Tag: Stone pelting

  • ಗುಂಪುಗಳ ನಡ್ವೆ ಗಲಾಟೆ- ಮನೆಗಳ ಮೇಲೆ ಕಲ್ಲು ತೂರಾಟ

    ಗುಂಪುಗಳ ನಡ್ವೆ ಗಲಾಟೆ- ಮನೆಗಳ ಮೇಲೆ ಕಲ್ಲು ತೂರಾಟ

    ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದ್ದು ಈ ವೇಳೆ ಪರಸ್ಪರ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ನಡೆದಿದೆ.

    ಗ್ರಾಮದಲ್ಲಿ ಶುಕ್ರವಾರ ಸಂಜೆಯಿಂದ ಆರಂಭವಾದ ಘರ್ಷಣೆ ಕೊನೆಯಲ್ಲಿ ಕಲ್ಲು ತೂರಾಟ ಹಂತಕ್ಕೆ ತಲುಪಿದೆ. ಎರಡು ವರ್ಗದ ಯುವಕರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೆಲವರು ದಲಿತರ ಹಟ್ಟಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದಾರೆ.

    ಘಟನೆಯಲ್ಲಿ ಎರಡೂ ಕಡೆಯ ತಲಾ ಮೂವರಿಗೆ ಗಾಯಗಳಾಗಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳಿಗೆ ಸಂತೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದಲೂ ದೂರು ದಾಖಲಾಗಿದೆ.

  • ಮೋದಿ ಸಮಾವೇಶಕ್ಕೆ ಬಂದ ಕಾರ್ಯಕರ್ತರ ಬಸ್ಸಿನ ಮೇಲೆ ಕಲ್ಲುತೂರಾಟ

    ಮೋದಿ ಸಮಾವೇಶಕ್ಕೆ ಬಂದ ಕಾರ್ಯಕರ್ತರ ಬಸ್ಸಿನ ಮೇಲೆ ಕಲ್ಲುತೂರಾಟ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು ತೆರಳುತ್ತಿದ್ದ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ.

    ಮಂಗಳೂರು ಹೊರವಲಯದ ಕುತ್ತಾರು ಬಳಿ ಘಟನೆ ನಡೆದಿದ್ದು, ಎರಡು ಬಸ್ ಗಳಿಗೆ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ಪರಿಣಾಮ ಬಸ್ಸಿನಲ್ಲಿದ್ದ ನಾಲ್ಕು ಮಂದಿ ಕಾರ್ಯಕರ್ತರ ತಲೆಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕತ್ಸೆ ನೀಡಲಾಗಿದೆ. ಇದನ್ನು ಓದಿ: ವಂಶೋದಯ ಅಲ್ಲ ನಮ್ಮದು ಅಂತ್ಯೋದಯ್ – ನಿಮ್ಮ ಒಂದು ವೋಟಿನಿಂದ ದೇಶ ಬದಲಾಗಿದೆ: ಮೋದಿ

    ಮಂಗಳೂರಿನ ಕೇಂದ್ರ ನೆಹರೂ ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್, ಜೆಡಿಎಸ್ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸಿದ್ದರು. 5 ವರ್ಷದ ಅವಧಿಯಲ್ಲಿ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಜನರ ಮುಂದೆ ತೆರೆದಿಟ್ಟಿದ್ದರು. ಸಮಾವೇಶದಲ್ಲಿ ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡದ ಬಿಜೆಪಿ ಲೋಕಸಭಾ ಅಭ್ಯರ್ಥಿಗಳು ಸೇರಿದಂತೆ ಬಿಜೆಪಿ ಶಾಸಕರು, 80 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಿದ್ದರು.

  • ಪೊಲೀಸರಿಗೆ ಕಬ್ಬಿಣದ ಕಡಲೆಯಾದ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ

    ಪೊಲೀಸರಿಗೆ ಕಬ್ಬಿಣದ ಕಡಲೆಯಾದ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ಪ್ರಕರಣ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವ ಪ್ರಕರಣ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ.

    ದರ್ಶನ್ ಮನೆ ಮೇಲೆ ಕಲ್ಲೇಟು ಹೊಡೆದವನು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಮೊಬೈಲ್ ಇದ್ದರೆ ಪೊಲೀಸರು ಪತ್ತೆ ಹಚ್ಚುತ್ತಾರೆ ಎಂದು ಕಿಡಿಗೇಡಿ ಮೊಬೈಲ್ ಬಳಸದೇ ಎಚ್ಚರ ವಹಿಸಿದ್ದಾನೆ. ಟವರ್ ಡಂಪ್ ಲೋಕೇಷನ್ ತೆಗೆದರೂ ಕಲ್ಲು ತೂರಿದವನ ಸುಳಿವು ಸಿಗಲೇ ಇಲ್ಲ.

    ಕಲ್ಲು ತೂರಾಟ ನಡೆಸಿದ ಸಮಯದಲ್ಲಿ ಮನೆ ಕೆಲಸದವರು, ಸುತ್ತಮುತ್ತಲ ಕಾರ್ಮಿಕರು, ಪೌರಕಾರ್ಮಿಕರ ಮೊಬೈಲ್ ನೆಟ್‍ವರ್ಕ್ ಮಾತ್ರ ಸಿಕ್ಕಿದೆ. ಆದರೆ ಅವರನ್ನೆಲ್ಲಾ ವಿಚಾರಣೆ ಮಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ಕಲ್ಲು ತೂರಿದ ಸಮಯದಲ್ಲಿ ಯಾವುದೇ ಮೊಬೈಲ್ ಆಕ್ಟೀವ್ ಆಗಿರಲಿಲ್ಲ ಎಂಬುದು ತಿಳಿದುಬಂದಿದೆ.

    ಏನಿದು ಪ್ರಕರಣ?
    ಮಾರ್ಚ್ 23ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಮನೆ ಹಾಗೂ ಕಚೇರಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಿ ಎಸ್ಕೇಪ್ ಆಗಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿತ್ತು. ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

    ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು. ಕಲ್ಲು ತೂರಾಟ ನಡೆಸಿದ್ದ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರ ಇದ್ದು, ಪೊಲೀಸರಿಗೆ ದೂರು ನೀಡಿದ್ದರು.

  • ದರ್ಶನ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ..!

    ದರ್ಶನ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ..!

    ಮಂಡ್ಯ: ಕ್ಷೇತ್ರದ ರಾಜಕಾರಣ ರಾಜ್ಯದ ಜನರ ಗಮನ ಸೆಳೆದಿದ್ದು, ಜಿದ್ದಿನ ರಾಜಕಾರಣಕ್ಕೆ ದಾರಿ ಮಾಡಿದೆ. ಇದರ ನಡುವೆಯೇ ಸುಮಲತಾ ಅವರ ಪರ ಪ್ರಚಾರಕ್ಕೆ ತೆರಳಿದ್ದ ನಟ ದರ್ಶನ್ ಅವರ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

    ಕ್ಷೇತ್ರದ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಬೆಳ್ಳೂರಿನಿಂದ ನಾಗಮಂಗಲ ಕಡೆ ಬರುತ್ತಿರುವಾಗ ಕೃತ್ಯ ನಡೆದಿದೆ. ದರ್ಶನ್ ಪ್ರಚಾರ ವಾಹನ ಮೇಲೆ ಕಲ್ಲು ತೂರಿದ ವೇಳೆ ಪೊಲೀಸ್ ವಾಹನ ಕೂಡ ಜಖಂಗೊಂಡಿದೆ. ರಸ್ತೆ ಬದಿ ನಿಂತಿದ್ದ ಕಿಡಿಗೇಡಿಗಳಿಂದ ಕೃತ್ಯ ಮಡೆದಿದೆ.

    ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಈ ವೇಳೆ ಸಿಎಂ ಪರ ಜೈಕಾರ ಕೂಗಿದ್ದು, ಕೆಲ ದಿನಗಳ ಹಿಂದೆ ನಿಖಿಲ್ ಬೆಂಬಲಿಗ ವಾಹನಕ್ಕೆ ಕಲ್ಲು ತೂರಾಟ ನಡೆಸಿದ್ದರು. ಇದೀಗ ದರ್ಶನ್ ಪ್ರಚಾರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಯಿಂದ ದರ್ಶನ್ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂಬ ಮಾಹಿತಿ ಲಭಿಸಿದೆ.

    ಇತ್ತ ಪ್ರಚಾರದ ವೇಳೆ ಅಭಿಮಾನಿಯೊಬ್ಬ ದರ್ಶನ್ ಅವರ ಕೈ ಹಿಡಿದು ಎಳೆದಾಡಿದ್ದು, ಪರಿಣಾಮ ಅಪಘಾತದಿಂದ ಗಾಯಗೊಂಡಿದ್ದ ಕೈಯಲ್ಲಿ ಮತ್ತೆ ನೋವು ಕಾಣಿಸಿಕೊಂಡಿದೆ. ಅಭಿಮಾನಿಗಳ ನೂಕು ನುಗ್ಗಲಿನಿಂದಾಗಿ ದರ್ಶನ್ ಬಲಗೈಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

  • ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ

    ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

    ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದಾರೆ. ಇಂದು ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಸದ್ಯ ರಾಜರಾಜೇಶ್ವರಿನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ನಡೆದಾಗ ದರ್ಶನ್ ಮನೆಯಲ್ಲಿ ಇರಲಿಲ್ಲ. ದರ್ಶನ್ ಗಿರಿನಗರದಲ್ಲಿ ಇರುವ ತಮ್ಮ ಪತ್ನಿ ವಿಜಯಲಕ್ಷ್ಮಿ ಫ್ರೆಸ್ಟಿಜ್ ಅಪಾರ್ಟ್‍ಮೆಂಟ್‍ನಲ್ಲಿ ಇದ್ದರು. ಕಲ್ಲು ತೂರಾಟ ನಡೆಸಿದ್ದ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರ ಇದ್ದರು. ಹಾಗಾಗಿ ಸೆಕ್ಯೂರಿಟಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ.

  • ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ನವದೆಹಲಿ: ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ವ್ಯಕ್ತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ಅಫಾಖ್(30) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರ ದೆಹಲಿಯ ವೆಲ್‍ಕಮ್ ಕಾಲೊನಿಯಲ್ಲಿ ನಡೆದಿದೆ.

    ಘಟನೆ ವಿವರ:
    ಅಫಾಖ್ ವೆಲ್ ಕಮ್ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ನೋಡಿ ನಾಯಿಯೊಂದು ಜೋರಾಗಿ ಬೊಗಳಿದೆ. ಅಲ್ಲದೇ ಕಚ್ಚಲು ಕೂಡ ಪ್ರಯತ್ನಿಸುತ್ತಿತ್ತು. ಇದರಿಂದ ಭಯಗೊಂಡ ಅಫಶಖ್ ತನ್ನ ರಕ್ಷಣೆಗಾಗಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ನಾಯಿ ಕಡೆ ಎಸದಿದ್ದಾರೆ. ಇವೆಲ್ಲವನ್ನು ಮನೆಯೊಳಗಿಂದ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.

                                            ಸಾಂದರ್ಭಿಕ ಚಿತ್ರ

    ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದರಿಂದ ಸಿಟ್ಟುಗೊಂಡ ಮೆಹ್ತಾಬ್ ಮನೆಯೊಳಗಿಂದ ಪಿಸ್ತೂಲ್ ತಂದು ನೇರವಾಗಿ ಅಫಾಖ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅತುಲ್ ಥಾಕೂರ್ ವಿವರಿಸಿದ್ದಾರೆ.

    ಈ ಮೊದಲು ಅಫಾಖ್ ಮತ್ತು ಮೆಹ್ತಾಬ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಫ್ತಾಖ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅದಾಗಲೇ ಅಫ್ತಾಖ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಳಿಕ ಮಾಲೀಕ ಮೆಹ್ತಾಬ್ ಸ್ಥಳದಿಂದ ಕಾಲ್ಕಿತ್ತಿದ್ದು, ಸದ್ಯ ಪೊಲೀಸರ ಆತನ ಪತ್ತೆಗೆ ಬಲೆ ಬೀಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ನಾಯಿ ಮರಿಯ ವಿಚಾರವಾಗಿಯೇ ನಾಲ್ವರು ದುಷ್ಕರ್ಮಿಗಳು ಇಬ್ಬರು ಹುಡುಗರ ಮೇಲೆ ಕೋಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಗಳೂರಿನ ಹಲವೆಡೆ ಬಸ್ಸುಗಳ ಮೇಲೆ ಕಲ್ಲು ತೂರಾಟ

    ಮಂಗಳೂರಿನ ಹಲವೆಡೆ ಬಸ್ಸುಗಳ ಮೇಲೆ ಕಲ್ಲು ತೂರಾಟ

    ಮಂಗಳೂರು: ಭಾರತ್ ಬಂದ್ ನಡುವೆಯೂ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ದಾಂದಲೆ ನಡೆಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ವರದಿಯಾಗಿದೆ.

    ಭಾರತ್ ಬಂದ್ ನಡುವೆಯೂ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳಿಗೆ ಕದ್ರಿ ಠಾಣೆಯ ಮುಂಭಾಗ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಿ, ಜ್ಯೋತಿ ವೃತ್ತದಲ್ಲಿ ಟೈರ್ ಗೆ ಬೆಂಕಿ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಕೋಡಾಜೆಯಲ್ಲಿನ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಂಚಿ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾರೆ.

    ಮಂಗಳೂರಿನ ಕದ್ರಿ ಶಿವಭಾಗ್ ನಲ್ಲಿ ಬಂದ್ ನಡುವೆಯೂ ಸೇವೆ ನೀಡುತ್ತಿದ್ದ ಹೋಟೆಲ್ ಮೇಲೆ ಕಲ್ಲು ತೂರಾಟ ನಡೆದಿದ್ದು, ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಯೋರ್ವ ಮುಖಕ್ಕೆ ಹೆಲ್ಮೆಟ್ ಧರಿಸಿ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದಾನೆ. ಕಲ್ಲು ತೂರಾಟ ನಡೆಸಿದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಭಾರತ್ ಬಂದ್‍ಗೆ ವರ್ತಕರು ಹಾಗೂ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಸೋಮವಾರದ ಬಂದ್ ದಿನ ಎಲ್ಲಾ ಅಂಗಡಿಗಳು 1 ಗಂಟೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುವುದರ ಬಗ್ಗೆ ಪೋಸ್ಟರ್ ಗಳನ್ನು ಹಾಕಿಕೊಂಡಿದ್ದರು. ಹೀಗಾಗಿ ಭದ್ರತೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದರು.

    ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಬಂದೋಬಸ್ತ್ ಕಲ್ಪಿಸಿಕೊಡಲಾಗಿದೆ. ಅಲ್ಲದೇ ಖಾಸಗಿ ಸೇರಿದಂತೆ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕಲ್ಲಡ್ಕದಲ್ಲಿ ಟೈರ್ ಹೊತ್ತಿಸಿ ಸಂಚಾರಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದವರನ್ನು ಚದುರಿಸಿ, ಉರಿಯುತ್ತಿದ್ದ ಟೈರ್ ಬೆಂಕಿಯನ್ನು ಪೋಲಿಸರು ನಂದಿಸಿದ್ದಾರೆ. ಕುಲಶೇಖರ್ ಬಳಿಯು ಟೈರ್ ಗೆ ಬೆಂಕಿ ಹತ್ತಿಸುವ ಯತ್ನವನ್ನು ವಿಫಲಗೊಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಉದ್ದಕ್ಕೂ ಪೊಲೀಸ್ ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv