆ ಈ ಕಾರ್ಯಕರ್ತರ ಮಧ್ಯ ಗಲಾಟೆ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ನಗರಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸುರಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು

    ಮಂಗ್ಳೂರು ಗಲಭೆಗೆ ಮೊದಲೇ ಪ್ಲಾನ್- ಗೂಡ್ಸ್ ಆಟೋದಲ್ಲಿ ಕಲ್ಲು ತಂದಿದ್ದ ಪ್ರತಿಭಟನಾಕಾರರು

    – ಗಲಭೆಗೆ ತಯಾರಿ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಮಂಗಳೂರು: ಜಿಲ್ಲೆಯಲ್ಲಿ ಗಲಭೆ ಮಾಡಲು ಪ್ರತಿಭಟನಾಕಾರರು ಮೊದಲೇ ಪ್ಲಾನ್ ಮಾಡಿದ್ದರು. ಗಲಭೆಗೂ ಮುನ್ನ ಗೂಡ್ಸ್ ಆಟೋದಲ್ಲಿ ಗೋಣಿಚೀಲಗಳಲ್ಲಿ ಕಲ್ಲುಗಳನ್ನು ತರೆಸಿಟ್ಟುಕೊಂಡಿದ್ದರು ಎನ್ನುವುದಕ್ಕೆ ಸಿಸಿಟಿವಿ ದೃಶ್ಯಾವಳಿವೊಂದು ಸಾಕ್ಷಿಯಾಗಿದೆ.

    ಮಂಗಳೂರು ಗೊಲಿಬಾರ್ ನಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಹಲವು ಪೊಲೀಸ್ ಸಿಬ್ಬಂದಿ ಹಾಗೂ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಆದರೆ ಈ ಗಲಭೆ ನಡೆಸಲು ಕೆಲ ಪ್ರತಿಭಟನಾಕಾರರ ಗುಂಪು ಮೊದಲೇ ಪ್ಲಾನ್ ಮಾಡಿಕೊಂಡಿತ್ತು. ಗಲಭೆಗೂ ಮುನ್ನ ಕೆಲ ಗುಂಪು ಗೂಡ್ಸ್ ಆಟೋದಲ್ಲಿ ಕಲ್ಲುಗಳನ್ನು ತರೆಸಿಕೊಂಡಿದ್ದರು. ಗೋಣಿಚೀಲಗಳಲ್ಲಿ ಈ ಕಲ್ಲುಗಳನ್ನು ತುಂಬಿಸಿಡಲಾಗಿತ್ತು. ಈ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಕೆಲ ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರಾಟ ನಡೆಸಲಾರಂಭಿಸಿದ್ದರು. ಬಳಿಕ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದರು. ಹೀಗಾಗಿ ಕೆಲವರು ಮೊದಲೇ ಗಲಭೆಗೆ ತಯಾರಿ ನಡೆಸಿಕೊಂಡೇ ಬಂದಿದ್ದರು ಎಂದು ಸಿಸಿಟಿವಿ ದೃಶ್ಯಗಳು ಬಯಲು ಮಾಡಿದೆ.

    ಯುವಕರಿದ್ದ ಒಂದು ಗುಂಪು ಪ್ರತಿಭಟನೆ ವೇಳೆ ಗಲಭೆ ನಡೆಸಲೆಂದೆ ಕಲ್ಲು ತಂದು ಹಾಕಿದರೆ, ಇನ್ನೊಂದು ಗುಂಪು ಸಿಸಿಟಿವಿಗಳನ್ನು ಒಡೆದು ಹಾಕಿ ಗಲಭೆ ಮಾಡಲು ಯತ್ನಿಸಿದ ದೃಶ್ಯಗಳು ಕೂಡ ಲಭ್ಯವಾಗಿದೆ. ಕಲ್ಲು ತೂರಾಟ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪ್ರತಿಭಟನಾಕಾರರು ಒಡೆಯಲು ಯತ್ನಿಸಿರುವುದು, ಮನೆಗಳ ಮುಂದಿದ್ದ ಕ್ಯಾಮೆರಾಗಳನ್ನು ತಿರುಗಿಸಿ ಹೋಗಿರುವ ದೃಶ್ಯಗಳು ಸೆರೆಯಾಗಿವೆ. ಅಷ್ಟೇ ಅಲ್ಲದೆ ಪೊಲೀಸ್ ವ್ಯಾನ್ ಬರುವುದನ್ನು ಗಮನಿಸಿ ರಸ್ತೆಗೆ ಅಡ್ಡವಾಗಿ ಕಬ್ಬಿಣದ ಕಂಬಗಳನ್ನು ಹಾಕಿ ಓಡಿಹೋಗಿರುವ ದೃಶ್ಯಾವಳಿಗಳು ಕೂಡ ಲಭ್ಯವಾಗಿದೆ.

  • ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ರೌಡಿ ಶೀಟರ್​​ನನ್ನು ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಕೊಲೆಗೈದ ಗ್ರಾಮಸ್ಥರು

    ಬೀದರ್: ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ರೌಡಿ ಶೀಟರ್ ಒಬ್ಬನನ್ನು ಗ್ರಾಮಸ್ಥರೇ ಕಲ್ಲುಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಸಿರಗೂರ ಗ್ರಾಮದಲ್ಲಿ ನಡೆದಿದೆ.

    ಬಟಗೇರಾವಾಡಿ ಗ್ರಾಮದ ಬಸವರಾಜ ಹಣಮಂತ ಚಂಡಕಾಳೆ (38) ಕೊಲೆಯಾದ ರೌಡಿ ಶೀಟರ್. ಕೊಲೆಯಾದ ರೌಡಿ ಶೀಟರ್ ಬಸವರಾಜ ಬಿಎಸ್‍ಎಫ್‍ನಲ್ಲಿ ಸುಮಾರು 10 ವರ್ಷಗಳಿಗೂ ಅಧಿಕ ಕಾಲ ಸೇವೆಸಲ್ಲಿಸಿದ್ದ. ಸೋಮವಾರ ರಾತ್ರಿ ನಡೆದ ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ಸಿರಗೂರ ಗ್ರಾಮದಲ್ಲಿ ಭಾನುವಾರ ರಾತ್ರಿ ಅದ್ಧೂರಿಯಾಗಿ ದೇವಿ ಮೆರವಣಿಗೆ ನಡೆದಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಜಗಳವಾಗಿತ್ತು. ಆದರೆ ಗ್ರಾಮದ ಹಿರಿಯರು ಸೇರಿ ಅದನ್ನು ಬಗೆ ಹರಿಸಿದ್ದರು. ಆದರೆ ಸೋಮವಾರ ಸಂಜೆ ಮತ್ತೆ ಎರಡೂ ಗುಂಪುಗಳ ಮಧ್ಯೆ ಗಲಾಟೆ ಆರಂಭವಾಗಿತ್ತು. ರೌಡಿ ಶೀಟರ್ ಬಸವರಾಜ್ ಒಂದು ಗುಂಪಿನ ಪರ ವಹಿಸಿಕೊಂಡು ತನ್ನ ಸಹಚರರೊಂದಿಗೆ ಸಿರಗೂರ ಗ್ರಾಮಕ್ಕೆ ಆಗಮಿಸಿದ್ದ.

    ಬಸವರಾಜ್ ಎದುರಾಳಿ ಗುಂಪಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಸಿರಗೂರ ಗ್ರಾಮಸ್ಥರು ಬಸವರಾಜ್‍ಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ರೌಡಿ ಶೀಟರ್ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಂಠಾಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಗಾಯವಾಗಿದ್ದು, ಅವರನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಶಾಲೆಯಲ್ಲಿ ನಿಗೂಢವಾಗಿ ಬೀಳ್ತಿದ್ದ ಕಲ್ಲುಗಳ ಅಸಲಿಯತ್ತು ಬಯಲು

    ಶಾಲೆಯಲ್ಲಿ ನಿಗೂಢವಾಗಿ ಬೀಳ್ತಿದ್ದ ಕಲ್ಲುಗಳ ಅಸಲಿಯತ್ತು ಬಯಲು

    ಬಾಗಲಕೋಟೆ: ಕಳೆದ ಒಂದು ತಿಂಗಳಿನಿಂದ ಶಾಲೆಯಲ್ಲಿ ನಿಗೂಢವಾಗಿ ಬೀಳುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಶಾಲಾ ವಿದ್ಯಾರ್ಥಿನಿ ನಡೆಸುತ್ತಿದ್ದ ಕೃತ್ಯ ಎಂದು ಬಾಗಲಕೋಟೆ ಎಸ್‍ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

    ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್‍ಪಿ ಅವರು, ಇದು ಶಾಲಾ ಬಾಲಕಿ ನಡೆಸಿದ ಕೃತ್ಯವಾಗಿದ್ದು, ವಿದ್ಯಾರ್ಥಿನಿಯ ಶಾಲೆಯ ಬ್ಯಾಗ್‍ನಲ್ಲಿ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೇ ಆಕೆಯೇ ತಲೆ ಮೇಲೆ ಕಲ್ಲು ಬಿದ್ದಿದೆ ಎಂದು ಹೇಳುತ್ತಿದ್ದಳು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಹೇಳಿದ್ದಾರೆ.

    ಸದ್ಯ ವಿದ್ಯಾರ್ಥಿನಿಯ ಬ್ಯಾಗಿನಲ್ಲಿ ಕಲ್ಲು ಪತ್ತೆಯಾಗಿರುವುದರಿಂದ ಪೊಲೀಸರು ಬಾಲಕಿಯ ಹೇಳಿಕೆ ಪಡೆಯಲು ಮುಂದಾಗಿದ್ದಾರೆ. ಬಾಲಕಿಗೆ ಬೇರೆ ಯಾರೋ ಈ ರೀತಿ ಮಾಡುವಂತೆ ಹೇಳಿ ಕೃತ್ಯ ನಡೆಸಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್‍ಪಿ ತಿಳಿಸಿದ್ದಾರೆ. ಅಲ್ಲದೆ ವಿದ್ಯಾರ್ಥಿನಿ ಚಿಕ್ಕವಳು ಆಗಿರುವುದರಿಂದ ಕೌನ್ಸಿಲಿಂಗ್ ಮೂಲಕ ಮಾಹಿತಿ ಪಡೆಯಲಾಗುತ್ತಿದೆ. ಏಕೆಂದರೆ ನೇರ ಪ್ರಶ್ನೆ ಮಾಡಿದರೆ ಇದು ಅಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ.

    ಜಿಲ್ಲೆಯ ಇಂಜಿನವಾರಿ ಗ್ರಾಮದಲ್ಲಿ ಕಳೆದ 1 ತಿಂಗಳಿನಿಂದ ಶಾಲೆಯ ಮೇಲೆ ಕಲ್ಲು ಎಸೆಯಲಾಗುತ್ತಿತ್ತು. ಪರಿಣಾಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಯಪಡುವ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಿಂದ ಹಲವು ಮಕ್ಕಳ ತಲೆಗೆ ಗಾಯಗಳಾಗಿತ್ತು. ಇದರಿಂದ ಭಯಭೀತರಾಗಿ ಮಕ್ಕಳು ಶಾಲೆ ಬಿಟ್ಟ ಘಟನೆಗಳು ಇಡೀ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಭಾನಾಮತಿಯ ಕಾಟದಿಂದ ಕಲ್ಲು ಬೀಳುತ್ತಿವೆ ಎಂದು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಆದರೆ ಇದನ್ನು ಅಲ್ಲಗೆಳೆದಿದ್ದ ಜಿಲ್ಲಾಧಿಕಾರಿಗಳು ಹಾಗೂ ಎಸ್‍ಪಿ ಅವರು ಪ್ರಕರಣವನ್ನು ಪತ್ತೆ ಮಾಡಲು ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.

    ಶಿಕ್ಷಣ ಇಲಾಖೆಯ ಸಿಬ್ಬಂದಿ ಶಾಲೆಯಲ್ಲಿ ಐದು ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಶಾಲೆಯ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದರು. ಆ ಬಳಿಕ ಕಲ್ಲು ಬೀಳುವುದು ನಿಂತಿತ್ತು. ಶಿಕ್ಷಣ ಇಲಾಖೆಯ ಮಾರ್ಗದರ್ಶನದಲ್ಲಿ ವಿಜ್ಞಾನ ಪರಿವೀಕ್ಷಕರು, ಪವಾಡ ಬಯಲು ತಜ್ಞರು ಶಾಲೆಗೆ ಭೇಟಿ ನೀಡಿ ಪವಾಡ ಬಯಲು ಮಾಡುವ ಪ್ರಯತ್ನ ಮಾಡಿದರು. ಮಕ್ಕಳ ಮುಂದೆ ಕೆಲ ತಾಂತ್ರಿಕ ಪ್ರಯೋಗ ಮಾಡಿದ್ದರು. ಆದರೂ ಮಕ್ಕಳು ಮಾತ್ರ ಮಂತ್ರಿಸಿದಿ ನಿಂಬೆಹಣ್ಣು, ದೇವರ ಪ್ರಸಾದ ಹಿಡಿದುಕೊಂಡು ಶಾಲೆಗೆ ಆಗಮಿಸುತ್ತಿದ್ದರು.

  • ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ- 18 ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಹಾನಿ

    ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ- 18 ಕೆಎಸ್‌ಆರ್‌ಟಿಸಿ ಬಸ್‍ಗಳಿಗೆ ಹಾನಿ

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧನ ಮಾಡಿರುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಿಂದ ಕೆಎಸ್‌ಆರ್‌ಟಿಸಿ ಭಾರೀ ನಷ್ಟ ಎದುರಿಸಿದೆ. ಪ್ರತಿಭಟನೆ ವೇಳೆ ರಾಜ್ಯದ ವಿವಿಧೆಡೆ ಒಟ್ಟು 18 ಬಸ್ಸುಗಳಿಗೆ ಹಾನಿಯಾಗಿದ್ದು, 13 ಲಕ್ಷದ 67 ಸಾವಿರ ರೂ. ನಷ್ಟ ಸಂಭವಿಸಿದೆ.

    ರಾಜ್ಯದ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿಯಿಂದ ಡಿಕೆ ಶಿವಕುಮಾರ್ ಅವರ ಬಂಧನ ವಿರೋಧಿಸಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಿಡಿಗೇಡಿಗಳು 2 ಬಸ್ ಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ 16 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಮಾಹಿತಿ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ತಲುಪಿದೆ.

    ಕನಕಪುರ ನಗರವೊಂದರಲ್ಲೇ 10 ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಉಪ್ಪಿನಂಗಡಿ ಬಳಿ ವೋಲ್ವೋ ಬಸ್ಸಿಗೆ ಹಾನಿಯಾಗಿದೆ. ಉಳಿದಂತೆ ಬೆಂಗಳೂರಿನ ನವರಂಗ, ಮೌರ್ಯ ಸರ್ಕಲ್, ತವರೇಕೆರೆಯ ಚಿಕ್ಕನಹಳ್ಳಿ ಗೇಟ್ ಹಾಗೂ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಬಳಿ ಬಸ್ಸುಗಳಿಗೆ ಕಲ್ಲು ತೂರಲಾಗಿದೆ. ಕನಕಪುರ ನಗರದಲ್ಲಿ ಎರಡು ಬಸ್ಸಿಗೆ ಬೆಂಕಿ ಹಚ್ಚಲಾಗಿದ್ದು, ಇದರಲ್ಲಿ ಒಂದು ಬಸ್ಸು ಸಂಪೂರ್ಣ ಸುಟ್ಟು ಹೋಗಿದ್ದೆ. ಮತ್ತೊಂದು ಬಸ್ಸಿಗೆ ಭಾಗಶಃ ಹಾನಿಯಾಗಿದೆ.

  • ಎರಡು ಕುಟುಂಬಗಳ ಮಧ್ಯೆ ಕಲ್ಲು ತೂರಾಟ – 15 ಮಂದಿಗೆ ಗಾಯ

    ಎರಡು ಕುಟುಂಬಗಳ ಮಧ್ಯೆ ಕಲ್ಲು ತೂರಾಟ – 15 ಮಂದಿಗೆ ಗಾಯ

    ಬಾಗಲಕೋಟೆ: ಎರಡು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಪರಸ್ಪರ ಕಲ್ಲು ತೂರಾಟದ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

    ಈ ಘಟನೆ ಬಾಗಲಕೋಟೆ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಹಳೆಯ ವೈಷಮ್ಯ ಇರುವ ಕಾರಣದಿಂದ ಎರಡು ಕುಟುಂಬಗಳ ಮಧ್ಯೆ ಗಲಾಟೆ ಉಂಟಾಗಿದ್ದು, ಪರಸ್ಪರ ಕಲ್ಲು ತೂರಾಟ ಮಾಡಿಕೊಂಡಿದ್ದಾರೆ. ಘರ್ಷಣೆಯಲ್ಲಿ ಸುಮಾರು 15 ಜನ ಗಾಯಗೊಂಡಿದ್ದಾರೆ.

    ಚೌಡಾಪುರ ಗ್ರಾಮದ ಶಂಕರಪ್ಪ ಭಗವತಿ ಹಾಗೂ ವಾಸಪ್ಪ ಬೀರಗೊಂಡ ಕುಟುಂಬಗಳ ನಡುವೆ ಹೊಲದ ದಾರಿಗೆ ಸಂಬಂಧಿಸಿದಂತೆ ಬಹಳ ದಿನಗಳ ಹಿಂದಿನಿಂದ ವೈರತ್ವ ಇತ್ತು. ಹೀಗಾಗಿ ಎರಡು ಕುಟುಂಬದವರು ಕೈಯಲ್ಲಿ ದೊಣ್ಣೆ, ಕೊಡಲಿ ಹಿಡಿದು ಬಡಿದಾಡಿಕೊಂಡು ಕಲ್ಲು ತೂರಾಟ ಮಾಡಿದ್ದಾರೆ. ಗಲಾಟೆಯಲ್ಲಿ ಕೆಲವರಿಗೆ ಮೈಮೇಲೆ ರಕ್ತ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಎದುರು ಗುಂಪಿನ ಮಹಿಳೆಯರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಗಲಾಟೆ ಬಿಡಿಸಲು ಪೊಲೀಸ್ ಪೇದೆ ವೈ.ಎನ್ ಧೋನಿ ಪರದಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸರ ಮೇಲೂ ಕಲ್ಲು ಬಿದ್ದ ಪರಿಣಾಮ ಪೇದೆ ಗಾಯಗೊಂಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಮತ್ತು ಟ್ರ್ಯಾಕ್ಟರ್‍ ಗಳನ್ನು ಜಖಂ ಗೊಳಿಸಿದ್ದಾರೆ. ಈ ಸಂಬಂಧ 20 ಕ್ಕೂ ಹೆಚ್ಚು ಜನರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಎರಡೂ ಕಡೆಯಿಂದ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.

  • ಕ್ರಿಕೆಟ್ ವಿಚಾರಕ್ಕೆ ಕಲ್ಲು ತೂರಾಟ- ಪೊಲೀಸರು ಸೇರಿ 10 ಮಂದಿಗೆ ಗಾಯ

    ಕ್ರಿಕೆಟ್ ವಿಚಾರಕ್ಕೆ ಕಲ್ಲು ತೂರಾಟ- ಪೊಲೀಸರು ಸೇರಿ 10 ಮಂದಿಗೆ ಗಾಯ

    ಬೆಳಗಾವಿ(ಚಿಕ್ಕೋಡಿ): ಕ್ರಿಕೆಟ್ ಆಟದ ವಿಚಾರದಲ್ಲಿ ಬುಧವಾರ ರಾತ್ರಿ ಎರಡು ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದಿದ್ದು, ಪೊಲೀಸರು ಸೇರಿದಂತೆ 10 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಪಕ್ಕದ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ನಗರದಲ್ಲಿ ನಡೆದಿದೆ.

    ಎರಡು ಗುಂಪಿನ ನಡುವೆ ಘರ್ಷಣೆ ನಡೆಯುತ್ತಿದ್ದ ವೇಳೆ ತಡೆಯಲು ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಈ ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ 10 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಲ್ಲದೆ ಗಲಾಟೆ ವೇಳೆ ಕಲ್ಲು ಹಾಗೂ ಗಾಜಿನ ಬಾಟಲಿಗಳ ಸುರಿಮಳೆಯೇ ಸುರಿದಿದೆ. ಒಂದು ಗುಂಪಿನ ಮೇಲೆ ಇನ್ನೊಂದು ಗುಂಪು ಪರಸ್ಪರ ಗಾಜು ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಸುಮಾರು 10 ವಾಹನಗಳು ಕೂಡ ಜಖಂಗೊಂಡಿದೆ.

    ಸದ್ಯ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಹಾಗೆಯೇ 12 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಕಲ್ಲಿನಿಂದ ಹೊಡೆದು ಕರಡಿಯನ್ನು ನದಿಗೆ ತಳ್ಳಿದ್ರು – ವಿಡಿಯೋ

    ಶ್ರೀನಗರ: ಕಲ್ಲಿನಿಂದ ಹೊಡೆದು ಕಂದು ಬಣ್ಣದ ಕರಡಿಯನ್ನು ಕಡಿದಾದ ಪರ್ವತದಿಂದ ನದಿಗೆ ಬೀಳಿಸುತ್ತಿರುವ ಶಾಕಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಜಮ್ಮು-ಕಾಶ್ಮೀರದ ಕಾರ್ಗಿಲ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಾಡಿನಿಂದ ತಪ್ಪಿಸಿಕೊಂಡು ನಾಡಿನತ್ತ ಬಂದ ಕರಡಿಯನ್ನು ಜನರು ಕಲ್ಲಿನಿಂದ ಹೊಡೆದಿದ್ದಾರೆ. ಎತ್ತರದ ಶಿಖರದಿಂದ ಕೆಳಗೆ ಬೀಳುತ್ತಿರುವ ವಿಡಿಯೋ ಮಾಡಿ ಮಾನವೀಯತೆಯನ್ನು ಮರೆತಿದ್ದಾರೆ.

    ದಾರಿ ತಪ್ಪಿ ನಾಡಿಗೆ ಬಂದ ಕರಡಿಯನ್ನು ಅಲ್ಲಿನ ಸ್ಥಳೀಯ ಜನರು ಓಡಾಡಿಸಿದ್ದಾರೆ. ಜನರ ಗಲಾಟೆಯಿಂದ ಭಯಗೊಂಡ ಕರಡಿ ಸಮೀಪದ ಎತ್ತರದ ಪ್ರದೇಶ(ಬೆಟ್ಟ)ವೇರಿದೆ. ಕಲ್ಲಿನಿಂದ ಹೊಡೆಯುತ್ತಾ ಜನರು ಕರಡಿಯನ್ನು ಬೆನ್ನತ್ತಿದ್ದಾರೆ. ಎತ್ತರ ಪ್ರದೇಶಕ್ಕೆ ತಲುಪಿದಂತೆ ಸಮತೋಲನ ಕಳೆದುಕೊಂಡು ಆಳವಾದ ಕಂದಕಕ್ಕೆ ಉರುಳಿದೆ. ಪ್ರಾಣ ಉಳಿಸಿಕೊಳ್ಳಲು ಕರಡಿ ಮತ್ತೆ ಮೇಲೆ ಬರಲು ಪ್ರಯತ್ನಿಸಿದೆ.

    ಕರಡಿ ಪ್ರಾಣ ಉಳಿಸಿಕೊಳ್ಳಲು ಮೇಲೆ ಬರುತ್ತಿದ್ದನ್ನು ಕಂಡ ಜನರು ಮತ್ತೆ ಕಲ್ಲಿನ ದಾಳಿ ನಡೆಸಿದ್ದಾರೆ. ಕಲ್ಲಿನ ದಾಳಿಗೆ ಆಯತಪ್ಪಿದ ಕರಡಿ ಕಂದಕದಲ್ಲಿ ಹರಿಯುತ್ತಿರುವ ನದಿಯ ಪಾಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕರಡಿಯ ಸಾವಿಗೆ ಕಾರಣರಾದವರನ್ನು ಕಂಡು ಹಿಡಿದು ಶಿಕ್ಷೆ ನೀಡಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

    ಕರಡಿಯ ಮೇಲೆ ಕಲ್ಲೆಸೆದವರನ್ನು ಪತ್ತೆ ಹಚ್ಚಿ ಅವರೆಲ್ಲ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ನದಿಯಲ್ಲಿ ಬಿದ್ದಿರುವ ಕರಡಿಯ ಪತ್ತೆಗಾಗಿ ವನ್ಯಜೀವಿ ಇಲಾಖೆಯಿಂದ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಉಲ್-ಹಕ್ ಚೌಧರಿ ಸ್ಪಷ್ಟನೆ ನೀಡಿದ್ದಾರೆ.

    ಈ ವಿಡಿಯೋ ರೀಟ್ವೀಟ್ ಮಾಡಿಕೊಂಡಿರುವ ಮಾಜಿ ಸಿಎಂ ಮೆಹಬೂಬ ಮುಫ್ತಿ, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಅಮಾನವೀಯತೆಯ ಸಾಕ್ಷಿಯಾಗಿದೆ. ಪ್ರಾಣಿಗಳ ವಾಸಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದು ನಮ್ಮ ತಪ್ಪು ಎಂದು ಬರೆದುಕೊಂಡಿದ್ದಾರೆ.