Tag: stone pelters

  • ಕಲ್ಲು ತೂರುವವರಿಗೆ ಜೀವಾವಧಿ ಶಿಕ್ಷೆ- ಹೊಸ ಕಾನೂನು ತರಲು ಮುಂದಾದ ಎಂಪಿ ಸರ್ಕಾರ

    ಕಲ್ಲು ತೂರುವವರಿಗೆ ಜೀವಾವಧಿ ಶಿಕ್ಷೆ- ಹೊಸ ಕಾನೂನು ತರಲು ಮುಂದಾದ ಎಂಪಿ ಸರ್ಕಾರ

    – ಕಲ್ಲು ತೂರಿ ಹಲ್ಲೆ, ಆಸ್ತಿ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ

    ಭೋಪಾಲ್: ಕಲ್ಲು ತೂರಾಟಕ್ಕೆ ರಾಜ್ಯದಲ್ಲಿ ಅನುಮತಿ ಇಲ್ಲ. ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡುವವರ ವಿರುದ್ಧ ಜೀವಾವಧಿ ಶಿಕ್ಷೆ ವಿಧಿಸುವ ಕಟ್ಟುನಿಟ್ಟಿನ ಕಾನೂನು ರೂಪಿಸಲಾಗುವುದು ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ತಿಳಿಸಿದ್ದಾರೆ.

    ಇಂದೋರ್ ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಲ್ಲು ತೂರಾಟ ಘಟನೆಗಳ ಕುರಿತು ಬಿಗಿ ನಿಯಂತ್ರಣ ಸಾಧಿಸಲು ಜೀವಾವಧಿ ಶಿಕ್ಷೆ ವಿಧಿಸುವ ಕಠಿಣ ಕಾನೂನು ರೂಪಿಸಲಾಗುವುದು. ಕಲ್ಲು ತೂರಾಟ ನಡೆಸುವವರ ವಿರುದ್ಧ ಬಲವಾದ ಕಾನೂನು ಜಾರಿಗೊಳಿಸುತ್ತಿದ್ದೇವೆ. ಉದ್ದೇಶಿತ ಕಾನೂನಿನಡಿ ಜೀವಾವಧಿ ಶಿಕ್ಷೆ ವಿಧಿಸಲಾಗುವುದು. ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗುವುದಿಲ್ಲ. ಎಲ್ಲದಕ್ಕೂ ಕಲ್ಲು ತೂರಾಟ ನಡೆಸುತ್ತಾರೆ. ಈ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಾರೆ ಎಂದು ಸಿಎಂ ತಿಳಿಸಿದ್ದಾರೆ.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಸೇರಿದಂತೆ ಹಲವು ಸಂಘಟನೆಗಳು ಉಜ್ಜಯಿನಿ, ಇಂದೋರ್ ಹಾಗೂ ಮಾಂಡ್‍ಸೌರ್ ನಲ್ಲಿ ರ‍್ಯಾಲಿ ನಡೆಸಿದ್ದರು. ಈ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ಸಿಎಂ ಈ ಹೇಳಿಕೆ ನೀಡಿದ್ದಾರೆ. ಈ ಹಿಂಸಾಚಾರದ ಘಟನೆ ಡಿಸೆಂಬರ್ 25 ಹಾಗೂ 30ರ ನಡುವೆ ನಡೆದಿವೆ ಎಂದು ವರದಿಯಾಗಿದೆ.

    ಈ ಗಲಭೆಯಲ್ಲಿ 24ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶ ಪೊಲೀಸರು 46 ಜನರನ್ನು ಬಂಧಿಸಿದ್ದರು.

    ಲವ್ ಜಿಹಾದ್ ಅಥವಾ ಅಂತಹ ಯಾವುದೇ ಕೃತ್ಯವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಲವ್ ಜಿಹಾದ್ ಮೂಲಕ ನಮ್ಮ ಮುಗ್ದ ಹೆಣ್ಣು ಮಕ್ಕಳನ್ನು ಆಕರ್ಶಿಸಲಾಗುತ್ತದೆ. ಇದರಿಂದ ಅವರ ಜೀವನ ಹಾಳಾಗುತ್ತದೆ. ಇಂತಹ ಘಟನೆಗಳನ್ನು ತಡೆಯಲು ನಾವು ಬಲವಾದ ಕಾನೂನು ರೂಪಿಸಿದ್ದೇವೆ. ನಮ್ಮ ಅಕ್ಕ-ತಂಗಿಯರು ಹಾಗೂ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದವರು ಈಗ ಯೋಚಿಸಬೇಕು. ಇದೀಗ ಸಣ್ಣ ಶಿಕ್ಷೆ ಮಾತ್ರ ವಿಧಿಸಲಾಗುವುದಿಲ್ಲ. ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂದರು.

    ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ-2020ನ್ನು ಜಾರಿಗೆ ತಂದಿದೆ. ಇದರ ಪ್ರಕಾರ ವಿವಾಹದ ಬಳಿಕ ಅಥವಾ ಇನ್ನಾವುದೇ ರೀತಿಯ ಮೋಸ ಮಾಡಿ ಮತಾಂತರಗೊಳಿಸಿದರೆ ಅಂತಹವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಈ ಕಾನೂನಿಗೆ ಇತ್ತೀಚೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

  • ಸೇನೆಯ ಮೇಲೆ ಕಲ್ಲು ತೂರುತ್ತಿದ್ದ ಛೋಟಾ ಡಾನ್ ಅರೆಸ್ಟ್

    ಸೇನೆಯ ಮೇಲೆ ಕಲ್ಲು ತೂರುತ್ತಿದ್ದ ಛೋಟಾ ಡಾನ್ ಅರೆಸ್ಟ್

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದ 13 ವರ್ಷದ ಬಾಲಕನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

    ಇತ್ತೀಚಿಗೆ ಶೋಪಿಯನ್ ಜಿಲ್ಲೆಯಲ್ಲಿ ನಡೆದ ಕಲ್ಲು ತೂರಾಟದ ಸಮಯದಲ್ಲಿ ಈತನನ್ನು ಬಂಧಿಸಲಾಗಿದೆ. ಈತ ತನ್ನ 10 ವಯಸ್ಸಿನಲ್ಲೇ ಕಲ್ಲು ತೂರಾಟದ ಗುಂಪಿಗೆ ಸೇರಿ ಛೋಟಾ ಡಾನ್ ಎಂದು ಹೆಸರು ಮಾಡಿದ್ದ. ಈತನ್ನು ಈಗ ಬಂಧಿಸಿರುವ ಪೊಲೀಸರು ಬಾಲಾಪರಾಧ ಗೃಹಕ್ಕೆ ಕುಳುಹಿಸಿದ್ದಾರೆ.

    https://twitter.com/Sandeep_IPS_JKP/status/1168466790038433792

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಶೋಪಿಯನ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಚೌಧರಿ, ನಾವು 13 ವರ್ಷದ ಒಬ್ಬ ಹುಡಗನನ್ನು ಬಂಧಿಸಿ ಬಾಲಾಪರಾಧ ಗೃಹಕ್ಕೆ ಕಳುಹಿಸಿದ್ದೇವೆ. ಆತನ ಹೆಸರನ್ನು ಬಹಿರಂಗ ಪಡಿಸಿಲ್ಲ. ಆದರೆ ಈತ ತನ್ನ 10 ವಯಸ್ಸಿನಲ್ಲಿ ಆದರೆ 2016 ರಲ್ಲಿ ಸೇನೆಯ ಮೇಲೆ ಕಲ್ಲು ತೂರಾಟ ಮಾಡುವ ಗುಂಪಿನೊಂದಿಗೆ ಸೇರಿ ಛೋಟಾ ಡಾನ್ ಎಂದು ಹೆಸರು ಮಾಡಿದ್ದ ಮತ್ತು ತನಗಿಂತ ಉದ್ದವಾದ ಕೋಲು ಹಿಡಿದು ಶಿಕ್ಷಕರು ಮತ್ತು ಸರ್ಕಾರಿ ನೌಕರರ ಮೇಲೆ ದಾಳಿ ಮಾಡಿದ್ದ ಎಂದು ಟ್ವೀಟ್ ಮಾಡಿದ್ದಾರೆ.

    ಶೋಪಿಯನ್ ಜಿಲ್ಲೆಯಲ್ಲಿರುವ ಅವನ ಕುಟುಂಬದವರು ಹೇಳುವ ಪ್ರಕಾರ, 6ನೇ ತರಗತಿ ಓದುತ್ತಿದ್ದ ಛೋಟಾ ಡಾನ್ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟುಕುಗೊಳಿಸಿ 2016 ರ ವೇಳೆ ಕಾಶ್ಮೀರದ ಕಣುವೆ ಪ್ರದೇಶದಲ್ಲಿ ಕಲ್ಲು ತೂರಾಟ ಮಾಡುವ ಗುಂಪಿನೊಂದಿಗೆ ಗುರುತಿಸಿಕೊಂಡಿದ್ದ. ಅವನು ಅ ಗುಂಪಿನಲ್ಲಿ ಛೋಟಾ ಡಾನ್ ಎಂದು ಬಹಳ ಹೆಸರು ಮಾಡಿದ್ದ ಎಂದು ಹೇಳಿದ್ದಾರೆ.

    ಈ ಬಾಲಕನಿಗೆ ಕಾಶ್ಮೀರದ ಸಮಸ್ಯೆಗಳು ಏನೂ ಈಗ ರದ್ದು ಮಾಡಿದ 370 ನೇ ವಿಧಿಯ ಬಗ್ಗೆ ಏನೂ ಗೊತ್ತೇ ಇಲ್ಲ. ಆದರೆ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕಲ್ಲು ತೂರಾಟ ಗುಂಪಿನ ಜೊತೆ ಸೇರಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

  • ಜಮ್ಮು ಪೊಲೀಸರ ಸಖತ್ ಪ್ಲಾನ್-ನಾಲ್ವರು ಕಲ್ಲು ತೂರಾಟಗಾರರ ಬಂಧನ

    ಜಮ್ಮು ಪೊಲೀಸರ ಸಖತ್ ಪ್ಲಾನ್-ನಾಲ್ವರು ಕಲ್ಲು ತೂರಾಟಗಾರರ ಬಂಧನ

    ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಸಿಆರ್‌ಪಿಎಫ್ ಯೋಧರ ಮೇಲೆ ಕಲ್ಲು ತೂರಾಟ ನಡೆಸಿದ್ದವರನ್ನು ಬಂಧಿಸಲು ಪೊಲೀಸರು ರೂಪಿಸಿದ ಪ್ಲಾನ್ ಯಶಸ್ವಿಯಾಗಿದ್ದು, ಶ್ರೀನಗರದಲ್ಲಿ ನಾಲ್ವರನ್ನು ಬಂಧಿಸಲಾಗಿದೆ.

    ಸಿಆರ್‌ಪಿಎಫ್ ಯೋಧರ ಪಡೆ ಮೇಲೆ ಶುಕ್ರವಾರ 100 ಮಂದಿಯ ಗುಂಪು ಕಲ್ಲು ಏಕಾಏಕಿ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಕಲ್ಲು ತೂರಾಟಗಾರರನ್ನು ಬಂಧಿಸಲು ವಿಶೇಷ ಪ್ಲಾನ್ ರೂಪಿಸಿದ ಯೋಧರು ಅವರಂತೆ ವೇಷಧರಿಸಿ ಗುಂಪಿನಲ್ಲಿ ಸೇರಿದ್ದಾರೆ. ಬಳಿಕ ಪೊಲೀಸರೊಂದಿಗೆ ಯೋಧರ ಪಡೆ ದಾಳಿ ನಡೆಸಿದ್ದು, ಈ ವೇಳೆ ಕಲ್ಲು ತೂರಾಟ ನಡೆಸುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಿದ್ದಾರೆ.

    https://twitter.com/MajorPoonia/status/1038322568594423809

    ಯೋಧರ ಪ್ಲಾನ್ ಅರಿಯಲು ವಿಫಲವಾದ ಕಲ್ಲು ತೂರಾಟಗಾರರು ಯುವಕರನ್ನು ವಶಕ್ಕೆ ಪಡೆಯುತ್ತಿದಂತೆ ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೇ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯದೆ ಸ್ಥಳದಿಂದ ಮಂದಿ ಓಟಕಿತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸದ್ಯ ಬಂಧಿಸಿಲಾಗಿರುವ ಆರೋಪಿಗಳಿಂದ ಆಟಿಕೆ ಬಂದೂಕು ವಶಕ್ಕೆ ಪಡೆಯಲಾಗಿದೆ. ಈ ಹಿಂದೆ 2010ರಲ್ಲೇ ಪೊಲೀಸರು ಈ ಮಾದರಿಯ ಪ್ಲಾನ್ ಬಳಸಿ ಅಳವಡಿಸಿಕೊಂಡಿದ್ದರು. ಆದರೆ ಕಳೆದ 2 ವರ್ಷಗಳ ಹಿಂದೆ ಇಂತಹ ಅಪಾಯಕಾರಿ ತಂತ್ರವನ್ನು ಕೈಬಿಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    https://twitter.com/ippatel/status/1038132069233123328